ಮಾತಿನಲಿ ಮಹಾ ಜಿಪುಣ ಕೊಂಕು ಗೇಲಿಯಲಿ ನಿಪುಣ
ಕಣ್ಣಿನಲಿ ಕೆಂಡ, ಚೂರಿ ಮೀಸೆ, ಎದೆ ಕಬ್ಬಿಣದ ಕುಲುಮೆ
ನರ ಉಬ್ಬಿದ ಆಜಾನುಬಾಹು, ಮರುಕದಲ್ಲಿ ವೀರಬಾಹು !
ಸದಾ ಕನ್ಯಾಬಂಧನ, ದೀರ್ಘ ಚುಂಬನ, ಕರೆವಾಣಿ ರಿಂಗಣ.
ಒರಟು ದಪ್ಪ ಬೆರಳುಗಳಲಿ ಪೋಣಿಸಿಕೊಳುವ ಸಿಗರೇಟು
ತ್ರಿಕಾಲ 'ಅನಾಮಿಕಾಭ್ಯಾಂ ನಮಃ ಮಧ್ಯಮಾಭ್ಯಾಂ ನಮಃ'
ಹೆಸರು ರಮೇಶ ಕೋಪ ಹಮೇಶಾ ಅನುಗಾಲ ಪರವಶ.
ಹುಟ್ಟು ಪ್ರತಿಭಾವಂತ ಸಾಹಸವಂತ ಕ್ಷಣಕ್ಷಣಕು ಧಾವಂತ
ವಯಸ್ಸಿನಲಿ ಸಣ್ಣ, ಕೆಂಪು ತುಟಿ ಸುಂದರಿಯರಿಗೆ ಸುಣ್ಣ !
ಪಾತ್ರ ಪ್ರವೀಣ, ನಟನಾ ಜಾಣ, ಪ್ರೀತಿಯಲಿ ದುಶ್ಯಾಸನ.
ಅಕಾರಣ ವೈರಿ, ಅನಗತ್ಯ ವ್ಯಾಮೋಹಿ, ಅತ್ಯಧಿಕ ಗರ್ವಿ
ಮಾತಿನ ಮೊನೆಯಲ್ಲಿ ಎಲ್ಲವನೂ ಚುಚ್ಚಿಡುವ ಪ್ರವೃತ್ತಿ
ಮಹಾರಾಜನ ವೇಷ ಕಳಚಿದರೂ ಬೇಕು ಪಟ್ಟದ ಕತ್ತಿ !
ಕೇಳಿ ಅವನ ಅಟ್ಟಹಾಸ -
'ಬರಲಿ ಎಲ್ಲಿದ್ದಾನೆ ವರಾಹ, ಎಲ್ಲಿ ನರಸಿಂಹ?'
ಅವರ ಎದೆ ಸೀಳುವ ಉಗುರಿಗೂ ಹಾಕಿದ್ದಾನೆ ಬಣ್ಣ !
ಎಲ್ಲರೂ ಅಂತಾರೆ ಇವನಿಗೆ ಅಣ್ಣ ಅಣ್ಣ
ಇದೆಂಥಾ ಬಾಂಡ್ ಅಣ್ಣ
ಇವನೆ ಖಳನಾಯಕ - ಎಲ್ಲರಿಗೂ ಅಣ್ಣ !
0 comments:
Post a Comment