October 05, 2008

ಕಲಾಕ್ಷೇತ್ರದಲ್ಲಿ ಬೆಳಗೆರೆ ವಿಶ್ವರೂಪ

ಸಂಜೆ ೫ರ ಸುಮಾರಿಗೆ ರವಿ ಬೆಳಗೆರೆ ಎಂಬ ಅಯಸ್ಕಾಂತ ಎಲ್ಲೇ ಕಾಣಿಸಿಕೊಳ್ಳಲಿ, ಜನ ಸೇರಿ ಅಪ್ಪಚ್ಚಿ ಮಾಡುತ್ತಿದ್ದರು. ಅವರು ಹತ್ತು ತಲೆ, ಇಪ್ಪತ್ತು ಕೈಗಳ ರಾವಣನಾದರೂ, ಮಾತಾಡುವುದಕ್ಕೆ, ಕೈ ಕುಲುಕುವುದಕ್ಕೆ ಸಾಧ್ಯವೇ ಆಗುತ್ತಿರಲಿಲ್ಲ!  ಬಾಗಿಲುಗಳಲ್ಲಿ ನಿಂತಿದ್ದ ದ್ವಾರಪಾಲಕರ ಜತೆ ಅಭಿಮಾನಿಗಳು ರೇಗಿದರು, ಬಾಗಿಲೊಂದರ ಗಾಜು ಒಡೆದರು, ಕ್ಷಣದಿಂದ ಕ್ಷಣಕ್ಕೆ ಜನಸಾಗರದ ಮಟ್ಟ ಏರುತ್ತಿತ್ತು.

ಎಂತಹ ಸಾಮಾನ್ಯ ಮನುಷ್ಯನಿಗೂ ಆಸೆ ಹುಟ್ಟಿಸುವಂತಿತ್ತು ಆ ಸಂಜೆ. ನಡೆದಾಡುವ ದೇವರು, ಅಭಿಮಾನಿಗಳ ಆರಾಧ್ಯ ದೇವತೆ, ಬಡವರ ಬಂಧು, ಅಸಾಮಾನ್ಯ ವಾಕ್ಪಟು, ಪ್ರಸಿದ್ಧ ಬರಹಗಾರ, ಸಮಾಜಸೇವಕ....ಹೀಗೆ ಏನೆಲ್ಲ ವಿಶೇಷಣಗಳಿವೆಯೋ ಅವೆಲ್ಲ ರವಿ ಬೆಳಗೆರೆಗೆ ಸಂದಾಯವಾಗುವಂತಿತ್ತು. ಅವರು ಕಾಲಿಟ್ಟಲ್ಲಿ ಜನ ಅರಳುತ್ತಿದ್ದರು, ಮರುಳಾಗುತ್ತಿದ್ದರು. ಆ ಕಾಲವೇ ಯಾವುದೋ ಮಾಯೆಯಲ್ಲಿ ಸಿಲುಕಿಕೊಂಡಿತ್ತು.   

ರವಿ ಬೆಳಗೆರೆಯವರಿಗೆ ಐವತ್ತಾಗಿದ್ದಕ್ಕೆ, 'ಹಾಯ್ ಬೆಂಗಳೂರ್' ಪತ್ರಿಕೆಗೆ ೧೩ ವರ್ಷಗಳು ತುಂಬಿದ್ದಕ್ಕೆ, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಕ್ಟೋಬರ್ ೫ರ ಭಾನುವಾರದ ಸಂಜೆ ೫ಕ್ಕೆ ಕಾರ್ಯಕ್ರಮವೇನೋ ನಿಗದಿಯಾಗಿತ್ತು. ಅದು ಸರಿಯಾಗಿ ಶುರುವಾದದ್ದು ೬ಕ್ಕೆ. ಆದರೆ ಸುಮಾರು ೧೨೦೦ ಸೀಟುಗಳ ಕಲಾಕ್ಷೇತ್ರದಲ್ಲಿ ಮೂರೂವರೆ ಗಂಟೆಗೇ ಜನ ಒಬ್ಬರಿಗೊಬ್ಬರು ಅಂಟಿಕೊಂಡು ಕುಳಿತಿದ್ದರು, ನಿಂತಿದ್ದರು, ತಳ್ಳಾಡುತ್ತಿದ್ದರು. ೫ರ ಸುಮಾರಿಗೆ ರವಿ ಬೆಳಗೆರೆ ಎಂಬ ಅಯಸ್ಕಾಂತ ಎಲ್ಲೇ ಕಾಣಿಸಿಕೊಳ್ಳಲಿ, ಜನ ಸೇರಿ ಅಪ್ಪಚ್ಚಿ ಮಾಡುತ್ತಿದ್ದರು. ಅವರು ಹತ್ತು ತಲೆ, ಇಪ್ಪತ್ತು ಕೈಗಳ ರಾವಣನಾದರೂ, ಮಾತಾಡುವುದಕ್ಕೆ, ಕೈ ಕುಲುಕುವುದಕ್ಕೆ ಸಾಧ್ಯವೇ ಆಗುತ್ತಿರಲಿಲ್ಲ! ಒಳಗೆ ಬಿ.ಆರ್.ಛಾಯಾ ಹಾಡುತ್ತಿದ್ದರು. ಹೊರಗೆ ಭಾವನಾ ಪ್ರಕಾಶನದ ನಾಲ್ಕೈದು ಪುಸ್ತಕ ಮಳಿಗೆಗಳಲ್ಲಿ ಜನಜಂಗುಳಿ. ಮೂರ್‍ನಾಲ್ಕು ಪರದೆಗಳಲ್ಲಿ ಒಳಗೆ ನಡೆಯುತ್ತಿರುವ ಕಾರ್ಯಕ್ರಮದ ಪ್ರಸಾರ. ಕ್ಷಣದಿಂದ ಕ್ಷಣಕ್ಕೆ ಜನಸಾಗರದ ಮಟ್ಟ ಏರುತ್ತಿತ್ತು. ಬಾಗಿಲುಗಳಲ್ಲಿ ನಿಂತಿದ್ದ ದ್ವಾರಪಾಲಕರ ಜತೆ ಅಭಿಮಾನಿಗಳು ರೇಗಿದರು, ಬಾಗಿಲೊಂದರ ಗಾಜು ಒಡೆದರು, ಪೊಲೀಸರು ಬಂದರು.

(ಕಲಾಕ್ಷೇತ್ರದ ಬಾಗಿಲೆದುರು ಕುಳಿತವರ 'ರವಿ ಭಜನೆ' !)
(ಟಿವಿ೯ ಚಾನೆಲ್‌ನ ಮುಖ್ಯ ನಿರೂಪಕ ಹಮೀದ್ ಕೂಡಾ, ಒಳಹೋಗಲು ದಾರಿ ಸಿಗದೆ ಕಲಾಕ್ಷೇತ್ರದ ಮೆಟ್ಟಿಲಲ್ಲಿ ಎಲ್ಲರೊಡನೆ ನಿಂತು ಕಣ್ಣರಳಿಸಿ, ಪರದೆಯಲ್ಲಿ ಬೆಳಗೆರೆ ಗೌಜಿ ನೋಡ್ತಾ ಇದ್ದಾಗ ಸಿಕ್ಕಿದ್ದು ಹೀಗೆ.)
ಸುಮಾರು ೬.೩೦ಕ್ಕೆ ಪ್ರಾರ್ಥನಾ ಶಾಲೆಯ 'ಗಂಡು ಹುಡುಗಿ'ಯರಿಂದ (ಬೆಳಗೆರೆ ಹೇಳಿದಂತೆ) ಡೊಳ್ಳು ಕುಣಿತದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ. ಅಷ್ಟೊತ್ತಿಗೆ ಪರದೆ ಮೇಲೆ ಕಾರ್ಯಕ್ರಮ ನೋಡಲು ಸಂಸ ಬಯಲು ರಂಗ ಮಂದಿರದಲ್ಲೂ ಜಾಗ ಇರಲಿಲ್ಲ ! ಪ್ರಾರ್ಥನಾ ಶಾಲೆಯ ಹೆಡ್‌ಮಿಸ್ಸು ಶೀಲಕ್ಕರವರ ಕಾರ್ಯಕ್ರಮ ನಿರ್ವಹಣೆಯಾದರೆ, ಈಗಷ್ಟೆ ಒಗೆದು ನೇತು ಹಾಕಿರುವ ಬಟ್ಟೆಯಂತೆ ಬೆವರು ಸುರಿಸುತ್ತಿದ್ದ ಬೆಳಗೆರೆ ಸ್ವಾಗತ ಭಾಷಣಕ್ಕೆ ಮೈಕು ಕೈಗೆತ್ತಿಕೊಂಡರೆ ಮಾತು, ಚಪ್ಪಾಳೆ ಧಾರಾಕಾರ.

( ಪಾರ್ಕಿಂಗ್ ಸ್ಥಳದ ಬಳಿ ಜನರ ಹಿಂಡು)
 (ಸಂಸ ಬಯಲು ರಂಗಮಂದಿರದಲ್ಲಿ ಜನಸ್ತೋಮ)
*ನನಗೀಗ ಕೇಳುಗರಿದ್ದಾರೆ, ನೋಡುವ ಪ್ರೇಕ್ಷಕರಿದ್ದಾರೆ. ಆದರೆ ನನಗೆ ಮೊದಲು ಸಿಕ್ಕಿದ್ದು ಓದುಗರು. ಆ ಓದುಗ ದೊರೆಗಳಿಗೆ ಮೊದಲ ನಮಸ್ಕಾರ. 
*ಎಲ್ಲೇ ಬೆಳೆದರೂ ಎಷ್ಟೇ ಬೆಳೆದರೂ ಅದನ್ನ ನಮ್ಮವರು ನೋಡಬೇಕು ಅನ್ನೋ ಆಸೆ ಇರತ್ತೆ.ನಮ್ಮವರು ಅದನ್ನ ಗುರುತಿಸಬೇಕು ಅಂತ. ವೇದಿಕೆ ಮೇಲಿರೊವಂಥ ಗಾಲಿ ಜನಾರ್ದನ ರೆಡ್ಡಿ, ಶ್ರೀರಾಮುಲು ಮಂತ್ರಿಗಳಾಗಿ ಇಲ್ಲಿ ಬಂದಿಲ್ಲ, ಮಿತ್ರರಾಗಿ ಬಂದಿದ್ದಾರೆ, ಬಳ್ಳಾರಿಯವರಾಗಿ ಬಂದಿದ್ದಾರೆ. ನಮ್ಮೂರಿನವರಿಗೆ ನಾನು ಏನು ಅಂತ ತೋರಿಸಬೇಕು ಅಂತ ಅವರನ್ನಿಲ್ಲಿಗೆ ಕರಕೊಂಡು ಬಂದಿದ್ದೇನೆ. (ಸಿಳ್ಳು...ಚಪ್ಪಾಳೆ!) 
*ಗಾಲಿ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅತ್ಯಂತ ಆತ್ಮೀಯ ಸ್ನೇಹಿತರು. ಒಂದು ಗಾಳಿ, ಇನ್ನೊಂದು ಬೆಂಕಿ. ಇವರ ಏಟಿಗೆ ದೇವೇಗೌಡರು ಪಾಪ ಪಟಪಟ ಅಂತಿದ್ದಾರೆ. 
*ಮೊನ್ನೆ ಒಂದು ಜೋಕ್ ಚೆನ್ನಾಗಿತ್ತು. ಕುಮಾರಸ್ವಾಮಿ ಯಡಿಯೂರಪ್ಪನೋರ ಕೇಳಿದರಂತೆ, ಟ್ವೆಂಟಿ ಟ್ವೆಂಟಿ ಆಡಕ್ಕೆ ಬರ್‍ತೀಯಾ ಅಂತ. ಅದಕ್ಕೆ ಕುಮಾರಸ್ವಾಮಿ ಹೇಳಿದರಂತೆ, ಬರ್‍ತೀನಿ, ಆದರೆ ಒಂದೇ ಒಂದು ಷರತ್ತು ಅಂದ್ರೆ, ನಮ್ಮಪ್ಪ ಅಂಪೈರ್ ಆಗಬೇಕು !
*ನನ್ನ ಚಿಕ್ಕ ವಯಸ್ಸಿನ ಮಿತ್ರ ಶ್ರೀರಾಮುಲು, ಒಳ್ಳೇ ತೆಲುಗು ಆಕ್ಟರ್ ಚಿರಂಜೀವಿ ಇದ್ದಂಗೆ ಇದ್ದಾನೆ. ಅವನ ಅಕ್ಕನ ಗಂಡನನ್ನ ಬಳ್ಳಾರಿಯ ನಟ್ಟನಡು ರಸ್ತೆಯಲ್ಲಿ ಭಯಂಕರವಾಗಿ ಕೊಲೆ ಮಾಡಲಾಯಿತು. ಈಗ ಪರಿಸ್ಥಿತಿ ಹೇಗಾಗಿದೆ ಅಂದರೆ, ಕೊಲೆಯಾದ ಆ ಬಾಬುವಿನ ಹೆಂಡತಿಯ ತಮ್ಮ ಶ್ರೀರಾಮುಲು ಮಂತ್ರಿಯಾದ. ಬಾಬುವಿನ ಮಗ ಎಂಎಲ್‌ಎ ಆದ. ಶ್ರೀರಾಮುಲು ಬಡವರಿಗಿರುವ ಎಲ್ಲ ನೋವು ನಲಿವುಗಳನ್ನು ಅನುಭವಿಸಿದವನು. 
*ಗಣಿ ಧಣಿಗಳು, ಗಣಿ ದೊರೆಗಳು ಅಂತ ನಿತ್ಯ ಪತ್ರಿಕೆಗಳಲ್ಲಿ ಓದ್ತೀವಿ. ಆದರೆ ಜನಾರ್ದನ ರೆಡ್ಡಿಯವರ ತಂದೆ ಬಳ್ಳಾರಿಯಲ್ಲಿ ಪೊಲೀಸ್ ಪೇದೆಯಾಗಿ ಕೆಲಸ ಮಾಡ್ತಾ ಇದ್ದವರು. ಅವರು ಸೈಕಲ್ಲಿಗೆ ಲಾಠಿ ಕಟ್ಟಿಕೊಂಡು ಡ್ಯೂಟಿಗೆ ಹೋಗ್ತಾ ಇದ್ದವರು. ಅವರು ನಾನು ಓದಿದ ಶಾಲೆಯಲ್ಲೇ ಓದಿದವರು. ಯಾವ್ಯಾವ ಮೇಷ್ಟ್ರುಗಳ ಕೈಯಿಂದ ನಾನು ಒದೆ ತಿಂದಿದೇನೋ, ಅದೇ ಮೇಷ್ಟ್ರುಗಳ ಬಾಯಿಯಿಂದ ಹೊಗಳಿಸಿಕೊಂಡವರು! ಇವರು ರಾಜಕೀಯಕ್ಕೆ ಯಾಕೆ ಬಂದ್ರು ಅಂದ್ರೆ- ಒಂದು ಮೀಟಿಂಗ್‌ನಲ್ಲಿ ಆಗಿನ ಕುರಗೋಡು ಶಾಸಕ ಸೂರ್ಯನಾರಾಯಣ ರೆಡ್ಡಿ ಯಾವುದೋ ವಿಷಯಕ್ಕೆ, "ನೀನೇನು ಅಂತ ಮಾತಾಡ್ತೀಯ, ನಿನಗೆ ಮಾತಾಡುವ ಅಧಿಕಾರ ಏನಿದೆ?', ಹೂ ಆರ್ ಯು ಅನ್ನೋ ಶೈಲಿಯಲ್ಲಿ ಮಾತಾಡಿದರು. ಅಲ್ಲಿಂದ ಸೀದಾ ಬೆಂಗಳೂರಿಗೆ ಬಂದು ರಾಜಕೀಯಕ್ಕೆ ಇಳಿದವರು ಜನಾರ್ದನ ರೆಡ್ಡಿ.
*'ವಿಶ್ವ ಬೆಂಗಳೂರಿಗೆ ಬಾ. ನಿನಗೆ ನೌಕರಿ ಕೊಡಿಸ್ತೇನೆ' ಅಂತ ವಿಶ್ವೇಶ್ವರ ಭಟ್ರಿಗೆ ನಾನೊಂದು ಪತ್ರ ಬರೆದಿದ್ದೆ. ಇವರು ಹೌದೇನೊ ಅಂತ ನಂಬ್ಕೊಂಡು, ಸಾಲಗೀಲ ಮಾಡ್ಕಂಡು, ಧಾರವಾಡದಿಂದ ಬೆಂಗಳೂರಿಗೆ ಬಂದ್ರೆ ನಾನೇ ಇಲ್ಲಿ ನೌಕರಿ ಕಳಕೊಂಡಿದ್ದೆ! ಅವನ ಬಗ್ಗೆ ನನಗೆ ಒಂದೇಒಂದು ಸಣ್ಣ ಹೊಟ್ಟೆಕಿಚ್ಚು ಅಂದ್ರೆ, ಆತ ಬಹಳ ಚೆಲುವ ಅಂತ. 
*ನಾನು, ವಿಶ್ವೇಶ್ವರ ಭಟ್ಟ, ಸೀತಾರಾಂ, ಜೋಗಿ ಎಲ್ಲ ಒಂದೇ ಗ್ಯಾಂಗ್ ಅಂತ ಕೆಲವರ ಆರೋಪ ಇದೆ. ಬಟ್ ಐ ಪ್ರೌಡ್‌ಲಿ ಎಕ್ಸೆಪ್ಟ್ ಇಟಿ'. ಹೌದು, ನಾವೆಲ್ಲ ಒಂದು ಗ್ಯಾಂಗೇ.
*ನಾನು ಸ್ವಲ್ಪ ಭಾವುಕನಾದ್ರೆ ಕ್ಷಮಿಸಿ. ಇವತ್ತು ವೇದಿಕೆ ಮೇಲೆ ನನ್ನ ಅಮ್ಮ ಇರಬೇಕಾದ ಜಾಗದಲ್ಲಿ ಮಾಲತಿ ಪಟ್ಟಣಶೆಟ್ಟಿ ಇದ್ದಾರೆ.... ಇವು ಬೆಳಗೆರೆ ಸ್ವಾಗತ ಭಾಷಣದ ಕೆಲವು ಮಿಂಚುಗಳಷ್ಟೆ. 

*ಬೆಳಗೆರೆಯವರ ೬೦ ವರ್ಷದ ಸಂಭ್ರಮಾಚರಣೆ ಬಳ್ಳಾರಿಯಲ್ಲಾಗಲಿ. ನಾನೇ ನಿಂತು ಮಾಡಿಸುತ್ತೇನೆ -ಜನಾರ್ದನ ರೆಡ್ಡಿ
*ನಾನೂ ಸಾವಿರಾರು ಸಭೆ ಸಮಾರಂಭಗಳಲ್ಲಿಭಾಗವಹಿಸದ್ದೇನೆ. ಆದರೆ ಈ ತರಹದ ಜನ-ಪ್ರತಿಕ್ರಿಯೆಯನ್ನು ನಾನೆಲ್ಲೂ ನೋಡಿಲ್ಲ. ಐ ಲವ್ ಹಿಮ್. ಐ ಲವ್ ಯು ರವಿ. - ಸುನಿಲ್ ಶಾಸ್ತ್ರಿ
*ರವಿ ದ್ರವಾಹಾರ ತಗೊಳೋದು ಕಡಿಮೆ ಮಾಡಬೇಕು! -ವಿಶ್ವೇಶ್ವರ ಭಟ್
ಬೆಳಗೆರೆ ಕೃಷ್ಣಶಾಸ್ತ್ರಿಗಳು ವೇದಿಕೆಯಲ್ಲಿದ್ದರು. ರವಿ ಬಗ್ಗೆ ಬರಹಗಾರ್ತಿ ಹೇಮಾ ಪಟ್ಟಣಶೆಟ್ಟಿ ಒಂದು ಕವನವನ್ನೂ ಓದಿದರು. ಆಸಿಡ್ ದಾಳಿಗೆ ಒಳಗಾಗಿ ವಿಕಾರ ಸ್ವರೂಪಿಯಾಗಿ, ಬೆಳಗೆರೆಯವರ ಆರೈಕೆ ಪಡೆದುಕೊಂಡಿರುವ ಹಸೀನಾ ಪ್ರೇಕ್ಷಕರ ಜತೆ ಇದ್ದರು. ರವಿ-ಲಲಿತಾ ಬೆಳಗೆರೆಯವರಿಗೆ ಭಾರೀ ಗಾತ್ರದ ಹಾರಾರ್ಪಣೆಯಾಗಿ ಸನ್ಮಾನವಾಯಿತು. 
ಆದರೆ, ಕುಖ್ಯಾತ ದಾವೂದ್ ಇಬ್ರಾಹಿಂನ ಫೋಟೊವನ್ನೇ ಮುಖಪುಟದಲ್ಲಿ ದೊಡ್ಡದಾಗಿ ಹಾಕಿರುವ 'ಡಿ ಕಂಪನಿ' ಎಂಬ ಪುಸ್ತಕ ಬಿಡುಗಡೆ ಮಾಡಿ, ಎಲ್ಲರೂ ದಾವೂದ್‌ನ ಮುಖವನ್ನು ಕ್ಯಾಮರಾಗಳಿಗೊಡ್ಡಿ ನಗುತ್ತಾ ನಿಂತರಲ್ಲ, ಆಗ ಮಾತ್ರ ನನಗಂತೂ ವಿಪರೀತ ಚಡಪಡಿಕೆಯಾಯ್ತು, ಕಸಿವಿಸಿಯಾಯ್ತು, ಕೈಹಿಸುಕಿಕೊಳ್ಳುವಂತಾಯ್ತು. 

ಹಾಗಂತ ಅಲ್ಲಿ ಎಲ್ಲ ನಮೂನೆಯವರೂ ಇದ್ದರು. ಅತಿರೇಕದ ಅಭಿಮಾನಿಗಳು, ಏನೆಲ್ಲ ನಡೆಯುತ್ತೆ ನೋಡೋಣ ಅಂತ ಸುಮ್ಮನೆ ಬಂದವರು, ಹೊಟ್ಟೆಕಿಚ್ಚಿನಿಂದ ಬಂದವರು, ಹೆಂಡತಿ ಒತ್ತಾಯಕ್ಕೆ ಬಂದ ಗಂಡಂದಿರು, ಅಭಿನಂದನಾ ಗ್ರಂಥಕ್ಕೆ ೫೦೦ರೂಪಾಯಿ ಅಂತ ಕೇಳಿದಾಕ್ಷಣ, 'ಹಾ..ಚೆನ್ನಾಗಿ ದುಡ್ಡು ಮಾಡ್ಕೊತಾನೆ ಬಿಡು' ಅನ್ನುವವರು-ಹೀಗೆಲ್ಲ. ಎಷ್ಟೋ ಜನ "ದೊಡ್ಡವರು' ಒಳ ಸೇರಲಾಗದೆ ಹೊರಗೆ ಅಡ್ಡಾಡುತ್ತಿದ್ದರು. ಹೊಗಳಿಕೆ, ಗೇಲಿ, ತಮಾಷೆ ನಡೆಯುತ್ತಲೇ ಇತ್ತು. 

ರವಿ ಬೆಳಗೆರೆಯೆಂಬ ತೂಫಾನು ಬೀಸುತ್ತಲೇ ಇತ್ತು. 

10 comments:

ಸಂದೀಪ್ ಕಾಮತ್ October 5, 2008 at 10:26 PM  

ನಾನೂ ಬಂದಿದ್ದೆ ಸಮಾರಂಭಕ್ಕೆ !
ಸಮಾರಂಭದಷ್ಟೇ ನಿಮ್ಮ ವರದಿನೂ ಚೆನ್ನಾಗಿದೆ:)

Anonymous,  October 5, 2008 at 10:45 PM  

ದೇರಾಜೆ,
ರವೀ ಬೆಳಗೆರೆ ಎಂಬ ವ್ಯಕ್ತಿಯನ್ನು ಪತ್ರಕರ್ತ ಎಂದು ಸ್ವೀಕರಿಸಿದ ಜನಕ್ಕೆ ಆತನೇ ಹೇಳಿದ ಹಾಗೆ "ತಗೊಂಡು ಹೊಡೀ ಬೇಕು".
ರಾಜ್ಯ ಕೊಳ್ಳೆ ಹೊಡೆಯುವವರ ವೇದಿಕೆ ಮೇಲೆ ಕೂತು ಬಂದಾಯ್ತು. ಈಗ ಅವರನ್ನೇ ವೇದಿಕೆಗೆ ಕರೆಸಿ ಗುಣಗಾನ ಮಾಡುವಷ್ಟು ಹೊಲಸೆದ್ದು ಹೋಗಿರೋ ರವೀನ ಜನ ಆಪಾಟಿ ಆರಾಧಿಸುತ್ತಾರೆ ಅನ್ನೋದು ಬೇಸರ ತರಿಸುವ ಸಂಗತಿ. ಸತ್ಯದ ಮೇಲೆ ಸುಳ್ಳಿನ ಮನೆ ಕಟ್ಟೋ ರವಿಯಂಥವರ ಮೋಸಕ್ಕೆ ಜನ ಬಲಿಯಾಗುತ್ತಿದ್ದಾರಲ್ಲಾಂತ!
ಥೋ ಹೋಗಲಿ ಬಿಡು ಅಂತಾ ನಿರ್ಲಕ್ಷಿಸುವುದಕ್ಕೂ ಆಗದು. ಅದಿನ್ನೂ ಅಪಾಯಕಾರಿ.
ರವಿ ಬೆಳಗೆರೆಗೆ ಬುದ್ಧಿ ಹೇಳೋರು ಯಾರೂ ಇಲ್ಲ. ಜನಕ್ಕಾದ್ರೂ ಬುದ್ಧಿ ಬರ್ಲಿ!
ಥ್ಯಾಂಕ್ಸ್...ನಿನ್ನೆ ಕಾರ್ಯಕ್ರಮದಲ್ಲಿ ರವಿ ಮಾಡಿದ್ದು ಸರಿನಾ ಅಂತಾ ಯೋಚಿಸೋಕೆ ಸಹಾಯವಾಗುವಂಥ ವರದಿ ಕೊಟ್ಟಿದ್ದಕ್ಕೆ.ಸ್ವಲ್ಪನಾದ್ರೂ ಬುದ್ಧಿ ಇದ್ದವರು ಯೋಚಿಸಲಿ..
-ನಿಮ್ಮ ಬ್ಲಾಗ್ ಓದುಗ

Sushrutha Dodderi October 5, 2008 at 11:12 PM  

ನಾ ಬಂದಿರ್ಲಿಲ್ಲ. ;)

ಸಂದೀಪ್ ಕಾಮತ್ October 6, 2008 at 12:05 AM  

ಸುನೀಲ್ ಶಾಸ್ತ್ರಿಯವರನ್ನು ಅಷ್ಟು ಹೊತ್ತು ಕಾಯಿಸಿದ್ದು ಇನ್ನೊಂದು ತಪ್ಪು:( ಪಾಪ ಅಷ್ಟು ಹೊತ್ತು ಕಾದಿದ್ದರೂ ಬೇಸರಿಸದೇ ಇದ್ದಿದ್ದು ಶಾಸ್ತ್ರಿಯವರ ದೊಡ್ದತನ. ಶೀಲಾರವರ ನಿರೂಪಣೆಯೇನೋ ಚೆನ್ನಾಗಿತ್ತು ಆದ್ರೆ ಸ್ವಲ್ಪ ಬೇಗ ಬೇಗ ಮಾತಾಡಿದ್ದಿದ್ರೆ ಎರಡು ಶಾಸ್ತ್ರಿಗಳಿಗೆ ಇನ್ನೂ ಸ್ವಲ್ಪ ಹೊತ್ತು ಮಾತಾಡಲು ಅವಕಾಶ ಸಿಗ್ತಾ ಇತ್ತು.

ಪ್ರಾರ್ಥನಾ ಸ್ಕೂಲ್ ಹುಡುಗಿಯರಂತೂ ಸೀರೆ ಹಾಕಿದ್ರೂ ಆ ಪರಿ ಡೊಳ್ಳಿನ ಮೇಲೆ ಹತ್ತಿದ್ದು ನಿಜಕ್ಕೂ ಗ್ರೇಟ್ .ಪ್ಯಾಂಟ್ ಹಾಕಿನೇ ನನಗೆ ಸಂಸ ರಂಗಮಂದಿರದ ಮೆಟ್ಟಿಲು ಹತ್ತೋಕೇ ಕಷ್ಟ ಆಗ್ತಾ ಇತ್ತು:( ಸ್ತ್ರೀ ಶಕ್ತಿಗೆ ಜಯವಾಗಲಿ,ಅವರಿಗೆ ಡೊಳ್ಳು ಕುಣಿತ ಹೇಳಿಕೊಟ್ಟ ಬೂದಿಯಪ್ಪರಿಗೂ ಜಯವಾಗಲಿ,ಡೊಳ್ಳು ಹೊಟ್ಟೆಯ ರವಿಗೂ ಶುಭವಾಗಲಿ .

Anonymous,  October 6, 2008 at 8:46 PM  

ಕೆಟ್ ಕೆರೆಹಿಡಿದಿರೋ ರವಿ ಬಗ್ಗೆ ಅದೇನು ಬರಿತಿರೋ? ಈತನೊಂದಿಗೆ ಗುರುತಿಸಿಕೊಳ್ಳಲು ಜೋಗಿಗೆ ಹೇಸಿಗೆಯಾಗಲ್ವೇ?

ವಿ.ರಾ.ಹೆ. October 6, 2008 at 11:46 PM  

ಲಾಲ್ ಬಹದ್ದೂರ್ ಶಾಸ್ತ್ರಿಯವರ ಮಗ ಸುನಿಲ್ ಶಾಸ್ತ್ರಿಯವರ ಕೈಯಲ್ಲಿ ದರಿದ್ರ ದಾವೂದ್ ಇಬ್ರಾಹಿಂ ಚಿತ್ರವಿದ್ದ ಪುಸ್ತಕ ಹಿಡಿಸಿದಾಗ ಮಾತ್ರ ಯಾಕೋ ಕರುಳು ಕಿವುಚಿದಂತಾಯ್ತು. ಇಂತ ಸಮಾರಂಭದಲ್ಲಿ ಯಾವುದಾದರೂ ಒಳ್ಳೆಯ ಪುಸ್ತಕನಾದ್ರೂ ಬಿಡುಗಡೆಯಾಗಿದ್ರೆ ಚೆನ್ನಾಗಿರ್ತಿತ್ತು.

ಇಷ್ಟೆಲ್ಲಾ ಬಟ್ಟೆ ಹರ್ಕೊಂಡು ಈ ಕಾರ್ಯಕ್ರಮಕ್ಕೆ ಬರೋ ಅಗತ್ಯವೇನಿತ್ತು ನನಗೆ ಅಂತ ಯೋಚಿಸೋದ್ರೊಳಗೇ ಸಂಸದಲ್ಲಿ ತಂಗಾಳಿಯಲ್ಲಿ ಕಾರ್ಯಕ್ರಮದಲ್ಲಿ ತಲ್ಲೀನನಾಗಿದ್ದೆ!

Anonymous,  October 8, 2008 at 1:17 AM  

yathaavath varadi, fine. but many people r in tension or in temptation ! its funny.

Anonymous,  October 10, 2008 at 1:49 PM  

ಲಂಕೇಶರೊಂದಿಗೆ ಝಟಾಪಟಿ ನೆಡೆಯುತ್ತಿದ್ದ ದಿನಗಳಲ್ಲಿ ಖಾಸ್ ಬಾತ್ ಅನ್ನು ಖಾರಾಬಾತ್ ಮಾಡಿಕೊಂಡಿದ್ದರು ರವಿ. ಲಂಕೇಶರ ಆತ್ಮರತಿಯನ್ನು ಮೂದಲಿಸುತ್ತಾ, “ನೀವು ಮೈಯೆಲ್ಲಾ ಕುಚವಾದಿರಿ, ಅವುಗಳ ಮರ್ದನವೂ ನಿಮ್ಮದೇ” ಎಂದಿದ್ದರು. ಇಂತಹ ಮೆರವಣಿಗೆಗಳನ್ನು ನೋಡುತ್ತಿದ್ದರೆ ಈ ಮನುಷ್ಯನೂ ಅದೇ ಸ್ಥಿತಿಗೆ ತಲುಪಿರುವಂತಿದೆ. ಇತಿಹಾಸ (ಇತಿಹಾಸ ಎನ್ನುವಷ್ಟು ಹಳತಾಗಿಲ್ಲವಾದರೂ) ಮರುಕಳಿಸುತ್ತಿದೆ.

Anonymous,  October 21, 2008 at 8:50 AM  

ರವಿ ಬರೆಯುವ ಪುಸ್ತಕಗಳ ವಿಷಯ,ಇವರೊಂದಿಗೆ ವೇದಿಕೆ ಹಂಚಿಕೊಳ್ಳುವ ಜನ,ಇವರ ಪತ್ರಿಕೆಯ ಭಾಷಾಪ್ರಯೋಗ, ಇತರ ಪತ್ರಕರ್ತರ ಹಾಗೂ ಕವಿಗಳ ಕಾಲೆಳೆಯುವ ತಂತ್ರಗಳು ....ಆಹಾ........
ಇದೆಲ್ಲ ಮಾಡಿ ಮೊನ್ನೆ ಕಾರಂತರ ಹೆಸರಲ್ಲಿ ಕರಾವಳಿಯಲ್ಲಿ ಇವರಿಗೇನೋ ಪ್ರಶಸ್ತಿ ಬೇರೆ....
ಜನ ಮರುಳೋ ..... ಜಾತ್ರೆ ಮರುಳೋ........

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP