ಮಿಲಿಯಾಧೀಶನ ಸಂತೋಷ ಯಾವುದರಲ್ಲಿದೆ ಗೊತ್ತಾ?
ಸಿಂಗಾಪುರದ ಆಡಮ್ ಖೂ ೨೬ ವರ್ಷಕ್ಕೇ ಮಿಲಿಯಾಧೀಶನಾದವ . ಬೆಸ್ಟ್ ಸೆಲ್ಲರ್ ಎನಿಸಿದ ಏಳು ಪುಸ್ತಕಗಳ ಲೇಖಕ. ಶಿಕ್ಷಣ-ತರಬೇತಿ-ಕಾರ್ಯಕ್ರಮ ಆಯೋಜನೆ-ಜಾಹೀರಾತು ಕ್ಷೇತ್ರಗಳಲ್ಲಿ ಕೆಲಸ ಮಾಡುವ ಈತ, ವರ್ಷಕ್ಕೆ ೩೦ ಮಿಲಿಯನ್ ಡಾಲರ್ ವಹಿವಾಟಿನ 'ಆಡಮ್ ಖೂ ಲರ್ನಿಂಗ್ ಟೆಕ್ನಾಲಜೀಸ್ ಗ್ರೂಪ್ ಪ್ರೈವೇಟ್ ಲಿಮಿಟೆಡ್'ನ ಅಧ್ಯಕ್ಷ . ಹಣದ ಮೌಲ್ಯದ ಬಗೆಗಿನ ಆತನ ಬರೆಹವನ್ನು, ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ತಮ್ಮ ಬ್ಲಾಗ್‌ನಲ್ಲಿ ಖುಶಿಯಿಂದ ಅಂಟಿಸಿಕೊಂಡಿದ್ದರು. ಅದು ಈಗ ಕನ್ನಡದಲ್ಲಿ ಇಲ್ಲಿದೆ.
ಇತ್ತೀಚೆಗೆ ನಾನು, ಕೌಲಾಲಂಪುರಕ್ಕೆ ಹೋಗುವ ವಿಮಾನದಲ್ಲಿದ್ದಾಗ ಹತ್ತಿರ ಬಂದ ಒಬ್ಬ ಕಣ್‌ಕಣ್ ಬಿಟ್ಟು ಕೇಳಿದ - 'ನಿನ್ನಂಥ ಮಿಲಿಯಾಧೀಶ ಎಕಾನಮಿ ಕ್ಲಾಸ್*ನಲ್ಲಿ ಹೋಗೋದಾ?'(*ವಿಮಾನದಲ್ಲಿ ಕಡಿಮೆ ದರದ ವಿಭಾಗ) ತಕ್ಷಣ ಉತ್ತರಿಸಿದೆ- 'ಹಾಗಾಗಿಯೇ ನಾನೊಬ್ಬ ಮಿಲಿಯಾಧೀಶ !' ತುಂಬಾ ಜನ ಹೇಗೆ ಬ್ರೈನ್‌ವಾಶ್ ಮಾಡಿಸಿಕೊಂಡಿದ್ದಾರೆಂದರೆ, ಮಿಲಿಯಾಧೀಶರು ಬ್ರಾಂಡೆಡ್ ವಸ್ತುಗಳನ್ನೇ ಉಪಯೋಗಿಸಬೇಕು, ವಿಮಾನದಲ್ಲಿ ಪ್ರಥಮ ದರ್ಜೆಯಲ್ಲೇ ಪ್ರಯಾಣಿಸಬೇಕು ಅಂತೆಲ್ಲ. ಆದರೆ ಬಹಳಷ್ಟು ಜನ ಮಿಲಿಯಾಧೀಶರಾಗುವುದಿಲ್ಲ ಯಾಕೆಂದರೆ, ಹೆಚ್ಚು ಸಂಪಾದನೆಯಿದ್ದಾಗ ಹೆಚ್ಚು ಖರ್ಚು ಮಾಡುವುದೂ ಸಹಜ ಅಂತ ಅವರು ಭಾವಿಸುತ್ತಾರೆ ! ಅದು ಅವರನ್ನು ಮತ್ತೆ ಮೂಲೆಗೆ ತಳ್ಳುತ್ತದೆ.
ನಾನು ವೈಇಒ ಸಂಘಟನೆಗೆ ಸೇರಿಕೊಂಡಾಗ ( ೪೦ ವರ್ಷದ ಒಳಗಿದ್ದು , ಸ್ವಂತ ಉದ್ಯಮದಲ್ಲಿ ವರ್ಷಕ್ಕೆ ೧ ಮಿಲಿಯನ್ ಡಾಲರ್ ಸಂಪಾದಿಸುವವರ ಸಂಘಟನೆ), ಸ್ವಂತ ಬಲದಿಂದ ಬೆಳೆದವರೆಲ್ಲ ನನ್ನಂತೆಯೇ ಯೋಚಿಸುತ್ತಾರೆಂದು ಗೊತ್ತಾಯಿತು. ಅವರಲ್ಲಿ ವರ್ಷಕ್ಕೆ ನಿವ್ವಳ ೫ ಮಿಲಿಯನ್ ಡಾಲರ್ ಸಂಪಾದಿಸುವ ಹಲವರೂ, ಎಕಾನಮಿ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದರು, ಮರ್ಸಿಡಸ್, ಬಿಎಂಡಬ್ಲ್ಯು ಕಾರುಗಲ ಬದಲು ಟೊಯೊಟಾದಂತಹ ಸಾಮಾನ್ಯ ಕಾರುಗಳನ್ನು ಬಳಸುತ್ತಿದ್ದರು. ನಾನು ಗಮನಿಸಿದ್ದೇನೆಂದರೆ, ತಮ್ಮ ಸಂಪತ್ತಿಗಾಗಿ ತಾವೇ ಕೆಲಸ ಮಾಡದ ಜನ ಮಾತ್ರ ನಾಳೆಯೇ ಇಲ್ಲವೆಂಬಂತೆ ವೆಚ್ಚ ಮಾಡುತ್ತಿದ್ದರು. ಸ್ವಲ್ಪಮಟ್ಟಿಗೆ, ಸೊನ್ನೆಯಿಂದಲೇ ನೀವು ಎಲ್ಲವನ್ನೂ ಕಟ್ಟುವ ಅಗತ್ಯವಿಲ್ಲದಿದ್ದಾಗ, ಹಣದ ಮೌಲ್ಯ ನಿಮಗೆ ಅರ್ಥವಾಗುವುದಿಲ್ಲ. ಕುಟುಂಬದ ಸಂಪತ್ತು ಮೂರನೇ ತಲೆಮಾರಿಜವರೆಗೆ ಯಾಕೆ ಉಳಿಯುತ್ತಿಲ್ಲವೆಂಬುದಕ್ಕೆ ಇದೂ ಒಂದು ಕಾರಣ. ಥ್ಯಾಂಕ್ಯು ದೇವರೇ...ನನ್ನ ಶ್ರೀಮಂತ ಅಪ್ಪ, ಈ ಅಪಾಯಕಾರಿ ಸಾಧ್ಯತೆಯನ್ನು ಮುಂದಾಲೋಚಿಸಿಯೇ, ನನ್ನ ವ್ಯಾಪಾರಕ್ಕೆ ಒಂದು ಸೆಂಟ್ ಕೊಡುವುದಕ್ಕೂ ನಿರಾಕರಿಸಿದ.
ಸತ್ಯವಾದ್ದೆಂದರೆ, ಸ್ವಶಕ್ತಿಯಿಂದ ಬೆಳೆದ ಬಹುಪಾಲು ಮಿಲಿಯಾಧೀಶರು ಮಿತವ್ಯಯಿಗಳು. ಹಾಗಾಗಿ ಸಂಪತ್ತು ಸಂಗ್ರಹಿಸುವುದಕ್ಕೆ , ವೇಗವಾಗಿ ಅದನ್ನು ದ್ವಿಗುಣಗೊಳಿಸುವುದಕ್ಕೆ ಅವರಿಗೆ ಸಾಧ್ಯವಾಗುತ್ತದೆ. ಕಳೆದ ೭ ವರ್ಷಗಳಲ್ಲಿ, ಸಂಪಾದನೆಯ ಶೇ.೮೦ನ್ನು ನಾನು ಉಳಿಸಿದ್ದೇನೆ ! ಈಗ ಶೇ.೬೦ರಷ್ಟು. ಅಂದರೆ ಈಗ ಮನೆಯಲ್ಲಿ ಹೆಂಡತಿ, ಮಕ್ಕಳು, ನೆಂಟರು ಇದ್ದಾರೆ. ಆದರೆ ತಮ್ಮ ಸಂಪಾದನೆಯ ಶೇ.೧೦ಕ್ಕಿಂತ ಹೆಚ್ಚನ್ನು ಉಳಿಸುವವರೇ ಬಹಳ ಕಡಿಮೆ ಜನ. ನಾನು ಫಸ್ಟ್‌ಕ್ಲಾಸ್ ಟಿಕೆಟ್‌ನ್ನು , ೩೦೦ ಡಾಲರ್‌ಗಳ ಅಂಗಿಯನ್ನು ತಿರಸ್ಕರಿಸುವುದು ಯಾಕೆಂದರೆ , ಅದು ಹಣ ವ್ಯರ್ಥಗೊಳಿಸುವ ದಾರಿಯೆಂದು ತಿಳಿದಿರುವುದರಿಂದ. ಆದರೆ ಜೂಲಿಯಾ ಗೇಬ್ರಿಯಲ್‌ನಲ್ಲಿನ (ಶಿಕ್ಷಣ ಮತ್ತು ಸಂವಹನದ ಅಂಶಗಳನ್ನು ಕಲಿಸುವ ಪ್ರಸಿದ್ಧ ಸಂಸ್ಥೆ) ಭಾಷಣಕ್ಕಾಗಿ ಮತ್ತು ನಾಟಕಕ್ಕಾಗಿ ಎರಡು ವರ್ಷದ ಮಗಳನ್ನು ಕಳಿಸಲು ೧,೩೦೦ ಡಾಲರ್ ವ್ಯಯಿಸಲು ನಾನು ಎರಡು ಬಾರಿ ಯೋಚಿಸುವುದೇ ಇಲ್ಲ. ಕೆಲವರು ಕೇಳುತ್ತಾರೆ - 'ನೀನು ಎಂಜಾಯ್ ಮಾಡುವುದಿಲ್ಲ ಅಂತಾದರೆ ಅಷ್ಟೊಂದು ಹಣ ಮಾಡಿ ಏನು ಪ್ರಯೋಜನ?' ನಿಜ ಸಂಗತಿಯೆಂದರೆ, ಆಭರಣ-ಬ್ರಾಂಡೆಡ್ ಬಟ್ಟೆಗಳನ್ನು ಕೊಳ್ಳೋದರಲ್ಲಿ ಅಥವಾ ಪ್ರಥಮ ದರ್ಜೆಯಲ್ಲಿ ಪ್ರಯಾಣಿಸುವುದರಲ್ಲಿ ನನಗೆ ಸಂತೋಷ ಸಿಗುವುದಿಲ್ಲ. ಏನನ್ನಾದರೂ ಖರೀದಿಸಿದರೆ ಆ ಸಂತೋಷ ಸ್ವಲ್ಪ ಹೊತ್ತು ಮಾತ್ರ ಇರುತ್ತದೆ. ಮರುಕ್ಷಣ ಬೇಜಾರಾಗುತ್ತದೆ ಮತ್ತು ಸಂತೋಷಗೊಳಿಸುವ ಇನ್ನೊಂದನ್ನು ಖರೀದಿಸೋಣ ಅನ್ನಿಸುತ್ತದೆ !
ಇದರ ಹೊರತಾಗಿ, ನನ್ನನ್ನು ನಿಜವಾಗಿ ಸಂತೋಷಗೊಳಿಸುವುದೆಂದರೆ, ಮಕ್ಕಳು ನಗುವುದು ಮತ್ತು ಬೇಗನೆ ಕಲಿಯುವುದು ; ನನ್ನ ತರಬೇತಿದಾರರು ಪ್ರತಿವರ್ಷ ಹೆಚ್ಚೆಚ್ಚು ದೇಶಗಳಲ್ಲಿ ಹೆಚ್ಚೆಚ್ಚು ಜನರನ್ನು ತಲುಪುವುದು ; ನನ್ನ ಪುಸ್ತಕಗಳು ಹೇಗಿವೆ, ನನ್ನ ಸೆಮಿನಾರ್‌ಗಳು ಹೇಗೆ ಪರಿಣಾಮಕಾರಿಯಾಗಿ ಜನರ ಬದುಕಿಗೆ ಹೇಗೆ ಸ್ಫೂರ್ತಿ ಕೊಟ್ಟಿವೆ ಎಂದು ಬರುವ ಎಲ್ಲ ಇ-ಮೇಲ್‌ಗಳನ್ನು ಓದುವುದು -ನನಗೆ ಪರಮಾನಂದ. ಇಂಥಹವು, ಯಾವುದೋ ರೋಲೆಕ್ಸ್ ವಾಚ್ ನೀಡುವ ಸಂತೋಷಕ್ಕಿಂತ ಎಷ್ಟೋ ಹೆಚ್ಚು ಸಮಯ ಇವು ನನ್ನನ್ನು ಸಂತೋಷವಾಗಿಡುತ್ತವೆ . ಒಟ್ಟಾರೆ ನಾನು ಹೇಳುವುದು, ನಮಗೆ ಸಂತೋಷವಾಗಬೇಕಾದ್ದು ನಮ್ಮ ಬದುಕಿನ ಕೆಲಸಗಳನ್ನೇ ಮಾಡುವುದರಿಂದ. (ಪಾಠ ಮಾಡುವುದು, ಮನೆ ಕಟ್ಟುವುದು, ವ್ಯಾಪಾರ, ವಿನ್ಯಾಸ, ಸ್ಪರ್ಧೆಗಳಲ್ಲಿ ಗೆಲ್ಲುವುದು...) ಹಣ ಕೇವಲ ಉಪ ಉತ್ಪನ್ನ ಅಷ್ಟೆ. ನೀವು ಮಾಡುತ್ತಿರುವ ಕೆಲಸವನ್ನೇ ಇಷ್ಟಪಡದೆ, ಅದರಿಂದ ಬರುವ ಹಣದಿಂದ ಕೊಳ್ಳುವ ವಸ್ತುಗಳು ನೀಡುವ ಸಂತೋಷಕ್ಕೆ ಆಸೆಪಟ್ಟಿದ್ದರೆ .... ನೀವು ಅರ್ಥವಿಲ್ಲದ ಜೀವನ ಸಾಗಿಸುತ್ತಿದ್ದೀರೆಂದೇ ನಾನು ಭಾವಿಸುತ್ತೇನೆ.'
5 comments:
wonderful message. ಎಲ್ಲರೊಡನೆ ಹಂಚಿಕೊಂಡದ್ದಕ್ಕೆ ಧನ್ಯವಾದಗಳು.
i read in vijaya karnataka ...thanks for publishing..
suptadeepti, roopa- thanks for ur visit-champakavati
soooper- harini
this blog is very good. i am a regular reader of this blog.recently no articles in vijaya karnataka why????
Post a Comment