ಒಮ್ಮೆ ಹೀಗಾಯಿತು...
ಗಾಢ ನಿದ್ದೆಯಲ್ಲಿ ಲೀನವಾಗಿದ್ದ ಅವನಿಗೆ ಎಚ್ಚರವಾದಾಗ ಮಧ್ಯರಾತ್ರಿ. ಬೆಳದಿಂಗಳ ಸೋನೆ ಮಳೆ ಸುರಿಯುತ್ತಿತ್ತು. ಈಗಷ್ಟೆ ಹಚ್ಚಿದ ಗಿಲೀಟಿನ ಚೂರುಗಳಂತೆ ತಾರೆಗಳು ಚಕಮಕ ಹೊಳೆಯುತ್ತಿದ್ದವು .ಹಿಂದಿನ ರಾತ್ರಿ ಯಕ್ಷಗಾನ ನೋಡಲು ಹೋಗಿದ್ದ ವೆಂಕಟೇಶ ಬೆಳಗ್ಗೆ ಮನೆ ತಲುಪಿದಾಗ - ತೋಟಕ್ಕೆ ದನಗಳು ನುಗ್ಗಿದ್ದವು, ನೀರು ಬರುವ ಪೈಪು ತುಂಡಾಗಿತ್ತು, ಮೂರ್‍ನಾಲ್ಕು ಬಾಳೆಗೊನೆಗಳು ಚೆನ್ನಾಗಿ ಬೆಳೆದು ಅಳಿಲು ತಿನ್ನಲು ಆರಂಭವಾಗಿತ್ತು ,ವಿದ್ಯುತ್ ತಂತಿಗೆ ಮರವೊಂದು ತಾಗಿ ಟ್ರಾನ್ಸ್‌ಫಾರ್ಮರ್ ಫ್ಯೂಸ್ ಹೋಗಿ ಕರೆಂಟು ಇಲ್ಲವಾಗಿತ್ತು ,ದನವೊಂದು ಏಳುವುದಕ್ಕಾಗದೆ ಮಲಗಿಕೊಂಡಿತ್ತು ,ಮನೆಯಲ್ಲೆಲ್ಲೋ ಒಂದು ಇಲಿ ಸತ್ತು ಅಸಾಧ್ಯ ವಾಸನೆ ಹೊಮ್ಮುತ್ತಿತ್ತು, ಮುರಿದ ಮರದ ಕವಾಟೊಂದನ್ನು ರಿಪೇರಿ ಮಾಡುವುದಕ್ಕೆ ಆಚಾರಿಯೊಬ್ಬ ಬರುವವನಿದ್ದ . ಈ ಎಲ್ಲಾ ಕೆಲಸಗಳು ಮುಗಿದು ವೆಂಕಟೇಶ ಚಾಪೆ ಬಿಡಿಸುವಾಗ ಸಂಜೆ ಐದು. ಮುಸ್ಸಂಜೆ ಹೊತ್ತು ಮಲಗಬಾರದು ಅಂತ ಮುದಿ ಅಮ್ಮ ಗೊಣಗಾಡುತ್ತಿದ್ದರೂ ,ಅವನು ಪರಲೋಕ ಸೇರುವವನಂತೆ ಅಡ್ಡಾಗಿದ್ದ !
ಆತ ಮಲಗಿದ್ದ ಮನೆ ಎದುರಿನ ಅರ್ಧ ಜಗಲಿಗೆ ಕತ್ತಲು, ಇನ್ನರ್ಧಕ್ಕೆ ಬೆಳ್ದಿಂಗಳು .ಆಕಾಶದಲ್ಲಿ ಯಾರೋ ಕತ್ತಲಿಂದ ಬೆಳದಿಂಗಳನ್ನು ಸೋಸುತ್ತಿರುವಂತಿತ್ತು. ಅಂಗಳದ ಅಂಚಿನ ಮುಳ್ಳಿನ ಬೇಲಿಯಿಂದಾಚೆ ಎಲ್ಲ ಕಪ್ಪಿನ ಬೆಟ್ಟ. ಕಪ್ಪು, ಬಿಳುಪು, ಬಿಸಿ, ತಣ್ಣಗೆ, ಗಾಳಿ, ಮಣ್ಣಿನ ಗಂಧ, ಬಣ್ಣ, ಆಕಾರ -ಸಕಲವೂ ಒಂದರೊಳಗೊಂದು ಸೇರಿ ಮಿಶ್ರಣಗೊಳ್ಳುತ್ತ , ನಾಟಕದ ಆರಂಭದ ಮೊದಲು ವೇದಿಕೆಯನ್ನು ಸಜ್ಜುಗೊಳಿಸುವಂತೆ ತಯಾರಾಗುತ್ತಿತ್ತು. ಆ ಇಳಿರಾತ್ರಿ, ಇದ್ದಕ್ಕಿದ್ದಂತೆ ಎಚ್ಚರಾದ ವೆಂಕಟೇಶನಿಗೆ ಅಮ್ಮನ ಗೊರಕೆ ಸ್ಪಷ್ಟವಾಗಿ ಕೇಳುತ್ತಿತ್ತು. ಬಚ್ಚಲ ಒಲೆ ಬದಿಯಲ್ಲಿ ಬಿದ್ದುಕೊಂಡಿದ್ದ ನಾಯಿ ಒಂಚೂರು ಗೋಣು ಎತ್ತಿ, ಬೌ ಎಂದು ಸಣ್ಣಗೆ ಧ್ವನಿ ಹೊರಡಿಸಿ ಸುಮ್ಮನಾಯಿತು. ಉಟ್ಟಿದ್ದ ಲುಂಗಿ ಕೈಗೆ ಸಿಗದೆ, ಬೆತ್ತಲೆ ತೊಡೆಗಳ ಮೇಲೆ ಬಟ್ಟೆ ಎಳೆದುಕೊಂಡು ಚಕ್ರಮುಟ್ಟ ಹಾಕಿ ಕುಳಿತುಕೊಂಡ. ಸಣ್ಣಗೆ ದೀಪ ಹತ್ತಿಸೋಣವಾ? ಅಮ್ಮನಿಗೆ ಎಚ್ಚರಾದರೆ ಒಂದರಮೇಲೊಂದು ಪ್ರಶ್ನೆ ಕೇಳಿಯಾಳು. ಎಲೆಅಡಿಕೆ ತಿನ್ನೋಣ ಅಂದರೆ ಯಾಕೋ ಮನಸ್ಸೇ ಬಾರದು. ಅಂಗಳದಲ್ಲಿ ನಾಲ್ಕು ಸುತ್ತು ನಡೆಯೋಣವೆಂದರೆ ಏಳಲೇ ಉದಾಸೀನ ಬಿಡಲಿಲ್ಲ . ಇನ್ನೇನು? ಸಂಜೆಯಿಂದ ಮಧ್ಯರಾತ್ರಿವರೆಗೆ ಬಂದ ಅಮೋಘ ನಿದ್ದೆಯ ಸುಖವನ್ನೇ ಮೆಲುಕು ಹಾಕುವವನಂತೆ ,ಕಣ್ಣುಗಳು ಹೂವಿನಂತೆ ಅರಳಿ ಹಗುರಾಗಿರುವುದನ್ನು ಅನುಭವಿಸತೊಡಗಿದ. ತಣ್ಣಗಿನ ಮುಖವನ್ನು ಎರಡೂ ಕೈಗಳಿಂದ ಮೆಲ್ಲನೆ ತಟ್ಟಿಕೊಂಡ. ದೇಹದಲ್ಲಿ ವಿಶೇಷ ಶಕ್ತಿ ಸಂಚಯವಾಗಿರುವುದನ್ನು ಕಂಡುಕೊಂಡ. ಆದರೆ ಇವೆಲ್ಲಾ ಕೆಲವು ನಿಮಿಷಗಳವರೆಗೆ ಅಷ್ಟೆ ! ಆಮೇಲೆ ನಿದ್ರೆ ಬಾರದ ಮಧ್ಯರಾತ್ರಿ, ಕರೆಂಟಿಲ್ಲದ ಮನೆಯಲ್ಲಿ ,ಇನ್ನೂ ಮದುವೆಯಾಗದ ನಲವತ್ತರ ಯುವಕ ಏನು ಮಾಡಬಹುದು ?!
ಅವನು ಮತ್ತೇನೂ ಮಾಡಲಿಲ್ಲ. ಅಮ್ಮನ ತೋಳು ಹಿಡಿದು ಎಬ್ಬಿಸಿದ. ಆಕೆ ಯಾವುದೋ ಸೆಳೆತಕ್ಕೆ ಸಿಕ್ಕ ಪ್ರಾಣಿಯಂತೆ ಕಂಡಳು. ಇಬ್ಬರೂ ಹೊರ ಜಗಲಿಯಲ್ಲಿ ಕುಳಿತುಕೊಂಡು ಕಣ್ಣಿನಲ್ಲಿ ಆಕಾಶವ ತುಂಬಿಸಿಕೊಳ್ಳತೊಡಗಿದರು. ಯೌವ್ವನದಲ್ಲೇ ಗಂಡನನ್ನು ಕಳೆದುಕೊಂಡ ಹೆಂಗಸು, ಇನ್ನೂ ಹೆಣ್ಣು ಸಿಗದ ಗಂಡಸು, ತಾರೆಗಳಿಗೆ ಕೊಕ್ಕೆ ಹಾಕಿದರು. ಚಂದ್ರನನ್ನು ಮೂಗಿನ ತುದಿಗೆ ಅಂಟಿಸಿಕೊಂಡವರಂತೆ ನೋಡಿದರು. ಮಂದವಾಗಿ ಬೀಸುತ್ತಿದ್ದ ಗಾಳಿಗೆ ತಮ್ಮ ನಿಟ್ಟುಸಿರು ಬೆರೆಸಿದರು. ದೇಹವನ್ನು ತೊರೆದು ಗಾಳಿಯಲ್ಲಿ ಅಡ್ಡಾಡುವ ಆತ್ಮಗಳಂತೆ ದೇಹವನ್ನು ತೊನೆದು ತೂಗಿಕೊಂಡರು. ಒಳಗಿನ ಎಲ್ಲ ಕಲ್ಮಶವನ್ನು ಹೊರಚೆಲ್ಲುವವರಂತೆ ಮೈಮರೆತರು. ಇಬ್ಬರಿದ್ದವರು ಒಬ್ಬರಾದರು. ಒಂಟಿಯಾಗಿ ತಮ್ಮನ್ನು ತಾವು ಕಳೆದುಕೊಂಡವರಂತೆ, ಕಾಲು ನೆಲಕ್ಕೂರದ ದೇವತೆಗಳಂತೆ -ಅಂಗಳ, ಆಕಾಶ, ಗಿಡಮರಗಳ ಮೇಲೆಲ್ಲ ಸುತ್ತಾಡಿ ಬಂದರು . ಮೋಡಗಳ ಹಾಸಿಗೆಯಲ್ಲಿ ಪವಡಿಸಿ ಸುಖಿಸಿದರು . ಇರುಳಿನ ಶಾಂತತೆಯನ್ನು ಎದೆಗೂಡಿನಲ್ಲಿ ತುಂಬಿಕೊಂಡರು.
ಮುಂಜಾವಿನ ಪಲ್ಲಟ ಆರಂಭವಾಯಿತು . ಬಚ್ಚಲೊಲೆಗೆ ಬೆಂಕಿ ಹಾಕಿ, ನೀರು ಕಾಯಿಸಲು ಹೊತ್ತಾಯಿತೆಂದು ಅಮ್ಮ ಒಳಗೆ ನಡೆದಳು . ‘ನೀರು ಕಾದ ಕೂಡ್ಲೇ ಎಬ್ಸು ’ಅಂತ ಇವನು ಮುಸುಕೆಳೆದುಕೊಂಡ. ಆ ದಿನ ಸೂರ್ಯನೂ ಏಳುವಾಗ ಕೊಂಚ ತಡಮಾಡಿದ.
4 comments:
ಚಂದದ ನಿರೂಪಣೆ ಸುಧನ್ವ. ಸುಮ್ಮನೆ ಹಾಗೇ ಹಗುರಾಗಿ ತೇಲಿಸಿಕೊಂಡು ಓದಿಸಿಕೊಳ್ಳುತ್ತದೆ. ಧನ್ಯವಾದಗಳು.
ಒಂಥರಾ ಸಖತ್ ಬರ್ದಿದೀರಾ! ಮೋಡಿ ಮಾಡಿದಂಗೆ ಓದಿಸ್ಕೊಂಡು ಹೋಯ್ತು..
chennagide adre kathe artha agalilla
ಇದ್ಯಾಕೋ ಸರಿ ಇಲ್ಲ..:-)
Post a Comment