ಮುಮ್ಮಡಿ ಟಾಮಿಯ ಸ್ಮರಣೆ !
'ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ’ ಹಾಡನ್ನು ಎಲ್ಲರೂ ಹಾಡುತ್ತಿದ್ದ ಕಾಲದಲ್ಲಿ ಎಲ್ಲ ನಾಯಿಗಳ ಹೆಸರೂ ಟಾಮಿಯೆಂದೇ ಇತ್ತು. ನಮ್ಮ ಮನೆಯ 'ಮುಮ್ಮಡಿ ಟಾಮಿ’ಗಂತೂ ಚಪ್ಪಲಿ ಕಚ್ಚುವ ಚಟ. ಬಹಳ ಅಪರೂಪಕ್ಕೆ ಮನೆಗೆ ಬಂದಿದ್ದವರ ಚಪ್ಪಲಿಯನ್ನೇ ಇದು ಹಾರಿ ಎಗರಿಸಿದ ನಂತರವಂತೂ ಅದಕ್ಕೊಂದು ಮುಕ್ತಿ ಕಾಣಿಸಬೇಕೆಂದೇ ಅಪ್ಪ ನಿರ್ಧರಿಸಿದರು. ಹಾಗೆ ಬೆಳಬೆಳಗ್ಗೆ ನಾಯಿಯನ್ನು ಐದು ಕಿಮೀ ದೂರದ ಗುಡ್ಡದ ತುದಿಯಲ್ಲಿ ಬಿಟ್ಟು ಬರುವುದೆಂದು ಆ ನೆಂಟರನ್ನೂ ಒಡಗೂಡಿಕೊಂಡು ಹೋದರು. ಮಧ್ಯಾಹ್ನವಾದರೂ ಇಬ್ಬರ ಸುಳಿವೇ ಇಲ್ಲ. ಎಲಾ ಎಲಾ, ಅಂದುಕೊಂಡು ದಾರಿ ಬದಿಗೆ ಹೋಗಿ ನೋಡಿದರೆ ಟಾಮಿ ಬಾಲ ಅಲ್ಲಾಡಿಸುತ್ತಾ ನಿಂತಿತ್ತು . ಹತ್ತು ನಿಮಿಷಗಳ ನಂತರ ಅಪ್ಪ ಬಂದರು ! ವಾಸನಾ ಗ್ರಹಿಕೆಯಲ್ಲಿ ಈ ನಾಯಿಗಳು ಪ್ರಚಂಡವಲ್ವೆ?
ಮಕ್ಕಳ ಪತ್ರಿಕೆ 'ಬಾಲಮಂಗಳ’ ಆಗ ನಮ್ಮಲ್ಲೆಲ್ಲ ಭಾರೀ ಜನಪ್ರಿಯ. ಅಲ್ಲಿ ಬರುವ ಸರ್ವಶಕ್ತ -ದುಷ್ಟಶಿಕ್ಷಕ ಇಲಿರಾಯ 'ಡಿಂಗ’ ಹಾರಲೂಬಲ್ಲ. ಬಾಲಮಂಗಳದಲ್ಲೇ ಬರುವ ಇನ್ನೊಂದು ಕತೆಯ ಕುದುರೆಯ ಹೆಸರು 'ಡಿಕ್ಕಿ’ ಅಂತ. ಹಾಗೆ ನಮ್ಮ ಮನೆ ನಾಯಿಗಳಿಗೂ ಡಿಂಗ-ಡಿಕ್ಕಿ ಅನ್ನೋ ಹೆಸರುಗಳು ಬಂದವು. ಈಗಿನಂತೆ 'ಜಾತಿ ನಾಯಿ’ಗಳೇ ಬೇಕು ಅನ್ನುವ ಹುಚ್ಚು ಹಳ್ಳಿಗಳಿಗಿನ್ನೂ ಬಂದಿರಲಿಲ್ಲ. ಹಾಗಾಗಿ 'ನಾಯಿ ಜಾತಿ’ಯವೆಲ್ಲಾ ಮುಕ್ತವಾಗಿ ಓಡಾಡಿಕೊಂಡಿದ್ದವು. "ಯಾರೇ ಬಂದರೂ ನಾಯಿ ಬೊಗಳಬೇಕು’ ಅನ್ನುವುದಷ್ಟೇ ಮನೆಯವರ ನಿರೀಕ್ಷೆ. ಆದರೆ ಬೆಕ್ಕಿನಂತಿರುವವರ ಮನೆಗಳಿಗೂ ಆಲ್ಸೇಷನ್, ಡಾಬರ್‌ಮನ್, ಪೊಮೇರಿಯನ್, ಮುದೋಳ ನಾಯಿಗಳು ಬರತೊಡಗಿದಂತೆ ನಾಯಿ ಸಾಕುವುದೂ ಒಂದು ಪ್ರತಿಷ್ಠೆ ಅನಿಸತೊಡಗಿತು. 'ಅವರ ಮನೆಯ ನಾಯಿ 'ಭೀಮ’ ತೋಟದಲ್ಲಿ ಎಲ್ಲೇ ತೆಂಗಿನಕಾಯಿ ಬಿದ್ದರೂ ತಕ್ಷಣ ಓಡಿಹೋಗಿ ಕಚ್ಚಿಕೊಂಡು ಬರುತ್ತದೆ, ಇವರ ಮನೆ ನಾಯಿ, ಕಣ್ಣೆದುರು ಅನ್ನವಿದ್ದರೂ ಯಜಮಾನ ಹೇಳದೆ ತಿನ್ನುವುದಿಲ್ಲವಂತೆ, ಮೇಲಿನ ಗದ್ದೆ ಮನೆಯವರ ನಾಯಿ ಕಾಲೆತ್ತದೆ ಉಚ್ಚೆ ಹೊಯ್ಯುತ್ತದಂತೆ, (ಸುಳ್ಳಲ್ಲ ನಂಬಿ !) ದೇವಸ್ಥಾನದ ಪೂಜೆ ಭಟ್ರ ಮನೆ ನಾಯಿಗೂ ವಾರಕ್ಕೆ ಒಂದುಸಲ ಮೀನು ತಂದುಕೊಡ್ತಾರಂತೆ ! ’ ಹೀಗೆ ನಾಯಿಸುದ್ದಿಗಳು ನಿಧಾನವಾಗಿ ಎಲ್ಲೆಡೆ ಹರಡತೊಡಗಿದವು.
ಇದರಿಂದಾಗಿ ಹಳ್ಳಿ ನಾಯಿಗಳಿಗೂ ರಾಜ, ರಾಣಿ, ಟೈಗರ್, ಬಾಕ್ಸರ್, ಲೂಸಿ, ಟೈಸನ್ ಎಂಬ ಹೆಸರುಗಳನ್ನು ಕರುಣಿಸಲಾಯಿತು. ಸಕಲೇಶಪುರದ ಯಾವುದೋ ಎಸ್ಟೇಟು ಧಣಿಗಳ ಮನೆಯಿಂದ, ನನ್ನ ಅಜ್ಜನಮನೆಗೆ ಬಂದ ಎರಡು ಮುದೋಳ ನಾಯಿಗಳಂತೂ ಸುತ್ತಲಿನ ನೂರಾರು ಮನೆಗಳಲ್ಲಿ ಪ್ರಖ್ಯಾತಿ ಪಡೆದವು. ಬಹಳ ಸ್ಲಿಮ್ ಆಗಿ, ಉದ್ದಕ್ಕೆ ಎತ್ತರಕ್ಕೆ ಬೆಳೆವ ಆ ಜಾತಿನಾಯಿ ಮರಿಗಳನ್ನು , ದೇವರನ್ನು ತಂದಂತೆ ಸಕಲೇಶಪುರದಿಂದ ತರಲಾಯಿತು. ಅವುಗಳಿಗಾಗಿ ಹೊಸ ಗೋಣಿ, ಹೊಸ ತಟ್ಟೆ ಮತ್ತು ಅತ್ತೆ ಕೈಯಾರೆ ಹೊಲಿದ ಹೊಸ ಹೊದಿಕೆ. ಅವುಗಳಿಗೆ ಕೊಡುವ ನಾಯಿ ಬಿಸ್ಕೆಟನ್ನು ಕೆಲಸದವನೊಬ್ಬ ಕದ್ದ್ದು ತಿನ್ನುತ್ತಾನೆ ಎಂಬುದಂತೂ, ಬಳಿಯ ಅಂಗಡಿಕಟ್ಟೆಯಲ್ಲಿ ಸಂಜೆಯ ಹೊತ್ತು ಸೇರುವ ಜನರ ಮಾತಿಗೆ ರಸಗವಳವಾಯಿತು ! ಹೀಗೆ ಹಳ್ಳಿಯಲ್ಲೂ ನಾಯಿಗಳು ಇತಿಹಾಸದ ಪುಟ ಸೇರುವುದಕ್ಕೆ ಸಿದ್ಧವಾದದ್ದು ಕೆಲವು ಹಳಬರ ಪಾಲಿಗೆ ಅರಗಿಸಿಕೊಳ್ಳಲಾಗದ ಸಂಗತಿಯಾಯಿತು.
'ಹಾಸಿಗೆಗೆಲ್ಲಾ ನಾಯೀನ ಕರಕೊಂಡು ಬರೋದು ಅಂದ್ರೆ ಎಂತದು ಮಾರಾಯ್ರೆ , ಈ ನಾಯಿ ಜನ್ಮ , ಅಂತ ಇನ್ನು ಬೈಲಿಕ್ಕೂ ಸಾಧ್ಯ ಇಲ್ಲ ! ಎಷ್ಟೇ ಆದ್ರೂ ನಾಯಿ ಕಾಲೆತ್ತದೆ, 'ಅದು’ ಕಂಡಾಗ ಬಾಯಿ ಹಾಕದೆ ಇರ್‍ತದಾ?’ ಅಂತ ಕೆಲವರು ಆಡಿಕೊಂಡರು. ಆದರೆ ಯಾರ ಆಕ್ಷೇಪಗಳಿಗೂ ಲಕ್ಷ್ಯ ಕೊಡದೆ ಸಮಾಜದಲ್ಲಿ ನಾಯಿಯ ಸ್ಥಾನಮಾನ ಮಾತ್ರ ಹೆಚ್ಚಾಗುತ್ತಾ ಬಂತು. ನಮ್ಮ ಬಳಿ ಇರುವುದು ಬ್ಲ್ಯಾಕ್ ಅಂಡ್ ವೈಟ್ ಮೊಬೈಲ್ ಅಂತ ತೋರಿಸಿಕೊಳ್ಳಲು ನಾಚಿಕೆಯಾದಂತೆ, ನಮ್ಮ ಮನೆಯಲ್ಲಿರುವುದು ಊರು (ಕಂತ್ರಿ !)ನಾಯಿ ಅಂತ ಹೇಳಿಕೊಳ್ಳಲು ಬಹುತೇಕರು ಹಿಂಜರಿಯತೊಡಗಿದರು. 'ಕುಲ್ಕುಂದ ಜಾತ್ರೆ’ಯೆಂದೇ ಪ್ರಸಿದ್ಧವಾಗಿದ್ದ ದನದ ಜಾತ್ರೆಗೆಲ್ಲ ಮಂಕುಬಡಿದರೂ, ಬೆಂಗಳೂರಿನಲ್ಲಿ 'ಶ್ವಾನ ಪ್ರದರ್ಶನ’, ಅಮೆರಿಕದಲ್ಲಿ ನಾಯಿಗಳ ಫ್ಯಾಷನ್ ಸ್ಪರ್ಧೆ ಅಂತೆಲ್ಲ ಜನ ಪತ್ರಿಕೆಗಳಲ್ಲಿ ಓದತೊಡಗಿದ ನಂತರವಂತೂ ಶ್ವಾನ ಪ್ರಜ್ಞೆ ಜನರಲ್ಲಿ ಬೇರೂರತೊಡಗಿತು. ಟಿವಿ, ಫ್ರಿಜ್ಜು , ಸೋಲಾರ್‌ನ ಅವಶ್ಯಕತೆಗಳಂತೆ 'ಜಾತಿ ನಾಯಿ’ಯೂ ಒಂದು ಅವಶ್ಯ ಸಂಗತಿಯಾಯಿತು. ಹೀಗೆಲ್ಲ ಆಗಿ, ಮನೆ ಕಾಯಬೇಕಾದ ನಾಯಿಯನ್ನು , ಮನೆಯವರೇ ಕಾಯಬೇಕಾದ ಪರಿಸ್ಥಿತಿ ಬಂದದ್ದು (ಕು)ಚೋದ್ಯವಲ್ವೆ ? ಹಾಗಿದ್ದರೆ ಇದನ್ನೂ 'ನಾಯಿಪಾಡು’ ಅನ್ನಬಹುದೇ? (ವಿದ್ವಾಂಸರು ಪರಿಶೀಲಿಸಬೇಕು !)
ಶ್ವಾನ ಸಂಕುಲ ಬೆಳೆದು ಬಂದ ಹಾದಿಯ ವಾಸನೆ ಹಿಡಿದು ಮೊನ್ನೆ ಮೊನ್ನೆ ಮನೆಗೆ ಹೋಗಿದ್ದಾಗ, ತಮ್ಮ ತಂದಿರುವ ಆಲ್ಸೇಷನ್ ಮರಿ ನನ್ನ ಹೊಸ ಚಪ್ಪಲಿ ಕಚ್ಚಿ , ನಾಯಿ ಬಾಲ ಡೊಂಕು ಅನ್ನೋದು ಸಾಬೀತಾಯಿತು. ಮುಮ್ಮಡಿ ಟಾಮಿಗೆ ಈ ಅಕ್ಷರ ಕಂಬನಿ !
3 comments:
ತುಂಬಾ ಚೆನ್ನಾಗಿದೆ ಬರಹ.
ಬಹುಷ ಮಲೆನಾಡಿನ ಎಲ್ಲ ಹಳ್ಳಿಗಳಲ್ಲು ಈ ಬದಲಾವಣೆ ಕಂಡು ಬಂದಿದೆ. ನಮ್ಮ ಮನೆಲ್ಲಿದ್ದ ಮೊದಲ ಕಂತ್ರಿ ನಾಯಿಗೆ ನಮ್ಮ ತಂದೆ "ಶ್ವೋನಪ್ಪಾ" ಅಂತ ಕರೀತಿದ್ರು.
ಬರ್ತಾ ಬರ್ತಾ ಜಾತಿ ನಾಯಿಗಳು ಬಂದಂತೆ ಹೆಸರುಗಳು ಟಾಮೀ, ಜೂಲೀ,ಪಿಂಕೀ ಹೀಗೆ ಬದಲಾಗ್ತ ಬಂತು.
ಏನೇ ಹೇಳಿ, ಕಂತ್ರಿ ನಾಯಿಗಳಲ್ಲಿ ಇದ್ದ ಬುದ್ಧಿವಂತಿಕೆ, ಚಾಲಾಕಿತನ ಈ ಜಾತಿ ನಾಯಿಗಳಲ್ಲಿ ಇರಲ್ಲ.
ತುಂಬಾ ಥ್ಯಾಂಕ್ಸ್ ಒಂದು 10 ವರ್ಷ ಹಿಂದೆ ಕರ್ಕೊಂಡು ಹೋಗಿದ್ದಕ್ಕೆ.
-ಮಧು
'shwonappa'... wah, wonderful!
thank u madhu.
-sudhanva
ನಿಮ್ಮ ಮುಮ್ಮಡಿ ಟಾಮಿ ನಮ್ಮನೆಯ ಮೊದಲ ಟೈಗರ್ ಮತ್ತು ಇಮ್ಮಡಿ ಟೈಗರ್'ನ ನೆನಪು ಕೊಟ್ಟವು. ಮಧು ಹೇಳಿದ "ಏನೇ ಹೇಳಿ, ಕಂತ್ರಿ ನಾಯಿಗಳಲ್ಲಿ ಇದ್ದ ಬುದ್ಧಿವಂತಿಕೆ, ಚಾಲಾಕಿತನ ಈ ಜಾತಿ ನಾಯಿಗಳಲ್ಲಿ ಇರಲ್ಲ." ಮಾತಿನಲ್ಲಿ ಒಂದಿಷ್ಟು ಸತ್ವವಿದೆ ಅನಿಸ್ತದೆ... ಪೂರ್ತಿ ಒಪ್ಪಲಾರೆ.
Post a Comment