ಪದ್ಯಗಳ ಆರಾಧನೆ !
‘ಮಾತು ಚಿಟ್ಟೆ -ಬೆಂಕಿ ಬೆರಳು-ಮುರಿದ ಮುಳ್ಳಿನಂತೆ ಜ್ಞಾನ’ ಎಂಬ ಮೊದಲ ಸಂಕಲನದಲ್ಲೇ ನೂರಕ್ಕೂ ಹೆಚ್ಚಿನ ಕವಿತೆಗಳೊಂದಿಗೆ ಮೆರವಣಿಗೆ ಹೊರಟ ಪುತ್ತೂರಿನ ಸಂಧ್ಯಾದೇವಿಯವರು, ಬರೆದದ್ದೆಲ್ಲ ಪದ್ಯವೇ ಆಗುತ್ತದೇನೋ. ಹಾಗಂತ ಮತ್ತೆ ಮತ್ತೆ ಓದಿ, ವಿಮರ್ಶಿಸಿ, ಕಾವ್ಯ ವಿಮರ್ಶೆಯ ಪರಿಕರಗಳೊಂದಿಗೆ ತಿಣುಕಾಡಲು ಈ ಕವಿತೆಗಳಲ್ಲಿ ಅವಕಾಶವಿಲ್ಲ. ಇದು ತಾಜಾ ತಾಜಾ. ಒಮ್ಮೆ ನಾಲಗೆಯ ಮೇಲಿಟ್ಟುಕೊಂಡರೆ ಕರಗುವ ತನಕ ಚಪ್ಪರಿಸುತ್ತಿರಬಹುದು. ಮುಗಿದ ಮೇಲೆ ಹೋಯಿತು. ಬೇರೆಯದೇ ಬೇಕು ! ಸಂಧ್ಯಾದೇವಿಯವರ ಪದ್ಯಗಳಲ್ಲಿ , ಸಾಲಿನಿಂದ ಸಾಲಿಗೆ ರಸೋತ್ಕರ್ಷವಾಗುವ ಬಗೆ ಅನನ್ಯ. ಇವರೆದುರು ನಮ್ಮ ಬಹುಪಾಲು ಕವಿಗಳನ್ನು ನಿವಾಳಿಸಿ ತೆಗೆಯಬೇಕು ಅಂತ ನನ್ನ ತಮ್ಮ ಹೇಳುತ್ತಿದ್ದ ! ಪದ-ರಸ-ವಿಚಾರ ಈ ಮೂರನ್ನೂ ಕರಡಿಸಿ ಕುಡಿಸುವ ಇವರ ಕಾವ್ಯ ಸುಧೆಯ ಒಂದು ಹೊಸ ಗುಟುಕು ಇಲ್ಲಿದೆ.
ನೆನಪು
ಕೈಯಲ್ಲಿ ಹಿಡಿದ
ಚಹಾ ಕಪ್ಪಿನಲ್ಲಿ
ನಿನ್ನ ನೆನಪಿದೆ.
ಸುರುಳಿ ಸುರುಳಿಯಾಗಿ
ಮೇಲೇಳುವ
ಹಬೆಯ ಬಳ್ಳಿಯಿದೆ.
ಚಹಾದಲ್ಲಿರುವ ಅವೆರಡು
ಅತಿ ಸೂಕ್ಷ್ಮ
ನಾಜೂಕು.
ತಣಿಯಬಾರದು
ಮುಗಿಯಲೂ ಬಾರದು
ಹಾಗೆ ಹೀರಿದೆ ಚಹಾವೆಂಬ ನೆನಪನ್ನು !
ಹಬ್ಬಿತು ರುಚಿ
ಹಬೆಯ ಬಳ್ಳಿ.
ದೊಡ್ಡವರು
ಓ... ನೀನು ಭೂಮ
ನಾನು ಭಾಮಾ !
ಮಹಲಿನ ಉಪ್ಪರಿಗೆಯ ಮೂಲೆಯಲ್ಲಿ
ಬೀದಿಯ ಸಂದಿಗೊಂದಿನಲ್ಲಿ
ಎಲ್ಲಿ ಸೇರಿದರಲ್ಲಿ
ಅದುವೆ ಸುಧಾಮ.
ಸುದಾಮ ನಿನಗೆ ಸ್ನೇಹಿತ
ನಾನೂ ನೋಡಿದ್ದೇನೆ.
ದೊಡ್ಡವರು ಮಾತ್ರ ಸಣ್ಣವರ
ಹತ್ತಿರ ಬರುತ್ತಾರೆ
ಬಂದು ಪಾದವನ್ನೂ ಮುಟ್ಟುತ್ತಾರೆ
ತೊಳೆಯುತ್ತಾರೆ ಕೂಡಾ.
ಏನು? ಸೇವಕನ ಸೇವೆಯನ್ನು
ಮಾಡುವುದುಂಟೇ ...ದೊರೆ?
ಅವನು ದೊರೆಯಲ್ಲ
ದೇವರೇ !
---------------
ಪಾಶ
ಒಂದು ಹುಬ್ಬು !
ಅಯ್ಯೋ...ಅದು ಹುಬ್ಬಲ್ಲ
ನನ್ನ ಪಾಲಿನ ಪಾಶ.
ನನ್ನ ಮೇಲಿನ ಪರೀಕ್ಷೆ.
ಓ ಪ್ರೇಮವೇ...
ನನ್ನ ಪರವಶವೇ...
ನನ್ನನ್ನು ಕಟ್ಟಿ ಹಾಕಿದ ನೋಟವೇ...
ಸೋತಿದ್ದೇನೆ ನೋಡು
ನಿನ್ನ ಕೈಯಲ್ಲಿ ಹಿಡಿದ
ವಿಷದ ಬಟ್ಟಲಿನಲ್ಲಿ
ನನ್ನ ನೀಲಿಯಾದ ತುಟಿಗಳಿವೆ .
ಕುಡೀ...ಇನ್ನು ನೀನು
ವಿಷ ಕುಡಿ .
- ಸಂಧ್ಯಾದೇವಿ
5 comments:
ವಾಹ್! ಸೊಗಸಾಗಿವೆ ಕವಿತೆಗಳು. ಸಂಧ್ಯಾದೇವಿಯವರ ಬಗ್ಗೆ ಗೊತ್ತಿರಲಿಲ್ಲ. ಪರಿಚಯಕ್ಕೆ ಧನ್ಯವಾದಗಳು. ಅವರ ಪುಸ್ತಕ ಬೆಂಗಳೂರಲ್ಲಿ ಸಿಗುತ್ತೆ ತಾನೆ?
- ಚೇತನಾ ತೀರ್ಥಹಳ್ಳಿ
mostly u cant get it in bng. if u want a copy, u can contact her directly in 08251-233383
- champakavathi
ಒಳ್ಳೆಯ ಕವಿತೆಗಳು. ಪರಿಚಯಿಸಿದ್ದಕ್ಕೆ ಧನ್ಯವಾದಗಳು.
ಸುಧನ್ವ,
ಸಂಧ್ಯಾ ದೇವಿ ಕವಿತೆಗಳು ಚೆನ್ನಾಗಿವೆ, ಅದರಲ್ಲೂ ಚಹಾ ಕಪ್ಪು..ನೆನಪು ತುಂಬಾ ಇಷ್ಟವಾಯ್ತು...
ದೇಶ-ಕಾಲದಲ್ಲಿ ಅವರ ಕವನಗಳನ್ನು ಓದಿದ ನಂತರ ನಾನೂ ಅವರ ಅಭಿಮಾನಿಯಾಗಿದ್ದೆ. ಈಗ ಮತ್ತೆ ಕೆಲವು ಕವನಗಳನ್ನು ಕೊಟ್ಟು ದಾಹವನ್ನು ತೀರಿಸಿದ್ದೀರಿ. ಅವರ ಕವನಗಳು ಹೊಸತು ಎನಿಸುತ್ತವೆ.
ಬಾನಾಡಿ.
Post a Comment