December 03, 2008

ಕೃಷ್ಣನ ಸೈಕಲ್ ಸವಾರಿ

'ಬೆಳ್ಳೇಕೆರೆಯ ಹಳ್ಳಿ ಥೇಟರ್' ಅಂಕ ೮ - ಸಕಲೇಶಪುರದಿಂದ ಪ್ರಸಾದ್ ರಕ್ಷಿದಿ ಬರೆಯುತ್ತಾರೆ

ದೇ ಸಮಯದಲ್ಲಿ ಹಾರ್ಲೆ ಗುಂಪಿನ ಇನ್ನೊಂದು ತೋಟಕ್ಕೆ ಕೇರಳದಿಂದ ಬಂದ ಹುಡುಗರ ಗುಂಪೊಂದು ಕೆಲಸಕ್ಕೆ ಬಂತು. ಅವರಲ್ಲಿ ಕೆಲವರು ವಿದ್ಯಾವಂತರೂ ಇದ್ದರು. ನಾವು ನಾಟಕಗಳನ್ನು ಮಾಡುವುದನ್ನು ನೋಡಿ, 'ನಾವೂ ನಮ್ಮ ಊರಿನಲ್ಲಿ ನಾಟಕ ಆಡುತ್ತಿದ್ದೆವು. ಈಗ ನಿಮ್ಮ ಜೊತೆಯಲ್ಲಿ ನಾವೂ ಆಡುತ್ತೇವೆ." ಎಂದು ನಮ್ಮೊಂದಿಗೆ ಬಂದರು. ಅವರು ಇಲ್ಲಿ ಒಂದೆರಡು ಮಲೆಯಾಳಿ ನಾಟಕಗಳನ್ನು ಆಡಿದರು. ನಾವು ಒಂದೆರಡು ಕಡೆ ಜೊತೆಯಾಗಿ ಎರಡೂ ತಂಡಗಳ ನಾಟಕಗಳನ್ನು ಮಾಡಿದೆವು. ಅವರಲ್ಲಿ ಕೆಲವರು ಒಳ್ಳೆಯ ನಟರಿದ್ದರಲ್ಲದೆ ಪರಿಕರ- ರಂಗಸಜ್ಜಿಕೆ, ವೇಷಭೂಷಣಗಳನ್ನು ಅವರೇ ಅತ್ಯಂತ ಕಡಿಮೆ ಖರ್ಚಿನಲ್ಲಿ ಮಾಡಿಕೊಳ್ಳುತ್ತಿದ್ದರು. ಅರಶಿನ, ಕುಂಕುಮ, ಸುಣ್ಣ, ಬ್ಯಾಗಡೆ, ಮೈದಾಹಿಟ್ಟು, ಹಳೆಯ ತಗಡಿನ ಚೂರುಗಳು, ಹಳೆಯ ಬಟ್ಟೆ, ಸೀರೆಗಳು, ಬಾಳೆಪಟ್ಟೆ, ಅಡಿಕೆ ಹಾಳೆ, ಬಿದಿರು, ವಾಟೆ, ಹಳೆಟೈರು, ಟ್ಯೂಬು, ಕೊನೆಗೆ ಏನು ಸಿಕ್ಕಿತೋ ಅದು. ಹೀಗೆ ಎಲ್ಲವನ್ನೂ ಉಪಯೋಗಿಸಿ ಅದರಲ್ಲೇ ಎಲ್ಲವನ್ನೂ ತಯಾರು ಮಾಡಿಕೊಳ್ಳುತ್ತಿದ್ದರು. ಅವರಿಂದ ನಾವು ಅನೇಕ ವಿಷಯಗಳನ್ನು ಕಲಿತೆವು. ಅವರು ನಮ್ಮಿಂದ ಲೈಟಿಂಗ್-ಉಪ್ಪುನೀರಿನ ಡಿಮ್ಮರ್‌ಗಳು, ಪರದೆಗಳ ಉಪಯೋಗ ಇತ್ಯಾದಿಗಳನ್ನು ಕಲಿತುಕೊಂಡರು. ನಾವೆರಡೂ ತಂಡಗಳು ಸೇರಿ ಸಕಲೇಶಪುರದ ಟೌನ್ ಹಾಲ್‌ನಲ್ಲಿ ನಾಟಕ ಮಾಡಿದೆವು. ನಾವು ಆಡಿದ " ನಮ್ಮ ಎಲುಬುಗಳ ಮೇಲೆ' ನಾಟಕ, - ತೋಟ ಕಾರ್ಮಿಕರ ತಂಡವೊಂದು ತಾಲ್ಲೂಕು ಮಟ್ಟದಲ್ಲಿ ಮಾಡಿದ ಪ್ರಥಮ ಪ್ರಯೋಗವಾಗಿತ್ತು.

ನಾವು ಆಡುತ್ತಿದ್ದ 'ನಮ್ಮ ಎಲುಬುಗಳ ಮೇಲೆ ' ನಾಟಕಕ್ಕೆ ಸ್ವಲ್ಪ ಮಟ್ಟಿನ ಪ್ರಚಾರ ಸಿಕ್ಕಿತು. ಜೊತೆಯಲ್ಲಿ ರೈತ ಚಳುವಳಿಯೂ ಹಳ್ಳಿಹಳ್ಳಿಗಳಿಗೆ ಹಬ್ಬುತ್ತಿದ್ದ ಸಮಯ. ಹಾಗಾಗಿ ಚಳುವಳಿಗೆ ಪೂರಕವಾಗಿ ಅಲ್ಲಲ್ಲಿ ಕೆಲವು ಕಡೆ ಈ ನಾಟಕವನ್ನು ಆಡುತ್ತಿದ್ದೆವು. ಗಾಣದ ಹೊಳೆ, ಹಾನುಬಾಳು- ಹೀಗೇ ಕೆಲವು ಕಡೆ ಇದರ ಪ್ರದರ್ಶನವಾಯಿತು. ಇದರಿಂದ ಅನಿವಾರ್ಯವಾಗಿ ಆಗಾಗ ಪಾತ್ರಧಾರಿಗಳು ಬದಲಾಗುತ್ತಿದ್ದರು.ಒಮ್ಮೆ ನಾಟಕದ ರಿಹರ್ಸಲ್ ನಡೆಯುತ್ತಿದ್ದಾಗ ನನ್ನ ಹತ್ತಿರದ ಸಂಬಂಧಿ ಹುಡುಗನೊಬ್ಬ ರಜೆಯಲ್ಲಿ ನಮ್ಮಲ್ಲಿಗೆ ಬಂದಿದ್ದ. ಅವನಾಗ ೬-೭ನೇ ಕ್ಲಾಸಿನಲ್ಲಿ ಓದುತ್ತಿದ್ದಿರಬೇಕು. ಬೇಗ ನಮ್ಮ ಹುಡುಗರ ಜೊತೆ ಬೆರೆತು ಬಿಟ್ಟ. ಅವನು ಓದುತ್ತಿದ್ದುದು ಸುಳ್ಯ ತಾಲ್ಲೂಕಿನ ಹಳ್ಳಿ ಶಾಲೆಯೊಂದರಲ್ಲಿ. ನಮ್ಮ ಡೈರಿ ಫಾರಂನಲ್ಲಿದ್ದ ಸೈಕಲ್ ನೋಡಿ ಅವನಿಗೆ ಕಲಿಯುವ ಆಸೆಯಾಯ್ತು. ಆದರೆ ನಾವು ಫಾರಂನ ಸೈಕಲ್ಲನ್ನು ಯಾರಿಗೂ ಮುಟ್ಟಲು ಬಿಡುತ್ತಿರಲಿಲ್ಲ. ಏಕೆಂದರೆ ನಮ್ಮಲ್ಲಿಂದ ಹತ್ತು ಕಿ.ಮೀ ದೂರದಲ್ಲಿರುವ ಸಕಲೇಶಪುರಕ್ಕೆ ಹಾಲು ಸಾಗಿಸಲು ನಮಗಿದ್ದಂತಹ ಏಕೈಕ ವಾಹನ ಅದು. ಅದೇನಾದರೂ ಕೆಟ್ಟು ಹೋದರೆ ಆ ಹೊತ್ತಿನ ೪೦-೫೦ ಲೀಟರ್ ಹಾಲು ಸಾಗಿಸಲಾಗದೆ ತೊಂದರೆಯಾಗುತ್ತಿತ್ತು. ಆದ್ದರಿಂದ ಆ ವಿಚಾರದಲ್ಲಿ ನಾನು ಕಟ್ಟುನಿಟ್ಟಾಗಿದ್ದೆ. ಡೈರಿ ಕೆಲಸಗಾರರಲ್ಲದೆ ಬೇರೆ ಯಾರಿಗೂ ಸೈಕಲ್ ಮುಟ್ಟಲು ಬಿಡುತ್ತಿರಲಿಲ್ಲ.ಒಂದು ಮಧ್ಯಾಹ್ನ ನಾವೆಲ್ಲ ಮನೆಯಲ್ಲಿ ಊಟಕ್ಕೆ ತಯಾರಾಗುತ್ತಿದ್ದೆವು. ಊಟದ ಸಮಯದಲ್ಲಿ ಈ ಹುಡುಗನ ಪತ್ತೆಯೇ ಇಲ್ಲ. ಸುತ್ತೆಲ್ಲ ವಿಚಾರಿಸಿದೆ. ಕೊನೆಗೆ ತೋಟದ ಕೆಲಸಗಾರನೊಬ್ಬ ಹೇಳಿದ " ನಿಮ್ಮ ನೆಂಟರ ಹುಡುಗ ಸೈಕಲ್ ತೆಗೆದುಕೊಂಡು ಡೈರಿ ಫಾರಂ ಅಂಗಳದಲ್ಲಿ ಸುತ್ತುತ್ತಿದ್ದ." ನನಗೆ ಅಸಾಧ್ಯ ಸಿಟ್ಟು ಬಂತು. ನಾನು ಅವನಿಗೆ " ಸೈಕಲ್ ಹತ್ತುವ ಪ್ರಯತ್ನ ಮಾಡಬೇಡ " ಎಂದು ಎರಡೆರಡು ಸಾರಿ ಹೇಳಿದ್ದೆ. ಆದ್ದರಿಂದ 'ಬರಲಿ ಇವನು ಮನೆಗೆ 'ಎಂದು ಕಾದು ಕುಳಿತೆ. ಒಂದು ಗಂಟೆ ಸಮಯ ಕಳೆದಿರಬಹುದು - ಹುಡುಗ ಮೆಲ್ಲನೆ ಮನೆಗೆ ಬಂದ"ಸೈಕಲ್ ಮುಟ್ಟಿದ್ದೀಯ?' ಜೋರಾಗಿ ಕೇಳಿದೆ. 'ಅದು ....ಅದು' ಎಂದ ಚೆನ್ನಾಗಿ ಬೈದುಬಿಟ್ಟೆ. ಅಮ್ಮ, 'ಹೋಗಲಿ ಬಿಡು- ಏನೋ ಅವನಿಗೆ ಗೊತ್ತಾಗಲಿಲ್ಲ.' ಎಂದಳು. 'ಹೌದು, ಸೈಕಲ್ ಹಾಳಾದರೆ ಇವತ್ತಿನ ಹಾಲಿನ ಗತಿಯೇನು?" ಅಂದೆ. ಹುಡುಗ ಪೆಚ್ಚು ಮೋರೆ ಹಾಕಿಕೊಂಡಿದ್ದ.ಈ ಹುಡುಗ ಪ್ರತಿ ದಿನ ನಮ್ಮ ರಿಹರ್ಸಲ್ ಸಮಯದಲ್ಲಿ ಅಲ್ಲೇ ಬಂದಿರುತ್ತಿದ್ದ. ನಾಟಕ ಪ್ರದರ್ಶನಕ್ಕೆ ಎರಡು ದಿನ ಇರುವಾಗ- ನಾಟಕದಲ್ಲಿ ಪಾತ್ರ ಮಾಡುತ್ತಿದ್ದ ಒಬ್ಬ ಹುಡುಗಿಗೆ ಆರೋಗ್ಯ ಕೆಟ್ಟಿತು. ಅವಳು ಪಾತ್ರ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ.

ಪ್ರತಿ ದಿನ ರಿಹರ್ಸಲ್ ನೋಡುತ್ತಿದ್ದ ಈ ಹುಡುಗನ ಮೇಲೆ ಉಗ್ಗಪ್ಪನ ದೃಷ್ಠಿ ಬಿತ್ತು. ' ಇವನಿಗೆ ಹೇಗೂ ಆ ಪಾತ್ರದ ಮಾತುಗಳು ಬರ್‍ತವೆ. ಆ ಪಾತ್ರ ಇವನೇ ಮಾಡಿದ್ರೇನು" ಎಂದ.ಹುಡುಗ ನಾಟಕದಲ್ಲಿ 'ಹುಡುಗಿ' ಪಾತ್ರ ಮಾಡುವುದೆಂದಾಯಿತು. ಇವನಿಗೆ ಮೂರೋ ನಾಲ್ಕೋ ಡೈಲಾಗುಗಳಿದ್ದವು. ನಂತರ ಚೂರಿಯಿಂದ ತನ್ನನ್ನೇ ಇರಿದುಕೊಂಡು ಸಾಯುವುದು. ಇಷ್ಟೇ. ಇವನು ರಿಹರ್ಸಲ್‌ನಲ್ಲಿ ಆ ಹುಡುಗಿಗಿಂತಲೂ ಚೆನ್ನಾಗಿ ಮಾಡಿದ. ಪ್ರದರ್ಶನದ ದಿನ ಮೇಕಪ್ ಮಾಡುವಾಗ ನಮ್ಮಲ್ಲಿ ಟೋಫನ್ ಇಲ್ಲವೆಂದು ನನ್ನ ತಲೆಗೆ ಹೊಳೆಯಿತು. ಇವನು ತಲೆ ಕೂದಲನ್ನು ನುಣ್ಣಗೆ ಅರ್ಧ ಇಂಚು ಬಿಟ್ಟು ಕತ್ತರಿಸಿಕೊಂಡಿದ್ದ!.ಇವನಿಗೆ ತಲೆಗೆ ಎರಡೆರಡು ಚೌರಿಯನ್ನಿಟ್ಟು ಟೇಪ್ ಅಂಟಿಸಿದೆವು. ಅದು ಜಾರದಂತೆ ಮೇಲೊಂದು ಸ್ಕಾರ್ಪನ್ನು ಸುತ್ತಿದೆವು. ಹಾಗೂ ಹೀಗೂ ಸ್ತ್ರಿವೇಷ ಸಿದ್ಧವಾಯ್ತು. ಅವನ ಪಾತ್ರ ಬಂದಾಗ ಉತ್ಸಾಹದಿಂದಲೇ ಸ್ಟೇಜಿಗೆ ಬಂದ. ಮೊದಲನೇ ಡೈಲಾಗೇ ಒಂದು ಸಿಟ್ಟಿನ ಉದ್ರೇಕಕಾರಿ ವಾಕ್ಯ-ಅದನ್ನು ರಭಸದಿಂದ ಹೇಳಿ ಜೋರಾಗಿ ಕೈಗಳನ್ನು ಬೀಸಿ ತಲೆಯನ್ನು ತಿರುಗಿಸಿದ. ತಲೆಗೆ ಸಿಕ್ಕಿಸಿದ ಚೌರಿ ಟೋಫನ್ ಸರ್ಪಾಸ್ತ್ರದಂತೆ ಸ್ಟೇಜಿನಿಂದ ಹಾರಿ ಹೋಯಿತು. ನಮ್ಮ ದಿಢೀರ್ ನಟ ಬೋಳು ತಲೆಯಲ್ಲಿ ನಿಂತಿದ್ದ! ಜನರೆಲ್ಲ " ಹೋ " ಎಂದು ಕೂಗಿದರು. ಅದೇನು ಹೊಳೆಯಿತೋ ಕೊನೆಯ ಡೈಲಾಗ್ ಹೇಳಿ ಚೂರಿಯಿಂದ ತಿವಿದುಕೊಂಡು ಕೆಳಗೆ ಬಿದ್ದು ತನ್ನ ಪಾತ್ರವನ್ನು ಪರಿಸಮಾಪ್ತಿಗೊಳಿಸಿದ. ಜನ ತುಂಬ ಹೊತ್ತಿನವರೆಗೆ ನಗುತ್ತಲೇ ಇದ್ದರು. ಹೀಗೆ ನಮ್ಮಲ್ಲಿ ಪ್ರಥಮ ಬಾರಿಗೆ ರಂಗಪ್ರವೇಶ ಮಾಡಿದ ಹುಡುಗ ಕೃಷ್ಣಕುಮಾರ್ ನಾರ್ಣಕಜೆ, ಈಗ ರಂಗಾಯಣದಲ್ಲಿ ನಟರಾಗಿದ್ದಾರೆ!.

ರಂಗಾಯಣ ಪ್ರಾರಂಭವಾದ ಶುರುವಿನಲ್ಲಿ ಬಿ.ವಿ. ಕಾರಂತರು ರಂಗಾಯಣದ ನಟರಿಗೆಲ್ಲ ಒಂದೊಂದು ಸೈಕಲ್ ಹೊಂದುವುದನ್ನು ಕಡ್ಡಾಯ ಮಾಡಿದ್ದರು. ನಾನು ಒಮ್ಮೆ ರಂಗಾಯಣಕ್ಕೆ ಹೋದಾಗ ಸೈಕಲ್ ಹಿಡಿದು ಹೊರಟ ಕೃಷ್ಣಕುಮಾರ್‌ನನ್ನು ನೋಡಿ ಇವನು ಹಿಂದೆ ನಮ್ಮ ಡೈರಿಫಾರಂನಲ್ಲಿ ಸೈಕಲ್ ಸವಾರಿಗೆ ಹೊರಟದ್ದು ನೆನಪಾಯಿತು."ಸೈಕಲ್ ಸವಾರಿ ಮಾಡಲು ಹೊರಟು ನೀನು ನನ್ನಿಂದ ಬೈಸಿಕೊಂಡಿದ್ದೆ ಅಲ್ಲವೇ?" ಎಂದು ಕೇಳಿದೆ."ನಾನು ಸೈಕಲ್ ಸವಾರಿ ಮಾಡದೆ ಬೈಸಿಕೊಂಡದ್ದು. ನಾನು ಆವಾಗ ಸೈಕಲ್ ಹತ್ತಲೇ ಇಲ್ಲ. ಆಸೆ ತಡೆಯದ್ರಿಂದ ಸೈಕಲ್ಲನ್ನು ಹಾಗೇ ಅಂಗಳದಲ್ಲಿ ನೂಕಿಕೊಂಡು ಸುತ್ತು ಬರುತ್ತಿದ್ದೆ. ಕೆಳಗೆ ಬಿದ್ದು ಹಾಳಾದೀತೆಂದು ಸೈಕಲ್ ಹತ್ತಲೇ ಇಲ್ಲ." ಬಂತು ವಿವರಣೆ!ಒಂದು ಕ್ಷಣ ಮಾತಿಲ್ಲದವನಾದೆ.ಕೃಷ್ಣ ನಮ್ಮಲ್ಲಿ ಆಟವಾಡುತ್ತಾ, ಬೈಸಿಕೊಳ್ಳುತ್ತಾ ರಂಗಕ್ಕೆ ಬಂದದ್ದು. ಮುಂದೆ ತನ್ನ ಶಾಲೆಯಲ್ಲೂ ತಾನೇ ನಾಟಕ ಬರೆದು ಆಡಿದ್ದು. ಸುಳ್ಯದ ನಾರ್ಣಕಜೆಯಲ್ಲಿ ರಂಗಶಿಬಿರದಲ್ಲಿ ಭಾಗವಹಿಸಿದ್ದು, ನಾಟಕ ಮಾಡಿದ್ದು. ಅದೇ ಶಾಲೆಯಲ್ಲಿ ಉಪಾಧ್ಯಾಯನಾಗಿ ಕೆಲಸಮಾಡಿದ್ದು. ನಂತರ ನೀನಾಸಂನಲ್ಲಿ ಕಲಿತು ನಟ ತಂತ್ರಜ್ಞನಾದದ್ದು, ತಿರುಗಾಟ ಮಾಡಿದ್ದು. ಹೀಗೇ ರಂಗಾಯಣ ತಲುಪಿದ್ದು, ಎಲ್ಲ ಕಣ್ಣ ಮುಂದೆ ಹಾದು ಹೋದವು.

ನಮ್ಮ ನಾಟಕದ ರಿಹರ್ಸಲ್ ಪ್ರಾರಂಭವಾಗುವಾಗ ಸಾಮಾನ್ಯವಾಗಿ ಸಂಜೆ ಏಳು ಗಂಟೆಯಾಗುತ್ತಿತ್ತು. ಆ ಕಾಲದಲ್ಲಿ ಕೆಲಸಗಾರರು ಬೆಳಗ್ಗೆ ಊಟಮಾಡಿ ಕೆಲಸಕ್ಕೆ ಹೋದರೆ ಮಧ್ಯಾಹ್ನ ಊಟ ಮಾಡುತ್ತಿದ್ದುದೇ ಕಡಿಮೆ. ಹಲಸಿನಕಾಯಿ ಬಿಡುವ ಸಮಯವಾದರೆ ತೋಟದಲ್ಲೇ ಹಲಸಿನಕಾಯಿ ತಿಂದಿರುತ್ತಿದ್ದರು. ವರ್ಷದ ಉಳಿದ ಕಾಲವೆಲ್ಲ ಮಧ್ಯಾಹ್ನದ ಊಟ ಇದ್ದರೆ ಇತ್ತು- ಇಲ್ಲದಿದ್ದರೆ ಇಲ್ಲ. ಸಂಜೆ ಕೆಲಸ ಮುಗಿಸಿ ಬಂದು ಬೇಗ ಊಟ ಮಾಡುತ್ತಿದ್ದರು. ರಾತ್ರಿ ಬೇಗ ಮಲಗುತ್ತಿದ್ದರು. ಕೆಲಸಗಾರರ ಮನೆಗಳಲ್ಲಿ ರಾತ್ರಿ ಹತ್ತು ಗಂಟೆಯೆಂದರೆ ನಡುರಾತ್ರಿ ಎನ್ನುತ್ತಿದ್ದರು. ಈಗ ಕಾಲ ಬದಲಾಗಿದೆ.ಹಾಗಾಗಿ ನಮ್ಮ ಹುಡುಗರೆಲ್ಲ ಸಂಜೆ ಆರೂವರೆಗೆಲ್ಲ ಊಟ ಮಾಡಿ ಏಳುಗಂಟೆಗೇ ಶಾಲೆಯಲ್ಲಿ ಸೇರುತ್ತಿದ್ದರು. ನಾನು ಡೈರಿ ಫಾರಂ ಉಸ್ತುವಾರಿ ಮಾಡುತ್ತಿದ್ದುರಿಂದ ಮತ್ತು ಅಲ್ಲಿನ ಕೆಲಸಗಾರರಲ್ಲಿ ಹೆಚ್ಚಿನವರು ನಮ್ಮ ತಂಡದಲ್ಲಿದ್ದುದರಿಂದ ಡೈರಿಯಲ್ಲಿ ಹಸುಗಳಿಗೇನಾದರೂ ತೊಂದರೆಯಾದರೆ ನಾವು ಅಲ್ಲಿಗೆ ಹೋಗುತ್ತಿದ್ದೆವು. ನಮ್ಮ ಶಾಲೆಯಿಂದ ಡೈರಿ ಫಾರಂಗೆ ಎರಡು ಫರ್ಲಾಂಗ್ ದೂರವಿತ್ತು. ಅಲ್ಲಿಗೆ ಹೋಗಬೇಕಾದಾಗ ಅಥವಾ ಇನ್ನಾವುದೇ ಅನಿವಾರ್ಯ ಕೆಲಸಗಳಿದ್ದಾಗಲೆಲ್ಲ ನಮ್ಮ ರಿಹರ್ಸಲ್ ರದ್ದಾಗುತ್ತಿತ್ತು. ಅದಲ್ಲದೆ ಸಕಲೇಶಪುರಕ್ಕೆ ಹತ್ತು ಕಿಲೊಮೀಟರ್ ದೂರ ಸೈಕಲ್‌ನಲ್ಲಿ ಹಾಲು ಸಾಗಿಸುತ್ತಿದ್ದ ಚೆನ್ನವೀರ, ಸುಂದರ ಇವರುಗಳು ಕೆಲವು ಬಾರಿ ಹೋಗಿಬರಲು ಮಲೆನಾಡಿನ ಕಡಿದಾದ ಏರುತಗ್ಗಿನ ದಾರಿಯಲ್ಲಿ ಇಪ್ಪತ್ತು ಕಿ.ಮೀ.ಸೈಕಲ್ ತುಳಿದು ಹಾಲು ಕೊಟ್ಟು ಬಂದು ನಾಟಕದಲ್ಲಿ ಪಾತ್ರ ಮಾಡಿದ್ದೂ ಇತ್ತು!ಇವೆಲ್ಲ ಕಾರಣಗಳಿಂದ ನಮ್ಮ ನಾಟಕ ಸಿದ್ಧಗೊಳ್ಳಲು ಕೆಲವೊಮ್ಮೆ ಎರಡು ಮೂರು ತಿಂಗಳುಗಳಿಗೂ ಹೆಚ್ಚು ಕಾಲ ಬೇಕಾಗುತ್ತಿತ್ತು. ಆದ್ದರಿಂದ ನಾವು ಮಳೆಗಾಲ ಮುಗಿಯುತ್ತಾ ಬಂದಂತೆ ಸೆಪ್ಟೆಂಬರ್ ತಿಂಗಳಿನಲ್ಲಿ ನಾಟಕದ ಸಿದ್ಧತೆಯಲ್ಲಿ ತೊಡಗಿದರೆ ಡಿಸೆಂಬರ್- ಜನವರಿಯಲ್ಲಿ ಪ್ರದರ್ಶನ ಸಾಧ್ಯವಾಗುತ್ತಿತ್ತು. ನಂತರ ಎಪ್ರಿಲ್ ವರೆಗೆ ಅಲ್ಲಿ ಇಲ್ಲಿ ಸಾಧ್ಯವಾದಷ್ಟು ಪ್ರದರ್ಶನಗಳನ್ನು ಮಾಡಿಕೊಳ್ಳಬೇಕು. ಮತ್ತೆ ಅಡ್ಡ ಮಳೆಗಳು ಪ್ರಾರಂಭವಾಗುವುದರಿಂದ ಬಯಲಿನಲ್ಲಿ ನಾಟಕ ಮಾಡುವ ಜವಾಬ್ದಾರಿ ತೆಗೆದುಕೊಳ್ಳುವುದು ಕಷ್ಟ. ಇವೆಲ್ಲದರಿಂದ ಆ ವರ್ಷದ ಮಟ್ಟಿಗೆ ಬೇರೆ ನಾಟಕವನ್ನು ತೆಗೆದುಕೊಳ್ಳುವುದಂತೂ ಅಸಾಧ್ಯದ ಮಾತು. ವರ್ಷದಲ್ಲಿ ಆರೇಳು ತಿಂಗಳುಗಳ ಕಾಲ ಮಳೆ ದಿನಗಳಿರುವ ವರ್ಷಕ್ಕೆ ನೂರಿಪ್ಪತ್ತು ಇಂಚುಗಳಷ್ಟು ಮಳೆ ಬೀಳುವ, ಮಲೆನಾಡಿನ ಯಾವುದೇ ಊರಿನಲ್ಲಿ ಕೃಷಿಕೂಲಿಗಾರರನ್ನು, ರೈತರನ್ನು ಕಟ್ಟಿಕೊಂಡು ನಾಟಕ ಮಾಡಬೇಕಾದರೆ ವರ್ಷವಿಡೀ ನಿರಂತರ ರಂಗಚಟುವಟಿಕೆ ಬೇಕು.

ಒಮ್ಮೆ ಹಾನುಬಾಳಿನಲ್ಲಿ ನಾಟಕ ಪ್ರದರ್ಶನ ಇತ್ತು. ರಾತ್ರಿ ಎಂಟು ಗಂಟೆಗೆ ನಾಟಕ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ನಾಟಕ ಪ್ರಾರಂಭಕ್ಕೆ ರಾತ್ರಿ ಎಂಟು ಗಂಟೆಯ ನಂತರವೇ ಸರಿಯಾದ ಸಮಯ. ಕೆಲಸಕ್ಕೆ ಹೋದವರು ಮನೆಗೆ ಬಂದು ಅಡಿಗೆ ಮಾಡಿ ಊಟ ತೀರಿಸಿ ಕಾರ್ಯಕ್ರಮಗಳಿಗೆ ಬರಬೇಕಾಗಿರುವುದರಿಂದ ನಗರಗಳಲ್ಲಿ ಮಾಡಿದಂತೆ ಸಂಜೆ ಆರೂವರೆ ಅಥವಾ ಏಳು ಗಂಟೆಗೆ ನಾಟಕ ಪ್ರಾರಂಭಿಸುವುದು ಅನುಕೂಲಕರವಲ್ಲ. ಅಂದು ನಮ್ಮ ಡೈರಿ ಸುಂದರನೂ ಪಾತ್ರಧಾರಿ. ಅವನು ಸಂಜೆ ಸೈಕಲ್ಲಿನಲ್ಲಿ ಸಕಲೇಶಪುರಕ್ಕೆ ಹಾಲು ಸಾಗಿಸಿ ನಂತರ ಅಲ್ಲಿಂದ ಹದಿನೇಳು ಕಿ.ಮೀ. ದೂರದ ಹಾನುಬಾಳಿಗೆ ಬಸ್ಸಿನಲ್ಲಿ ಬರಬೇಕಿತ್ತು. ನಾಟಕದ ಹೊತ್ತಿಗೆ ನಾವೆಲ್ಲ ಗಡಿಬಿಡಿಯಲ್ಲಿ ಸುಂದರನನ್ನು ಮರೆತೇಬಿಟ್ಟಿದ್ದೆವು. ನಾಟಕ ಪ್ರಾರಂಭವಾಯಿತು. ನಾನೂ ಪಾತ್ರಧಾರಿಯಾಗಿ ಸ್ಟೇಜಿನಲ್ಲಿದ್ದೆ. ಸುಂದರನ ಪಾತ್ರ ರಂಗಕ್ಕೆ ಬರಲು ಇನ್ನೊಂದೈದು ನಿಮಿಷ ಇದ್ದಿರಬಹುದು. ಅಷ್ಟರಲ್ಲಿ ನಾಟಕ ನೋಡುತ್ತಾ ಕುಳಿತ ಜನಗಳ ಮಧ್ಯದಲ್ಲಿ ದಾರಿಮಾಡಿಕೊಂಡು ಅವಸರದಲ್ಲಿ ಸುಂದರ ಬರುವುದು ಕಾಣಿಸಿತು. ನನಗೆ ಗಾಬರಿಯಾಯಿತು. ಅವನದ್ದು ಮಂತ್ರಿಯ ಪಿ.ಎ.ಒಬ್ಬನ ಪಾತ್ರ. ಈಗ ಮೇಕಪ್ ಇತ್ಯಾದಿಗಳಿಗೆ ಸಮಯವೇ ಇಲ್ಲ. ನೋಡಿದರೆ ಇವನು ಚಡ್ಡಿ ಶರ್ಟ್‌ನಲ್ಲಿದ್ದ. ಗ್ರೀನ್ ರೂಂನಲ್ಲಿದ್ದವರು ಇವನನ್ನು ಹಾಗೆಯೇ ಸ್ಟೇಜಿಗೆ ತಳ್ಳಿದ್ದರು. ಅದೇ ವೇಶದಲ್ಲಿ ಸುಂದರ ಸ್ಟೇಜಿಗೆ ಬಂದು ಪಾತ್ರ ಮಾಡಿದ! ಜನ ಇವನ ವಿಚಿತ್ರ ವೇಷ ನೋಡಿ ಸ್ವಲ್ಪ ಕೂಗಾಡಿದರು. ನಾಟಕ ಮುಗಿದ ಮೇಲೆ ಜನರಿಗೆ ಪ್ರಸಂಗ ವಿವರಿಸಿದೆ. ಎಷ್ಟೇ ಕಷ್ಟವಾದರೂ ಸರಿ ತನ್ನ ಪಾತ್ರ ನಿರ್ವಹಣೆಯ ಬಗ್ಗೆ ಇರುವ ಇಂತಹ ರಂಗನಿಷ್ಠೆಯಿಂದಾಗಿ ಮಾತ್ರ ರಂಗ ತಂಡಗಳು ಮತ್ತು ರಂಗ ಚಟುವಟಿಕೆಗಳು ಉಳಿದುಕೊಳ್ಳುತ್ತವೆ ಎಂದೆನಿಸುತ್ತದೆ.

1 comments:

Anonymous,  December 6, 2008 at 10:43 AM  

ಚೆನ್ನಾಗಿದೆ. ಪುಸ್ತಕಕ್ಕೆ ಕಾಯುತ್ತಿದ್ದೇನೆ.
- ಹರೀಶ್ ಕೇರ

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP