ಅಮಿತಾಬ್ ಎಂಬ ದಶಾವತಾರಿ
ಬಾಲಿವುಡ್ ಶೆಹನ್‌ಶಾನಿಗೆ ವಯಸ್ಸಾಗಿದೆಯೆ? ಆಗಿದೆ ಅಂತ ನಮಗೆಲ್ಲ ಗೊತ್ತಾಗಿದ್ದು ಎರಡು ವರ್ಷಗಳ ಹಿಂದೆ. ಆ ಆಜಾನುಬಾಹು ಮುಂಬಯಿಯ ಲೀಲಾವತಿ ಆಸ್ಪತ್ರೆಗೆ ಗಾಲಿಮಂಚದಲ್ಲಿ ಅಂಗಾತ ಮಲಗಿಕೊಂಡು ಹೋದಾಗ. ಶೋಲೆಯ ಸೋಲೇ ಇಲ್ಲದ ಆ ಸರದಾರ, ಎಲ್ಲವನ್ನೂ ಎದುರಿಸುತ್ತಾ ಬಂದ. ರಾಜಾಠಾಕ್ರೆಯ ಎಂಎನ್‌ಎಸ್ ಪುಂಡರ ಮಾತಿನ ಬಾಣಗಳನ್ನು ಎದೆಯಲ್ಲಿ ಧರಿಸಿದ. ಮಗ ಅಭಿಷೇಕ, ಸೊಸೆ ಐಶ್ವರ್ಯಾರೊಂದಿಗೆ ದೇಶದೇಶಗಳನ್ನು ನೃತ್ಯ ಕಾರ್ಯಕ್ರಮಗಳಿಗಾಗಿ ಸುತ್ತಿದ. ತನ್ನ ಬ್ಲಾಗ್‌ನಲ್ಲಿ ಪತ್ರಕರ್ತರೊಂದಿಗೆ ತಿಕ್ಕಾಡಿದ. ವಯಸ್ಸು ಅರುವತ್ತಾದರೂ ಹಿರಿಯ ಕಲಾವಿದನೇ ಹೀರೋ ಎಂಬುದು ಇನ್ನು ಚಾಲ್ತಿಯ್ಲಿರುವಾಗ ಬಚ್ಚನ್ ಹಾಗೆ ಮಾಡಲಿಲ್ಲ. ಹಾಗಂತ ಪೋಷಕ ಕಲಾವಿದ ಅಂತಲೂ ಅನ್ನಿಸಲಿಲ್ಲ. ಕುರುಡಿ ರಾಣಿಮುಖರ್ಜಿಯ ಗುರುವಾಗಿ 'ಬ್ಲ್ಯಾಕ್' ಸಿನಿಮಾದಲ್ಲಿ ಅಮಿತಾಬ್ ಕಾಣಿಸಿಕೊಂಡಾಗ, ಜನ ಕಣ್ಣರಳಿಸಿ ನೋಡಿದರು. 'ಕೌನ್ ಬನೇಗಾ ಕರೋಡ್‌ಪತಿ' ಅಂತ ದಪ್ಪ ಸ್ವರದಲ್ಲಿ ನಮ್ಮ ಮನೆ ಟಿವಿಯೊಳಗೆ ಬಂದಾಗ ಜನ ಹುಚ್ಚಾದರು. ೨೦೦೬ರಲ್ಲಿ ಕರಣ್‌ಜೋಹರ್ ನಿರ್ದೇಶನದ 'ಕಭಿ ಅಲ್ವಿದಾ ನಾ ಕೆಹನಾ' ದಲ್ಲಿ 'ಸೆಕ್ಸಿ ಸ್ಯಾಮ್' ಆಗಿ ಕಂಗೊಳಿಸಿದ ಈ ಮಹಾಪುರುಷ, ೨೦೦೭ರಲ್ಲಿ 'ಭೂತನಾಥ್' ಸಿನಿಮಾದಲ್ಲಿ ರೋಗಿಷ್ಠ ಮುದುಕನಾಗಿ ಮಕ್ಕಳೊಂದಿಗೆ ಮಾತಾಡಿದ. ಟಿವಿ ಕಡೆ ಬಚ್ಚನ್ ಬಾರದೆ ತುಂಬ ದಿನವಾಯಿತು ಅಂತ ಜನ ಅಂದುಕೊಂಡರೆ, 'ಬಿಗ್‌ಬಾಸ್-೩'ರ ನಿರೂಪಕನಾಗಿ ಬಂದ. ಇಂತಹ ಭಾರತ ನಾಯಕ ಅಮಿತಾಬ್ ಬಚ್ಚನ್ ಈಗ ಅಭಿಷೇಕನ ಸೊಂಟದಲ್ಲಿ ತೂಗುತ್ತಿರುವ ಚಿತ್ರ ಎಲ್ಲೆಡೆ ಹರಿದಾಡಹತ್ತಿದೆ. ಅಮಿತಾಬ್‌ಗೆ ಏನಾಗಿದೆ?!
೬೭ ವರುಷದ ಅಮಿತಾಬ್ ೧೩ ವರುಷದ ಹುಡುಗನಾಗಿದ್ದಾನೆ. ಅಭಿಷೇಕ್ ಬಚ್ಚನ್ ಸದ್ಗುಣವಂತ ರಾಜಕಾರಣಿಯಾಗಿ ಅಮಿತಾಬ್ ಅಪ್ಪನಾಗಿದ್ದಾನೆ. ಆರ್. ಬಾಲಕೃಷ್ಣನ್ ನಿರ್ದೇಶನದಲ್ಲಿ ಇಳಯರಾಜಾ ಸಂಗೀತದಲ್ಲಿ ಡಿಸೆಂಬರ್ ಮೊದಲ ವಾರ ಬಿಡುಗಡೆಗೆ ಸಿದ್ಧವಾಗುತ್ತಿರುವ (ಡಿ.೪ರಂದು ಬಿಡುಗಡೆಯಾಯಿತು) 'ಪಾ' ಎಂಬ ಹೊಸ ಚಿತ್ರದ ತುಣುಕೊಂದು, ಮೊನ್ನೆ ನ.೪ರಂದು ಬಿಡುಗಡೆಯಾಯಿತು. ಅರೋ ಎಂಬ ಆ ಹುಡುಗನ ತಾಯಿ (ವಿದ್ಯಾ ಬಾಲನ್) ಸ್ತ್ರೀ ರೋಗ ತಜ್ಞೆ. ಕಣ್ತುಂಬ ಕನಸುಗಳ ಅಮೋಲ್ ಅರ್ತೆ (ಅಭಿಷೇಕ್ ಬಚ್ಚನ್), ರಾಜಕೀಯವೊಂದು ಕೊಳಕು ಗುಂಡಿ ಅಲ್ಲವೆಂದು ತೋರಿಸಲು ಹೊರಟವನು. ಆದರೆ ಹುಡುಗ ಆರೋ, ಹದಿಮೂರರ ವಯಸ್ಸಿಗೇ ಮುದುಕನಂತೆ ಕಾಣುವ ಆನುವಂಶಿಕ ಕಾಯಿಲೆಗೆ ತುತ್ತಾಗಿದ್ದಾನೆ. ೧೮೮೬ರಲ್ಲಿ ಜೊನಾಥನ್ ಹಚಿನ್‌ಸನ್ ಎಂಬಾತ ಮೊದಲ ಬಾರಿಗೆ ಈ 'ಪ್ರೊಜೇರಿಯಾ' ಕಾಯಿಲೆಯ ಬಗ್ಗೆ ಬೆಳಕು ಚೆಲ್ಲಿದ. ಆದರೆ ಇಂದಿನವರೆಗೂ ಅದಕ್ಕೆ ಸೂಕ್ತವಾದ ಚಿಕಿತ್ಸೆಯ ದಾರಿ ಸಿಕ್ಕಿಲ್ಲ. ೪೦ ಲಕ್ಷದಲ್ಲಿ ಒಬ್ಬರಿಗೆ ತಗಲುವ ಕಾಯಿಲೆ ಇದು.
ಮನಸ್ಸು ಹದಿಮೂರರಂತಿದ್ದು ಸ್ಕೂಲಿಗೆ ಹೋಗುತ್ತಾನಾದರೂ ದೊಡ್ಡದಾಗಿ ಬೆಳೆದಿರುವ ಅರೋನ ತಲೆ ಬೋಳು ! ಕನ್ನಡಕ ಬಂದಿದೆ. ಚರ್ಮವೆಲ್ಲ ಸುಕ್ಕುಗಟ್ಟಿದೆ. ಹೀಗೆ ಇಲ್ಲಿ ಎಲ್ಲರ ಹುಬ್ಬುಗಳನ್ನು ಮೇಲಕ್ಕೇರಿಸಿದ್ದು ಅಮಿತಾಭ್ ಪಾತ್ರದ ಮೇಕಪ್. ಸಿನಿಮಾ ಚಿತ್ರೀಕರಣಕ್ಕೆಂದು ಶಾಲೆಯೊಂದಕ್ಕೆ ಹೋದಾಗ ಜತೆಗೆ ನಟಿಸಬೇಕಾದ ಮಕ್ಕಳು, ಈತ ಅಮಿತಾಬ್ ಎಂದು ನಂಬಲೇ ಇಲ್ಲ ! ಆತನ ತಲೆ ಮುಟ್ಟಿ ಮುಟ್ಟಿ ನೋಡಿ ಏನಿದೇನಿದೆಂದು ಆಶ್ಚರ್ಯಚಕಿತರಾದರು. ದಿಲ್ಲಿಯ ಮೆಟ್ರೊದಲ್ಲಿ ಸಿನಿಮಾದ ಒಂದು ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಆಗ ಚಿತ್ರೀಕರಣ ತಂಡಕ್ಕೊಂದು ಸುದ್ದಿ ಬಂತು- ಏನಪ್ಪಾ ಅಂದರೆ ಮುಂದಿನ ನಿಲ್ದಾಣದಲ್ಲಿ ಸುಮಾರು ನೂರು ಜನ ಫೋಟೊಗ್ರಾಫರ್‌ಗಳು ಅಮಿತಾಬ್‌ನ ಹೊಸ ಪಾತ್ರದ ಸೆರೆ ಹಿಡಿಯಲು ಕಾಯುತ್ತಿದ್ದಾರೆ ! ಹಾಗಾಗಿ ರೈಲನ್ನೂ ಮೊದಲೇ ನಿಲ್ಲಿಸಿ ಅಮಿತಾಬ್‌ರನ್ನು ಬಚ್ಚಿಡಬೇಕಾಯಿತಂತೆ!
ರಂಗಶಂಕರದ ಒಡತಿ 'ಅರುಂಧತಿ ನಾಗ್' ಈ ಸಿನಿಮಾದಲ್ಲಿ ನಟಿಸುತ್ತಿರುವುದು ಮತ್ತೊಂದು ವಿಶೇಷ. ನಮ್ಮ ಕನ್ಯಾಮಣಿಗಳು ಬಾಲಿವುಡ್ ಪ್ರವೇಶವೆಂದರೆ ಅತಿ ದೊಡ್ಡ ಸೀಮೋಲ್ಲಂಘನವೆಂದು ಚಾತಕ ಪಕ್ಷಿಗಳಂತೆ ಕಾಯುತ್ತಿರುವಾಗ, 'ಜೋಗಿ' ಅಮ್ಮನಾಗಿ ಕನ್ನಡಿಗರಿಗೆ ನಟನಾ ಸಾಮರ್ಥ್ಯ ತೋರಿದ ಅರುಂಧತಿ, ಬಚ್ಚನ್ ಬಳಗ ಸೇರಿದ್ದಾರೆ. ಕಳೆದ ಬಾರಿ 'ಸ್ಲಂ ಡಾಗ್ ಮಿಲಿಯನೇರ್' ಸಿನಿಮಾಕ್ಕೆ ಆಸ್ಕರ್ ಪ್ರಶಸ್ತಿ ಸಿಕ್ಕಾಗ 'ದಿ ಕ್ಯೂರಿಯಸ್ ಕೇಸ್ ಆಫ್ ಬೆಂಜಮಿನ್ ಬಟನ್' ಎಂಬ ಚಿತ್ರ ಹಲವರ ಮೆಚ್ಚುಗೆಗೆ ಪಾತ್ರವಾಗಿತ್ತು. ಅಲ್ಲಿ ಮಗುವೊಂದು ಮುದುಕನಾಗಿ ಹುಟ್ಟಿ ಕಿರಿಯನಾಗುತ್ತಾ ಹೋಗುವ ಕತಾ ಹಂದರವಿತ್ತು.
ಕ್ರಿಸ್ಟಿಯನ್ ಟಿನ್‌ಸ್ಲೆ ಮತ್ತು ಡೊಮಿನಿ ಟಿಲ್ ಎಂಬ ಈ ಮೇಕಪ್‌ಮ್ಯಾನ್‌ಗಳು ಪ್ರಯೋಗಾಲಯದಲ್ಲಿ ಸಂಸ್ಕರಿಲ್ಪಟ್ಟ ಮಣ್ಣಿನ ಎಂಟು ತುಂಡುಗಳಿಂದ ಅಮಿತಾಬ್ ತಲೆಯನ್ನೇ ಬದಲಿಸಿದ್ದಾರೆ . 'ಮೇಕಪ್ ಆರಂಭವಾದ ನಂತರ ಸೆಂಟಿಮೀಟರ್‌ನಷ್ಟೂ ಅದನ್ನು ಅತ್ತಿತ್ತ ಮಾಡಲು ಸಾಧ್ಯವಿಲ್ಲ. ಏನೂ ತಿನ್ನಲು ಕುಡಿಯಲು ಅಸಾಧ್ಯ. ಕಿವಿ ಮತ್ತು ತಲೆಯು ಒಂದೇ ಆಗಿದ್ದು ಹೆಲ್ಮೆಟ್‌ನಂತಿರುತ್ತದೆ.ನನ್ನ ಕಿವಿ ಮುಚ್ಚಿಹೋಗಿದ್ದು, ಹೊರಗಿನ ಧ್ವನಿ ಕೇಳಲು ಎರಡು ಸಣ್ಣ ತೂತುಗಳನ್ನು ಮಾಡಲಾಗಿದೆ. ನಾನು ಏನನ್ನಾದರೂ ಕೊಂಚ ಮಾತಾಡಿದರೆ ಸುರಂಗದೊಳಗೆ ಮಾತಾಡಿದಂತೆ ಪ್ರತಿಧ್ವನಿಯಷ್ಟೇ ನನಗೆ ಕೇಳುತ್ತದೆ. ಹಣೆ, ಮೂಗು, ಎರಡು ಕೆನ್ನೆಗಳು, ಮೇಲಿನ ಕೆಳಗಿನ ತುಟಿಗಳು ಎಲ್ಲಾ ನಾನಾ ಭಾಗಗಳಾಗಿದ್ದು ಅವನ್ನೆಲ್ಲಾ ತಿಳಿಯದಂತೆ ಜೋಡಿಸಲಾಗಿದೆ. ಇದರಿಂದಾಗಿ ಉಂಟಾಗುವ ತುರಿಕೆ , ನೋವು ಸಹಿಸಲಸಾಧ್ಯ. ಜತೆಗೆ ಚರ್ಮದ ರೀತಿ ಬದಲಾಯಿಸಲು, ಎದೆ, ಕಾಲುಕೈಗಳಲ್ಲಿರುವ ಕೂದಲನ್ನೆಲ್ಲಾ ನಾನು ತೆಗೆಯಬೇಕಾಯಿತು. ಈ ಮೇಕಪ್ ಮಾಡಲು ೫ಗಂಟೆಗಳು ಬೇಕಾದರೆ, ತೆಗೆಯಲೇ ೨ ಗಂಟೆಗಳು ಬೇಕು. ಗರಿಷ್ಠ ೬ ಗಂಟೆಗಳ ಕಾಲ ಈ ವೇಷದಲ್ಲಿ ಅಭಿನಯ ಮಾಡಬಹುದು. ಹೀಗಾಗಿ ನಾವು ಚಿತ್ರೀಕರಣದ ನಿಗದಿತ ವೇಳಾಪಟ್ಟಿಗಿಂತ ಹಿಂದುಳಿಯಬೇಕಾಯಿತು. ರಾತ್ರಿ ೧೧ಗಂಟೆಗೆ ಸಿದ್ಧತೆಗೆ ತೊಡಗಿದರೆ ಬೆಳಗ್ಗೆ ೪-೫ ರ ಹೊತ್ತಿಗೆ ಚಿತ್ರೀಕರಣಕ್ಕೆ ಸಿದ್ಧನಾಗುವುದು. ಸಿನಿಮಾ ಎಂದರೆ ವೈಭೋಗ ಅಂದವರು ಯಾರು?' ಅಂತ ತನ್ನ ಬ್ಲಾಗ್‌ನಲ್ಲಿ ಬರೆದಿದ್ದಾರೆ ಅಮಿತಾಬ್. 'ನಾನು ಮಗುವಾಗಿದ್ದಾಗ ಎಲ್ಲರಂತೆ ಅಪ್ಪನ ಭುಜ, ತಲೆ ಹತ್ತಿ ಕುಣಿದಾಡುತ್ತಿದ್ದೆ. ಈಗ ಆ ಸುಖವನ್ನು ಅಪ್ಪನಿಗೆ ಮರಳಿ ಕೊಡಲು ಆನಂದವಾಗುತ್ತಿದೆ' ಅನ್ನುತ್ತಾನೆ ಮಗರಾಯ ಅಭಿಷೇಕ್.
(ನವಂಬರ್ ೬ ರಂದು ವಿಜಯಕರ್ನಾಟಕ ಲವಲವಿಕೆಯಲ್ಲಿ ಪ್ರಕಟಿತ)
4 comments:
ಕಾಯುತ್ತಿದ್ದೇನೆ,ಪಾ
ನೋಡೋದಕ್ಕಾಗಿ
Nimma article informative aagide,Thanks for the info.
‘ಪಾ’ ನೋಡಿದ್ದೂ ಆಯಿತು. ಅನುಭವಿಗಳಾದ ವಿದ್ಯಾಬಾಲನ್-ಅರುಂಧತಿನಾಗ್-ಅಮಿತಾಬ್ ಚೆನ್ನಾಗಿಯೇ ನಟಿಸಿದ್ದಾರೆ. ಆದರೆ ಅಶಕ್ತ ಚಿತ್ರಕತೆ. ಸಿನಿಮಾದ ಕೊನೆಯವರೆಗೂ ಸ್ಟ್ಯಾಂಡ್ ಆಗದ ಅಭಿಷೇಕನ ಅಮೋಲ್ ಆರ್ತೆ ಪಾತ್ರ. ಬರೆಯಲಾಗದಷ್ಟು ನಿರಾಶೆ. -ಚಂಪಕಾವತಿ
ನೋಡಲು ಕಾತುರನಾಗಿದ್ದೇನೆ ಚಿತ್ರವನ್ನು
ತಿಳಿಸಿದ್ದಕ್ಕೆ ಧನ್ಯವಾದಗಳು
Post a Comment