ಪವಿತ್ರ ಬೆರಳಲ್ಲೆತ್ತಿ ನೋಡಿದೆವು ಆ ಅಗ್ರಹಾರವ !
ಯಾವ ಮನೆಯವರು ಸ್ವಾಗತಿಸಿದರೋ ತಿಳಿಯದು !
ಎರಡೆರಡು ಅಡಿ ಎತ್ತರದ ಮೆಟ್ಟಿಲುಗಳನ್ನು ಹತ್ತಿ, ಮುಖ್ಯ ಬಾಗಿಲಲ್ಲೇ ತಲೆ ಬಗ್ಗಿಸಿ, ಮುಂದಿನ ಬಾಗಿಲಿಗೆ ಕಾಲು ಕುಂಟಾಗಿಸಿ, ಸೊಂಟ, ಬೆನ್ನನ್ನೂ ಬಾಗಿಸಿ, ಕಾಲು ಎತ್ತಿಟ್ಟು ಒಂದೊಂದೇ ಹೊಸ್ತಿಲು ದಾಟುತ್ತಾ, ಹಿತ್ತಲಲ್ಲಿ ಹೊರಬಂದು, ಎರಡನೇ ಮನೆಯ ಬಚ್ಚಲು ಹೊಕ್ಕು ಕೈಕಾಲು ತೊಳೆದು, ಎದುರಿನ ಹಟ್ಟಿಯಲ್ಲಿ ಹೊರಬಂದು, ಮೂರನೇ ಮನೆಯ ಪಾಯಿಖಾನೆಯಲ್ಲಿ ಅವಸರದಲ್ಲೇ ಒಂಚೂರು ಕಾಲ ಕಳೆದು, ನಾಲ್ಕನೇ ಮನೆಯಲ್ಲಿರುವ ಮೂಲ ದೇವರಿಗೆ ಕೈಮುಗಿದು, ಐದನೇ ಮನೆಯಲ್ಲಿ ಕೆಲ ದಿನಗಳ ಹಿಂದೆ ಉಪನಯನಕ್ಕೆ ಮಾಡಿದ್ದ ಸ್ವೀಟು ತಿಂದು, ಆರನೇ ಮನೆಯ ಪಡಸಾಲೆಗೆ ಬಂದು, ಅಲ್ಲಿ ಶಿವರಾಮ ಕಾರಂತ-ಗಂಗೂಬಾಯಿ ಹಾನಗಲ್‌ರಂಥ ಮಹಾರಥರೇ ಉಳಿದುಕೊಂಡಿದ್ದರು ಎಂಬುದು ತಿಳಿದು, ಸುಸ್ತಾಗಿ, ಇನ್ನುಳಿದ ಆರು ಮನೆಗಳಿಗೆ ಸಾಯಂಕಾಲ ಬರುವುದಾಗಿ ಹೇಳಿದೆವು !

ಒಂದು ಮನೆಯ ಮಾಡು ಇನ್ನೊಂದಕ್ಕೆ ತಾಗಿಕೊಂಡು ಉದ್ದಕ್ಕೂ ಹನ್ನೆರಡು ಮನೆಗಳು. ಐದಡಿ ಅಗಲದ ಮಣ್ಣಿನ ಗೋಡೆಗಳು, ಒಂದಡಿ ದಪ್ಪದ ಮರದ ಬಾಗಿಲುಗಳು, ಗೋಡೆಗಳಲ್ಲಿ ತೂಗುತ್ತಿರುವ ಶಂಕರಾಚಾರ್ಯ, ಶ್ರೀಧರಸ್ವಾಮಿ, ರಾಮಕೃಷ್ಣ ಪರಮಹಂಸ ಮತ್ತು ದೇವಾನುದೇವತೆಗಳು. ಮಧ್ಯೆ ಅಚ್ಚರಿ ಹುಟ್ಟಿಸುವ ಕುವೆಂಪು, ಶಿವರಾಮ ಕಾರಂತರ ಫೋಟೊಗಳು. ಮನೆಯೆದುರಿನ ಚಿಟ್ಟೆಗಳಲ್ಲಿ ಕಾಟನ್ ಸೀರೆಯುಟ್ಟು ಕುಳಿತಿರುವ ಮುದುಕಿಯರು, ಗಡಿಬಿಡಿಯಲ್ಲಿ ಓಡಾಡುತ್ತಿರುವ ತಲೆಯಂಚು ಬಿಳಿಯಾದ ಗಂಡಸರು. ಆದರೆ ಬಿಳಿ ಪಂಚೆಯಿಟ್ಟುಕೊಂಡು, ಕೂದಲು ಸರಿಮಾಡಿಕೊಳ್ಳುತ್ತಾ ಎಲ್ಲ ಮನೆಗಳಿಂದ ಹೊರಬರುತ್ತಿರುವವರನ್ನು ಆಚೀಚೆಯ ಮನೆಯವರು, ‘ಎಂಥ ಡಾಕ್ಟ್ರೆ, ನೋಡದ್ದೆ ಸುಮಾರು ಸಮಯ ಆತು’, ‘ಹೋ ಎಂಜಿನಿಯರು ಬೆಂಗ್ಳೂರಿಲಿ ಚಳಿ ಹೇಂಗಿದ್ದು?’, ‘ಎಂತ ಕೂಸೆ, ಟಿವಿ ಕೆಲ್ಸ ಹೇಂಗಿದ್ದು?’ ಅನ್ನತೊಡಗಿದಾಗ ನಮಗೂ ಒಂಚೂರು ಗಲಿಬಿಲಿಯಾದದ್ದು ಹೌದು ! ಅಲ್ಲಿ ಉಳಿದುಕೊಂಡ ಇಪ್ಪತ್ತನಾಲ್ಕು ಗಂಟೆಗಳಲ್ಲಿ, ನಾಲ್ಕೈದು ಮನೆಯ ಬಚ್ಚಲುಗಳಲ್ಲಿ ಕೀಜಿ, ಹಿತ್ತಾಳೆ, ಪ್ಲಾಸ್ಟಿಕ್, ಸ್ಟೀಲು ತಂಬಿಗೆಗಳಿಂದ ತೆಳ್ಳಗಿನ ತಣ್ಣನೆಯ ನೀರು ಎತ್ತೆತ್ತಿ ಸುರಿದುಕೊಂಡು ಮನಸೋಇಚ್ಚೆ ಮಿಂದೆವು.
ಇಂತಹುದೊಂದು ಮಾಯಕದಂಥ ಘಟನಾವಳಿ ಜರಗಿದ್ದ್ದು , ಶಿವಮೊಗ್ಗ ಜಿಲ್ಲೆಯ ಸಾಗರದ ಬಳಿ ಸೊರಬ ತಾಲೂಕಿಗೆ ಸೇರಿದ ಊರೊಂದರ ಬ್ರಾಹ್ಮಣರ ಅಗ್ರಹಾರದಲ್ಲ. ಜಗಳವಿಲ್ಲದೆಯೂ ಜೀವಂತವಾಗಿರುವ, ಪೇಟೆಯ ಸೋಂಕಿಗೆ ತುತ್ತಾಗದೆ-ಹಳ್ಳಿಯ ಜಾಡ್ಯಕ್ಕೂ ಸಿಲುಕದೆ ಕಂಗೊಳಿಸುತ್ತಿರುವ ಆ ಲೋಕ, ಹಳ್ಳಿ ಭಾರತದ ಒಂದು ರಸಘಟ್ಟಿ. ಮನೆಯ ಒಬ್ಬರನ್ನೋ ಇಬ್ಬರನ್ನೋ ನಗರಕ್ಕೆ ಕಳುಹಿಸಿ, ಹಳ್ಳಿ ಕಲುಷಿತವಾಗದಂತೆ ನೋಡಿಕೊಳ್ಳುತ್ತ, ಊರಿನ ಬಗ್ಗೆ ಯಾವ ಕೀಳರಿಮೆಯೂ ಇಲ್ಲದೆ ಹೆಮ್ಮೆಯಿಂದ ಸುಖವಾಗಿ ಬದುಕುವುದನ್ನು ರೂಢಿಸಿಕೊಂಡಿರುವ ಈ ಜನ ಹಳ್ಳಿಯ ಮಿಕಗಳಾಗಿಲ್ಲ ,ಪೇಟೆಯ ಬಕಾಸುರರೂ ಅಲ್ಲ.
ಕಪ್ಪಗಿನ ಮರದ ಮಂಟಪದ ಮೇಲೆ ಕೆಂಪು ದಾಸವಾಳ ಹೂವುಗಳು. ಎದುರು ಕುಳಿತುಕೊಳ್ಳಲು ಕೂರ್ಮಾಕೃತಿಯ ಮರದ ಮಣೆ. ಉರಿಯುತ್ತಿರುವ ದೀಪ, ತೂಗುತ್ತಿರುವ ಕೆಂಪು ಮಡಿ ಬಟ್ಟೆ -ಇವೆಲ್ಲ ಆ ದೇವರ ಕೋಣೆಗಳ ಪಾವಿತ್ರ್ಯವನ್ನು ಸಾರಿ ಹೇಳುತ್ತಿದ್ದವು. ಬಹಳ ದಿನಗಳಿಂದ ಮೂಲೆ ಪಾಲಾದಂತೆ ಬಟ್ಟೆ ಮುಚ್ಚಿಕೊಂಡಿದ್ದ ಟಿವಿ, ನಮ್ಮಲ್ಲಿ ಹೆಚ್ಚಿನವರ ಕಣ್ಣಿಗೂ ಬೀಳಲಿಲ್ಲ. ಪ್ರತಿ ಮನೆಯಲ್ಲೂ ಮರದ ಪತ್ತಾಯಗಳು, ಒತ್ತು ಸೇಮಿಗೆ ಮಣೆಗಳು, ದಪ್ಪದ ಬಾಜಾರ ಕಂಬಗಳು, ಮರದ ಪೆಟ್ಟಿಗೆಗಳು, ಕಿರಿದಾದ ಬಾಯಿಯ ತಳ ಕಾಣದ ಆಳ ಬಾವಿಗಳು, ಹೊರಗೆ ಬಗೆಬಗೆಯ ಬಣ್ಣಗಳ ದಾಸವಾಳ ಹೂವಿನ ಗಿಡಗಳು...
ಜೋಲು ಮಂಚದ ಮೇಲೆ ಕುಳಿತ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೀತಾರಾಮ ರಾಯರು, ರ್‍ಯಾಡಲ್ ಶ್ರುತಿಪೆಟ್ಟಿಗೆ ಆನ್ ಮಾಡಿ, ಕಣ್ಣುಮುಚ್ಚಿ ಶ್ರುತಿ ಪರೀಕ್ಷಿಸಿಕೊಳ್ಳತೊಡಗಿದರು. ಆಗ ಕೆಲವರಿಗೆ ನಗು ತಡೆಯಲಿಕ್ಕಾಗದಿದ್ದರೂ ‘ಶ್ರೀ ವನಿತೆಯರಸನೆ ವಿಮಲ ರಾಜೀವ ಪೀಠನ ಪಿತನೆ....’ ಎಂದು ಆರಂಭಿಸಿದಾಗ ನೆಲದಲ್ಲಿ ಚಕ್ರಮುಟ್ಟ ಹಾಕಿ ಕುಳಿತಿದ್ದ ಮೂವತ್ತು ಜನರೂ ರೋಮಾಂಚನಗೊಂಡರು . ರಾಯರೂ ಉತ್ಸಾಹಭರಿತರಾಗಿ ‘ಅಕ್ಕಿಯೊಳಗನ್ನವ ಮೊದಲಾರು ಕಂಡವನು...’ಅಂತ ನಾಲ್ಕು ಮಂಕುತಿಮ್ಮನ ಕಗ್ಗವನ್ನೂ ಹಾಡದೇ ನಿಲ್ಲಿಸಲಿಲ್ಲ. ಹಾಸಿಗೆಯಿಂದ ಏಳಲಿಕ್ಕಾಗದ ಅವರ ಹೆಂಡತಿ, ಒಳಕೋಣೆಯ ಮಂಚದಲ್ಲಿ ಒಂಚೂರೂ ಬೆನ್ನು ಬಗ್ಗಿಸದೆ ತದೇಕಚಿತ್ತೆಯಾಗಿ ಬಟ್ಟೆ ಹೊದ್ದು ಕುಳಿತಿರುವುದನ್ನು ಕಂಡ ನಮ್ಮ ಹೆಂಗಸರು ಪಾದಕ್ಕೆರಗಿ ಆಶೀರ್ವಾದ ಬೇಡಿದರು. ಅಜ್ಜಿಯ ಕೆನ್ನೆಯ ಒಂದು ಮಡಿಕೆಯೂ ಮಿಸುಕಲಿಲ್ಲ.
ಅಡಿಕೆ ಚಪ್ಪರದ ಕೆಳಗೆ ಕುಳಿತಿದ್ದ ನಮ್ಮ ಬಾವನೂ ಭಾವೀ ಅಕ್ಕನೂ ಉಂಗುರ ಬದಲಾಯಿಸಿಕೊಂಡರು. ಉಳಿದ ಹುಡುಗರು ನಾವೆಲ್ಲ ಒಬ್ಬೊಬ್ಬಳ ಬಲಗೈಯನ್ನು ಎಡಗೈಯಲ್ಲಿ ಹಗುರವಾಗಿ ಹಿಡಿದು ಮೈಮರೆತು, ಉಂಗುರವನ್ನು ಬೆರಳುಗಳಿಗೆ ತೊಡಿಸುತ್ತಿದ್ದಾಗ ...
ಆಗುಂಬೆಯ ಘಾಟಿಯಲ್ಲಿ ಇಳಿಯುತ್ತಿದ್ದ ನಮ್ಮ ಬಸ್ಸು ಒಮ್ಮೆಲೆ ಬ್ರೇಕ್ ಹಾಕಿತು !