November 20, 2009

ಕಾಡಿನ ಕತ್ತಲೆ ಬೆಟ್ಟದ ಕತ್ತಲೆ


ಕತ್ತಲ ದಾರಿಗಳಲ್ಲಿ ಮೈಗೆಲ್ಲ ಕತ್ತಲು ಮೆತ್ತಿಕೊಂಡು ಓಡಾಡುವ ಸುಖ ನಿಮಗೆ ಗೊತ್ತೆ ? ಹಾಲು ಸುರಿವ ಬೆಳದಿಂಗಳಲ್ಲಿ ಯಾವತ್ತಾದರೂ ನೀವು ಕಾಡು ಬೆಟ್ಟಗಳೊಳಗೆ ಅಲೆದಾಡಿದ್ದೀರಾ? ಒಮ್ಮೆ ಅಲೆದಾಡಿದರೆ, ನೀವೆಂಥ ಅನುಭವವನ್ನು ಮಿಸ್ ಮಾಡಿಕೊಂಡಿದ್ದಿರಿ ಅಂತ ಅರ್ಥವಾದೀತು. 'ಕತ್ತಲಿಗೆ ಹತ್ತೆ ತಲೆ, ಅದು ಅಸಂಖ್ಯ' ಅಂತ ಅಡಿಗರು ಅಂದದ್ದು ಬೇರೆಯೇ ಅರ್ಥ- ಸಂದರ್ಭದಲ್ಲಿ ಬಿಟ್ಟುಬಿಡಿ ! ನಿಜವಾಗಿ ಕತ್ತಲಿಗೆ ಒಂದೇ ತಲೆ, ಒಂದೇ ಮನಸ್ಸು, ಒಂದೇ ಧಾಟಿ. ಅದು ಹಗಲಿನ ಗರಾಜು ಅಲ್ಲ. ರಾತ್ರಿಯೆಂದರೆ ಹಗಲನ್ನು ಹಿಡಿದು, ಗದರಿಸಿ ತೆಪ್ಪಗೆ ಕುಳ್ಳಿರಿಸಿರುವ ಶಕ್ತಿ. ಒಂದಿರುಳ ಕನಸಿಗಿಂತ ಎಷ್ಟೋ ಹೆಚ್ಚಿನ ಸುಖ ಒಂದಿರುಳ ನನಸಿಗಿದೆ. ‘ನ ಕದಾಪಿ ಅನೀದೃಶಂ ಜಗತ್’- ಈ ಜಗತ್ತು ಈಗ ಇರುವ ಹಾಗಲ್ಲದೆ ಬೇರೆಯದೇ ತೆರನಾಗಿ ಎಂದೂ ಇರಲಿಲ್ಲ- ಇದು ಉಪನಿಷತ್ ಮಾತು. ಅದು ನಿಜ ನಿಜ ಅನ್ನಿಸುವ ಹಾಗೆ ರಾತ್ರಿಯಿದೆ !

ಟಾರ್ಚ್ ಕೂಡಾ ಇಲ್ಲದೆ ಐದಾರು ಕಿಲೋಮೀಟರುಗಳ ದೂರ ಬೆಟ್ಟಗುಡ್ಡಗಳ ಕಾಲುಹಾದಿಗಳಲ್ಲಿ ರಾತ್ರಿ ಓಡಾಡುವ ಜನ ಹಳ್ಳಿಗಳಲ್ಲಿ ಈಗಲೂ ಇದ್ದಾರೆ. ಅವರು ಕಿವಿಗೆ ಇಯರ್‌ಫೋನ್ ಸಿಕ್ಕಿಸಿಕೊಂಡಿಲ್ಲ, ಶೂ ಹಾಕಿಲ್ಲ, ಎಮರ್ಜೆನ್ಸಿಗೆ ಅಂತೆಲ್ಲ ಏನೂ ಇಲ್ಲ. ಆದರೂ ನಿರಾಳ, ನಿರ್ಭಯ, ಯಾವ ಔದಾಸೀನ್ಯವೂ ಇಲ್ಲ. ಲೇಟ್‌ನೈಟ್ ಪಾರ್ಟಿಗಳನ್ನು ಮುಗಿಸಿ ಮನೆಗೆ ಬರುವ ಹಾಗಲ್ಲ ಇದು. ಹನ್ನೆರಡು ಗಂಟೆಗೆ ಥಿಯೇಟರ್‌ನಿಂದ ಹೊರಟಾಗಿನ ಧಾವಂತವಲ್ಲ ಇದು. ತಮಗೆ ಮಾತ್ರ ಗೊತ್ತಿರುವ, ಕಿಟಕಿಯಲ್ಲಿ ಕೈ ಹಾಕಿ ಉದ್ದ ಮಾಡಿದರೆ ಸಿಗುವ ಬೋಲ್ಟ್ ತೆಗೆದು ಮನೆಯೊಳಗೆ ಸೇರಿ, ಹೆಂಡತಿ ಮಕ್ಕಳಿಗೇ ತಿಳಿಯದಂತೆ ಹೊದ್ದು ಮಲಗುವ ಜನ ಇವರು. ಅವರ ರಾತ್ರಿ ನಡಿಗೆ, ಹಗಲಿನ ಭಾರವನ್ನೆಲ್ಲ ನಿರಾಯಾಸವಾಗಿ ಕಳೆಯುತ್ತದಂತೆ; ಬೇಕಿದ್ದರೆ ಕೇಳಿ ನೋಡಿ. ಹಾಗಂತ, ಆ ಕತ್ತಲು ಹಳ್ಳಿಗಳದ್ದೇ ಸೊತ್ತೇನೂ ಅಲ್ಲ. ಬೆಂಗಳೂರಿಗೆ ಬಂದು ಒಂದು ವಾರವಾಗಿದ್ದ ಗೆಳೆಯನೊಬ್ಬ ರಾತ್ರಿ ಟೆರೇಸ್‌ನಲ್ಲಿ ಕತ್ತೆತ್ತಿ ಕುಳಿತು ಹೇಳಿದ -'ಆಕಾಶ ನೋಡ್ತಾ ಇದ್ರೆ ಇಲ್ಲೂ ಊರಲ್ಲಿ ಇದ್ದ ಹಾಗೇ ಆಗ್ತದೆ !'

'ಈ ಸಂಜೆ. ಮೆಲ್ಲಮೆಲ್ಲನೆ ತೊಟ್ಟುತೊಟ್ಟಾಗಿ ರುಚಿ ನೋಡಿನೋಡಿ ಈ ದಿವಾಪ್ರಭೆಯನ್ನು ಹೇಗೆ ಪಾನ ಮಾಡುತ್ತಿದ್ದಾಳೆ ಈ ನಿಶಾಭಗವತಿ ! ಆ ಬಟ್ಟಲಲ್ಲಿ ಉಳಿಯುವ ಅವಶೇಷಗಳಂತೆ ತಾರೆಗಳು ಕಾಣುತ್ತಿವೆಯಲ್ಲವೆ? ಈಗ ಎಲ್ಲರಿಗೂ ಒಳಗೆ ಬೆಳಕು, ಹೊರಗೆ ಕತ್ತಲು. ಸಮಸ್ತ ಚೈತನ್ಯವನ್ನು ಮೂಲ ಪ್ರಜ್ಞೆಯಲ್ಲಿ ಅದ್ದಿ ತೆಗೆಯಬೇಕೆಂದೇ ಈ ಯಾಮಿನೀ ದೇವತೆಯಾಸೆಯೋ? ಮೊದಲು ಕಣ್ಣು, ಆಮೇಲೆ ಕಿವಿ, ಬಳಿಕ ರಸನೆ, ಅನಂತರ ಪ್ರಾಣ, ಕೊನೆಗೆ ಸ್ಪರ್ಶ-ಹೀಗೆ ಒಂದು ಕರಣ ಅಸ್ತವಾಗಿ, ಮತ್ತೊಂದು ಪ್ರಜ್ವಲಿಸಿ, ಕೊನೆಗೆ ಎಲ್ಲವೂ ಶಾಂತವಾಗುವಂತೆಯೂ ಇರವು ಆತ್ಮಾರಾಮವಾಗಿ ಶ್ಯಾಮಸುಂದರನಲ್ಲಿ ಲಯಿಸುವಂತೆಯೂ ಈಕೆ ಏರ್ಪಡಿಸುತ್ತಾಳಲ್ಲವೆ, ಈ ಕೃಷ್ಣ ಸಹೋದರಿ? ಕೋಟಿ ಕೋಟಿ ಹಗಲುಗಳನ್ನು ಬೆಳಗಬಲ್ಲ ಈ ತಾರೆಗಳನ್ನು, ತ್ರಿಮೂರ್ತಿಗಳನ್ನು ಶಿಶುಭಾವಕ್ಕಿಳಿಸಿ ತೊಟ್ಟಿಲಲ್ಲಿ ತೂಗಿದ ಅನಸೂಯೆಯಂತೆ, ಹೇಗೆ ತೂಗುತ್ತಿದ್ದಾಳೆ ಈ ‘ರಾತ್ರಿಯೆಂಬ ಧಾತ್ರಿ'? ಇವಳ ಮಾಯೆಯ ಮುಂದೆ ಹಗಲಿನದೆಂಥ ಮಾಯೆ?’ - ಹೀಗೆ ಬರೆದವರು ಶ್ರೇಷ್ಠ ಬರಹಗಾರ ಪು.ತಿ.ನರಸಿಂಹಾಚಾರ್. ಕತ್ತಲನ್ನು ನಿಶಾ ಭಗವತಿಯಾಗಿ, ಯಾಮಿನೀ ದೇವತೆಯಾಗಿ, ಕೃಷ್ಣ ಸಹೋದರಿಯಾಗಿ ಕಂಡವರು ! ಒಟ್ಟಿನಲ್ಲಿ ಎಲ್ಲವನ್ನೂ ಶಮನಗೊಳಿಸುವ ಶಕ್ತಿ ಕತ್ತಲಿಗಿದೆಯೆಂಬುದು ಭಾವ.

ರಾತ್ರಿ ನಡೆಯುವ ಸುಖ ಮೊತ್ತಮೊದಲು ನನಗೆ ಅರಿವಾದದ್ದು ಇರುಳು ಪೂರ್ತಿ ನಡೆಯುವ ಯಕ್ಷಗಾನ ಬಯಲಾಟಗಳಿಗೆ ಹೊರಟಾಗ. ರಾತ್ರಿ ಎಂಟು ಗಂಟೆಗೆ ಮನೆಯಿಂದ ಹೊರಡುವ ಮೊದಲ ಅವಕಾಶ ದೊರೆತದ್ದು ಅದರಿಂದಲೇ . ಆ ಎಂಟರ ಬಸ್ಸು ಬಂದರೆ ಬಂತು, ಇಲ್ಲದಿದ್ದರೆ ಇಲ್ಲ. ಎಂಟೂವರೆಯ ತನಕ ಕಾದು ನಿಂತು, ನಾಲ್ಕೈದು ಕಿಲೋಮಿಟರ್ ‘ನಟರಾಜ ಸರ್ವೀಸ್’. ಅಡಿಕೆ ಕೊಯ್ಲಿನ ಸಂದರ್ಭದಲ್ಲಿ ಕಳ್ಳರ ಕಾಟ ತಪ್ಪಿಸಲು ರಾತ್ರಿ ಹತ್ತಕ್ಕೆ ಅಪ್ಪನ ಜತೆ ತೋಟಕ್ಕೆ ಹೋದಾಗ, ಬಳಿಕ ಬಂದ ಕರೆಂಟ್ ಪಂಪ್ ರನ್ ಮಾಡಲು ಒಳಗೊಳಗೆ ಹೆದರುತ್ತ ತೋಟದ ಮಧ್ಯಕ್ಕೆ ಆ ಕತ್ತಲಲ್ಲಿ ಛಕ್ಕನೆ ಓಡಿ ಹಿಂದಿರುಗುವಾಗ...ಇರುಳಿನ ಸುಖ ತಿಳಿದದ್ದು ಹೀಗೆ. ಈಗ ಊರಿಗೆಂದೋ ಬೆಂಗಳೂರಿಗೆಂದೋ ನೈಟ್ ಬಸ್ಸಿಗೆ ಹೊರಡುವುದು ಎಷ್ಟೊಂದು ಮಾಮೂಲಿ ಕ್ರಿಯೆಯಾಗಿಬಿಟ್ಟಿದೆಯಲ್ಲಾ ! ಯಾವಾಗ ಐಟಿ ಎಂಬ ಕೆಲಸದ ವ್ಯೂಹ ಶುರುವಾಯಿತೋ, ಬಳಿಕವಂತೂ ರಾತ್ರಿಯ ಕೆಲಕ್ಕೆ ಬೇರೆಯದೇ ಮೆರುಗು ಬಂತು. ರಾಜ್ಯದ ಗಡಿಯ ಚೆಕ್‌ಪೋಸ್ಟ್‌ಗಳ ಕಾವಲುಗಾರರು, ಲಾರಿಗಳು ಓಡಾಡುವ ಹೆದ್ದಾರಿಯಲ್ಲಿನ ಗೂಡಂಗಡಿಗಳವರು, ನೈಟ್ ಬೀಟ್ ಪೊಲೀಸರು ಮುಂತಾದವರು ಯಾವುದೋ ಕಾಲದಿಂದ ನೈಟ್ ಡ್ಯೂಟಿ ಮಾಡುತ್ತಿದ್ದರಾದರೂ, ನಮ್ಮ ನಗರಗಳು ಮೆಟ್ರೊಗಳಾದಂತೆ ರಾತ್ರಿಯ ಬದುಕು ಬೇರೆಯದೇ ವೈಭವದಲ್ಲಿ ಅನಾವರಣಗೊಳ್ಳತೊಡಗಿತು. ಆದರೆ ಕಾಡಿನ ಕತ್ತಲೆ...ಬೆಟ್ಟದ ಕತ್ತಲೆ...? ಅದರ ಸುಖ ಗೊತ್ತಿರುವವರು ವಿರಳ. ಅದರ ಅನಂತತೆಯಲ್ಲಿ ಸುತ್ತಾಡುವುದು ದಿವ್ಯ ಸುಖ.

ಅದು ನಿಜಕ್ಕೂ ಕೊಂಚ ಘಾಟಿಯೇ ! ಕಡಿದಾದ ತಿರುವುಗಳಲ್ಲಿ ಹಬ್ಬಿಕೊಂಡಿದ್ದ ಕತ್ತಲು. ವಾಹನಗಳ ಬೆಳಕಿನ ಜತೆ, ಬೀಸುವ ಗಾಳಿಯ ಜತೆ, ಆ ಕತ್ತಲು ಕೂಡಾ ಅತ್ತಿತ್ತ ರಾಶಿಯಾಗುತ್ತಿತ್ತು. ಎಲ್ಲೋ ಒಂದೊಂದೆಡೆ ಇನ್ನೂ ಆರದ ಕೆಂಡದ ತುಂಡುಗಳಂತೆ ಲೈಟುಗಳು ಉರಿಯುತ್ತಿವೆ. ಹಿಂದೂ ಮುಂದೂ ವ್ಯಾಪಿಸಿಕೊಂಡಿರುವ ಕತ್ತಲನ್ನು ಬಗೆಯುತ್ತಾ, ಆ ಕಾಳರಾತ್ರಿಯನ್ನು ಪ್ರೇಮಿಸುತ್ತಾ ನಡೆದರೆ ಹೊತ್ತು ಸರಿದದ್ದೆ ತಿಳಿಯುವುದಿಲ್ಲ. ಬೈಕಿನಲ್ಲೋ ಕಾರಿನಲ್ಲೋ ಭರ್ರನೆ ಸಾಗುವುದಕ್ಕಿಂತ, ದೇಹ ತೊನೆದಾಡಿಸುತ್ತಾ ರಸ್ತೆಯಲ್ಲಿ ಸುಮ್ಮನೆ ನಡೆಯುತ್ತಿರಬೇಕು. ಬೆಟ್ಟದ ತುದಿಗೆ ಸುಮಾರು ಎಂಟು ಕಿಮೀಗಳಷ್ಟಾದರೂ ಇದೆ. ನಡೆದೇ ಹೋದರೆ ಮೂರು ಗಂಟೆ ಸಾಕು. ಆಹ್, ಪೌರ್ಣಮಿಯ ಬೆಟ್ಟ !

ಪ್ರಶಾಂತ ರಾತ್ರಿಯನ್ನು ಕಲಕಿ ರಾಡಿ ಮಾಡುವ ಎಂತದ್ದೂ ಇಲ್ಲ. ಪುಟ್ಟದೊಂದು ಮಿಣಿಮಿಣಿ ಟಾರ್ಚು ಕೈಯಲ್ಲಿ; ಸಣ್ಣ ಹಗುರ ಬ್ಯಾಗು-ಪುಟಾಣಿ ನೀರಿನ ಬಾಟಲಿ ಬೆನ್ನಲ್ಲಿ. ಅಲ್ಲಿ ಆಕಾಶಕ್ಕೂ ಭೂಮಿಗೂ- ಲೋಕಾಂತಕ್ಕೂ ಏಕಾಂತಕ್ಕೂ ವ್ಯತ್ಯಾಸವೇ ಇಲ್ಲ. ತಲೆಯ ಕೂದಲೆಳೆಗಳ ಮಧ್ಯೆ ಅಲೆಅಲೆಯಾಗಿ ಬೀಸುವ ಗಾಳಿಗೆ, ದೇಹ-ಮನಸುಗಳೆರಡನ್ನೂ ಹಸಿಯಾಗಿಡುವ ತಾಕತ್ತಿದೆ. ಕತ್ತೆತ್ತಿದರೆ ಚುಕ್ಕಿಗಳು ಬಾನಿನಲ್ಲಿ ಚುಚ್ಚಿಕೊಂಡಿವೆ. ಗಗನ ಸಾಗರದಲ್ಲಿ ಕಳ್ಳ ಚಂದ್ರ ತೇಲುತ್ತಿದ್ದಾನೆ. ಕತ್ತಲಲ್ಲಿ ಲೋಕ ಸುತ್ತಿ ನೋಡುವವನು ಅವನೊಬ್ಬನೇ. ಕಿವಿಯಲುಗಿಸುತ್ತಾ ಮಲಗಿರುವ ಪ್ರಾಣಿಯ ಹಾಗೆ ಗಿಡಮರಗಳೆಲ್ಲ ಎಲೆ ಅಲ್ಲಾಡಿಸುತ್ತಾ ನಿದ್ದೆ ಹೋಗಿವೆ. ಶ್...ಇಲ್ಲಿ ಕಿರುಚಾಡುವುದು ನಿಷಿದ್ಧ. ಅಷ್ಟಕ್ಕೂ, ಇಲ್ಲಿ ಬೊಬ್ಬಿಡುವ ಮನಸ್ಸೂ ಬಾರದು. ಪ್ರಾಣಿಗಳ ಸುಳಿವು ಸಿಕ್ಕವರಂತೆ ಭಯಪಡುವುದನ್ನೋ, ಕಳ್ಳಕಾಕರ ನೆನಪನ್ನೋ ಮನಸ್ಸಿನಿಂದ ಕಿತ್ತಿಟ್ಟುಕೊಳ್ಳಬೇಕು. ನಿಮಗೆ ವಿರುದ್ಧವಾದ ಯಾವುದೂ ಈ ಲೋಕದಲ್ಲಿಲ್ಲ ಅಂದುಕೊಳ್ಳಿ. ಆ ಕತ್ತಲಲ್ಲಿ ನಿಮ್ಮನ್ನು ಕಂಗೆಡಿಸುವ ಮನಸ್ಸು ಯಾರಿಗೂ ಇಲ್ಲ. ಮೇಲಕ್ಕೇರಿ ಏರಿ ಹೋದ ಹಾಗೆಲ್ಲ, ಮೈ ಮೇಲೆಲ್ಲ ಬೆವರ ಮಣಿಗಳು. ಅದು ಆಯಾಸದಿಂದಲೋ, ಭಯದಿಂದಲೋ, ಬಿಸಿಲಿನ ಝಳದಿಂದಾಗಿಯೋ ಅಲ್ಲ. ಅದು ಬೆಳದಿಂಗಳಲಿ ಮೂಡಿದ ಬೆವರು ! ಆ ನಸು ಬೆವರಿನ ಸುಖ ನಿಮಗೆ ಗೊತ್ತಾಗಬೇಕು. ತುದಿ ತಲುಪಿದರೋ ಅದೇ ಅದೇ...ನಮಗೆಲ್ಲ ಗೊತ್ತಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ನಂದಿಬೆಟ್ಟ. ಇದೊಂದು ಸ್ಯಾಂಪಲ್ ಅಷ್ಟೆ. ಪೂರ್ಣ ಚಂದಿರನಿರುವ ಹುಣ್ಣಿಮೆಯ ದಿನ, ಇಂತಹ ಬೆಟ್ಟಗಳೆಲ್ಲ ಎಷ್ಟೊಂದು ಕಾಂತಿಯುತವಾಗಿ ಬೆಣ್ಣೆ ಮುದ್ದೆಗಳಂತೆ ಕಾಣುತ್ತವೆಯೋ.ಆ ಕಾಡಿನ ಕತ್ತಲೆ, ಈ ಬೆಟ್ಟದ ಕತ್ತಲೆ ನಿಮ್ಮ ಒಳಗೂ ನುಗ್ಗಲಿ.
(ವಿಜಯ ಕರ್ನಾಟಕದಲ್ಲಿ ಪ್ರಕಟಿತ)

4 comments:

ಗೌತಮ್ ಹೆಗಡೆ November 21, 2009 at 5:24 AM  

ನಿಮ್ಮ ಭಾಷೆಯ ಬಳಕೆ ಖುಷಿ ಕೊಡ್ತು:)

Sharath Akirekadu November 22, 2009 at 11:59 PM  

ನಿಮ್ಮ ಲೇಖನಗಳು ಬ್ಲಾಗಿನ ಕತ್ತಲೆಯನ್ನು ಸರಿಸುತ್ತಾ ಇದೆ.ಯಾಕೊ ಸ್ವಲ್ಪ ದಿನಗಳಿಂದ ಯಾವ ಪೊಸ್ಟ್ ಗಳು ಇಲ್ಲದೆ ಸ್ವಲ್ಪ ಕತ್ತಲೆಯಾಗಿತ್ತು.ಈಗ ನೀರವ ಮೌನ.:)ಪ್ರೀತಿಯಿಂದ
ಶರತ್ ಎ

ಸಾಗರದಾಚೆಯ ಇಂಚರ November 23, 2009 at 1:35 AM  

ನಿಮ್ಮ ಶೈಲಿ ತುಂಬಾ ಸೊಗಸಾಗಿದೆ,
ಓದಲು ಒಂದು ರೀತಿಯ ಖುಷಿ ಕೊಡುತ್ತದೆ
ಇನ್ನಷ್ಟು ಬರಹಗಳ ನೀರೀಕ್ಷೆಯಲ್ಲಿ

Anonymous,  November 27, 2009 at 8:40 PM  

dear goutham, sharath krishna, gurumurthy, thanks a lot- champakavathi

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP