January 28, 2011
November 14, 2010
ಸೂರಿಯ ಪಂಚರಂಗಿ ! ಒಂದು ಟಿಪ್ಪಣಿ

ಇದು ಬಣ್ಣಗಳಲ್ಲಿ ಅದ್ದಿ ತೆಗೆದ ಸಿನಿಮಾ. ಪ್ರತಿ ಫ್ರೇಮಿಗೂ ಬಣ್ಣ, ನಾಯಕನ ಮನಸ್ಸಿಗೆ ಹಲವು ಬಣ್ಣ, ಕತೆಗೆ ಬಣ್ಣ, ಡಯಲಾಗುಗಳಿಗೆ ಬಣ್ಣ. ಹಾಗಂತ ಇದು ಕರಣ್ ಜೋಹರ್‌ನ ಬಿಳಿ-ಗುಲಾಬಿ ಬಣ್ಣಗಳೂ ಅಲ್ಲ. ಒಳ್ಳೆಯವನಿಗೆ ಒಳ್ಳೆಯದಾಗುತ್ತದೆ, ಕೆಟ್ಟವನಿಗೆ ಕೆಟ್ಟದಾಗುತ್ತದೆ ಎಂಬ ಬ್ಲ್ಯಾಕ್ ಅಂಡ್ ವೈಟ್‌ಗಂತೂ ಇಲ್ಲಿ ಜಾಗವಿಲ್ಲ. ಯಾಕೆಂದರೆ ಇದು ಸೂರಿ ದುನಿಯಾ.
ಇಲ್ಲಿ ಮಾತಿದೆ, ಹೊಡೆದಾಟ ಇದೆ, ಹಾಡಿದೆ, ಡ್ಯಾನ್ಸ್ ಇದೆ, ಕಣ್ತುಂಬುವ ದೃಶ್ಯಗಳಿವೆ. ಇವೆಲ್ಲ ಸೇರಿ ಕ್ಷಣಕಾಲ ನಮ್ಮನ್ನು ಅವಾಕ್ಕಾಗಿಸಿ ಮೌನಕ್ಕೆ ತಳ್ಳುವ ಶಕ್ತಿ ಇದೆ. ಸಿನಿಮಾದಲ್ಲಿ ಕತೆ ಇದೆಯಾ ಅಂತ ಹುಡುಕುವವರ ಮುಸುಡಿನ ಎದುರು ಹತ್ತು ಕತೆ ಬಿಚ್ಚಿಕೊಳ್ಳುತ್ತವೆ. ಪ್ರತಿಯೊಂದು ಫ್ರೇಮನ್ನೂ ಸೂರಿ ಸಮೃದ್ಧವಾಗಿಸೋದನ್ನು ನೋಡುವುದೇ ಚೆಂದ. ಎಲ್ಲವೂ ಕಣ್ತುಂಬಿಕೊಳ್ಳುತ್ತಾ, ನಮ್ಮ ಕಣ್ಣುಗಳಿಗೆ ಬಿಡುವೇ ಇಲ್ಲ.
ಸೂರಿ ಸಿನಿಮಾಗಳ ಹೀರೋಗಳೆಲ್ಲ ಹವಾಯಿ ಚಪ್ಪಲಿಯ ವೀರರೇ. ಒಣರೊಟ್ಟಿ ತಿಂದು ಗಟ್ಟಿಯಾದವರೇ. ಕೆಲಸ ಇಲ್ಲ, ಗೋತ್ರ ಇಲ್ಲ, ಮನೆ ಇಲ್ಲ, ಸಂಬಂಧಿಗಳು ಯಾರು ಗೊತ್ತಿಲ್ಲ, ಕೈಯಲ್ಲಿ ಕಾಸಿಲ್ಲ. ಆದರೂ ಇವೆಲ್ಲ ಇದ್ದವರನ್ನು ಅಲುಗಾಡಿಸಬಲ್ಲವರು.
ಇವರು ತಮ್ಮಲ್ಲಿ ಇದ್ದದ್ದನ್ನು ಇಲ್ಲದವರಿಗೆ ಕೊಡುತ್ತಾರೆ. ತಮ್ಮಲ್ಲಿ ಇಲ್ಲದ್ದನ್ನೂ ಇಲ್ಲದವರಿಗೆ ಕೊಡಿಸುತ್ತಾರೆ ! ಇಂಥವರು ಹೀರೋ ಅಲ್ಲದೆ ಮತ್ತಿನ್ನೇನು?!
ಚಿನ್ನದ ಬಣ್ಣಕ್ಕೂ ಮಣ್ಣಿನ ಬಣ್ಣಕ್ಕೂ ಅಂಥಾ ವ್ಯತ್ಯಾಸ ಇದೆಯಾ? ಹೊಳೆದರೆ ಚಿನ್ನ, ಹೊಳೆಯದಿದ್ದರೆ ಮಣ್ಣು. ಹಾಗಾಗಿಯೇ ಏನೋ, ಸೂರಿಗದು ಒಲವಿನ ಬಣ್ಣ. ಕೊಂಚ ಹಳದಿ, ಕೊಂಚ ಕಂದು. ಆ ಗೋಧಿ ಬಣ್ಣ ಮನುಷ್ಯನ ಮೈಬಣ್ಣವೂ ಹೌದಲ್ಲ.
ತುಂಬಿ ಬಂದ ಮನಸ್ಸನ್ನು ಅಕ್ಷರಗಳಲ್ಲಿ ತುಂಬಿ ಕಳಿಸುವುದಷ್ಟೇ ಈ ಟಿಪ್ಪಣಿಯ ಉದ್ದೇಶ. ಬಗೆದು ನೋಡಿದರೆ ಈ ಸಿನಿಮಾದಲ್ಲೂ ಸಾಕಷ್ಟು ಅರೆಕೊರೆಗಳು ಕಂಡಾವು. 'ದುನಿಯಾ’ವನ್ನು ಮೀರಿಸುವ ಸಿನಿಮಾ ಇದು ಅನ್ನುವಂತೆಯೂ ಇಲ್ಲ. ಒಳ್ಳೆಯ ಸಿನಿಮಾ ಮಾಡುವುದು ಎಷ್ಟು ಕಷ್ಟ ಎಂದು ಅರಿತಿರುವವರು, ಕನ್ನಡ ಸಿನಿಮಾದ ಗುಣಮಟ್ಟವನ್ನು ಗ್ರ್ರಹಿಸಿರುವವರು ’ಜಾಕಿ’ಯನ್ನು ಮನದುಂಬಿ ಅಭಿನಂದಿಸಬೇಕು.
October 16, 2010
ಮದುವೆ ಮಾಡಿ ನೋಡು !
'ಜೀ ಕನ್ನಡ' ವಾಹಿನಿಯ ಯಶಸ್ವಿ ಧಾರಾವಾಹಿ ಚಿ|ಸೌ| ಸಾವಿತ್ರಿ ಕನ್ನಡ ಕಿರುತೆರೆಯಲ್ಲಿ ಹೊಸ ಇತಿಹಾಸ ಬರೆದಿದೆ. ಇದುವರೆಗೂ ದೊಡ್ಡ ಬಜೆಟ್‌ನ ಸಿನಿಮಾಗಳ ಚಿತ್ರೀಕರಣ ಮಾತ್ರ ನಡೆಯುತ್ತಿದ್ದ ಮೈಸೂರಿನ ಲಲಿತ ಮಹಲ್ ಅರಮನೆಯಲ್ಲಿ, ಚಿ|ಸೌ|ಸಾವಿತ್ರಿ ಧಾರಾವಾಹಿ ಚಿತ್ರೀಕರಣ ನಡೆಸಲಾಗಿದೆ.
ಅದು ಸಾವಿತ್ರಿಯ ಮದುವೆ ಮಹೋತ್ಸವದ ಚಿತ್ರೀಕರಣ. ಚಿತ್ರೀಕರಣದಲ್ಲಿ ನೂರಕ್ಕೂ ಹೆಚ್ಚು ಕಲಾವಿದರು ಪಾಲ್ಗೊಂಡಿದ್ದು ಮತ್ತೊಂದು ವಿಶೇಷ. 'ದಿಗ್ಗಜರು' 'ಪಾಂಡವರು' ಸೇರಿದಂತೆ ಅನೇಕ ಕನ್ನಡ, ತಮಿಳು ಚಿತ್ರಗಳ ಚಿತ್ರೀಕರಣ ನಡೆದಿರುವ ಐತಿಹಾಸಿಕ ಲಲಿತಮಹಲ್, ಬ್ರಿಟಿಷ್ ವೈಸರಾಯ್‌ಗಳು ಹಾಗೂ ವಿಶೇಷ ಅತಿಥಿಗಳಿಗಾಗಿ ಮೈಸೂರು ಮಹಾರಾಜರಿಂದ ೧೯೩೧ರಲ್ಲಿ ಕಟ್ಟಲ್ಪಟ್ಟಿದ್ದು. ಈಗ ಸರಕಾರಿ ತಾರಾ ಹೋಟೇಲ್ ಆಗಿ ಪರಿವರ್ತನೆಯಾಗಿದೆ. ಕಳೆದ ೨೫ ವರ್ಷಗಳಿಂದ ಚಿತ್ರೀಕರಣಕ್ಕೆ ನೀಡಲಾಗುತ್ತಿದೆ. ಸೂಪರ್ ಸ್ಟಾರ್ ರಜನೀಕಾಂತ್, ವಿಷ್ಣುವರ್ಧನ್, ಅಂಬರೀಷ್ ಸೇರಿದಂತೆ ಅನೇಕರ ಕನ್ನಡ, ತಮಿಳು, ತೆಲುಗು, ಹಿಂದಿ ಚಿತ್ರಗಳು ಇಲ್ಲಿ ಚಿತ್ರೀಕರಣಗೊಂಡಿವೆ.
ಈ ಮದುವೆ ಯಾಕೆ ಮಹತ್ವದ್ದು?
'ಮನೆ ಕೆಲಸದ ಹುಡುಗಿ ಸಾವಿತ್ರಿ, ಮನೆಯೊಡತಿಯೇ ಆಗ್ತಾಳಾ?' ಎಂಬ ಪ್ರಶ್ನೆಗೆ ಉತ್ತರ ಈ ಮದುವೆಯಲ್ಲಿ ದೊರೆಯಲಿದೆ. ಸಾಧನೆ, ಸಂಸ್ಕಾರದಿಂದ ಸಾಮಾನ್ಯರೂ ಬಹಳ ಎತ್ತರಕ್ಕೆ ಏರಬಹುದು ಎನ್ನುವುದಕ್ಕೆ ಸಾವಿತ್ರಿ ದಿಕ್ಸೂಚಿಯಾಗುತ್ತಿದ್ದಾಳೆ. ಇಲ್ಲಿ ಇಬ್ಬರು ವರ, ಒಬ್ಬಳೇ ವಧು ! ಮೊದಲನೇ ವರ ಸಾವಿತ್ರಿಯ ಬಾಲ್ಯದ ಗೆಳೆಯ ವಿಶ್ವ. ಇನ್ನೊಬ್ಬ ವರ ರಾಜ್ಯದ ಮುಂದಿನ ಮುಖ್ಯಮಂತ್ರಿ ನರಸಿಂಹರಾವ್! ಅವರು ಸಾವಿತ್ರಿಗಿಂತ ೩೦ ವರ್ಷ ದೊಡ್ಡವರು. ಸಾವಿತ್ರಿಯ ವರ ಎಂಎಲ್‌ಎ ನರಸಿಂಹರಾವ್ ಆಗ್ತಾರಾ, ಗೆಳೆಯ ವಿಶ್ವನೇ ಆಗ್ತಾನಾ ಅಥವಾ ಇನ್ನೇನೋ ಬೇರೆಯದೇ ನಡೆಯುತ್ತಾ ಎನ್ನುವುದು ಸದ್ಯದ ಕುತೂಹಲ. ಅದೇನೇ ಇದ್ದರೂ ಈ ಮದುವೆಯಲ್ಲಿ ಸತ್ಯ ಅನಾವರಣಗೊಳ್ಳಲಿದೆ!
ಶ್ರುತಿನಾಯ್ಡು ನಿರ್ದೇಶನದಲ್ಲಿ ಜೈಜಗದೀಶ್, ಗೌತಮಿ, ಬಿ.ವಿ. ರಾಧಾ, ಮಂಡ್ಯ ರಮೇಶ್, ಸುಂದರ್, ನಂದಿನಿ ಪಟವರ್ಧನ್, ಶಿವಾಜಿರಾವ್ ಜಾಧವ್, ವೀಣಾ ರಾವ್, ಕಾವ್ಯ ಕಣ್ಣನ್ ಮೊದಲಾದ ಕಲಾವಿದರು ನಟಿಸುತ್ತಿದ್ದಾರೆ. ಈ ಯುಗದ ಹೊಸ ಸಾವಿತ್ರಿಯ ಕುಂಕುಮ ಸೌಭಾಗ್ಯದ ಕತೆ ಚಿ|ಸೌ|ಸಾವಿತ್ರಿ ಕಳೆದ ಜುಲೈ ೨೬ರಿಂದ ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ ೭ ಗಂಟೆಗೆ ಪ್ರಸಾರಗೊಳ್ಳುತ್ತಿದೆ. ಈಗಾಗಲೇ ಯಶಸ್ವಿ ೧೦೦ ಸಂಚಿಕೆಯ ಸನಿಹದಲ್ಲಿದೆ.
'ಜೀ ಕನ್ನಡ'ದಲ್ಲಿ ಅಕ್ಟೋಬರ್ ೨೦ ರಿಂದ ಸಂಜೆ ೭ ಗಂಟೆಗೆ 'ಸಾವಿತ್ರಿ ಮಹಾ ಮದುವೆ'ಯ ವಿಶೇಷ ಸಂಚಿಕೆಗಳು ಪ್ರಸಾರವಾಗುತ್ತವೆ.
(ಫೋಟೋಗಳು: ಚಂಪಕಾವತಿ)









