ಮಹಾಬಲ ಹೆಗಡೆ ಮಹೋತ್ಸವ
ಹೊನ್ನಾವರ ತಾಲೂಕಿನ ಅಣಿಲಗೋಡ ಎಂಬ ಊರಿನಲ್ಲಿ ಅಂದು ಆಟ. ಸಂಜೆ ಜೋರಾಗಿ ಮಳೆ ಬಿದ್ದುದರಿಂದ ಜನ ಸೇರಿರಲಿಲ್ಲ. ಮೇಳದ ಯಜಮಾನರಾದ ಕೆರೆಮನೆ ಶಿವರಾಮ ಹೆಗಡೆಯವರು ಏನೋ ತೊಂದರೆಯಿಂದ ಬಂದಿರಲಿಲ್ಲ. ಆಗ ಭಾಗವತರೂ, ಮಹಾಬಲ ಹೆಗಡೆಯವರೂ ಸೇರಿ ಮಾತನಾಡಿ ಆ ದಿನ ಆಟವನ್ನು ನಿಲ್ಲಿಸುವ ನಿರ್ಧಾರಕ್ಕೆ ಬಂದರು. ಆದರೆ ಕೆಲ ಮುಖಂಡರು ‘ನೀವು ಆಟ ಆಡಲೇಬೇಕು. ಇಲ್ಲದಿದ್ದರೆ ನಿಮ್ಮ ಸಾಮಾನುಗಳನ್ನು ಇಲ್ಲಿಂದ ಒಯ್ಯಲು ಬಿಡುವುದಿಲ್ಲ’ ಎಂದು ಪಟ್ಟು ಹಿಡಿದರು. ಕಲಾವಿದರ ಮೇಲೆ ಸತ್ತೆ ನಡೆಸುವ ಇವರ ರೀತಿಯಿಂದ ರೋಸಿಹೋದ ಮಹಾಬಲ ಹೆಗಡೆಯವರು ಮುಖಕ್ಕಿಷ್ಟು ಬಣ್ಣ ಮೆತ್ತಿಕೊಂಡು ಇದ್ದ ಕ್ರಾಪನ್ನೇ ಬಾಚಿ, ಒಂದು ಹ್ಯಾಂಡ್‌ಬ್ಯಾಗ್, ಕೊಡೆ ಹಿಡಿದು ‘ನಾನು ವಿಶ್ವಾಮಿತ್ರ, ತಪಸ್ಸಿಗೆ ಹೊರಟಿದ್ದೇನೆ’ ಎಂದು ‘ಹುಚ್ಚುಹೋಳಿ’ ಎಬ್ಬಿಸಿಬಿಟ್ಟರು. ಹಟ ಹಿಡಿದವರು ಎಂದೂ ಮರೆಯದಂತೆ ಮಾಡಿದರು.ಆಗಲೇ ಅವರಿಗೆ ಅಂದಿನ ಹಿರಿಯ-ಶ್ರೇಷ್ಠ ಕಲಾವಿದ ಮೂಡ್ಕಣಿ ನಾರಾಯಣ ಹೆಗಡೆಯವರ ಪರಿಚಯವಾಗಿತ್ತು. ಯಕ್ಷಗಾನ ಕುಟುಂಬದವನೇ ಆದ ಮಹಾಬಲರನ್ನು ಅವರೂ ಬಲ್ಲರು. ಅವರ ಬಗ್ಗೆ ಪ್ರೀತಿಯೂ ಇತ್ತು. ಯಾವಾಗಾದರೊಮ್ಮೆ ಮೂಡ್ಕಣಿ ಹೆಗಡೆಯವರ ಮನೆಗೆ ಹೋಗುತ್ತಿದ್ದ ಮಹಾಬಲರು ಒಮ್ಮೆ ಮೂಡ್ಕಣಿಗೆ ಹೋದಾಗ ಅವರಿಂದ ಮೂರು ಪ್ರಸಂಗ ಪಟ್ಟಿಗಳನ್ನು ತಂದುಕೊಂಡಿದ್ದರು. ಅವುಗಳನ್ನು ಓದಿದ್ದೂ ಆಯಿತು. ತಿರುಗಿ ಕೊಡುವಾಗ ಈ ಕಿಡಿಗೇಡಿ ಹುಡುಗ ಆ ಪ್ರಸಂಗಗಳಲ್ಲಿ ತಾನು ಮಾಡಬಹುದಾದ (ಮಾಡಬೇಕೆನಿಸಿದ) ಮೂರು ಪಾತ್ರಗಳಿಗೆ ಸಂಬಂಧಿಸಿದ ಪುಟಗಳನ್ನಷ್ಟೇ ಹರಿದು ವಾಪಸ್ಸು ತೆಗೆದುಕೊಂಡು ಹೋಗಿ ಕೊಟ್ಟ. (ಎಲ್.ಎಸ್.ಶಾಸ್ತ್ರಿ ಅವರು ಬರೆದಿರುವ ಕೆರೆಮನೆ ಮಹಾಬಲ ಹೆಗಡೆಯವರ ಜೀವನ ಚರಿತ್ರೆಯಿಂದ ಆಯ್ದ ಭಾಗಗಳು)
3 comments:
ಪ್ರಿಯ ಸುಧನ್ವಾ,
ನಿಮ್ಮ ಬರಹಗಳನ್ನು ಬ್ಲಾಗಲ್ಲಿ ನೋಡಿ ಪುಳಕಗೊಂಡೆ. ಅಪಾರರ ಬ್ಲಾಗೂ ಖುಷಿ ಕೊಟ್ಟಿತು. ಆದ್ರೂ ನೀವು ನಿಯಮಿತವಾಗಿ ಬರೀತಿಲ್ಲ. ಏಕೆ? ನಿಮ್ಮ ಚಿಕ್ಕಪ್ಪನ ಪದ್ಯಗಳನ್ನೂ ಇದ್ರಲ್ಲಿ ಹಾಕಿ.ಓದಿಕೊಳ್ಳುವವರು ಓದ್ಕೋತಾರೆ.
-ಡಿ.ಎಸ್.ರಾಮಸ್ವಾಮಿ
ಪುಸ್ತಕ ಅವರ ವೇಷದಷ್ಟೇ ಮಜಾ ಇರಬಹುದೊ ?
- ಹರೀಶ್ ಕೇರ
ಮಹಾಬಲ ಹೆಗಡೆಯವರ ಪುಸ್ತಕ ಅವರ ಅತ್ಮಚರಿತ್ರಯೇ ಆಗಿದೆಯೇ ?
Post a Comment