ಪೇಟೆ ಪಾಡ್ದನ
'ದೇಶಕಾಲ' ವಿಶೇಷ ಸಂಚಿಕೆಯು ಮುಗಿಲು ಮುಟ್ಟುವ ಉತ್ಸಾಹ ಸಂಭ್ರಮದೊಂದಿಗೆ ಬಿಡುಗಡೆಯಾಗಿದೆ. 'ಛೆ, ಬೆಂಗಳೂರಿನಲ್ಲಿ ಎಷ್ಟೆಲ್ಲಾ ಒಳ್ಳೆ ಕಾರ್ಯಕ್ರಮಗಳು ನಡೆಯುತ್ತವಲ್ಲಾ' ಅಂತ ಪರ ಊರಿನವರು ಮತ್ತಷ್ಟು ಕರುಬುವಂತಾಗಿದೆ ! ವರ್ಷದ ಹಿಂದೆ ಈ 'ಚಂಪಕಾವತಿ'ಯಲ್ಲಿ ಸರಣಿಯಾಗಿ ಪ್ರಕಟವಾದ 'ಪೇಟೆ ಪಾಡ್ದನ'ದ ಆಯ್ದ ಪದ್ಯಗಳು, ದೇಶಕಾಲದ ವಿಶೇಷ ಸಂಚಿಕೆಯಲ್ಲಿ ಜಾಗ ಪಡೆದುಕೊಂಡಿವೆ. ಜತೆಗೆ ಎರಡು ಹೊಸ ಪದ್ಯಗಳು. ಆ ಎರಡು ಹೊಸ ಪದ್ಯಗಳು, ಈಗ ಇಲ್ಲೂ ಇವೆ. ಓದಿಕೊಳ್ಳಿ.
೧
ಎಡ ತೋರು ಹೆಬ್ಬೆರಳುಗಳಲಿ
ಕಂಟ್ರೋಲು ಆಲ್ಟು, ಬಲ ತೋರು ಬೆರಳಲಿ
ಮತ್ತೆ ಮತ್ತೆ ತಬಲಾದಂತೆ ಬಾರಿಸು
ಟಕಟಕ ಟಂಟಂ- ಡಿಲೀಟು
ಹ್ಯಾಂಗಾಗಿದೆ ಕಂಪ್ಯೂಟರು?
ಅಬ್ಬಾ ಇಳಿಯಿತು ಪರದೆ ಈಗ
ಬಾಯಲಿಟ್ಟು ನೋಡಿಕೊ ಜ್ವರದ ಕಡ್ಡಿ
ರಟ್ಟೆಗೆ ಪಟ್ಟಿ ಕಟ್ಟಿ ನೋಡು ಒತ್ತಡ
ತುದಿ ಬೆರಳಿಗೆ ಚುಚ್ಚಿ ಪರೀಕ್ಷಿಸು
ನಿನ್ನ ಸಕ್ಕರೆಯ ಕಹಿ ಪ್ರಮಾಣ !
ಚುಚ್ಚಿಸಿಕೋ ನವ ದ್ವಾರಗಳಿಗೆ ಪ್ಲಗ್ಗು
ಕಂಪ್ಯೂ ಪರದೆಗಳಲಿ ನಿನ್ನ ಏರಿಳಿತ
ಶಟ್‌ಡೌನೂ ಆಗದೆ ಶಿಟ್‌ಡೌನೂ ಆಗದೆ
ಅಯ್ಯೋ ಫಜೀತಿ ತಿನ್ನು ತಿರುಪತಿ ಪ್ರಸಾದ !
ಅಪ್ಪ ಹೇಗಿದ್ದಾರಮ್ಮಾ ಅಂದರೆ
ಮೈಲ್ ಚೆಕ್ ಮಾಡಿ ಹೇಳುವಳಂತೆ ಮಗಳು
ಕಂಪ್ಯೂಟರಿಂದ ಈಚೆ ಬಂದು ಹೇಳು
ಸೊನ್ನೆ-ಒಂದರ ಅರ್ಥ ಒಂದೆ ಏನು?
೨
ಮೆಕ್‌ಡೊನಾಲ್ಡ್, ಅಂಕಿತ ಪುಸ್ತಕ
ಸಾಯಿ ಗೋಲ್ಡ್ ಪ್ಯಾಲೇಸು, ರೋಟಿ ಘರ್
ಪೀಟರ್ ಇಂಗ್ಲೆಂಡು, ಗಾಂಧಿ ಬಜಾರು ಮಾಸಿಕ
ಎಚ್‌ಡಿಎಫ್‌ಸಿ ಐಎನ್‌ಜಿ ಸ್ಟೇಟ್‌ಬ್ಯಾಂಕು
ಎಟಿಎಮ್ಮುಗಳ ನಡುವೆ ಅಕೋ ನೋಡಿ
ಅಂಟು ತಿಂಡಿಯ ಕೊಕ್ಕಿಗಂಟಿಸಿಕೊಂಡು
ಒದ್ದಾಡುತ್ತಿದೆ ಗರಿ ಮುರಿದ ಗುಬ್ಬಿ ಹಕ್ಕಿ
ಕ್ಲಿಕ್ಕಿಸಿ ಫೋಟೊ ಮೊಬೈಲ್‌ನಲ್ಲಾದರೂ !
ಹಾಂ, ಇವತ್ತು ರಾತ್ರಿ ಊಟಕ್ಕೆ ಬರಲ್ಲ
ಹೆಂಡತಿ ಕಳಿಸಿದ್ದಾಳೆ ಎಸ್ಸೆಮ್ಮೆಸ್ಸು !
ಟು ವೀಲರ್‌ನ್ನು ಅನಾಮತ್ತೆತ್ತಿದೆ ಟೈಗರ್
ಕತ್ತಿನ ಒಂದೆಳೆ ಸರ ಎಳೆದ ಅನಾಮಿಕ ಕಿಲ್ಲರ್
ಒಂದೇ ಒಂದು ಪದ ನಿಮ್ಮಿಂದ ಹೆಚ್ಚಾಗಿ
ಹೊಡೆಯ ಬಂದಿದ್ದಾನೆ ಫುಟ್‌ಪಾತ್ ಸೆಲ್ಲರ್
ಅಂತೂ ಒಳ್ಳೆಯ ಫೋಟೊ ಸಿಕ್ಕಿತಾ?
ನಿಮ್ಮ ತಾತನ ಫೋಟೊದ ಹಿಂದೆ
ಗೂಡು ಕಟ್ಟಿದ್ದ ಗುಬ್ಬಿಯ
ನಾಲ್ಕನೇ ಸಂತಾನದ ಫೋಟೊ-
ನಿಮ್ಮ ಖುಶಿಗೆ ಕಾರಣವೇನು?
1 comments:
Sooper
keep it up
Post a Comment