April 22, 2008

ಬೆಳ್ಳೇಕೆರೆಯ ಹಳ್ಳಿ ಥೇಟರ್-ಅಂಕ ೩

ಸಕಲೇಶಪುರದಿಂದ ಪ್ರಸಾದ್ ರಕ್ಷಿದಿ ಬರೆಯುತ್ತಾರೆ.

ನಾನು ಹೈಸ್ಕೂಲ್ ತನಕ ಓದಿದ ಹಾನುಬಾಳಿನ ಸರ್ಕಾರಿ ಶಾಲೆಯಲ್ಲಿ, ಸ್ಕೂಲ್‌ಡೇಗಳಲ್ಲಿ ಮತ್ತು ಗಣಪತಿ ಹಬ್ಬದಲ್ಲಿ ಶಾಲೆಯಲ್ಲಿ ಗಣಪತಿ ಕೂರಿಸಿದಾಗ, ಅಥವಾ ಗಣರಾಜ್ಯ ದಿನವೋ-ಬೇರೇನಾದರೂ ವಿಶೇಷವೋ- ಹೀಗೆ ಅನೇಕ ಸಂದರ್ಭಗಳಲ್ಲಿ 'ಮಕ್ಕಳಿಂದ ಮನೋರಂಜನೆ' ಇರುತ್ತಿತ್ತು. ಆಗೆಲ್ಲ ನಾನು ಸಾಮಾನ್ಯವಾಗಿ ನಾಟಕಗಳಲ್ಲಿ ಭಾಗವಹಿಸುತ್ತಿದ್ದೆ. ಹೈಸ್ಕೂಲಿನಲ್ಲಿ ವಿಶ್ವನಾಥರಾವ್ ಅಂತ ಹೆಡ್ಮಾಸ್ತರಿದ್ದರು. ಬಿಡುವಿನಲ್ಲಿ ಶೇಕ್ಸ್‌ಪಿಯರ್-ಇಬ್ಸೆನ್, ಕಾಳಿದಾಸ, ಕೈಲಾಸಂ ಅವರ ನಾಟಕಗಳನ್ನು, ಮುದ್ದಣನ ರಾಮಾಶ್ವಮೇಧ, ಜಿ.ಪಿ. ರಾಜರತ್ನಂ ಕವನಗಳು-ಮಂಕುತಿಮ್ಮನ ಕಗ್ಗ ಇತ್ಯಾದಿಗಳನ್ನು ಓದಿ ಹೇಳುತ್ತಿದ್ದರು. ಹೈಸ್ಕೂಲಿನಲ್ಲಿ ಪ್ರತಿ ಸ್ಕೂಲ್ ಡೇಯಲ್ಲೂ ನಾಟಕವಂತೂ ಇದ್ದೇ ಇರುತ್ತಿತ್ತು. ನಾನು, ಉಮೇಶ, ರಾಜಶೇಖರ, ಕುಮಾರ ನರಸಿಂಹ, ರಜಾಕ್, ರಾಮಚಂದ್ರ ಹೀಗೇ ನಾವೊಂದಷ್ಟು ಹುಡುಗರ ಪಟಾಲಂ ಇಲ್ಲದೇ ಸ್ಕೂಲ್ ಡೇ ಇರುತ್ತಿರಲಿಲ್ಲ. ಶೇಕ್ಸ್‌ಪಿಯರ್‌ನ ' ಟೇಮಿಂಗ್ ಆಫ್ ದಿಶ್ರೂ' ಕನ್ನಡ ರೂಪಾಂತರ 'ಗಯ್ಯಾಳಿ ಗಂಡ 'ದಲ್ಲಿ ನಾನು ಗಯ್ಯಾಳಿ ಪಾತ್ರ ಮಾಡಿದ್ದೆ. ನನ್ನ ಮತ್ತು ಉಮೇಶನ ನೀಗ್ರೋ ಡ್ಯಾನ್ಸ್ ಪ್ರತಿ ವರ್ಷ ಇರಲೇಬೇಕಿತ್ತು. ಹೀಗಾಗಿ ನಾನೊಬ್ಬ ಭಯಂಕರ ಕಲಾವಿದನೆಂದು ನಂಬಿಕೊಂಡು ಬಿಟ್ಟಿದ್ದೆ!ಹೈಸ್ಕೂಲ್ ಮುಗಿಸಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜು ಸೇರಿದೆ. ಹಾಸ್ಟೇಲಿನಲ್ಲಿ ವಾಸ. ಪಿ.ಯು ಕ್ಲಾಸಿನಲ್ಲಿ ರಾಮದಾಸ್ ಲೆಕ್ಚರರ್ ಆಗಿದ್ದರು. ಗೋಪಾಲಕ್ರಷ್ಣ ಅಡಿಗರು ಪ್ರಿನ್ಸಿಪಾಲ್.

ಆಗಷ್ಟೇ ಗಿರೀಶ ಕಾರ್ನಾಡರ ತುಘಲಕ್ ಪ್ರಚಾರಕ್ಕೆ ಬಂದಿತ್ತು. ಕಾಲೇಜ್ ಡೇ ಗೆ ರಾಮದಾಸರು 'ತುಘಲಕ್ ' ತೆಗೆದುಕೊಳ್ಳಲಿದ್ದಾರೆಂದು ಸುದ್ದಿ ಹಬ್ಬಿತ್ತು. ನೋಟೀಸ್ ಬೋರ್ಡಿನಲ್ಲಿ-ನಾಟಕಕ್ಕೆ ಸೇರಬಯಸುವವರೆಲ್ಲ ಸಂಜೆ ಕಾಲೇಜಿನ ಗ್ಯಾಲರಿ ಹಾಲಿನಲ್ಲಿ ಸೇರಬೇಕೆಂದು- ನೋಟೀಸು ಹಚ್ಚಿದ್ದರು. ನಾನಾಗಲೇ ಹಾಸ್ಟೇಲಿನಲ್ಲಿ -ನಾನೊಬ್ಬ ನಟ ಭಯಂಕರ ಎಂಬಂತೆ ಚಿತ್ರಿಸಿಕೊಂಡಿದ್ದೆ. ಆದ್ದರಿಂದ ನನ್ನ ರೂಂಮೇಟ್‌ಗಳು ' ನಾಟಕಕ್ಕೆ ನೀನು ಸೇರುವುದಿಲ್ಲವೇ ?' ಎಂದು ಪ್ರಶ್ನಿಸಿದರು. ವಾಸ್ತವವಾಗಿ ನಾನು ನೋಟೀಸನ್ನಾಗಲೀ ಅದರಲ್ಲಿ ಹಾಕಿದ ದಿನಾಂಕವನ್ನಾಗಲಿ ನೋಡಿರಲೇ ಇಲ್ಲ. ಕೇಳಿದವರಿಗೆಲ್ಲಾ 'ನಾಳೆ ನಾಳಿದ್ದರಲ್ಲಿ ಸೇರುತ್ತೇನೆ ' ಎಂದು ಉಡಾಫೆ ಮಾತಾಡಿದೆ. ಕೆಲವರು ಮುಖ ಮುಖ ನೋಡಿಕೊಂಡು ಸುಮ್ಮನಾದರು.ಎರಡು ದಿನ ತಡವಾಗಿ ಗ್ಯಾಲರಿ ಹಾಲ್‌ಗೆ ಹೋದೆ. ಅಲ್ಲಿ ಮೂವ್ವತ್ತು, ನಲವತ್ತು ಜನ ಸೇರಿದ್ದರು. ರಾಮದಾಸರು ಅವರೊಂದಿಗೆ ಗಂಭೀರವಾಗಿ ಚರ್ಚೆ ನಡೆಸಿದ್ದರು. ನಾನು ಒಳಗೆ ಬರಲೇ ಸಾರ್ ಎಂದು ಕೇಳಿ ಉತ್ತರಕ್ಕೂ ಕಾಯದೆ ಒಳಗಡೆ ಹೋಗಿ ಕುಳಿತೆ. ನನ್ನನ್ನು ಯಾರೂ ಗಮನಿಸಿದಂತೆ ಕಾಣಲಿಲ್ಲ. ಸ್ವಲ್ಪ ಹೊತ್ತಿನ ನಂತರ ರಾಮದಾಸರು ನನ್ನನ್ನು ನೋಡಿ ಕೇಳಿದರು.' ಯಾಕೆ ಬಂದಿದ್ದೀಯ ?' ' ನಾಟಕಕ್ಕೆ ಸೇರೋಣಾಂತ ಸಾರ್' ' ಸರಿ ಸರಿ ತಮಗೇನಾದರೂ ಅನುಭವ ಉಂಟೋ ?' ರಾಮದಾಸರ ಮಾತಿನಲ್ಲಿದ್ದ ವ್ಯಂಗ್ಯ ನನ್ನ ತಲೆಗೆ ನುಗ್ಗಲಿಲ್ಲ. ಪ್ರೈಮರಿ ಶಾಲೆಯಿಂದ ಹೈಸ್ಕೂಲ್‌ನವರೆಗೆ ನಟಿಸಿದ-ಕುಣಿದ ಎಲ್ಲವನ್ನೂ ಪಟ್ಟಿ ಮಾಡಿ ಹೇಳಿ ರಾಜ್‌ಕುಮಾರ್ ಸ್ಟೈಲ್‌ನಲ್ಲಿ ನಿಂತೆ. ' ತಮಗೆ ತುಂಬ ಅನುಭವವಿದೆ. ಕುಳಿತುಕೊಳ್ಳಿ ' ಎಂದರು. ಉಳಿದವರು ಮುಸಿ ಮುಸಿ ನಕ್ಕದ್ದು ಕಂಡರೂ ಇವರಿಗೇನು ಗೊತ್ತು ನನ್ನ ಯೋಗ್ಯತೆ ಎಂದುಕೊಂಡು ಗತ್ತಿನಲ್ಲಿ ಇದ್ದೆ.

ಒಂದೆರಡು ದಿನ ಕಳೆದಂತೆ -ನಾಟಕದ ರೀಡಿಂಗ್-ಇತ್ಯಾದಿ ಪ್ರಾರಂಭಿಸಿದರು. ಪಾತ್ರ ಗಳನ್ನು ಹಂಚದೆ ಇವರೇನು ಸುಮ್ಮನೆ ಕಾಲಹರಣ ಮಾಡುತ್ತಿದ್ದಾರೆ ಎಂದುಕೊಂಡೆ. ನಿಜವಾದ ಸಂಗತಿಯೆಂದರೆ ನಾನು "ತುಘಲಕ್' ನಾಟಕದ ಹೆಸರನ್ನು ಮಾತ್ರ ಕೇಳಿದ್ದೆನೇ ಹೊರತು ಅದನ್ನು ಓದುವುದಿರಲಿ ಅದರ ಬಗ್ಗೆ ಏನೊಂದೂ ಗೊತ್ತಿರಲಿಲ್ಲ. ಮತ್ತೂ ಒಂದೆರಡು ದಿನ ಅಲ್ಲಿಗೆ ಹೋಗದೆ ಚಕ್ಕರ್ ಹೊಡೆದೆ. ಯಾವತ್ತು ಪಾತ್ರ ಹಂಚುತ್ತಾರೆಂದು ಸುದ್ದಿ ತಿಳಿದುಕೊಂಡು ಆ ದಿನ ರಿಹರ್ಸಲ್ ಹಾಲಿಗೆ ಹೋದೆ. ಅವತ್ತು ಎಲ್ಲರಿಗೂ ಅವರವರ ಪಾತ್ರವನ್ನು ತಿಳಿಸುತ್ತ ಹೋದರು. ಆದರೆ 'ತುಘಲಕ್' ಯಾರು ಮಾಡುತ್ತಾರೆಂದು ಮಾತ್ರ ಹೇಳಲಿಲ್ಲ. ಪಾತ್ರ ಕೊಟ್ಟವರಿಗೂ ಸಹಾ ಯಾವುದೇ ಸಂದರ್ಭದಲ್ಲೂ ನಿಮ್ಮ ಪಾತ್ರಗಳು ಬದಲಾಗಬಹುದೆಂದು ಹೇಳಿದರು. ನನಗೆ ಏನನ್ನೂ ಹೇಳಲಿಲ್ಲ. ಆ ದಿನ ಹಾಗೇ ವಾಪಸ್ ಬಂದೆ. ನನ್ನ ಪಾತ್ರದ ಬಗ್ಗೆ ಕೇಳಿದವರಿಗೆಲ್ಲ " ಮುಖ್ಯ ಪಾತ್ರಗಳನ್ನು ಇನ್ನೂ ಹಂಚಿಲ್ಲ" ವೆಂದು ಹೇಳಿದೆ. ಇನ್ನೂ ಒಂದೆರಡು ದಿನ ಕಳೆದರೂ ನನಗೆ ಯಾವ ಪಾತ್ರವನ್ನೂ ಕೊಡಲಿಲ್ಲ. ತಡೆಯಲಾರದೆ ಜೊತೆಯವನೊಬ್ಬನನ್ನು ಕೇಳಿದೆ."ತುಘಲಕ್ ಪಾತ್ರ ಯಾರು ಮಾಡ್ತಾರೆ?' 'ಹುಚ್ಚ ಇನ್ನೂ ಗೊತ್ತಾಗಲಿಲ್ಲವೇ!? ತುಘಲಕ್ ಅವರೇ ಮಾಡುತ್ತಾರೆ' ಬಂತು ಉತ್ತರ. ನಾನು ಭೂಮಿಗಿಳಿದು ಹೋದೆ. ನನಗೆ ಕೊಡಲು ಯಾವ ಪಾತ್ರವೂ ಉಳಿದಿಲ್ಲ. ಈಗ ನಾನು ಇಕ್ಕಟ್ಟಿಗೆ ಸಿಕ್ಕಿದೆ. ಪಾತ್ರ ಸಿಗಲಿಲ್ಲವೆಂದು ರಿಹರ್ಸಲ್‌ಗೆ ಬರುವುದನ್ನು ನಿಲ್ಲಿಸಿದರೆ ಹಾಸ್ಟೆಲ್‌ನಲ್ಲಿ ನಾನೇ ಪ್ರಚಾರ ಮಾಡಿದ ನನ್ನ 'ನಟ ಸಾರ್ವಭೌಮ' ಇಮೇಜ್ ಹಾಳಾಗುತ್ತಿತ್ತು. ಆದರೆ ಇಲ್ಲಿ ಬಂದೇನು ಮಾಡುವುದು? ಹಾಗಾಗಿ ನಾಚಿಕೆ ಬಿಟ್ಟು ರಾಮದಾಸರಲ್ಲಿ ಹೇಳಿದೆ. 'ಸಾರ್ ನೀವು ನನಗೇನು ಹೇಳಲಿಲ್ಲ' ' ಹೇಳ್ತೇನೆ ಇರು' ಎಂದರು- ಆದರೆ ಏನನ್ನೂ ಹೇಳಲಿಲ್ಲ. ವಿಧಿಯಿಲ್ಲದೆ ರಿಹರ್ಸಲ್ ಹಾಲ್‌ಗೆ ಬರತೊಡಗಿದೆ. ಆದರೆ ದಿನಗಳೆದಂತೆ ನಿಧಾನಕ್ಕೆ ನನಗೆ ಭಯ ಆವರಿಸಿಕೊಂಡಿತು. ನಾನು ಪಾತ್ರ ಸಿಗದೇ ಬಚಾವಾದೆ ಅನ್ನಿಸತೊಡಗಿತು. ರಾಮದಾಸರು ಪಾತ್ರಮಾಡುತ್ತಿದ್ದ ರೀತಿ, ಶೈಲಿ, ಆ ವಿಚಾರಗಳು ಎಲ್ಲವೂ ನನಗೆ ಹೊಸತೇ. ಪ್ರತಿ ದಿನವೂ ರಿಹರ್ಸಲ್ ಹಾಲ್‌ಗೆ ಎಲ್ಲರಿಗಿಂತ ಮೊದಲು ಹಾಜರಾಗತೊಡಗಿದೆ. ಕೊನೆತನಕ ಅಲ್ಲೇ ಕೂರುತ್ತಿದ್ದೆ. ಇದರಿಂದ ಕೆಲವು ಸಾರಿ ನನಗೆ ರಾತ್ರಿ ಊಟ ತಪ್ಪುತ್ತಿತ್ತು. ರಾಮದಾಸ್ ತುಘಲಕ್ ಪಾತ್ರವನ್ನು ಚೆನ್ನಾಗಿ ಮಾಡುತ್ತಿದ್ದರು.ಗ್ರಾಂಡ್ ರಿಹರ್ಸಲ್ ದಿನ ನನಗೆ ತುಂಬ ದುಃಖವಾಯಿತು. ಹೈಸ್ಕೂಲಿನಲ್ಲಿ 'ಟೇಮಿಂಗ್ ಆಫ ದಿ ಶ್ರೂ' ವಿನ 'ಗಯ್ಯಾಳಿ', 'ಶಂಖವಾದ್ಯ'ದ 'ಶಂಕರ ರಾಯ' ಇತ್ಯಾದಿ ಪಾತ್ರಗಳನ್ನು ಮಾಡಿ ನಟಭಯಂಕರನಾಗಿದ್ದ ನನಗೆ ಒಂದು ಸಣ್ಣ ಪಾತ್ರವೂ ಇರಲಿಲ್ಲ! ಗೆಳೆಯರ ಎದುರು ನಗೆಪಾಟಲಾಗಿದ್ದೆ. ನನ್ನ 'ನಟಸಾರ್ವಭೌಮ' ಇಮೇಜು ಚಿಂದಿಯಾಗಿ ಹೋಗಿತ್ತು!

ರಿಹರ್ಸಲ್ ಮುಗಿಯಿತು. ನಾಟಕ ಚೆನ್ನಾಗಿ ಬರುತ್ತಿತ್ತು. ರಾಮದಾಸ್‌ರ ಅಭಿನಯ ಅದ್ಭುತ ಎನ್ನುವಂತೆ ಇತ್ತು. ನಾನು ಕಣ್ಣಲ್ಲಿ ನೀರು ತುಂಬಿಕೊಂಡು ಒಂದು ಮೂಲೆಯಲ್ಲಿ ಕೂತಿದ್ದೆ. ರಾಮದಾಸ್ ನನ್ನನ್ನು ಕರೆದರು. ಅವರಿಗೆ ನನ್ನ ಹೆಸರು ಸಹ ಸರಿಯಾಗಿ ಗೊತ್ತಿರಲಿಲ್ಲ! ಆಗ ಸರಿಯಾಗಿ ಕೇಳಿ ತಿಳಿದುಕೊಂಡರು. 'ನಾನು ನಿನಗೆ ಸ್ವಲ್ಪ ಅನ್ಯಾಯ ಮಾಡಿದೆ ಅನ್ನಿಸ್ತಾ ಇದೆ. ಇಲ್ಲಿ ಪಾತ್ರ ಮಾಡಿರುವ ಅನೇಕರಿಗೆ ನಿನ್ನಷ್ಟು ನಿಷ್ಠೆ ಇಲ್ಲ. ಈ ಆಸಕ್ತಿ ಬಿಡಬೇಡ ನೀನು ತುಂಬ ಕಲಿಯುತ್ತೀಯಾ' ಎಂದರು. ಮನಸ್ಸು ಹಗುರವಾಯಿತು.ಮುಂದೆ ಉಡುಪಿಯಲ್ಲಿ ಇರುವವರೆಗೂ ನಾನು ಯಾವುದೇ ನಾಟಕದಲ್ಲಿ ಪಾತ್ರ ವಹಿಸಲಿಲ್ಲ. ಬಿ.ಆರ್.ನಾಗೇಶ್, ಉದ್ಯಾವರ ಮಾಧವಾಚಾರ್ಯ ಇವರೆಲ್ಲ ನಾಟಕಗಳನ್ನು ಮಾಡಿಸುತ್ತಿದ್ದರು. ಬಾದಲ್ ಸರ್ಕಾರರ 'ಏವಂ ಇಂದ್ರಜಿತ್' ನಾಟಕವನ್ನು ಬಿ.ವಿ.ಕಾರಂತರು ಉಡುಪಿಗೆ ತಂದಿದ್ದರು. ರಾಮದಾಸ್ ನಮಗೆಲ್ಲ ತಿಳಿಸಿ ಆ ನಾಟಕವನ್ನು ನೋಡಲು ಹೇಳಿದ್ದರು. ಉಡುಪಿಯಲ್ಲಿದ್ದಾಗ ಅನೇಕ ಹೊಸ ನಾಟಕಗಳನ್ನು ನೋಡಿದೆ. ಸಾಧ್ಯವಾದಾಗಲೆಲ್ಲ ನಮ್ಮ ಕಾಲೇಜಿನಲ್ಲಿ ನಡೆಯುತ್ತಿದ್ದ ರಿಹರ್ಸಲ್‌ಗಳಿಗೂ ಹೋಗಿ ಕೂತಿರುತ್ತಿದ್ದೆ. ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲೂ ಹೊಸ ನಾಟಕಗಳ ಪ್ರಯೋಗಗಳಾಗುತ್ತಿದ್ದವು. ಬಿ.ವಿ.ಕಾರಂತರ ಪ್ರಯೋಗಗಳ ಬಗ್ಗೆ ಚರ್ಚೆಗಳಾಗುತ್ತಿದ್ದವು. ಹೆಗ್ಗೋಡಿನ ಬಗ್ಗೆ ಅಲ್ಲಲ್ಲಿ ಮಾತು ಕೇಳಿಬರುತ್ತಿತ್ತು. ನಮ್ಮಂಥವರಿಗೆ ಹೊಸಬಗೆಯ ನಾಟಕಗಳ ಲೋಕವೊಂದು ತೆರೆದುಕೊಳ್ಳುತ್ತಿತ್ತು.

1 comments:

ಸಿಂಧು sindhu April 24, 2008 at 3:35 AM  

ಪ್ರಿಯ ಸುಧನ್ವ,

ಎಂದಿನಂತೆ ಶೋ ಮೊದಲೆ ನೋಡಿದೆ ಸ್ವಲ್ಪ ಲೇಟಾಗಿದ್ದರಿಂದ ಕೊನೆ ಸಾಲು ಸಿಕ್ಕಿತು. ಕೂಡಲೆ ಬರೆಯಲಾಗಲಿಲ್ಲ.
ರಕ್ಷಿದಿ ಹೇಗೆ ನಾಟಕ ಮಾಡುತ್ತಾರೋ ಗೊತ್ತಿಲ್ಲ - ಬದುಕಿನ ನಾಟಕದ ದೃಶ್ಯಗಳನ್ನು ಕಪ್ಪುಬಿಳುಪು ಸ್ಕೆಚ್ಚಿನಲ್ಲಿ ಬರೆದಿರುವುದು ಕಣ್ಣಿಗೆ ಕಟ್ಟುವಂತಿದೆ. ಎಲ್ಲಕ್ಕಿಂತ ಇಷ್ಟವಾಗುವುದೆಂದರೆ ರೇಖೆಗಳನ್ನು ಅವರು ಬರೆದು ಬಣ್ಣ ನಮ್ಮ ಕಲ್ಪನೆಯಲ್ಲೆ ತುಂಬಲು ಬಿಟ್ಟ ಹಾಗೆ ಓದುವವರಿಗೆ/ನೋಡುವವರಿಗೆ ಅವಕಾಶ ಕೊಟ್ಟಿರುವುದು.
ಇದು ಹೊಗಳಿಕೆಯಲ್ಲ, ಮೆಚ್ಚುಗೆ. ಅವರಿಗೆ ದಯವಿಟ್ಟು ತಿಳಿಸಿ.

ಇಷ್ಟೊಳ್ಳೆಯ ಶೋ ನಿಮ್ಮ ರಂಗಮಂದಿರದಲ್ಲಿ ಪ್ರದರ್ಶಿಸುತ್ತಿರುವುದರಿಂದ ನಿಮಗೆ ಝಿಲಿಯನ್ ಥ್ಯಾಂಕ್ಸ್.. :)

ಪ್ರೀತಿಯಿಂದ
ಸಿಂಧು

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP