ಬಟವಾಡೆಯಾಗದ ಪದ್ಯಗಳು
ಕಡೆಂಗೋಡ್ಲು ಶಂಕರ ಭಟ್ಟ ಪ್ರಶಸ್ತಿ, ತಿಪ್ಪೇರುದ್ರಸ್ವಾಮಿ ಕಾವ್ಯ ಪ್ರಶಸ್ತಿಗಳನ್ನು ಪಡೆದಿರುವ ಲಕ್ಕೂರು ಆನಂದರ ಮೂರನೇ ಕವನ ಸಂಕಲನ 'ಬಟವಾಡೆಯಾಗದ ರಸೀತಿ' ಮೊನ್ನೆ ಮೊನ್ನೆ ಬಿಡುಗಡೆಯಾಯಿತು. ಓದಬೇಕೆಂದು ಕೈಗೆತ್ತಿಕೊಂಡರೆ ಗಂಟಿಕ್ಕಿಕೊಂಡಿದೆ. ಒಂದೊಂದೆ ಎಳೆ ಹಿಡಿದು ಎಳೆಯುತ್ತಿದ್ದೇನೆ. ನಿಮಗೂ ಬೇಜಾರಾದರೆ ಕ್ಷಮೆಯಿರಲಿ.
ಉದಾಹರಣೆಗೆ 'ಉರಿವ ಸೆಳಕಿನ ದೀಪದುರಿತದ ಬೆಳಕ ಕಾವೆ 'ಎಂಬ ಸಾಲನ್ನು ಎತ್ತಿಕೊಂಡು ನೋಡಿ. ಉರಿ, ಸೆಳಕು, ದೀಪದ ಉರಿ, ಬೆಳಕು ಇಷ್ಟೂ ಒಟ್ಟಾಗಿ ಏನನ್ನು ಹೇಳುತ್ತಿವೆ? ದುರಿತ ಅನ್ನುವುದಕ್ಕೆ ಕಷ್ಟಕೋಟಲೆ ಅನ್ನುವ ಅರ್ಥ ಮಾಡಿಕೊಂಡರೂ, ಊಹೂಂ. ಇನ್ನು -ಮೌನ, ಏಕಾಂತ, ಬಯಲು, ಜೀವ, ಬೆರಗು, ಉಸಿರು- ಈ ಪದಗಳನ್ನು ಯಾವ ಪರಿ ಬಳಸಲಾಗಿದೆ ಅನ್ನುವುದಕ್ಕೆ 'ಏಕಾಂತ-ಮೌನ'ಗಳ ಹಲವು ಸಾಲುಗಳನ್ನು ಕತ್ತರಿಸಿ ಕೊಡುತ್ತಿದ್ದೇನೆ. ಇನ್ನೂ ಕೆಲವು ಉಳಿದುಕೊಂಡಿವೆ, ಪತ್ತೆಮಾಡಿ !
ಏಕಾಂತ - ತಾವ ತಡಿಕೆಯ ಏಕಾಂತದ ದಾರಿ ಕೊನೆಯಲ್ಲೊಂದಷ್ಟು / ತೆವಳಲೆತ್ನಿಸಿ ಉರುಳಿದ ಏಕಾಂತ ಶಬ್ದವೆ / ಏಕಾಂತ ಲೋಕಾಂತದ ಬಂಡೆ ಸಿಡಿದಂತೆ / ಕ್ಷಣಿಕವೆಂದರಿತರು ಏಕಾಂತದ ಸೆಳೆಮಿಂಚು / ನನ್ನ ನಿನ್ನ ನಡುವಿನ ಏಕಾಂತದ ಒಳಗುರಿಯುವ ದೀಪದ / ತಾವ ತಡಿಕೆಯ ಏಕಾಂತದ ಉಸಿರೆ /ಏಕಾಂತದ ಮೊಲೆ ಕೊನೆಯ ಹಸಿ ಹಾಲ ಕುಡಿದು /ದೀಪ ಸಾಲಿನ ನಡುವೆ ಏಕಾಂತ ಮರೆತವನು/ ಏಕಾಂಗಿತನ ಬೋರಲಾಗಿ ಬಿದ್ದಿದ್ದರೆ.ಇಲ್ಲಿರುವ ೩೯ ಕವನಗಳಲ್ಲಿ ಮೌನ-ಏಕಾಂತಗಳು ಇಷ್ಟು ಬಾರಿ ಕಾಡುತ್ತವೆಂದರೆ ಇದು 'ಚಿಂತಿಸಬೇಕಾದ ವಿಷಯ'. ಆದರೆ ಮುನ್ನುಡಿಕಾರರು ನಂತರ ಸ್ವಲ್ಪ ಎಚ್ಚರಗೊಂಡಿದ್ದನ್ನೂ ಹೇಳಬೇಕು- 'ಕಾವ್ಯದ ಭಾಷೆ ಮೇಲ್ನೋಟಕ್ಕೆ ಸರಳವಾಗಿ ಕಂಡರೂ ರೂಪಕಗಳ ನಿರ್ಮಾಣದಲ್ಲಿ ಅವು ಸಂಕೀರ್ಣಗೊಳ್ಳುತ್ತ ಹೋಗುತ್ತವೆ. ಆದರೆ ಅವುಗಳು ಸ್ಪಷ್ಟತೆಯನ್ನು ಪಡೆದುಕೊಳ್ಳದಿದ್ದರೆ ಭಾಷೆಯೂ ಸೋಲುತ್ತದೆ, ಕವಿಯೂ ಸೋಲುತ್ತಾನೆ. ಇಲ್ಲಿನ ಬಹುತೇಕ ಕವಿತೆಗಳಲ್ಲಿ ಕವಿ ಯಶಸ್ಸನ್ನು ಸಾಧಿಸಿದ್ದಾರೆ ಎಂಬುದು ನನ್ನ ಅಭಿಪ್ರಾಯ' ಎನ್ನುತ್ತಾರೆ. ಕವಿ ಗೆದ್ದು ಓದುಗ ಸೋಲುವುದು ಅಂದರೆ ಹೀಗೆಯೇ ಇರಬಹುದೆ?! ಅವರು ಮುಂದುವರಿಸಿ- 'ಭಾವಗಂಧದ ತೇರ ಮುಡಿಗೆ ಭಗದ ಸಾಲಿನ ಬೆರಗು/ಹೊಳೆಸಾಲ ಮೇಲಿನ ಚಿತ್ತಾರ ಸಾಲಿನ ನೆರಳಿನೆದೆ ಬಗೆದು/ಉಸಿರ ಮಾಲೆಯ ಬಿಗಿದು ಕಟ್ಟುತ್ತ ' ಎಂಬಂಥ ಸಾಲುಗಳು ಇನ್ನಷ್ಟು ಸ್ಪಷ್ಟತೆ ಬಯಸುತ್ತವೆ ' ಅಂದಿದ್ದಾರೆ. ಥ್ಯಾಂಕ್ಯು . ಹಾಗಂತ ಎಲ್ಲಾ ಪದ್ಯಗಳೂ ಕೆಟ್ಟು ಹೋಗಿವೆ ಅಂತಲ್ಲ. ಆದರೆ ಇರುವ ಕೆಲವು ಒಳ್ಳೆಯ ಪದ್ಯಗಳ ಪ್ರವೇಶಕ್ಕೂ ಅವಕಾಶವೇ ಆಗದಂತೆ ಪದಪುಂಜಗಳು ಕೋಟೆ ಕಟ್ಟಿ ಕುಳಿತಿವೆ. ತಿರುತಿರುಗಿಸಿದರೂ ತೆಗೆಯಲಾಗದ ತುಕ್ಕು ಹಿಡಿದ ಬೀಗದಂತೆ, ಕಗ್ಗಂಟಾಗಿರುವ ನೂಲಿನಂತಿರುವ ಕವಿತೆಗಳಿವು. ಓದುಗರಿಗೆ ಅರ್ಥವಾಗುವಂತೆಯೋ, ಅರ್ಥವಾಗದಿದ್ದರೂ ಅನುಭವಿಸಿ ಸುಖಿಸುವಂತೆಯೋ ಪದ್ಯಗಳಿದ್ದರೆ, ನನ್ನಂಥವರಿಗೆ ತುಂಬ ಉಪಕಾರವಾಗುತ್ತದೆ.
ಬೆನ್ನುಡಿಯಲ್ಲಿ ಜೋಗಿಯವರು ಛಲೋ ಬರೆದಿದ್ದನ್ನೂ ನೀವು ಪೂರ್ತಿಯಾಗಿ ಓದಬೇಕು -'ಕಾವ್ಯವೆಂದರೆ ಓರೆಯಾಗಿ ತೆರೆದಿಟ್ಟ ಬಾಗಿಲು' ಎಂದು ನಂಬಿರುವ ಲಕ್ಕೂರು ಆನಂದ ಬಯಲ ಕವಿ. ತನ್ನಿರವಿನ ಕಟ್ಟೆಚ್ಚರ ಮತ್ತು ಭವಿಷ್ಯದ ಕುರಿತು ತುಂಬು ಭರವಸೆ ಇಟ್ಟುಕೊಂಡು ಕಾವ್ಯ ಕಟ್ಟುವ ಆನಂದ ನಿರಾಶಾವಾದಿಯಲ್ಲ. ಪ್ರತಿ ಕವಿತೆಯನ್ನು ಅದೇ ಮೊದಲ ಕವಿತೆ ಎಂಬ ಹುರುಪು ಹಾಗೂ ಅದೇ ಕೊನೆಯ ಕವಿತೆ ಎಂಬ ಶ್ರದ್ಧೆಯಿಂದ ನೇಯಬಲ್ಲವರು. ಎಲ್ಲೂ ವಾಚ್ಯಕ್ಕೆ ಜಾರಿಕೊಳ್ಳದೇ ನಿಬಿಡ ಅನುಭವಗಳನ್ನು ಸರಾಗವಾಗಿ ರೂಪಕವಾಗಿಸುವ ಕಾವ್ಯ ಮನೋಧರ್ಮ ಅವರಿಗೆ ದಕ್ಕಿದೆ. ನಿಗೂಢವನ್ನು ಬಗೆಯುವ, ಬೆರಗನ್ನು ಉಳಿಸಿಕೊಂಡೇ ವಾಸ್ತವಕ್ಕೆ ಎದುರಾಗುವ, ಕಂಡ ಕನಸಿಗೆಲ್ಲ ಬಣ್ಣ ಇರುವುದಿಲ್ಲ ಎನ್ನುವ ಪ್ರಜ್ಞಾಪೂರ್ವಕ ನಿಲುವಿನಿಂದ ಹುಟ್ಟಿದ ಲಕ್ಕೂರು ಆನಂದರ ಕವಿತೆಗಳಿಗೆ ತೋರುಗಾಣಿಕೆಯಿಲ್ಲ. ಅವು ಆಗಷ್ಟೇ ಅರಳಿದ ಕಣಗಿಲೆ ಹೂವಿನ ಹಾಗೆ ನಳನಳಿಸುತ್ತಾ, ಬದುಕಿನ ನಿರರ್ಥಕತೆಯನ್ನೂ ಒಂದೇ ಏಟಿಗೆ ಕಟ್ಟಿಕೊಡುತ್ತವೆ. 'ಕಣ್ಣ ಹರಿಸಿದಂತೆಲ್ಲ ಬೆರಗ ಬಯಲು, ಮೇಲೆ ನಭದಲ್ಲಿ ನಗುವ ನವಿಲು' ಎಂಬ ಅವರದೇ ಸಾಲು ಅವರ ಕಾವ್ಯದ ಸ್ವರೂಪಕ್ಕೆ ಹಿಡಿದ ಹೊಳೆಯುವ ಶ್ರೀಶೂಲವೂ ಹೌದು. -ಜೋಗಿ
ಇದು ಅಸಾಮಾನ್ಯ ಸಂಕಲನ ಅನ್ನುವುದರಲ್ಲಿ ಸಂದೇಹವೇನೂ ಇಲ್ಲ. ಯಾಕೆಂದರೆ ಇಲ್ಲಿ ಸಾಮಾನ್ಯವಾದದ್ದು ಯಾವುದೂ ಇಲ್ಲ. 'ಸಾವ ಹೇರುವ ದಿವ್ಯಮಾನವ ಬ್ರಹ್ಮಕಮಲಗಳು', 'ಯಾನ ಮರೆತು ನೊಗವರಿದ ಬಂಡಿಯ ಚಕ್ರಪಾಡು', ಋಣದ ಪಲ್ಲಂಗ, ಕುಂಡಲಿಯ ಕೊನರು, ನೆಲದ ಬಯಲು, ಮುಖದ ಮೈಮೇಲೆ ಕುಣಿಯುತ್ತಿರುವ ಕಡು ಕತ್ತಲು, ಜೀವಗರುವಿನ ಹಾಡು, ಕಳವಳದ ಬೊಗಸೆ, ಕಾಲದೊಗಲಿನ ತುಂಬ ಬರೀ ಬಿಕ್ಕಳಿಕೆಗಳ ಗುರುತು, ತುಂಬಿದಲೆಗಳು, ಉಸಿರ ಕಣ್ಣು, ಕಾವಿನ ಸೆಳಕು, ಮುಳ್ಳಿನುಂಗುರದ ಕಣ್ಣು, ...ಹೀಗೆ ಅರ್ಥವಿಲ್ಲದ ವಿಚಿತ್ರಪದ ಜೋಡಣೆಯೇ ಕವಿತೆಯೆ? ಇಂತಹ ಪದಪುಂಜಗಳ ಸಾಲುಗಳೇ ಅರ್ಥವಾಗದೆ, ಮನಸ್ಸು ಮುಟ್ಟದೆ ಪದ್ಯ ಏನು ಮಾಡೀತು? ಸಾಕು, ನಮಸ್ಕಾರ .
2 comments:
ಹೌದು, ಅಸಾಮಾನ್ಯವಾದ ವಿಶೇಷ ಪದಪುಂಜಗಳ ಪದ್ಯಗಳು ಮನಸ್ಸನ್ನು ತಟ್ಟದೆ ಇರಲಾರವು. ಪರಿಚಯಿಸಿದ್ದಕ್ಕೆ ಧನ್ಯವಾದಗಳು.
enidenidu?!
Post a Comment