ಎದೆ ಗುಂಡಿಗೆ ಕೊಟ್ಟು ಕೇಳಿಸಿಕೊಳ್ಳುವಿರಾ ಬಡಿತ....
ಪದಗಳು ಮುಗಿದಿವೆ. ಗಂಟಲಲ್ಲಿ ಬೆಂಕಿಯಿದೆ. ತುಟಿಯಲ್ಲಿ ನೆತ್ತರಿದೆ. ರಾಕ್ ಸಾಂಗ್ ಹೊಮ್ಮುತ್ತಿರುವಂತೆ, ವಾಲ್ಯೂಮ್ ಏರಿಸಿದ ಕೂಡಲೇ ಟಿವಿ ಹೊಡೆದುಕೊಂಡಿದೆ. ತಾಜ್ ಹೋಟೆಲ್‌ನ ಆರನೇ ಮಹಡಿಯಲ್ಲಿದ್ದವರಿಗೆ ಆಗಲೂ ಗೊತ್ತಿಲ್ಲ, ಅದು ಮೆಷಿನ್‌ಗನ್‌ನ ಎದೆಬಡಿತವೆಂದು. ಅವರೂ ಗುಂಡಿನ ಸದ್ದನ್ನು ಕೇಳಿದ್ದು ಟಿವಿ, ಥಿಯೇಟರ್‌ಗಳಲ್ಲಿ ಮಾತ್ರ. ಇಂಗ್ಲೆಂಡ್‌ನ ವಿರುದ್ಧ ಐದನೇ ಪಂದ್ಯವನ್ನು ಗೆದ್ದು ಕೊಟ್ಟ ವೀರೂನ ವೀರಾವೇಶದ ಸಂಭ್ರಮದಲ್ಲಿ ನಾವೆಲ್ಲ ಸುಖ ನಿದ್ದೆಗೆ ಜಾರುವಷ್ಟರಲ್ಲಿ ಸುದ್ದಿ ವಾಹಿನಿಗಳು ಬಾಯಿಬಾಯಿ ಹೊಡೆದುಕೊಳ್ಳಲಾರಂಭಿಸಿದವು. ಬೆಂಗಳೂರಿನ ತುಂತುರು ಮಳೆಯಲ್ಲಿ ಕುಟುಕುಟು ಚಳಿಯಲ್ಲಿ ಮುದ್ದೆಯಾಗಿರುವ ನಮಗೆ, ಮುಂಬಯಿಯಲ್ಲಿ ಹೊತ್ತಿರುವ ಬೆಂಕಿ ಚುರುಕು ಮುಟ್ಟಿಸಿದೆಯೆ? ಅಥವಾ ಐದನೇ ಪಂದ್ಯವನ್ನೂ ಇಂಗ್ಲೆಂಡ್ ಸೋತಾಗ ‘ಮತ್ತದೇ ಹಳೇ ಕತೆ -ಇಂಗ್ಲೆಂಡ್‌ಗೆ ಸೋಲು !’ ಎನ್ನುವಂತೆ ಇದು ಮಾಮೂಲು ಅನ್ನುತ್ತೇವೆಯೆ?!
ಬ್ರಿಟನ್‌ನ ಮಿಲಿಯಾಧೀಶ, ೭೩ರ ಪ್ರಾಯದ ಆಂಡ್ರಿಯಾಸ್ ಲಿವ್ರಾಸ್ ನಾನಾ ತರಹದ ವಾಹನಗಳನ್ನು ಬಾಡಿಗೆ ಕೊಡುವ ದೊಡ್ಡ ಕಂಪನಿಯ ದೊರೆ. ಮುಂಬಯಿಯಲ್ಲಿ ಅತ್ಯುತ್ತಮ ಊಟ-ತಿಂಡಿ ತಾಜ್‌ನಲ್ಲಿ ಸಿಗುತ್ತದೆ ಅಂತ ಬುಧವಾರ ಸಂಜೆ ಹೋಗಿದ್ದರು. ‘ಟೇಬಲ್ ಎದುರು ಕುಳಿತಿದ್ದೆನಷ್ಟೆ. ಕಾರಿಡಾರ್‌ನಿಂದ ಮೆಷಿನ್‌ಗನ್ ಸದ್ದು. ತಕ್ಷಣ ಟೇಬಲ್ ಕೆಳಗೆ ತೂರಿಕೊಂಡೆವು. ಬಂದವರು ಲೈಟ್ ಆರಿಸಿದರೂ, ಮೆಷಿನ್‌ಗನ್‌ಗಳು ಮೊಳಗುತ್ತಲೇ ಇದ್ದವು. ಅಲ್ಲಿಂದ ನಮ್ಮನ್ನು ಅಡುಗೆಕೋಣೆಗೆ, ನೆಲಮಹಡಿಗೆ, ಅಲ್ಲಿಂದ ಅತಿಥಿಗಳನ್ನು ಸ್ವಾಗತಿಸುವ ಈ ಕೋಣೆಗೆ. ಸುಮಾರು ೧೦೦೦ ಜನ ಇಲ್ಲಿರಬಹುದು. ಯಾರೂ ಏನನ್ನೂ ಹೇಳುವುದಿಲ್ಲ, ಬಾಗಿಲುಗಳಿಗೆ ಹೊರಗಿನಿಂದ ಬೀಗ ಜಡಿಯಲಾಗಿದೆ. ಹೋಟೆಲ್ ಉದ್ಯೋಗಿಗಳು ನೀರು-ಸ್ಯಾಂಡ್‌ವಿಚ್‌ಗಳನ್ನು ಕೊಡುತ್ತಾ ಸಹಾಯ ಮಾಡುತ್ತಿದ್ದಾರೆ. ಆದರೆ ನಿಜವಾಗಿ ಯಾರೂ ಏನನ್ನೂ ತಿನ್ನುತ್ತಿಲ್ಲ. ಈಗ ಎಲ್ಲ ತಣ್ಣಗಿದೆ, ೪೫ ನಿಮಿಷಗಳ ಹಿಂದೆ ಬಾಂಬ್ ಸ್ಫೋಟಿಸಿತ್ತು’ ಹೀಗೆಂದು ಬುಧವಾರ ರಾತ್ರಿ, ಗುರುವಾರ ಬೆಳಗ್ಗೆ ಬಿಬಿಸಿಗೆ ಫೋನ್ ಮಾಡಿದ್ದ ; ಸುರಕ್ಷಿತವಾಗಿದ್ದೇನೆಂದು ಮಗನಿಗೆ ಫೋನ್ ಮೂಲಕ ತಿಳಿಸಿದ್ದ ಆಂಡ್ರಿಯಾಸ್. ಶುಕ್ರವಾರ ಬೆಳಗ್ಗೆ ಆತ ಸತ್ತ ಸುದ್ದಿ ಖಾತ್ರಿಯಾಗಿತ್ತು.
ಮಾಧ್ಯಮ ಪ್ರತಿನಿಧಿ ಬ್ರಿಟಿಷ್ ಪ್ರಜೆ ಅಲಾನ್ ಜೋನ್ಸ್ ಟ್ರೈಡೆಂಟ್ ಒಬೆರಾಯ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ. ಸಹೋದ್ಯೋಗಿಯೊಂದಿಗೆ ಲಿಫ್ಟ್‌ನಲ್ಲಿ ಸ್ವಾಗತ ಕೋಣೆಗೆ ಇಳಿದು, ಬಾಗಿಲು ತೆರೆದುಕೊಳ್ಳುತ್ತಿದ್ದಂತೆ ಭಾರೀ ಶಬ್ದ. ಲಿಫ್ಟ್‌ನಲ್ಲಿದ್ದ ನಾಲ್ವರಲ್ಲಿ ಜಪಾನೀಯನೊಬ್ಬನಿಗೆ ಗುಂಡು ಬಿದ್ದಿತ್ತು. ‘ನಾನು ತಕ್ಷಣ ಲಿಫ್ಟ್‌ನ ಬಾಗಿಲು ಮುಚ್ಚಿಕೊಳ್ಳುವ ಗುಂಡಿ ಅದುಮಿದೆ. ಗುಂಡು ತಿಂದವನ ಕಾಲು ಬಾಗಿಲಿಗೆ ಅಡ್ಡವಾಗಿತ್ತು. ಅಯ್ಯೋ ಏನು ಮಾಡಲಿ? ತಳ್ಳಿದೆ. ಮೇಲಿನ ಮಹಡಿಯಲ್ಲಿರುವ ರೂಮಿಗೆ ನಾವು ಹಿಂದಿರುಗಿದಾಗ, ನೆಲ ಮಹಡಿಯಲ್ಲಿರುವ ಸುರಕ್ಷಿತ ಜಾಗಕ್ಕೆ ಹೋಗುವ ಸೂಚನೆ ನಮಗೆ ಬಂತು. ಅಲ್ಲಿ ನಾವು ತುಂಬ ಜನ ಸೇರಿದ್ದೆವು. ಸುಮಾರು ಒಂದು ಗಂಟೆಯ ಬಳಿಕ ಪೊಲೀಸರು ಹೊರಗೆ ಕರೆದೊಯ್ದರು’ ಎಂದು ವಿವರಿಸುತ್ತಾನೆ ಆತ.
ಆಸ್ಟ್ರೇಲಿಯಾದ ‘ಮೊಬಿ ಎಕ್ಸ್‌ಪ್ರೆಸ್ ’ಕಂಪನಿಯ ಮಾಲೀಕನ ೨೨ ವರ್ಷದ ಮಗ ಯುನ್ ಚೈನ್ ಲಾಯ್‌ಗೆ ಎಚ್ಚರಾದದ್ದು ಗುಂಡಿನ ಮಳೆಯ ಸದ್ದು ಕೇಳತೊಡಗಿದಾಗ. ಸಿಡ್ನಿಯಲ್ಲಿರುವ ಅಮ್ಮನ ಜತೆ ಮಾತಾಡಿ ತಾನು ಒಬೆರಾಯ್ ಹೋಟೆಲ್‌ನಿಂದ ಹೊರಗೆ ಬಂದಿರುವುದಾಗಿ ಹೇಳಿದ್ದಾನೆ. ನಂತರ ಸಂಪರ್ಕಕ್ಕೆ ಸಿಗುತ್ತಿಲ್ಲ. ‘ಅಯ್ಯೊ ಅವನದ್ದು ಮೊದಲ ವಿದೇಶ ಪ್ರಯಾಣ. ಭಾವೋದ್ವೇಗಕ್ಕೆ ಒಳಗಾಗಬೇಡ ಅಂದಿದ್ದೀವಿ. ಅವನು ಬಹಳ ಸೆನ್ಸಿಬಲ್. ಸಂದರ್ಭಗಳನ್ನು ನಿಭಾಯಿಸುತ್ತಾನೆ ’ಅಂತ ಹೇಳುತ್ತಲೇ ಉಮ್ಮಳಿಸುತ್ತಿದ್ದಾಳೆ ಅಮ್ಮ.
ಸ್ವಾಗತ ಕೋಣೆಯಲ್ಲಿ ಬುಲೆಟ್‌ಗಳು ಹಾರಾಡುತ್ತಿದ್ದರೆ, ಆಸ್ಟ್ರೇಲಿಯಾದ ನಟಿ ಬ್ರೂಕ್ ಸ್ಯಾಚೆಲ್ ಬಾತ್‌ರೂಂನಲ್ಲಿ ಸಿಲುಕಿಕೊಂಡಿದ್ದಳು. ಸಿಗರೇಟ್‌ಗೆಂದು ಹೋಟೆಲ್‌ನ ಮುಖ್ಯ ದ್ವಾರದ ಬಳಿ ಹೋದ ಆಕೆ, ಹಿಂತಿರುಗುವಾಗ ಸ್ವಾಗತ ಕೋಣೆ ಬಿಟ್ಟು, ನೆಲ ಮಹಡಿಯಲ್ಲಿರುವ ಬಾತ್‌ರೂಂ ಬಳಿಯಾಗಿ ಬರುತ್ತಿದ್ದಳು. ಆಗಲೇ ಶುರುವಾಯಿತು ಸ್ವಾಗತ ಕೋಣೆಯಲ್ಲಿ ದಾಳಿ. ಆಕೆ ಇತರ ಆರು ಜನರೊಂದಿಗೆ ಬಾತ್‌ರೂಂನಲ್ಲಿ ೪೫ ನಿಮಿಷಗಳ ಕಾಲ ಬಚ್ಚಿಟ್ಟುಕೊಂಡಳು. ಆ ಮಧ್ಯೆಯೂ ಹೊರಹೋಗಲು ಯತ್ನಿಸಿದ ಕೆಲವರು, ಕಾರಿಡಾರ್‌ಗಳಲ್ಲಿ ಹೆಣಗಳು ಬೀಳುತ್ತಿವೆ ಅಂದರಂತೆ. ಬಳಿಕ ಹೋಟೆಲ್ ಉದ್ಯೋಗಿಗಳು ಬಂದು ಅವರನ್ನು ರಕ್ಷಿಸಿದರು. ಬಚಾವಾಗುವಾಗ ಕಾರಿಡಾರ್‌ಗಳಲ್ಲಿ , ಮೆಟ್ಟಿಲುಗಳಲ್ಲಿ ಶವಗಳು ಬಿದ್ದಿದ್ದವು ಅಂದಿದ್ದಾಳೆ ಆಕೆ. ತಾಜ್ ಹೋಟೇಲಿನಲ್ಲಿ ರೂಮ್ ಕಾದಿರಿಸಿಕೊಂಡು ಮುಂಬಯಿ ವಿಮಾನ ಏರಬೇಕಾಗಿದ್ದ್ ಕ್ರಿಕೆಟಿಗ ಶೇನ್ ವಾರ್ನ್ ಸಿಂಗಾಪುರದಲ್ಲೇ ತತ್ತರಿಸಿದರು. ಐನೂರು ರೂಪಾಯಿಗಳಿದ್ದ್ದ ಪರ್ಸ್‌ನ್ನೋ ಮೊಬೈಲ್‌ನ್ನೋ ಕಳೆದುಕೊಂಡರೆ ಚಡಪಡಿಸುವ ನಮಗೆ, ಪರದೇಶದಲ್ಲಿ ಸಾವಿನ ಬಾಯಿಯೊಳಗೆ ತಲೆಯಿಟ್ಟು ಬರುವ ಅನುಭವ ಎಂಥದ್ದೆಂದು ಚೆನ್ನಾಗಿ ಅರ್ಥವಾಗಬೇಕೇ? ಆಸ್ಟ್ರೇಲಿಯಾದಲ್ಲಿ ಭಯೋತ್ಪಾದಕರಿಗೆ ನೆರವಾದ ಆರೋಪದಲ್ಲಿ ಬಂಧಿನಾಗಿದ್ದ ಹನೀಫ್ ಬಳಿಕ ಬಚಾವಾಗಿ ಬೆಂಗಳೂರಿಗೆ ಬಂದ ದಿನದ ಸಂಭ್ರಮ ನೆನಪಿಸಿಕೊಳ್ಳಿ. ಆಗ, ಇಲ್ಲಿನ ಅನಾಹುತಕಾರಿ ದೃಶ್ಯಗಳನ್ನು ನೋಡಿ,ಯಾವುದೋ ದೇಶದಲ್ಲಿ ಚಡಪಡಿಸುತ್ತಿರುವ ಒಡನಾಡಿ ಜೀವಗಳ ಚಹರೆ ನಮ್ಮ ಕಣ್ಣೆದುರು ಬಂದೀತು.
‘ಮಾಧ್ಯಮಗಳಿಂದ ಉಗ್ರವಾದಕ್ಕೆ ವಿಶೇಷ ಪ್ರಚಾರ ಸಿಗುತ್ತಿದೆ ’ ಎಂಬ ಮಾತಿಗೆ ಪ್ರತಿಯಾಗಿ ‘ಉಗ್ರರ ಫೋಟೊಗಳನ್ನು ತೆಗೆದದ್ದು ಮಾಧ್ಯಮಗಳೇ’ ಎಂಬ ಹೆಗ್ಗಳಿಕೆಯೊಂದಿಗೆ ಚರ್ಚೆ ನಡೆದಿದೆ. ಆದರೆ ಎರಡು ದಿನಗಳು ಕಳೆಯುವಷ್ಟರಲ್ಲಿ, ಎಲ್ಲಿ ಚುನಾವಣೆಗಳಿವೆಯೋ ಅಲ್ಲಿ ಭಯೋತ್ಪಾದನೆಯ ಲಾಭ ಪಡೆಯುವ ಕಾರ್‍ಯಾಚರಣೆ ಆರಂಭವಾಗುತ್ತದೆ . ನೆತ್ತರಲ್ಲಿ ಅದ್ದಿರುವ ಸ್ಥಳಗಳಿಗೆ ಚೆಂದ ಇಸ್ತ್ರಿ ಮಾಡಿದ ಅಚ್ಚ ಬಿಳಿ ಅಂಗಿಯಲ್ಲಿ ನಿಧಾನವಾಗಿ ನಡೆದು ಬರುವ ರಾಜಕಾರಣಿಗಳನ್ನು ನೋಡಿದರೆ, ಎಂಥವನಿಗಾದರೂ ವಾಕರಿಕೆ ಬರಬೇಕು. ಆದರೆ ಮಹಾನ್ ಮುಂಬಯಿ ಪ್ರೇಮಿ, ಅನ್ಯ ರಾಜ್ಯದವರ ವಿರುದ್ಧವೇ ಕತ್ತಿ ಮಸೆಯುತ್ತಿದ್ದ ರಾಜ್ ಠಾಕ್ರೆ ಯಾವ ಟಿವಿಯಲ್ಲೂ ಕಣ್ಣಿಗೆ ಬೀಳಲಿಲ್ಲ !
ಮೊನ್ನೆಮೊನ್ನೆ ಬಿಡುಗಡೆಯಾದ ‘ಮುಂಬೈ ಮೇರಿ ಜಾನ್’-‘ವೆಡ್‌ನೆಸ್‌ಡೇ’ ಸಿನಿಮಾಗಳು ನೆನಪಿನಿಂದ ಮಾಸುವ ಮೊದಲೇ ಉಗ್ರರ ಸಿನಿಮಾ ಬಿಡುಗಡೆಯಾಗಿದೆ. ಆದರೆ ನಮ್ಮ ದುರದೃಷ್ಟ, ಅದರ ನಕಲಿ ಸಿಡಿಗಳು ಎಲ್ಲೂ ಸಿಗುವುದಿಲ್ಲ! ಹಾಗಂತ ಅವರ ಸಿನಿಮಾ ಯಾವುದರ ನಕಲಿಯೂ ಆಲ್ಲ. ಅದು ಒರಿಜಿನಲ್, ಅವರಷ್ಟೇ ಮಾಡಬಹುದಾದ್ದು ಅನ್ನುವಂಥದ್ದು. ‘ವೆಡ್‌ನೆಸ್‌ಡೇ’ ಚಿತ್ರದಲ್ಲಿ ಆಮ್ ಆದ್ಮೀ ನಾಸಿರುದ್ದೀನ್‌ಶಾ, ಸೆರೆಯಲ್ಲಿದ್ದ ನಾಲ್ವರು ಉಗ್ರರನ್ನು ಶಿಕ್ಷಿಸಲು ಎಷ್ಟು ಕಷ್ಟ ಪಟ್ಟ?! ತಾನು ಉಗ್ರಗಾಮಿಯೆಂದು ಬಿಂಬಿಸಿಕೊಂಡು, ಸೆರೆಯಲ್ಲಿದ್ದವರನ್ನು ಪೊಲೀಸರ ಮೂಲಕವೇ ಕರೆಸಿಕೊಂಡು ಬಾಂಬ್ ಸ್ಫೋಟಿಸಿ ಉಗ್ರರನ್ನು ಮುಗಿಸಲು ಯತ್ನಿಸುತ್ತಾನೆ. ಕಣ್ಣೆದುರೇ ಮನೆ ಹೊಕ್ಕ ಉಗ್ರರನ್ನು ಸದೆಬಡಿಯಲು ನಾವು ಪಡುತ್ತಿರುವ ಪರದಾಟ ನೋಡಿದರೆ, ಸಾಮಾನ್ಯ ಪ್ರಜೆಯೊಬ್ಬ ಹೀಗೂ ಮಾಡಬಹುದು ಅಂತ ತೋರಿಸಿದ ವೆಡ್‌ನೆಸ್‌ಡೇ ಸಿನಿಮಾ ಬಾಲಿಶವಾಗಿ ಕಾಣುತ್ತಿದೆ. ನಾವು ಹಿಂದಿದ್ದೇವೆ. ಎಷ್ಟೆಂದರೆ ನಮ್ಮ ಹಿಂದಿನಿಂದ ಯಾವ ಉಗ್ರರು ಬರಲಾರರು ! ತೆರೆದ ಎದೆಯಲ್ಲಿ ಹೋಗಿ ಪ್ರಾಣ ಕಳೆದುಕೊಂಡ ಭಯೋತ್ಪಾದನಾ ನಿಗ್ರಹ ದಳದ ಹಿರಿಯ ಅಧಿಕಾರಿಗಳ ಹೆಂಡತಿಮಕ್ಕಳು ಎದೆಎದೆ ಬಡಿದುಕೊಂಡು ಕಣ್ಣೀರುಗರೆಯುತ್ತಿದ್ದಾರೆ. ನಮ್ಮ ನೇತಾರರು ನಿಜಕ್ಕೂ ಮುಖ ಮುಚ್ಚಿಕೊಂಡು ಓಡಾಡಬೇಕು.
ದಾವೂದ್ ಇಬ್ರಾಹಿಂ ಕೈವಾಡದಲ್ಲಿ ೧೯೯೭ರಲ್ಲಿ ೨೫೦ಕ್ಕೂ ಹೆಚ್ಚು ಜನರ ಜೀವ ಹಿಸುಕುವಲ್ಲಿಂದ ಶುರು; ಮುಂಬಯಿಯಲ್ಲಿ ಸರಾಸರಿ ವರ್ಷಕ್ಕೊಂದು ಸಾವಿನ ಹಬ್ಬ. ಯಾವ ಸರಕಾರಗಳೂ ತಡೆಯಲಾರದ್ದನ್ನು ಉಗ್ರರು ಮಾಡುತ್ತಿದ್ದಾರೆ. ಅವರಿಗೆ ತಡೆಯೂ ಇಲ್ಲ, ಯಾವ ಭಿಡೆಯೂ ಇಲ್ಲ. ರಾತ್ರಿ ಒಂದು ಗಂಟೆ ಕರೆಂಟು ಕೈಕೊಟ್ಟರೆ ನಡೆಯುವ ಸರಗಳ್ಳತನಗಳನ್ನು, ಮನೆಯಲ್ಲಿದ್ದ ಒಂಟಿ ಮಹಿಳೆ ಮಟಮಟ ಮಧ್ಯಾಹ್ನವೇ ಕೊಲೆಗೀಡಾಗುವುದನ್ನು ತಡೆಯಲಾಗದ ನಮ್ಮ ಸರಕಾರಗಳು, ರಕ್ಕಸ ಉಗ್ರರನ್ನು ಮಟ್ಟ ಹಾಕುತ್ತೇವೆ ಎಂದರೆ ನೀವು ನಂಬುತ್ತೀರಾ?