ಇದು ಬ್ರೇಕಿಂಗ್ ನ್ಯೂಸ್ ಅಲ್ಲ !
ಕಳೆದ ಬಾರಿ ಊರಿಗೆ ಹೋಗಿದ್ದಾಗ ಒಂದು ವಿಶೇಷ ಸುದ್ದಿ ಸಿಕ್ಕಿತು.ಅಷ್ಟೊಂದು ಅಪರೂಪದ ಆ ಘಟನೆ, ಲೋಕಲ್ ಪತ್ರಿಕೆಗಳಲ್ಲಾದರೂ ಬರಬೇಕಿತ್ತು . ಜನರ ನಡುವೆಯಾದರೂ ಗಹನ ಚರ್ಚೆಯಾಗಬೇಕಿತ್ತು . ಊರಿನ ಸಾಹಿತಿಗಳಾದರೂ ಆ ಬಗ್ಗೆ ಒಂದು ಪದ್ಯವೋ ಲೇಖನವೋ ಬರೆಯಬಹುದಾಗಿತ್ತು. ಆದರೆ ಆ ಸುದ್ದಿ ಏನೂ ಆಗದೆ, ಕೆಲವರ ನಾಲಗೆಯಲ್ಲಷ್ಟೇ ಹೊರಳಿ ಸತ್ತುಹೋಯಿತು.
ದ.ಕ.ದ ಸುಳ್ಯ ತಾಲೂಕಿನಲ್ಲಿ ಅಡಿಕೆ ಕೃಷಿಯನ್ನೇ ಪ್ರಧಾನವಾಗಿ ನಂಬಿಕೊಂಡು ಮೂವರು ಅಣ್ಣತಮ್ಮಂದಿರ ಮಧ್ಯಮವರ್ಗದ ಕುಟುಂಬವೊಂದು ಬದುಕುತ್ತಿತ್ತು. ಮದುವೆ ಆಗಿ ಮಕ್ಕಳನ್ನೂ ಪಡೆದಿದ್ದ ಆ ಮೂವರು, ನಾಲ್ಕೈದು ತಿಂಗಳ ಹಿಂದೆ ಆಸ್ತಿ ಪಾಲು ಮಾಡಿಕೊಂಡು, ಹೊಸ ಮನೆ ಕಟ್ಟಿ ಪ್ರತ್ಯೇಕವಾಗಿ ಬದುಕುತ್ತಿದ್ದರು. ಹೀಗೆ ವಿಭಕ್ತವಾಗಿದ್ದ ಅಣ್ಣತಮ್ಮಂದಿರು, ಈಗ ಹೊಸ ಮನೆಗೆ ಬೀಗ ಹಾಕಿ ಮತ್ತೆ ಹಳೆ ಮನೆಯಲ್ಲೇ ಎಲ್ಲರೊಂದಾಗಿ ಬದುಕುತ್ತಿದ್ದಾರೆ ! ಇದು "ಬ್ರೇಕಿಂಗ್’ ನ್ಯೂಸ್ ಹೇಗಾದೀತು?
ನಾನಾ ಪ್ರಶ್ನೆಗಳು ನಾಲಗೆ ತುದಿಯಲ್ಲೇ ಇವೆ. ಇದು ಜಾಗತೀಕರಣಕ್ಕೆ ಪುಟ್ಟ ಕುಟುಂಬವೊಂದು ಸಡ್ಡು ಹೊಡೆದ ರೀತಿಯೆ? ಅಥವಾ ಕೃಷಿಯೊಂದನ್ನೇ ನಂಬಿಕೊಂಡ ವಿಭಕ್ತ ಕುಟುಂಬವೊಂದು ಬದುಕುವುದೇ ಕಷ್ಟ ಎಂಬ ಆರ್ಥಿಕ ಕಾರಣವೆ? ಅವಿಭಕ್ತ ಕುಟುಂಬದ ಲಾಭಗಳ ಅರಿವೆ? ಆರೋಗ್ಯ ಸಂಬಂಧಿ ಸಮಸ್ಯೆಗಳೆ? ಅಥವಾ ಯಾರಾದರೂ ಜ್ಯೋತಿಷಿಗಳು ಏನಾದರೂ ಹೇಳಿದರೆ?!
ಸುಮಾರು ಏಳು ವರ್ಷಗಳ ಹಿಂದೆ ನಮ್ಮ ಮನೆಯಲ್ಲಿ ಒಂಭತ್ತು ಜನರಿದ್ದರು. ಈಗ ಮೂವರು ! ಕಳೆದ ಆರೇಳು ವರ್ಷಗಳಲ್ಲಿ ದ.ಕ.ದಲ್ಲಂತೂ ನೂರಾರು ಕುಟುಂಬಗಳು ಛೇದನಗೊಂಡವು. ಮೌಲ್ಯಗಳು ಹೊಸದಾಗಿ ಬಂದಂತೆ ಬದುಕುವ ಶೈಲಿಯಲ್ಲೂ ಬದಲಾವಣೆ ಅಗತ್ಯವಾಯಿತೇನೋ. ದೊಡ್ಡಮನೆ, ಆಳುಕಾಳು, ತೋಟಗದ್ದೆಗಳೆಲ್ಲ ನಿಷ್ಪ್ರಯೋಜಕ-ಹೊರೆ ಅಂತ ಜನ ಭಾವಿಸತೊಡಗಿದಂತೆ ಈ ಪಾಲು ಪಂಚಾತಿಕೆ ಆರಂಭವಾಗಿರಬೇಕು.
ಹಳ್ಳಿ-ನಗರ ಸಂಪರ್ಕ ಜಾಸ್ತಿಯಾದಂತೆ ಹಳ್ಳಿಗರನ್ನು ಸೆಳೆಯತೊಡಗಿದ್ದು ನಗರಗಳ ಸುಖ ಲೋಲುಪತೆ. ಪ್ರತಿಮನೆಯ ಒಬ್ಬರಾದರೂ ಬೆಂಗಳೂರು ಸೇರಿ, ರಾಜಧಾನಿಯ ರಂಪಾಟಗಳು ಊರುಗಳನ್ನೂ ತಲುಪತೊಡಗಿದವು. ಕಾಂಚಾಣದ ಆಸೆ ಕೈಹಿಡಿದೆಳೆಯಿತು. ದುಡ್ಡೊಂದಿದ್ದರೆ ಎಲ್ಲವೂ ಸಾಧ್ಯ ಎಂಬ ಯೋಚನೆಗೆ ನಗರಗಳು ಇಂಬು ನೀಡಿದವು. ಮಹಾನಗರಗಳಲ್ಲಿ ಹೆಚ್ಚಾದ ಉದ್ಯೋಗವಕಾಶದಿಂದಾಗಿ ಹಳ್ಳಿಯಿಂದ ನಗರಕ್ಕೆ "ಸಾಂಸ್ಕೃತಿಕ ವಲಸೆ’ಯೂ ಆರಂಭವಾಯಿತು. ಚಿತ್ರ ಕಲಾವಿದರು, ನಟರು, ಒಳ್ಳೆಯ ಮಾತುಗಾರರು ನಗರಗಳ ಟಿವಿ-ಪತ್ರಿಕೆ-ರೇಡಿಯೊಗಳೊಳಗೆ ನುಗ್ಗಿಕೊಂಡರು. ಹುಡುಗಿಯರೂ ಉನ್ನತ ವಿದ್ಯಾಭ್ಯಾಸ ಮಾಡತೊಡಗಿ, ಹಳ್ಳಿಯಲ್ಲಿರುವ ಹುಡುಗರನ್ನು ಅವರು ಒಪ್ಪುವುದಿಲ್ಲ ಎಂಬಂತಾಯಿತು. ಎಂಜಿನಿಯರಿಂಗ್-ಮೆಡಿಕಲ್ ಆಸೆಯು ಹುಚ್ಚು ಕುದುರಿಯೇರಿ ಸಾಗಿತು. ತೋಟಕ್ಕೆ ಹೋಗೋದು, ಹಾಲು ಕರೆಯೋದು, ಸೆಗಣಿ ತೆಗೆಯೋದು ಪರಮಕಷ್ಟವೆಂಬ ಭಾವ ಮಹಿಳೆಯರಲ್ಲಂತೂ ಹೆಚ್ಚಾಗಿ ಬೇರೂರತೊಡಗಿತು. ಪೇಟೆಯಲ್ಲಿರುವ ಹುಡುಗರಾದರೆ, ಅವರೊಂದಿಗೆ ಅಪ್ಪ ಅಮ್ಮ ಇರುವುದಿಲ್ಲ ಎಂಬುದು, ವಿವಾಹ ಬಂಧನದ ಮುಖ್ಯ ಸಂಗತಿಯಾಯಿತು. ಹಳ್ಳಿಯಲ್ಲಿರುವ ಹುಡುಗನಿಗೆ ವಧು ನೋಡುವುದಕ್ಕೆ ಹೊರಡುವ ಮೊದಲು ಅಪ್ಪ ಮಗನಿಗೆ ಹೇಳಿದರು -"ಅಪ್ಪ ಅಮ್ಮ ಇರುವ ಹುಡುಗ ಆದೀತು ಅನ್ನುವ ಹುಡುಗಿಯಾದರೆ ನೀನು ನೋಡು, ಅಪ್ಪ ಅಮ್ಮ ಇಲ್ಲದ ಹುಡುಗನೇ ಆಗಬೇಕು ಅಂತಾದರೆ ನಾನು ನೋಡುತ್ತೇನೆ !’
ಬರ-ಪ್ರವಾಹ-ಅತಿವೃಷ್ಟಿಗಳ ಜತೆಗೆ ಬೆಳೆಗಳ ಬೆಲೆ ಕುಸಿದು, ಕೃಷಿಯೊಂದನ್ನೇ ನಂಬಿದರೆ ಕಂಗಾಲು ಎಂಬ ಭಾವ ದೃಢವಾಯಿತು. ಮನೆಯಲ್ಲಿ ಜನ ಜಾಸ್ತಿ ಇದ್ದಷ್ಟೂ ಖರ್ಚು ಜಾಸ್ತಿ , ಉತ್ಪಾದನೆ ನಾಸ್ತಿ ಎಂಬ ವಾದ ಶುರುವಾಯಿತು. ತನ್ನ ಮಗುವಿನ ಭವಿಷ್ಯದ ಬಗ್ಗೆ ಸಂಪೂರ್ಣ ಲಕ್ಷ್ಯ ಕೊಡಲು ತನಗೆ ಕಷ್ಟವಾಗುತ್ತಿದೆ ಎಂಬುದು ಕೂಡು ಕುಟುಂಬದ ಎಲ್ಲ ತಂದೆತಾಯಂದಿರ ಯೋಚನೆಯಾಯಿತು. "ಬೆಂಗಳೂರಲ್ಲೇ ಇರೋದು ನಮಗೆ ಬೇಡ. ಎಲ್ಲ ವ್ಯವಸ್ಥೆಗಳಿರುವ ಹಳ್ಳಿಮನೆ ನಮಗೆ ಬೇಕು. ಬೇಕಾದಾಗ ಸಿಟಿಗೆ ಹೋಗಿ ಬರುವಂತಿರಬೇಕು’ ಈ ಮಾತನ್ನು ಹಳ್ಳಿಯ ಅಮ್ಮಂದಿರು ಆಗಾಗ ಹೇಳಲಾರಂಭಿಸಿದರು. ಈಗಲೂ ಯಂತ್ರದಂತೆ ಏನಾದರೊಂದು ಕೆಲಸ ಮಾಡುತ್ತಿರುವ ಅಜ್ಜಿಯಂದಿರಿಗೆ ಇಂತಹ ಬಯಕೆಗಳು ಇರಲಿಲ್ಲ. ಸಮೂಹಪ್ರಜ್ಞೆ ಕಡಿಮೆಯಾಗುತ್ತಾ ಸ್ವಾರ್ಥ ಜಾಗೃತವಾಗತೊಡಗಿತು.
ಹೀಗೆ ನಾವು ಹೇಳುತ್ತಲೇ ಹೋಗಬಹುದು ! ಆದರೆ ಪ್ರತಿಯೊಂದು ಮನೆಯ ಪ್ರತಿಯೊಬ್ಬ ಸದಸ್ಯನೂ ಮನೆ ವಿಭಜನೆಗೆ ತನ್ನದೇ ಕಾರಣವನ್ನು ಹೇಳುವುದೇ ಸಂಸಾರದ ವಿಸ್ಮಯ. ವಿಭಕ್ತ-ಅವಿಭಕ್ತ ಕುಟುಂಬಗಳಲ್ಲಿ ಯಾವುದು ಉತ್ತಮ ಯಾವುದು ಕನಿಷ್ಠ ಎಂಬುದು ಪ್ರಶ್ನೆಯಲ್ಲ. ಬೇರೆಬೇರೆ ಮನೆಗಳಲ್ಲಿದ್ದೂ ಒಂದೇ ಮನೆಯಲ್ಲಿದ್ದಂತೆ ಕೊಡುಕೊಳ್ಳುವಿಕೆಯಲ್ಲಿ ವ್ಯವಹರಿಸುತ್ತ, ಸರಸವಾಡುತ್ತ ಬದುಕುವ ಜನ ಕೂಡಾ ಇದ್ದಾರೆ. ತಮ್ಮತಮ್ಮ ಪಾಲಿಗಾಗಿ ಮಹಾಯುದ್ಧವನ್ನೇ ನಡೆಸಿದ ಕೌರವಪಾಂಡವರೂ ನಮ್ಮೊಳಗಿದ್ದಾರೆ. "ಇಹ ಸಂಸಾರೇ ಬಹು ದುಸ್ತಾರೇ...ಕೃಪಯಾ ಪಾರೇ ಪಾಹಿ ಮುರಾರೆ...!
ಆ ಸಮ್ಮಿಶ್ರ ಸರಕಾರ ಶಾಶ್ವತವಾಗಿರಲಿ ಅಂತ ಹಾರೈಸೋಣ. ಆದರೆ....
ಒಡೆದಿದ್ದ ಮನೆ ಒಂದಾಗುವುದಕ್ಕೆ- ಆರ್ಥಿಕ ಸಮಸ್ಯೆಯೇ ಮುಖ್ಯ ಕಾರಣ ಅಂತಾದರೆ ನಿಮಗೆ ದುಃಖವಾಗುತ್ತದೆಯೆ?
1 comments:
ಸುಧನ್ವರೇ,
ನೀವೇ ಕೇಳಿದ್ದನ್ನೇ ನಾನೂ ಕೇಳುತ್ತಿದ್ದೇನೆ. "ಇದು ಬ್ರೇಕಿಂಗ್ ನ್ಯೂಸ್ ಹೇಗಾದೀತು"? ಅಂತ.
ಯಾಕೆಂದರೆ ಅಣ್ಣ ತಮ್ಮಂದಿರು ಮನೆಯನ್ನು ಒಂದು ಸಾರಿ ಬ್ರೇಕ್ ಮಾಡಿಕೊಂಡು ಹೋದರು. ಈಗ ಬ್ರೇಕ್ ಆಗಿದ್ದನ್ನು ಜೋಡಿಸಿದರು. ಹಾಗಾಗಿ ಇದು Un-Breaking ನ್ಯೂಸ್.
ವಿಷಯ ಚಿಕ್ಕದಾದ್ರೂ, ಅದರ ಎಳೆ ಹಿಡಿದುಕೊಂಡು ಜನರ ಮನಸ್ಥಿತಿ ಬದಲಾದುದನ್ನು ಎಳೆ ಎಳೆಯಾಗಿ ಬಿಡಿಸಿದ್ದೀರಿ. ಕೊನೆಯ ವಾಕ್ಯದಲ್ಲಿರುವ ಸಾಧ್ಯತೆಯೂ ಕಟುವಾದ ವಾಸ್ತವ.
Post a Comment