ಧನುಷ್ಕೋಟಿಯಲ್ಲಿ ಕಪಿಯೊಂದು ರಾಮಧ್ಯಾನ ನಿರತವಾಗಿದೆ. ತೀರ್ಥಯಾತ್ರೆ ಮಾಡುತ್ತ ಬಂದ ಅರ್ಜುನ ಅದನ್ನು ಮಾತಾಡಿಸುತ್ತಾನೆ. ಬಡ ಜುಣುಗಿನಂತಿದ್ದ ಆ ಮಂಗ, ತಾನು ಹನುಮಂತನೆಂದು ಹೇಳಿಕೊಳ್ಳುತ್ತದೆ ! ಆದರೆ ಅರ್ಜುನ ನಂಬಿಯಾನೆ? ಅವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು, ಆ ಕಪಿಯು ಹನುಮಂತ ಹೌದೋ ಅಲ್ಲವೋ ಎಂಬುದಕ್ಕಿಂತ ಹೆಚ್ಚಾಗಿ, ಸಮುದ್ರಕ್ಕೆ ಸೇತುವೆ ಕಟ್ಟುವುದು ದೊಡ್ಡ ವಿಷಯವಲ್ಲವೆಂದೂ, ತಾನೀಗ ಬಾಣದಲ್ಲೇ ಸಮುದ್ರಕ್ಕೆ ಸೇತುವೆ ಕಟ್ಟಬಲ್ಲೆನೆಂದೂ ಅರ್ಜುನ ಹೇಳುತ್ತಾನೆ. ಇದು ಅವರಿಬ್ಬರ ಮಧ್ಯೆ ಪಂಥಕ್ಕೆ ಕಾರಣವಾಗುತ್ತದೆ. ಅರ್ಜುನ ಮೂರು ಬಾರಿ ಬಾಣಗಳ ಸೇತುವೆ ಕಟ್ಟುವುದು, ಹನುಮಂತ ಮುರಿಯುವುದು. ಮುರಿಯುವುದಕ್ಕಾಗದಿದ್ದರೆ ಹನುಮಂತನು ರಾಮದಾಸ್ಯವನ್ನು ಬಿಟ್ಟು ಅರ್ಜುನನ ದಾಸನಾಗುವುದು, ಸೇತು ಮುರಿಯಲ್ಪಟ್ಟರೆ ಅರ್ಜುನ ಬೆಂಕಿಗೆ ಹಾರಿ ದೇಹತ್ಯಾಗ ಮಾಡುವುದೆಂದು ಪಂಥವಾಗುತ್ತದೆ. ಆದರೆ ಮೂರು ಬಾರಿಯೂ ಅರ್ಜುನ ಕಟ್ಟಿದ ಬಾಣಗಳ ಸೇತುವೆ ಹನುಮಂತನಿಂದ ಮುರಿಯಲ್ಪಟ್ಟಾಗ, ಅರ್ಜುನ ಕೃಷ್ಣನನ್ನು ಸ್ತುತಿಸುತ್ತ ಅಗ್ನಿಪ್ರವೇಶಕ್ಕೆ ಸಿದ್ಧನಾಗುತ್ತಾನೆ. ಆಗ ವೃದ್ಧ ಬ್ರಾಹ್ಮಣನ ವೇಷದಲ್ಲಿ ಕೃಷ್ಣ ಅಲ್ಲಿ ಕಾಣಿಸಿಕೊಳ್ಳುತ್ತಾನೆ. ಸಾಕ್ಷಿಯಿಲ್ಲದೆ ನಡೆದ ನಿಮ್ಮ ಪಂಥ ಊರ್ಜಿತವಲ್ಲ. ಇನ್ನೊಮ್ಮೆ ಇದನ್ನು ನಡೆಸಿ ಎನ್ನುತ್ತಾನೆ. ಕೂರ್ಮಾವತರಾವನ್ನು ತಾಳಿ ಅರ್ಜುನನ ಬಾಣದ ಸೇತುವೆಯನ್ನು ಆಧರಿಸುತ್ತಾನೆ. ಆಗ ಸೇತುವನ್ನು ಮುರಿಯಲಿಕ್ಕಾಗದೆ ಸೋತ ಹನುಮನಿಗೆ ಶ್ರೀರಾಮನಾಗಿ ದರ್ಶನ ನೀಡಿ, ಪಾರ್ಥನ ರಥದ ಧ್ವಜಾಗ್ರದಲ್ಲಿ ನೀನಿದ್ದು ಸೇವೆಯನ್ನು ಸಲ್ಲಿಸು ಎನ್ನುತ್ತಾನೆ.
ಶರಸೇತು ಮತ್ತು ರಾಮಸೇತು
ಇದು ಮಹಾಭಾರತದ ಪ್ರಕ್ಷಿಪ್ತ ಭಾಗ. ಆದರೆ ಯಕ್ಷಗಾನ ತಾಳಮದ್ದಳೆಯಲ್ಲಿ ಬಹಳ ಪ್ರಸಿದ್ಧವಾದ "ಶರಸೇತು ಬಂಧನ’ ಎಂಬ ಪ್ರಸಂಗ. ಅರ್ಜುನ-ಹನುಮಂತರ ನಡುವೆ ಕುಶಲ ವಾದ ವಿವಾದಕ್ಕೆ, ದೇವರು-ದೇವ ಭಕ್ತರೆಲ್ಲ ಒಂದೇ ಎಂಬ ಕೃಷ್ಣನ ಮಾತಿಗೆ ಇದು ಒಳ್ಳೆಯ ಹೂರಣವನ್ನೊದಗಿಸುತ್ತದೆ. ತಾಳಮದ್ದಳೆಯ ವೈಶಿಷ್ಟ್ಯ ಇರುವುದೇ ಪಾತ್ರಗಳ ಪ್ರತಿಸೃಷ್ಟಿಯಲ್ಲಿ. ಕೃಷ್ಣನ ಪಾತ್ರ ವಹಿಸಿದ ರಾಮ ಜೋಯಿಸ್ ಎಂಬ ಅರ್ಥಧಾರಿಯೊಬ್ಬರು, ರಾಮನಾಗಿ ಹನುಮನಿಗೆ ದರ್ಶನ ಕೊಟ್ಟ ಬಳಿಕ ಹೇಳುತ್ತಾರೆ- "ಈಗ ರಾಮನಾಗಿರುವುದೂ ನನಗೆ ಕಷ್ಟವಾಯಿತು !’ ತಾಳಮದ್ದಳೆಯ ಕೃಷ್ಣ ಮಾತ್ರ ಇಂತಹ ಮಾತನ್ನು ಉದ್ಗರಿಸಬಲ್ಲ ! ರಾಮನ ವ್ಯಕ್ತಿತ್ವದ ಎತ್ತರವನ್ನೂ , ತ್ರೇತಾಯುಗದ ನಂತರದ ದ್ವಾಪರ ಯುಗದ ಗುಣವನ್ನೂ ಆ ಒಂದು ವಾಕ್ಯ ತುಂಬಿಕೊಡುತ್ತದೆ.
ತಮ್ಮ ಕಾಲದ್ದೇ ಮಹಾನ್, ತಾವೇ ದೇವರ ಅಸಾಮಾನ್ಯ ಸೇವಕರು ಎಂಬ ಹನುಮನ ಅಹಂಕಾರವನ್ನು ಮುರಿಯುವುದು ಮತ್ತು ಅರ್ಜುನನಿಗೂ ಹಿಂದಿನ ಕಾಲದ ಮಹಾತ್ಮೆ ಅರಿವಾಗುವಂತೆ ಮಾಡುವುದು - ಈ ಎರಡು ಸಂಕಲ್ಪಗಳು ಪ್ರಸಂಗದಲ್ಲಿವೆ. ರಾವಣಾದಿಗಳನ್ನು ಕೊಂದು ಲಂಕೆಯಿಂದ ಹಿಂದಿರುಗುವಾಗ ರಾಮನು ತಾನೇ ಕಟ್ಟಿಸಿದ ಸೇತುವನ್ನು ಬಾಣ ಮುಖೇನ ತುಂಡರಿಸುತ್ತಾನೆ. ಇಲ್ಲಿಯೂ ಕೃಷ್ಣನು ಕೂರ್ಮಾವತಾರವನ್ನು ತೊರೆದ ಕೂಡಲೇ ಬಾಣದ ಸೇತುವೆಯೂ ಸಮುದ್ರಪಾಲಾಗುತ್ತದೆ. ಸೇತುವೆ ಹೇಗೆ ನಿರ್ಮಾಣವಾಯಿತು ಎಂಬುದಕ್ಕಿಂತ ಯಾಕೆ ನಿರ್ಮಾಣವಾಯಿತು ಎಂಬುದಕ್ಕೆ ಹೆಚ್ಚು ಮಹತ್ವ. ಹಾಗಾಗಿಯೇ ರಾಮನ ಸೇತುವೆಗೆ ಅಳಿಲು ಕೂಡಾ ತನ್ನ ಸೇವೆ ಸಲ್ಲಿಸಿದ್ದು ! ಕೇವಲ ಸೇತುವೆ ನಿರ್ಮಾಣವಷ್ಟೇ ಗುರಿಯಾಗಿದ್ದರೆ ಅಳಿಲಿನ ಸೇವೆ ಅಗತ್ಯವಿತ್ತೇ? ಅರ್ಜುನ ಮೊದಲು ಶರಸೇತುವನ್ನು ನಿರ್ಮಿಸಿದಾಗ, ವಾನರರನ್ನು ಹೀಯಾಳಿಸುವ ತನ್ನ ಸಾಮರ್ಥ್ಯವನ್ನು ಮೆರೆಸುವ ಉದ್ದೇಶವಷ್ಟೇ ಇತ್ತು, ಹಾಗಾಗಿ ಶರಸೇತು ಮುರಿದುಹೋಯಿತು. ಕೃಷ್ಣ ಬಂದಾಗ ಹನುಮನ ಅಹಂಕಾರವನ್ನೂ ಮುರಿಯುವ ಉದ್ದೇಶ ಇತ್ತು, ಸೇತುವೆ ಮುರಿಯಲಿಲ್ಲ !
ಕರುಣಾನಿಧಿಯವರ ದರ್ಪದ ಮಾತು ತಪ್ಪೆನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಆದರೆ ಹಡಗು ಸಂಚಾರ ಮಾರ್ಗದ ಲಾಭನಷ್ಟಗಳ ಬಗ್ಗೆ ಚರ್ಚಿಸದೆ "ರಾಮ ಕಟ್ಟಿದ ಸೇತುವೆ ಉಳಿಯಬೇಕು’ ಅಂತ ರಚ್ಚೆ ಹಿಡಿಯುವುದರಲ್ಲಿ ಯಾವ ಅರ್ಥವೂ ಇಲ್ಲ. ಸಮುದ್ರವನ್ನು ಕಲಕದಿರುವುದರಿಂದ ಲಾಭ ಹೆಚ್ಚೋ ಅಥವಾ ಹೊಸ ಮಾರ್ಗ ರಚನೆಯಿಂದ ಹೆಚ್ಚೋ ಅನ್ನುವುದು ಚರ್ಚೆಯಾಗಬೇಕಾದ್ದು. ಅದನ್ನು ಬಿಟ್ಟು, ಅಗಸನ ಸಂಶಯಕ್ಕೆ ಉತ್ತರವಾಗಿ ಪತ್ನಿಯನ್ನೇ ತೊರೆದ ಆ ರಾಜಾರಾಮನನ್ನು ನಂಬುವ ನಾವು, ಸೇತುವೆಯ ಬಗ್ಗೆ ಕೆಲವರು ಸಂಶಯ ವ್ಯಕ್ತಪಡಿಸಿದರೆ ರೌದ್ರಾವತಾರ ತಾಳಬೇಕೇ?!
ಕೃಷ್ಣನ ದ್ವಾರಕಾ ನಗರಿ ಸಮುದ್ರದಲ್ಲಿ ಮುಳುಗಿದ್ದು ಸುಳ್ಳು ಅನ್ನುತ್ತಿದ್ದ ನಾವು ಗುಜರಾತ್ ಸಮುದ್ರದಾಳದಲ್ಲಿ ಪಟ್ಟಣದ ಕುರುಹುಗಳು ಪತ್ತೆಯಾದ ಬಳಿಕ ಮುಟ್ಟಿ ಮುಟ್ಟಿ ನೋಡಿಕೊಳ್ಳುವಂತಾಯಿತು ! ಕ್ರಿ.ಪೂ. ೧೫೦೦ ವರ್ಷಗಳ ಹಿಂದಿನ ಸಿಂಧೂ ನಾಗರಿಕತೆಯೇ ಪ್ರಾಚೀನ ಎಂದಿದ್ದ ನಮಗೆ ಪ್ರಾಚೀನ ಕೃತಿಗಳಲ್ಲಿ ಪ್ರಸ್ತಾಪಿಸಲ್ಪಟ್ಟಿರುವ ಸರಸ್ವತಿ ನದಿ ಒಣಗಿದ್ದು ೫೦೦೦ ವರ್ಷಗಳ ಹಿಂದೆ ಎಂಬುದು ಅಚ್ಚರಿ ಹುಟ್ಟಿಸಿತು. ಉತ್ತರ ಭಾರತದಲ್ಲಿ ಅದರ ಹರಿವಿದ್ದ ಪ್ರದೇಶಗಳ ಚಿತ್ರವನ್ನು ನಾಸಾ ಒದಗಿಸಿತು. ಹೀಗೆ ಇವುಗಳ ಬಗೆಗೆಲ್ಲಾ ನಮಗೆ ಹೇಳುತ್ತಿರುವುದು ಅಮೆರಿಕದಂಥ ದೇಶಗಳು ! ನಾವು ಮಾಡಿದ ಸಂಶೋಧನೆ ಅತ್ಯಲ್ಪ .
೧೮೬೦ರಲ್ಲಿ ಬ್ರಿಟಿಷರಿಂದ ಸೇತುಸಮುದ್ರಂ ಯೋಜನೆ ಪ್ರಸ್ತಾಪಿಸಲ್ಪಟ್ಟಿತ್ತು. ೧೯೫೫ರಲ್ಲಿ ಸೇತುಸಮುದ್ರಂ ಪ್ರಾಜೆಕ್ಟ್ ಸಮಿತಿಯನ್ನು ಕೇಂದ್ರ ಸರಕಾರ ರಚಿಸಿತ್ತು. ೧೯೯೯ರಲ್ಲಿ ವಾಜಪೇಯಿವರು ಪ್ರಧಾನಿಯಾಗಿದ್ದಾಗ ಯೋಜನೆಗೆ ವಿಶೇಷ ರೂಪುರೇಷೆ ಬಂತು. ೨೦೦೦-೦೧ರ ಕೇಂದ್ರ ಬಜೆಟ್‌ನಲ್ಲಿ ಈ ಬಗ್ಗೆ ಅಧ್ಯಯನಕ್ಕಾಗಿ ೪.೮ ಕೋಟಿ ಬಿಡುಗಡೆ ಮಾಡಲಾಗಿತ್ತು. ಬಳಿಕ ೨ ಜೂನ್ ೨೦೦೫ರಂದು ಪ್ರಧಾನಿ ಮನಮೋಹನ್ ಸಿಂಗ್ ಈ ಯೋಜನೆ ಉದ್ಘಾಟಿಸಿದರು. ಹೀಗೆ ಈ ದೀರ್ಘ ಕಾಲವೇ ಯೋಜನೆಯ ಬಗೆಗಿನ ಸಂಶಯಗಳನ್ನು ಹೆಚ್ಚಿಸುತ್ತದೆ. ನದಿ ತಿರುವು ಯೋಜನೆಗಳೇ ನೂರಾರು ಸಂಶಯಗಳನ್ನು ಹುಟ್ಟುಹಾಕಿರುವಾಗ ಅವಕ್ಕಿಂತ ದೊಡ್ಡದಾದ ಈ ಯೋಜನೆಯ ಬಗ್ಗೆ ಆಳ ವಿಮರ್ಶೆ ಬೇಡವೆ?
ಯೋಜನೆ ಇರಲಿ, ಸೇತುಭಂಗ ತಪ್ಪಲಿ ?!
ಸೇತುವನ್ನು ಉಳಿಸಬೇಕು ಎನ್ನುವಲ್ಲಿ ಉದ್ದೇಶ ಏನು? ಕೇವಲ ಭಕ್ತಿ-ನಂಬಿಕೆಯೆ? ಲವ-ಕುಶರು ಅಯೋಧ್ಯೆಗೆ ಬಂದು ಆಸ್ಥಾನಮಂಟಪದಲ್ಲಿ ರಾಮಾಯಣವನ್ನು ಹಾಡಿದಾಗ, ಇದು ಯಾರ ಕತೆಯಪ್ಪಾ ಎಂಬಂತೆ ಪ್ರೇಕ್ಷಕರ ನಡುವೆ ಕೂತು ಕೇಳಿದವನು ರಾಮ ! ಅಂಥವನು ಮುಟ್ಟಿದ್ದು ಕಟ್ಟಿದ್ದು ಎಲ್ಲವೂ ಹಾಗೆಯೇ ಉಳಿಯಬೇಕು, ಪೂಜೆ ಪುರಸ್ಕಾರಕ್ಕೆ ಒಳಗಾಗಬೇಕು ಅನ್ನುವಿರಾದರೆ, ರಾಮ ಮೆಟ್ಟಿದ ಕಲ್ಲು ಕೂಡಾ ಕಲ್ಲಾಗಿ ಉಳಿಯಲಿಲ್ಲ , ಆಕೆ ಮೊದಲಿನ ಪರಿಶುದ್ಧ ಅಹಲ್ಯೆಯಾದಳು ! "ಅಷ್ಟಕ್ಕೂ, ಸೇತುವೆಯನ್ನು ಕಟ್ಟಿಸಿದ್ದು ರಾಮ, ಕಟ್ಟಿದವರು ಕಪಿಗಳು. ಆ ದೇವರೇ ಈಗ ನಮ್ಮಲ್ಲಿ ಇನ್ನೊಂದು ಹಡಗು ದಾರಿಯನ್ನು ಕಟ್ಟಿಸುತ್ತಾನೆಂದೋ ಮಾಡಿಸುತ್ತಾನೆಂದೂ ನಂಬಬಹುದಲ್ಲ ?!’ ಅಂತ ಕೇಳಿದರೊಬ್ಬರು. ಇದು ಕುಹಕವಲ್ಲ, ನಮ್ಮ ನಂಬಿಕೆಗಳು ಎಷ್ಟೊಂದು ಬಲಹೀನವಾಗಿವೆ ಎನ್ನುವುದಕ್ಕೆ ಉದಾಹರಣೆ.
ಭಾರತೀಯರಿಗೆ ಪ್ರತಿಯೊಂದು ಪ್ರಕೃತಿನಿರ್ಮಿತ ವಸ್ತುವೂ ದೇವರೇ ಆಗಿರುವಾಗ ಯಾವುದನ್ನಾದರೂ ಪರಮಪವಿತ್ರವಾಗಿಸುವುದು ಕಷ್ಟವೇನಲ್ಲ ! ಯೋಜನೆಯೇ ಮೂರ್ಖತನದ್ದು ಎನ್ನುತ್ತಿದ್ದ ಬಿಜೆಪಿ ಪಕ್ಷವೀಗ,"ಯೋಜನೆ ಇರಲಿ, ಸೇತುಭಂಗ ತಪ್ಪಲಿ’ ಅಂತ ರಾಗ ಬದಲಿಸಿದೆ. ಸೇತುವೆ ರಾಮ ರಚಿಸಿದ್ದೇ ಅಂತಾದರೂ, ಹಳೆಬೀಡು ಬೇಲೂರು ದೇವಾಲಯಗಳು ಅಥವಾ ತಾಜಮಹಲ್ ರೂಪದಲ್ಲಿ ಅದನ್ನು ಉಳಿಸಿಕೊಳ್ಳುವುದು, ಜನರಿಗೆ ತೋರಿಸುವುದು ಸಾಧ್ಯವಿಲ್ಲವಲ್ಲ. ಕೇವಲ ಸ್ಯಾಟಲೈಟ್ ಫೋಟೊ ನೋಡಿ ಆವೇಶಕ್ಕೊಳಗಾಗುವವರು ದೇವರಮನೆಯಲ್ಲೂ ಅದನ್ನಿಟ್ಟುಕೊಳ್ಳಬಹುದಲ್ಲ. ಇನ್ನು , ರಾಮ ಐತಿಹಾಸಿಕ ವ್ಯಕ್ತಿ ಅಂತಾದರೆ ಮಾತ್ರ ಆತ ದೇವರು ಅಂತನಿಸಿಕೊಳ್ಳುವುದೇ?
ನೀತಿ- ಆಸ್ತಿಕರಾದವರು ತಮ್ಮ ನಂಬಿಕೆ ಆಚರಣೆಗಳ ತಾತ್ತ್ವಿಕ ವೈಚಾರಿಕ ಆಳವನ್ನು , ಘನತೆಯನ್ನು ಹೆಚ್ಚಿಸಿಕೊಳ್ಳಬೇಕು, ಇಲ್ಲವಾದರೆ ಕರುಣಾನಿಧಿಯಂತಹ ಹುಂಬರಿಂದ ಉಗಿಸಿಕೊಳ್ಳಬೇಕು !
ತಾಳಮದ್ದಳೆ ಪುರಾಣ
'ತಾಳಮದ್ದಳೆ ಪ್ರಸಂಗ’ಎಂಬ ಲೇಖನದಲ್ಲಿ ಹಿರಿಯ ವಿಮರ್ಶಕ ಕೀರ್ತಿನಾಥ ಕುರ್ತಕೋಟಿ ಹೇಳುತ್ತಾರೆ-"ತಾಳಮದ್ದಳೆಯಲ್ಲಿ ಕತೆಯನ್ನು ತನಗೆ ಬೇಕಾದಂತೆ ಬೆಳೆಸಲು ಅರ್ಥಧಾರಿಗೆ ಸ್ವಾತಂತ್ರ್ಯವಿದೆ. ಅರ್ಥಧಾರಿ ಪಾತ್ರವೂ ಆಗುವುದರಿಂದ ತಿಳಿವಳಿಕೆ ಮತ್ತು ಅನುಭವ ಒಂದರೊಳಗೊಂದು ಹುಟ್ಟಿ ಬರುತ್ತವೆ. ಒಂದು ದೃಷ್ಟಿಯಿಂದ ಹೇಳಬೇಕೆಂದರೆ ಮೂಲಕತೆಯಲ್ಲಿಯ ಪಾತ್ರಗಳಿಗೆ ಮತ್ತೊಮ್ಮೆ ಬದುಕುವ ಅವಕಾಶ ದೊರೆತಂತಾಗುತ್ತದೆ. ಕರ್ಣನ ಬದುಕು ಹೀಗೆಯೇ ಕೊನೆಗೊಳ್ಳಬೇಕೇ ಎಂದು ಪ್ರಶ್ನೆ ಕೇಳಿದರೆ ಕರ್ಣನಿಗೆ ಮತ್ತೊಮ್ಮೆ ಬದುಕಿ ತೋರಿಸುವ ಅವಕಾಶ ಇಲ್ಲಿ ದೊರೆತಂತಾಗುತ್ತದೆ.’ ಹೌದು, ಪುರಾಣಗಳ ಬಗ್ಗೆ ಅಸಾಮಾನ್ಯವಾದ ಚರ್ಚೆಯನ್ನು ಯಕ್ಷಗಾನ ತಾಳಮದ್ದಳೆಗಳು ನಡೆಸುತ್ತವೆ. ಅಲ್ಲಿನ ಪ್ರಸಂಗಗಳಲ್ಲಿ ಎಷ್ಟೋ ಬಾರಿ ರಾಮನೆದುರು ವಾಲಿ, ರಾವಣರು (ಮಾತಿನಲ್ಲಿ) ಗೆಲ್ಲುತ್ತಾರೆ ! ಖಂಡಿತವಾಗಿ ರಾವಣನ ಸಂಹಾರ ಮಾಡಬಲ್ಲ ಬ್ರಹ್ಮಾಸ್ತ್ರವನ್ನು ಪ್ರಯೋಗಿಸುವ ಮೊದಲು ರಾಮನಾಗಿ ದೇರಾಜೆ ಸೀತಾರಾಮಯ್ಯ , ವಿಭೀಷಣನ ಅನುಮತಿ ಕೇಳುತ್ತಾರೆ ! ಪುರಾಣಗಳು ಹೀಗೆ ನಮ್ಮ ಅರಿವಿನ ವಿಸ್ತಾರದ ಭಾಗವಾಗಿ ಬರಬೇಕು. ನಂಬುವ ಮತ್ತು ಸಂಶಯಿಸುವ ಎರಡು ಗುಣಗಳೂ ರಾಮಾಯಣ-ಮಹಾಭಾರತಗಳಲ್ಲಿವೆ. ಸಂಶಯ ನಿವಾರಣೆಯಾಗಬೇಕೆಂದರೆ ಸೀತೆಯಾದರೂ ಅಗ್ನಿದಿವ್ಯವನ್ನು ಹಾಯ್ದು ಬರಬೇಕು, ಗರ್ಭವತಿಯಾದರೂ ಅರಮನೆಯನ್ನು ತೊರೆಯಬೇಕು. ಕಡಲತೀರದಲ್ಲಿ ವಿಭೀಷಣನಿಗೆ ರಾಮ ಪಟ್ಟಾಭಿಷೇಕ ಮಾಡಿದಾಗ ಯಾರೋ ಕೇಳಿದರಂತೆ - ಒಂದುವೇಳೆ ರಾವಣ ಸೋಲದಿದ್ದರೆ ವಿಭೀಷಣನಿಗೆ ಏನು ಮಾಡುತ್ತೀಯೆ?-"ಅವನಿಗೆ ಅಯೋಧ್ಯೆಯ ಪಟ್ಟವನ್ನು ಬಿಟ್ಟುಕೊಡುತ್ತೇನೆ !’ ಅನ್ನುತ್ತಾನೆ ವಾಲ್ಮೀಕಿಯ ಶ್ರೀರಾಮಚಂದ್ರ. ಅಂತಹ ರಾಮಭಕ್ತರ ನಂಬಿಕೆಗಳು ಅಭಿವೃದ್ಧಿಗೆ ಮಾರಕವಾಗದೆ ಪೂರಕವಾಗಿರಲಿ. "ನಂಬದೆ ಕೆಡುವರಲ್ಲದೆ, ನಂಬಿ ಕೆಟ್ಟವರಿಲ್ಲವೋ..’ ಎಂಬ ವಾಣಿ ನಿಜವಾಗಲಿ.
ಸೇತುವೆಯ ಮೂಲಕ ಲಂಕೆಗೆ ಹೋದ ರಾಮ ಮರಳಿದ್ದು ಪುಷ್ಪಕವಿಮಾನದಲ್ಲಿ ಎಂಬುದು ಮರೆತುಹೋಗದಿರಲಿ !
Read more...