November 09, 2007

ನಗರದ ನಂದಾದೀಪದ ಸುತ್ತ ಹಳ್ಳಿಯ 'ಅಕ್ಷರ’ಚಿಟ್ಟೆ

ಬೆಂಗಳೂರಿನಲ್ಲಿ ಹಚ್ಚಿದ ನಕ್ಷತ್ರಕಡ್ಡಿಗಳಲ್ಲಿ ಹಲವರಿಗೆ ಊರಿನ ದಾರಿ ಕಾಣುತ್ತಿರುತ್ತದೆ. ಗಗನಕ್ಕೆ ಚಿಮ್ಮಿದ ರಾಕೆಟ್‌ನಲ್ಲಿ ಮನಸ್ಸು ಪ್ರಯಾಣ ಮಾಡುತ್ತದೆ. ಊರು ಬಿಟ್ಟು ಬಂದು ಪ್ರತಿರಾತ್ರಿಯೂ ಬೆಂಗಳೂರಿನ ನಿಯಾನ್ ದೀಪಗಳ ಬೆಳಕಿನಲ್ಲಿ ಮೀಯುತ್ತಿರುವವರಿಗೆ, ಇದು ಹಳ್ಳಿಯ ಅಕ್ಷರದೀಪ. ಊರಿಗೆ ಹೋಗಲು ಟಿಕೆಟ್, ರಜೆ ಸಿಕ್ಕದವರಿಗೆ ಬೋನಸ್ !


ತುಳಸೀಕಟ್ಟೆಯ ಸುತ್ತಲೂ ಹತ್ತಾರು ಪುಟ್ಟ ಪುಟ್ಟ ಕ್ಯಾಂಡಲ್‌ಗಳು ಉರಿಯುತ್ತಿವೆ. ನಾಲ್ಕು ಮೂಲೆಗಳಿಗೆ ಮಾತ್ರ ಒಂದೊಂದು ಮಣ್ಣಿನ ಹಣತೆ. (ಅವು ಊರಲ್ಲೀಗ ಸಿಗುವುದಿಲ್ಲವೆಂದು ಬೆಂಗಳೂರಿನ "ಬಿಗ್ ಬಜಾರ್’ನಿಂದ ತರಿಸಿದ್ದು. ) ಕಟ್ಟೆಯಲ್ಲಿ ಸೊಂಪಾಗಿ ಹಚ್ಚ ಹಸಿರಾಗಿ ಬೆಳೆದ ತುಳಸೀ ಗಿಡ. ಅದರ ಕದಿರುಗಳನ್ನೆಲ್ಲ ಅಮ್ಮ ಸಂಜೆಯಷ್ಟೇ ಕಿತ್ತಿದ್ದಾಳೆ. ಕಟ್ಟೆಯೆದುರು ಸೆಗಣಿ ಸಾರಿಸಿ ಒಪ್ಪವಾದ ನೆಲದಲ್ಲಿ ಹೂವಿನೆಳೆಯ ರಂಗೋಲಿ. ಪಕ್ಕದಲ್ಲಿ ಬಲಿಯೇಂದ್ರ ಹಾಗೂ ಆತನ ಪತ್ನಿಯ ಪ್ರತೀಕವಾಗಿ ಹಾಲೆ ಮರದ ಎರಡು ಕಂಬಗಳು. (ವಾಮನನಿಂದ ಪಾತಾಳಕ್ಕೆ ತಳ್ಳಲ್ಪಟ್ಟಿರುವ ಬಲಿ ಚಕ್ರವರ್ತಿಯು ಬಲಿ ಪಾಡ್ಯಮಿಯ ಈ ಒಂದುದಿನ ಮಾತ್ರ ಭೂಮಿಗೆ ಬರುತ್ತಾನಂತೆ) ನಾಲ್ಕಡಿ ಎತ್ತರದ ಆ ಎರಡು ಕಂಬಗಳಿಗೆ ಅಡ್ಡಕ್ಕೆ ಮತ್ತು ಮೂಲೆಯಿಂದ ಮೂಲೆಗೆ ಅಡಿಕೆ ಮರದ ಸಲಕೆಗಳು. ಅವು ಮುಚ್ಚಿ ಹೋಗುವಂತೆ ತುಳಸಿ, ಲಂಬಪುಷ್ಪ, ಕೇಪಳೆ, ದಾಸವಾಳ, ಸದಾಮಲ್ಲಿಗೆ, ರಥಪುಷ್ಪ ಹೀಗೆ ಅಂಗಳದಲ್ಲಿ ಬೆಳೆದ, ತೋಟದಲ್ಲಿ ಕೈಗೆ ಸಿಕ್ಕಿದ ಹೂಗಳ ಹಾರ. ಗೋಲಿಕಾಯಿಯಷ್ಟು ದೊಡ್ಡದಿರುವ ಹಸಿರು ಅಂಬಳ ಕಾಯಿಗಳನ್ನು ಬಾಳೆನಾರಿನಲ್ಲಿ ಸುರಿದು ಸಿದ್ಧವಾದ ಉದ್ದನೆಯ ಮಾಲೆ. ಮನೆಯೆದುರಿನ ತುಳಸೀಕಟ್ಟೆಯೇ ಬೃಂದಾವನವಾಗುವುದಕ್ಕೆ ಇನ್ನೇನು ಬೇಕು ?

ಮುದುಕ ನಾರಾಯಣ ಆಚಾರಿ ನಿನ್ನೆಯೇ ಬಂದು ಮರದ ಅಟ್ಟೆಯನ್ನು ಅಂಗಳದೆದುರಿನ ಗಿಡವೊಂದರಲ್ಲಿ ಸಿಕ್ಕಿಸಿ ಹೋಗಿದ್ದಾನೆ. ಚತುರ್ಭುಜಗಳ ಆ ಮೂರು ಅಟ್ಟೆಗಳನ್ನು ಬಲಿಯೇಂದ್ರನ ಮರಕ್ಕೆ ಕಿರೀಟದಂತೆ ತೊಡಿಸಲಾಗುತ್ತದೆ. ಕಳೆದ ಬಾರಿ ಅದನ್ನು ಮೂವತ್ತು ರೂಪಾಯಿಗೆ ಮಾಡಿಕೊಟ್ಟಿದ್ದ ಆಚಾರಿ, ಈ ಬಾರಿ ನಲ್ವತ್ತಾದರೂ ಕೊಡಬೇಕೆಂದು ಪಟ್ಟು ಹಿಡಿದಿದ್ದಾನೆ. 'ಪ್ರತಿ ವರ್ಷ ಹತ್ತತ್ತು ರೂಪಾಯಿ ಜಾಸ್ತಿ ಮಾಡಿದ್ರೆ ಹೇಗೆ? ಅಡಿಕೆ ರೇಟು ಹಾಗೆ ಜಾಸ್ತಿಯಾಗ್ತಾ ಹೋಗ್ತದಾ?’ ಅಂತ ಹೇಳಿಕೊಂಡೇ ಅಪ್ಪ ನಲ್ವತ್ತು ರೂಪಾಯಿ ಕೊಟ್ಟಿದ್ದಾರೆ. 'ಪಾಪ, ಇವ ಇರುವಷ್ಟು ದಿನ ತಂದುಕೊಟ್ಟಾನು. ಇನ್ನು ಇವನ ಮಕ್ಕಳು ಮರದ ಕೆಲ್ಸ ಮಾಡ್ತಾ ಇದ್ದಾರೋ ಇಲ್ವಾ ಅನ್ನೋದೇ ಗೊತ್ತಿಲ್ಲ. ಮಾಡಿದರೂ ಅವರು ಇದನ್ನೆಲ್ಲಾ ಮನೆ ಬಾಗಿಲಿಗೆ ತರ್‍ತಾರಾ? ಅಥವಾ ನಮ್ಮ ಮಕ್ಕಳಾದರೂ ಈ ಬಲಿಯೇಂದ್ರ ಹಾಕ್ತಾರೆ ಅಂತ ಏನು ಗ್ಯಾರಂಟಿ?’ ಎನ್ನುತ್ತಾ ಕನ್ನಡಕದ ಮೇಲಿನಿಂದ ಮಕ್ಕಳನ್ನು ನೋಡಿ ನಗುತ್ತಾರೆ. ಆದರೆ ಅವರ ಪ್ರಶ್ನೆಯಲ್ಲಿ, ಹಾಸ್ಯದಲ್ಲಿ - ಮಕ್ಕಳು ತನ್ನ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತಾರೆನ್ನುವ ಅಚಲ ವಿಶ್ವಾಸ ತುಂಬಿದಂತಿರುತ್ತದೆ !

ಬಲಿ ಪಾಡ್ಯಮಿಯ ದಿನದ ಸಂಜೆಯಲ್ಲೂ ವಿಶೇಷ ಆಹ್ಲಾದವಿದೆ. ಅಡುಗೆಮನೆ ಸತತವಾಗಿ ಶಬ್ದ ಮಾಡುತ್ತಲೇ ಇರುತ್ತದೆ. ಮಕ್ಕಳು ಹೂ ಕೊಯ್ದು ಬಲಿಯೇಂದ್ರನ ಅಲಂಕಾರದಲ್ಲಿ ಮಗ್ನರಾಗಿದ್ದಾರೆ ; ಆಗಾಗ ತಲೆ ಮೇಲೆತ್ತಿ ಆಕಾಶ ಶುಭ್ರವಾಗಿರುವುದನ್ನು ಕಂಡು ಖುಶಿಗೊಳ್ಳುತ್ತಾರೆ. ಸೀಮೆಎಣ್ಣೆ ತುಂಬಿ ಹೊಸಬತ್ತಿ ಹಾಕಿದ ಹಿತ್ತಾಳೆಯ ದೀಪಗಳನ್ನೆಲ್ಲ ಸಾಲಾಗಿ ಜೋಡಿಸಿದ ಅಜ್ಜಿ 'ಇಕೊ ನೋಡು, ಕಾಲಾಳು...ರಥ...ಆನೆ...ಮಂತ್ರಿ ಎಲ್ಲ ರೆಡಿ’ ಅನ್ನುತ್ತಿದ್ದಾರೆ. ಮುಗಿಯದ ಕೆಲಸಕ್ಕೆ ಬಯ್ದುಕೊಳ್ಳುತ್ತಾ , ಒಬ್ಬರಾದ ನಂತರ ಒಬ್ಬರಿಗೆ ಸ್ನಾನಕ್ಕೆ ಹೋಗುವ ಧಾವಂತ. ಎಲ್ಲರ ಎಲ್ಲ ಕೆಲಸಗಳಲ್ಲೂ ಏನೋ ಚುರುಕುತನ.
ರಾತ್ರಿಯ ಬೆಳಕಿಗಾಗಿ ಸಂಜೆ ನಿಧಾನವಾಗಿ ಕಾವೇರಿಸಿಕೊಳ್ಳುತ್ತಿದೆ.

ರಾತ್ರಿ ಎಂಟಕ್ಕೆ ಅಪ್ಪ ಬಿಳಿ ಪಂಚೆಯುಟ್ಟು ಮೈಮೇಲೆ ಶಾಲನ್ನು ಎಳೆದುಕೊಳ್ಳುತ್ತಾ ಬಲಿಯೇಂದ್ರನ ಎದುರು ಆಗಮಿಸುತ್ತಾರೆ. ಪೂಜೆಗೆ ಬೇಕಾದ ಪರಿಕರಗಳನ್ನೆಲ್ಲಾ ಸಿದ್ಧಪಡಿಸಿಡುವ ಜವಾಬ್ದಾರಿ ಹೆಂಗಸರದ್ದ್ದು. ಅಪ್ಪನಿಗೆ ಮಂತ್ರಗಳೇನೂ ಸರಿಯಾಗಿ ಬರುವುದಿಲ್ಲ . (ಅಂದರೆ ಏನೇನೂ ಬರುವುದಿಲ್ಲ ಅಂತಲೇ ಅರ್ಥ ! ) ಆದರೆ ಕ್ರಿಯೆ ಬಹಳ ಜೋರು. ಹರಿವಾಣ, ಕೌಳಿಗೆ ಸಕ್ಕಣ, ಹೂವು-ಗಂಧ ತಕ್ಷಣ ಕೈಗೆ ಸಿಗದಿದ್ದರೆ ಸಿಟ್ಟೇ ಬಂದೀತು ! ಸೀರೆ ಎತ್ತಿ ಕಟ್ಟಿ ಎತ್ತರೆತ್ತರದ ಹಳೆ ಮನೆಯ ಮೆಟ್ಟಿಲುಗಳನ್ನು ಹತ್ತಿಳಿಯುತ್ತಾ "ದೀಪಕ್ಕೆ ಬತ್ತಿ ಹಾಕುದ್ರಲ್ಲಿ , ಗಂಧ ತೇಯೋದ್ರಲ್ಲಿ ನಾನು ಎಕ್ಸ್‌ಪರ್ಟು’ ಅಂತ ಅಜ್ಜಿ ಹೇಳುವುದನ್ನು ಅವರ ಬಾಯಿಯಿಂದಲೇ ಕೇಳಬೇಕು. ಅಮ್ಮನಿಗೆ ಮಾತ್ರ, ಎಲ್ಲಿ ಯಾವುದಕ್ಕೆ ಅಪ್ಪ ಬೈಯುತ್ತಾರೋ ಅಂತ ಭಯ. ಮೂವತ್ತು ವರ್ಷಗಳಿಂದ ಬರುತ್ತಿರುವ ಮನೆ ಕೆಲಸದವನಿಗೋ, ಅಂದು ಭಾರೀ ನಿಷ್ಠೆ , ಶ್ರದ್ಧಾ ಭಕ್ತಿ. ಸಾಯಂಕಾಲ ಮಿಂದು ಮಡಿಯಾಗಿ ಬಂದರೆ ರಾತ್ರಿಯ ಬಾರಣೆ ಮುಗಿದ ನಂತರ ಎಲೆಅಡಿಕೆ ಹಾಕಿ ಮಾತಾಡಿ ಹನ್ನೊಂದು ಗಂಟೆಗೇ ಅವನು ಹೊರಡುವುದು. 'ನೀವು ಪಟಾಕಿ ಹೊಟ್ಟುಸುದ್ರಲ್ಲಿ ನನ್ನ ದೀಪ ನಂದಿ ಹೋಯ್ತು’, 'ರಾಮಾ, ನಿಮ್ಮ ಪಟಾಕಿ ಶಬ್ದಕ್ಕೆ ಕೈಲಿದ್ದ ಮಜ್ಜಿಗೆಯೂ ಚೆಲ್ಲಿ ಹೋಯ್ತು ’ ಅಂತೆಲ್ಲ ಹೇಳಿಕೊಳ್ಳುವ ಅಮ್ಮ-ಚಿಕ್ಕಮ್ಮ-ಅಜ್ಜಿ -ಅತ್ತೆಯಂದಿರು, ಮಕ್ಕಳಿಗೆ ಯಾವ ಲೆಕ್ಕ? ಬಿದಿರಹಿಂಡಿಲಿಂದ (ಫ್ಲವರ್‌ಪಾಟ್)ಎತ್ತರಕ್ಕೆ ಚಿಮ್ಮಿದ ಅಗ್ನಿವರ್ಷದ ಬೆಳಕಿನಲ್ಲಿ ಸುತ್ತಲಿನ ಬಣ್ಣದ ಕ್ರೋಟನ್ ಗಿಡಗಳೂ ತೀರಾ ಮಂಕಾಗಿ ಕಾಣುತ್ತವೆ.

ಕವಿ ಅಡಿಗರು ಹೇಳುತ್ತಾರೆ 'ಮಿಂಚು ಕತ್ತಲ ಕಡಲ ಉತ್ತು ನಡೆದಿದೆ ಬೆಳಕು ಹಡಗು ದಿಗ್ದೇಶಕ್ಕೆ , ಸಿಡಿಮದ್ದಿನುಂಡೆ ಪ್ರತಿ ಮನೆಯಲ್ಲಿ !’ ಅಜ್ಜಿ ತನ್ನೆಲ್ಲ ಶಕ್ತಿ ಒಗ್ಗೂಡಿಸಿ ತೇಲುಗಣ್ಣಾಗಿಸಿ ಶಂಖ ಊದುತ್ತಾರೆ. ಎರಡಡಿ ಅಗಲದ ಹರಿವಾಣಕ್ಕೆ ಸಿಂಬೆ ಸುತ್ತಿದ ಕೋಲಿನಿಂದ ಭಂ ಭಂ ಭಂ ಎಂದು ಚಿಕ್ಕಯ್ಯ ಬಾರಿಸುತ್ತಾರೆ. ಮಕ್ಕಳಿಗೆಲ್ಲ ಅದೊಂದು ರೋಮಾಂಚಕಾರಿ ದೃಶ್ಯ. ಒಂಬತ್ತು ಗಂಟೆಗೆ ಪೂಜೆ ಮುಗಿಯುತ್ತದೆ. ತೋಟದಾಚೆಗಿನ ದೇವಸ್ಥಾನದಲ್ಲೂ 'ಬಲೀಂದ್ರ ಬಲೀಂದ್ರ ಕೂ, ಬಲೀಂದ್ರ ಬಲೀಂದ್ರ ಕೂ’ ಎಂದು ಊರವರೆಲ್ಲ ಕೂಗಿ ಬಲಿಯೇಂದ್ರನನ್ನು ಭೂಮಿಗೆ ಕರೆಯುವ ಸ್ವರ ಕೇಳಿದಾಗಲೇ ಮನೆಯಲ್ಲಿದ್ದವರಿಗೂ ಪೂಜೆ ಪೂರ್ತಿಯಾದ ತೃಪ್ತಿ. ಗೋಪೂಜೆಗೆಂದು ಹಟ್ಟಿಗೆ ಹೋಗಿ ದನ ಗಂಗೆಗೆ ಕತ್ತಲಲ್ಲೇ ಆರತಿ ಎತ್ತುವಾಗಲಂತೂ ಆ ಪರಿಸರವೇ ಪೂರ್ತಿ ಹೊಸದಾಗಿ ಕಾಣಿಸುತ್ತದೆ. ನಾವು ತಿನ್ನುವ ಬರಿಯಕ್ಕಿ ದೋಸೆ, ಬಿಸಿನೀರು ಕಡುಬು, ಸಿಹಿ ಅವಲಕ್ಕಿ , ಸೇಮಿಗೆಗಳನ್ನು ಅದೊಂದು ದಿನ ತಿನ್ನಲು ದನಕ್ಕೂ ಕೊಡುತ್ತಾರೆ. ಅದಕ್ಕೆ ಆರತಿ ಎತ್ತಿ, ತೀರ್ಥ ಪ್ರೋಕ್ಷಿಸಿದ ಮೇಲೆ ಹಣೆಗೆ ನಾಮ ಹಾಕುವುದಕ್ಕೆ ಮಾತ್ರ ಅಪ್ಪ ಬಹಳ ಪರದಾಡಬೇಕಾಗುತ್ತದೆ. ಘಂಟಾಮಣಿ - ಪಟಾಕಿಗಳ ಸದ್ದು , ಆರತಿಯ ಬೆಳಕಿಗೆ ಹೆದರುತ್ತಾ ದೋಸೆಗೆ ನಾಲಗೆ ಚಾಚುತ್ತಾ ಅದು ಗೋಣು ತಿರುಗಿಸುತ್ತಲೇ ಇರುತ್ತದೆ. ಎಳೆಯ ಹೊರಟ ನಾಮಗಳೆಲ್ಲಾ ಮೂತಿಗೋ, ಕೊಂಬಿಗೋ ತಾಗುತ್ತವೆ. ಅಂತೂ ಆ ಕಂದು ದನದ ಹಣೆಯ ಮೇಲೆ ಮಾತ್ರ ಬೆಳ್ಳಗೆ ಕೂದಲಿರುವಲ್ಲಿಗೇ ಕುಂಕುಮದ ನಾಮ ಎಳೆಯುತ್ತಾರೆ ಅಪ್ಪ. ಆಗ ಹಸು ಅತ್ಯಂತ ವಿಚಿತ್ರವಾಗಿ ಕಾಣಿಸುತ್ತದೆ .

'ದೀಪಗಳು ಮಂಗಳ ಪ್ರತೀಕಗಳಾಗಿ ಲೋಕದಲ್ಲಿ ಎಲ್ಲ ಸ್ಥಳಗಳಲ್ಲೂ ಬೆಳಗುತ್ತಿವೆ. ದೇವರು ಹಚ್ಚಿಟ್ಟಿರುವ ದೀಪ ಸೂರ್ಯ !’ ಎನ್ನುವ ಹಿರಿಯ ಕವಿ ಪುತಿನ ಬರೆದಿದ್ದಾರೆ- "ಅನಿರ್ವಚನೀಯವಾದ ಧ್ವನಿ ಸೌಂದರ್ಯವುಳ್ಳ ಅನರ್ಘ್ಯ ದೀಪೋಪಮೆಯೊಂದು, ವಿರಹತಪ್ತ ರಾಮ, ರಾವಣ ವಧೆಯಾದ ನಂತರ ಸೀತೆಯನ್ನು ಹತ್ತಿರಕ್ಕೆ ಕರೆಯಿಸಿಕೊಂಡು ನೋಡಿ ಆಡುವ ಕಿಡಿಮಾತುಗಳಲ್ಲಿ ಕಾಣಿಸಿಕೊಳ್ಳುತ್ತದೆ.

ಪ್ರಾಪ್ತಚಾರಿತ್ರ ಸಂದೇಹಾ ಮಮ ಪ್ರತಿಮುಖೇ ಸ್ಥಿತಾ
ದೀಪೋ ನೇತ್ರಾತುರಸ್ಯೇವ ಪ್ರತಿಕೂಲಾಸಿ ಮೇ ಧೃಡಂ
ನಿನ್ನ ನಡವಳಿಕೆಯ ವಿಷಯದಲ್ಲಿ ಸಂದೇಹ ಹುಟ್ಟುವ ಸ್ಥಿತಿ ನನಗೆ ಬಂದಿದೆ. ನನ್ನಿದಿರು ನೀನು ಈಗ ನಿಂತಿದ್ದೀಯೆ. ಕಣ್ಣಿಗೆ ಬೇನೆ ಹಿಡಿದಿರುವವನಿಗೆ ದೀಪ ಹೇಗೋ ಹಾಗೆ ಈಗ ನೀನು ನನಗೆ ಹಿತವಾಗಿಲ್ಲ. ಇದು ನಿಜ. "ದೀಪೋ ನೇತ್ರಾತುರಸ್ಯೇವ’. ಆ ವೇಳೆಯಲ್ಲಿ ರಾಮ ತನ್ನ ಸೀತೆಯಲ್ಲಿ ಯಾವ ದೋಷವನ್ನೂ ಕಾಣಲಾರ, ದೀಪದಂತೆ ಆಕೆ ಶುದ್ಧೆ, ಕಲ್ಯಾಣಯುಕ್ತೆ, ತೇಜಸ್ವಿನಿ. ಬೇನೆ ಇರುವುದು ಲೋಕಾಪವಾದ ಭೀತನಾದ ತನ್ನಲ್ಲಿ , ತನ್ನ ಕಣ್ಣಿನಲ್ಲಿ. ಈ ಬೇನೆಯನ್ನು ತಂದಿರುವುದು ತಮ್ಮಿಬ್ಬರಿಗೂ ಬಾಹ್ಯವಾದ ಬಹಿಸ್ಸಮಾಜ-ತಮ್ಮ ನಿಯಂತ್ರಣಕ್ಕೆ ಮೀರಿದುದು.’

ಅವಾಗವಾಗ ಕಣ್ಣುಗಳನ್ನು ಉಜ್ಜಿಉಜ್ಜಿ ನೋಡಿಕೊಳ್ಳುತ್ತಿದ್ದೇವೆ. ಕಣ್ಣು ನೋವೆ? ನಿದ್ದೆ ಎಳೆಯುತ್ತಿದೆಯೆ? ಅಥವಾ ಈಗ ಎಚ್ಚರವಾಯಿತೆ?! 'ದೀಪಂ ದರ್ಶಯಾಮಿ’ ಅಂತ ಭಟ್ಟರು ಆರತಿ ಎತ್ತಿ ತೋರಿಸಿದಾಗೆಲ್ಲ ಅದು ನಂದಿಹೋಗುತ್ತಿದೆ. ಕರ್ಪೂರ ಕೊಟ್ಟ ಅಂಗಡಿಯವನಿಗೆ ಅವರು ಮಂತ್ರದ ಮಧ್ಯೆ ಬಯ್ಯುತ್ತಿದ್ದಾರೆ. ದೀಪಾವಳಿ ದಿನವೇ ಸೀಮೆಎಣ್ಣೆಗಾಗಿ ಕ್ಯೂ ನಿಲ್ಲಬೇಕಾಗಿ ಬಂದದ್ದಕ್ಕೆ ಗಂಡ ಕಸಿವಿಸಿಗೊಂಡಿದ್ದಾನೆ. ಜೋಪಾನವಾಗಿಟ್ಟಿದ್ದ ಹಳೇ ಪಂಚೆಯ ಒಂದು ತುಂಡನ್ನಷ್ಟೇ ಜಾಗ್ರತೆಯಿಂದ ಹರಿದು ಹೆಂಡತಿ ಹೊಸ ಬತ್ತಿ ತಯಾರಿಸುತ್ತಿದ್ದಾಳೆ. ಹಬ್ಬದ ಹಿಂದಿನ ದಿನ ಕೆಲವರ ಕಣ್ಣುಗಳೇ ಸುಟ್ಟುಹೋಗಿವೆ. ಯಾವನೋ ಅಪ್ಪ ಒಂದು ಸಾವಿರ ರೂಪಾಯಿ ಬೆಲೆಬಾಳುವ ಆಕಾಶಬುಟ್ಟಿಯನ್ನು ಮಗನಿಗೆ ತಂದುಕೊಟ್ಟಿದ್ದಾನೆ.
ಬೆಳಕು ಕೆಲವನ್ನು ತೋರಿಸುತ್ತದೆ. ಕತ್ತಲು ಕೆಲವನ್ನು ಮುಚ್ಚಿಡುತ್ತದೆ.

5 comments:

ವಿಕ್ರಮ ಹತ್ವಾರ November 9, 2007 at 3:53 PM  

ಸುಧನ್ವಾ,

ಮುಂದಿನ ದೀಪಾವಳಿಗೆ ನಿಮ್ಮೂರಿಗೆ ಬರಲಾ?- ಅಂತ ಕೇಳುವ ಅಂದುಕೊಂಡಿದ್ದೆ......ಲೇಖನದ ಕೊನೆಗೆ ಬರುವ ಹೊತ್ತಿಗೆ ಅದು ಮರೆತೇಹೋಗಿತ್ತು.

---------------------------

'ದೀಪಂ ದರ್ಶಯಾಮಿ’ ಅಂತ ಭಟ್ಟರು ಆರತಿ ಎತ್ತಿ ತೋರಿಸಿದಾಗೆಲ್ಲ ಅದು ನಂದಿಹೋಗುತ್ತಿದೆ. ಕರ್ಪೂರ ಕೊಟ್ಟ ಅಂಗಡಿಯವನಿಗೆ ಅವರು ಮಂತ್ರದ ಮಧ್ಯೆ ಬಯ್ಯುತ್ತಿದ್ದಾರೆ.

ಬೆಳಕು ಕೆಲವನ್ನು ತೋರಿಸುತ್ತದೆ. ಕತ್ತಲು ಕೆಲವನ್ನು ಮುಚ್ಚಿಡುತ್ತದೆ.
---------------------------

Thanks for the nice writeup.

ಕಳ್ಳ ಕುಳ್ಳ November 11, 2007 at 11:28 PM  

sudhanvaaa,
simply nice, nanu indaste deepavaliyannu, maduveyada modala varshada habbavannu mugisi mavana maneyinda maraliddene. kannalli ade deepa, ade roopa, ade kidi kidi pataki, manadalli jada, nenapugalalli chetana...
ninna lekana odi manassu mathe atha kadege hoguthide. hage hoda manasu vapasu barade hodare ninna lekhanave javabdari!
thanks.
-vikas

Anonymous,  November 12, 2007 at 9:20 PM  

thanx vikram.
nanoo oorige horatavanu program cancel aada nantra idannu barde. thats why.....!
-sudhanva

Avinashi November 20, 2007 at 8:08 PM  

Excellent write up.

avinashi

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP