January 03, 2008

ಕುರುಕ್ಷೇತ್ರಕ್ಕೊಂದು ಆಯೋಗ

ಕ್ಷಗಾನ ತಾಳಮದ್ದಳೆಯಲ್ಲಿ ರಸಪೂರ್ಣ ಅರ್ಥಗಾರಿಕೆಗೆ ಹೆಸರಾದವರು ದೇರಾಜೆ ಸೀತಾರಾಮಯ್ಯ . ಅವರು ಬರೆದ ‘ಶ್ರೀರಾಮಾಯಣ ಚರಿತಾಮೃತಂ’ ಮತ್ತು ‘ಶ್ರೀಮನ್ಮಹಾಭಾರತ ಕಥಾಮೃತಂ’ ಪುಸ್ತಕಗಳು ಅಪೂರ್ವ ಒಳನೋಟಗಳ ರಾಮಾಯಣ -ಮಹಾಭಾರತದ ಮರುಸೃಷ್ಟಿಗಳು. ತಾಳಮದ್ದಳೆಯ ಕ್ಷೇತ್ರದ ಉತ್ತುಂಗದಲ್ಲಿದ್ದಾಗಲೇ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ ಇವರು, ನಂತರದ ೧೪ ವರ್ಷಗಳ ಬದುಕಿನಲ್ಲಿ ಬರೆದ ಪುಸ್ತಕಗಳಲ್ಲಿ ‘ಕುರುಕ್ಷೇತ್ರಕ್ಕೊಂದು ಆಯೋಗ’ವೂ ಒಂದು. ೧೯೮೧ರಲ್ಲಿ ಪ್ರಕಟವಾಗಿದ್ದ ಆ ಪುಸ್ತಕ ಕಳೆದ ವರ್ಷ ದ್ವಿತೀಯ ಮುದ್ರಣ ಕಂಡಿದೆ.

‘ಆಯೋಗವು ಕಲ್ಪಿತ ಮಾಧ್ಯಮವೇ ಆಗಿದ್ದರೂ ಅಲ್ಲಿ ವಿಚಾರಿಸಲ್ಪಡುವವರು ಮಹಾಭಾರತದ ಆ ಕಾವ್ಯಲೋಕದ ದೇಶಕಾಲಗಳಲ್ಲಿ ಅಸ್ತಿತ್ವವನ್ನುಳ್ಳವರು, ವಿವೇಚಿಸಲ್ಪಡುವ ಪುರಾವೆಗಳು, ಅದೇ ಅಲ್ಲಿನ ಪ್ರಾಸಂಗಿಕ ಘಟನೆಗಳು, ವಿಚಾರಮುಖದಿಂದ ವ್ಯಕ್ತಗೊಳ್ಳುವ ವ್ಯಕ್ತಿ ಸಹಜವಾದ ಅನಿಸಿಕೆಗಳು, ಪ್ರಸ್ತುತ ವೈಚಾರಿಕತೆಯ ಚಿಂತನೆಗಳು’ ಎನ್ನುತ್ತಾರೆ ಅವರು. ಧರ್ಮಪುರುಷನಾದ ಯಮನೇ ನ್ಯಾಯಮೂರ್ತಿಯಾಗಿರುವ ಈ ಆಯೋಗದ ಎದುರು, ಮಹಾಭಾರತದ ಮುಖ್ಯ ಪಾತ್ರಗಳು ಬಂದು ಮಾತಾಡುತ್ತವೆ. ಕೊನೆಯ ಮಾತು ಮಹಾಭಾರತವನ್ನು ಸೂತಪುರಾಣಿಕರ ಬಾಯಿಯಿಂದ ಕೇಳಿದ ಶೌನಕರದ್ದು ! ವಿಶೇಷವೆಂದರೆ ಎಲ್ಲ ಪಾತ್ರಗಳ ಹೇಳಿಕೆಗಳ ಕೊನೆಗೆ- ಪ್ರಾಸ್ತಾವಿಕ ಆರೋಪಗಳು, ಸಾಂದರ್ಭಿಕ ಆರೋಪಗಳೆಂದು ಪಟ್ಟಿ ಮಾಡಿ ಕಾರ್ಯಸಂಯೋಜಕ ಎಂಬ ಪಾತ್ರದ ಮೂಲಕ ಎಲ್ಲ ಹೇಳಿಕೆಗಳ ಪರಾಮರ್ಶೆಯನ್ನೂ ಮಾಡಲಾಗಿದೆ. ಒಟ್ಟಿನಲ್ಲಿ ಸೀತಾರಾಮಯ್ಯರು ಎಲ್ಲ ಪಾತ್ರಗಳಲ್ಲೂ ಬಂದು ಇಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವು ಪಾತ್ರಗಳ (ಯಕ್ಷಗಾನ ತಾಳಮದ್ದಳೆಯಲ್ಲಿ ಮಾಮೂಲಾಗಿ ಪ್ರಸ್ತಾಪವಾಗುವುದನ್ನು ಹೊರತುಪಡಿಸಿ)ಹೇಳಿಕೆಗಳ ಆಯ್ದ ಭಾಗಗಳ ಮೊದಲ ಕಂತು ಇಲ್ಲಿದೆ.
ದುರ್ಯೋಧನ
ಅಂಬಿಕೆಯ ಮಗ ಧೃತರಾಷ್ಟ್ರನು ಹುಟ್ಟು ಕುರುಡ, ಸಿಂಹಾಸನಕ್ಕೆ ಅನಧಿಕಾರಿ. ಅಂಬಾಲಿಕೆಯ ಪುತ್ರ ಪಾಂಡು ಮಹಾರೋಗಿ, ಪಟ್ಟಕ್ಕೆ ಆಗದು. ವಿದುರನು ದಾಸೀಪುತ್ರ, ಹೇಗೆ ಅರಸನಾಗುವುದು? ಆದುದರಿಂದ ‘ಮಧ್ಯಮಾರ್ಹತೆ’ ಎಂದೇನೋ ಕಾರಣ ಹುಡುಕಿ ಭೀಷ್ಮರೇ ಮುಂದೆ ನಿಂತು ಪಾಂಡುವಿಗೆ ಪಟ್ಟ ಕಟ್ಟಿದರು. ದಾಶರಾಜ ಪುತ್ರಿಯಾದ ಸತ್ಯವತಿಯು ಶಂತನು ಚಕ್ರವರ್ತಿಗೆ ವಿವಾಹಯೋಗ್ಯಳಾಗಿ ಮಹಾರಾಜ್ಞಿಯಾದಳು. ಅವಳ ಮಕ್ಕಳು ಮಹಾರಾಜರಾಗಿ ಸಿಂಹಾಸನವನ್ನೂ ಏರಿದರು. ಆದರೆ ಸಮರ್ಥನಿದ್ದರೂ ದಾಸೀಪುತ್ರನೆಂಬ ಕಾರಣಕ್ಕೆ ವಿದುರನು ಸಿಂಹಾಸನಕ್ಕೆ ಉಪೇಕ್ಷಿಸಲ್ಪಟ್ಟನು. ಧೃತರಾಷ್ಟ್ರ, ಪಾಂಡು ಈ ಇಬ್ಬರೂ ಸಿಂಹಾಸನಕ್ಕೆ ಆಗದವರು ಎಂದು ವೇದವ್ಯಾಸರೇ ಹೇಳಿದ್ದರಂತೆ. ಆದರೂ ಪಾಂಡುವಿಗೆ ಪಟ್ಟವಾಯಿತು. ಇಬ್ಬರೂ ಆಗದವರು, ಅವರಲ್ಲೇ ಒಬ್ಬನು ಬೇಕೆಂದಿದ್ದರೆ ಹಿರಿಯನೇ ಆಗಬಹುದಿತ್ತು, ಆಗಲಿಲ್ಲ !
ಸಿಂಹಾಸನಕ್ಕೆ ಅಯೋಗ್ಯರಾದವರು ವಿವಾಹಕ್ಕೂ ಅಯೋಗ್ಯರು, ಯಾಕೆ?ಅಯೋಗ್ಯತೆಯು ಮುಂದೆಯೂ ಅವರ ಸಂತತಿಯಲ್ಲಿ ಹರಿದು ಬರಬಾರದೆಂದು. ಅದಕ್ಕಾಗಿಯೇ ಅಲ್ಲವೇ ‘ಅಂಗವಿಕಲರಿಗೂ, ಮಹಾರೋಗಿಗಳಿಗೂ ಮದುವೆ ಮಾಡಿಸಬಾರದು’ ಎನ್ನುವುದು. ರಾಜಮನೆತನಗಳ ವಿಷಯದಲ್ಲಂತೂ ಅವುಗಳನ್ನು ಗಂಭೀರವಾಗಿ ಪರಿಗಣಿಸಬೇಕಿತ್ತು. ಆದರೂ ನನ್ನ ಅಪ್ಪನಿಗೂ ಚಿಕ್ಕಪ್ಪನಿಗೂ ಭೀಷ್ಮರು ಮದುವೆ ಮಾಡಿಸಿದರು.

*******
ಅಷ್ಟರಲ್ಲಿ ತಮ್ಮನಾದ ದುಶ್ಯಾಸನನು ಎದ್ದು ಅವಳ ಸೆರಗನ್ನು ಜಗ್ಗಿದ. ಅದು ಬೇಡವಿತ್ತು. ಆದರೂ ಅವನು ಒಂದಿಷ್ಟು ದುಡುಕಿಬಿಟ್ಟ. ‘ದ್ರೌಪದಿಯ ವಸ್ತ್ರಾಪಹಾರ’ ಎಂದು ವರ್ಣಿಸಿ ಹೇಳುವಷ್ಟು ಏನೂ ನಡೆಯಲಿಲ್ಲ. ಆದರೂ ಅಷ್ಟೇ ಆದರೂ ನಮ್ಮದು ಅಪರಾಧವೆಂದೇ ಹೇಳಬಹುದು. ಪ್ರಾಮಾಣಿಕವಾಗಿ ಅದನ್ನು ಒಪ್ಪಿಕೊಳ್ಳಲೇಬೇಕು. ಆ ಅಪರಾಧಕ್ಕೆ ಅವಳ ದಿಟ್ಟತನವೂ ಒಂದು ಕಾರಣವಾಗಿ ಪರಿಣಮಿಸಿದೆ ಎಂಬುದನ್ನು ಸ್ಮರಿಸಿಕೊಳ್ಳಬೇಕು.
*******
ಕುರುಕ್ಷೇತ್ರದ ಯುದ್ಧದಲ್ಲಿ ಸತ್ತವರ ಬಂಧುಗಳು ಅತ್ತಿರಬಹುದು. ಗೆದ್ದವರಿಗೆ ರಾಜಪಟ್ಟವು ಸಿಕ್ಕಿರಬಹುದು. ಆದರೆ ಹುಟ್ಟಿ ಸಾಯುವವರೆಗೆ ಚೆನ್ನಾಗಿ ಬಾಳಿ ಬದುಕಿದವನು ನಾನು. ಅವರೂ ಬದುಕಿದರು. ಹೇಗೆ ಬಾಳಿದರೊ? ಅದನ್ನು ಇತಿಹಾಸ ಹೇಳಬೇಕು.

ಭೀಷ್ಮ
ನಮ್ಮ ತಂದೆ ಬಯಸಿದ್ದ ಆ ಹೆಣ್ಣು (ಯೋಜನಗಂಧಿ)ಅಪೂರ್ವವಾದ ತನ್ನ ತನುಗಂಧದಿಂದಲೇ ದಿವ್ಯ ಸಂಸ್ಕಾರದ ಪ್ರಭಾವವನ್ನು ವ್ಯಕ್ತಪಡಿಸುತ್ತಿರುವುದರಿಂದ ಮಹಾರಾಜ್ಞಿಯಾಗಲು ತಕ್ಕವಳೆಂದೇ ಚಕ್ರವರ್ತಿಗಳು ಮನಗಂಡಿರಬಹುದಾದ್ದರಿಂದ ಅಕುಲೀನತೆಯ ಪ್ರಶ್ನೆಗೆ ಅವಕಾಶವೆಲ್ಲಿ? ಈ ಮದುವೆಯು ಅಸಾಧುವಾದುದೇ ಆಗಿದ್ದರೆ, ನಮ್ಮ ತೀರ್ಥರೂಪರ ವಿಶೇಷವಾದ ಅಂತಃಶಕ್ತಿಯು ಹ್ರಾಸವಾಗಬೇಕಿತ್ತು. ಹಾಗೇನೂ ಆದಂತೆ ನನಗನಿಸುವುದಿಲ್ಲ. ‘ಸ್ವೇಚ್ಚಾಮರಣಿಯಾಗು’ ಎಂದು ನನ್ನನ್ನು ಹರಸಿ ಅನುಗ್ರಹಿಸಿದ್ದಾರೆ.

ಕರ್ಣ
‘ಕ್ಷತ್ರಿಯನಲ್ಲದ ಯಾರಿಗೂ ಇಂತಹ ಸಹಿಷ್ಣುತೆ ಬರಲಾರದು’ ಎಂದು ಹೇಳಿದ ಪರಶುರಾಮರು ಸಿಟ್ಟಿನಿಂದ ಶಾಪ ಕೊಟ್ಟರೂ, ಕ್ಷತ್ರಿಯನಿರಬೇಕು ಎಂದುದರಿಂದ ಕೌತುಕಪ್ರದವಾದ ಸಮಾಧಾನವೇ ಆಯಿತು.
ಪರಶುರಾಮ-ದ್ರೋಣ ಹಾಗೂ ಅರಣ್ಯ ಮಧ್ಯದಲ್ಲಿ ಶಾಪವಿತ್ತ ಬ್ರಾಹ್ಮಣ, ಹೀಗೆ ಮೂರು ಮಂದಿ ಬ್ರಾಹ್ಮಣರೇ ನನ್ನ ಉತ್ಕರ್ಷಕ್ಕೆ ಮಾರಕರಾದರು...ಆ ಜಾತಿಯ ಮೇಲೆ ಮಮಗೆ ತಿರಸ್ಕಾರವಿದ್ದರೂ ಅವರನ್ನು ಕರೆಕರೆದು ದಾನ ಕೊಡುತ್ತಿದ್ದೆ. ದಾನ ಮಾಡಿದ ಪುಣ್ಯಕ್ಕಾಗಿಯೂ ಅಲ್ಲ, ಆ ಕೊಳ್ಳುವವರ ಮೇಲಿನ ಅನುಕಂಪದಿಂದಲೂ ಅಲ್ಲ. ಆ ಬ್ರಾಹ್ಮಣರೆಂಬವರು ಬಂದು ನಿತ್ಯ ನನ್ನ ಮುಂದೆ ಕೈಚಾಚಲಿ ಎಂದು !
******
ಪಾಂಡವ ಪಕ್ಷವನ್ನು ಸೇರಬೇಕೆಂಬ ಕುಂತಿ-ಕೃಷ್ಣರ ಒತ್ತಾಯದ ಬಗ್ಗೆ ಸೀತಾರಾಮಯ್ಯರ ಕರ್ಣ ಯೋಚಿಸುವ ಬಗೆ ಹೀಗೆ -
ಶ್ರೀಕೃಷ್ಣನೆಂದಂತೆ ನಾನು ಮನಸ್ಸು ಮಾಡಿದ್ದರೆ ಈ ಯುದ್ಧವನ್ನು ನಿಲ್ಲಿಸಬಹುದಿತ್ತೋ ಏನೋ. ಅದಕ್ಕಾಗಿ ನಾನು ನನ್ನ ಸ್ವಾಮಿಗೆ ದ್ರೋಹ ಮಾಡಬೇಕಾಗಿತ್ತು. ನಮ್ಮ ನಮ್ಮ ಪ್ರತಿಜ್ಞೆಗಳೆಲ್ಲ ಹಾರಿಹೋಗಿ ದುರ್ಯಶಕ್ಕೇ ತುತ್ತಾಗಬೇಕಾಗಿತ್ತು. ಹಾಗೆ ಅದೆಲ್ಲವನ್ನೂ ಸಹಿಸಿಕೊಂಡು ಮೃತಪ್ರಾಯವಾಗಿ ಬದುಕುವುದಕ್ಕಿಂತ ಯುದ್ಧ ಮಾಡಿಯೇ ಸತ್ತರೇನಂತೆ? ಲೋಕದ ಕ್ಷೇಮಕ್ಕಾಗಿ ಎಂದು ಪ್ರತಿಜ್ಞೆಯನ್ನೆಲ್ಲಾ ಮೂಲೆಗೆ ತಳ್ಳಿ ಅಕೀರ್ತಿಯನ್ನು ಹೊತ್ತು ತನ್ನತನವನ್ನು ಕಳೆದುಕೊಳ್ಳುವುದಾದರೆ ಹಿಂದೆಯೇ ನಮ್ಮ ಹಿರಿಯರು ಆ ಕೆಲಸವನ್ನು ಮಾಡಬಹುದಾಗಿತ್ತು ! ಮಹಾರಾಜ್ಞಿ ಸತ್ಯವತೀದೇವಿಯವರೇ ಅಂದು ಭೀಷ್ಮರಿಗೆ ಹೇಳಿದ್ದರಂತೆ....‘ಮದುವೆಯಾಗು , ಸಿಂಹಾಸನವನ್ನೇರು, ವಂಶವನ್ನು ಬೆಳೆಸು, ಸಾಮ್ರಾಜ್ಯವನ್ನಾಳು..’ ಎಂದು. ಭೀಷ್ಮರು ಒಪ್ಪಲಿಲ್ಲ. ಮತ್ತೆ ‘..ನಿನ್ನ ತಮ್ಮನ ಕ್ಷೇತ್ರಗಳಲ್ಲಿ ನಿಯೋಗದ ಮೂಲಕ ಸಂತತಿಯನ್ನಾದರೂ ಕರುಣಿಸು’ ಎಂದರಂತೆ. ಅದಕ್ಕೂ ಭೀಷ್ಮರು ಒಡಂಬಡಲಿಲ್ಲ. ಕೊನೆಯ ಘಳಿಗೆಯಲ್ಲಾದರೂ ಭೀಷ್ಮರು ಪಟ್ಟವೇರಿದ್ದರೆ ಯುದ್ಧವು ತಪ್ಪುತ್ತಿತ್ತೋ ಏನೋ? ಹಾಗೆಂದು ಅವರಿಗೆ ಯಾಕೆ ಹೇಳಲಿಲ್ಲ? ಹೇಳಿದರೂ ಅವರು ಕೇಳುತ್ತಿರಲಿಲ್ಲವೆಂದೇ ಹೇಳಲಿಲ್ಲವೋ ಏನೋ? ಮತ್ತೆ ನಾನು ಕೇಳಿಯೇನೆಂದು ನಿರೀಕ್ಷಿಸಿದ್ದು ಯಾಕೆ? ಅಂತಹ ನಿರೀಕ್ಷೆಯೇನೂ ಇದ್ದಿರಲಾರದು. ಆದರೂ ಪ್ರಲೋಭನವನ್ನು ಒಡ್ಡಿದ್ದು ಯಾಕೆ? ಕಾನೀನನಾಗಿ ಹುಟ್ಟಿದವನಿಗೆ ಅವನ ತಾಯಿಯ ಗಂಡನ ಸೊತ್ತಿನಲ್ಲಿ ಹಕ್ಕು ಬರುತ್ತದಾದರೆ ಹಸ್ತಿನಾವತಿಗೆ ವೇದವ್ಯಾಸರೇ ಹಕ್ಕುದಾರರಾಗುವುದಿಲ್ಲವೆ? ...ಇದನ್ನೆಲ್ಲ ತಿಳಿದೂ ತಿಳಿದು ಶ್ರೀಕೃಷ್ಣನು ನನಗೆ ಇಂತಹಾ ಉಪದೇಶವನ್ನು ಮಾಡಿದ ಯಾಕೆ? ಪಾಂಡವರು ನನ್ನ ತಮ್ಮಂದಿರೆಂದು ನನಗೆ ತಿಳಿದ ಮೇಲೆ ಅವರ ಕುರಿತಾಗಿ ಹೆಚ್ಚಿನ ವಾತ್ಸಲ್ಯ ಉಂಟಾಗದಿದ್ದರೂ ದ್ವೇಷವು ಸಾಕಷ್ಟು ಕಡಿಮೆಯಾದೀತೆಂದು ಅವನು ಭಾವಿಸಿರಬಹುದಾದುದು ಸಹಜವೇ ಆಗಿತ್ತು. ಪಾಂಡವರ ಪಕ್ಷಕ್ಕೆ ನಾನು ಹೋಗುವವನಲ್ಲವಾದರೂ ಇದ್ದ ಕೌರವ ಪಕ್ಷದ ಬಲವು ತಕ್ಕಷ್ಟು ದುರ್ಬಲಗೊಳ್ಳಬಹುದೆಂದು ಅವನೆಣಿಸಿರಬಹುದಾದುದು ನಿಜವೇ ಆಗಿತ್ತು.
*******
ಚಕ್ರವ್ಯೂಹದಲ್ಲಿ ಅಭಿಮನ್ಯುವಿನ ಕೈಯನ್ನು ಹಿಂದಿನಿಂದ ಹೋಗಿ ಕತ್ತರಿಸು ಎಂದು ಸೇನಾಪತಿ ದ್ರೋಣರು ಕರ್ಣನಿಗೆ ಆದೇಶಿಸಿದ ಬಗ್ಗೆ -
ಆ ಕೆಲಸ ಆಗಲೇಬೇಕಿದ್ದರೆ ಯಾರೂ ಮಾಡಬಹುದಾಗಿತ್ತು. ಆದರೂ ಆಜ್ಞೆಯಾದದ್ದು ನನಗೆ. ಯಾಕೆ? ಎಂಥಾ ನಿಕೃಷ್ಟವಾದ ಕೆಲಸವನ್ನಾದರೂ ಉತ್ತಮ ವರ್ಣೀಯರೆಂಬವರು ಮಾಡಿಸುತ್ತಾರೆ. ಆದರೆ ಮಾಡುವುದಕ್ಕೆ ಕೀಳು ವರ್ಣೀಯನೊಬ್ಬ ಬೇಕು, ಅಷ್ಟೆ. ಅಲ್ಲಿ ನಡೆದದ್ದೂ ಹಾಗೆಯೇ ಇರಬೇಕು.
ಅರ್ಜುನನ್ನು ಕೊಲ್ಲಲೆಂದೇ ಕರ್ಣನು ತೆಗೆದಿಟ್ಟಿದ್ದ ಇಂದ್ರದತ್ತವಾದ ಮಹಾಶಕ್ತಿಯನ್ನು ಘಟೋತ್ಕಚನನ್ನು ಕೊಲ್ಲಲು ಪ್ರಯೋಗಿಸಬೇಕೆಂದು ಕೌರವನ ಮೂಲಕ ಕರ್ಣನಿಗೆ ಹೇಳಿಸಿದರು ದ್ರೋಣಾಚಾರ್ಯರಿಗೆ ಕರ್ಣನ ಪ್ರತಿಕ್ರಿಯೆ - ಭೀಮಾರ್ಜುನರ ಮಕ್ಕಳಿಬ್ಬರು ಸತ್ತರು. ಅರ್ಜುನನ್ನು ಬದುಕಿಸಿದರು.
( ೧೬೬ ಪುಟಗಳ ಈ ಪುಸ್ತಕದ ಬೆಲೆ ರೂ.೧೨೦. ಪ್ರತಿಗಳು ಬೇಕಿದ್ದರೆ ಪ್ರಕಾಶಕರ ಸಂಪರ್ಕಕ್ಕೆ - ೯೪೪೮೨೩೯೫೧೯)

4 comments:

ಸುಪ್ತದೀಪ್ತಿ suptadeepti January 7, 2008 at 4:59 PM  

ಈ ಪುಸ್ತಕಕ್ಕೆ ಲಗ್ಗೆ ಹಾಕಬೇಕೆಂಬ ಗುಂಗಿ ಹುಳ ತಲೆ ಹೊಕ್ಕಿದೆ.
ಎಲ್ಲಿ ಸಿಗ್ತದೆ? ಯಾವ ಪ್ರಕಾಶನ? ತಿಳಿಸ್ತೀರ?

Anonymous,  January 8, 2008 at 9:07 AM  

ಪ್ರಿಯರೆ,
ದೇರಾಜೆ ಸೀತಾರಾಮಯ್ಯ ಸಾಂಪ್ರತಿ ಪ್ರತಿಷ್ಠಾನವೆಂಬ ದಕ್ಷಿಣಕನ್ನಡದ ವಿಟ್ಲದಲ್ಲಿರುವ ಸಂಸ್ಥೆ ಅದನ್ನು ಪ್ರಕಟಿಸಿದೆ. ಬೆಂಗಳೂರಿನ ಪುಸ್ತಕದಂಗಡಿಗಳಲ್ಲಿ ಅವು ಲಭ್ಯವಿಲ್ಲ. ಪುಸ್ತಕ ಬೇಕಿದ್ದರೆ ನಾನು ಕೊಟ್ಟಿರುವ ದೂರವಾಣಿ ಸಂಖ್ಯೆ ಸಂಪರ್ಕಿಸಿ.
-sudhanva

ಸುಪ್ತದೀಪ್ತಿ suptadeepti January 9, 2008 at 10:48 AM  

ಧನ್ಯವಾದ ಸುಧನ್ವ. ಮುಂದಿನ ಸಾರಿ ಊರಿಗೆ ಹೋದಾಗ ಪಡೆಯುತ್ತೇನೆ.

ಶ್ರೀನಿಧಿ.ಡಿ.ಎಸ್ January 9, 2008 at 11:02 AM  

ನಾನು ಈ ಬಾರಿ ನುಡಿಸಿರಿಗೆ ಹೋಗಿದ್ದಾಗ ಕದ್ರಿ ನವನೀತ ಶೆಟ್ಟಿ ಮತ್ತು ಬಳಗ ಪ್ರಸ್ತುತಪಡಿಸಿದ ಇದೇ ಯಕ್ಷಗಾನವನ್ನೇ ನೋಡಿದೆ!:) ಹಾಗಾಗಿ, ಗುಂಗಿಹುಳ ಹೊಕ್ಕಿಲ್ಲ!

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP