March 30, 2008

ಬೆಳ್ಳೇಕೆರೆಯ ಹಳ್ಳಿ ಥೇಟರ್ - ಅಂಕ ೨

ಪ್ರಸಾದ್ ರಕ್ಷಿದಿಯವರ ಹಳ್ಳಿ ಥೇಟರ್ ಮುಂದುವರಿಯುತ್ತಿದೆ.
'ಕ್ಷ್ಮಯ್ಯ ಚಕ್ಕೋತ್ನಣ್ಣು' ಎಂದೆ. 'ಮಧ್ಯಾಹ್ನ ಬೇಗ ಬರ್‍ತೀನಿ ಹೋಗಾಣ' ಯಾಕೋ ಲಕ್ಷ್ಮಯ್ಯ ಹೆಚ್ಚು ಮಾತಾಡಲಿಲ್ಲ- 'ನೀನು ಹೋಗು ಮನೆಗೆ ' ಅಂದುಬಿಟ್ಟ. ಇವನಿಗಿನ್ನೂ ಅಪ್ಪನ ಮೇಲಿನ ಸಿಟ್ಟು ಇಳಿದಿಲ್ಲವೆಂದೂ, ಇವನು ಮಧ್ಯಾಹ್ನ ಬಂದು ನನ್ನನ್ನು ಚಕ್ಕೋತದ ಹಣ್ಣಿಗಾಗಿ ಕರೆದೊಯ್ಯುವುದಿಲ್ಲವೆಂದೂ ಅಂದುಕೊಂಡೆ- ಬೇಸರವಾಯ್ತು. ಮಧ್ಯಾಹ್ನವಾದಂತೆ ಸಂತೆಗೆ ಹೋದ ಲಕ್ಷ್ಮಯ್ಯನ ದಾರಿ ಕಾಯುತ್ತ ಕುಳಿತೆ. ಗಂಟೆ ಮೂರಾದರೂ ಲಕ್ಷ್ಮಯ್ಯನ ಸುಳಿವೇ ಇಲ್ಲ. ಅಮ್ಮನಲ್ಲಿ ದೂರಿಕೊಂಡೆ. 'ಅಪ್ಪ ಬೈದದಕ್ಕೆ ಲಕ್ಷ್ಮಯ್ಯ ಬಂದಿಲ್ಲ, ನಂಗೆ ಚಕ್ಕೋತನ ಹಣ್ಣು ಕೊಯ್ದುಕೊಡ್ತೇನೆ ಅಂತ ಹೇಳಿದ್ದ.' 'ನಾನು ಅಪ್ಪನತ್ರ, ಬೇರೆ ಯಾರಿಗಾದ್ರೂ ಹೇಳಿ ತರ್‍ಸಿ ಕೊಡಲು ಹೇಳ್ತೇನೆ. ಯಾಕೋ ಇತ್ತೀಚೆಗೆ ಲಕ್ಷ್ಮಯ್ಯನಿಗೂ ಸ್ವಲ್ಪ ಹಾಂಕಾರ ಬಂದ್ಹಾಗೆ ಕಾಣ್ತೆ.' ಅಮ್ಮ- ಅಪ್ಪನ ಪರ ವಹಿಸಿದಳು. ನನಗೆ ಸಮಾಧಾನವಾಗಲಿಲ್ಲ. ನಾಲ್ಕು ಗಂಟೆಯ ಹೊತ್ತಿಗೆ ಲಕ್ಷ್ಮಯ್ಯ ಸಂತೆಯಿಂದ ಮೂಟೆ ಹೊತ್ತುಕೊಂಡು ಬಂದ.

ಅಪ್ಪ ಪೇಟೆಯಿಂದ ತರಲು ಹೇಳಿದ್ದ ಸಾಮಾನುಗಳನ್ನೆಲ್ಲ ತಂದಿದ್ದ. ಅವನು ಸಾಮಾನಿನ ಹೊರೆ ಹೊತ್ತುಕೊಂಡು ತನ್ನ ಮನೆಯತ್ತ ಹೊರಟಾಗ- ನಾನೂ ಅವನನ್ನು ಹಿಂಬಾಲಿಸಿ ಹೋದೆ. ಲಕ್ಷ್ಮಯ್ಯ ಮೂಟೆಯನ್ನು ತಲೆಯಿಂದ ಕೆಳಗಿಳಿಸಿ ಕಟ್ಟು ಬಿಚ್ಚುತ್ತಿರುವಾಗ 'ನೀನು ಬೇಗ ಬಂದಿಲ್ಲ, ಇನ್ನೀಗ ಸಾಯಂಕಾಲ ಆಯ್ತು, ನಾಳೆ ನೀನು ಕೆಲಸಕ್ಕೆ ಹೋಗ್ತೀಯ ಮತ್ತೆಲ್ಲಿಂದ ಚಕ್ಕೋತ್ನಣ್ಣು' ನಾನು ರಾಗ ತೆಗೆದೆ. 'ನೋಡಿಲ್ಲಿ' ಲಕ್ಷ್ಮಯ್ಯ ಮೂಟೆಯೊಳಗಿಂದ ಮೂರು ನಾಲ್ಕು ಚಕ್ಕೋತ ಹಣ್ಣುಗಳನ್ನು ಹೊರತೆಗೆದ. 'ಬರುವಾಗ ತಡವಾಯ್ತಲ್ಲ ಅಂತ ದಾರಿಲೇ ಇಳ್ದು ಹೋಗಿ ಕುಯ್ಕೊಂಡು ಬಂದೆ.' ಸಕಲೇಶಪುರದಿಂದ ನಮ್ಮಲ್ಲಿಗೆ ಬರುವವರು ಸಾಮಾನ್ಯವಾಗಿ ರಕ್ಷಿದಿಯಲ್ಲೇ ಬಸ್ಸಿನಿಂದಿಳಿದು ಬರುತ್ತಿದ್ದರು. ಆದರೆ ಅದಕ್ಕೂ ಹಿಂದಿನ ನಿಲ್ದಾಣವಾದ ಗಾಣದಹೊಳೆಯಲ್ಲೇ ಬಸ್ಸಿನಿಂದ ಇಳಿದರೆ, ಮಾವಿನ ಕೂಲಿನ ಮೂಲಕ ನಮ್ಮಲ್ಲಿಗೆ ಬರಲೊಂದು ಒಳದಾರಿಯಿತ್ತು. ಗಾಣದಹೊಳೆಯಿಂದ ಎಸ್ಟೇಟಿಗೆ ಬರುವ ಕೆಲಸಗಾರರು ಈ ದಾರಿಯಲ್ಲಿ ನಡೆದು ಬರುತ್ತಿದ್ದರು. ಇದು ರಕ್ಷಿದಿಯಿಂದ ಬರುವ ದಾರಿಗಿಂತ ಸ್ವಲ್ಪ ಹೆಚ್ಚು ದೂರವಾಗುತ್ತಿತ್ತು. ಈ ದಾರಿಯ ಪಕ್ಕದಲ್ಲೆಲ್ಲೋ ಚಕ್ಕೋತದ ಮರಗಳಿದ್ದವು. ಲಕ್ಷ್ಮಯ್ಯ ಗಾಣದಹೊಳೆಯಲ್ಲೇ ಬಸ್ಸಿನಿಂದಿಳಿದು ಸಾಮಾನಿನ ಮೂಟೆಯನ್ನೂ ಹೊತ್ತುಕೊಂಡು- ಒಳದಾರಿಯಲ್ಲೇ ಬಂದು ನನಗಾಗಿ ಚಕ್ಕೋತದ ಹಣ್ಣುಗಳನ್ನು ಕೊಯ್ದು ತಂದಿದ್ದ. ನನಗೆ ಹಣ್ಣುಗಳನ್ನು ಕಂಡು ಖುಷಿಯಾದರೂ ನಾನೇ ಚಕ್ಕೋತದ ಮರಗಳಿರುವ ಜಾಗಕ್ಕೆ ಹೋಗಬೇಕೆಂದಿದ್ದುದರಿಂದ 'ನೀನು ತಂದಿದ್ದಲ್ಲ, ನಾನೇ ಮರಹತ್ತಿ ಕುಯ್ಬೇಕಿತ್ತು' ಎಂದೆ. 'ಮುಂದಿನ ವಾರ ಹೋಗೋಣ, ಇಲ್ಲ ನಾಳೆ ಬೇಗ ಕೆಲ್ಸ ಆದ್ರೆ ನಾಳೆನೇ ಹೋಗೋಣ' ಎಂದು ತಂದಿದ್ದ ಚಕ್ಕೋತಗಳನ್ನು ಎರಡೆರಡನ್ನು ಸೇರಿಸಿ ಕಡ್ಡಿ ಚುಚ್ಚಿ- ಹಿಡಿದುಕೊಂಡು ಹೋಗಲು ಅನುಕೂಲವಾಗುವಂತೆ ಮಾಡಿಕೊಟ್ಟ- ನಾನು ಅವುಗಳನ್ನು ಡಂಬೆಲ್ಸ್‌ನಂತೆ ಕೈಗಳಲ್ಲಿ ಹಿಡಿದು ತಿರುಗಿಸುತ್ತಾ ಮನೆಯತ್ತ ಹೊರಟೆ. ಅಷ್ಟರಲ್ಲಿ ಲಕ್ಷ್ಮಯ್ಯ 'ಪ್ರಸಾದು ನಿಲ್ಲು ನಿಂಗೇಂತ ತಿಂಡಿ ತಂದಿದೀನಿ' ಎಂದು ಚೀಲದಿಂದ ಒಂದು ಕಾಗದದ ಪೊಟ್ಟಣ ತೆಗೆದ. ಅವನು ಸಂತೆಯಿಂದ ಪಕೋಡ ತಂದಿದ್ದ. ಮನೆಯಲ್ಲಿ ಗೊತ್ತಾದರೆ ಅಮ್ಮ ನನಗೆ ಸಂತೆ ತಿಂಡಿ ತಿನ್ನಲು ಬಿಡುತ್ತಿರಲಿಲ್ಲ. ಆದ್ದರಿಂದ ಪಕೋಡದ ಆಸೆಗೆ ಅಲ್ಲೇ ಕುಳಿತೆ.ನಾನು ಪಕೋಡ ತಿನ್ನುತ್ತಿರುವಾಗ ಲಕ್ಷ್ಮಯ್ಯ ಚೀಲದಿಂದ ಇನ್ನೊಂದು ಕಟ್ಟು ತೆಗೆದು ಮೆಲ್ಲನೆ ಬಿಚ್ಚಿದ.

ಅದರಲ್ಲಿ ಒಂದು ಸ್ಲೇಟು ಮತ್ತು ಬಳಪದ ಕಟ್ಟು ಇದ್ದವು. 'ಯಾರಿಗಪ್ಪ ಸ್ಲೇಟು ಬಳಪ ?!' 'ನಂಗೇಯ' 'ನೀನು ಬರಿತೀಯ?' 'ನೋಡು ಪ್ರಸಾದು, ನೀನು ನಂಗೆ ಬರಿಯೋದು ಹೇಳ್ಕೊಡು-ಆದರೆ ಯಾರಿಗೂ ಹೇಳ್ಬಾರ್ದು, ಗುಟ್ಟಾಗಿರ್‍ಬೇಕು. ನಾನು ಯಾವಾಗ್ಲೂ ನಿಂಗೆ ತಿಂಡಿ ತಂದ್ಕೊಡ್ತೀನಿ'. ನನಗೂ ಒಂದು ರೀತಿಯ ವಿಚಿತ್ರ ಖುಷಿ ಆಯ್ತು. 'ಸರಿ, ಏನೇನು ಕಲೀತೀಯ?' 'ಮೊದ್ಲು ರುಜು ಹಾಕದು ಕಲೀತೀನಿ' 'ನಂಸ್ಕೂಲಲ್ಲಿ ಮೇಷ್ಟ್ರು ಹೇಳ್ತಿರ್‍ತಾರೆ-ಊರಿನ ಹೆಸರು-ಬಸ್ಸಿನ ಬೋರ್ಡು ಓದೋವಷ್ಟಾದ್ರೂ ಕಲಿಬೇಕಂತೆ, ಇಲ್ದಿದ್ರೆ ಏನೂ ಪ್ರಯೋಜನ ಇಲ್ವಂತೆ.' 'ಸರಿ ಮತ್ತೆ ಅಷ್ಟೂ ಹೇಳ್ಕೊಡು-ಇವತ್ತಿಂದ್ಲೇ'-ಲಕ್ಷ್ಮಯ್ಯ ಅವಸರದಲ್ಲಿದ್ದ. ನಾನು ಮನೆಗೆ ಹೋಗಿ ಚಕ್ಕೋತಗಳನ್ನು ಇಟ್ಟು ಬರುವಾಗ, ಲಕ್ಷ್ಮಯ್ಯ ಒಂದು ಸೀಮೆಸೀಗೆ (ಲಂಟಾನ) ಕೋಲನ್ನು ಮುರಿದು ತಂದಿಟ್ಟಿದ್ದ. ನಮ್ಮ ಶಾಲೆಯಲ್ಲಿ ತಪ್ಪು ಮಾಡಿದ ಮಕ್ಕಳಿಗೆ ಮೇಷ್ಟ್ರುಗಳು ಸೀಮೇಸೀಗೆ ಕೋಲಿನಲ್ಲಿ ಹೊಡೆಯುತ್ತಿದ್ದರು. 'ಸರಿಯಾಗಿ ಹೇಳ್ಕೊಡದಿದ್ರೆ ಹೊಡಿತೀಯೇನೋ !?' ಗಾಬರಿಯಲ್ಲಿ ಕೇಳಿದೆ. 'ಇಲ್ಲ-ನೀನೀಗ ನನಗೆ ಮೇಷ್ಟ್ರು ನಾನು ಸರಿಯಾಗಿ ಕಲೀದಿದ್ರೆ ಹೊಡಿ' ಎಂದು ಕೋಲನ್ನು ನನ್ನ ಮುಂದೆ ಇಟ್ಟು ಶಿಷ್ಯನಾಗಿಬಿಟ್ಟ. ಒಂದು ಕ್ಷಣ ನಾನು ಮೇಷ್ಟ್ರಾದಂತೆ ಕೋಲನ್ನು ಝಳಪಿಸುತ್ತ ಕ್ಲಾಸಿನಲ್ಲಿ ಅಡ್ಡಾಡಿದಂತೆ ಅನ್ನಿಸಿ ಸಂತೋಷವಾಯಿತು.ಲಕ್ಷ್ಮಯ್ಯನ ಅಕ್ಷರಾಭ್ಯಾಸ ಗುಟ್ಟಾಗಿ ಪ್ರಾರಂಭವಾಯಿತು. ಅವನು ಪ್ರತಿದಿನ ಬಿಡುವಿನ ವೇಳೆಯಲ್ಲಿ ಸ್ಲೇಟಿನಲ್ಲಿ ಅಕ್ಷರ ತಿದ್ದತೊಡಗಿದ.

ಬೇಸಗೆಯಾದ್ದರಿಂದ ಕೆಲಸ ಮುಗಿದ ಮೇಲೆ ಸಂಜೆಯ ಹೊತ್ತಿಗೆ ಗಂಡಾಳುಗಳೆಲ್ಲ ಎತ್ತಿನ ಹಳ್ಳಕ್ಕೆ ಸ್ನಾನಕ್ಕೆ ಹೋಗುತ್ತಿದ್ದರು. ಅವರೊಂದಿಗೆ ನಾನೂ ಹೋಗುತ್ತಿದ್ದೆ. ಲಕ್ಷ್ಮಯ್ಯನೂ ನಾನೂ ಹೊಳೆಯಲ್ಲಿ ಇತರರಿಂದ ದೂರದಲ್ಲಿ ಬೇರೆ ಕಡೆ ಸ್ನಾನಕ್ಕೆ ಹೋಗುತ್ತಿದ್ದೆವು. ಅಲ್ಲಿ ಅವನಿಗೆ ಕಾಗುಣಿತ ಬಾಯಿಪಾಠ ಮಾಡಿಸತೊಡಗಿದೆ. ಕಾಗುಣಿತವನ್ನೆಲ್ಲ ಅವನು ಹಾಡಿನಂತೆ ರಾಗವಾಗಿ ಹೇಳುತ್ತ ಬಾಯಿಪಾಠ ಮಾಡುತ್ತಿದ್ದ. ನಮ್ಮೆಲ್ಲರ ವಾಸದ ಮನೆಗಳಿಂದ ಮೂರು ಫರ್ಲಾಂಗು ದೂರದಲ್ಲಿ, ನಾವೆಲ್ಲ ಇದ್ದ ಕಾಫೀ ಎಸ್ಟೇಟಿನ ಅಂಚಿನಲ್ಲೇ-ತೋಟವನ್ನು ಬಳಸಿ ಉದ್ದಕ್ಕೂ ಕಾಡಿನ ಮಧ್ಯದಲ್ಲೇ ಹರಿಯುವ ಎತ್ತಿನಹಳ್ಳ ತನ್ನ ಹರಿವಿನುದ್ದಕ್ಕೂ ಕಲ್ಲು ಬಂಡೆಗಳಿಂದ ಕೂಡಿದೆ. ಅದರಲ್ಲಿ ಬೇಸಗೆಯಲ್ಲೂ ಕೂಡಾ ಸಾಕಷ್ಟು ನೀರಿನ ಹರಿವಿರುತ್ತದೆ. ಬಂಡೆಗಳ ಮಧ್ಯೆ ರಭಸದಿಂದ ಹರಿಯುವ ನೀರಿನ ಶಬ್ದದಿಂದಾಗಿ ಲಕ್ಷ್ಮಯ್ಯನ ಕಾಗುಣಿತದ ರಾಗ ದೂರದಲ್ಲಿರುವವರಿಗೆ ಏನೋ ಹಾಡುತ್ತಿದ್ದಂತೆ ಕೇಳುತ್ತಿತ್ತೇ ವಿನಹ ಏನೆಂದು ತಿಳಿಯುತ್ತಿರಲಿಲ್ಲ. ಹೀಗೇ ಸ್ವಲ್ಪ ದಿನಗಳು ಕಳೆದವು. ಬೇಸಗೆ ರಜೆಯ ಸಮಯವಾದ್ದರಿಂದ ನಾನು ನನ್ನ ಅಕ್ಕನೊಡನೆ ನೆಂಟರ ಮನೆಗೆ ಹೋದೆ. ಅಲ್ಲಿಂದ ವಾಪಸ್ ಬರುವಾಗ ತಿಂಗಳೇ ಕಳೆಯಿತು. ಆ ವೇಳೆಗೆ ಲಕ್ಷ್ಮಯ್ಯನ ಓದು ನಿಂತು ಹೋಗಿರಬಹುದು ಅಂದುಕೊಂಡಿದ್ದೆ. ಕಾಫಿತೋಟಗಳಲ್ಲಿ ಸಾಮಾನ್ಯವಾಗಿ ಏಪ್ರಿಲ್ ತಿಂಗಳಲ್ಲಿ ಕೆಲಸಗಾರರ ವರ್ಷದ ಲೆಕ್ಕ ಮಾಡುತ್ತಾರೆ. ಆ ನಂತರ ಹತ್ತು ಹದಿನೈದು ದಿನಗಳ ಕಾಲ ಕೆಲಸಕ್ಕೆ ರಜೆ ಇರುತ್ತದೆ. ನಾವು ಬರುವ ಸಮಯಕ್ಕೆ ತೋಟದ ವರ್ಷದ ಲೆಕ್ಕ ಆಗಿ ಜನರಿಗೆಲ್ಲಾ ರಜೆ ಮುಗಿದು ಮತ್ತೆ ಕೆಲಸ ಪ್ರಾರಂಭವಾಗಿತ್ತು. ಮನೆಗೆ ಬಂದವನೇ ಆ ದಿನವೇ ಸಂಜೆ ಲಕ್ಷ್ಮಯ್ಯನ ಮನೆಗೆ ಓಡಿದೆ. ಅವನು ತನ್ನ ಮನೆಯ ಗೋಡೆಯ ಮೇಲೆಲ್ಲಾ ಇದ್ದಿಲಿನಿಂದ ದೇವರುಂದ-ಮೂಡಿಗೆರೆ, ಸಕಲೇಶಪುರ-ಹಾಸನ ಎಂದೆಲ್ಲಾ ಬರೆದಿದ್ದ! 'ಇದೇನೋ' ಎಂದೆ. 'ಈ ಬಸ್ಸಿನ ಬೋರ್ಡೆಲ್ಲಾ ಓದ್ತೀನಿ'. ಕನ್ನಡ ಒಂದನೆಯ ಪುಸ್ತಕವನ್ನು ತಂದಿಟ್ಟುಕೊಂಡಿದ್ದ-ತಪ್ಪು ತಪ್ಪಾಗಿ ಓದುವುದನ್ನೂ ಕಲಿತಿದ್ದ. 'ಸರಿ ಇವಾಗ ರುಜು ಹಾಕದು ಹೇಳ್ಕೊಡು' ಎಂದ-ಅವನಿನ್ನೂ ರುಜು ಹಾಕಲು ಕಲಿತಿರಲಿಲ್ಲ! 'ನಾನ್ಯಾಕೆ ಹೇಳ್ಕೊಡ್ಲಿ, ನೀನೇ ಕಾಗುಣಿತ ಹೇಳ್ಕೊಂಡು ಬರಿ, ನಾನು ಹೇಳ್ತೀನಿ' ಎಂದು ಕಾಗುಣಿತ ಹೇಳತೊಡಗಿದೆ.
'ಲಕ್ ತಲ್ ಕಟ್ಟು ಲ...... ಕಕ್‌ತಲ್‌ಕಟ್ಟು ಕ...ಕಾಕ್ ಷವತ್ತು ಮತ್ ಮಾವತ್ತು-ಯಕ್ ತಲ್‌ಕಟ್ಟು ಯ...ಯಾಕ್ ಯಾವತ್ತು - ಲಕ್ಷ್ಮಯ್ಯ".....ಬರೆದೇಬಿಟ್ಟ..... ಮುಂದಿನ ವಾರ ನನ್ನ ಶಾಲೆ ಪ್ರಾರಂಭವಾಗುವುದರಲ್ಲಿತ್ತು.

ಬುಧವಾರ ಸಂಜೆ ಯಥಾ ಪ್ರಕಾರ ಅಪ್ಪ ಆಳುಗಳಿಗೆ ಬಟವಾಡೆ ಮಾಡುತ್ತಿದ್ದರು. ಯಾವಾಗಲೂ ಮೊದಲಿಗೇ ಬರುತ್ತಿದ್ದ ಲಕ್ಷ್ಮಯ್ಯ
ಅಂದು ಬಟವಾಡೆ ಮುಗಿಯುತ್ತ ಬಂದಿದ್ದರೂ ಹೊರಗೇ ನಿಂತಿದ್ದ। ಅಪ್ಪ ಈಗಾಗಲೇ ಎರಡು ಸಾರಿ ಅವನ ಹೆಸರನ್ನು ಕರೆದಾಗಿತ್ತು। 'ಲಕ್ಷ್ಮಯ್ಯ ನಿನಗೇನು ಪ್ರತ್ಯೇಕ ಹೇಳಿಕೆ?' ಅಪ್ಪ ಗುಡುಗಿದರು। ಲಕ್ಷ್ಮಯ್ಯ ಮೆಲ್ಲನೆ ಒಳಗೆ ಬಂದ. ಅಮ್ಮ ಮೇಜಿಗೆ ಶಾಯಿ ಉಜ್ಜುವವರ ನಿಯಂತ್ರಣಕ್ಕೆ ಕೂತಿದ್ದಳು.ಲಕ್ಷ್ಮಯ್ಯ ಆಚೀಚೆ ನೋಡಿ, 'ಅಯ್ಯೋರೆ ಪೆನ್ನು ಕೊಡಿ' ಅಂದವನೇ ಅವರ ಅನುಮತಿಗೂ ಕಾಯದೆ ಪೆನ್ನು ತೆಗೆದುಕೊಂಡ- ಸ್ವಲ್ಪ ಗಾಬರಿ ಆದಂತಿದ್ದ-ಕೈ ನಡುಗುತ್ತಿತ್ತು. ಅಪ್ಪ ಅವನ ಮುಖವನ್ನೇ ಆಶ್ಚರ್ಯ ಮತ್ತು ಗಾಬರಿಗಳಿಂದ ನೋಡಿದರು. 'ಹೂಂ ಇಲ್ಲಿ' ಎಂದು ಅವನು ರುಜು ಮಾಡಬೇಕಾದ ಜಾಗ ತೋರಿಸಿದರು. ಲಕ್ಷ್ಮಯ್ಯ ನಡುಗುವ ಕೈಗಳಿಂದ ನಿಧಾನವಾಗಿ ಪ್ರಾರಂಭಿಸಿದ. 'ಲಕ್ ತಲ್ ಕಟ್ಟು ಲ.......... ಯಕ್ ತಲ್ ಕಟ್ಟು ಯ ಯಾ ಕ್ ಯಾವತ್ತು ಲಕ್ಷ್ಮಯ್ಯ' ಎಂದು ರಾಗವಾಗಿ ಕಾಗುಣಿತ ಹೇಳುತ್ತಲೇ ರುಜು ಮಾಡಿದ. ಪೆನ್ನು ಕೆಳಗಿಟ್ಟು ತಲೆಯೆತ್ತಿ ಅಪ್ಪನನ್ನೇ ನೋಡುತ್ತ ನಿಂತ. ಈಗ ಅಪ್ಪ-ಅಮ್ಮ ಮೆಚ್ಚುಗೆಯಿಂದ ನಗುತ್ತಿದ್ದರು. ನಾನು ಲಕ್ಷ್ಮಯ್ಯನ ಪಕ್ಕದಲ್ಲೇ ನಿಂತಿದ್ದೆ.

Read more...

March 25, 2008

ಗಾಳಿಪಟ:ಕೆಲವು ಟಿಪ್ಪಣಿಗಳು

ಗಂಡನ ಮನೆಯಲ್ಲಿದ್ದೇ ಕಾಡಿನ ಮಕ್ಕಳಿಗೆ ಪಾಠ ಹೇಳುವ ವಿಧವೆ , ಬೆಂಗಳೂರಿನಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿ ಊರಿಗೆ ಬಂದು ಪಿಯುಸಿ ಮಾಡುತ್ತಾ ಮಗಂದಿರಿಲ್ಲದ ಅಪ್ಪನನ್ನು ನೋಡಿಕೊಳ್ಳುತ್ತಿರುವ ಮಗಳು, ಆಯುರ್ವೇದ (ಬಿ.ಎ.ಎಂ.ಎಸ್.)ಓದು ಮುಗಿದ ಬಳಿ ಹಳ್ಳಿಯಲ್ಲೇ ವೃತ್ತಿ ನಡೆಸಲು ಬಯಸಿರುವ ಇನ್ನೊಬ್ಬಳು ಮಗಳು, ಪ್ರಾಣಿ ಹತ್ಯೆ ಸಲ್ಲದು ಎಂಬ ಸಂದೇಶ, ವಿಧವಾ ವಿವಾಹಕ್ಕೆ ಪ್ರೋತ್ಸಾಹ, ಕೆಳ ಜಾತಿಯ ಕರಿಯ ಕೆಲಸಗಾರನನ್ನೂ ಮನೆಯೊಳಗೆ ಕರೆದುಕೊಳ್ಳುವ ಜಾತ್ಯತೀತತೆ, ಇಂಗ್ಲಿಷ್ ಮೀಡಿಯಮ್ಮಲ್ಲೇ ಓದಿ ಬೆಳೆದ ಹುಡುಗರಿಗೆ ಕನ್ನಡ ಕಲಿಯಲು ಉಪದೇಶ, ಕುವೆಂಪು, ಜಿಎಸ್‌ಎಸ್‌ರಂತಹ ಕವಿಗಳಿಗೆ ಹೊಗಳಿಕೆ, ಅಶ್ಲೀಲ ಭಂಗಿ-ರಕ್ತದೋಕುಳಿಗೆ ನಿಷೇಧ...ಇವೆಲ್ಲ ಒಳ್ಳೆಯ ಸಿನಿಮಾದ ಲಕ್ಷಣಗಳಲ್ವಾ?!

ಕತೆ ಅನ್ನೋದೇನೂ ಇಲ್ಲ, ಗಣೇಶನ ಮಾತು ಅತಿಯಾಯ್ತು...ಹೀಗಾಗಿ ಗಾಳಿಪಟಕ್ಕೆ ಅಂತಹ ಯಶಸ್ಸು ಸಿಕ್ಕಿಲ್ಲ ಅಂತ ತಳ್ಳಿ ಹಾಕುವುದು ಸುಲಭ . ಆದರೆ... ವಾಚಾಳಿಯಾಗಿರುವ ಗಣೇಶನ ಜತೆಗೆ ಮಾತೇ ಬಾರದ ‘ಡ್ರಾಕುಲಾ’ನ ಪಾತ್ರವೂ ಇದೆ. ಮೂವರು ಹುಡುಗರು ಮತ್ತು ಮೂವರು ಹುಡುಗಿಯರೂ ಭಿನ್ನ ಮನೋಭಾವದವರು. ತೀರಿಹೋದ ಪತಿಯೇ ಪರದೈವವಾಗಿರುವ ಗಂಭೀರೆ ಒಬ್ಬಳಾದರೆ, ಕೃಷಿ-ವ್ಯವಹಾರ ಮಾಡುತ್ತಾ ಗಂಡಸರಂತೆ ವರ್ತಿಸುವವಳು ಮತ್ತೊಬ್ಬಳು. ಕೊನೆಯವಳಂತೂ ಪ್ರಿಯಕರನ ಕೊರಳ ಪಟ್ಟಿ ಹಿಡಿದು ಸೆಳೆವ ಕಾಮಾತುರೆ . ವಾಚಾಳಿ ಗಣೇಶ ಕೊನೆಗೆ ವಿವಾಹವಾಗುವುದು ಅತ್ಯಂತ ಕಡಿಮೆ ಮಾತಾಡುವ ವಿಧವೆಯನ್ನು ಮತ್ತು ಅತ್ಯಂತ ಕಡಿಮೆ ಮಾತಾಡುವವನು ಚಟಪಟ ರಟ್ಟುತ್ತಿರುವ ಕೊನೆಯ ಹುಡುಗಿಯನ್ನು ! ಮಂಡ್ಯ-ಬೆಂಗಳೂರು-ಮಲೆನಾಡು-ತುಳುನಾಡು (ಮಂಗಳೂರು)ಗಳನ್ನು ಒಂದಾಗಿಸುವ ಎಳೆಯೂ ಕತೆಯಲ್ಲಿದೆ. ಜತೆಗೆ ಗಣೇಶನ ಹಸನ್ಮುಖ ಖುಶಿ ಕೊಡದೆ ಇದ್ದೀತೇ?

ಗೀತೆಗಳು ಮುಂಗಾರು ಮಳೆಯಷ್ಟು ಚೆನ್ನಾಗಿಲ್ಲದಿರುವುದು, ಲೊಕೇಶನ್‌ಗಳು ಅದೇ ಥರಾ ಇರುವುದು, ಹೊಸತು ಎಂಬಂತಿರುವ ಹಂದಿ ಬೇಟೆಯ ಪ್ರಸಂಗವೂ ಸೆನ್ಸೇಷನಲ್ ಆಗದೆ ಸಪ್ಪೆಯಾಗಿ ಖಾರ (ಫೈಟಿಂಗ್ ಇತ್ಯಾದಿ)ದ ಕೊರತೆಯನ್ನು ತುಂಬದಿರುವುದು, ಗಾಳಿಪಟದ ಹಾರಾಟ ನಿರೀಕ್ಷೆ ಮುಟ್ಟದಿರಲು ಮುಖ್ಯ ಕಾರಣಗಳಿರಬೇಕು. ತುಂಡು ಪಾತ್ರಗಳ ಮೂಲಕ ಚಿತ್ರಕಥೆ ಕಟ್ಟುವ ಹೊಸ ಯೋಚನೆಗೆ ಪೂರಕವಾಗಿ, ಪ್ರಸ್ತುತಿಯಲ್ಲಿ ಹೊಸತನ ಹುಟ್ಟಿದಂತಿಲ್ಲ. ಸಾಮಾನ್ಯ ಹುಡುಗನೊಬ್ಬ ಪಾತಕಿಗಳ ಲೋಕ ಪ್ರವೇಶಿಸುವ ಹಳೇ ಕತೆಯುಳ್ಳ ‘ದುನಿಯಾ’ವನ್ನು ಅಥವಾ ಮಾಮೂಲಿ ಕತೆಯ ’ಮುಂಗಾರು ಮಳೆ’ಯನ್ನು ಗೆಲ್ಲಿಸಿದ್ದು ಅವುಗಳ ಪ್ರಸ್ತುತಿಯಲ್ಲಿದ್ದ ಹೊಸತನದ ರೀತಿ, ನಮ್ಮ ನಿರೀಕ್ಷೆಯನ್ನು ಸುಳ್ಳಾಗಿಸುವ ಅಂತ್ಯಭಾಗ. ಆದರೆ ಇಲ್ಲಿ ಸಿನಿಮಾವನ್ನು ಮುಗಿಸುವುದಕ್ಕೆ ತಡಬಡಾಯಿಸಿರುವುದಂತೂ ಸ್ಪಷ್ಟವಾಗಿದೆ. ತೆಪ್ಪದಿಂದ ನದಿ ನೀರಿಗೆ ಮಗುಚಿಕೊಂಡ ಗಣೇಶ್ ಮತ್ತು ಡೈಸಿಬೋಪಣ್ಣ ಈಜಾಡಿ, ಹೋರಾಡಿ ಮೇಲೆ ಬರುತ್ತಿದ್ದಂತೆಯೇ ಜನರೂ ಎದ್ದು ನಿಂತು ಬ್ಯಾಗು ಹೆಗಲಿಗೇರಿಸುತ್ತಾರೆ, ಅವರು ಒಂದಾದರೆ ಖುಶಿಯೂ ಇಲ್ಲ , ಸತ್ತರೆ ಬೇಜಾರೂ ಇಲ್ಲ ಎಂಬಂತಿರುತ್ತದೆ ಪ್ರೇಕ್ಷಕರ ಪರಿಸ್ಥಿತಿ ! ಒಟ್ಟಾರೆ, ಯೋಚನೆಯಲ್ಲಿ ಹೊಸ ನೀತಿ, ಕೆಲಸದಲ್ಲಿ ಹಳೆ ರೀತಿ.

ನನ್ನ ಪಕ್ಕದಲ್ಲಿ ಕುಳಿತಿದ್ದ ಮೂವರು ಅನ್ಯ ಭಾಷೆಯ ಹುಡುಗರು (ಹಿಂದಿ ಮಿಶ್ರಿತ ಯಾವುದೋ ಭಾಷೆ ಆಡುತ್ತಿದ್ದರು) ಮುಂಗಾರು ಮಳೆಯಿಂದ ಪ್ರಭಾವಿತರಾಗಿ, ಗಣೇಶ್ ಫ್ಯಾನ್‌ಗಳಾಗಿ ಬಂದಿದ್ದವರು ಸಿನಿಮಾ ಪೂರ್ತಿ ಎಂಜಾಯ್ ಮಾಡಿದರು. ‘ಈ ಮಲ್ನಾಡು ಬಚ್ಚಲು ಮನೆ ಥರಾ ಇದೆಯಲ್ಲ’ ಅನ್ನೋದು ಅವರಿಗೆ ಅರ್ಥವಾಗದಿದ್ದರೂ ಕೆಲವು ವಾಕ್ಯಗಳು ಅರ್ಥವಾಗುತ್ತಿತ್ತು. ಅಂತಹ ಪ್ರೇಕ್ಷಕರನ್ನೂ ಕನ್ನಡ ಸಿನಿಮಾಗಳಿಗೆ ಸೆಳೆದಿರುವ ಯೋಗರಾಜ ಭಟ್ಟರಿಗೆ ಮತ್ತೊಂದು ರಾಜಯೋಗ ಬೇಗ ಬರಲಿ.

Read more...

March 22, 2008

ನಗರ ಸ್ವರ

ಹುಡುಕುತ್ತ ಬಂದು
ವರ್ಷವಾಯಿತು ಹದಿನಾಲ್ಕು .
ನಾಳೆಯೂ ಮರಳದಿದ್ದರೆ
ಜೀವ ತೊರೆವನಂತೆ ತಮ್ಮ .
***
ರಾಕ್ಷಸರ ಸದೆ ಬಡಿಯಲಿಲ್ಲ
ವಿಭೀಷಣ ಸಿಗಲಿಲ್ಲ ಸೀತೆ ಇರಲಿಲ್ಲ
ಕುಂಭಕರ್ಣನಿಗೆ ಎಚ್ಚರವಾಗಲೇ ಇಲ್ಲ
ಮಂಗಗಳ ಉಪದ್ರ ಸಹಿಸಲು ಸಾಧ್ಯವಿಲ್ಲ
ಹೇಗೆ ಬಂದೆನೆಂದೂ ನೆನಪಿಲ್ಲ .
ಪೂರೈಸಿದ್ದೇನೆ ಬಂದು ನಿನ್ನಮ್ಮನ ಆಸೆ
ನನ್ನ ಚಪ್ಪಲಿಯ ನೀನು ಹಾಕಬೇಡ !
***
ನೀನೆ ಆರಾಮ ರಾಜಾರಾಮ,
ನನಗಿಲ್ಲ ವಿರಾಮ ಲೋಕಾಭಿರಾಮ
ಕ್ಷಮಿಸು, ನಾನು ಹರಾಮ.

--------------------

'ಪೇಟೆಯ ಪಾಡ್ದನ ’ದ ಬಗ್ಗೆ ಬೆಟ್ಟದಡಿ ಕುಳಿತು ಯಾರೋ ಬರೆದಿದ್ದಾರೆ. ಬೆಟ್ಟದ ಕೆಳಗೆ ನುಸುಳುವುದಕ್ಕೆ ಬಹಳಷ್ಟು ಬಿಲಗಳೂ (ಮಾಟೆಗಳು) ಇವೆ ! ಓದುವ ಆಸಕ್ತಿ ಇದ್ದರೆ ಇಲ್ಲಿ ಒಳನುಗ್ಗಿ . ಸಮಸ್ತರಿಗೆ ಇನ್ನೊಂದು ಸೂಚನೆ: ಪೇಟೆಯ ಪಾಡ್ದನದಲ್ಲಿ ಬರುವ ಎಲ್ಲ ಪಾತ್ರ-ಸನ್ನಿವೇಶಗಳು ಕೇವಲ ಕಾಲ್ಪನಿಕವಾಗಿದ್ದು, ಅದಕ್ಕೂ ಸುಧನ್ವಾದೇರಾಜೆ ಆಗಿರುವ ನನ್ನ ವೈಯಕ್ತಿಕ ಬದುಕಿಗೂ ಯಾವುದೇ ಸಂಬಂಧವಿರುವುದಿಲ್ಲ !

Read more...

March 20, 2008

ಬೆಳ್ಳೇಕೆರೆಯ ಹಳ್ಳಿ ಥೇಟರ್

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಒಂದು ಹಳ್ಳಿ ಬೆಳ್ಳೇಕೆರೆ. ಸಕಲೇಶಪುರ-ಮೂಡಿಗೆರೆ ರಸ್ತೆಯಲ್ಲಿರುವ ಬೆಳ್ಳೇಕೆರೆಯಲ್ಲಿ ನಾಲ್ಕೈದು ಅಂಗಡಿ-ಹೋಟೆಲ್‌ಗಳಿವೆ. ಅದಕ್ಕಿಂತ ಒಂದು ಕಿಮೀ ಹಿಂದೆ ಸಿಗುವುದು ರಕ್ಷಿದಿ. ಅಲ್ಲಿ ಎರಡು ಅಂಗಡಿ, ಸಣ್ಣದೊಂದು ಹೋಟೆಲು, ಪ್ರೈಮರಿ ಸ್ಕೂಲು. ‘ಜೈ ಕರ್ನಾಟಕ ಸಂಘ, ಬೆಳ್ಳೇಕೆರೆ’ ಎಂಬ ಸಂಘದ ಬಹುತೇಕ ಚಟುವಟಿಕೆಗಳ ಕೇಂದ್ರ ಈ ಶಾಲೆ, ಇಲ್ಲಿಯೇ ಅದರ ‘ಪ್ರಕೃತಿ ರಂಗಮಂಚ .’ ರಕ್ಷಿದಿ ಬಸ್‌ಸ್ಟಾಪ್‌ನಿಂದ ಅರ್ಧ ಕಿಮೀ ಮಣ್ಣು ರಸ್ತೆಯಲ್ಲಿ ಸಾಗಿದರೆ ಪ್ರಸಾದ್ ರಕ್ಷಿದಿಯವರ ಹೆಂಚಿನ ಮನೆ . ಕಾಫಿ ಎಸ್ಟೇಟ್ ಒಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ಈ ವ್ಯಕ್ತಿ, ಸುತ್ತಲಿನ ಊರುಗಳ ಮ್ಯಾನೇಜರ್ ಕೂಡಾ ಹೌದು ! ಹಳ್ಳಿಯ ಎಲ್ಲ ತರಹದ ಜನರೊಂದಿಗೆ ನಿಕಟ ಒಡನಾಟ ಇಟ್ಟುಕೊಂಡವರು. ಇವರ ಎರಡು ಮುಖ್ಯ ಆಸಕ್ತಿಗಳು ರಾಜಕೀಯ ಮತ್ತು ನಾಟಕ ! ಹ್ಮ್....ಅರ್ಥ ಆಯ್ತು ಅಂತೀರಾ?

ಇಂಥವರಿಗೆ ೨೦೦೬ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯೂ ಬಂತು ! ಎಲ್ಲವನ್ನೂ ನಾನೇ ಹೇಳಿದರೆ ಮಜಾ ಇಲ್ಲ. ಹಳ್ಳಿಯಿಂದ ನಗರಕ್ಕೆ ಸಾಂಸ್ಕೃತಿಕ ವಲಸೆಯೂ ಆರಂಭವಾಗಿರುವ ಈ ದಿನಗಳಲ್ಲಿ , ಹಳ್ಳಿಯನ್ನು ರಕ್ಷಿಸುವಲ್ಲಿ ಬೆಳೆಸುವಲ್ಲಿ ,ಇವರು ಕಳೆದ ೪೦ ವರ್ಷಗಳಲ್ಲಿ ಮಾಡಿದ್ದೇನು? ಉಳಿದದ್ದೇನು? ‘ಬೆಳ್ಳೇಕೆರೆಯ ಹಳ್ಳಿ ಥೇಟರ್’ನಲ್ಲಿ ಅವೆಲ್ಲವನ್ನೂ ಪ್ರಸಾದ್ ರಕ್ಷಿದಿ ತೋರಿಸುತ್ತಿದ್ದ್ದಾರೆ . ಇದು ಕನ್ನಡಕ್ಕೊಂದು ಭಿನ್ನ ಬಗೆಯ, ‘ಗ್ರಾಮೀಣ ರಂಗಭೂಮಿಯ ಆತ್ಮ ಕಥನ .’ ಪ್ರತಿಯೊಂದು ಹಳ್ಳಿಯನ್ನೂ ಪುಟ್ಟ ಭಾರತವಾಗಿಸಬಲ್ಲ ಇಂಥವರ ಕತೆ ಇಂದಿನಿಂದ ‘ಚಂಪಕಾವತಿ’ಯಲ್ಲಿ . ಮೂರನೇ ಬೆಲ್ ಹೊಡೆದಿದೆ, ಹೊರಗಿನ ಬೆಳಕು ಆರಿಸಿದ್ದೇನೆ , ಹಳ್ಳಿ ಥೇಟರ್‌ನಲ್ಲಿ ಕೂರಿಸುತ್ತಿದ್ದೇನೆ , ಪ್ರತಿ ವಾರ ಓದುತ್ತಿರಿ. ನಿಮ್ಮ ಪ್ರತಿಕ್ರಿಯೆಗಾಗಿ ಎರಡು ಊರುಗಳೇ ಕಾಯುತ್ತಿದೆ , ನೆನಪಿರಲಿ.

*****

  • ಪ್ರಸಾದ್ ರಕ್ಷಿದಿ

ಪ್ಪ ಕೆಲಸದಾಳುಗಳಿಗೆ ವಾರದ ಬಟವಾಡೆ ಮಾಡುತ್ತಿದ್ದರು. ಸಕಲೇಶಪುರದಲ್ಲಿ ಗುರುವಾರ ವಾರದ ಸಂತೆ. ಆದ್ದರಿಂದ ಅಂದು ಸುತ್ತಮುತ್ತಲಿನ ಕಾಫಿ ತೋಟಗಳಿಗೆಲ್ಲ ರಜಾದಿನ. ಪ್ರತಿವಾರವೂ ಬುಧವಾರ ಸಂಜೆ ಆಳುಗಳಿಗೆ ವಾರದ ಬಟವಾಡೆ. ಅಪ್ಪ ಒಬ್ಬೊಬ್ಬರನ್ನೇ ಕರೆದು ಹೆಬ್ಬೆಟ್ಟು ಒತ್ತಿಸಿಕೊಂಡು ವಾರದ ಸಂಬಳ ಬಟವಾಡೆ ಮಾಡುತ್ತಿದ್ದರು. ಇಡೀ ವಾರದ ಜಗಳಗಳ ತೀರ್ಮಾನ, ತಪ್ಪು ದಂಡಗಳು, ಸಾಲ ವಸೂಲಿ ಇನ್ನಿತರ ಎಲ್ಲಾ ವ್ಯವಹಾರಗಳಿಗೂ ಆಗಲೇ ಸಮಯ. ಹಾಗಾಗಿ ಅಪ್ಪನೂ ತಲೆಬಿಸಿಯಲ್ಲಿದ್ದರು. ಈಗಿನಂತೆ ಕ್ಯಾಲುಕುಲೇಟರ್, ಕಂಪ್ಯೂಟರ್‌ಗಳು ಇರಲಿಲ್ಲ. ಎಲ್ಲಾ ಲೆಕ್ಕಗಳೂ ಗುಣಾಕಾರ ಭಾಗಹಾರ ಕೈಬರಹಗಳಲ್ಲೇ ಆಗಬೇಕಿತ್ತು. ಕತ್ತಲಾದರೆ ಬೆಳಕಿಗೆ ಚಿಮಣಿ ದೀಪ. ಕೆಲಸದವರಿಗೂ ಅಷ್ಟೇ, ಕೈಗೆ ದುಡ್ಡು ಸಿಕ್ಕಿದೊಡನೆ- ಅಂಗಡಿ ಸಾಲದವನಿಗೆ, ಕಾಸಿನ ಬಡ್ಡಿಯವನಿಗೆ, ಹೆಂಡದಂಗಡಿಗೆ ಬಾಕಿ ಸಲ್ಲಿಸಿ- ತನಗೆಷ್ಟು ಉಳಿದೀತು ಎಂಬ ಚಿಂತೆ. ವಾರದ ಲೆಕ್ಕವನ್ನೆಲ್ಲ ಬರೆದು ಮಾರನೆ ಬೆಳಗ್ಗೆಯೇ ಲೆಕ್ಕದ ವರದಿಯನ್ನು ತೋಟದ ಮಾಲೀಕರಿಗೆ ಕಳುಹಿಸಬೇಕಿತ್ತಾದ್ದರಿಂದ ಪ್ರತಿ ಬುಧವಾರವೂ ಅಪ್ಪನಿಗೆ ಪಿತ್ತ ನೆತ್ತಿಯಲ್ಲೇ ಇರುತ್ತಿತ್ತು.

ಮನೆ ಎದುರಿನ ಕೋಣೆಯೇ ಎಸ್ಟೇಟಿನ ಆಫೀಸ್. ಒಂದು ದೊಡ್ಡ ಮೇಜಿನ ಹಿಂದೊಂದು ಒಂಟಿ ಕಾಲಿನ ಸ್ಟೂಲು. ಲೆಕ್ಕದ ಪುಸ್ತಕಗಳನ್ನು ಇಡಲು ಪಕ್ಕದ ಗೋಡೆಯಲ್ಲೊಂದು ಮೊಳೆ ಹೊಡೆದು ತಂತಿಯಿಂದ ತೂಗಾಡಿಸಿದ ಹಲಗೆ. ಸ್ವಲ್ಪ ದೂರದಲ್ಲೊಂದು ಸಣ್ಣ ಬೆಂಚು. ಆಫೀಸೆಂದರೆ ಇಷ್ಟೇ. ಅಪ್ಪ ಒಂಟಿ ಕಾಲಿನ ಸ್ಟೂಲಿನಲ್ಲಿ ಕುಳಿತು ಒಬ್ಬೊಬ್ಬರನ್ನಾಗಿ ಹೆಸರು ಕರೆಯುತ್ತಿದ್ದರು. ಹೆಸರು ಕರೆಯುತ್ತಿದ್ದಂತೆ ಆಳುಗಳೆಲ್ಲ ಬಂದು ಸಂಬಳದ ಪಟ್ಟಿಯಲ್ಲಿ ಹೆಬ್ಬೆಟ್ಟು ಒತ್ತಿ ವಾರದ ಸಂಬಳ ಪಡೆಯಬೇಕಿತ್ತು. ಅಪ್ಪ ಅವರ ವಾರದ ಹಾಜರಿಯನ್ನೂ- ಒಟ್ಟು ಸಂಬಳವನ್ನೂ ಗಟ್ಟಿಯಾಗಿ ಓದಿ ಹೇಳುತ್ತಿದ್ದರು. ಕೆಲವೊಮ್ಮೆ ಕೆಲಸಗಾರರಿಗೆ ಕೊಟ್ಟ ಸಾಲದ ಬಾಕಿ ವಸೂಲಿಗಾಗಿ ತಕರಾರು- ಇನ್ನಿತರ ಯಾವುದೇ ವಿಷಯಗಳ ಬಗ್ಗೆ, ವಿಚಾರಣೆ-ಜಗಳ-ಅಪ್ಪನಿಂದ ಬೈಗಳು-ಎಲ್ಲವೂ ಇರುತ್ತಿತ್ತು. ಸಾಮಾನ್ಯವಾಗಿ ಬಟವಾಡೆ ದಿನ ಅಮ್ಮನೂ ಅಲ್ಲೇ ಬಂದು ಸಣ್ಣ ಬೆಂಚಿನ ಮೇಲೆ ಕೂರುತ್ತಿದ್ದಳು. ಸಾಲದ ಬಾಕಿ ವಸೂಲಿಯನ್ನು, ಇನ್ನಿತರ ಕೆಲಸಗಳನ್ನು ಅಮ್ಮ ಅಪ್ಪನಿಗೆ ಕೆಲವೊಮ್ಮೆ ನೆನಪಿಸುತ್ತಿದ್ದಳು. ಹೆಚ್ಚಿನ ಆಳುಗಳೆಲ್ಲ ಹೆಬ್ಬೆಟ್ಟು ಒತ್ತಿ, ಶಾಯಿ ಮೆತ್ತಿದ ಬೆರಳನ್ನು ಮೇಜಿಗೆ ಒರೆಸುತ್ತಿದ್ದರು. ಅಮ್ಮ ಅದನ್ನು ನೋಡಿ ಸಿಡಿಮಿಡಿಗೊಂಡು ಅವರಿಗೆ ಬಯ್ಯುತ್ತಿದ್ದಳು. ಹಾಗಾಗಿ ಆಳುಗಳೆಲ್ಲ ಅಮ್ಮ ಎದುರಿಗೆ ಇದ್ದಾಗಲೆಲ್ಲಾ ರುಜು ಮಾಡಿದ ನಂತರ ಶಾಯಿ ಮೆತ್ತಿದ ಹೆಬ್ಬೆಟ್ಟನ್ನು ತಮ್ಮ ತಲೆಗೇ ಉಜ್ಜಿಕೊಳ್ಳುತ್ತಿದ್ದರು! ಅಂದಿನ ಬಟವಾಡೆ ಮುಗಿಯುತ್ತಾ ಬಂದಿತ್ತು. ಅಪ್ಪ ಕರೆದರು,

'ಲಕ್ಷ್ಮಯ್ಯ......' ಲಕ್ಷ್ಮಯ್ಯ ಸುಮಾರು ಹದಿನೆಂಟು ವರ್ಷದ ಕಟ್ಟುಮಸ್ತಾದ ಆಳು. ಅಲ್ಲದೆ ಒಳ್ಳೇ ಕೆಲಸಗಾರನೂ ಆಗಿದ್ದು ಹೇಳಿದ ಕೆಲಸವನ್ನು ಮುತುವರ್ಜಿಯಿಂದ ಮಾಡುತ್ತಿದ್ದ. ಹಾಗಾಗಿ ಹೆಚ್ಚಿನ ಜವಾಬ್ದಾರಿಯ ಕೆಲಸಗಳನ್ನು ಅಪ್ಪ ಅವನಿಗೇ ವಹಿಸುತ್ತಿದ್ದರು. ಇತರ ಆಳುಗಳು ಕೂಡಾ 'ರೈಟರಿಗೆ ಬೇಕಾದವ' ನೆಂದು ಅವನಿಗೆ ಸ್ವಲ್ಪ ಹೆದರುತ್ತಿದ್ದರು.

ಲಕ್ಷ್ಮಯ್ಯ ಬಂದು ಹೆಬ್ಬೆಟ್ಟು ಪ್ಯಾಡಿಗೆ ಒತ್ತಿ ರುಜು ಮಾಡಬೇಕೆನ್ನುವಷ್ಟರಲ್ಲಿ- ಅವನ ಹೆಸರಿನ ಪಟ್ಟಿ ಅಪ್ಪನಿಗೆ ಕಾಣಿಸಲಿಲ್ಲ. ಹೆಬ್ಬೆಟ್ಟು ಒತ್ತಲು ಹುಡುಕುತ್ತಿದ್ದ ಲಕ್ಷ್ಮಯ್ಯನಿಗೆ 'ನಿಲ್ಲು ನಿಲ್ಲು' ಎಂದರು. ಲಕ್ಷ್ಮಯ್ಯ ಸುಮ್ಮನೆ ನಿಂತ. ಒಂದೆರಡು ಕ್ಷಣದಲ್ಲಿ ಅಭ್ಯಾಸ ಬಲದಿಂದ ಹೆಬ್ಬೆಟ್ಟಿಗೆ ಮೆತ್ತಿದ ಶಾಯಿಯನ್ನು ಮೇಜಿಗೇ ಒರೆಸಿದ. ಅಮ್ಮ ಕಿಡಿಕಿಡಿಯಾದಳು. 'ನಿಂಗೂ ಬುದ್ಧಿ ಇಲ್ವ ಲಕ್ಷ್ಮಯ್ಯ, ಮೆತ್ತಿದಿಯಲ್ಲ ಮೇಜಿಗೆ' ಎಂದಳು. ಲಕ್ಷ್ಮಯ್ಯ ಗಾಬರಿಯಾಗಿ ಅಲ್ಲಿದ್ದ ಯಾವುದೋ ಕಾಗದವನ್ನು ತೆಗೆದು ಮೇಜಿಗೆ ಮೆತ್ತಿದ ಶಾಯಿಯನ್ನು ಒರೆಸಿಬಿಟ್ಟ. ಅವನ ದುರಾದೃಷ್ಟಕ್ಕೆ ಅದು ಅಪ್ಪ ಏನೋ ಲೆಕ್ಕ ಬರೆದಿಟ್ಟ ಹಾಳೆಯಾಗಿತ್ತು. 'ಹಾಳು ಮಾಡಿದಿಯಲ್ಲ ಎಲ್ಲ. ನಾನಿನ್ನು ಒಂದು ಗಂಟೆ ಕೂತುಕೊಂಡು ಬರೀಬೇಕು. ನಿಮಗೆಲ್ಲಾ ಒಂದು ಸೈನ್ ಮಾಡೋದು ಕಲಿಯಕ್ಕೇನು ರೋಗ- ಒಳ್ಳೇ ಕೋಣನ ಹಾಗೆ ಬೆಳೆದಿದ್ದೀಯ' ಅಪ್ಪ ಜೋರಾಗಿಯೇ ಹೇಳಿದರು. ಉಳಿದ ಕೆಲಸದವರಲ್ಲಿ ಹೆಚ್ಚಿನವರಿಗೆ ಲಕ್ಷ್ಮಯ್ಯನ ಬಗ್ಗೆ ಸಣ್ಣ ಅಸೂಯೆಯೂ- ಸ್ವಲ್ಪ ಹೆದರಿಕೆಯೂ ಇದ್ದುದರಿಂದ ಈಗ ಅವನಿಗೇ 'ಮರ್ಯಾದಿ' ಆಗುತ್ತಿರುವುದನ್ನು ನೋಡಿ ಖುಷಿಪಡಲು ಸುತ್ತ ಸೇರಿದರು.

ಲಕ್ಷ್ಮಯ್ಯನಿಗೂ ಅವಮಾನವಾದಂತಾಗಿ 'ಏನೋ ಒಂದು ಸಣ್ಣ ತಪ್ಪಾದ್ರೆ ಅದಕ್ಯಾಕೆ ಹಂಗೆ ಕೂಗಾಡ್ತೀರಿ ಅಯ್ಯ" ಎಂದ. 'ಇನ್ನೇನು ನಿಂಗೆ ಹಾರ ಹಾಕಿ ಕೈ ಮುಗೀತೀನಿ. ನಾನು ಅಷ್ಟು ಕಷ್ಟಪಟ್ಟು ಬರೆದದ್ನೆಲ್ಲ ಹಾಳು ಮಾಡಿದೆ. ಎರಡಕ್ಷರ ಕಲಿಯಕ್ಕೇನು ರೋಗ ನಿಮಗೆಲ್ಲಾ' ಎಂದು ಇನ್ನಷ್ಟು ಬೈದರು. ಲಕ್ಷ್ಮಯ್ಯನಿಗೆ ಭಾರೀ ಅವಮಾನವಾಯ್ತು. 'ನಂಗೆ ಸಂಬ್ಳನೇ ಬೇಡ ನೀವೇ ಮಡಿಕ್ಕಳಿ' ಎಂದು ಸಿಟ್ಟಿನಿಂದ ದುಡುದುಡು ಹೋಗಿಬಿಟ್ಟ. ಅಪ್ಪನೂ ಸ್ವಲ್ಪ ಹೊತ್ತು ಕೂಗಾಡುತ್ತಾ ಇದ್ದರು. ನಾನಾಗ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದೆ. ಬೇಸಗೆ ರಜೆ ಬಂದಿತ್ತು. ಲಕ್ಷ್ಮಯ್ಯ ಅಪ್ಪನಿಗೆ ಹೇಗೆ ಹತ್ತಿರದವನೋ- ನನಗೂ ಹಾಗೇ. ರಜಾದಿನಗಳಲ್ಲಿ ಕಾಡು ಕಾಡು ಸುತ್ತಲು-ಅವನೇ ಬೇಕು. ನಾನು ಸಣ್ಣವನಾದರೂ ರೈಟರ ಮಗನಾದುದರಿಂದ ನನ್ನನ್ನು ಉಳಿದ ಆಳುಗಳೆಲ್ಲ ಬಹುವಚನದಿಂದ 'ಹೋಗಿ ಬನ್ನಿ' ಎನ್ನುತ್ತಿದ್ದರು. ಲಕ್ಷ್ಮಯ್ಯ ಮಾತ್ರ ಸಲುಗೆಯಿಂದ 'ಹೋಗು-ಬಾ' ಎನ್ನುತ್ತಿದ್ದ. ಮರದಿಂದ ಹಲಸಿನ ಹಣ್ಣು ಕಿತ್ತುಕೊಡಲು, ಬೇರೆ ಕಾಡು ಹಣ್ಣುಗಳನ್ನು ಕೊಯ್ದುಕೊಡಲು-ಎತ್ತಿನಹಳ್ಳದಲ್ಲಿ ಈಜಾಡಲು ಹೋಗಲು-ಸಕಲೇಶಪುರದ ಜಾತ್ರೆಗೆ ಹೋಗಿ ಸಿನಿಮಾ ನೋಡಿ-ರಾತ್ರಿಯೆಲ್ಲ ನಿದ್ದೆಗೆಟ್ಟು ಜಾತ್ರೆ ಸುತ್ತಿ ಬರಲು, ನನಗೆ ಲಕ್ಷ್ಮಯ್ಯನೇ ಜೊತೆ. ಕಳೆದ ವರ್ಷ ಜಾತ್ರೆಯಲ್ಲಿ ನನಗೆ ಲಕ್ಷ್ಮಯ್ಯ 'ಆಯಿರತ್ತಿಲ್ ಒರುವನ್’ ಸಿನಿಮಾ ತೋರಿಸಿದ್ದ. ಹಾಗಾಗಿ ಅಪ್ಪ ಮತ್ತು ಲಕ್ಷ್ಮಯ್ಯನ ಜಗಳದಿಂದ ಅತ್ಯಂತ ಆತಂಕಕ್ಕೊಳಗಾದವನು ನಾನೇ. ಇವರ ಜಗಳದಿಂದ ಲಕ್ಷ್ಮಯ್ಯನ ಒಡನಾಟ ತಪ್ಪಿದರೆ ಎಂಬ ಚಿಂತೆಯ ಜೊತೆಗೆ, ಯಾರದ್ದು ಸರಿ ಎಂದು ತಿಳಿಯದ ಗೊಂದಲವೂ ಸೇರಿತು. ಇದೇ ಚಿಂತೆಯಲ್ಲಿ ರಾತ್ರಿ ಮಲಗಿದವನಿಗೆ ತುಂಬ ಹೊತ್ತು ನಿದ್ದೆಯೇ ಬರಲಿಲ್ಲ.

ರಜಾ ದಿನಗಳಾದ್ದರಿಂದ ಬೆಳಿಗ್ಗೆ ಅಮ್ಮನೂ ಬೇಗ ನನ್ನನ್ನು ಕರೆಯುತ್ತಿರಲಿಲ್ಲ. ನಾನು ತಡವಾಗಿ ಎದ್ದು ಕಣ್ಣುಜ್ಜಿಕೊಂಡು ಹೊರಗೆ ಬರುವಾಗ ನನಗೊಂದು ಆಶ್ಚರ್ಯ ಕಾದಿತ್ತು. ಅಪ್ಪನೂ ಲಕ್ಷ್ಮಯ್ಯನೂ ಹಿಂದಿನ ದಿನ ಏನೂ ಆಗಿಲ್ಲವೆಂಬಂತೆ ಮಾತಾಡುತ್ತಿದ್ದರು! ಅಪ್ಪ ಲಕ್ಷ್ಮಯ್ಯನಲ್ಲಿ ಸಕಲೇಶಪುರದಿಂದ ಏನೋ ಸಾಮಾನು ತರಲು ಹೇಳುತ್ತಿದ್ದರು. ಅವನೂ ಇನ್ನೇನೋ ಹೇಳಿ ಅದಕ್ಕೆಂದು ದುಡ್ಡು ತೆಗೆದುಕೊಳ್ಳುತ್ತಿದ್ದ. ಇವರು ಯಾವಾಗ ರಾಜಿಯಾದರು? ಲಕ್ಷ್ಮಯ್ಯ ಯಾವಾಗ ತನ್ನ ಸಂಬಳ ತೆಗೆದುಕೊಂಡ?-ತಿಳಿಯಲಿಲ್ಲ. ನನಗಂತೂ ಖುಷಿಯಾಗಿತ್ತು. ಲಕ್ಷ್ಮಯ್ಯ ಅಪ್ಪನೊಂದಿಗೆ ಮಾತುಕತೆ ಮುಗಿಸಿ ಹೊರಟಾಗ ನಾನು ಅವನ ಹಿಂದೆಯೇ ಹೋದೆ. ಅವನು ನನ್ನನ್ನು ಚಕ್ಕೋತದ ಹಣ್ಣಿಗಾಗಿ ಎಲ್ಲಿಗೋ ಕರೆದೊಯ್ಯುವ ಆಶ್ವಾಸನೆ ನೀಡಿದ್ದ. 'ಲಕ್ಷ್ಮಯ್ಯ ಚಕ್ಕೋತ್ನಣ್ಣು' ಎಂದೆ. 'ಮಧ್ಯಾಹ್ನ ಬೇಗ ಬರ್‍ತೀನಿ ಹೋಗಾಣ' ಯಾಕೋ ಲಕ್ಷ್ಮಯ್ಯ ಹೆಚ್ಚು ಮಾತಾಡಲಿಲ್ಲ- 'ನೀನು ಹೋಗು ಮನೆಗೆ ' ಅಂದುಬಿಟ್ಟ. (ಇನ್ನೂ ಇದೆ)

Read more...

March 17, 2008

ಸಿಟಿ ಗೀತ

ಶಾಪಿಂಗ್ ಮಾಲ್‌ನ ಮುಂದೆ
ಮಿನಿ ಸ್ಕರ್ಟಿನ ಹಿಂದೆ
ಅಂಟಿಕೊಂಡ ಚ್ಯೂಯಿಂಗಮ್ಮು
ಎಳೆ ಎಳೆದಷ್ಟೂ
ರೇಶಿಮೆಯ ಎಳೆಯಂತೆ ಬರುವುದರ
ನೋಡುತ್ತ ಕಚಕಚ ಅಗಿಯುತ್ತ
'ಬಿಗ್ ಬಬಲ್' ಊದುತ್ತ
ಅವಳ ಕಣ್ಣಿನಲ್ಲೇ ತಿಂದರು.
***
ಆಕೆ ಎಳೆದ 'ಸೆಂಟರ್ ಫ್ರೆಶ್’ ಚ್ಯೂಯಿಂಗಮ್ಮು
'ಸೆಂಟರ್ ಶಾಕ್’ನಂತೆ ಕೈಗೆ, ಬ್ಯಾಗಿಗೆ, ಗೋಡೆಗೆ
ಕಾರಿಗೆ, ಬಸ್ಸಿಗೆ, ಎಲ್ಲರ ಮೈಗೆ
ನೋವಿನೆಳೆಯಂತೆ ಅಂಟಿ ಹಬ್ಬುತ್ತಿರಲು...
***
'ಅಗಿದಗಿದು ತಿನ್ನು’ ಅಂತ
ಅಮ್ಮ ಅಂದದ್ದು ನೆನಪಾಗಿ
ಕಣ್ಣ ಕೊನೆ ಒರೆಸಿದರೆ
ನಗರವೇ ಅಗಿಯುತ್ತಿತ್ತು ಜಗಿಯುತ್ತಿತ್ತು
ನುಂಗಲೂ ಆಗದೆ, ಉಗುಳಲೂ ಬಾರದೆ.

Read more...

March 09, 2008

ಜೀಕೆ ಮಾಸ್ತರರ ಪ್ರಣಯ ಪ್ರಸಂಗ

ಪುಟ್ಟದಾದ ಡಬ್ಬದೊಳಗೆ ರಬ್ಬರ್ ಹಾವಿದೆ ಅಂತ ಗೊತ್ತಿದ್ದಾಗಲೂ ಮುಚ್ಚಳ ತೆಗೆದಾಗ ಹೌಹಾರುವುದಿದೆಯಲ್ಲ...ಅದು ನಾಟಕ ! ಅಂದರೆ ಭಯಗೊಳ್ಳುವ ನಟನೆ ಮಾಡಿದರೂ , ನಿಜವಾಗಿ ಭಯ ಪಟ್ಟರೂ ಅದು ನಾಟಕವೇ. ಭಯವಾದ ನಟನೆ ಮಾಡಿದರೆ ಮುಚ್ಚಳ ತೆಗೆವವನದ್ದು ನಾಟಕ, ನಿಜವಾಗಿ ಭಯಪಟ್ಟರೆ ಡಬ್ಬ ಕೊಟ್ಟವನದ್ದು ಒಳ್ಳೆಯ ನಾಟಕ ಅಂತಲೂ ಅನ್ನಬಹುದು !

ಇವೆಲ್ಲ ಸಾಧ್ಯವಾದದ್ದು ಕಳೆದ ಶುಕ್ರವಾರ (ಮಾರ್ಚ್ ) ಎಚ್.ಎನ್.ಕಲಾಕ್ಷೇತ್ರದಲ್ಲಿ ನಡೆದ ನೀನಾಸಂ ನಾಟಕದಲ್ಲಿ, ’ಜೀಕೆ ಮಾಸ್ತರರ ಪ್ರಣಯ ಪ್ರಸಂಗದಲ್ಲಿ. ಮರು ತಿರುಗಾಟದ ಆಪ್ತ ರಂಗಭೂಮಿ ಪ್ರದರ್ಶನದಲ್ಲಿ ಕಳೆದ ಎರಡ್ಮೂರು ವರ್ಷಗಳಿಂದ ಒಳ್ಳೆಯ ಬೆಳೆ ತೆಗೆಯುತ್ತಿರುವ ನೀನಾಸಂ, ಬಾರಿ ಬಂಪರ್ ಬೆಳೆ ಹೊಡೆದಿದೆ. ಬಯಲು ರಂಗದಲ್ಲಿ ಭಾರೀ ಜನಸ್ತೋಮದ ಎದುರೂ ಮಾಡಬಹುದಾದ ಕತೆಯುಳ್ಳ ನಾಟಕವನ್ನು , ಆಪ್ತ ರಂಗಭೂಮಿಯ ಸಕಲ ಸಾಧ್ಯತೆಗಳೂ ಮೇಳೈಸುವ ಹಾಗೆ ಪ್ರದರ್ಶಿಸಿದ್ದೇ ಅನನ್ಯ ಸಾಧನೆ. ಕಳೆದೆರಡು ವರ್ಷಗಳ ಪ್ರದರ್ಶನಗಳಲ್ಲಿ ಏಕಮುಖವಾಗಿದ್ದ ವೇದಿಕೆಯನ್ನು ತೊರೆದು ಸಿದ್ಧಪಡಿಸಿದ ಆಯತಾಕಾರದ ವೇದಿಕೆ; ಕಡಿಮೆ ಉದ್ದದ ಎರಡು ಬದಿಗಳಲ್ಲಿ ತೆರೆ ಇಳಿಬಿಟ್ಟು, ಇನ್ನೆರಡು ಬದಿಗಳಲ್ಲಿ ಪ್ರೇಕ್ಷಕರನ್ನು ಕುಳ್ಳಿರಿಸಿಕೊಂಡು ಮಾಡಿದ ಪ್ರಯೋಗ ಇದು. ಆದರೆ ಎರಡೂ ಬದಿಗಳಲ್ಲಿ ಇದ್ದ ಪ್ರೇಕ್ಷಕರು ಮೈಮರೆತು ನಾಟಕ ನೋಡಿದರು, ಪರಸ್ಪರ ಮುಖ ನೋಡಲಿಲ್ಲ !


ಪರಿಚಯ ಪತ್ರದಲ್ಲಿ ನಿರ್ದೇಶಕ ಕೆ.ವಿ.ಅಕ್ಷರ ಹೀಗೆ ಹೇಳಿದ್ದಾರೆ- 'ಸಾಂಪ್ರದಾಯಿಕ ಯೋಚನಾ ಕ್ರಮದ ಪ್ರಕಾರ ಸಂಭಾಷಣಾ ಕೇಂದ್ರಿತವಾದದ್ದು ನಾಟಕವೆಂದೂ, ನಿರೂಪಣಾ ಪ್ರಧಾನವಾದದ್ದು ಕಾದಂಬರಿಯೆಂದೂ ನಾವು ಭಾವಿಸುತ್ತೇವೆ. ಆದರೆ ಅಂಥ ವರ್ಗೀಕರಣ ಮುರಿದು ನಿರೂಪಣಾತ್ಮಕವಾದ, ಆದರೆ ನಾಟಕೀಯ ಗುಣಗಳಲ್ಲಿ ಶ್ರೀಮಂತವೂ ಆಗಿರುವ ಹೊಸ ಪ್ರಸ್ತುತಿ ಮಾರ್ಗವೊಂದನ್ನು ಹುಡುಕಲಿಕ್ಕೆ ಸಾಧ್ಯವೆ ಎಂಬ ದಿಕ್ಕಿನಲ್ಲಿ ಈ ಪ್ರಯೋಗ ಕೈಚಾಚಿದೆ...ವಾಸ್ತವ ಮತ್ತು ವಾಸ್ತವೇತರದ ನಡುವಿನ ಹಾಗೂ ನಿರೂಪಣೆ ಮತ್ತು ಪ್ರದರ್ಶನದ ನಡುವಿನ ಮಿಶ್ರ ಮಾರ್ಗವೊಂದನ್ನು ಇಲ್ಲಿ ಕಟ್ಟಲು ಹವಣಿಸಲಾಗಿದೆ. ಕಾದಂಬರಿಯೊಂದನ್ನು ನಾಟಕವಾಗಿ ರೂಪಾಂತರಿಸದೆ, ನಾಟಕೀಯ ಅಂಗಾಂಶಗಳೊಂದಿಗೆ ಪ್ರಸ್ತುತಿ ಮಾಡುವ ಹೊಸ ಮಾದರಿಯೊಂzನ್ನು ಇಲ್ಲಿ ಪ್ರಯತ್ನಿಸಲಾಗಿದೆ.’ ನಿರ್ದೇಶಕರ ಉದ್ದೇಶ ಅಷ್ಟೇ ಸ್ಪಷ್ಟವಾಗಿ ಪ್ರದರ್ಶನದಲ್ಲೂ ಈಡೇರಿರುವುದು ಸಂತಸದ ಸಂಗತಿ.

ಈ ನಿರೂಪಣಾ ವಿಧಾನ ಎಷ್ಟು ಶಿಸ್ತುಬದ್ಧವೂ ಸ್ವಚ್ಚವೂ ಆಗಿದೆಯೆಂದರೆ , ಜೀಕೆ ಮಾಸ್ತರರ ಪಾತ್ರವನ್ನು, ನಾಲ್ವರು ಒಬ್ಬರಾದ ಮೇಲೆ ಒಬ್ಬರಂತೆ ಬದಲಿಸುತ್ತಿರುವಾಗಲೂ, ಅಭಿನಯದಲ್ಲಿ ಜೀಕೆಯೇ ಆಗಿದ್ದು , ಮಾತಿನಲ್ಲಿ ಮಾತ್ರ ಒಮ್ಮೆ ಪಾತ್ರವಾಗಿ, ಮರುಕ್ಷಣ ನಿರೂಪಕನಾಗಿ ಬದಲಾದಾಗಲೂ ರಸಭಂಗವಾಗುವುದಿಲ್ಲ. ದೈಹಿಕ ಕಸರತ್ತುಗಳನ್ನು ಅತಿಯಾಗಿಸದೆ ಬಳಸಿದ ಕ್ರಮವೂ ಮೆಚ್ಚುವಂತಿದೆ. ಜೀಕೆ ಮಾಸ್ತರರ ಮಗ ಹೊಟ್ಟೆ ನೋವಿನಿಂದ ಸತ್ತ ಎನ್ನುವಲ್ಲಿ ಬಳಸುವ ಕ್ಲಿಷ್ಟವಾದ ದೈಹಿಕ ಕಸರತ್ತು (ಪ್ರೇಕ್ಷಕರೇ ಒಮ್ಮೆ ಹೊಟ್ಟೆ ಮುಟ್ಟಿಕೊಳ್ಳುವಂತೆ ಮಾಡುವ !) ಇದಕ್ಕೆ ಒಳ್ಳೆಯ ಉದಾಹರಣೆಯಾದೀತು. ಸಾಯಂಕಾಲ ಜೀಕೆ ಮಾಸ್ತರರು ರೋಜಾಗೆ ಕಾಯುತ್ತಿರುವಾಗ ಕೇಳಿಬರುವ " ಸಂಜೆ ಯಾಕಾಗಿದೆ ನೀನಿಲ್ಲದೇ...’ ಹಾಡು -ಟಿವಿಯ ಸರ್ಕಾರ್ ಪ್ರಯೋಗ ನೆನಪಿಸಿದರೂ, ಸಿನಿಮಾ ಹಾಡುಗಳನ್ನು ನಾಟಕದಲ್ಲಿ ಬಳಸಿರುವ ಕ್ರಮ ರುಚಿ ಹೆಚ್ಚಿಸುವಂತೆಯೇ ಇದೆ.


ಅತ್ಯಂತ ಕಡಿಮೆ ರಂಗಸಜ್ಜಿಕೆಗಳಿದ್ದಾಗ ರಂಗವನ್ನು ತುಂಬಿಸುವುದು ಮತ್ತು ಸಮತೋಲನವನ್ನು ಕಾಪಾಡಿಕೊಳ್ಳುವುದು ಸವಾಲಿನ ಕೆಲಸ. ಆದರೆ ಇಲ್ಲಿ ರಂಗದ ಮಧ್ಯೆ ಇಳಿಬಿಟ್ಟಿದ್ದ ಸುರುಳಿ ಸುತ್ತಿದ ಬಟ್ಟೆ, ಅದ್ಭುತ ರಂಗ ಪರಿಕರವಾಗಿ ಕೆಲಸ ಮಾಡಿದೆ. 'ನಟರು ಬಹುಮುಖಿ’ಗಳಾಗಲೂ ಇದು ಸುಲಭ ಸಾಧನವಾಗಿದೆ. ಮುಖ್ಯವಾದ ಜೀಕೆ ಮಾಸ್ತರು ಮತ್ತು ರೋಜಾಳ ಪಾತ್ರಗಳನ್ನು ಏಳೆಂಟು ಜನ ಸೇರಿ ನಿರ್ವಹಿಸಿರುವುದರಿಂದ ನಾಟಕಕ್ಕೊಂದು ಒಳ್ಳೆಯ ಹರಿವು ಲಭಿಸಿದೆ.

ಭಾರೀ ರಂಗಸಜ್ಜಿಕೆ , ಪರಿಕರ, ಬೆಳಕಿನ ಗೌಜಿ ಗದ್ದಲದೊಂದಿಗೆ ಮಾಡುವ ನಾಟಕಗಳು ಅಭಿನಯ ಮತ್ತು ಕತೆಯ ನಿರೂಪಣೆಯ ಮೂಲಕ ಪ್ರೇಕ್ಷಕರನ್ನು ತಟ್ಟುವುದು ಬಹಳ ಕಷ್ಟದ ಕೆಲಸ. 'ವಿಶ್ವವಿಖ್ಯಾತವಾಗಿರುವ ಡ್ಯಾಷ್ ಆರ್ಟ್ಸ್’ ನಿರ್ಮಿಸಿದ ಇಂಗ್ಲೆಂಡಿನ ಟಿಮ್ ಸಪಲ್ ನಿರ್ದೇಶಿಸಿದ "ಎ ಮಿಡ್‌ಸಮ್ಮರ್ ನೈಟ್ಸ್ ಡ್ರೀಮ್’ ನಾಟಕವನ್ನು ಕೆಲವು ತಿಂಗಳುಗಳ ಹಿಂದೆ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ನೋಡಿದ್ದೆ, ಇಂಡಿಯಾ ಮತ್ತು ಶ್ರೀಲಂಕಾದ ಕಲಾವಿದರುಳ್ಳ,ಇಂಗ್ಲಿಷ್-ತಮಿಳು-ಮಲೆಯಾಳಂ-ಸಂಸ್ಕೃತ-ಹಿಂದಿ-ಬಂಗಾಳಿ... ಹೀಗೆ ಹಲವು ಭಾಷೆಗಳನ್ನಿಟ್ಟುಕೊಂಡು ನಡೆದ ನಾಟಕ ಅದು. ಕೆಲವು ಲಕ್ಷ ರೂಪಾಯಿಗಳ ಖರ್ಚಿನಲ್ಲಿ ಸಿದ್ಧವಾದ ಅದರಲ್ಲಿ ರಂಗಸಜ್ಜಿಕೆ-ಬೆಳಕು-ದೈಹಿಕ ಕಸರತ್ತುಗಳ ಭಾರೀ ವೈಭವವಿತ್ತು. ಆದರೆ ಕೊನೆಗೂ ಅವಷ್ಟೇ ಮುನ್ನೆಲೆಗೆ ಬಂದು ಅಭಿನಯವೂ ಕತೆಯೂ ಹಿನ್ನೆಲೆಗೆ ಸರಿದಂತಾಯಿತು. ಆ ಕ್ಷಣಕ್ಕೇನೋ ಚಕಿತಗೊಳಿಸುವ ಆ ವೈಭವ ಬಹಳ ಬೇಗ ಕಾವು ಕಳೆದುಕೊಂಡಿತು. ನಾಟಕವನ್ನು ಸಿನಿಮಾ ಥರಾ ಮಾಡಬೇಕಾ ಎಂಬ ಪ್ರಶ್ನೆ ನನ್ನಲ್ಲಿ ಮತ್ತೆ ಮತ್ತೆ ಹುಟ್ಟಿಕೊಂಡಿತು. ನೀನಾಸಂನ ಈ ಸರಳ ಪ್ರಭಾವಿ ನಾಟಕ ಆ ಪ್ರಶ್ನೆಗೆ ಉತ್ತರದಂತಿದೆ. ಯಕ್ಷಗಾನ ವೇಷಧಾರಿಗೆ ಆಸ್ಥಾನ ಮಂಟಪ, ಅಂತಃಪುರ, ಯುದ್ಧರಂಗದಲ್ಲೂ ಒಂದೇ ವೇಷಭೂಷಣ, ಅದೇ ರಂಗಸಜ್ಜಿಕೆ. ಸಂದರ್ಭವನ್ನು ಆತ ಚೆನ್ನಾಗಿ ಅಭಿನಯಿಸಿದರೆ ನಾವು ಸುಲಭವಾಗಿ ಅದಕ್ಕೆ ಹೊಂದಿಕೊಳ್ಳುತ್ತೇವೆ. ಅದೇ ನಾಟಕದಲ್ಲೂ ನಡೆದಿದೆ. ಕಾಲೇಜಿನ ಕ್ಲಾಸ್ ರೂಂ, ಪ್ರಿನ್ಸಿಪಾಲ್ ಛೇಂಬರು, ಜೀಕೆ ಮಾಸ್ತರರ ಮನೆ, ಪಿಕ್ನಿಕ್ಗೆ ಹೋದ ತಾಣ, ಹುಬ್ಬಳ್ಳಿಯ ಲಾಡ್ಜು ಹೀಗೆ ಹತ್ತಾರು ತಾಣಗಳ ಪ್ರಸ್ತಾಪವಿದ್ದರೂ ಅವು ಯಾವುದೇ ರಂಗಸಜ್ಜಿಕೆಯಿಲ್ಲದೆ ತುಂಬಿಕೊಂಡು ಬಂದಿವೆ. ಒಳ್ಳೆಯ ಕತೆ ಮತ್ತು ಅಭಿನಯ ಇದ್ದಾಗ, ಬೇರೇನೂ ಇಲ್ಲದೆಯೂ ನಾಟಕವೊಂದು ಹೇಗೆ ಸಫಲವಾಗುತ್ತದೆ ಎನ್ನುವುದರ ಪ್ರತೀಕ ಇದು.

ಹುಡುಗರ ವಿಭಾಗದಲ್ಲಿ ನೀನಾಸಂ ತಂಡ ಕಳೆದ ಬಾರಿಗಿಂತಲೂ ಹೆಚ್ಚು ಶಕ್ತಿಯುತ ಅನ್ನಿಸುತ್ತದೆ. ಜೀಕೆ ಮಾಸ್ತರರ ಪಾತ್ರ ನಿರ್ವಹಿಸುವ ನಾಲ್ವರೂ (ಗೋಪಾಲಕೃಷ್ಣ ದೇಶಪಾಂಡೆ, ನವೀನ್ ಕುಮಾರ್ ಸುಳ್ಯ,----,----) ಮತ್ತು ಗಿರಪ್ಪ ಹಾಗೂ ಎಮ್ಟಿ ಪಾತ್ರಧಾರಿಗಳು ಅಭಿನಯದಲ್ಲಿ ಹಬ್ಬಿಕೊಂಡಿದ್ದಾರೆ. ಹಳೆಯ ಕೃತಿಯೊಂದನ್ನು ನಾಟಕ ಮಾಡಿದಾಗ ಅದು ನಾನಾ ಥರದ ಕೊಸರುಗಳಿಂದ ತಪ್ಪಿಸಿಕೊಳ್ಳಬೇಕಾಗುತ್ತದೆ. ಆದರೆ ನಾಟಕ ಮುಗಿದಾಗಲೂ ಕಾದಂಬರಿಯ ಕರ್ತೃ ಕಂಬಾರರು ಉಲ್ಲಸಿತರಾಗಿದ್ದದ್ದು ನೋಡಿದರೆ ನಾಟಕ ಎಲ್ಲ ಥರದಲ್ಲೂ ಯಶಸ್ವಿ ಅನಿಸುತ್ತದೆ .
ಅಮರಾ ಮಧುರಾ ಪ್ರೇಮ...ಬಾ ಬೇಗ ಚಂದಮಾಮಾ...

(ಫೋಟೊ ಕೃಪೆ :ಕೆ.ಎಸ್.ರಾಜಾರಾಂ)
(ಕಳೆದ ವರ್ಷದ ನಾಟಕದ ಚರ್ಚೆಗೆ ಇಲ್ಲಿ ಹೋಗಬಹುದು)

Read more...

March 01, 2008

ಪೇಟೆಯ ಪಾಡ್ದನ

೧೧
ಹಳ್ಳಿಗರ ಹವಿಸ್ಸಲ್ಲಿ ಬೆಳೆವ
ನಗರ ದೇವತೆಗಳೆ
ಈ ಅಕ್ಷರಗಳಲಿ ದುಃಖ ತುಂಬಿದ್ದೇವೆ
ತುಳುಕದಂತೆ ನೋಡಿಕೊಳ್ಳಿ
ಕಣ್ಣೀರು.
***
ದಿನ ರಾತ್ರಿ ನಾಜೂಕು ನೇವರಿಸಿ
ತೆವಳುತ್ತಿದೆ ಈ ಪೇಟೆ ಹುಳ
ಕಾಲ್ಬೆರಳ ಹಿಡಿದು ನಿತಂಬ ಹೊಟ್ಟೆ ದಾಟಿ
ನಿನ್ನ ಹೊಕ್ಕಳು ಕಂಕಳೂ ಚೆಂದ ಅನ್ನುತ್ತಿದೆ
ಉದುರಿಸಿದ ರೆಕ್ಕೆಗಳ ನಮಗೆ ಅಂಟಿಸುತ್ತಿದೆ
ಅಂಗುಲ ಅಂಗುಲ ಮುಕ್ಕುತ್ತಿದೆ.
***
ತೆಂಕ ಕೋಣೆ, ಗೀಟು ಕೋಣೆ
ಮೂಡು ಜಗಲಿ, ತುಂಡು ಜಗಲಿ
ಗುಂಡಿ ಕೋಣೆ, ದೇವರ ಕೋಣೆ
ಈಗಷ್ಟೆ ಯಾರನ್ನೋ ಕಳುಹಿಸಿ ಅರೆ ತೆರೆದುಕೊಂಡಿವೆ.
***
ಹಳ್ಳಿಗರ ಹವಿಸ್ಸಲ್ಲಿ ಬೆಳೆವ
ನಗರ ದೇವತೆಗಳೆ
ಇದೋ ಸುರಿದ್ದಿದ್ದೇವೆ ತುಪ್ಪ
ನಿಮ್ಮ ಬೆಂಕಿಗೆ, ತೃಪ್ತರಾಗಿ.
ಇದು ಇನ್ನೊಂದು ಪುತ್ರಕಾಮೇಷ್ಠಿ
ನಮ್ಮ ಮಕ್ಕಳ ನಮಗೆ ದಯಪಾಲಿಸಿ.

Read more...

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP