ಹೂಬಾಣದ ಗುರಿ
ಹದಿನೈದು ವರ್ಷದ ಹುಡುಗಿಯೊಬ್ಬಳು ತನ್ನ ತಾಯಿಯನ್ನೇ ಕೊಲೆ ಮಾಡಿದ್ದಾಳೆ. ಹದಿನೇಳು ವರ್ಷದ ತನ್ನ ಪ್ರಿಯಕರನ ಜತೆಗೂಡಿಕೊಂಡು ! ಕಳೆದ ಸೆಪ್ಟೆಂಬರ್ ೧೯ರಂದು ಈ ಘಟನೆ ನಡೆದದ್ದು , ಅಂತಹ ಮಾಯಾನಗರಿಯೇನೂ ಅಲ್ಲದ ಮೈಸೂರಿನಲ್ಲಿ . ಮೈಮನಗಳ ಪುಳಕಕ್ಕೆ ಮಕ್ಕಳೂ ಎಷ್ಟೊಂದು ಬಲಿಯಾಗುತ್ತಿದ್ದಾರೆಂದು ಯೋಚಿಸುವಂತೆ ಮಾಡಿದೆ ಇದು. "ಈ ವಯಸ್ಸಿನಲ್ಲಿ ಪ್ರೀತಿಪ್ರೇಮ ಅಂತೆಲ್ಲಾ ಬೇಡ. ಓದಿನಲ್ಲಿ ಶ್ರದ್ಧೆ ವಹಿಸು’ ಅಂತ ಅಮ್ಮ ಆಗಾಗ ಹೇಳುತ್ತಿದ್ದರಂತೆ. ಪ್ರತಿದಿನ ಪ್ರೀತಿ-ಪಾಠದ ನಡುವಿನ ಆಯ್ಕೆಯ ಬಗ್ಗೆ ತಾಯಿ ಮಗಳಿಗೆ ಜಗಳ ನಡೆಯುತ್ತಿತ್ತಂತೆ. ಅದೇ ಹುಡುಗಿಯ ಪಿತ್ತವನ್ನು ನೆತ್ತಿಗೇರಿಸಿದೆ. ಹುಡುಗ ಹುಡುಗಿ ಸೇರಿ ದಿಂಬಿನಿಂದ ಉಸಿರುಗಟ್ಟಿಸಿ ಆ ತಾಯಿ ಜೀವಕ್ಕೆ ಗತಿ ಕಾಣಿಸಿದ್ದಾರೆ.
ಕೊಲೆ ಮಾಡಿದರೆ ತಮ್ಮ ಮೇಲೆ ಅನುಮಾನ ಬರುತ್ತದೆ, ತಾವು ಸಿಕ್ಕಿಬೀಳಬಹುದು, ಶಿಕ್ಷೆಯಾಗಬಹುದು ಎಂಬುದನ್ನೇ ಯೋಚನೆ ಮಾಡದಷ್ಟು ಮುಗ್ಧರೇನಲ್ಲ ಆ ಮಕ್ಕಳು. ಹಾಗಾದರೆ ಭವಿಷ್ಯದ ಯೋಚನೆಯಿಲ್ಲದೆ, ನ್ಯಾಯಅನ್ಯಾಯಗಳ ವಿವೇಕವಿಲ್ಲದೆ ಪ್ರೇಮಪಾಶಕ್ಕೆ ಸಿಲುಕಿದ ಮನಸ್ಸುಗಳೆರಡು ಉದ್ರೇಕದಿಂದ ಮಾಡಿದ ಕೆಲಸವಾ ಇದು? ಅಮ್ಮನ ಬಗೆಗಿನ ಹೆಚ್ಚಿನ ಸಿಟ್ಟು ಅಥವಾ ತಮ್ಮ ಪ್ರೀತಿಯ ಗಾಢತೆ-ಇವೆರಡರಲ್ಲಿ ಯಾವುದು ಈ ಕೃತ್ಯಕ್ಕೆ ಮುಖ್ಯ ಪ್ರೇರಣೆಯಾಯಿತು? ಅಮ್ಮನೆಂಬ ಕಂಟಕವನ್ನೇ ನಿವಾಳಿಸಿ ಒಗೆಯಬೇಕೆನ್ನುವ ಮನಸ್ಥಿತಿ ಉಂಟಾಗಲು ಕಾರಣಗಳೇನು? ಅಮ್ಮನೂ ಏನಾದರೂ ದಗಲ್ಬಾಜಿ ಕೆಲಸ ಮಾಡಿರಬಹುದಾ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರಗಳೇನೇ ಇರಲಿ, ನಡೆದುಹೋಗಿರುವಂತದ್ದು ಮಾತ್ರ ಭಯಾನಕ.
ದಕ್ಷಿಣಕನ್ನಡದಲ್ಲಿ ಇಬ್ಬರು ಎದುರೆದುರು ನಿಂತು ಬಯ್ದಾಡಿಕೊಂಡರೆ ಫಿನಿಷ್! ಅಂದರೆ....ಜೀವನಪರ್ಯಂತ ಅವರೆಂದೂ ಮಾತಾಡುವುದಿಲ್ಲ. "ಇಕಾ, ಆ ವಿಷಯ ನಿನಗೆ ಬೇಡ...ಜಾಸ್ತಿಯಾಯ್ತು ನಿಂದು....ನಿನ್ನ ಅಧಿಕಪ್ರಸಂಗ ಎಲ್ಲ ಬೇಡ...ನಾನು ಬೇಡದ್ದೆಲ್ಲಾ ಹೇಳ್‌ಬೇಕಾಗ್ತದೆ...’ ಅಂತ ನಿಧಾನವಾಗಿ ಅಲ್ಲಿ ಬೈಗುಳದ ಕಾವು ಆರಂಭವಾದರೆ ಈ ಬೆಂಗಳೂರಿನಲ್ಲೆಲ್ಲ "ಬೋಸೂರಂ’ಗಳಿಂದಲೇ ಅರ್ಚನೆ ಶುರು. ಬೈಗುಳವು ಇಲ್ಲಿನಷ್ಟು ಸಹಜ ಸಲೀಸಲ್ಲ ದಕ್ಷಿಣಕನ್ನಡಿಗರಿಗೆ. ಸುಳ್ಳು ಹೇಳುವುದು ನಮಗೆ ಸಲೀಸಾಗಿದೆ. ಅಶಿಸ್ತು ಎನ್ನುವುದು ಕೆಲವರ ಸ್ವಭಾವಕ್ಕೊಂದು ಗರಿಯೆಂದೇ ಒಪ್ಪಿಕೊಳ್ಳಲಾಗಿದೆ ! ಈಗ ಕೊಲೆ ಮಾಡುವುದು ಕೂಡಾ ಕೆಲವರಿಗೆ ಸರಾಗವಾಗುತ್ತಿದೆಯೆ? ಈ ಬಗೆಗಿನ ಅಪರಾಧಿ ಭಾವ, ಪಾಪಪ್ರಜ್ಞೆ ಕಡಿಮೆಯಾದದ್ದೂ ಇದಕ್ಕೆ ಮುಖ್ಯ ಕಾರಣವಲ್ಲವೆ? "ಕೊಲೆ ಮಾಡೋದು ಏನ್ ಮಹಾ’ ಎಂಬ ಭಾವನೆ ಕೆಲವು ಆಫ್ರಿಕನ್ ದೇಶಗಳಲ್ಲಿರುವಂತೆ ನಮ್ಮಲ್ಲೂ ಬಂದರೆ ಪಡ್ಚ ಪಡ್ಚ .
ಗೊತ್ತಿದ್ದೂ ಗೊತ್ತಿದ್ದೂ ಸುಳ್ಳು ಹೇಳುವ, ತಪ್ಪು ಮಾಡುವ ಮನಸ್ಥಿತಿ ಹೆಚ್ಚಾಗುತ್ತಿದೆಯೆಂದರೆ ಗೊತ್ತಾಗುವುದರಲ್ಲೇ ಏನೋ ಸಮಸ್ಯೆ ಇದೆ ಅಂತಲೇ ಅರ್ಥ ! ಹಾಗಾಗಿ ಲೈಂಗಿಕ ಶಿಕ್ಷಣದ ಜತೆಜತೆಗೆ ನೈತಿಕ ಶಿಕ್ಷಣವೂ ಮನಮುಟ್ಟುವ ಹಾಗೆ ಮಕ್ಕಳಿಗೆ ದೊರೆಯಬೇಕಾದ್ದು ಇಂದಿನ ತುರ್ತು ಅಗತ್ಯ . ಕೆಲವು ಮಾಷ್ಟ್ರುಗಳೇ ಹಲ್ಕಟ್ ಮಾಡುತ್ತಿರುವಾಗ ಮಕ್ಕಳಿಗೆ ಸರಿದಾರಿ ತೋರಬೇಕಾದ ಜವಾಬ್ದಾರಿ ಶಾಲೆ, ಮನೆ, ಸಮಾಜ ಮೂರರ ಮೇಲೂ ಇದೆ. ಕಾಂಡೋಮ್ ಧರಿಸಿ ಏನ್ ಬೇಕಾದ್ರೂ ಮಾಡಿ ಅಂತ ತುತ್ತೂರಿ ಊದುವುದನ್ನು ಬಿಟ್ಟು , ಯಾವುದು ಸಹಜ ಯಾವುದು ಅಸಹಜ, ಯಾವುದು ಸಕ್ರಮ ಯಾವುದು ಅಕ್ರಮ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ-ಅರಿವು ಬೇಕಲ್ಲ. ಶಾಲಾ ಲೈಂಗಿಕ ಶಿಕ್ಷಣವು ಕಾಮವಾಂಛೆಯನ್ನು ನಿಯಂತ್ರಿಸುವ ಸಂಗತಿಯಾಗಿ ಬೋಧಿಸಲ್ಪಡಬೇಕೇ ಹೊರತು ಉತ್ತೇಜಿಸುವಂತಲ್ಲ.
ಒಂದು ಜೀವದ ಪ್ರೀತಿಯನ್ನು ಗೆದ್ದವರಿಗೆ ಇನ್ನೊಂದು ಜೀವದ ಪ್ರೀತಿಯನ್ನು ಪಡೆಯಲಾಗದಿದ್ದರೆ ಹೋಗಲಿ, ಇಂಥಾ ಪಾಪಕರ್ಮಕ್ಕೆ ಕ್ಷಮೆಯಿರಲಾರದು. ಮೈಸೂರಿನ ಆ ಘಟನೆಯನ್ನೂ , ಊರಿನಲ್ಲಿ ಮನೆಯನ್ನು ಮುನ್ನಡೆಸುತ್ತಿರುವ ನನ್ನ ಅಮ್ಮನನ್ನೂ ನೆನೆಸಿಕೊಳ್ಳುತ್ತಿದ್ದೇನೆ. ಅವಳ ಮುಖದಲ್ಲಿನ ಉದ್ವೇಗ ಹೆಚ್ಚಾದಂತಿದೆ.
1 comments:
very nice article. erosion of our values and culture is happening right in front of our eyes. still we r so helpless, not being able to do anything about it :(
Post a Comment