ದ್ವಾ ಸುಪರ್ಣಾ
'ವೇದೋಪನಿಷದಗಳ ಭೂತಗನ್ನಡಿಯೊಳಗೆ ಪಡಿಮೂಡಿದಾಕೃತಿಗೆ ತಾನೆ ಮುಗ್ಧ’ ಅಂತ 'ಶ್ರೀರಾಮನವಮಿಯ ದಿವಸ’ದಲ್ಲಿ ಬರೆದರು ಅಡಿಗರು. ಪಡಿಮೂಡಿದ ಆಕೃತಿಗೆ ವಾಲ್ಮೀಕಿ ಮುಗ್ಧನಾದ ಎನ್ನುವುದಕ್ಕಿಂತಲೂ, ವೇದ-ಉಪನಿಷತ್ತುಗಳಿಂದ ಮೂಡಿದ ಆಕೃತಿಗೆ ಅಲ್ಲವೇ ಮುಗ್ಧನಾದದ್ದು, ಅದಕ್ಕೆ ಮುಗ್ಧನಾಗದಿರಲು ಸಾಧ್ಯವೆ?- ಅಂತಲೂ ಅಡಿಗರು ಕೇಳುತ್ತಿರುವಂತೆ ಈಗ ಅನ್ನಿಸುತ್ತಿದೆ !
ಪಿಯುಸಿ ಫೇಲಾಗಿ ಮನೆಯಲ್ಲಿ ಕುಕ್ಕುರುಬಡಿದ ಕಾಲದಲ್ಲಿ ಭಗವದ್ಗೀತೆ, ಉಪನಿಷತ್, ಜಿಡ್ಡು ಕೃಷ್ಣಮೂರ್ತಿ ಅಂತ ನಾನು ಒಂದಷ್ಟು ಓದಿಕೊಳ್ಳತೊಡಗಿದೆ. ತತ್ತ್ವ ಜಿಜ್ಞಾಸೆಯಲ್ಲಿ-ತರ್ಕದಲ್ಲಿ ಕೊಂಚ ಆಸಕ್ತಿ ಹುಟ್ಟಿ ವೇದಾಂತ ಬ್ರಹ್ಮಾಂಡದ ಒಳಹೊಕ್ಕರೆ ಬಿಡಿಸಿಕೊಳ್ಳುವುದು ಸುಲಭವಲ್ಲ. ಆದರೆ ಲೌಕಿಕದ ಜಗತ್ತಿಗೆ ಅದರ ನೇರ ಉಪಯೋಗ ಏನೂ ಇಲ್ಲದ್ದರಿಂದ (ಅಂದರೆ ಸಾಹಿತ್ಯದಂತೆ ಬಹುಜನರೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ, ಬರವಣಿಗೆಯ ಕಲೆ ಕಲಿಸುವುದಿಲ್ಲ, ಎಲ್ಲೆಂದರಲ್ಲಿ ಉದ್ಧರಿಸಲಾಗುವುದಿಲ್ಲ, ಉಪನಿಷತ್ ಓದುವುದು ಕೆಲಸ ಸಿಗಲು ಸಹಕಾರಿಯಲ್ಲ, ಯುವಕರು ಅದನ್ನು ಓದುವುದಂತೂ ಹಾಸ್ಯಾಸ್ಪದ...) ಅವುಗಳಿಂದ ಕಳಚಿಕೊಂಡೆ. ಆದರೆ...ಬದುಕಿನಲ್ಲಿ ನಂಬಿಕೆಯಿಟ್ಟವನು ದೇವರನ್ನೂ ನಂಬಿರಬೇಕು (!); ಇರುವುದು ಸಾವು, ಮೀರುವುದೇ ಬದುಕು -ಅಂತ ನಾನು ನಂಬಿರುವುದರಿಂದ ಅವುಗಳೆಡೆಗಿನ ಸೆಳೆತವಂತೂ ಇದ್ದೇ ಇದೆ. ಹಾಗಾಗಿಯೇ ಕೆಲವರಿಗಾದರೂ ಇಷ್ಟವಾಗಬಹುದೆಂಬ ಆಸೆಯೊಂದಿಗೆ ಪ್ರಯೋಗವೊಂದನ್ನು ಇಲ್ಲಿ ಮಾಡುತ್ತಿದ್ದೇನೆ. ನಮ್ಮ ಹಲವಾರು ಕವಿಗಳನ್ನು ಪ್ರಭಾವಿಸಿದ, ಶ್ವೇತಾಶ್ವತರ ಉಪನಿಷತ್‌ನಲ್ಲಿ ಬರುವ ಒಂದು ಮಂತ್ರ ಹೀಗಿದೆ :
ತಯೋರನ್ಯಃ ಪಿಪ್ಪಲಂ ಸ್ವಾದ್ವತ್ತ್ಯ-
ನಶ್ನನ್ನನ್ಯೋ ಅಭಿಚಾಕಶೀತಿ
ಅನಾದಿಯಿಂದಲೂ ಹೀಗೆ,
ಒಂದು ಹಕ್ಕಿ ಹಣ್ಣ ತಿನ್ನುವುದು
ಇನ್ನೊಂದು ಅದರ ನೋಡುವುದು ?
ಹಿತ್ತಲ ಮೆಟ್ಟಿಲಲಿ ಮಗು
ಅಳು ಮೊಗಕೆ ಮೆತ್ತಿದ ಅನ್ನ
ತಾಯ ಕೈಯಲಿ ತಟ್ಟೆ , ತುತ್ತನ್ನ
ಸ್ತನ ಸ್ರವಿಸುವುದು ಮಗುವ
ಅಳು ಹಟದ ಭಾವಕ್ಕೆ
ತೊಟ್ಟಿಲ ಜೀಕಿಂದ
ಹಾಸಿಗೆ ಮೆತ್ತೆಯೊತ್ತು ;
ತಾಯ್ತುಟಿಯ ಮಮತೆ ಮುತ್ತು .
ಆಕೆ ಮಗ್ಗುಲಾಗುವಳು
ಸ್ತನ ಸ್ಪರ್ಶ ಬೆದೆಕರೆಯ
ರತಿ ಬಯಕೆ ಹದಕೆ
ಒಂದು ಹಕ್ಕಿ ಹಣ್ಣ ತಿನುವುದು
ಇನ್ನೊಂದು ಹಣ್ಣೇ ತಾನಾಗುವುದು.
-ಕೆ.ಪಿ.ಸುರೇಶ
ಪಕ್ಕದ ಮನೆಯಲ್ಲಿ ಉಪನಿಷತ್ತು
ಸೀಬೇ ಮರ. ಕೊಂಬೆ, ಕವೆ-
ಯಲ್ಲಿ ಎರಡು ಹಕ್ಕಿ
ಒಂದು ಹಣ್ಣು ಕುಕ್ಕಿ ಹೆಕ್ಕಿ
ತಿನ್ನುತ್ತಿದೆ. ಹಸಿವು, ದಾಹ.
ಮತ್ತೊಂದು ಸುಮ್ಮನೆ ಕೂತು
ನೋಡುತ್ತಿದೆ. ಮೈಯೆಲ್ಲ ಕಣ್ಣು.
ಹೀಗೆ ಒಬ್ಬ ಗಂಡ. ಅವನ ಹೆಂಡತಿ
ಪಕ್ಕದ ಮನೆ ಸಂಸಾರ.
-ಎ.ಕೆ.ರಾಮಾನುಜನ್
7 comments:
ಧನ್ಯವಾದ ಸುಧನ್ವ.
ಒಳ್ಳೆಯ ಆಯ್ಕೆ. ಉಪನಿಷತ್ತಿನ ಈ ಸಾಮತಿ ನನಗೂ ಬಹಳ ಇಷ್ಟ.
ಅಂದಹಾಗೆ, ಸುಮ್ಮನಿರುವ ಹಕ್ಕಿ ಗಂಡು, ಹಣ್ಣು ತಿನ್ನುವುದು ಹೆಣ್ಣು ಅಂತ ಹೇಳಬಹುದಾ? ಧ್ವನಿ ಹಾಗೇ ಇದೆ!? ( ಹಿಂದಿನ ವ್ಯಾಖ್ಯಾನ ಕಾರರ ವ್ಯಾಖ್ಯೆಗಳಲ್ಲಿ ಹಾಗೇ ಇದೆ. ಆದರೆ ಈಗಿನವರ ದೃಷ್ಟಿಕೋನ ಹೇಗಿರಬಹುದು?)
ನಿಮ್ಮ ವೇದ- ಉಪನಿಷತ್ತುಗಳ ಓದನ್ನು ದಯವಿಟ್ಟು ಹಂಚಿಕೊಳ್ಳಿ. ಈ ಬಗ್ಗೆ ಮಾತಾಡಲು ಯಾರೂ ಇಲ್ಲವೆನ್ನೋ ಬೇಸರ ಇಷ್ಟು ದಿನವೂ ಇತ್ತು. ಈಗ ನಿಜಕ್ಕೂ ಖುಷಿಯಾಗ್ತಿದೆ.
ವಂದೇ,
ಚೇತನಾ ತೀರ್ಥಹಳ್ಳಿ
ಚೆನ್ನಾಗಿದೆ,ಇಬ್ಬರ ಕವಿತೆಯ ಧ್ವನಿಸುವ ಧ್ವನಿಯೂ ಚೆನ್ನವೇ. ರಾಮಾನುಜನ್ ಪ್ರತಿಭೆ ಸ್ಫೋಟಗೊಳ್ಳುವುದು ಕೊನೆಯ ವ್ಯಾಖ್ಯಾನದಲ್ಲಿ. ನಿನ್ನ ಆಯ್ಕೆ ಚೆನ್ನಾಗಿದೆ. ಇಂಥ ತುಲನೆ ಹೆಚ್ಚಾಗಲಿ. ಒಳ್ಳೆಯ ಪ್ರಯತ್ನ.
ಮಾರಾಯಾ, ನಿನ್ನ ಓದಿನ ಹರವೇ ತಿಳಿಯುತ್ತಿಲ್ಲ.
ದೇಹವೆಂಬ ವೃಕ್ಷದಲ್ಲಿ ಜೀವಾತ್ಮವೆಂಬ ಹಕ್ಕಿ ಇಂದ್ರಿಯ ಸುಖಗಳೆಂಬ ಹಣ್ಣನ್ನು ತಿನ್ನುತ್ತಿದೆ. ಇನ್ನೊಂದು ಹಕ್ಕಿ ಪರಮಾತ್ಮ ಅದನ್ನು ನೋಡುತ್ತಿದೆ ಎಂಬುದು ಈ ಮಂತ್ರದ ವ್ಯಾಖ್ಯೆ. ಇಲ್ಲಿ ಅವುಗಳ ಲಿಂಗಕ್ಕೆ ಪ್ರಾಮುಖ್ಯವೇನೂ ಇದ್ದಂತಿಲ್ಲ. ಆದರೆ ಕವಿಗಳು ಇವನ್ನು ಹೆಣ್ಣು-ಗಂಡುಗಳಾಗಿ ಕಂಡದ್ದು 'ಕಾವ್ಯ ವಿಶೇಷ’ ! ಬಹುಶಃ ಇಬ್ಬರು ಹೆಣ್ಣುಗಳು ಅಥವಾ ಇಬ್ಬರು ಗಂಡುಗಳು ಜತೆಗಿದ್ದಾಗ, ಒಬ್ಬ/ಳು ಏನನ್ನೋ ತಿನ್ನುತ್ತಿದ್ದು(ಅಥವಾ ಏನೋ ಕೆಲಸ ಮಾಡುತ್ತಿದ್ದು) ಇನ್ನೊಬ್ಬ/ಳು ಸುಮ್ಮನಿರುವುದು ಸಾಧ್ಯವಿಲ್ಲವೆಂದೆ?!
- ಸುಧನ್ವಾ
ಸುಧನ್ವರೇ, ನಿಮ್ಮ ’ಚಂಪಕಾವತ” ಇಷ್ಟವಾಯಿತು. ನಿಮ್ಮ ವೇದದ ಓದನ್ನು ದಯವಿಟ್ಟು ಹಂಚಿಕೊಳ್ಳಿ.
’ಚಂಪಕಾವತ” ವನ್ನು ಚಂಪಕಾವತಿ ಎಂದು ಓದಿಕೊಳ್ಳಿ. :)
ಮತ್ತಷ್ಟು ಬರೆಯಿರಿ.
ಪ್ಲೀಸ್...
ಚೇತನಾ.
dear siritri, pls write ur full name.
i am not a scholar in vedas! only intrested in it. if u r intrested u can join. uploading two more poems soon.
thanks a lot
-sudhanva
Post a Comment