February 28, 2010

ಆಡಿದಂತೆ ನಡೆಸುವವನು ಯಾರು?!


ಚಿತ್ತ ಚಂಚಲ. ಮೊನ್ನೆಯಿಂದ ಅವನ ಮನಸು ಗರಾಜು ಆಗಿಬಿಟ್ಟಿದೆ. ತುಟಿಯ ಬದಿಗೆ ಗ್ರೀಸು ಮೆತ್ತಿಕೊಂಡು ಒಂದೊಂದೇ ಸ್ಪ್ಯಾನರ್ ಹಿಡಿದು ತಿರುಗಿಸುವವನಂತೆ, ಎಕ್ಸ್‌ಲೇಟರ್ ವಯರ್ ಕೊಂಚ ಬಿಗಿ-ಸಡಿಲ ಮಾಡಿ ಪರೀಕ್ಷಿಸುವವನಂತೆ, ಯಾವುದೋ ವೆಹಿಕಲ್‌ನ್ನು ಸಮಸ್ಥಿತಿಗೆ ತರಲು ಹೊರಟ ಹುಡುಗನಂತೆ. ಊಹೂಂ...ಎಷ್ಟೆಂದರೂ ಮನಸ್ಸು ಕೇಳುತ್ತಿಲ್ಲ. ಉಗುರಿನಿಂದ ಮೀಟಿದ ತಂತಿ ನಡುಗುವಂತೆ ಮನಸ್ಸು ಕಂಪಿಸುತ್ತಿದೆ. ಕಂಪಿಸಿ ಕಂಪಿಸಿ ದಿನದಿನಕ್ಕೆ ಹರಿತಗೊಳ್ಳುತ್ತಿದೆ ! ಮತ್ತೊಂದನ್ನು ಕತ್ತರಿಸೀತೋ, ತನ್ನತಾನೇ ಗಾಯಗೊಳಿಸಿಕೊಂಡೀತೋ? ಆ ಅಲಗು ಅಲುಗುತ್ತಾ ನಲುಗುತ್ತಿರುವಾಗ ಹೊರಡುವ ತರಂಗಗಳು, ಇನ್ಯಾರದ್ದೋ ಸ್ವರಗಳನ್ನೂ ಸೇರಿಸಿಕೊಂಡು ಬಂದು ಪ್ರತಿಧ್ವನಿಗೊಳ್ಳುತ್ತವೆ ! ಸಣ್ಣ ಊರಿನ ಕನ್ನಡ ಶಾಲೆ ಬಿಟ್ಟು, ದೂರದ ದೊಡ್ಡ ಊರಿನ ದೊಡ್ಡ ಕಾಲೇಜಿನ ಇಂಗ್ಲಿಷ್ ಪಾಠ ಕೇಳಿಸಿಕೊಳ್ಳುತ್ತಾ ಹಾಸ್ಟೆಲ್‌ಗೆ ಬಿದ್ದವರು ತಡಬಡಾಯಿಸುತ್ತಾರಲ್ಲ, ಹಾಗೆ ಬೆಂಗಳೂರಿಗೆ ಮೊದಲು ಬಂದವರೂ ತಬ್ಬಿಬ್ಬಾಗುತ್ತಾರೆ. ಬೆಂಗಳೂರಿಗೆ ಬಂದು ವರ್ಷವಾದರೂ ಕೆಲಸ ಸಿಗದೆ ವಾಪಸ್ ಹೋದವನು, ಸಣ್ಣದೊಂದು ಕೆಲಸ ಮಾಡುತ್ತಾ ಆಸೆಗಳಿಗೆ ಬಿದ್ದು ಮೈತುಂಬ ಸಾಲ ಮಾಡಿಕೊಂಡವನು, ಮೊನ್ನೆಮೊನ್ನೆ ಬಂದು ಈಗ ಕಾರಿನಲ್ಲಿ ಓಡಾಡುತ್ತಿರುವವನು...ಹೀಗೆಲ್ಲ ಯೋಚಿಸಿಕೊಂಡು ಅವನು ಟಿ.ವಿ ಎದುರು ಕುಳಿತಿದ್ದಾನೆ. ಇನ್ನು ಏನಾದರೊಂದು ನಿರ್ಧಾರ ಮಾಡಲೇಬೇಕು. ಆದರೆ ಕ್ರಿಕೆಟ್‌ನಲ್ಲಿ ಟಾಸ್ ಗೆದ್ದೂ ಸೋಲುವುದಿಲ್ವಾ?!

ಅದು ಸೋಮಾರಿಗಳ ಆಟ ಅಂತಾರೆ. ತಮ್ಮ ತಂಡದ ಇಬ್ಬರು ಆಡುತ್ತಿರುವಾಗ ಉಳಿದ ಒಂಬತ್ತೂ ಜನ ಫ್ಯಾನ್ ಕೆಳಗೆ ಪೆಪ್ಸಿ ಹೀರುತ್ತ ಇನ್ಯಾವ ಆಟದಲ್ಲಾದರೂ ಕುಳಿತಿರುತ್ತಾರಾ ಅಂತ ಕೇಳುತ್ತಾರೆ. ಕ್ರಿಕೆಟ್‌ನಿಂದ ಸಮಯ ವ್ಯರ್ಥ, ಅಹರ್ನಿಶಿ ಪಂದ್ಯದಿಂದ ವಿದ್ಯುತ್ ವ್ಯರ್ಥ, ಆಡೋದು ಬೆರಳೆಣಿಕೆಯ ದೇಶಗಳು ...ಇತ್ಯಾದಿ ಆರೋಪಗಳಿದ್ದರೂ, ಬ್ರಿಟಿಷರು ಕಲಿಸಿದ ಆಟ ನಮಗೆ ಅಷ್ಟೊಂದು ಪ್ರಿಯವಾದದ್ದು ಹೇಗೆ? ಅದರಲ್ಲಿ ಮುಟ್ಟಿಕೊಳ್ಳುವ ಅಗತ್ಯ ಇಲ್ಲದ್ದರಿಂದ ಮೈಲಿಗೆಯ ಸಮಸ್ಯೆ ಇರಲಿಲ್ಲ. ಎಲ್ಲರೂ ಒಂದೇ ಬಾಲ್‌ಗೆ ಎಂಜಲು ಉದ್ದುವುದು ಬೇರೆ ಮಾತು !ಭಾರತೀಯರಿಗೆ ಇಷ್ಟವಾದ ಅದೃಷ್ಟ ಪರೀಕ್ಷೆಗೆ ಹೆಚ್ಚಿನ ಅವಕಾಶ. ನಮ್ಮಲ್ಲಿನ ಸವಲತ್ತುಗಳಿಗೆ ಅನುಗುಣವಾಗಿ ಬೇಕೆಂದ ಹಾಗೆ ನಿಯಮ ಬದಲಾಯಿಸಿಕೊಂಡು ಆಡಬಹುದು...ಹೀಗೆ ನಾನಾ ಕಾರಣಗಳು. ಅಂತೂ ಸಮಾಜದ ಮೇಲ್ವರ್ಗದ ಧನಿಕರಿಂದ ಆರಂಭವಾಗಿ ಕೆಳಸ್ತರದ ನಿರಕ್ಷರಿಯವರೆಗೆ ಅದು ಭಾರತೀಯರ ಇಷ್ಟದ ಆಟ. ಅದರಲ್ಲೂ ಮತ್ತೆ ಮತ್ತೆ ಎರಡೂ ಕಾಲುಗಳನ್ನು ಕುಂಟಾಗಿಸಿ ಅಗಲಿಸಿ ಸಚಿನ್ ತೆಂಡೂಲ್ಕರ್ ಕ್ರೀಡಾಂಗಣಕ್ಕೆ ಇಳಿದು ಬರುತ್ತಿದ್ದಾನೆ ಅಂದರೆ ಸಾವಿರಸಾವಿರ ಸಂಖ್ಯೆಯ ಜನರಿಂದ ಜಯಘೋಷ ; ಜಯ್ ಹೋ, ಹೋ ಹೋ.

ಹಳ್ಳಿ ತೊರೆದು ಪಟ್ಟಣಕ್ಕೆ ಬಂದ ಪೋರರಿಗೆ ಇಲ್ಲಿ ಆಯ್ಕೆ ಎಂಬುದೇ ಇದ್ದಂತಿಲ್ಲ. ಇಲ್ಲಿರುವ ಯಾವುವೂ ಅವರದಲ್ಲ. ಸ್ವಂತ ಭೂಮಿ, ಮನೆ, ತಾವು ಓದಿದ ಶಾಲೆ, ತಮ್ಮ ಗ್ರಾಮದ ದೇವಸ್ಥಾನ, ತಾವು ಕಟ್ಟಿದ ಸಂಘ, ಯಾವುವೂ ಪೇಟೆಯಲ್ಲಿಲ್ಲ. ಬಂದ ಬಳಿಕ ಏನೇನೋ ಮಾಡಿಕೊಂಡಿದ್ದರೂ, ಆರಿಸಿಕೊಂಡಿದ್ದರೂ ಅವೆಲ್ಲ ಹಕ್ಕಿನಿಂದ ಬಂದವಲ್ಲ. ಅನ್ಯ ಕಾರಣಗಳಿಗಾಗಿ ಕಟ್ಟಿಕೊಂಡವು. ಹಾಗಾಗಿ ಎಲ್ಲ ಆಯ್ಕೆಗಳೂ ಒತ್ತಡದ-ಅನಿವಾರ್ಯದ ಆಯ್ಕೆಗಳು. ಒಂದು ಕೊಂಡರೆ ಎರಡು ಫ್ರೀ ಸಿಗುತ್ತಲ್ಲಾ ಅಂತ ಕೊಂಡುಕೊಂಡ ಹಾಗೆ ! ಟಿ.ವಿ ಎದುರು ಕುಳಿತಿರುವ ಅವನ ಹೆಸರು ರಮೇಶ. ಅವನಿಗೆ ನಿಜವಾಗಿ ಏನು ಬೇಕು ಅಂತ, ಹೇಳದೆ ತಿಳಿದುಕೊಳ್ಳಬಲ್ಲವನು ಒಬ್ಬನೇ. ಅವನ ಹಾಗೂ ಅವನಂಥವರ 'ದುಃಖ ಪರಿಹಾರಕ-ಕ್ಷೇಮ ಪರಿಪಾಲಕ'ಅವನೊಬ್ಬನೇ. ಯಾರವನು?

ತುಂಬಾ ಬೇಜಾರಾದಾಗ, ಒಬ್ಬೊಬ್ಬರು ಒಂದೊಂದು ಮಾತು ಆಡುತ್ತಿರುವಾಗ, ಯಾರ ಮಾತಿನಂತೆ, ಯಾವ ರೀತಿಯಂತೆ ನಡೆಯಬೇಕು ಅನ್ನುವುದೇ ರಮೇಶನಿಗೆ ಸಮಸ್ಯೆ. ಮಾತನ್ನು ನಂಬುವ ಮೊದಲು, ಅದನ್ನು ಆಡುತ್ತಿರುವನನ್ನು ನಂಬಬೇಕಲ್ಲ. ಆಡುವವರಲ್ಲಿ ಆತ ನಂಬುವುದು ಒಬ್ಬನನ್ನೇ ...ಹಾ ಹಾ ತೆಂಡೂಲ್ಕರ್ ! ರಮೇಶನಿಗೆ ಅವನ ಕಂಡರೆ ಅತಿ ಇಷ್ಟ. ತನಗೆ ಡಬಲ್ ಸೆಂಚುರಿ ಹೊಡೆಯುವ ಆಸೆ ಇದೆ ಎಂದವನು ‘ಅಭಿನವ ತೆಂಡೂಲ್ಕರ್’ ಅನ್ನಿಸಿಕೊಳ್ಳತೊಡಗಿದ, ಮೋಸ್ಟ್ ಡಿಸ್ಟ್ರಕ್ಟಿವ್ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್. ಆಡದೆ ಮಾಡಿ ತೋರಿಸಿದವನು ಮತ್ತು ಇನ್ನು ಹೇಳುವುದಕ್ಕೇ ಏನೂ ಉಳಿದಿಲ್ಲವೆಂಬಷ್ಟು ಮಾಡಿದವನು ಸಚಿನ್ ತೆಂಡೂಲ್ಕರ್. ‘ಸ್ಥಿತೋಸ್ಮಿ ಗತ ಸಂದೇಹಃ ಕರಿಷ್ಯೇ ವಚನಂ ತವ’. ‘ಸಂದೇಹವೆಲ್ಲ ನಿವಾರಣೆಯಾಗಿ ಸ್ಥಿತಪ್ರಜ್ಞನಾಗಿದ್ದೇನೆ. ನೀನು ಹೇಳಿದಂತೆ ಮಾಡುತ್ತೇನೆ’. ಗೀತೋಪದೇಶದ ಕೊನೆಗೆ ಅರ್ಜುನನಿಗೆ ಕೃಷ್ಣನ ಬಗ್ಗೆ ಅದೆಂಥ ನಂಬಿಕೆ ಬಂದುಬಿಟ್ಟಿದೆ !

'ನಿನ್ನ ಮಾತಿನಂತೆ ನಡೆಯುತ್ತೇನೆ' ಎನ್ನುವುದಕ್ಕೂ ಎಂಥ ಚಿತ್ತ ದೃಢತೆ ಬೇಕು. ಸಚಿನ್ ಬಳಿ ಅಂತಹ ನಂಬಿಕೆ ಇದೆ, ನೀನು ಹಾಕುವ ಚೆಂಡಿನಂತೆ ಆಡುತ್ತೇನೆ ಅಂತ ! ಸ್ಕ್ವೇರ್‌ಕಟ್ ಮಾಡಲಿ, ಹುಕ್ ತಟ್ಟಲಿ, ಕವರ್ ಡ್ರೈವ್ ಬಾರಿಸಲಿ, ಸ್ಟ್ರೈಟ್ ಬ್ಯಾಟ್ ಆಡಲಿ ಚೆಂದವೊ ಚೆಂದ. ಯಾವ ಚೆಂಡಿಗೆ ಯಾವ ರೀತಿ ಆಡಬೇಕು ಅನ್ನುವುದರಲ್ಲಿ ಕ್ಷಣದ ಗೊಂದಲವೂ ಆತನ ಆಟದಲ್ಲಿಲ್ಲ. ಕಳೆದ ೧೦ ತಿಂಗಳುಗಳಲ್ಲಿ ೧೨ ಶತಕಗಳು ! ೨೯೬೨ನೇ ‘ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯ’ದಲ್ಲಿ ದ್ವಿಶತಕ ಹೊಡೆದು ಮೊದಲಿಗ. ಅಂತಾರಾಷ್ಟ್ರೀಯ ಕ್ರಿಕೆಟ್‌ನ ಕಳೆದ ಎಂಟು ಇನ್ನಿಂಗ್ಸ್‌ಗಳಲ್ಲಿ ಸಚಿನ್ ಮೊತ್ತ ನೋಡಿ- ೧೦೫(ಅಜೇಯ), ೧೬, ೧೪೩, ೭, ೧೦೦, ೧೦೬, ೪, ೨೦೦ ! ಕೊಂಚ ಕಚ್ಚಿಕೊಂಡನೋ ಆತನನ್ನಲ್ಲದೆ ಮತ್ತೊಬ್ಬನ ನೆಚ್ಚಿಕೊಳ್ಳಬೇಕಿಲ್ಲ . ೩೭ರಲ್ಲಿರುವ ಸಚಿನ್ ಮತ್ತೆ ಜ್ವಲಿಸುತ್ತಿರುವ ಉಜ್ವಲ ಪ್ರತಿಭೆ . ಒಂದಾನೊಂದು ಕಾಲದಲ್ಲಿ ಅಂದರೆ, ಹದಿನೈದು ನವಂಬರ್ ೧೯೮೯ರಂದು ಅಂಗಳಕ್ಕೆ ಕಾಲಿಟ್ಟ ಈ ಭಾರತರತ್ನ, ಈಗಲೂ ಅಂದಿನ ಹಾಗೇ ಬೆವರುತ್ತಿದ್ದಾನೆ ! ಇನ್ನು ಹನ್ನೆರಡು ತಿಂಗಳಲ್ಲಿ ತನ್ನ ಆರನೇ ವಿಶ್ವಕಪ್ ಕ್ರಿಕೆಟ್ ಆಡುತ್ತಾನೆ ಅಂತ ರಮೇಶ ಬಲವಾಗಿ ನಂಬಿದ್ದಾನೆ.

'ಶತಕ ದಾಟಿದ ಕೂಡಲೇ ರಿಸ್ಕ್ ತೆಗೆದುಕೊಳ್ಳದಿರಲು ನನಗೆ ಸಾಧ್ಯವೇ ಆಗುವುದಿಲ್ಲ. ಆದರೆ ಸಚಿನ್ ಹಾಗಲ್ಲ' ಅಂದಿದ್ದಾನೆ ಸೆಹ್ವಾಗ್. ಸಚಿನ್‌ನ ನಿರ್ಧಾರದಲ್ಲಿ ಅಂತಹ ದೃಢತೆ-ಖಚಿತತೆ ಇದೆ. ರಮೇಶ ಆಗಾಗ ಗುನುಗುತ್ತಾನೆ - ಅನಿಸುತಿದೆ ಯಾಕೋ ಇಂದು ನೀನೇನೇ ನನ್ನವನೆಂದೂ...ಬಳಿಕೊಮ್ಮೆ ‘ದಿನ ಹೀಗೆ ಜಾರಿ ಹೋಗಿದೆ ನೀನೀಗ ಬಾರದೇ...’ಅಂತಲೂ . ಆದರೆ ಆಡುತ್ತ ಆಡುತ್ತ ಸಚಿನ್, ಅವನ ಆಟ ನೋಡುತ್ತ ನೋಡುತ್ತ ಎಲ್ಲರ ಸಂಭ್ರಮ ಸಂತೋಷ ಚಿರಸ್ಥಾಯಿ. ಹಾಗಾಗಿಯೇ ಸಣ್ಣವನಿದ್ದಾಗ, ಗೆಳೆಯರ ಜತೆ ಸೇರಿ ಕ್ರಿಕೆಟ್ ಆಡುತ್ತ ಬ್ಯಾಟು ಹಿಡಿದ ಕೂಡಲೇ, ಬಾಯಲ್ಲಿ ನಗು ತುಳುಕಿಸುತ್ತಾ ರಮೇಶ ಹೇಳುತ್ತಿದ್ದ 'ನಾನು ಸಚಿನ್ ರಮೇಶ್ ತೆಂಡೂಲ್ಕರ್!'

Read more...

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP