April 26, 2008

ಗೋ.....ವಾ!

ಲ್ಲಿ ಇಲ್ಲದ್ದು ಇರಲಿಲ್ಲ. ಕೊಂಚ ಅತ್ತಿತ್ತ ಸರಿದರೂ ಆ ದಪ್ಪನೆಯ ಹಾಸಿಗೆ ಏರಿಳಿಯುತ್ತಿತ್ತು. ಸಮುದ್ರದಲ್ಲೇ ಇದ್ದೇನೋ ಅಂತ ಮಂಚದ ಕೆಳಗೆ ಕೈಯಾಡಿಸಿ ನೋಡಿಕೊಂಡೆ ! ಎದ್ದು ಟಿವಿ ಹಾಕಿದೆ, ಸರಿ ಹೋಗಲಿಲ್ಲ. ಬಾತ್‌ಟಬ್‌ನಲ್ಲಿ ಬಿದ್ದುಕೊಂಡು ಸ್ನಾನ ಮಾಡಿದ್ದು ಸರಿ ಅನಿಸಿರಲಿಲ್ಲ. ನಿಧಾನವಾಗಿ ದೊಡ್ಡ ಗಾಜಿನ ಬಾಗಿಲು ತೆರೆದು, ತೆಳ್ಳಗೆ ಬೆಳಕು ಹರಡಿದ್ದ ಬಾಲ್ಕನಿಗೆ ಹೋಗಿ ಸುಖಾಸೀನನಾದೆ. ಒಳಗಿನ ಎ.ಸಿ. ತಂಪಿಗಿಂತ ಆ ಹವೆಯೇ ಹಿತ ಅನ್ನಿಸಿತು. ಕಿವಿಗೆ ಐಪಾಡ್ ಸಿಕ್ಕಿಸಿಕೊಂಡು ಪದ್ಯಾಣದವರ ಯಕ್ಷಗಾನ ಪದ್ಯ ಕೇಳುತ್ತ ಅದೆಷ್ಟು ಹೊತ್ತು ಕುಳಿತೆನೋ, ರೂಂ ಬಾಯ್ ಹೊರಗಿಂದ ಒಂದೇ ಸಮನೆ ಬೆಲ್ ಒತ್ತುತ್ತಿದ್ದ. ಹಿಂದಿನ ಸಂಜೆ ನಾಲ್ಕರ ಇಳಿಬಿಸಿಲು. ನಮ್ಮ ಮನೆಯ ಅಂಗಳದಲ್ಲೇ ವಿಮಾನ ಓಡೋಡಿ ನಿಂತಂತೆ ಅನ್ನಿಸಿತು. ಹೌದು ಅದೇ ಕಲ್ಲು, ಹುಲ್ಲು, ಗಿಡ, ವಾತಾವರಣವೂ ಅದೇ. ಷಟ್ಲ್ ಹತ್ತಿ ಕುಳಿತರೆ ನುಣ್ಣನೆಯ ರಸ್ತೆ. ಗೋವಾದ ಏರ್‌ಪೋರ್ಟ್‌ನಿಂದ ಸಾಲ್ಸೆಟ್‌ನ `ಕೋಲ್ವಾಬೀಚ್'ನಲ್ಲಿರುವ `ರಾಮಡಾ ರಿನಾಯ್‌ಸೆನ್ಸ್ ಬೀಚ್ ರೆಸಾರ್ಟ್'ಗೆ ಅರ್ಧ ಗಂಟೆಯ ಹಾದಿ. ಎತ್ತರೆತ್ತರದ ಕಮಾನು ಕಟ್ಟಡಗಳೊಂದಿಗೆ ಅದು ೨೩ ಎಕರೆಗಳಲ್ಲಿ ಹರಡಿಕೊಂಡಿದೆ . ಅಲ್ಲಿನ ಈಜುಕೊಳದ ಮಧ್ಯೆಯೂ ಪುಟ್ಟ ಹೆಂಡದಂಗಡಿ ! (ಬಹುಶಃ ನೀರು ಬೆರೆಸುವುದೇ ಬೇಡ ಅಂತಿರಬೇಕು . ಹಿನ್ನೆಲೆಯಲ್ಲಿ `ತಾರಕ್ಕ ಬಾಟಲಿಯಾ' ಹಾಡು !) ಅಲ್ಲಿಂದ ಐನೂರು ಮೀಟರು ಸಾಗಿದರೆ ಸಾಗರ . ಅಡಿಗರು ಅಂದಂತೆಯೇ -`ಮಬ್ಬು, ಕಾಮಾಲೆ ಕತ್ತಲು, ಬಂದು ಮೈಮೇಲೆ ಅಬ್ಬರಿಸಿ ಎದ್ದೆದ್ದು ಬಿದ್ದು ಬೊಬ್ಬಿರಿದಲೆವ ಕಾರ್ಮೋಡ/ ಕುಡಿದುಬಿಟ್ಟಿದೆ ಕಣೋ, ಕಡಲ ಪಡಖಾನೆಯಲಿ ನೊರೆಗರೆವ ವ್ಹಿಸ್ಕಿ ಸೋಡಾ!

]'ಸಮುದ್ರ ಮಧ್ಯೆ ಬೋಟು ನಿಲ್ಲಿಸಿ, ದೂರದಲ್ಲಿ ಡಾಲ್ಫಿನ್‌ಗಳನ್ನು ತೋರಿಸಿ, ಯಾರು ಹಾರುತ್ತೀರಿ ಸಾಗರಕ್ಕೆ ಅಂತ ಪ್ರಶ್ನೆ ಕೇಳಿದರೆ ಮೊದಲು ಹೂಂ ಅನ್ನುವವರಿಗೆ ಜಂಘಾಬಲ ಗಟ್ಟಿಯೇ ಬೇಕು. ಆ ಗುಜರಾತಿನ ಹುಡುಗಿ ಶಿವಾನಿಗೆ ಎಂಥಾ ಹುಚ್ಚೋ ಏನೋ, ಲೈಫ್ ಜಾಕೆಟ್ ಕಟ್ಟಿಕೊಂಡು ಮೊದಲು ಧುಮುಕಿದ್ದು ಅವಳೇ. ನಂತರ ನಾವೆಲ್ಲ ಮೆಲ್ಲ ಬೋಟಿನ ಸೈಡಿಗೆ ಹೋಗಿ, ಕಾಲ ಬೆರಳಿಗೆ ಮೊದಲು ನೀರು ಸೋಕಿಸಿಕೊಂಡು ಮೇಲಕ್ಕೆತ್ತಿ, ಪುನಃ ಪಾದ ಮುಳುಗುವಷ್ಟು ಸೊಂಟ ಜಾರಿಸಿ, ಮತ್ತೆ ಮೇಲೆ ಬಂದು, `ತುಮ್ ಕೂದ್‌ನಾ ಚಾಹ್‌ತೇಹೋ?' ಅಂತ ಪಕ್ಕದವನಿಗೆ ಹೇಳಿ, ಲೈಫ್‌ಜಾಕೆಟ್‌ನ್ನು ಮತ್ತೆ ಬಿಚ್ಚಿ ಗಟ್ಟಿಯಾಗಿ ಕಟ್ಟಿಸಿಕೊಂಡು, ಬೆನ್ನು ಬೋಟಿಗೆ ತರಚಿಕೊಳ್ಳುವಂತೆ ...ದುಡುಂ.

ಸ್ಕಾರ್‍ಲೆಟ್‌ಳ ನಿಗೂಢ ಸಾವಿನ ಪ್ರಕರಣ ಪ್ರಪಂಚದಾದ್ಯಂತ ಅಲೆ ಎಬ್ಬಿಸಿದ ಮೇಲೂ ಗೋವಾಕ್ಕೆ ಬರುವ ವಿದೇಶಿ ಪ್ರವಾಸಿಗರ ಸಂಖೆಯಲ್ಲಿ ಕಡಿಮೆಯೇನೂ ಆಗಿಲ್ಲವಂತೆ. ಎಲ್ಲೆಲ್ಲಿ ಹೋದರೂ ಅವರೇ. ರಸ್ತೆಗಳಲ್ಲಿ ಬೈಕ್ ಓಡಿಸುತ್ತಾ, ಸೈಕಲ್ ತುಳಿಯುತ್ತಾ, ತೀರಗಳಲ್ಲಿ ಮೈಬಿಚ್ಚಿ ಸೂರ್‍ಯಸ್ನಾನ ಮಾಡುತ್ತಾ, ಎಲ್ಲೆಲ್ಲೂ ಅವರ ಹಿಂಡು.

ರಾತ್ರಿ ತೀರ ಸಾಗರದಲ್ಲಿ ಸಿಕ್ಕಾಪಟ್ಟೆ ಗೌಜಿ. ಡೀಜೆಯಂತೂ ಒಂದಾದಮೇಲೊಂದರಂತೆ ಹಾಡುಗಳನ್ನು ಪ್ಲೇ ಮಾಡುತ್ತ ಅಬ್ಬರ ಹೆಚ್ಚಿಸುತ್ತಿದ್ದ. ಸಾಗರಕ್ಕೂ ಉಬ್ಬಸ. ಉದ್ದ ಜಡೆ ಕೂದಲು ಬಿಟ್ಟುಕೊಂಡಿರುವ, ನಾಲ್ವರು ಕುಳ್ಳಗಿನ ಕರಿಯರ ಡ್ಯಾನ್ಸ್-ಕಸರತ್ತಿನಿಂದ ಕಾರ್‍ಯಕ್ರಮ ಆರಂಭ. ದೈಹಿಕ ಕಸರತ್ತು, ಬೆಂಕಿಯೊಂದಿಗೆ ಆಟ, ಸಮತೋಲನದ ವಿದ್ಯೆಗಳು ಹೀಗೆ ಏನೇನೋ. ಅದರ ಮಧ್ಯೆ ಅತ್ತಿತ್ತ ಕೆಲವರ ತೀರ್ಥಾಟನೆ . ಹಾ, ಹೇಳಲು ಮರೆತೆ, ಆಗ ಪತ್ರಿಕಾಗೋಷ್ಠಿ ಅಂತೆ ! ಕತ್ತಲು ಗಾಢವಾಗಿ ಹಬ್ಬಿಕೊಳ್ಳುತ್ತಿತ್ತು. ಎಲ್ಲರ ನರ್ತನದ ಹೆಜ್ಜೆಗಳಿಗೆ ಏಕತಾನತೆ ಬಂದಿತ್ತು. ಛೇ ಗೋವಾದಲ್ಲೂ ಬಹಳ ಬೇಗ ಬೆಳಗಾಯಿತು.

Read more...

April 22, 2008

ಪ್ರಭುವೆ ನಿನ್ನ ನೆನಪಿನಲ್ಲಿ ...

ಕ್ಷರಗಳ ಶಕ್ತಿ ಭಯಂಕರ ಮಾರಾಯ್ರೆ. ಅವುಗಳನ್ನು ಸಲಹುವುದು ಅಷ್ಟು ಸುಲಭ ಅಲ್ಲ. ಅಕ್ಷರಗಳು ಕತೆಯನ್ನೂ ಕತೆ ಅಕ್ಷರಗಳನ್ನೂ ಆವರಿಸಿಕೊಂಡು ಬಂದರಂತೂ ಆ ಚೆಂದವೇ ಬೇರೆ. ಹುಟ್ಟಿನಿಂದ ಸಾವಿನವರೆಗಿನ ಕತೆಯನ್ನು ,ಕೇವಲ ಒಂದು ಪುಟದಲ್ಲಿ ಬರೆದಂತೆ ಅನ್ನಿಸುವ , ಆ ಸರಳ ಸಶಕ್ತ ಶೈಲಿಗೆ ಮರುಳಾಗಿರುವೆ . ತಕ್ಷಣ ವಿಮರ್ಶೆಗೆ ಹೊರಡೋದಕ್ಕಿಂತ ಎದೆಯಲ್ಲಿಟ್ಟುಕೊಂಡು ಅನುಭವಿಸುತ್ತಿರುವಾಗ ಸಿಗುವ ಸುಖವ ಹೇಳುವುದೆಂತು? ಅಷ್ಟಕ್ಕೂ ಅದು ಎಂಥಾ ಕತೆ?

ಒಮ್ಮೆ ಅವಳಿಗಾಗಿ, ಮತ್ತೊಮ್ಮೆ ನಿಮಗಾಗಿ - ದಯವಿಟ್ಟು ಓದಿ. ಏನನ್ನಿಸಿತು ಹೇಳಿ.

Read more...

ಬೆಳ್ಳೇಕೆರೆಯ ಹಳ್ಳಿ ಥೇಟರ್-ಅಂಕ ೩

ಸಕಲೇಶಪುರದಿಂದ ಪ್ರಸಾದ್ ರಕ್ಷಿದಿ ಬರೆಯುತ್ತಾರೆ.

ನಾನು ಹೈಸ್ಕೂಲ್ ತನಕ ಓದಿದ ಹಾನುಬಾಳಿನ ಸರ್ಕಾರಿ ಶಾಲೆಯಲ್ಲಿ, ಸ್ಕೂಲ್‌ಡೇಗಳಲ್ಲಿ ಮತ್ತು ಗಣಪತಿ ಹಬ್ಬದಲ್ಲಿ ಶಾಲೆಯಲ್ಲಿ ಗಣಪತಿ ಕೂರಿಸಿದಾಗ, ಅಥವಾ ಗಣರಾಜ್ಯ ದಿನವೋ-ಬೇರೇನಾದರೂ ವಿಶೇಷವೋ- ಹೀಗೆ ಅನೇಕ ಸಂದರ್ಭಗಳಲ್ಲಿ 'ಮಕ್ಕಳಿಂದ ಮನೋರಂಜನೆ' ಇರುತ್ತಿತ್ತು. ಆಗೆಲ್ಲ ನಾನು ಸಾಮಾನ್ಯವಾಗಿ ನಾಟಕಗಳಲ್ಲಿ ಭಾಗವಹಿಸುತ್ತಿದ್ದೆ. ಹೈಸ್ಕೂಲಿನಲ್ಲಿ ವಿಶ್ವನಾಥರಾವ್ ಅಂತ ಹೆಡ್ಮಾಸ್ತರಿದ್ದರು. ಬಿಡುವಿನಲ್ಲಿ ಶೇಕ್ಸ್‌ಪಿಯರ್-ಇಬ್ಸೆನ್, ಕಾಳಿದಾಸ, ಕೈಲಾಸಂ ಅವರ ನಾಟಕಗಳನ್ನು, ಮುದ್ದಣನ ರಾಮಾಶ್ವಮೇಧ, ಜಿ.ಪಿ. ರಾಜರತ್ನಂ ಕವನಗಳು-ಮಂಕುತಿಮ್ಮನ ಕಗ್ಗ ಇತ್ಯಾದಿಗಳನ್ನು ಓದಿ ಹೇಳುತ್ತಿದ್ದರು. ಹೈಸ್ಕೂಲಿನಲ್ಲಿ ಪ್ರತಿ ಸ್ಕೂಲ್ ಡೇಯಲ್ಲೂ ನಾಟಕವಂತೂ ಇದ್ದೇ ಇರುತ್ತಿತ್ತು. ನಾನು, ಉಮೇಶ, ರಾಜಶೇಖರ, ಕುಮಾರ ನರಸಿಂಹ, ರಜಾಕ್, ರಾಮಚಂದ್ರ ಹೀಗೇ ನಾವೊಂದಷ್ಟು ಹುಡುಗರ ಪಟಾಲಂ ಇಲ್ಲದೇ ಸ್ಕೂಲ್ ಡೇ ಇರುತ್ತಿರಲಿಲ್ಲ. ಶೇಕ್ಸ್‌ಪಿಯರ್‌ನ ' ಟೇಮಿಂಗ್ ಆಫ್ ದಿಶ್ರೂ' ಕನ್ನಡ ರೂಪಾಂತರ 'ಗಯ್ಯಾಳಿ ಗಂಡ 'ದಲ್ಲಿ ನಾನು ಗಯ್ಯಾಳಿ ಪಾತ್ರ ಮಾಡಿದ್ದೆ. ನನ್ನ ಮತ್ತು ಉಮೇಶನ ನೀಗ್ರೋ ಡ್ಯಾನ್ಸ್ ಪ್ರತಿ ವರ್ಷ ಇರಲೇಬೇಕಿತ್ತು. ಹೀಗಾಗಿ ನಾನೊಬ್ಬ ಭಯಂಕರ ಕಲಾವಿದನೆಂದು ನಂಬಿಕೊಂಡು ಬಿಟ್ಟಿದ್ದೆ!ಹೈಸ್ಕೂಲ್ ಮುಗಿಸಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜು ಸೇರಿದೆ. ಹಾಸ್ಟೇಲಿನಲ್ಲಿ ವಾಸ. ಪಿ.ಯು ಕ್ಲಾಸಿನಲ್ಲಿ ರಾಮದಾಸ್ ಲೆಕ್ಚರರ್ ಆಗಿದ್ದರು. ಗೋಪಾಲಕ್ರಷ್ಣ ಅಡಿಗರು ಪ್ರಿನ್ಸಿಪಾಲ್.

ಆಗಷ್ಟೇ ಗಿರೀಶ ಕಾರ್ನಾಡರ ತುಘಲಕ್ ಪ್ರಚಾರಕ್ಕೆ ಬಂದಿತ್ತು. ಕಾಲೇಜ್ ಡೇ ಗೆ ರಾಮದಾಸರು 'ತುಘಲಕ್ ' ತೆಗೆದುಕೊಳ್ಳಲಿದ್ದಾರೆಂದು ಸುದ್ದಿ ಹಬ್ಬಿತ್ತು. ನೋಟೀಸ್ ಬೋರ್ಡಿನಲ್ಲಿ-ನಾಟಕಕ್ಕೆ ಸೇರಬಯಸುವವರೆಲ್ಲ ಸಂಜೆ ಕಾಲೇಜಿನ ಗ್ಯಾಲರಿ ಹಾಲಿನಲ್ಲಿ ಸೇರಬೇಕೆಂದು- ನೋಟೀಸು ಹಚ್ಚಿದ್ದರು. ನಾನಾಗಲೇ ಹಾಸ್ಟೇಲಿನಲ್ಲಿ -ನಾನೊಬ್ಬ ನಟ ಭಯಂಕರ ಎಂಬಂತೆ ಚಿತ್ರಿಸಿಕೊಂಡಿದ್ದೆ. ಆದ್ದರಿಂದ ನನ್ನ ರೂಂಮೇಟ್‌ಗಳು ' ನಾಟಕಕ್ಕೆ ನೀನು ಸೇರುವುದಿಲ್ಲವೇ ?' ಎಂದು ಪ್ರಶ್ನಿಸಿದರು. ವಾಸ್ತವವಾಗಿ ನಾನು ನೋಟೀಸನ್ನಾಗಲೀ ಅದರಲ್ಲಿ ಹಾಕಿದ ದಿನಾಂಕವನ್ನಾಗಲಿ ನೋಡಿರಲೇ ಇಲ್ಲ. ಕೇಳಿದವರಿಗೆಲ್ಲಾ 'ನಾಳೆ ನಾಳಿದ್ದರಲ್ಲಿ ಸೇರುತ್ತೇನೆ ' ಎಂದು ಉಡಾಫೆ ಮಾತಾಡಿದೆ. ಕೆಲವರು ಮುಖ ಮುಖ ನೋಡಿಕೊಂಡು ಸುಮ್ಮನಾದರು.ಎರಡು ದಿನ ತಡವಾಗಿ ಗ್ಯಾಲರಿ ಹಾಲ್‌ಗೆ ಹೋದೆ. ಅಲ್ಲಿ ಮೂವ್ವತ್ತು, ನಲವತ್ತು ಜನ ಸೇರಿದ್ದರು. ರಾಮದಾಸರು ಅವರೊಂದಿಗೆ ಗಂಭೀರವಾಗಿ ಚರ್ಚೆ ನಡೆಸಿದ್ದರು. ನಾನು ಒಳಗೆ ಬರಲೇ ಸಾರ್ ಎಂದು ಕೇಳಿ ಉತ್ತರಕ್ಕೂ ಕಾಯದೆ ಒಳಗಡೆ ಹೋಗಿ ಕುಳಿತೆ. ನನ್ನನ್ನು ಯಾರೂ ಗಮನಿಸಿದಂತೆ ಕಾಣಲಿಲ್ಲ. ಸ್ವಲ್ಪ ಹೊತ್ತಿನ ನಂತರ ರಾಮದಾಸರು ನನ್ನನ್ನು ನೋಡಿ ಕೇಳಿದರು.' ಯಾಕೆ ಬಂದಿದ್ದೀಯ ?' ' ನಾಟಕಕ್ಕೆ ಸೇರೋಣಾಂತ ಸಾರ್' ' ಸರಿ ಸರಿ ತಮಗೇನಾದರೂ ಅನುಭವ ಉಂಟೋ ?' ರಾಮದಾಸರ ಮಾತಿನಲ್ಲಿದ್ದ ವ್ಯಂಗ್ಯ ನನ್ನ ತಲೆಗೆ ನುಗ್ಗಲಿಲ್ಲ. ಪ್ರೈಮರಿ ಶಾಲೆಯಿಂದ ಹೈಸ್ಕೂಲ್‌ನವರೆಗೆ ನಟಿಸಿದ-ಕುಣಿದ ಎಲ್ಲವನ್ನೂ ಪಟ್ಟಿ ಮಾಡಿ ಹೇಳಿ ರಾಜ್‌ಕುಮಾರ್ ಸ್ಟೈಲ್‌ನಲ್ಲಿ ನಿಂತೆ. ' ತಮಗೆ ತುಂಬ ಅನುಭವವಿದೆ. ಕುಳಿತುಕೊಳ್ಳಿ ' ಎಂದರು. ಉಳಿದವರು ಮುಸಿ ಮುಸಿ ನಕ್ಕದ್ದು ಕಂಡರೂ ಇವರಿಗೇನು ಗೊತ್ತು ನನ್ನ ಯೋಗ್ಯತೆ ಎಂದುಕೊಂಡು ಗತ್ತಿನಲ್ಲಿ ಇದ್ದೆ.

ಒಂದೆರಡು ದಿನ ಕಳೆದಂತೆ -ನಾಟಕದ ರೀಡಿಂಗ್-ಇತ್ಯಾದಿ ಪ್ರಾರಂಭಿಸಿದರು. ಪಾತ್ರ ಗಳನ್ನು ಹಂಚದೆ ಇವರೇನು ಸುಮ್ಮನೆ ಕಾಲಹರಣ ಮಾಡುತ್ತಿದ್ದಾರೆ ಎಂದುಕೊಂಡೆ. ನಿಜವಾದ ಸಂಗತಿಯೆಂದರೆ ನಾನು "ತುಘಲಕ್' ನಾಟಕದ ಹೆಸರನ್ನು ಮಾತ್ರ ಕೇಳಿದ್ದೆನೇ ಹೊರತು ಅದನ್ನು ಓದುವುದಿರಲಿ ಅದರ ಬಗ್ಗೆ ಏನೊಂದೂ ಗೊತ್ತಿರಲಿಲ್ಲ. ಮತ್ತೂ ಒಂದೆರಡು ದಿನ ಅಲ್ಲಿಗೆ ಹೋಗದೆ ಚಕ್ಕರ್ ಹೊಡೆದೆ. ಯಾವತ್ತು ಪಾತ್ರ ಹಂಚುತ್ತಾರೆಂದು ಸುದ್ದಿ ತಿಳಿದುಕೊಂಡು ಆ ದಿನ ರಿಹರ್ಸಲ್ ಹಾಲಿಗೆ ಹೋದೆ. ಅವತ್ತು ಎಲ್ಲರಿಗೂ ಅವರವರ ಪಾತ್ರವನ್ನು ತಿಳಿಸುತ್ತ ಹೋದರು. ಆದರೆ 'ತುಘಲಕ್' ಯಾರು ಮಾಡುತ್ತಾರೆಂದು ಮಾತ್ರ ಹೇಳಲಿಲ್ಲ. ಪಾತ್ರ ಕೊಟ್ಟವರಿಗೂ ಸಹಾ ಯಾವುದೇ ಸಂದರ್ಭದಲ್ಲೂ ನಿಮ್ಮ ಪಾತ್ರಗಳು ಬದಲಾಗಬಹುದೆಂದು ಹೇಳಿದರು. ನನಗೆ ಏನನ್ನೂ ಹೇಳಲಿಲ್ಲ. ಆ ದಿನ ಹಾಗೇ ವಾಪಸ್ ಬಂದೆ. ನನ್ನ ಪಾತ್ರದ ಬಗ್ಗೆ ಕೇಳಿದವರಿಗೆಲ್ಲ " ಮುಖ್ಯ ಪಾತ್ರಗಳನ್ನು ಇನ್ನೂ ಹಂಚಿಲ್ಲ" ವೆಂದು ಹೇಳಿದೆ. ಇನ್ನೂ ಒಂದೆರಡು ದಿನ ಕಳೆದರೂ ನನಗೆ ಯಾವ ಪಾತ್ರವನ್ನೂ ಕೊಡಲಿಲ್ಲ. ತಡೆಯಲಾರದೆ ಜೊತೆಯವನೊಬ್ಬನನ್ನು ಕೇಳಿದೆ."ತುಘಲಕ್ ಪಾತ್ರ ಯಾರು ಮಾಡ್ತಾರೆ?' 'ಹುಚ್ಚ ಇನ್ನೂ ಗೊತ್ತಾಗಲಿಲ್ಲವೇ!? ತುಘಲಕ್ ಅವರೇ ಮಾಡುತ್ತಾರೆ' ಬಂತು ಉತ್ತರ. ನಾನು ಭೂಮಿಗಿಳಿದು ಹೋದೆ. ನನಗೆ ಕೊಡಲು ಯಾವ ಪಾತ್ರವೂ ಉಳಿದಿಲ್ಲ. ಈಗ ನಾನು ಇಕ್ಕಟ್ಟಿಗೆ ಸಿಕ್ಕಿದೆ. ಪಾತ್ರ ಸಿಗಲಿಲ್ಲವೆಂದು ರಿಹರ್ಸಲ್‌ಗೆ ಬರುವುದನ್ನು ನಿಲ್ಲಿಸಿದರೆ ಹಾಸ್ಟೆಲ್‌ನಲ್ಲಿ ನಾನೇ ಪ್ರಚಾರ ಮಾಡಿದ ನನ್ನ 'ನಟ ಸಾರ್ವಭೌಮ' ಇಮೇಜ್ ಹಾಳಾಗುತ್ತಿತ್ತು. ಆದರೆ ಇಲ್ಲಿ ಬಂದೇನು ಮಾಡುವುದು? ಹಾಗಾಗಿ ನಾಚಿಕೆ ಬಿಟ್ಟು ರಾಮದಾಸರಲ್ಲಿ ಹೇಳಿದೆ. 'ಸಾರ್ ನೀವು ನನಗೇನು ಹೇಳಲಿಲ್ಲ' ' ಹೇಳ್ತೇನೆ ಇರು' ಎಂದರು- ಆದರೆ ಏನನ್ನೂ ಹೇಳಲಿಲ್ಲ. ವಿಧಿಯಿಲ್ಲದೆ ರಿಹರ್ಸಲ್ ಹಾಲ್‌ಗೆ ಬರತೊಡಗಿದೆ. ಆದರೆ ದಿನಗಳೆದಂತೆ ನಿಧಾನಕ್ಕೆ ನನಗೆ ಭಯ ಆವರಿಸಿಕೊಂಡಿತು. ನಾನು ಪಾತ್ರ ಸಿಗದೇ ಬಚಾವಾದೆ ಅನ್ನಿಸತೊಡಗಿತು. ರಾಮದಾಸರು ಪಾತ್ರಮಾಡುತ್ತಿದ್ದ ರೀತಿ, ಶೈಲಿ, ಆ ವಿಚಾರಗಳು ಎಲ್ಲವೂ ನನಗೆ ಹೊಸತೇ. ಪ್ರತಿ ದಿನವೂ ರಿಹರ್ಸಲ್ ಹಾಲ್‌ಗೆ ಎಲ್ಲರಿಗಿಂತ ಮೊದಲು ಹಾಜರಾಗತೊಡಗಿದೆ. ಕೊನೆತನಕ ಅಲ್ಲೇ ಕೂರುತ್ತಿದ್ದೆ. ಇದರಿಂದ ಕೆಲವು ಸಾರಿ ನನಗೆ ರಾತ್ರಿ ಊಟ ತಪ್ಪುತ್ತಿತ್ತು. ರಾಮದಾಸ್ ತುಘಲಕ್ ಪಾತ್ರವನ್ನು ಚೆನ್ನಾಗಿ ಮಾಡುತ್ತಿದ್ದರು.ಗ್ರಾಂಡ್ ರಿಹರ್ಸಲ್ ದಿನ ನನಗೆ ತುಂಬ ದುಃಖವಾಯಿತು. ಹೈಸ್ಕೂಲಿನಲ್ಲಿ 'ಟೇಮಿಂಗ್ ಆಫ ದಿ ಶ್ರೂ' ವಿನ 'ಗಯ್ಯಾಳಿ', 'ಶಂಖವಾದ್ಯ'ದ 'ಶಂಕರ ರಾಯ' ಇತ್ಯಾದಿ ಪಾತ್ರಗಳನ್ನು ಮಾಡಿ ನಟಭಯಂಕರನಾಗಿದ್ದ ನನಗೆ ಒಂದು ಸಣ್ಣ ಪಾತ್ರವೂ ಇರಲಿಲ್ಲ! ಗೆಳೆಯರ ಎದುರು ನಗೆಪಾಟಲಾಗಿದ್ದೆ. ನನ್ನ 'ನಟಸಾರ್ವಭೌಮ' ಇಮೇಜು ಚಿಂದಿಯಾಗಿ ಹೋಗಿತ್ತು!

ರಿಹರ್ಸಲ್ ಮುಗಿಯಿತು. ನಾಟಕ ಚೆನ್ನಾಗಿ ಬರುತ್ತಿತ್ತು. ರಾಮದಾಸ್‌ರ ಅಭಿನಯ ಅದ್ಭುತ ಎನ್ನುವಂತೆ ಇತ್ತು. ನಾನು ಕಣ್ಣಲ್ಲಿ ನೀರು ತುಂಬಿಕೊಂಡು ಒಂದು ಮೂಲೆಯಲ್ಲಿ ಕೂತಿದ್ದೆ. ರಾಮದಾಸ್ ನನ್ನನ್ನು ಕರೆದರು. ಅವರಿಗೆ ನನ್ನ ಹೆಸರು ಸಹ ಸರಿಯಾಗಿ ಗೊತ್ತಿರಲಿಲ್ಲ! ಆಗ ಸರಿಯಾಗಿ ಕೇಳಿ ತಿಳಿದುಕೊಂಡರು. 'ನಾನು ನಿನಗೆ ಸ್ವಲ್ಪ ಅನ್ಯಾಯ ಮಾಡಿದೆ ಅನ್ನಿಸ್ತಾ ಇದೆ. ಇಲ್ಲಿ ಪಾತ್ರ ಮಾಡಿರುವ ಅನೇಕರಿಗೆ ನಿನ್ನಷ್ಟು ನಿಷ್ಠೆ ಇಲ್ಲ. ಈ ಆಸಕ್ತಿ ಬಿಡಬೇಡ ನೀನು ತುಂಬ ಕಲಿಯುತ್ತೀಯಾ' ಎಂದರು. ಮನಸ್ಸು ಹಗುರವಾಯಿತು.ಮುಂದೆ ಉಡುಪಿಯಲ್ಲಿ ಇರುವವರೆಗೂ ನಾನು ಯಾವುದೇ ನಾಟಕದಲ್ಲಿ ಪಾತ್ರ ವಹಿಸಲಿಲ್ಲ. ಬಿ.ಆರ್.ನಾಗೇಶ್, ಉದ್ಯಾವರ ಮಾಧವಾಚಾರ್ಯ ಇವರೆಲ್ಲ ನಾಟಕಗಳನ್ನು ಮಾಡಿಸುತ್ತಿದ್ದರು. ಬಾದಲ್ ಸರ್ಕಾರರ 'ಏವಂ ಇಂದ್ರಜಿತ್' ನಾಟಕವನ್ನು ಬಿ.ವಿ.ಕಾರಂತರು ಉಡುಪಿಗೆ ತಂದಿದ್ದರು. ರಾಮದಾಸ್ ನಮಗೆಲ್ಲ ತಿಳಿಸಿ ಆ ನಾಟಕವನ್ನು ನೋಡಲು ಹೇಳಿದ್ದರು. ಉಡುಪಿಯಲ್ಲಿದ್ದಾಗ ಅನೇಕ ಹೊಸ ನಾಟಕಗಳನ್ನು ನೋಡಿದೆ. ಸಾಧ್ಯವಾದಾಗಲೆಲ್ಲ ನಮ್ಮ ಕಾಲೇಜಿನಲ್ಲಿ ನಡೆಯುತ್ತಿದ್ದ ರಿಹರ್ಸಲ್‌ಗಳಿಗೂ ಹೋಗಿ ಕೂತಿರುತ್ತಿದ್ದೆ. ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲೂ ಹೊಸ ನಾಟಕಗಳ ಪ್ರಯೋಗಗಳಾಗುತ್ತಿದ್ದವು. ಬಿ.ವಿ.ಕಾರಂತರ ಪ್ರಯೋಗಗಳ ಬಗ್ಗೆ ಚರ್ಚೆಗಳಾಗುತ್ತಿದ್ದವು. ಹೆಗ್ಗೋಡಿನ ಬಗ್ಗೆ ಅಲ್ಲಲ್ಲಿ ಮಾತು ಕೇಳಿಬರುತ್ತಿತ್ತು. ನಮ್ಮಂಥವರಿಗೆ ಹೊಸಬಗೆಯ ನಾಟಕಗಳ ಲೋಕವೊಂದು ತೆರೆದುಕೊಳ್ಳುತ್ತಿತ್ತು.

Read more...

April 07, 2008

ಆಕ್ಸಿಡೆಂಟಿಗೆ ಶುಭ ಹಾರೈಸುತ್ತಾ...

ರೈಲ್ವೆ ಕ್ರಾಸಿಂಗ್‌ನಲ್ಲಿ ಉಗಿಬಂಡಿ ಢಿಕ್ಕಿಯಾಗಿ, ಕಾರಿನಲ್ಲಿದ್ದ ಒಂದು ಗಂಡು ಒಂದು ಹೆಣ್ಣು ಜೀವ ಕಳೆದುಕೊಂಡಿವೆ. ಅವರಿಬ್ಬರ ಮಧ್ಯೆ ಅಕ್ರಮ ಸಂಬಂಧ ಇತ್ತು ಅನ್ನುತ್ತಿವೆ ಕೆಲವು ಪತ್ರಿಕೆಗಳು. ಅವರು ಸಿಕ್ಕಾಪಟ್ಟೆ ಕುಡಿದಿದ್ದರು ಅನ್ನುತ್ತಾರೆ ಕೆಲವರು. ಡ್ರೈವಿಂಗ್ ಸೀಟಿನಲ್ಲಿದ್ದ ಅವನಿಗೆ ಡ್ರೈವಿಂಗೇ ಬರುತ್ತಿರಲಿಲ್ಲ ಅಂತಲೂ ಹೇಳುತ್ತಾರೆ. ಸಹೋದ್ಯೋಗಿಯೊಂದಿಗೆ ಸತ್ತ ತನ್ನ ಹೆಂಡತಿಯ ಮರಣ ಕಾರಣ ಭೇದಿಸುವುದಕ್ಕೆ ಹೊರಟಿದ್ದಾರೆ ನಿರ್ದೇಶಕ ಕಂ ನಾಯಕ ರಮೇಶ್ ಅರವಿಂದ್.

ಆದರೆ ಮಜಾ ನೋಡಿ- ಸಾಫ್ಟ್‌ವೇರ್ ಮಿತ್ರರು ಸೇರಿ ನಿರ್ಮಿಸಿರುವ, ಕಾರ್ಪೊರೇಟ್ ಗಂಧವಿರುವ ಈ ಚಿತ್ರದಲ್ಲಿ, ತೀರಿಹೋದ ಪತ್ನಿಯ ಬಗೆಗಿರುವಷ್ಟೇ ಪ್ರೀತಿ, ಸಾವಿನ ರಹಸ್ಯವನ್ನು ಭೇದಿಸುವುದರಲ್ಲೂ ನಾಯಕನಿಗಿದೆ ! ಆಕ್ಸಿಡೆಂಟ್ ನಡೆದಾಗ, ತನ್ನ ಸಹೋದ್ಯೋಗಿ (ಪೂಜಾಗಾಂಧಿ) ಜತೆ ವಿಶೇಷ ಪರಿಣತಿಗಾಗಿ ಅಮೆರಿಕಕ್ಕೆ ಹೋಗಿದ್ದಾನೆ ಈ ರೇಡಿಯೊ ಜಾಕಿ ರಮೇಶ್. ನಂತರದ ಘಟನಾವಳಿಯಲ್ಲೂ ಒಳ್ಳೆಯ ಸ್ನೇಹಿತೆಯಾಗಿ ಆಕೆ ಇವನ ಜತೆಗೇ ಇರುತ್ತಾಳೆ. 'ಇಲ್ಲಿ ನಾಯಕನ ನೋವು ಪ್ರೇಕ್ಷಕನದ್ದಾಗುವುದಿಲ್ಲ' ಹೌದು. ಆದರೆ ಗಂಡ ಅಳುಮುಂಜಿಯಾಗದೆ, ಸಾವು ಕೌಟುಂಬಿಕ ಘಟನೆಯಾಗದೆ, ಅದರ ರಹಸ್ಯವನ್ನು ಬಿಚ್ಚುವ ಕೆಲಸದಲ್ಲಿ ಸಮಾಜದ ಅನೇಕ ವಿಷಕೊಂಡಿಗಳು ಕಳಚಿಕೊಳ್ಳುತ್ತವೆ. ಹೆಂಡತಿಯ ಸಮಾಜಸೇವೆಯನ್ನು ನಿರ್ಲಕ್ಷಿಸುತ್ತಿದ್ದ, ಉಳಿದವರ ಉಸಾಬರಿ ನಮಗೇಕೆ ಅನ್ನುತ್ತಿದ್ದ ಗಂಡನೇ, ಪತ್ನಿಯ ಸಾವಿನ ರಹಸ್ಯದ ಬಾಹ್ಯ ಸಂಬಂಧಗಳ ಗಂಟನ್ನು ಬಿಚ್ಚಲು ಹೊರಟಿದ್ದಾನೆ. ಲೋಕದ ಡೊಂಕನ್ನು ತನಗರಿವಿಲ್ಲದಂತೆಯೇ ನಿವಾರಿಸುತ್ತಿದ್ದಾನೆ!

ಇಲ್ಲಿ ಸಂಶಯದ ದೃಷ್ಟಿ ಒಂದು ಪಾತ್ರದಿಂದ ಇನ್ನೊಂದಕ್ಕೆ ಬದಲಾಗುತ್ತಲೇ ಹೋಗುತ್ತದೆ. ಆದರೆ ಎಲ್ಲ ಪತ್ತೇದಾರಿ ಘಟನಾವಳಿಯಲ್ಲೂ ಬಹಳ ಸಲ ಸಿಲ್ಲಿ ಅನ್ನಿಸದ ಹಾಗೆ ರಮೇಶ್ ಜಾಗರೂಕರಾಗಿದ್ದಾರೆ. ಉದ್ದ ಜಡೆ ಬಿಟ್ಟುಕೊಂಡ, ನಕಲಿ ಸಿಡಿ ದಂಧೆಯ, ಹರಾಮ್‌ಖೋರನ ಪಾತ್ರದಲ್ಲಿ ಹೊಸಬ ಲೊಂಗಾ ಮಹೇಶ್ ಅಭಿನಯ ಸವಿಯುವಂತಿದೆ. (ಅವರು ದೂರದೂರಿನಲ್ಲಿ ರೇಡಿಯಾಲಜಿಸ್ಟ್ ಅಂತೆ). ಪ್ರಯೋಗರಂಗ ತಂಡದ 'ನಮ್ಮ ನಿಮ್ಮೊಳಗೊಬ್ಬ', 'ಮೈಸೂರು ಮಲ್ಲಿಗೆ' ನಾಟಕಗಳಲ್ಲಿ ರಾಜೇಂದ್ರ ಕಾರಂತರ ಅಭಿನಯ ಕಂಡು ಬೆರಗಾದವರಿಗೆ ಆಕ್ಸಿಡೆಂಟ್‌ನಲ್ಲಿ ಮತ್ತೊಂದು ರಸದೌತಣ। ಹೆಲ್ತು ಮಿನಿಸ್ಟರು ಚಂದ್ರಪ್ಪನ ಮೂಲಕ. ಇಲ್ಲಿ ಮಂತ್ರ-ಉಗುಳು ಎರಡೂ ಜಾಸ್ತಿ, ನೋಡಿ ಬೇಕಾದರೆ ! ಈ ಎರಡು ಪಾತ್ರಗಳು ವಿಶೇಷ ಮ್ಯಾನರಿಸಂ ಮೂಲಕ ರಮೇಶ್ ಅಭಿನಯವೇ ಕೊಂಚ ಮಂಕಾಗುವಂತೆ ಮಾಡಿವೆ.

ಸತ್ತುಹೋದ ಗಂಡಸಿನ ತಂದೆಯ ಪಾತ್ರದಲ್ಲಿ ದತ್ತಣ್ಣ, ಹುಚ್ಚರಾಗಿ ಎರಡೇ ಎರಡು ದೃಶ್ಯಗಳಲ್ಲಿ ಕಾಣಿಸಿಕೊಂಡದ್ದು ಸಾರ್ಥಕವಾಗಿದೆ. ನಿರ್ದೇಶಕ ದಿನೇಶಬಾಬು, ಇಲ್ಲಿ ಪ್ರಮುಖ ಪೊಲೀಸ್ ಇನ್ಸ್‌ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡು ತಮ್ಮ ಕೆಲಸ ಮಾಡಿದ್ದಾರೆ. 'ಶಿಳ್ಳೆಖ್ಯಾತ' ಪ್ರೇಕ್ಷಕರನ್ನು ಗುರಿಯಾಗಿಟ್ಟುಕೊಂಡು ಮಾಡಿದ ಒಂದು ಐಟಮ್ ಸಾಂಗು ಮತ್ತು ರಮೇಶ್ ವಿರಹದುರಿಯಲ್ಲಿ ಹಾಡುವ ಎರಡು ಗೀತೆಗಳು ಒಂದೆರಡು ಬಾರಿ ಕೇಳುವಂತಿವೆ. ಇನ್ನು ರೇಖಾ, ಮೋಹನ್, ತಿಲಕ್ ಎಲ್ಲರೂ ತಮ್ಮ ಪಾತ್ರಗಳಲ್ಲಿ ತಲ್ಲೀನರಾಗಿದ್ದಾರೆ. ಅಪರೂಪಕ್ಕೆ ಗಾಂಧಿನಗರಕ್ಕೆ ಕಾಲಿಟ್ಟಿರುವ ಹಿರಿಯರಾದ ಜಿ.ಎಸ್. ಭಾಸ್ಕರ್‌ರ ಛಾಯಾಗ್ರಹಣ ಅಚ್ಚುಕಟ್ಟಾಗಿದೆ. ಸಂಕಲನದಲ್ಲಿರುವ ಬಿಗಿ ಚಿತ್ರಕ್ಕೆ ವಿಶೇಷ ಮೆರುಗು, ಗತಿಯನ್ನು ಕರುಣಿಸಿದೆ. ಪಿವಿಆರ್‌ನಲ್ಲಿ ಹಾಸ್ಯ ಸಿನಿಮಾ 'ಸತ್ಯವಾನ್ ಸಾವಿತ್ರಿ' ನೋಡಿ, ನಾನು ಅಳುವಂತೆ ಮಾಡಿದ್ದ ರಮೇಶ್ ಈ ಬಾರಿ ಖುಶಿಕೊಟ್ಟಿದ್ದಾರೆ.

ಧನಪಿಪಾಸೆ, ಸಮಾಜಸೇವಕರ ಕಷ್ಟ, ಸಾಮ್ರಾಜ್ಯಶಾಹಿ ಕಂಪನಿಗಳ ದುಷ್ಕೃತ್ಯ, ಮಿನಿಸ್ಟ್ರ ದಗಲ್ಬಾಜಿ, ಐಎಎಸ್ ಆಫೀಸರ್ ಸಂದಿಗ್ಧ, ಭೂಗತಲೋಕದ ದಾರಿ...ಹೀಗೆ ಟಿ.ಎನ್. ಸೀತಾರಾಂ ೫೦ ವಾರಗಳ ಧಾರಾವಾಹಿಯಲ್ಲಿ ಹೇಳುವುದನ್ನು ರಮೇಶ್ ೨ ಗಂಟೆಗಳಲ್ಲಿ ಹೇಳುವುದಕ್ಕೆ ಯತ್ನಿಸಿದ್ದಾರೆ. ಆದರೆ ಇದು ಕೇವಲ 'ಮರ್ಡರ್ ಮಿಸ್ಟರಿ' ಕಥಾನಕ ಅನ್ನುವ ತಪ್ಪುಗ್ರಹಿಕೆ ಮೂಡಿಸುವಂತಿರುವುದು ಸಿನಿಮಾದ ಕೊನೆಯ ದೃಶ್ಯ. ಮಾಮೂಲಿ ಹಾಹೂ ಫೈಟುಗಳೂ ಇಲ್ಲದೆ ಒಂದೇಒಂದು ಗುಂಡಿನ ಕಾಳಗವಿರುವ ('ಇಂತಿ ನಿನ್ನ ಪ್ರೀತಿಯ'ದಂತೆ ಅಲ್ಲ !) ಸಿನಿಮಾದಲ್ಲಿ, ಮರ್ಡರ್ ಮತ್ತು ಮಿಸ್ಟರಿ ಬೇರೆಬೇರೆಯಾಗಿ ಪ್ರೇಕ್ಷಕರಿಗೆ ಕಾಣಲೆಂದು ನನ್ನ ಆಸೆ.

Read more...

April 03, 2008

ರಾಜಧಾನಿ ಎಕ್ಸ್‌ಪ್ರೆಸ್


ಸಂಜೆಯಾದರೆ ಸಾಕು.
ಎಂ.ಜಿ. ರೋಡಲಿ ಗಿಣಿವಿಂಡು.
ಸಾಕಿದಾ ಗಿಣಿ ಮಾತಿನಾ ಗಿಣಿ
ಕೆಂಪು ಚಿಮ್ಮುವ ಅರಗಿಣಿ
ಗಿಟಾರುಪಾಣಿ ನೀಲವೇಣಿ
ನವ ಕಲ್ಯಾಣಿ, ಹೆಡೆ ಬಿಚ್ಚಿದ ನಾಗಿಣಿ
ಲಂಕಿಣಿ ಸಿಂಹಿಣಿ ನಟೀಮಣಿ
'ಗುಂಡು'ಗಲಿ ಕ್ಷತ್ರಿಯಾಣಿ
ಸಗ್ಗಕ್ಕೆ ಒಂದೇ ಗೇಣಿನ ಏಣಿ.
***
ಈ ಗಿಣಿ-ವಿಂಡು ಇನ್ನೂ ಬೀಸಲಿ
ತಪ್ಪಿಸಿಕೊಳುತಿರಲಿ ನನ್ನ ವಿರಹಿಣಿ !

Read more...

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP