ಬೆಳ್ಳೇಕೆರೆಯ ಹಳ್ಳಿ ಥೇಟರ್ - ಅಂಕ ೭
ಸಕಲೇಶಪುರದಿಂದ ಪ್ರಸಾದ್ ರಕ್ಷಿದಿ ಬರೆಯುತ್ತಾರೆ
ದೇವರನ್ನು ನಂಬದವರು
ನಮ್ಮಲ್ಲೇ ಇದ್ದ ಬಾಬು ಎಂಬ ತೋಟದ ಕೆಲಸಗಾರನಿಗೆ ನಾವು ಕಿತ್ತಲೆ ಫಸಲಿನಲ್ಲಿ ಬಂದ ಹಣದಲ್ಲಿ ಚೌಡಿಪೂಜೆಯನ್ನು 'ಜೋರಾಗಿ' ಮಾಡದೆ ನಾಟಕದ ಸಾಮಾನು ತಂದದ್ದು ಹಿಡಿಸಿರಲಿಲ್ಲ. ಒಂದು ಸಾರಿ ರಿಹರ್ಸಲ್ ನಡೆಯುತ್ತಿದ್ದಾಗ ನನಗೆ ಕೇಳುವಂತೆ ದೊಡ್ಡ ದನಿಯಲ್ಲಿ-
'ಇವರು ನಾಟಕ ಕುಣಿದರೆ ಯಾವ ದೇವರು ಮೆಚ್ಚುತ್ತಾನೆ?' ಎಂದ.
'ದೇವರು ಮೆಚ್ಚುವುದು ಬೇಡ, ನೋಡಿದವರು ಮೆಚ್ಚಿದರೆ ಸಾಕು' ಎಂದೆ. ಸ್ವಲ್ಪ ಹೊತ್ತು ಸುಮ್ಮನಿದ್ದ. ಆ ವರ್ಷ ಸ್ವಲ್ಪ ಮಳೆ ಕಡಿಮೆಯಾಗಿತ್ತು. ಯಾರೋ ಮಳೆಯ ಸುದ್ದಿ ತೆಗೆದರು. ಕೂಡಲೇ ಬಾಬು ಅದಕ್ಕಾಗಿಯೇ ಕಾದು ಕುಳಿತವನಂತೆ,
'ಚೌಡಿಪೂಜೆ ಸರಿಯಾಗಿಲ್ಲ, ಅದಕ್ಕೆ ಮಳೆ ಬಂದಿಲ್ಲ' ಎಂದು ಮತ್ತೆ ಕಾಲು ಕೆರೆದ.
'ಪೂಜೆ ಮಾಡಿದ್ದೇವೆ, ಯಾರಿಲ್ಲ ಅಂದವರು?' ಇನ್ನಾರೋ ಹೇಳಿದರು.
'ಅದು ಸರಿಯಾಗಿಲ್ಲ, ಕುರಿ ಕಡಿಬೇಕಿತ್ತು- ನಾನು ಹೇಳಿಕೊಂಡಿದ್ದೆ.
'ನೀನು ಹೇಳಿಕೊಂಡಿದ್ದರೆ, ನೀನು ಕುರಿ ಕಡ್ದು ಪೂಜೆಮಾಡು. ಒಟ್ಟು ನಮ್ಮೆಲ್ಲರ ಸಂಘಕ್ಕೂ ಅದಕ್ಕೂ ಏನು ಸಂಬಂಧ?' ನಾನು ತಿರುಗಿ ಅವನನ್ನೇ ಪ್ರಶ್ನಿಸಿದೆ.
'ದೇವರ ಕಾರ್ಯಕ್ಕೆ ನೀವು ಹೀಗಂತೀರಲ್ಲ!?'
ಈಗ ನನಗೂ ರೇಗತೊಡಗಿತ್ತು.
'ಯಾವ ದೇವರು ನಿನ್ನತ್ರ ಬಂದು ಕುರಿ ಕೊಡು ಅಂತ ಕೇಳಿತ್ತು? ನಾವು ಕುರಿ ಕಡೀದೆ ಇದ್ರೆ ಇಡೀ ಊರಿಗೇ ಮಳೆ ಹೋಗುತ್ತಾ? ಅದ್ಯಾವುದು ಅಂಥ ದೇವ್ರೂ?' ದಬಾಯಿಸಿದೆ.
'ನೀವು ದೇವರನ್ನು ನಂಬೋದಿಲ್ವೋ?'
'ಇ......ಲ್ಲ.'
ಸರಿ ನಿಮ್ಮಿಷ್ಟ' ಏನೋ ಗೊಣಗುತ್ತಾ ಅಲ್ಲಿಂದೆದ್ದು ಹೋದ.
ಇದಾಗಿ ಒಂದೆರಡು ತಿಂಗಳು ಕಳೆದಿರಬೇಕು. ಯಾವುದೋ ಸಮಯದಲ್ಲಿ ಬಾಬು ತೋಟದ ಹೊರಗಿನ ಬೇರೊಬ್ಬ ಕೆಲಸಗಾರನಿಗೆ ಕೊಟ್ಟ ಸಾಲಕ್ಕೆ ನಾನು ಜಾಮೀನಾಗಿದ್ದೆ. ಸಾಲ ಪಡೆದವನು ಅವನಿಗೆ ಹಣ ವಾಪಸ್ ಕೊಟ್ಟಿರಲಿಲ್ಲ. ಇದ್ದಕ್ಕಿದ್ದಂತೆ ಬಾಬು ಒಂದು ದಿನ ನನ್ನ ಮುಂದೆ ಪ್ರತ್ಯಕ್ಷನಾದ. ಈತ ಎಂತಹ ತರಲೆ ಗಿರಾಕಿಯೆಂದರೆ ಯಾವುದೇ ಸಂದರ್ಭದಲ್ಲೂ ಎಲ್ಲವೂ ತನ್ನ ಮೂಗಿನ ನೇರಕ್ಕೆ ನಡೆಯಬೇಕೆಂದು ಹಠ ಹಿಡಿಯುತ್ತಿದ್ದ. ಆದ್ದರಿಂದ ಇವನನ್ನು ಕಂಡರೆ ನಮ್ಮ ಗುಂಪಿನಲ್ಲಿ ಯಾರಿಗೂ ಆಗುತ್ತಿರಲಿಲ್ಲ. ನನಗೂ ಅನೇಕ ಸಾರಿ ಕಿರಿಕಿರಿ ಮಾಡಿದ್ದ. ಬಾಬು ಬಂದವನೇ ನನ್ನನ್ನು ಆಪಾದಿಸುವ ಧ್ವನಿಯಲ್ಲಿ
'ನಿಮ್ಮ ಜನ ದುಡ್ಡು ಕೊಟ್ಟಿಲ್ಲ' ಎಂದ.
'ಕೊಡ್ತಾನೆ ಮಾರಾಯಾ, ಅವನೀಗ ಕಷ್ಟದಲ್ಲಿರಬೇಕು.'
'ಅವನ ಪರವಾಗಿ ನೀವು ಜಾಮೀನು.'
'ಅವನು ಕೊಡೋದಿಲ್ಲ ಅಂದ್ರೆ ನಾನು ಕೊಡ್ತೀನಿ ಆಯ್ತಲ್ಲ' ಅವನನ್ನು ಸಾಗಹಾಕಲು ಪ್ರಯತ್ನಿಸಿದೆ.
'........................' ಬಾಬು ಅಲ್ಲೇ ನಿಂತಿದ್ದ.
'ಯಾಕೆ ನಿನಗೆ ನಂಬಿಕೆ ಇಲ್ವೆ?'
'...........................'
'ನಂಬಿಕೆ ಇಲ್ಲದಿದ್ರೆ ಇಲ್ಲ ಅಂತ ಹೇಳು- ಏನೀಗ?' ಗದರಿಸುವ ಧ್ವನಿಯಲ್ಲಿ ಹೇಳಿದೆ.
'ಅಲ್ಲ, ನೀವು ದೇವರನ್ನೇ ನಂಬಲ್ಲ ಅಂತೀರಿ: ನಾನು ನಿಮ್ಮನ್ನು ನಂಬಬೇಕು ಅಂತೀರಿ...!!' ಬಾಬು ನನ್ನ ಬುಡವನ್ನೇ ಅಲ್ಲಾಡಿಸಿಬಿಟ್ಟಿದ್ದ. ಕೂಡಲೇ ಆ ಜಾಮೀನಿನ ಹಣವನ್ನು ನಾನೇ ಬಾಬುವಿಗೆ ಕೊಟ್ಟು, ನಂತರ ಸಾಲಗಾರನಿಂದ ವಸೂಲು ಮಾಡಿಕೊಂಡೆ.
ನಮ್ಮ ನಂಬಿಕೆ, ವಿಚಾರಗಳೇನೇ ಇರಲಿ ಅದರ ಬೆಂಬಲಕ್ಕೆ ಅನುಭವದ ಗಟ್ಟಿತನವಿಲ್ಲದಿದ್ದರೆ ನಮ್ಮ ನಿಲುವುಗಳೆಲ್ಲ ಪೊಳ್ಳಾಗಿಬಿಡಬಹುದೆಂಬ ಭಯವಾಯಿತು. ಆಮೇಲೆ ಯಾರಾದರೂ ದೇವರಿದ್ದಾನೋ ಇಲ್ಲವೋ ಎಂದರೆ 'ಗೊತ್ತಿಲ್ಲ'ಎನ್ನತೊಡಗಿದೆ!
3 comments:
ಸುಧನ್ವಾ, ’ಶೂರ್ಪನಖಾ ಮಾನಭಂಗ ’ತಾಳಮದ್ದಳೆಗೆ ನಾನೂ ಬಂದಿದ್ದೆ. ಪ್ರಭಾಕರ ಜೋಷಿ ಅರ್ಥಗಾರಿಕೆ ಸಖತ್ತಾಗಿತ್ತು.
ನಿಮ್ಮ ಮುತುವರ್ಜಿಗೆ ಅಭಿನಂದನೆಗಳು.
ಆದರೆ ನಿಮ್ಮನ್ನೆಲ್ಲೂ ಕಂಡ ಹಾಗಿರಲಿಲ್ಲ.
ಸುಧನ್ವ ರವರೇ,
ದೇವರ ಮೇಲಿನ ನಂಬಿಕೆ ವಿಚಾರದಲ್ಲಿ ಕೆಲವರು ನಮ್ಮ ಬುಡಕ್ಕೆ ತಂದಿಡುತ್ತಾರೆ. ಅಂಥ ಅನುಭವ ನನ್ನ ದಿನಪತ್ರಿಕೆ ವಿತರಣೆ ವಿಚಾರದಲ್ಲಿ ತುಂಬಾ ಆಗಿದೆ.
ಆಹಾಂ! ನನ್ನ ಮತ್ತೊಂದು ಬ್ಲಾಗಿನಲ್ಲಿ ಬೆಳಗಿನ ದಿನಪತ್ರಿಕೆ ವಿತರಣೆ ವಿಷಯವಾಗಿ ಕೆಲವೊಂದು ಲೇಖನಗಳನ್ನು ಬರೆದಿದ್ದೀನೆ. ನೀವೊಮ್ಮೆ ಬಂದು ನೋಡಿ ನಿಮಗಿಷ್ಟವಾಗಬಹುದು. ನನ್ನ ಮತ್ತೊಂದು ಬ್ಲಾಗ್ ವಿಳಾಸ:
http://camerahindhe.blogspot.com/
ಚೆನ್ನಾಗಿದೆ ಬರಹ. ರಕ್ಷಿದಿ ಅವರ ಬಗಲಲ್ಲಿರುವ ಅನುಭವಕ್ಕೆ ಶರಣು.
Post a Comment