October 14, 2011
August 22, 2011
ಮಾತಿನ ಮಲ್ಲರ ಜತೆ ಒಂದು ಕಲಾರಾತ್ರಿ
ಕಳೆದ ಶನಿವಾರದ ರಾತ್ರಿ. ಸುಳ್ಯ ತಾಲೂಕಿನ ಚೊಕ್ಕಾಡಿಯ ‘ದೇಸೀ ಭವನ’ದ ಹೊರಗೆ ಆಕಾಶ ತುಂಬಿ ಮಳೆಯಾಗುತ್ತಿದ್ದರೆ, ಒಳಗೆ ಮನಸ್ಸು ತುಂಬಿ ಮಾತಿನ ಮಳೆಯಾಗುತ್ತಿತ್ತು. ಅದು ಯಕ್ಷಗಾನದಲ್ಲಿ ’ಕೊಡಕ್ಕಲ್ಲು ಹಾಸ್ಯಗಾರರು’ ಅಂತಲೇ ಪ್ರಸಿದ್ಧರಾದ ಕೆ.ಗೋಪಾಲಕೃಷ್ಣ ಭಟ್ಟರಿಗೆ ಅಲ್ಲಿ ’ಶೇಣಿ ಪ್ರಶಸ್ತಿ’ ಪ್ರದಾನ. ಆ ಸಂಭ್ರಮಕ್ಕೆ ಸೂರಿಕುಮೇರಿ, ಜಗದಾಭಿ, ಶೆಟ್ಟಿಗಾರ್, ದೀಪಕ್ ಮೊದಲಾದ ನುರಿತ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಬಯಲಾಟ. ಆ ಬಳಿಕ ರಾತ್ರಿಯಿಂದ ಬೆಳಗಿನವರೆಗೆ ತಾಳಮದ್ದಳೆ ! ಭಾಗವತರಾಗಿ ಬಲಿಪ, ಪದ್ಯಾಣ, ಪುತ್ತಿಗೆ. ಅರ್ಥಧಾರಿಗಳಾಗಿ ಕುಂಬ್ಳೆ, ಮೂಡಂಬೈಲು, ಮೇಲುಕೋಟೆ, ಸುಣ್ಣಂಬಳ, ಬರೆ, ಸೂರಿಕುಮೇರಿ, ಹಿರಣ್ಯ, ಶಂಭು, ಉಜಿರೆ..ಹೀಗೆ ಮಾತಿನ ಮಲ್ಲರು ಅಲ್ಲಿ ಸೇರಿದ್ದರು. ಪಾತ್ರಗಳ ಬೆಳಕಿನಲ್ಲೇ ಆ ಕಲಾರಾತ್ರಿಯಲ್ಲಿ ಬೆಳಗಾಯಿತು. ತಾಳಮದ್ದಳೆ ಮುಗಿದಾಗ ಬೆಳಗ್ಗೆ ಏಳೂವರೆ. ತಾಳಮದ್ದಳೆಯಲ್ಲಿ ಮಾತೇ ಸರ್ವಸ್ವ. ಹಾಗಾಗಿ ಇದಕ್ಕಿಂತ ಹೆಚ್ಚು 'ಬರಹದಲ್ಲಿ ಹೇಳಲಾರೆನೂ..'! ಇಂತಹ ಕಾರ್ಯಕ್ರಮಕ್ಕೆ ಸಾದಂರ್ಭಿಕವಾಗಿ ಉದಯವಾಣಿಯಲ್ಲಿ ಪ್ರಕಟವಾದ ನನ್ನ ಲೇಖನವೊಂದು ಇಲ್ಲಿದೆ. ಆ ಕಾರ್ಯಕ್ರಮವನ್ನು ಕಲ್ಪಿಸಿಕೊಂಡು ಆನಂದಿಸಿ !

Read more...
August 10, 2011
ಹೆಂಡತಿಗಾಗಿ ಬರೆದ ಗದ್ಯ
ಹೇ,
ಮದುವೆಯಾಗಿ ಇಷ್ಟು ಬೇಗ ನಿನ್ನ ಬರ್ತ್‌ಡೇ ಬರುತ್ತದೆ ಅಂದುಕೊಂಡಿರಲಿಲ್ಲ ! ಆವತ್ತು ನಿಮ್ಮ ಮನೆಯಿಂದ ಜಾತಕ ಬಂದಾಗ ಅದರಲ್ಲಿದ್ದ ಜನ್ಮ ದಿನಕ್ಕೂ, ಬೇರೆ ಕಡೆ ನನಗೆ ಸಿಕ್ಕಿದ ನಿನ್ನ ಜನ್ಮ ದಿನಕ್ಕೂ ತಾಳೆಯಾಗಿರಲಿಲ್ಲ ಅಂತ ನನ್ನ ನೆನಪು. ಆದರೆ ನನ್ನ ಅನುಮಾನವನ್ನು ನೀನು ನಿರಾಕರಿಸುತ್ತಲೇ ಬಂದಿದ್ದೀಯ ! ಬೇಜಾರಿಲ್ಲ, ’ಆಗಸ್ಟ್ ಹನ್ನೊಂದರಂದೇ ನಾನು ಹುಟ್ಟಿದ್ದು’ ಅಂತ ನೀನು ಗಟ್ಟಿಯಾಗಿ ಹೇಳಿರೋದ್ರಿಂದ, ಈ ವಿಚಾರವನ್ನ ನಾನು ಅತ್ತೆಮಾವನಲ್ಲಿಯೂ ಪ್ರಸ್ತಾಪಿಸಿಲ್ಲ ! ಅಷ್ಟಕ್ಕೂ, ನೀನು ಹುಟ್ಟಿದ್ದು ಬೇಗ ಅಂತ ಪ್ರೂವ್ ಆದರೆ, ನೀನು ಮತ್ತಷ್ಟು ದೊಡ್ಡವಳಾಗಿ ನಮಗಿರುವ ಒಂದು ವರ್ಷದ ಅಂತರವೂ ಕಡಿಮೆಯಾಗತ್ತೆ, ಅದು ನನಗೆ ಇಷ್ಟವಿಲ್ಲ ! ಹುಟ್ಟಿದ್ದು ತಡ ಅಂತಾದರೆ, ಮತ್ತಷ್ಟು ಸಣ್ಣವಳಾಗುತ್ತೀಯ ಮತ್ತು ನೀನು ಇನ್ನೂ ಮಕ್ಕಳಾಟಿಕೆ ಮಾಡಲು ಬಯಸುವುದಕ್ಕೆ ಸಣ್ಣ ವಯಸ್ಸೇ ಕಾರಣ ಅಂತೀಯ- ಅದೂ ನನಗೆ ಬೇಕಾಗಿಲ್ಲ. ಹಾಗಾಗಿ ಆಗಸ್ಟ್ ೧೧ ನನಗೆ ಓಕೆ.
ಆದರೂ ನಮ್ಮ ಮದುವೆ ಆನಿವರ್ಸರಿ ಬರೋ ಮೊದಲೇ ನಿನ್ನ ಬರ್ತ್‌ಡೇ ಬಂದಿದ್ದು ನನಗೆ ಕೊಂಚ ಕಸಿವಿಸಿಯೇ ಉಂಟು ಮಾಡಿದೆ. ಹಾಗಂತ, ನನ್ನ ಬರ್ತ್‌ಡೇ ಮಾತ್ರ, ನಮ್ಮ ಮದುವೆ ಆನಿವರ್ಸರಿಯಂದೇ ಆಗಿರೋದು ನನಗೆ ಹೆಮ್ಮೆ ಸಮಾಧಾನವನ್ನೂ ಕೊಟ್ಟಿದೆ. ಪರವಾಗಿಲ್ಲ ಬಿಡು, ನಮ್ಮಿಬ್ಬರ ಸಂಬಂಧ ಶುರುವಾದ ಬಳಿಕ, ನನಗಿಂತ ಮೊದಲು ನಿನ್ನ ವಯಸ್ಸೇ ಹೆಚ್ಚಾಗಿದ್ದರೂ ಅದು ಹೆಚ್ಚೆಂದು ನನಗೇನೂ ಅನ್ನಿಸುತ್ತಿಲ್ಲ ! ಅಷ್ಟಕ್ಕೂ ಮೂವತ್ತು ಹತ್ತಿರ ಬರುತ್ತಿದ್ದಂತೆ ನಾವ್ಯಾಕೆ ಈ ವಯಸ್ಸಿನ ಬಗ್ಗೆ ಮಾತಾಡಬೇಕು? ಬರ್ತ್‌ಡೇ ಅಂದಕೂಡಲೇ ಮೊದಲು ಮನಸ್ಸಿಗೆ ಬರೋದು ’ನಮ್ಮ ನೆಚ್ಚಿನ ಯುವ ನಾಯಕರಿಗೆ ೪೨ನೇ ಜನ್ಮದಿನದ ಹಾರ್ದಿಕ ಶುಭಾಶಯಗಳು’ ಅನ್ನೋ ಬೋರ್ಡುಗಳೇ. ಅಂದಹಾಗೆ, ನಮ್ಮ ಶೋಭಾ ಕರಂದ್ಲಾಜೆಯ ಇಂತಹ ಬೋರ್ಡು ಎಲ್ಲಾದರೂ ನೋಡಿದ್ದೀಯಾ?! ಅಷ್ಟಕ್ಕೂ- ವಯಸ್ಸಿಗೂ ಆಯುಸ್ಸಿಗೂ ಈ ಕಾಲದಲ್ಲಿ ಏನಾದರೂ ಸಂಬಂಧ ಇದೆ ಅಂತ ನಿನಗನ್ನಿಸತ್ತಾ? ಹಾರ ಬದಲಾಯಿಸಿಕೊಂಡಿದ್ದೇವೆ, ಬದುಕನ್ನೂ ಬದಲಾಯಿಸಿಕೊಳ್ಳುತ್ತಿರೋಣ ಆಗದಾ?
ನಿನಗೆ ನಾಳೆ ಎಸ್ಸೆಮ್ಮೆಸ್ಸುಗಳ ಮಹಾಪೂರ ಬರತ್ತೆ, ಹಲವರ ಮೊಬೈಲ್‌ನಲ್ಲಿ ರಿಮೈಂಡರ್‌ಗಳು ಹೊಡೆದುಕೊಳ್ಳುತ್ತವೆ ಅಂತ ನನಗೆ ಗೊತ್ತು. ಆದರೆ ಫೇಸ್‌ಬುಕ್‌ನಲ್ಲಿ ಮಾತ್ರ ಬರ್ತ್‌ಡೇಯನ್ನೇ ಅಡಗಿಸಿದ್ದೀಯಲ್ಲ. ಹಾಗಿದ್ದರೂ ಆಫೀಸಿನಲ್ಲಿ ಪಾರ್ಟಿ ಕೇಳಿಯಾರು ಅಂತ ನಿನಗೆ ಭಯ. ನಾಡಿದ್ದು ರಜಾ ತಗೊಳ್ಳಲಾ ಅಂತ ಕೂಡಾ ನೀನು ನಿನ್ನೆ ರಾತ್ರಿ ಕೇಳಿದೆ. ಕ್ಲೋಸ್ ಫ್ರೆಂಡ್ ಒಬ್ಬಳು ಮಧ್ಯರಾತ್ರಿ ಕಾಲ್ ಮಾಡೋದು ಖಂಡಿತ ಅಂತ ವಿಚಿತ್ರ ಖುಶಿಯಲ್ಲಿ ಹೇಳಿದೆ. ಬರ್ತ್‌ಡೇ ಅಂದರೆ ನಿನಗೆ ಸಣ್ಣ ಭಯ ಇರೋದು ನನಗೆ ಗೊತ್ತಾಗದೆ ಇರತ್ತಾ? ವಯಸ್ಸಾದೋರು ಅಮ್ಮನ ಥರ ಕಾಣ್ತಾರೆ ಅಂತಾರೆ, ನನಗೇನೂ ಗೊತ್ತಿಲ್ಲಪ್ಪ. ಸಣ್ಣ ವಯಸ್ಸಿಗೆ ಅಮ್ಮ ಆದರೆ ಮಜಾ ಇರಲ್ಲ. ವಯಸ್ಸಾದಾಗ ಅಮ್ಮ ಆಗದಿದ್ದರೂ ಚೆನ್ನಾಗಿರಲ್ಲ. ನನ್ನ ಅಮ್ಮನಿಗೆ, ನಿನ್ನ ಅಮ್ಮನಿಗೆ ವಯಸ್ಸೆಷ್ಟು ಅಂತ ನಿಖರವಾಗಿ ನನಗಂತೂ ಗೊತ್ತಿಲ್ಲ. ಆಫೀಸಿನಲ್ಲಿ ಯಾವುದಾದರೂ ಫಾರ್ಮು ತುಂಬಲು ಬೇಕಾದಾಗೆಲ್ಲ ಪ್ರತಿ ಬಾರಿಯೂ ನಾನು ಅಮ್ಮನಿಗೆ ಫೋನಾಯಿಸುತ್ತೇನೆ. 'ನನ್ನ ವೋಟರ್ ಐಡಿಯಲ್ಲಿರೋದು ಈ ಇಸವಿ’ ಅಂತ ಅಮ್ಮ ಒಂದು ಜನ್ಮ ದಿನಾಂಕ ಹೇಳ್ತಾಳೆ. ಆದರೆ ಅಮ್ಮನ ವಯಸ್ಸು ಅದಕ್ಕಿಂತಲೂ ಕಮ್ಮಿ ಅಂತ ನನಗೆ ಗುಮಾನಿ. ಏನಾದರೇನು, ಆವತ್ತಿನಿಂದ ಈವತ್ತಿನವರೆಗೆ ಅಮ್ಮ ಹಾಗೇ ಇದ್ದಾಳೆ ಅಂತ ಅನ್ನಿಸತ್ತೆ. ಅಮ್ಮನಿಗೆ ಅಷ್ಟೇ ವಯಸ್ಸು. ಅಮ್ಮ ಯಾಕೆ ವಯಸ್ಸು ಜಾಸ್ತಿ ಹೇಳ್ತಾಳೆ? ಅಪ್ಪ ಇಲ್ಲ ಅಂತಲಾ? ಅವಳು ನಿಜವಾಗಲೂ ದೊಡ್ಡವಳು ಕಣೇ.
ನೀನು ನನ್ನ ಅಮ್ಮನ ಥರ ಆಗಬೇಕು ಅಂತ ಕೆಲವು ಬಾರಿ ನನಗನ್ನಿಸತ್ತೆ. ನಿನಗೆ, ನೀನು ನಿನ್ನಮ್ಮನ ಥರ ಆಗಬೇಕು ಅಂತಿರಬಹುದು. ಆದೀತು, ಒಂದು ದಿನ ನೀನು ಅತ್ತೆ ಥರ ಆಗಬೇಕು ಅಂತ ನನಗೂ ಆಸೆಯಿದೆ, ಡೋಂಟ್ ವರಿ ! ಅಂದಹಾಗೆ, ನಿನ್ನ ಬರ್ತ್‌ಡೇಗೆ ಒಂದಷ್ಟು ಸರ್‌ಪ್ರೈಸ್ ಕೊಡಬೇಕು ಅಂತ ನಾನಂದುಕೊಂಡದ್ದು ಹೌದು. ಆದರೆ ಎಲ್ಲವನ್ನೂ ತುಂಬಾ ಪ್ಲ್ಯಾನ್ ಮಾಡಿ ಮಾಡುವ ನನ್ನಂತಹ ಸಿಸ್ಟಮ್ಯಾಟಿಕ್ ಜಂಟಲ್‌ಮ್ಯಾನ್‌ಗೆ ಸರ್‌ಪ್ರೈಸ್‌ನ್ನೂ ಪ್ಲ್ಯಾನ್ ಮಾಡೋಕೆ ಟೈಮೇ ಸಿಗಲಿಲ್ಲ, ಸಾರಿ ಕಣೇ. ಆದರೂ ಒಂದು ಸರ್‌ಪ್ರೈಸು ! ನೀನು ಹುಟ್ಟಿಬಂದ ಈ ದಿನದಿಂದಲಾದರೂ ನಾನಿನ್ನು ಮತ್ತೆ ಕೊಂಚ ಬರೆಯಲು ಆರಂಭಿಸಬೇಕು ಅಂದುಕೊಂಡಿದ್ದೇನೆ. ಅದು ನಿನಗೆ ಇಷ್ಟ ಅಂತ ನನಗೆ ಗೊತ್ತು. ನನ್ನ ಬದುಕಿನಲ್ಲಿ ಚಕ್ಕನೆ ಬಂದು ಚಕಿತಗೊಳಿಸಿದ ನಿನಗೆ ಬರ್ತ್‌ಡೇ ದಿನ ಇಷ್ಟಾದರೂ ಮಾಡದಿದ್ದರೆ ಹೇಗೆ?
ನಿನಗಿಷ್ಟದ ಬೇಯಿಸಿದ ಜೋಳ ಪೇರಳೆ ಗೋಬಿಮಂಚೂರಿ ಬೀನ್ಸ್‌ಪಲ್ಯ ಪಲಾವ್ ಕೋರಮಂಗಲದ ಬಜ್ಜಿ,ಕಲರ್ಸ್-ಸ್ಟಾರ್‌ಪ್ಲಸ್ ಸೀರಿಯಲ್‌ಗಳು, ದಿನಕ್ಕೆ ಮೂರು ಬಾರಿ ಅಮ್ಮನಿಗೆ ಫೋನು, ತಿಂಗಳಿಗೊಮ್ಮೆ ದೇವಸ್ಥಾನ ಭೇಟಿ, ಡಾರ್ಕ್ ಕಲರ್ ಟಾಪ್‌ಗಳು ಸದಾ ಸಿಗುತ್ತಿರಲಿ. ನಿನ್ನಿಂದ ನನಗೆ ಒಳ್ಳೆಯದಾಗಲಿ! ಹ್ಯಾಪಿ ಬರ್ತ್‌ಡೇ .
(* ನನ್ನ ಹೆಂಡತಿಗಾಗಿಯೇ ಬರೆದ ಬರೆಹ. ಈವರೆಗೆ ಎಲ್ಲೂ ಪ್ರಕಟವಾಗಿಲ್ಲ.)
June 12, 2011
ಹೇ ಜಯಸೂರ್ಯ ಜಯ ಜಯ ಹೇ
ಹೇ ಜಯಸೂರ್ಯ,
ಕಳೆದ ೧೮ ತಿಂಗಳುಗಳಿಂದ ನೀನು ಒನ್‌ಡೇ ಮ್ಯಾಚು ಆಡಿಲ್ಲ. ಮೊನ್ನೆ ಮೊನ್ನೆ ನಡೆದ ವಿಶ್ವಕಪ್‌ಗೂ ಆಯ್ಕೆಯಾಗಲಿಲ್ಲ. ಕ್ರಿಕೆಟ್ ಲೋಕಕ್ಕೆ ಬರಲು ಹಪಹಪಿಸುತ್ತಿರುವ ಹೊಸ ಹುಡುಗನಂತೆ ನೀನು ಅವಕಾಶಕ್ಕಾಗಿ ಕಾಯುತ್ತಿದ್ದೆಯಾ? ನಾಡಿದ್ದು ಜೂನ್ ೩೦ ಬಂದರೆ ನಿನ್ನ ವಯಸ್ಸು ಎಷ್ಟು? ೪೨! ’ದೇಶಕ್ಕಾಗಿ ಕ್ರಿಕೆಟ್ ಆಡೋದು ನನಗೆ ಇಷ್ಟ. ಹಾಗಾಗಿ ಇಷ್ಟು ದಿನವಾದರೂ ನಾನು ಸಂಪೂರ್ಣ ನಿವೃತ್ತಿ ಘೋಷಿಸಿಲ್ಲ’ ಅಂತಿದ್ದವನು ಈಗ ಮತ್ತೆ ಶ್ರೀಲಂಕಾದ ಏಕದಿನ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿಬಿಟ್ಟೆಯಲ್ಲ. ಇಂಗ್ಲೆಂಡ್ ಟೂರಿಗೆ ಪ್ಯಾಡು ಕಟ್ಟಿದೆಯಲ್ಲ. ಎಡಗೈ ವೀರ, ಸಿಂಹಳೀಯ, ಸನತ್ ಜಯಸೂರ್ಯ ನೀನು ಶ್ರೀಲಂಕಾದ 'ಕಪ್ಪು’ ಸೂರ್ಯ!
೧೯೮೯ರಿಂದ ಶ್ರೀಲಂಕಾ ಕ್ರಿಕೆಟ್ ತಂಡದಲ್ಲಿ ಕಾಣಿಸಿಕೊಂಡ ನೀನು ಲಂಕಾದ ಸಚಿನ್ ಮಾರಾಯಾ. ರಾವಣನಂತೆ ಚತುರ್ದಶ ಭುವನದಲ್ಲಣ. ಆದರೆ ನನಗೆ ಗೊತ್ತು, ನಿನ್ನ ಆಟವೆಲ್ಲ ಶುರುವಾಗಿದ್ದು ೧೯೯೫-೯೬ರ ಆಸ್ಟ್ರೇಲಿಯಾ ಪ್ರವಾಸದಲ್ಲಿ. ಆರಂಭ ಆಟಗಾರನಾಗಿ ಬಂದು, ಮೊದಲ ಹದಿನೈದು ಓವರ್‌ಗಳಲ್ಲಿ ಬೌಲರ್‌ಗಳನ್ನು ಚೆಂಡಾಡಿ, ಫೀಲ್ಡರುಗಳನ್ನು ದಣಿಸಿದೆ. ಆಗಲೇ ನೀನು ಓಪನರ್ ಆಗಿ ಕಣ್ಣು ತೆರೆದೆ. ಬಳಿಕ ೯೬ರ ವಿಶ್ವಕಪ್ಪಿನಲ್ಲಿ ಎಲ್ಲರ ಕಣ್ಣನ್ನೂ ತೆರೆಸಿದೆ. ಒಂದೇಒಂದು ಸೋಲಿಲ್ಲದೆ ವಿಶ್ವಕಪ್ ಎತ್ತಿ ಹಿಡಿಯಿತು ಲಂಕಾ ತಂಡ. ಸರಣಿ ಸರ್ವೋತ್ತಮ ಜಯಸೂರ್ಯ. ಬಳಿಕ ಓಪನರ್ ಆಗಿ ನೀ ಬಂದರೆ ಸಾಕು, ಫಳ್ಳನೆ ಸಿಡಿಯುತ್ತಿತ್ತು ಚೆಂಡು. ಬೌಲರ್‌ಗಳಲ್ಲಿ ಹೆಚ್ಚುವ ಒತ್ತಡ.
ಆಗ ಎಲ್‌ಟಿಟಿಇ ಮತ್ತು ಸರಕಾರದ ಹೋರಾಟದಲ್ಲಿ ಶ್ರೀಲಂಕಾ ಬೇಯುತ್ತಿತ್ತು. ಆದರೆ ಸಣ್ಣ ಹಳ್ಳಿಯಿಂದ ಬಂದ ನೀನು, ಲಂಕಾ ಜನತೆಗೆ ಅದೆಷ್ಟು ಸಮಾಧಾನ ನೀಡಿದೆಯೋ. ೧೯೯೭ರಲ್ಲಿ ಟೆಸ್ಟ್‌ನಲ್ಲಿ ಭಾರತ ವಿರುದ್ಧವೇ ಬರೋಬ್ಬರಿ ೩೪೦ ರನ್ನು, ಒನ್‌ಡೇಯಲ್ಲೂ ಭಾರತದ ವಿರುದ್ಧವೇ ೧೮೯ ರನ್ನು ಚಚ್ಚಿ ಅದೆಷ್ಟು ಭಾರತೀಯರ ಕೋಪಕ್ಕೆ ತುತ್ತಾದೆಯೋ. ೧೯೯೬ರಲ್ಲಿ ಮಿಸ್ ವರ್ಲ್ಡ್ ಸ್ಪರ್ಧೆ ಬೆಂಗಳೂರಿನಲ್ಲಿ ನಡೆದಾಗ ನೀನೂ ಒಬ್ಬ ತೀರ್ಪುಗಾರ. ನಿನ್ನನ್ನು ಆ ಸ್ಥಾನದಲ್ಲಿ ಕೂರಿಸಿದವರು ಆಗಿನ ಮುಖ್ಯಮಂತ್ರಿ ಜೆ.ಎಚ್. ಪಟೇಲರಾ?! ಎಷ್ಟೆಂದರೂ ನೀನೂ ಒಬ್ಬ ಹೀರೋ ತಾನೆ!
ಕಳೆದ ವಿಶ್ವಕಪ್‌ಗೆ ಶ್ರೀಲಂಕಾ ತಂಡವನ್ನು ಆಯ್ಕೆ ಮಾಡುವ ಸಮಿತಿಯ ಮುಖ್ಯಸ್ಥನಾಗಿದ್ದರೂ ನಿನ್ನನ್ನು ಆಯ್ಕೆ ಮಾಡದೆ ಬಿಟ್ಟನಲ್ಲ ಆ ಅರವಿಂದ ಡಿಸಿಲ್ವ, ಅವನ ಜತೆಗೇ ಆಡಿದವನಲ್ವಾ ನೀನು. ೧೭ ಬಾಲ್‌ಗಳಲ್ಲಿ ೫೦ ರನ್ ಹೊಡೆದೆ. ೪೮ ಬಾಲ್‌ಗಳಲ್ಲಿ ೧೦೦, ೯೯ ಬಾಲ್‌ಗಳಲ್ಲಿ ೧೫೨. ಅಯ್ಯೋ ನಿನಗಿಲ್ಲ ವೇಗಮಿತಿ. ಏಕದಿನ ಪಂದ್ಯಗಳಲ್ಲಿ ನಾಲ್ಕು ಬಾರಿ ೧೫೦ ರನ್ ಬಾರಿಸಿದವರು ಜಗತ್ತಿನಲ್ಲಿ ಇಬ್ಬರೇ. ಸಚಿನ್ ಮತ್ತು ನೀನಂತೆ. ಟೆಸ್ಟ್ ಕ್ರಿಕೆಟ್‌ನಿಂದ ನೀನು ನಿವೃತ್ತಿಯಾಗಿದ್ದು ೨೦೦೭ರಲ್ಲಿ. ಆದರೆ ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದ ಒಂದೇ ಓವರ್‌ನಲ್ಲಿ ನೀನು ಆರು ಬೌಂಡರಿಗಳನ್ನು ಚಚ್ಚಿದ್ದು ಕಾಕತಾಳೀಯವಾ? ಅಥವಾ ಬಿಡುಗಡೆಯ ರೋಷವಾ?
ಅದು ೧೯೯೬ರ ಫೆಬ್ರವರಿ ಮಾರ್ಚ್ ತಿಂಗಳು. ನಾನಾಗ ಹೈಸ್ಕೂಲಿನಲ್ಲಿದ್ದೆ. ಅಡ್‌ತೀಸ್, ಬತ್ತಾಯೀಸ್, ಚೌಂತೀಸ್ ಎಂಬ ಹಿಂದಿ ಅಂಕಿಗಳನ್ನು ನಾನು ಸರಿಯಾಗಿ ಕಲಿತದ್ದೇ ನಿಮ್ಮ ಸ್ಕೋರ್ ಕೇಳಿದ್ದರಿಂದ ಪುಣ್ಯಾತ್ಮ. ಜಯಸೂರ್ಯ, ಕಲುವಿತರಣ, ಡಿಸಿಲ್ವ, ಮಹಾನಾಮ ಹೀಗೆ ನಿಮ್ಮ ಬ್ಯಾಟಿಂಗ್‌ನ ಮಹಾಪಡೆ ಮುನ್ನುಗ್ಗುತ್ತಿರಬೇಕಾದರೆ, ನಮ್ಮ ಮನೆಯ ರೇಡಿಯೊದ ಬ್ಯಾಟರಿ ಬೇಗ ಖಾಲಿ ಆಗಿಬಿಡುತ್ತಿತ್ತು! ಹೊಸ ಬ್ಯಾಟರಿ ಹಾಕುವಾಗೆಲ್ಲ, ಅಪ್ಪ ಅದರ ಮೇಲೆ ದಿನಾಂಕ ಬರೆಯುತಿದ್ದರು. ಆದರೆ ಶ್ರೀಲಂಕಾ ಪಡೆಯ ಬ್ಯಾಟಿಂಗ್ ಅಬ್ಬರಕ್ಕೆ ಅದು ಹೆಚ್ಚು ದಿನ ಉಳಿಯುತ್ತಲೇ ಇರಲಿಲ್ಲ!
ನಲುವತ್ತೆರಡಕ್ಕೆ ಕಾಲಿಡುತ್ತಿರುವ ನೀನಿನ್ನು ಇಂಗ್ಲೆಂಡ್‌ನಲ್ಲೂ ಚೆನ್ನಾಗಿ ಆಡುತ್ತೀಯ? ಗೊತ್ತಿಲ್ಲ. ಹೆಸರು ಹಾಳು ಮಾಡಿಕೊಳ್ಳಬೇಡ. ಬೆಂಗಳೂರಿಗೆ ಬಂದರೆ ಮನೆಗೆ ಬಾ. ಬೈ ಬೈ.
ಕೆಂಡಸಂಪಿಗೆಯಲ್ಲಿ ಪ್ರಕಟಿತ
April 10, 2011
ಕಲ್ಯಾಣಮಸ್ತು
ಪ್ರಿಯ ಬಂಧುಮಿತ್ರರೆ,
ಬೆಂಗಳೂರಿಗೆ ಬಂದು ನಾನು ಮಾಡಿಕೊಂಡ ಒಂದೇಒಂದು ಸೈಟು ಇದು. ಈಗ ಮದುವೆ ಮಾಡಿಕೊಳ್ಳುತ್ತಿದ್ದೇನೆ. ಧೈರ್ಯಕ್ಕೆ ನೀವು ಜತೆಗಿರಿ !