ಹೆಂಡತಿಗಾಗಿ ಬರೆದ ಗದ್ಯ
ಹೇ,
ಮದುವೆಯಾಗಿ ಇಷ್ಟು ಬೇಗ ನಿನ್ನ ಬರ್ತ್‌ಡೇ ಬರುತ್ತದೆ ಅಂದುಕೊಂಡಿರಲಿಲ್ಲ ! ಆವತ್ತು ನಿಮ್ಮ ಮನೆಯಿಂದ ಜಾತಕ ಬಂದಾಗ ಅದರಲ್ಲಿದ್ದ ಜನ್ಮ ದಿನಕ್ಕೂ, ಬೇರೆ ಕಡೆ ನನಗೆ ಸಿಕ್ಕಿದ ನಿನ್ನ ಜನ್ಮ ದಿನಕ್ಕೂ ತಾಳೆಯಾಗಿರಲಿಲ್ಲ ಅಂತ ನನ್ನ ನೆನಪು. ಆದರೆ ನನ್ನ ಅನುಮಾನವನ್ನು ನೀನು ನಿರಾಕರಿಸುತ್ತಲೇ ಬಂದಿದ್ದೀಯ ! ಬೇಜಾರಿಲ್ಲ, ’ಆಗಸ್ಟ್ ಹನ್ನೊಂದರಂದೇ ನಾನು ಹುಟ್ಟಿದ್ದು’ ಅಂತ ನೀನು ಗಟ್ಟಿಯಾಗಿ ಹೇಳಿರೋದ್ರಿಂದ, ಈ ವಿಚಾರವನ್ನ ನಾನು ಅತ್ತೆಮಾವನಲ್ಲಿಯೂ ಪ್ರಸ್ತಾಪಿಸಿಲ್ಲ ! ಅಷ್ಟಕ್ಕೂ, ನೀನು ಹುಟ್ಟಿದ್ದು ಬೇಗ ಅಂತ ಪ್ರೂವ್ ಆದರೆ, ನೀನು ಮತ್ತಷ್ಟು ದೊಡ್ಡವಳಾಗಿ ನಮಗಿರುವ ಒಂದು ವರ್ಷದ ಅಂತರವೂ ಕಡಿಮೆಯಾಗತ್ತೆ, ಅದು ನನಗೆ ಇಷ್ಟವಿಲ್ಲ ! ಹುಟ್ಟಿದ್ದು ತಡ ಅಂತಾದರೆ, ಮತ್ತಷ್ಟು ಸಣ್ಣವಳಾಗುತ್ತೀಯ ಮತ್ತು ನೀನು ಇನ್ನೂ ಮಕ್ಕಳಾಟಿಕೆ ಮಾಡಲು ಬಯಸುವುದಕ್ಕೆ ಸಣ್ಣ ವಯಸ್ಸೇ ಕಾರಣ ಅಂತೀಯ- ಅದೂ ನನಗೆ ಬೇಕಾಗಿಲ್ಲ. ಹಾಗಾಗಿ ಆಗಸ್ಟ್ ೧೧ ನನಗೆ ಓಕೆ.
ಆದರೂ ನಮ್ಮ ಮದುವೆ ಆನಿವರ್ಸರಿ ಬರೋ ಮೊದಲೇ ನಿನ್ನ ಬರ್ತ್‌ಡೇ ಬಂದಿದ್ದು ನನಗೆ ಕೊಂಚ ಕಸಿವಿಸಿಯೇ ಉಂಟು ಮಾಡಿದೆ. ಹಾಗಂತ, ನನ್ನ ಬರ್ತ್‌ಡೇ ಮಾತ್ರ, ನಮ್ಮ ಮದುವೆ ಆನಿವರ್ಸರಿಯಂದೇ ಆಗಿರೋದು ನನಗೆ ಹೆಮ್ಮೆ ಸಮಾಧಾನವನ್ನೂ ಕೊಟ್ಟಿದೆ. ಪರವಾಗಿಲ್ಲ ಬಿಡು, ನಮ್ಮಿಬ್ಬರ ಸಂಬಂಧ ಶುರುವಾದ ಬಳಿಕ, ನನಗಿಂತ ಮೊದಲು ನಿನ್ನ ವಯಸ್ಸೇ ಹೆಚ್ಚಾಗಿದ್ದರೂ ಅದು ಹೆಚ್ಚೆಂದು ನನಗೇನೂ ಅನ್ನಿಸುತ್ತಿಲ್ಲ ! ಅಷ್ಟಕ್ಕೂ ಮೂವತ್ತು ಹತ್ತಿರ ಬರುತ್ತಿದ್ದಂತೆ ನಾವ್ಯಾಕೆ ಈ ವಯಸ್ಸಿನ ಬಗ್ಗೆ ಮಾತಾಡಬೇಕು? ಬರ್ತ್‌ಡೇ ಅಂದಕೂಡಲೇ ಮೊದಲು ಮನಸ್ಸಿಗೆ ಬರೋದು ’ನಮ್ಮ ನೆಚ್ಚಿನ ಯುವ ನಾಯಕರಿಗೆ ೪೨ನೇ ಜನ್ಮದಿನದ ಹಾರ್ದಿಕ ಶುಭಾಶಯಗಳು’ ಅನ್ನೋ ಬೋರ್ಡುಗಳೇ. ಅಂದಹಾಗೆ, ನಮ್ಮ ಶೋಭಾ ಕರಂದ್ಲಾಜೆಯ ಇಂತಹ ಬೋರ್ಡು ಎಲ್ಲಾದರೂ ನೋಡಿದ್ದೀಯಾ?! ಅಷ್ಟಕ್ಕೂ- ವಯಸ್ಸಿಗೂ ಆಯುಸ್ಸಿಗೂ ಈ ಕಾಲದಲ್ಲಿ ಏನಾದರೂ ಸಂಬಂಧ ಇದೆ ಅಂತ ನಿನಗನ್ನಿಸತ್ತಾ? ಹಾರ ಬದಲಾಯಿಸಿಕೊಂಡಿದ್ದೇವೆ, ಬದುಕನ್ನೂ ಬದಲಾಯಿಸಿಕೊಳ್ಳುತ್ತಿರೋಣ ಆಗದಾ?
ನಿನಗೆ ನಾಳೆ ಎಸ್ಸೆಮ್ಮೆಸ್ಸುಗಳ ಮಹಾಪೂರ ಬರತ್ತೆ, ಹಲವರ ಮೊಬೈಲ್‌ನಲ್ಲಿ ರಿಮೈಂಡರ್‌ಗಳು ಹೊಡೆದುಕೊಳ್ಳುತ್ತವೆ ಅಂತ ನನಗೆ ಗೊತ್ತು. ಆದರೆ ಫೇಸ್‌ಬುಕ್‌ನಲ್ಲಿ ಮಾತ್ರ ಬರ್ತ್‌ಡೇಯನ್ನೇ ಅಡಗಿಸಿದ್ದೀಯಲ್ಲ. ಹಾಗಿದ್ದರೂ ಆಫೀಸಿನಲ್ಲಿ ಪಾರ್ಟಿ ಕೇಳಿಯಾರು ಅಂತ ನಿನಗೆ ಭಯ. ನಾಡಿದ್ದು ರಜಾ ತಗೊಳ್ಳಲಾ ಅಂತ ಕೂಡಾ ನೀನು ನಿನ್ನೆ ರಾತ್ರಿ ಕೇಳಿದೆ. ಕ್ಲೋಸ್ ಫ್ರೆಂಡ್ ಒಬ್ಬಳು ಮಧ್ಯರಾತ್ರಿ ಕಾಲ್ ಮಾಡೋದು ಖಂಡಿತ ಅಂತ ವಿಚಿತ್ರ ಖುಶಿಯಲ್ಲಿ ಹೇಳಿದೆ. ಬರ್ತ್‌ಡೇ ಅಂದರೆ ನಿನಗೆ ಸಣ್ಣ ಭಯ ಇರೋದು ನನಗೆ ಗೊತ್ತಾಗದೆ ಇರತ್ತಾ? ವಯಸ್ಸಾದೋರು ಅಮ್ಮನ ಥರ ಕಾಣ್ತಾರೆ ಅಂತಾರೆ, ನನಗೇನೂ ಗೊತ್ತಿಲ್ಲಪ್ಪ. ಸಣ್ಣ ವಯಸ್ಸಿಗೆ ಅಮ್ಮ ಆದರೆ ಮಜಾ ಇರಲ್ಲ. ವಯಸ್ಸಾದಾಗ ಅಮ್ಮ ಆಗದಿದ್ದರೂ ಚೆನ್ನಾಗಿರಲ್ಲ. ನನ್ನ ಅಮ್ಮನಿಗೆ, ನಿನ್ನ ಅಮ್ಮನಿಗೆ ವಯಸ್ಸೆಷ್ಟು ಅಂತ ನಿಖರವಾಗಿ ನನಗಂತೂ ಗೊತ್ತಿಲ್ಲ. ಆಫೀಸಿನಲ್ಲಿ ಯಾವುದಾದರೂ ಫಾರ್ಮು ತುಂಬಲು ಬೇಕಾದಾಗೆಲ್ಲ ಪ್ರತಿ ಬಾರಿಯೂ ನಾನು ಅಮ್ಮನಿಗೆ ಫೋನಾಯಿಸುತ್ತೇನೆ. 'ನನ್ನ ವೋಟರ್ ಐಡಿಯಲ್ಲಿರೋದು ಈ ಇಸವಿ’ ಅಂತ ಅಮ್ಮ ಒಂದು ಜನ್ಮ ದಿನಾಂಕ ಹೇಳ್ತಾಳೆ. ಆದರೆ ಅಮ್ಮನ ವಯಸ್ಸು ಅದಕ್ಕಿಂತಲೂ ಕಮ್ಮಿ ಅಂತ ನನಗೆ ಗುಮಾನಿ. ಏನಾದರೇನು, ಆವತ್ತಿನಿಂದ ಈವತ್ತಿನವರೆಗೆ ಅಮ್ಮ ಹಾಗೇ ಇದ್ದಾಳೆ ಅಂತ ಅನ್ನಿಸತ್ತೆ. ಅಮ್ಮನಿಗೆ ಅಷ್ಟೇ ವಯಸ್ಸು. ಅಮ್ಮ ಯಾಕೆ ವಯಸ್ಸು ಜಾಸ್ತಿ ಹೇಳ್ತಾಳೆ? ಅಪ್ಪ ಇಲ್ಲ ಅಂತಲಾ? ಅವಳು ನಿಜವಾಗಲೂ ದೊಡ್ಡವಳು ಕಣೇ.
ನೀನು ನನ್ನ ಅಮ್ಮನ ಥರ ಆಗಬೇಕು ಅಂತ ಕೆಲವು ಬಾರಿ ನನಗನ್ನಿಸತ್ತೆ. ನಿನಗೆ, ನೀನು ನಿನ್ನಮ್ಮನ ಥರ ಆಗಬೇಕು ಅಂತಿರಬಹುದು. ಆದೀತು, ಒಂದು ದಿನ ನೀನು ಅತ್ತೆ ಥರ ಆಗಬೇಕು ಅಂತ ನನಗೂ ಆಸೆಯಿದೆ, ಡೋಂಟ್ ವರಿ ! ಅಂದಹಾಗೆ, ನಿನ್ನ ಬರ್ತ್‌ಡೇಗೆ ಒಂದಷ್ಟು ಸರ್‌ಪ್ರೈಸ್ ಕೊಡಬೇಕು ಅಂತ ನಾನಂದುಕೊಂಡದ್ದು ಹೌದು. ಆದರೆ ಎಲ್ಲವನ್ನೂ ತುಂಬಾ ಪ್ಲ್ಯಾನ್ ಮಾಡಿ ಮಾಡುವ ನನ್ನಂತಹ ಸಿಸ್ಟಮ್ಯಾಟಿಕ್ ಜಂಟಲ್‌ಮ್ಯಾನ್‌ಗೆ ಸರ್‌ಪ್ರೈಸ್‌ನ್ನೂ ಪ್ಲ್ಯಾನ್ ಮಾಡೋಕೆ ಟೈಮೇ ಸಿಗಲಿಲ್ಲ, ಸಾರಿ ಕಣೇ. ಆದರೂ ಒಂದು ಸರ್‌ಪ್ರೈಸು ! ನೀನು ಹುಟ್ಟಿಬಂದ ಈ ದಿನದಿಂದಲಾದರೂ ನಾನಿನ್ನು ಮತ್ತೆ ಕೊಂಚ ಬರೆಯಲು ಆರಂಭಿಸಬೇಕು ಅಂದುಕೊಂಡಿದ್ದೇನೆ. ಅದು ನಿನಗೆ ಇಷ್ಟ ಅಂತ ನನಗೆ ಗೊತ್ತು. ನನ್ನ ಬದುಕಿನಲ್ಲಿ ಚಕ್ಕನೆ ಬಂದು ಚಕಿತಗೊಳಿಸಿದ ನಿನಗೆ ಬರ್ತ್‌ಡೇ ದಿನ ಇಷ್ಟಾದರೂ ಮಾಡದಿದ್ದರೆ ಹೇಗೆ?
ನಿನಗಿಷ್ಟದ ಬೇಯಿಸಿದ ಜೋಳ ಪೇರಳೆ ಗೋಬಿಮಂಚೂರಿ ಬೀನ್ಸ್‌ಪಲ್ಯ ಪಲಾವ್ ಕೋರಮಂಗಲದ ಬಜ್ಜಿ,ಕಲರ್ಸ್-ಸ್ಟಾರ್‌ಪ್ಲಸ್ ಸೀರಿಯಲ್‌ಗಳು, ದಿನಕ್ಕೆ ಮೂರು ಬಾರಿ ಅಮ್ಮನಿಗೆ ಫೋನು, ತಿಂಗಳಿಗೊಮ್ಮೆ ದೇವಸ್ಥಾನ ಭೇಟಿ, ಡಾರ್ಕ್ ಕಲರ್ ಟಾಪ್‌ಗಳು ಸದಾ ಸಿಗುತ್ತಿರಲಿ. ನಿನ್ನಿಂದ ನನಗೆ ಒಳ್ಳೆಯದಾಗಲಿ! ಹ್ಯಾಪಿ ಬರ್ತ್‌ಡೇ .
(* ನನ್ನ ಹೆಂಡತಿಗಾಗಿಯೇ ಬರೆದ ಬರೆಹ. ಈವರೆಗೆ ಎಲ್ಲೂ ಪ್ರಕಟವಾಗಿಲ್ಲ.)
4 comments:
ನಿಮ್ಮ ಮನದನ್ನೆಗೆ ಹುಟ್ಟಿದ ದಿನದ ಶುಭಾಶಯಗಳು.
ಪ್ರೀತಿಯಿಂದ,
ಸಿಂಧು
ವರ್ಷಾ ವರ್ಷ ಇಂಥ ಸರ್‌ಪರೈಸು ರೆಡಿ ಇಟ್ಕೊ.
- ಕೇರ
ಸಿಸ್ಟಮ್ಯಾಟಿಕ್ ಜಂಟಲ್‌ಮ್ಯಾನ್ ಮತ್ತೆ ಬರೆಯುವಂತೆ ಮಾಡಿದ ಅತ್ತಿಗೆಯ ಬರ್ತ್‌ಡೇಗೆ ಶುಭಾಶಯ! ;)
@ಸಿಂಧು - ಅವಳಿಗೆ ಶುಭಾಶಯ ಹೇಳಿದ್ದಕ್ಕೂ ನಾನೇ ಥ್ಯಾಂಕ್ಸ್ ಹೇಳಬೇಕು ನೋಡಿ ! ಥ್ಯಾಂಕ್ಸ್
@ ಕೇರ - ಖೇ..ರಾ..$$$
@ ಸುಶ್ – ನನ್ನ ಸಿಸ್ಟಮ್ ಜಂಟಲ್ ಆಗಿದೆ ಮ್ಯಾನ್ :)
- ಚಂಪಾದಕ !
Post a Comment