'ಅದಾಗಿ’ ನೀವು ಕ್ಷೇಮವೇ?
ಒಂದೇ ಬೆರಳಿನಲ್ಲಿ ಆಸ್ಟ್ರೇಲಿಯಾವನ್ನೇ ಎತ್ತಿ ಹಿಡಿದ 'ಕಾಂಗರೋದ್ಧಾರಿ’ ನೀಲಮೇಘಶ್ಯಾಮ ಬಕ್ನರನಿಗೆ ಪ್ರಣಾಮಗಳು. ಅಣ್ಣ ಬಲರಾಮನಂತಿರುವ 'ಬೆಣ್ಣೆಮುದ್ದೆ’ ಬನ್ಸನನಿಗೆ ವಂದನೆಗಳು. ಹುಬ್ಬಳ್ಳಿಯವರ ಬಾಯಲ್ಲಿ 'ಪಾಂಟಿಂಗ’ , ದ.ಕ.ದವರ ಬಾಯಲ್ಲಿ ಪಟಿಂಗನಾಗಿರುವ ನಾಯಕನ ಕುಶಲ ವಿಚಾರಿಸಿರುವೆವು.
ಅದಾಗಿ ನಾವು ಕ್ಷೇಮ. 'ಅದಾಗಿ’ ನೀವು ಕ್ಷೇಮವೇ?!
ವಾಮನನು ತಿವಿಕ್ರಮನಾಗಿ ಬೆಳೆದು ಒಂದು ಹೆಜ್ಜೆಯಿಂದ ಭೂಮಿಯನ್ನೇ ಅಳೆಯುವಾಗ ಗಂಗಾನದಿಯು ಅವನ ಕಾಲ್ಬೆರಳ ಸಂದಿಯಿಂದ ಹುಟ್ಟಿಕೊಂಡಿತಂತೆ.! ಇಂತಹ ಪುಣ್ಯಭೂಮಿ ಭಾರತವೇ ಈಗ ನಿಮ್ಮ ಕೈಬೆರಳುಗಳಲ್ಲಿ ಸಿಕ್ಕಿಹಾಕಿಕೊಂಡಿರುವುದು ನೋಡಿ ಬಹಳ ಖೇದವಾಯಿತು. ನಾವೆಲ್ಲ ದೀಪಿಕಾಳ ಪಡುಕೋಣೆಯಲ್ಲಿದ್ದಾಗ ನೀವು ನಮ್ಮ mood ಹಾಳುಮಾಡಿಬಿಟ್ಟಿರಿ. ಕನ್ನಡಿಗನಾದ ನಾಯಕ ಕುಂಬ್ಳೆ ಅಂಗಳದಲ್ಲಿ, ಕನ್ನಡತಿ ದೀಪಿಕಾ ಪೆವಿಲಿಯನ್‌ನಲ್ಲಿ -ಗೆಲುವನ್ನೇ ಧ್ಯಾನಿಸುತ್ತಿರುವಾಗ ನೀವು ಎಲ್ಲರನ್ನೂ ಡ್ರೆಸ್ಸಿಂಗ್ ರೂಮಿಗೆ ಕಳುಹಿಸಿದ್ದು ನಮಗೆಲ್ಲ ಬಹಳ ಮುಜುಗರ ಉಂಟುಮಾಡಿತು.
ಅಂಪೈರುಗಳು ಹಿಂಗೂ ಕೈ ಎತ್ತೋದಾ?!
ಮೊದಲ ಇನ್ನಿಂಗ್ಸ್‌ನಲ್ಲಿ ೧ ರನ್ ಮಾಡುವುದಕ್ಕೆ ೪೧ ಬಾಲ್‌ಗಳನ್ನು ಪರೀಕ್ಷಿಸಿದ ಕನ್ನಡಿಗ ದ್ರಾವಿಡ್, ಎರಡನೇ ಇನ್ನಿಂಗ್ಸ್‌ನಲ್ಲಿ ೧೦೩ ಬಾಲ್‌ಗಳಲ್ಲಿ ಕೇವಲ ೩೮ ರನ್ ಹೊಡೆದಿದ್ದಾಗಲೂ, ಅವನು ಬ್ಯಾಟ್ ತಗುಲಿಸದಿರುವಾಗಲೇ ಔಟ್ ಅಂದುಬಿಟ್ಟಿರಲ್ಲ! ಭಾರತದ ಮಹಾಗೋಡೆ ನಿಮ್ಮ ತಾಳ್ಮೆಯನ್ನೂ ಪರೀಕ್ಷಿಸಿದರೆ? ದಾದಾ ಹೊಡೆದ ಚೆಂಡನ್ನು ಕ್ಲಾರ್ಕ್ ನೆಲಕ್ಕೊತ್ತಿ ಹಿಡಿದರೂ ನೀವದನ್ನು ಕೈಗೆತ್ತಿಕೊಂಡಿರಿ. ಎರಡನೇ ಇನ್ನಿಂಗ್ಸ್‌ನಲ್ಲಿ ಮೊದಲ ವಿಕೆಟ್ ತೆಗೆದುಕೊಂಡದ್ದಕ್ಕೇ ಮಂಗನಂತೆ ಮೈದಾನದಲ್ಲಿ ಉರುಳು ಸೇವೆ ಮಾಡಿದ ಭಜ್ಜಿ, ಸೈಮಂಡ್ಸನ್ನು "ಮಂಗ’ ಅಂತ ಬೈದಾನೇ?! ಕೊನೆಯ ಇನ್ನಿಂಗ್ಸ್‌ನಲ್ಲಿ ಕ್ರೀಸ್‌ಗಂಟಿಕೊಂಡೇ ಇದ್ದು ಅಜರಾಮರನಾಗಿರುವ ನಮ್ಮ ಕುಂಬ್ಳೆಗೆ ಬ್ರಾಡ್‌ಹಾಗ್ ಉಪಯೋಗಿಸಿದ ಪದ ನಿಮಗೆ ಕೇಳಿಸಲಿಲ್ಲ, ಇರಲಿ. ಮೊದಲ ಇನ್ನಿಂಗ್ಸ್‌ನಲ್ಲಿ ಸೈಮಂಡ್ಸ್ ೩೦ ರನ್ ಗಳಿಸಿದ್ದಾಗಲೇ ಔಟಾದರೂ, ಅವನಿಗೆ ನೀವು ತೋರಿದ ಕೃಪಾಕಟಾಕ್ಷ ದೊಡ್ಡದು. ಅವನೆದುರೂ ಮಂಗನಾಗುವ ಗತಿ ನಿಮಗ್ಯಾಕೆ ಬಂತು?
ನಮ್ಮ ವಾಸಿಂ ಜಾಫರ್ ಎರಡು ಟೆಸ್ಟ್‌ಗಳ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಆಡಿಯೂ ಕೇವಲ ೨೨ ರನ್ (೪-೧೫-೩-೦) ಮಾಡಿ ಸ್ಪಷ್ಟವಾಗಿ ವಿಕೆಟ್ ಒಪ್ಪಿಸುತ್ತಿದ್ದುದನ್ನು ಮರೆತಿರಾ ಸಾಹೇಬರೆ?!
ನೀವು ಉದ್ದೇಶಪೂರ್ವಕ ತಪ್ಪುಗಳನ್ನು ಮಾಡಿದ್ದೀರೋ ಇಲ್ಲವೋ ನಾವು ಹೇಳಲಾರೆವು. ಆದರೆ ಬ್ಯಾಟ್ಸ್‌ಮನ್‌ಗಳು ಉದ್ದೇಶಪೂರ್ವಕ ಔಟಾದಂತೆ, ನಿಧಾನವಾಗಿ ಆಡಿದಂತೆ ಕಂಡರೆ ಮ್ಯಾಚ್‌ಫಿಕ್ಸಿಂಗ್ ಆರೋಪ ಹೊರಿಸುವುದು, ಬೌಲರ್‌ಗಳು ನಿಧಾನವಾಗಿ ಬೌಲಿಂಗ್ ಮಾಡಿದರೂ ದಂಡ ವಿಧಿಸುವುದು ಇತ್ಯಾದಿ ಇರುವಾಗ, ಒಂದೇ ಪಂದ್ಯದಲ್ಲಿ ಐದಾರು ಘೋರ ತಪ್ಪುಗಳನ್ನು ಮಾಡಿದ ನಿಮಗೆ ದಂಡನೆಯೇ ಇಲ್ಲವೇ? ಸರಿಯಾದ ಸಾಕ್ಷಿಯಿಲ್ಲದೆ ಏಕಪಕ್ಷೀಯವಾಗಿ ಭಜ್ಜಿಗೆ ಮೂರು ಪಂದ್ಯಗಳ ನಿಷೇಧ (ಮ್ಯಾಚ್‌ರೆಫ್ರಿ) ಹೇರುತ್ತೀರಾದರೆ, ಮುಂದಿನ ಎರಡು ಪಂದ್ಯಗಳಿಗಾದರೂ ಬಕ್ನರ್ ಬೇಡ ಅಂತ ದೃಶ್ಯಮುದ್ರಿಕೆಗಳ ಸಾಕ್ಷಿ ಸಮೇತ ನಾವಂದದ್ದು ತಪ್ಪಾದೀತೇ?
ನೆನಪಿರಲಿ, ಕಾಂಗರೂಗಳ ಹೊಟ್ಟೆಯಲ್ಲಿ ಜೋತುಬಿದ್ದಿರುವ ಮರಿಗಳು ನಾವಲ್ಲ.
ಭಜ್ಜಿಗೆ ಹೇರಿರುವ ನಿಷೇಧ ತೆರವಾಗಬೇಕು, ಅಂಪೈರ್‌ಗಳ ಕಳಪೆ ನಿರ್ವಹಣೆಗೂ ದಂಡ ವಿಧಿಸುವ (ಹಣ-ಪಂದ್ಯ ನಿಷೇಧದ ರೂಪದಲ್ಲಿ) ಕ್ರಮ ಜಾರಿಗೆ ಬರಬೇಕು, ಈ ಕ್ರಿಕೆಟ್ ಸರಣಿ ಮುಂದುವರಿಯಬೇಕು-ಅಂತ ಬಯಸುತ್ತಿದ್ದ ನಮಗೆ ಹೊಸ ಸುದ್ದಿ ಸಮಾಧಾನ ತಂದಿದೆ.
6 comments:
Nanige eega nanna beralu yettodikku hedrike aagide :)..baraha chennagide...keep writing
ಗೊತ್ತಾಯಿತಾ... ಕಾಂಗರೂಗಳು ಸುಮ್ಮನೇ ವಿಶ್ವಚಾಂಪಿಯನ್ನರಾಗುವುದಿಲ್ಲ... ಸತತತ ಟೆಸ್ಟುಗಳನ್ನು ಸುಮ್ಮನೇ ಗೆಲ್ಲುತ್ತಾ ಹೋಗುವುದಿಲ್ಲ....!!!
ಆಗಾಗ್ಗೆ ಕಾಲಿಗಡ್ಡ ಬರುವ ಸ್ಪಿನ್ನರುಗಳನ್ನು ವಿವಿಧ ಆರೋಪ ಹೊರಿಸಿ ನಿವಾರಿಸಿಬಿಡುವ ಚಾಕಚಕ್ಯತೆ ಇದೆ ಈ "ಪಟಿಂಗ"ರಿಗೆ.
ದೇರಾಜೆಯವರೆ, ಖಂಡಿತಾ ಮಂಗಗಳಾರತಿ ಮಾಡಲು ನಾವು ಸಿದ್ಧರಾಗಿದ್ದೇವೆ. ನೀವೂ ಕೈಬೆರಳಿಗೆ ಬ್ಯಾಂಡೇಜು ಸುತ್ತಿಕೊಂಡು ರೆಡಿಯಾಗಿರಿ.
ha ha ha! well written.. chennagide saar:)
ಚೆನ್ನಾಗಿದೆ. ನಿನ್ನ ಪನ್ ಸೆನ್ಸ್ ತುಂಬಾ ಚೆನ್ನಾಗಿದೆ, ಈ ಲೇಖನದಲ್ಲೂ ಇಷ್ಟವಾಗುತ್ತೆ. ಹಾಗೆಯೇ ಹೇಳ್ಕೊಳೋಕೊಂಚೂರು ಅಂದಾಗಲೂ, ಛೋಟಾ ರಾಜನ್ ಗ್ಯಾಂಗ್ ಎಂದಾಗಲೂ ನಗು ತರಿಸುತ್ತೆ.
ಚೆನ್ನಾಗಿದೇರಿ...
thanks to all friends.
-sudhanva
Post a Comment