ಸುಖದ ಸ್ಯಾಂಪಲ್‌ಗಳು
ಆಕಾಶ ಅಸ್ತವ್ಯಸ್ತವಾಗಿತ್ತು. ಚಂದ್ರ ಮಂಕಾಗಿದ್ದ. ಜನ ಗೆಲುವಾಗಿದ್ದರು! ಕಿಶೋರ್ ಕುಮಾರ್‌ನ ಹಾಡು ಹಿತವಾಗಿ ಕೇಳಿಬರುತ್ತಿತ್ತು. 'ಮೇರೆ ಸಾಮ್‌ನೆವಾಲಿ ಕಿಡ್‌ಕೀ ಮೆ, ಏಕ್ ಚಾಂದ್ ಕಾ ಟುಕ್‌ಡಾ ರಹತಾ ಹೆ...’ ಪೆಲಿಕನ್ ಬಾರ್‌ನ ಒಳಗೆ ಬಲ್ಬುಗಳು ಕೂಡಾ ಮಂಕಾಗಿ ಉರಿಯುತ್ತಿದ್ದವು.
ತಮ್ಮೆಲ್ಲಾ ಕಷ್ಟಗಳನ್ನು ಒಂದು ಗುಟುಕಿನಲ್ಲಿ ಮರೆಯುವುದಕ್ಕೆ ಜನ ಬಂದಿದ್ದಾರೆ. ಇನ್ನು ಕೆಲವರು, ಒಂದು ಗುಟುಕು ಹೀರಿ ತಮ್ಮ ಸಂತಸ ಹೆಚ್ಚಿಸಿಕೊಳ್ಳಲು ಕಾತುರರಾಗಿದ್ದಾರೆ. ಮೀಸೆ ಮೂಡದ ತರುಣರು, ಮೀಸೆ ಹಣ್ಣಾದ ಮುದುಕರು, ನಲುವತ್ತರ ಬ್ರಹ್ಮಚಾರಿಗಳು ಸೇರಿದ್ದಾರೆ. ಎಲ್ಲರ ಮನಸ್ಸಿನ ಉಯ್ಯಾಲೆಗಳಲ್ಲಿ ಕನಸಿನ ರಾಜಕುಮಾರಿಯರು ಜೀಕುತ್ತಿದ್ದಾರೆ. ಮಹಾನಗರಗಳ ವಿಲಕ್ಷಣ ಸುಖದ ಕೇಂದ್ರಗಳಾದ ’ಡ್ಯಾನ್ಸಿಂಗ್ ಬಾರ್’ಗಳು ಕನಸಿನ ಮನೆಗಳು. ಈ ಪೆಲಿಕನ್ ಬಾರ್‌ನಲ್ಲಿ ನರ್ತಿಸುತ್ತಿರುವ ಎಂಟೂ ಮಂದಿ ಯುವತಿಯರು ಪರಮರೂಪಸಿಗಳಂತೆ ಕಾಣುತ್ತಿದ್ದಾರೆ. ಹೊಳೆಯುತ್ತಿರುವ ಅವರ ಕಣ್ಣುಗಳಲ್ಲಿ ಸೆಳೆತವಿದೆ. ಹೆಜ್ಜೆಗಳಲ್ಲಿ ಹಿಡಿತವಿದೆ. ಅವರಲ್ಲಿ ಒಬ್ಬಳಂತೂ ಎಲ್ಲರ ಪತ್ನಿಯರಿಗಿಂತ, ಎಲ್ಲರ ಪ್ರಿಯತಮೆಯರಿಗಿಂತ, ಆಹ್ ಎಷ್ಟೊಂದು ಮಜಬೂತಾಗಿದ್ದಾಳೆ. ಅವಳು ನಕ್ಕಾಗಲೆಲ್ಲ ಯಾರಿಗೂ ಯಾರೂ ಕಾಣುತ್ತಿಲ್ಲವಲ್ಲ.
ಸಾಗರದಲ್ಲಿ ದೋಣಿಯೊಂದು ತುಯ್ದಾಡುತ್ತಿದೆ. ಅದರಲ್ಲಿ ಒಂಟಿ ಮನುಷ್ಯನೊಬ್ಬ ನಿಂತಿದ್ದಾನೆ. ಅವನ ನಡುವಿಗಷ್ಟೇ ಬಟ್ಟೆಯ ತುಂಡೊಂದು ಸುತ್ತಲ್ಪಟ್ಟಿದೆ. ಸಮುದ್ರಕ್ಕೆ ಬಲೆ ಹರಡಿದ್ದಾನೆ. ಇದಿರು ದೂರದಲ್ಲಿ, ಬಹುದೊಡ್ಡ ಕಟ್ಟಡದ ಆರನೇ ಮಹಡಿಯವರೆಗೂ ಬಾಲ್ಕನಿಗಳು ಆಗಸಕ್ಕೆ ಚಾಚಿ ನಿಂತದ್ದು ಈ ವ್ಯಕ್ತಿಗೆ ಕಾಣಿಸುತ್ತಿದೆ. ಥಂಡಿ ಹವಾ ಚಲಿಸುತ್ತಿದೆ. ಆ ಬಾಲ್ಕನಿಯೊಂದರ ಆರಾಮ ಕುರ್ಚಿಯಲ್ಲಿ ಬಿಳಿಯ ಅರೆಬೆತ್ತಲೆ ದೇಹ ಕುಳಿತಿದೆ. ದೋಣಿ ಮತ್ತೆ ತುಯ್ದಾಡುತ್ತಿದೆ. ಆ ಬಾಲ್ಕನಿಯಲ್ಲಿ ಕುಳಿತು ಸಾಗರವನ್ನೊಮ್ಮೆ ನೋಡಬೇಕು. ಒಂದಲ್ಲ ಒಂದು ದಿನ ಅಂತಹ ಮನೆಯನ್ನು ತನ್ನದಾಗಿಸಿಕೊಳ್ಳಬೇಕು ಎಂಬ ಆಸೆ ಇವನನ್ನು ಕಾಡುತ್ತಿದೆ.
ಅತ್ತ ಬಾಲ್ಕನಿಯಲ್ಲಿ ಕುಳಿತಿದ್ದ ವ್ಯಕ್ತಿಯು ಕಣ್ಣೀರು ಸುರಿಸುತ್ತಿದ್ದಾನೆ. ದೂರದ ಸಮುದ್ರದಲ್ಲಿ ತೇಲುತ್ತಿರುವ ವ್ಯಕ್ತಿಯು ಆತನಿಗೆ ಆಶಾಗೋಪುರದಂತೆಯೇ ಕಾಣಿಸುತ್ತಿದ್ದಾನೆ. ಮೆಟ್ಟಿಲಿಳಿದು ಸಮುದ್ರದ ಕಡೆ ಹೊರಟಿದ್ದಾನೆ. ತನ್ನೆಲ್ಲಾ ದುಃಖವನ್ನು ಮರೆಯಲು ಆತ ಹೋಗುತ್ತಿದ್ದಾನೆ. ಸಾಗರ ಉಕ್ಕೇರುತ್ತಿದೆ, ಕತ್ತಲಾಗುತ್ತಿದೆ.
ಕೆಲವೊಮ್ಮೆ ಇಂತಹ ಜಾಗಗಳಲ್ಲೇ ವಿಚಿತ್ರವಾದ ’ಥ್ರಿಲ್ಲಿಂಗ್ ಥಾಟ್’ಗಳು ಹುಟ್ಟಿಕೊಳ್ಳುತ್ತವೆ. ಒಬ್ಬ ಕ್ಯಾಶಿಯರ್‌ನ ಬಳಿ ಅರಚುತ್ತಿದ್ದ " ಆ ಚಂದ್ರಲೋಕದ ಟ್ಯೂಬ್‌ಲೈಟ್ ಆಫ್ ಮಾಡಿ!’. ಇನ್ನೊಬ್ಬನ ಸ್ಟೇಟ್‌ಮೆಂಟು-"ಭೂಮಿ ತಿರುಗುತ್ತಿರುವುದು ಕುಡುಕರ ಶಕ್ತಿಯಿಂದ!’. ಕುರುಚಲು ಗಡ್ಡ ಬಿಟ್ಟಿದ್ದ, ಜೋಳಿಗೆ ಚೀಲವೊಂದನ್ನು ಹೆಗಲಿಗೆ ಹಾಕಿಕೊಂಡೇ ಇದ್ದ ವ್ಯಕ್ತಿಯೊಬ್ಬ "ನಿನ್ನೆ ರಾತ್ರಿಯೂ ಇದೇ ಥರಾ ಏರಿಳಿಯುತ್ತಿದ್ದೆ. ಕಡಲು ಕೂಡಾ ಸ್ತಬ್ಧವಾಗಿತ್ತು’ ಎಂದವನೇ ಮುಂದುವರಿಸಿ "ನೂರು ವಾಕ್ಯಗಳಲ್ಲಿ ಹೇಳಲಾಗದ್ದನ್ನು ಒಂದು ಚಿತ್ರ ಹೇಳುತ್ತದೆ. ನೂರು ಚಿತ್ರಗಳಲ್ಲಿ ಹೇಳಲಾಗದ್ದನ್ನು ಒಂದು ಬಾಟಲಿ ಹೇಳಿಸುತ್ತದೆ’ ಎಂದು ಸುಮ್ಮನಾದ. ಅವನ ಬಳಿಯೇ ಕುಡಿಯದೆ ಕುಳಿತಿದ್ದವನೊಬ್ಬ ಹೇಳಿದ್ದು ಹೀಗೆ-’ಕುಡುಕರ ಜೊತೆ ಗೆಲ್ಲುವುದು ಸುಲಭ. ಸೋಲುವುದು ಕಷ್ಟ!’. ಲೋಡಾಗಿದ್ದವನೊಬ್ಬನನ್ನು ತಮಾಷೆ ಮಾಡಲೆಂದು ಮತ್ತೊಬ್ಬ ತನ್ನ ಎರಡು ಬೆರಳುಗಳನ್ನು ಎತ್ತಿಹಿಡಿದು "ಇದೆಷ್ಟೊ?’ ಎಂz. ಅವನು "ಒಬ್ಬೊಬ್ರೇ ಕೇಳಿ, ಉತ್ತರ ಕೊಡ್ತೀನಿ’ ಅಂದ!
ಒಂಭತ್ತು...ಹತ್ತು....ಹನ್ನೊಂದು...ಸಮಯವೂ ಏರುತ್ತಿದೆ. ಸುವರ್ಣ ಲಂಕೆಯ ದೊರೆ ರಾವಣನಂತಹ ಕಟ್ಟಾಳು ಕ್ಯಾಶಿಯರ್‌ನ ಸ್ಥಾನದಲ್ಲಿ ಕುಳಿತಿದ್ದಾನೆ. ಅವನ ಕೈಯಲ್ಲಿ ನೂರು ಐನೂರರ ನೋಟುಗಳು ಚಕಚಕನೆ ಚಲಿಸುತ್ತಿವೆ. ಅವನ ಮೇಲೆ ಮಾತ್ರ ಪ್ರಕಾಶಮಾನವಾದ ಬೆಳಕು ಬಿಡಲಾಗಿದೆ. ನರ್ತಕಿಯರ ಕಾಲುಗಳು ಮಗುವಿನ ಅಂಗಾಲುಗಳಂತೆ ಎತ್ತೆತ್ತಲೋ ಹೆಜ್ಜೆ ಇರಿಸುತ್ತವೆ. ನರ್ತಕಿಯ ಗುಡಿಸಲಲ್ಲಿ ಮಗು ಅಮ್ಮನಿಗಾಗಿ ಕಾದುಕಾದು ಬಸವಳಿದಿದೆ. ಅತ್ತ ಇತ್ತ ಸುತ್ತಮುತ್ತ ಜನ ಜನ ಜನ. ಯಾರೋ ಒಬ್ಬ ಹಾಡುತ್ತಾನೆ "ಜನ ಗಣ ಮನ’.
ದೋಣಿ ದಡದಲ್ಲಿದೆ, ಆಕಾಶ ಸ್ವಚ್ಛವಾಗಿದೆ. ಚಂದಿರ ಹೊರಗೆ ಬೆಳಗುತ್ತಿದ್ದಾನೆ. ಎತ್ತಲೋ ಓಡುತ್ತಿದ್ದಾನೆ.
(ಐದು ವರ್ಷಗಳ ಹಿಂದೆ ಬರೆದದ್ದು)
3 comments:
ಹಾಯ್ ಸುಧನ್ವ
ಸುಮಾರು 4 ವರ್ಷಗಳ ಹಿಂದೆ ವಿ.ಕ ದಲ್ಲಿ ನಿಮ್ಮದೊ0ದು ಲೇಖನ ಬಂದಿತ್ತು, ಅದು ಜಿಡ್ಡು ಕೃಷ್ಣಮೂರ್ತಿಯವರ ಫಿಲಾಸಫಿಯ ಬಗ್ಗೆ ಇದ್ದಿತೆಂದು ಕಾಣುತ್ತದೆ
ಆಗಿನಿಂದ ನೀಮಗೊಂದು ಪತ್ರ ಬರೆಯಬೇಕೆಂದುಕೊಂಡವನಿಗೆ ಈಗ ಸಾಧ್ಯವಾಗುತ್ತಿದೆ :-) (ಎಲ್ಲ ಅಂತರ್ಜಾಲದ ಮಹಿಮೆ) ಆಗ ನೀವು ಬಹುಶ: ಕಾಲದ ಅಸ್ತಿತ್ವದ
ವಿಚಾರವನ್ನು ಬರೆದಿದ್ದಿರಿ ಎನಿಸುತ್ತದೆ. ಅದೇನೆ ಇರಲಿ ನಿಮ್ಮ ಲೇಖನಗಳನ್ನು ಮತ್ತೆ ನೋಡಿ ತುಂಬಾ ಖುಷಿಯಾಯಿತು.
ಗುರುಪ್ರಸಾದ ತಿಮ್ಮಾಪುರ
ಮಣಿಪಾಲ
ಹಾಯ್ ಸುಧನ್ವ
ಸುಮಾರು 4 ವರ್ಷಗಳ ಹಿಂದೆ ವಿ.ಕ ದಲ್ಲಿ ನಿಮ್ಮದೊ0ದು ಲೇಖನ ಬಂದಿತ್ತು, ಅದು ಜಿಡ್ಡು ಕೃಷ್ಣಮೂರ್ತಿಯವರ ಫಿಲಾಸಫಿಯ ಬಗ್ಗೆ ಇದ್ದಿತೆಂದು ಕಾಣುತ್ತದೆ
ಆಗಿನಿಂದ ನೀಮಗೊಂದು ಪತ್ರ ಬರೆಯಬೇಕೆಂದುಕೊಂಡವನಿಗೆ ಈಗ ಸಾಧ್ಯವಾಗುತ್ತಿದೆ :-) (ಎಲ್ಲ ಅಂತರ್ಜಾಲದ ಮಹಿಮೆ) ಆಗ ನೀವು ಬಹುಶ: ಕಾಲದ ಅಸ್ತಿತ್ವದ
ವಿಚಾರವನ್ನು ಬರೆದಿದ್ದಿರಿ ಎನಿಸುತ್ತದೆ. ಅದೇನೆ ಇರಲಿ ನಿಮ್ಮ ಲೇಖನಗಳನ್ನು ಮತ್ತೆ ನೋಡಿ ತುಂಬಾ ಖುಷಿಯಾಯಿತು.
ಗುರುಪ್ರಸಾದ ತಿಮ್ಮಾಪುರ
ಮಣಿಪಾಲ
thanks a lot.
-sudhanva
Post a Comment