ನೀಲಿ ರೆಕ್ಕೆಗಳ ಅಳಿಲು
ಗೆಳೆಯ, ಕವಿ ಹರೀಶ್ ಕೇರ ಬರೆದ ಪುಟ್ಟ ಕತೆ 'ನೀಲಿ ರೆಕ್ಕೆಗಳ ಅಳಿಲು’.
ಅದನ್ನು ಓದಿದಾಗ, ೧೯೮೪ರಲ್ಲೇ ಶ್ರೀಕೃಷ್ಣ ಚೆನ್ನಂಗೋಡ್ ಅವರು ಬರೆದ ಪದ್ಯ 'ನಿರಂತರ’ ನೆನಪಾಯಿತು. ಮಧ್ಯ ವಯಸ್ಸಿನಲ್ಲೇ ತೀರಿಕೊಂಡ ಚೆನ್ನಂಗೋಡರ, ’ಇಲ್ಲದೆ ಇದ್ದಾಗ’ ಎಂಬ ನಾಲ್ಕನೆಯ ಸಂಕಲನದಲ್ಲಿರುವ ಪದ್ಯವದು. ಅದನ್ನು ಓದದೆ ಹರೀಶ್ ಬರೆದ ಈ ಮಾರ್ದವ ಕತೆ ಗದ್ಯದ ಕಾವ್ಯಶಕ್ತಿಗೂ ಸಾಕ್ಷಿಯಾಗಿದೆ. ಗದ್ಯ-ಪದ್ಯದ ಈ ಜುಗಲ್‌ಬಂದಿ ಓದಿ ಆನಂದಿಸಿ.
ನೀಲಿ ರೆಕ್ಕೆಗಳ ಅಳಿಲು
ಅಳಿಲುಗಳಿಗೆ ರೆಕ್ಕೆಗಳಿರುವುದಿಲ್ಲ. ಆದರೆ ನಾನು ಸಣ್ಣವನಿದ್ದಾಗ ಒಂದು ಅಳಿಲನ್ನು ನೋಡಿದೆ. ನೀಲಿ ಬಣ್ಣದ ಆ ಅಳಿಲು ತನ್ನ ಕಡು ನೀಲಿ ರೆಕ್ಕೆಗಳನ್ನು ಪಟಪಟ ಬಡಿಯುತ್ತಾ ಹಾರುತ್ತಿತ್ತು. ಒಂದು ಸಂಜೆ ಶಾಲೆ ಬಿಟ್ಟಿತು. ನೀಲಿ ಬಿಳಿ ಬಣ್ಣದ ಪತಂಗಗಳ ಮಹಾಪೂರವೊಂದು ಹೊರನುಗ್ಗಿತು. ಅವು ರೆಕ್ಕೆಗಳನ್ನು ಪಟಪಟಿಸುತ್ತ, ದಿಕ್ಕುದಿಕ್ಕಿಗೆ ಹಾರಿಹೋದವು. ಇದುವರೆಗೂ ಕಲಕಲವೆಂದು ಎಡೆಬಿಡದೆ ಹಾಡುತ್ತಿದ್ದ ಶಾಲೆ, ಪದವೇ ಕಳೆದುಕೊಂಡಂತೆ ಮೌನವಾಯಿತು.
ನಾನು ಮತ್ತು ಪುಟ್ಟಿ ಶಾಲೆಯ ಮೆಟ್ಟಿಲುಗಳನ್ನು ಇಳಿದು, ಅಂಗಳವನ್ನು ದಾಪು ಹೆಜ್ಜೆಗಳಿಂದ ದಾಟಿ, ಮಣ್ಣುಧೂಳಿನ ಹಾದಿಯಲ್ಲಿ ಇತರ ಮಕ್ಕಳೊಂದಿಗೆ ಮುನ್ನಡೆದೆವು. ಸಂಜೆಯ ಆಕಾಶ ಕೊಂಚ ಕೆಳಗೆ ಬಾಗಿದಂತೆ ಇತ್ತು. ಅದಕ್ಕೆ ಕಾರಣ ಬಾನಿನಲ್ಲಿ ಗೊಂಚಲು ಹಿಂಡು ಕರಿ ಮೋಡಗಳು ತೂಗುತ್ತಿದ್ದವು. ಇನ್ನೇನು ಈಗ ಗುಡುಗಿ ಧಾರಾಕಾರ ಮಳೆ ಬೀಳಬಹುದು ಎಂಬಂತೆ.
ಪುಟ್ಟಿ ನನಗಿಂತ ಎರಡು ಕ್ಲಾಸು ದೊಡ್ಡವಳು. ನಾವಿಬ್ಬರೂ ಅಂದು ಕೊಡೆ ತಂದಿರಲಿಲ್ಲ. ನಮ್ಮ ಮನೆಗಳು ದೂರದಲ್ಲಿದ್ದವು. ನನ್ನನ್ನು ಮನೆಗೆ ತಲುಪಿಸಿ ಪುಟ್ಟಿ ಅವಳ ಮನೆಗೆ ಹೋಗಬೇಕಿತ್ತು. ಗುಡ್ಡವೊಂದರ ತಪ್ಪಲಿನಲ್ಲಿದ್ದ ನಮ್ಮ ಮನೆಗಳಿಗೆ ಇಕ್ಕಟ್ಟಾದ, ಹಾವಿನಂತೆ ಅಂಕುಡೊಂಕಾಗಿ ಹರಿಯುವ, ಧೂಳು ತುಂಬಿದ, ಅಕ್ಕಪಕ್ಕ ಕಾಡು ಕವಿದ ಕಾಲುಹಾದಿಗಳ ಮೂಲಕ ಹೋಗಬೇಕಿತ್ತು.
ನಮ್ಮ ಜತೆಗಿದ್ದ ಮಕ್ಕಳು ನಮ್ಮಿಂದ ಕವಲುಗೊಂಡು ಅವರವರ ಮನೆಗಳತ್ತ ಹಾದಿ ಹಿಡಿದರು. ನಾವಿಬ್ಬರೇ ನಮ್ಮ ದಾರಿಯಲ್ಲಿ. ಪುಟ್ಟಿ ಪಕ್ಕನೆ 'ಬಾ, ಪಕ್ಕದ ಗುಡ್ಡದಲ್ಲಿ ನೇರಳೆ ಹಣ್ಣಾಗಿದೆ. ಕೊಯ್ದು ತಿನ್ನುವ, ಇಂದು ಬೆಳಿಗ್ಗೆ ಬರುವಾಗ ನೋಡಿದೆ’ ಎಂದಳು. 'ಮಳೆ ಬಂದರೆ ಏನು ಮಾಡುವುದು ?’ ಎಂದೆ. 'ಬರಲಿಕ್ಕಿಲ್ಲ ಬಾ, ಇಂದು ಬಿಟ್ಟರೆ ನಾಳೆ ಗೋಪಿ ಕಿಟ್ಟಿ ಎಲ್ಲ ತಿಂದು ಮುಗಿಸಿಬಿಡುತ್ತಾರೆ’ ಎಂದಳು. ಆಮೇಲೆ ನನ್ನನ್ನು ಎಳೆದುಕೊಂಡೇ ದಾರಿ ತೊರೆದು ಗುಡ್ಡದತ್ತ ನುಗ್ಗಿದಳು. ದಾರಿ ಇರಲಿಲ್ಲ ; ನುಗ್ಗಿದ್ದೆ ದಾರಿ. ಅಕ್ಕಪಕ್ಕದಲ್ಲಿ ಸರಳಿ ಕುಂಟಾಲ ಕೇಪಳ ಗಿಡಗಳು, ಚಾಕಟೆ ನೋಕಟೆ ನೆಲ್ಲಿ ಮರಗಳು, ಸುತ್ತ ಹಬ್ಬಿದ ಮಾದೇರಿ ಬಳ್ಳಿಗಳು. ಚಡ್ಡಿ ಹಾಕಿದ ತೊಡೆಗಳಿಂದ ಕೆಳಗೆ ನಗ್ನ ಕಾಲುಗಳಿಗೆ ತೊಡರುವ ಕಿನ್ನರಿ ಮುಳ್ಳುಗಳು. ಮುಂದೆ ಧಾವಿಸುತ್ತಿರುವ ಪುಟ್ಟಿಯ ಲಂಗ ಯಾವ್ಯಾವುದೋ ಪೊದೆಗಳಿಗೆ ಸಿಕ್ಕಿಹಾಕಿಕೊಳ್ಳುತ್ತಿದೆ. ಅದನ್ನು ಎಳೆದು ಬಿಡಿಸುತ್ತ ಗುಡ್ಡದಲ್ಲಿ ಇನ್ನೂ ಮೇಲಕ್ಕೆ ನಾವು. ನೇರಳೆ ಗಿಡಗಳ ತುಂಬ ಗೊಂಚಲು ಗೊಂಚಲು ಕಪ್ಪು ಕಪ್ಪು ಹಣ್ಣುಗಳು. ಗೆಲ್ಲುಗಳು ಕೆಳಕ್ಕೆ ಜಗ್ಗಿಕೊಂಡಿದ್ದವು. ಇಬ್ಬರೂ ಕೈನಿಲುಕಿನಲ್ಲಿರುವ ಕೊಂಬೆಗಳತ್ತ ನುಗ್ಗಿದೆವು. ಒಮ್ಮೆ ಕೈಹಾಕಿ ಜಗ್ಗಿದರೆ ಹಿಡಿತುಂಬ ಹಣ್ಣುಗಳು ಬಂದವು. ನಾಲಿಗೆಯ ಮೇಲೆ ಹುಳಿ ಹುಳಿ ಸಿಹಿ ಸಿಹಿ ಒಗರು. ಕೆಲವೇ ಕ್ಷಣಗಳಲ್ಲಿ ನಾಲಿಗೆ ಬಾಯಿ ಕೈ ಎಲ್ಲ ಕಪ್ಪಾಗಿ ಹೋಯ್ತು.
ಅದೇ ಕ್ಷಣದಲ್ಲಿ ಮೋಡಗಳು ಒಡೆದುಹೋದಂತೆ ಇದ್ದಕ್ಕಿದ್ದಂತೆ ಸಣ್ಣಗೆ ಮಳೆ ಸುರಿಯತೊಡಗಿತು. ಏಕಾಏಕಿ ಬಂದ ಹನಿಮಳೆಯಿಂದ ಖುಷಿಯಾಯಿತು. ಹಣ್ಣು ಜಗ್ಗುತ್ತ ನಾವು ನೆನೆಯತೊಡಗಿದೆವು. ಮೊದಲ ಹನಿಗಳು ನಮ್ಮ ಹಣೆಯನ್ನು ತೋಯಿಸಿ ಹಣೆಯ ಮೇಲಿನಿಂದ ಇಳಿದು ಮೂಗಿನ ತುದಿಯಲ್ಲಿ ಕ್ಷಣಕಾಲ ಕುಳಿತು ತುಟಿಯಲ್ಲಿ ಇಂಗಿದವು. ನಿಧಾನವಾಗಿ ಮಳೆ ಜೋರಾಯಿತು. ಈಗಂತೂ ಪೂರಾ ಒದ್ದೆಯಾದೆವು. ಇಬ್ಬರಿಗೂ ಗಾಬರಿಯಾಯಿತು. ಒದ್ದೆಯಾದರೆ ಮನೆಯಲ್ಲಿ ಅಮ್ಮನಿಂದ ಬಯ್ಯಿಸಿಕೊಳ್ಳಬೇಕಾಗುತ್ತದೆ. ಪುಟ್ಟಿ ನನ್ನನ್ನೂ ಕರೆದುಕೊಂಡು ಪೊದೆಯೊಳಗೆ ನುಗ್ಗಿದಳು. ಅಲ್ಲಿಗೆ ಮಳೆ ಅಷ್ಟು ಸುಲಭವಾಗಿ ಸುರಿಯುವಂತಿರಲಿಲ್ಲ.
ನಿನ್ನ ನಾಲಿಗೆ ತೋರಿಸು ಅಂದಳು. ಕಪ್ಪಾಗಿದೆಯಲ್ಲಾ ಅಂದಳು. ನಿನ್ನದೂ ಹಾಗೇ ಆಗಿದೆ ಎಂದಾಗ ನಕ್ಕಳು. ಆಮೇಲೆ ಗಂಟಲನ್ನು ನೋಡಿ ಇದೇನೋ ಉಬ್ಬಿಕೊಂಡಿದೆ ಅಂದಳು. ಬಳಿಕ ಹುಡುಗರಿಗೆ ಹಾಗಿರುತ್ತದೆ, ನಮಗಿರೊಲ್ಲ ಎಂದಳು. ನನ್ನ ತಲೆ ನೆಂದಿದೆ ಅಂದೆ. ಒರೆಸ್ತೇನೆ ಎಂದವಳು, ನನ್ನ ತಲೆಯನ್ನು ಬಗ್ಗಿಸಿ ಅವಳ ಲಂಗದಿಂದ ಉಜ್ಜತೊಡಗಿದಳು. "ಇವತ್ತು ಕೆಂಪು ಚಡ್ಡಿ ಹಾಕಿದ್ದಿ ಕಾಣಿಸ್ತಿದೆ’ ಅಂತ ಕೀಟಲೆ ಮಾಡಿದೆ. ಫಟ್ಟನೆ ತಲೆಗೆ ಮೊಟಕಿ ಕೆಂಗಣ್ಣು ಬೀರಿದಳು. ಅಳು ಬಂತು. ಕೂಡಲೇ ತಬ್ಬಿಕೂಂಡು, ಅಳಬೇಡ ಮಾರಾಯ ಎಂದಳು. ಬೆಚ್ಚಬೆಚ್ಚಗೆ ಅನಿಸಿತು. ಮತ್ತೆ ಹಾಗೇ ಕುಳಿತಿದ್ದೆವು. ಮಳೆ ಸಣ್ಣಗೆ ಹನಿಯುತ್ತಿತ್ತು.
ಆಗ ಅಳಿಲು ಕಾಣಿಸಿತು. ನಮ್ಮಿಂದ ಎರಡು ಗಿಡದಾಚೆಗೆ, ನೇರಳೆ ಗಿಡವೊಂದರ ಮೇಲೆ ಕುಳಿತಿತ್ತು. ಸುಮ್ಮನೆ ಕುಳಿತು ಹಣ್ಣು ಮುಕ್ಕುತ್ತಿದ್ದುದರಿಂದ ಇದುವರೆಗೆ ನಮ್ಮ ಗಮನಕ್ಕೆ ಬಂದಿರಲಿಲ್ಲ. ಹಿಂದಿನ ಎರಡು ಕಾಲುಗಳಲ್ಲಿ ಕೊಂಬೆಯನ್ನು ಹಿಡಿದು ಕುಳಿತು, ಮುಂದಿನ ಎರಡು ಕೈಗಳಲ್ಲಿ ಹಣ್ಣು ಹರಿದು ತಿನ್ನುತ್ತಿತ್ತು. ಆಮೇಲೆ ಇದ್ದಕ್ಕಿದ್ದಂತೆ ಕೊಂಬೆಯ ಮೇಲೆ ಓಡಿ, ಜಿಗಿಯಿತು. ಆಗ ಅದರ ಎರಡೂ ಪಕ್ಕಗಳಲ್ಲಿ ವಿಸ್ತಾರವಾದ ಎರಡು ರೆಕ್ಕೆಗಳು ಬಿಚ್ಚಿಕೊಂಡವು. ಕಡುನೀಲಿ ರೆಕ್ಕೆಗಳು. ಆಮೇಲೆ ಬಡಿದುಕೊಂಡವು, ಮೇಲೂ ಕೆಳಗೂ. ಹಾರುತ್ತಿದ್ದಾಗ ನಮಗೆ ಕಾಣಿಸಿದ್ದು- ಪಟಪಟನೆ ಮೇಲೆ ಕೆಳಗೆ ಬಡಿದುಕೊಂಡ ನೀಲಿ ರೆಕ್ಕೆಗಳು, ಊದಾ ಬಣ್ಣದ ಹೊಟ್ಟೆ, ಹಿಂದೆ ಉದ್ದಕ್ಕೆ ಚಾಚಿಕೊಂಡ ಕಂದು ಕಪ್ಪು ಮಿಶ್ರಿತ ಕುಚ್ಚು ಕುಚ್ಚಿನ ಬಾಲ, ಗಾಳಿಯಲ್ಲಿ ಹಿಂದಕ್ಕೆ ಈಸುತ್ತಿದ್ದ ಮುಂಗಾಲುಗಳು, ಎವೆತೆರೆದ ಕಂಗಳು ಮತ್ತು ಮುಂದಕ್ಕೆ ಚಾಚಿಕೊಂಡ ಮೂತಿ. ಗಕ್ಕನೆ ಕೊಂಬೆಗೆ ಎಗರಿ ಸರಸರನೆ ಓಡಿತು. ಮತ್ತೆ ಕೊಂಚ ಉದಾಸವಾಗಿ ಕುಳಿತು ಬೆನ್ನು ತುರಿಸಿಕೊಂಡಿತು. ಆಗ ಮಡಿಸಿಕೊಂಡ ನೀಲಿ ರೆಕ್ಕೆಗಳು ಕೊಂಚ ಬಿಡಿಸಿಕೊಂಡವು. ಮತ್ತೆ ಏನೋ ನೆನಪಾದವರಂತೆ ಕೊಂಬೆಯಲ್ಲೆ ಹಿಂತಿರುಗಿತು. ಕುಳಿತಿತು.
ನಾವಿಬ್ಬರೂ ಅಳಿಲನ್ನು ಏಕಕಾಲಕ್ಕೆ ನೋಡಿದ್ದೆವು. ಇಬ್ಬರೂ ದಿಗ್ಭೃಮೆ ಕವಿದ ಮೌನದಲ್ಲಿ, ಅದು ಕೊಂಚವೇ ಕದಡಿದರೂ ಮುಂದಿರುವ ಅಳಿಲು ಇಲ್ಲದಂತೆ ಮಾಯವಾಗಿಬಿಡುತ್ತದೆ ಎಂಬ ಅನಿಸಿಕೆಯಲ್ಲಿ ಕುಳಿತಿದ್ದೆವು. ಅದೇನು ಮಾಯಾವಿ ಅಳಿಲೋ, ಗಳಿಗೆ ಗಳಿಗೆಗೂ ಚಂಚಲಗೊಂಡಂತೆ ಕೊಂಬೆಕೊಂಬೆಯಲ್ಲಿ ಚಕಚಕ ಜೀಕುತ್ತಿತ್ತು. ಕ್ಷಣ ನಿಂತಲ್ಲಿ ನಿಲ್ಲುತ್ತಿರಲಿಲ್ಲ. ನಮ್ಮ ಕಣ್ಣುಗಳು ಅಳಿಲು ಹೋದಲ್ಲಿ ಹಾಯುತ್ತಿದ್ದವು. ರೆಕ್ಕೆಗಳ ನೀಲಿ ಒಮ್ಮೆ ಮೈಗೆ ಹರಡಿಕೊಂಡಂತೆ ಅಳಿಲು ತೀರ ಬೇರೆಯೇ ಆಗಿ, ಸಂಜೆ ಮುಗಿಯುತ್ತಿರುವ ಬೆಳಕಿನ ಕೊನೆಯ ಕಿರಣಗಳು ಎಲ್ಲೋ ತೂರಿಬಂದು ತಟ್ಟಿದರೆ ಮತ್ತೆ ಅಳಿಲು ಬೇರೆಯೇ ಆಗಿ, ಎಲೆಗಳ ನಡುವೆ ಮಾಯವಾಗುವಾಗ ಮತ್ತೆ ಮೂಡುವಾಗ ಬೇರೆಯೇ ಆಗಿ, ರೆಕ್ಕೆ ಬಡಿದಾಗ ಸಿಡಿವ ಹನಿಗಳ ತುಂತುರಿನಲ್ಲಿ ಬೇರೆಯೇ ಆಗಿ ಕಾಣುತ್ತಿತ್ತು. ಕುಂಟಾಲ ಗಿಡದಡಿಯಲ್ಲಿ ಮರೆವು ಕವಿದಂತೆ ಮೌನ, ಮಂಪರು ಕವಿದಂತೆ ಮೌನ. ಎಡೆಬಿಡದೆ ಸುರಿಯುತ್ತಿರುವ ಹನಿಮಳೆ, ದಟ್ಟೈಸಿ ತೂಗುತ್ತಿರುವ ಕರಿಮೋಡ, ಕವಿಯುತ್ತಿರುವ ಕತ್ತಲೆ, ಮುಂದೆ ಹೌದೋ ಅಲ್ಲವೋ ಎಂಬಂತೆ ಕಾಣುತ್ತಿರುವ ಅಳಿಲು, ಎಲ್ಲವೂ ಮಂಪರಿನ ಲೋಕದಲ್ಲಿ ನಡೆಯುತ್ತಿರುವಂತೆ, ಮುಗಿಯಲಾರದ ಕನಸೊಂದು ಹಚ್ಚಡ ಹೊಚ್ಚಿದಂತೆ.
ಇದ್ದಕ್ಕಿದ್ದಂತೆ ಪುಟ್ಟಿ "ಏಳು ಹೋಗುವಾ’ ಅಂದಳು. ದಗ್ಗನೆದ್ದಂತೆ ಕಣ್ಣ ಮುಂದಿದ್ದ ಅಳಿಲು ಅಲ್ಲಿ ಇರಲೇ ಇಲ್ಲವೆಂಬಂತೆ ಮಾಯವಾಗಿತ್ತು. ನಾವಿಬ್ಬರೂ ಸರಸರ ನಡೆದು ಮನೆ ಸೇರಿಕೊಂಡೆವು. ದಾರಿಯಲ್ಲೆಲ್ಲೂ ಪುಟ್ಟಿ ಮಾತನಾಡಲಿಲ್ಲ, ನಾನೂ ಕೂಡ. ಮನೆಗೆ ಬಂದ ಬಳಿಕ ಅಪ್ಪ ಅಮ್ಮನಿಗೆ 'ನಾನಿಂದು ಹಾರುವ ಅಳಿಲು ಕಂಡೆ’ ಎಂದು ಹೇಳಿದೆ. ಅವರು ನಂಬಲಿಲ್ಲ. ಮರುದಿನ ಶಾಲೆಗೆ ಹೊರಟ ಹೊತ್ತಿಗೆ, ಪುಟ್ಟಿಯ ಅಮ್ಮ ಬಂದರು. "ಇವತ್ತು ಪುಟ್ಟಿ ಶಾಲೆಗೆ ಬರೊಲ್ಲ, ನೀ ಹೋಗೋ’ ಎಂದರು. 'ಯಾಕೆ ?’ ಅಂತ ಕೇಳಿದೆ. 'ಅವಳು ಹೊರಗೆ ಕೂತಿದಾಳೆ. ನಿಂಗೊತ್ತಾಗಲ್ಲ, ಅಮ್ಮ ಎಲ್ಲಿದಾರೆ ?’ ಎಂದು ಮನೆಯೊಳಗೆ ಹೋದರು. ನನಗೆ ನಿಜಕ್ಕೂ ಗೊತ್ತಾಗಲಿಲ್ಲ. ನಾನು ನೀಲಿ ರೆಕ್ಕೆಗಳ ಅಳಿಲನ್ನು ನೋಡಿದ್ದೇನೆ ಎಂದು ಹೇಳಿದರೆ ಇದುವರೆಗೆ ಯಾರೂ ನಂಬಿಲ್ಲ. ಆದರೆ ಪುಟ್ಟಿ ಅಳಿಲಿನ ಬಗ್ಗೆ ಯಾರ ಹತ್ತಿರವೂ ಇದುವರೆಗೆ ಹೇಳಿಲ್ಲ ಅಂತ ಕಾಣುತ್ತದೆ.
ನಿರಂತರ
ಲಂಗದ ಹುಡುಗಿಯು ಅಂಗಳದಂಚಿಗೆ
ಬಂದಳು ಸಂಜೆಯ ಹೊತ್ತು
ನನಗೂ ಆಕೆಗು ವರ್ಷಗಳಂತರ
ಇದ್ದುದರರಿವೆನಗಿತ್ತು
ಮನೆಯ ಹಿಂದಿನ ಗುಡ್ಡವನೇರಲು
ದೊಡ್ಡವಳಾಕೆಯು ಮುಂದೆ
ಶಿಳ್ಳೆ ಹೊಡೆಯುತ ನಾನೂ ನಡೆದಿರೆ
ದಾರಿಯು ಇಬ್ಬರದೊಂದೆ
ಹೆಜ್ಜೆ ಹೆಜ್ಜೆಗೂ ಛೇಡಿಸುತಿದ್ದಳು
ನಾನೋ ರೇಗಿಸುತಿದ್ದೆ
ಕಿತ್ತ ಗೋಡಂಬಿಯ ಕೊರೆಯುತ್ತಿದ್ದಳು
ನಾನೂ ತಿನ್ನುತಲಿದ್ದೆ
ಏರಿನಲೊಂದು ತರುವಿಗೆ ಒರಗಿ
ನಿಂತಳು ನಾನೂ ಜರುಗಿ
ಸನಿಹಕೆ ಆಕೆಯ ಕಂಗಳು ಕೆಂಪು
ಮನದಲ್ಲೇನೋ ಜರಗಿ
ಥಟ್ಟನೆ ನನ್ನೆಡೆ ನೋಡುತ ಏಕೋ
ರೆಂಬೆಗೆ ಬಡಿದಳು ಕತ್ತಿ
ಏನೋ ಒಂಥರಾ ನನಗೂ ಆಕೆಯು
ಸವರಲು ಬೆನ್ನನು ಒತ್ತಿ
ಬಡಿದಾ ರಭಸಕೆ ಚಿಮ್ಮಿತು ಕತ್ತಿ
ಹುಡುಕಲು ಹೊರಟಳು ಬಗ್ಗಿ
ಸಿಕ್ಕಲು ಹಿಡಿಗೆ ಸಿಕ್ಕಿಸಿ ನೆಲಕೆ
ಕುಕ್ಕಲು ಕಣ್ಣಲಿ ಸುಗ್ಗಿ
ತಬ್ಬುತ ತಡವುತ ಖುಶಿಯಲಿ ಎದ್ದೆವು
ಕೊಡಹುತ ಮೈಕೈ ಧೂಳು
ಮೇಗಡೆ ಆಗಸದಂಗೈಯಲ್ಲಿ
ಚಂದ್ರ ಗೋಡಂಬಿಯ ಸೀಳು.
-ಶ್ರೀಕೃಷ್ಣ ಚೆನ್ನಂಗೋಡ್
5 comments:
ತುಂಬಾ ಥ್ಯಾಂಕ್ಸ್ ಮಾರಾಯ. ಪದ್ಯಗದ್ಯಗಳ ಮೇಲಾಣೆ, ನೀನು ಹೇಳುವ ವರೆಗೂ ನಾನು ಚೆನ್ನಂಗೋಡರ ಪದ್ಯ ಓದಿರಲಿಲ್ಲ. ಈಗ ದಿಗಿಲಾಗುತ್ತಿದೆ- ಯಾರಾದರೂ ನನ್ನ ಕತೆ ಕೃತಿಚೌರ್‍ಯ ಅಂದರೇನು ಗತಿ !
ಮನುಷ್ಯನಿಗೆ ಲೈಂಗಿಕತೆಯ ಬಗ್ಗೆ ಮೊದಲ ಬಾರಿಗೆ ಯಾವಾಗ ಅರಿವು ಮೂಡುತ್ತದೆ ? ಊಹೂಂ, ಫ್ರಾಯ್ಡ್‌ನನ್ನು ಬಿಟ್ಟುಬಿಡಿ. ಎಲ್ಲ ಕವಿಗಳೂ, ಕತೆಗಾರರೂ ತಮ್ಮಲ್ಲಿ ಮೊದಲ ಬಾರಿಗೆ ಲೈಂಗಿಕತೆಯ ಬಗ್ಗೆ ಅರಿವು ಮೂಡಿದ, ಬಾಲ್ಯದ ಆ ಒಂದು ಘಳಿಗೆಯ ಬಗ್ಗೆ ಮತ್ತೆ ಯಾವತ್ತೋ ಯೋಚಿಸುವುದು, ಬರೆಯುವುದು ಎಂಥ ವಿಚಿತ್ರ ಅಲ್ಲವೆ !
ಪೂರ್ಣಚಂದ್ರ ತೇಜಸ್ವಿ ಬರೆದ ‘ರಹಸ್ಯವಿಶ್ವ’ ಕತೆ (ಅದೇ- ಬಾಲ್ಯದಲ್ಲಿ ಸೈಕಲ್ ಕಲಿಯಹೊರಡುವುದು, ಊರಿನ ಸೂಳೆಯೊಬ್ಬಳ ಸೀರೆಯೊಳಗೆ ನುಗ್ಗಿ ಪಡಬಾರದ ಪಡಿಪಾಟಲು ಪಡುವುದು) ಈ ವಸ್ತುವಿನ ಬಗೆಗೇ ಇದೆ. ಯಶವಂತ ಚಿತ್ತಾಲ ಒಂದು ಕತೆ ಬರೆದಿದ್ದಾರೆ(ಅದರ ಹೆಸರು ಮರೆತುಹೋಗಿದೆ- ‘ಉತ್ತುಮಿ’ಯೆ ?). ಅದಂತೂ ನೇರವಾಗಿಯೇ ತಮಗೆ ಬಾಲ್ಯದಲ್ಲಿ ಲೈಂಗಿಕ ಅರಿವು ಮೂಡಿದ ಸನ್ನಿವೇಶವನ್ನು ವಿವರಿಸುವ ಗೆಳೆಯರ ಮಾತುಕತೆಯೊಂದಿಗೆ ಆರಂಭವಾಗುತ್ತದೆ.
ಈ ಕತೆ ಬರೆಯುವ ಮುನ್ನ ನಾನು ಇದನ್ನೆಲ್ಲ ಯೋಚಿಸಿರಲಿಲ್ಲ. ಈಗ ನೋಡಿದರೆ ನೀನು ನನ್ನ ಈ ಹಲ್ಕಟ್ ಕತೆಯನ್ನು ಚೆನ್ನಂಗೋಡರ ಮತ್ತೊಂದು ಪೋಲಿ ಪದ್ಯದೊಂದಿಗೆ ತಳುಕು ಹಾಕಿ ನನ್ನ ಮಾನ ತೆಗೆಯುವ ಯತ್ನ ಮಾಡಿದ್ದೀ !
- ಹರೀಶ್ ಕೇರ
Very wonderful! ಹರೀಶರ ಕತೆಯೂ, ಚೆನ್ನಂಗೋಡರ ಪದ್ಯವೂ, ಬಳಸಿಕೊಂಡಿರುವ ಚಿತ್ರಗಳೂ ಒಂದಕ್ಕೊಂದು ಲಿಂಕ್-ಅಪ್ ಆಗಿ ಈ ಪೋಸ್ಟಿಗೇ ಒಂದು ಒಟ್ಟಂದ ತಂದುಕೊಟ್ಟಿವೆ. ಕಾಡುವಂತಿವೆ. ಪದೇ ಪದೇ ಓದಿಕೊಳ್ಳುವಂತಿವೆ. ಥ್ಯಾಂಕ್ಯು ವೆರಿ ಮಚ್ ಫಾರ್ ದಿಸ್ ಪೋಸ್ಟ್ ಸುಧನ್ವಾ...
thanks sushrutha.
-sudhanva
ಹರೀಶ್ ರೇ,
ಯೇಸೊಂದು ಚೆನ್ನಾಗಿ ಬರೀತೀರಾ. ನಿಮ್ಮ ಬರಹ ಓದಿದ್ದು,ಕಡಿಮೆ. ನಿಜಕ್ಕೂ ಖುಶಿಯಾಯಿತು. ಜತೆಗೆ ಶ್ರೀ ಚೆನ್ನಂಗೋಡರ ಪದ್ಯವನ್ನೂ ಓದಿರಲಿಲ್ಲ.
ಎರಡನ್ನೂ ಒಟ್ಟಿಗೆ ಬೆಸೆದು ಓದಲು ಅನುವು ಮಾಡಿಕೊಟ್ಟ ಸುಧನ್ವನಿಗೆ ಧನ್ಯವಾದಗಳು.
Post a Comment