January 13, 2008

ಪ್ರಶ್ನೆಗಳಿರುವುದು 'ಕೇಳುವುದಕ್ಕೆ’ !

ಸುಮಾರು ಎರಡು ತಿಂಗಳಿಗೊಂದರಂತೆ ಪ್ರಕಟವಾಗುತ್ತಿದ್ದ "ಕವನ ಮತ್ತು ಕಾವ್ಯ ವಿಮರ್ಶೆಗಳ ಋತುಪತ್ರಿಕೆ’-ಕವಿತಾ. ೧೯೬೪ರ 'ವರ್ಷ’ ಋತುವಿನ ಸಂಚಿಕೆಯ ಮುಖಪುಟ ಇಲ್ಲಿದೆ. ಬಾಕಿನ ಅವರು ಪ್ರಧಾನ ಸಂಪಾದಕರಾಗಿದ್ದ ಈ ಪತ್ರಿಕೆಯ ಸಂಪಾದಕ ಮಂಡಳಿಯಲ್ಲಿ ಘನಶ್ಯಾಮ, ಕಿರಣ ಮತ್ತು ನಾ. ರಾಮಾನುಜರಿದ್ದರು. ಬೆಂಗಳೂರಿನ ಬಸವನಗುಡಿಯ 'ಗೆಳೆಯರ ಪ್ರಕಾಶನ’ದ ಹೆಸರಲ್ಲಿ ಇದು ಹೊರಬರುತ್ತಿತ್ತು. ಸಂಪುಟಕ್ಕೆ 'ಹೂವು ಎಂದು, ಸಂಚಿಕೆಗೆ 'ಎಸಳು’ ಎಂದೂ ಹೆಸರಿಟ್ಟುಕೊಂಡಿದ್ದರು. ಈ ಮೂರನೆ ಸಂಚಿಕೆಯ ಕೊನೆಗಿರುವ ಸಂಪಾದಕೀಯ, ಈಗ ಯಾರೋ ಬರೆದಿಟ್ಟಂತೆ ಕಾಣುತ್ತಿರುವುದು ವಿಶೇಷ !

'ನಾವು ಹೊಸ ಬರಹಗಾರರಿಗೆ ಅವಕಾಶ ಕೊಡಬೇಕೆಂದು ಪ್ರಾರಂಭದಲ್ಲೇ ಸಂಕಲ್ಪಿಸಿದ್ದೆವು. ಆದರೆ ಹೊಸ ಲೇಖಕರಿಂದ ಪ್ರಕಟಣೆಗೆ ಯೋಗ್ಯವಾದ ಕೃತಿಗಳು ಬರುತ್ತಿಲ್ಲ. ಉತ್ಸಾಹೀ ತರುಣ ಬರಹಗಾರರು ನಮ್ಮ ಸಾಹಿತ್ಯದ ಬೆಳವಣಿಗೆಯನ್ನು ಗಮನಿಸದೆ ತಾವೂ ಸಾಕಷ್ಟು ಸಾಹಿತ್ಯದ ಬಗ್ಗೆ ಅಧ್ಯಯನ ನಡೆಸದೆ, ಬರೆದದ್ದೇ ಪ್ರಕಟಣೆಯಾಗಬೇಕೆಂಬ ಆಕಾಂಕ್ಷೆಯೊಂದನ್ನು ಮಾತ್ರ ಇಟ್ಟುಕೊಂಡು, "ಹೆಸರಿಗೋಸ್ಕರ’ ಬರೆಯುವ ಪ್ರಯತ್ನ ನಡೆಸಿದರೆ ಏನೇನೂ ಸಾರ್ಥಕವೆನಿಸದು. ಇದರಿಂದ ಉತ್ತಮ ಸಾಹಿತ್ಯವಾಗಲಿ, ಕಾವ್ಯವಾಗಲಿ ಸೃಷ್ಟಿಯಾಗದು. ಸಾಹಿತ್ಯ ನಡೆದು ಬಂದ ದಾರಿಯನ್ನು ಸತತವಾಗಿ ಅಭ್ಯಸಿಸಿ, ಮುಂದೆ ನಡೆಯಲು ಬೇಕಾದ ಶಕ್ತಿಯನ್ನು ಗಳಿಸಲು ತರುಣ ಲೇಖಕರು ಸಿದ್ಧರಾಗಬೇಕು. ಈ ದಿಸೆಯಲ್ಲಿ ಹೆಜ್ಜೆ ಹಾಕಲು ನಾಡಿನ ಹೊಸ ಬರಹಗಾರರು ವಿಚಾರ ಕ್ರಾಂತಿಯ ಆಂದೋಳನವನ್ನು ನಡೆಸುವರೆಂದು ನಂಬುತ್ತೇವೆ’.

ಕ.ವೆಂ. ರಾಜಗೋಪಾಲ, ಲಂಕೇಶ್, ಚಂಪಾ, ಗಿರಡ್ಡಿ, ಚೊಕ್ಕಾಡಿ, ನಾಡಿಗ, ದೇಶ ಕುಲಕರ್ಣಿ ಮೊದಲಾದವರು ಈ ಕವಿತಾದಲ್ಲಿ ಕಾಣಿಸಿಕೊಂಡಿದ್ದಾರೆ. ೧೯೬೪ರಲ್ಲಿ ಇವರೆಲ್ಲ ಹಿರಿಯರೂ, ಹಳೆಯ ಬರೆಹಗಾರರೂ ಆಗಿಹೋಗಿದ್ದರೆ? 'ಹೊಸಬರ ಕವನ ಸಂಕಲನ ಪ್ರಿಂಟ್ ಮಾಡೋದಕ್ಕೂ ಅವರು(ಒಬ್ಬರ ಹೆಸರು ಹೇಳಿ) ರೆಡಿ ಇದ್ದಾರೆ. ಆದರೆ ಒಳ್ಳೇ ಪುಸ್ತಕಗಳೇ ಅವರಿಗೆ ಸಿಗ್ತಾ ಇಲ್ಲ ಮಾರಾಯಾ’ ಅಂದಿದ್ದರು ಮೊನ್ನೆ ಮೊನ್ನೆ ಜಯಂತ ಕಾಯ್ಕಿಣಿ. ತರುಣ ಲೇಖಕರಿಂದ ಒಳ್ಳೆಯ ಸಾಹಿತ್ಯ ಸೃಷ್ಟಿಯಾಗುತ್ತಿಲ್ಲ ಎಂಬ ಮಾತನ್ನುಆದಿಕವಿ ಪಂಪನಿಂದ ಇಂದಿನ ತನಕವೂ ಪ್ರತಿದಿನ ಕೇಳುತ್ತಲೇ ಹೇಳುತ್ತಲೇ ಸಾಹಿತ್ಯ ತನ್ನ ಪಾಡಿಗೆ ತಾನು ಬೆಳೆಯುತ್ತ ಬಂದಿದೆಯೇ? ಅಷ್ಟಕ್ಕೂ ತರುಣರು ಮಾತ್ರ ಚೆನ್ನಾಗಿ ಬರೆಯಬೇಕು ಯಾಕೆ?! ಪ್ರಶ್ನೆಗಳಿರುವುದು 'ಕೇಳುವುದಕ್ಕೆ’ !

1 comments:

ಸುಪ್ತದೀಪ್ತಿ suptadeepti January 13, 2008 at 11:22 AM  

ನನ್ನಿಷ್ಟದ ವಿಷಯ "ಕವಿತಾ". ನಿಜ, ಪ್ರಶ್ನೆಗಳಿರುವುದು ಕೇಳುವುದಕ್ಕೆ. ಹಿರಿಯರಿಗೆ ಕಿರಿಯರು ಬರೆದ ಬಹುತೇಕ ಬರಹಗಳು ಮೆಚ್ಚುಗೆಯಾಗದೆ ಹೋಗುವುದಕ್ಕೆ ಕಾರಣಗಳು ಹಲವಾರು; "ಇನ್ನೂ ಚೆನ್ನಾಗಿ ಬರೆಯಬಲ್ಲರು, ಮೆಚ್ಚಿದರೆ ಇಲ್ಲೇ ನಿಂತಾರು"- ಅನ್ನುವ ಹಿಂಜರಿಕೆಯೂ ಅವುಗಳಲ್ಲೊಂದು. ಈ ಹಿಂಜರಿಕೆಯನ್ನೂ ಮೀರಿ ಅವರಿಂದ ಮೆಚ್ಚುಗೆ ಪಡೆಯುವ ಶಕ್ತಿಯಿದ್ದ/ ಇರುವ ಬರಹಗಳು ವಿರಳವೆ? ಪ್ರಶ್ನೆಗಳಿವೆ.

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP