February 13, 2009
February 03, 2009
ಗುಣಯುತನಿಗೆ ಮಂಗಲ ಪದ್ಯ

(೧೯೭೦ರ ದಶಕದಲ್ಲಿ ಬಭ್ರುವಾಹನನಾಗಿ ಶಂಭು ಹೆಗಡೆ )
'ಶಂಭು ಹೆಗಡೆ ಪ್ರತ್ಯೇಕ ಪ್ರಭೆ ಇರುವ ವ್ಯಕ್ತಿ. ಅವರು ಬೇರೆ ಯಾರಂತೆಯೂ ಅಲ್ಲ. ಯೋಗ-ಯೋಗ್ಯತೆ ಎರಡೂ ಇತ್ತು. ಪರಂಪರೆಯನ್ನು ಮೈಗೂಡಿಸಿಕೊಂಡು, ಈ ಕಾಲವನ್ನು ಅರ್ಥವಿಸಿಕೊಂಡು ಮಾದರಿಯಾಗಬಲ್ಲ ಸಾಮರ್ಥ್ಯವಿತ್ತು. ಸಂಘಟಕ-ಚಿಂತಕ-ಕೊರಿಯೋಗ್ರಾಫರ್-ವೇಷಧಾರಿ ಹೀಗೆ ಎಲ್ಲವೂ ಆಗಿದ್ದುದರಿಂದ ಅವರು ಕೇವಲ ಯಕ್ಷಗಾನ ಕಲಾವಿದರಲ್ಲ. ಭಾರತದ ಶ್ರೇಷ್ಠ ಕಲಾವಿದರಲ್ಲಿ ಒಬ್ಬರು. ರಂಗಭೂಮಿಯ ನಾನಾ ನರ್ತನ ಪ್ರಕಾರಗಳನ್ನು ತಾತ್ವಿಕವಾಗಿ ಅರ್ಥಮಾಡಿಕೊಂಡು, ಭಾರತದ ರಂಗಭೂಮಿಯ ಮೂಲಕ ಯಕ್ಷಗಾನವನ್ನು ನೋಡಬಲ್ಲವರಾಗಿದ್ದರು. ಚಿಂತನೆ ಮತ್ತು ರಂಗಸಾಧನೆ ಎರಡಲ್ಲೂ ಎತ್ತರಕ್ಕೆ ಏರಿದವರು. ಅವರು ಯಕ್ಷಗಾನದ ಎಚ್ಚರ ಮತ್ತು ಸೃಜನಶೀಲತೆಯ ಸಂಕೇತ. ಊರಿನ ಪಂಚಾತಿಕೆದಾರನಾಗಿ, ಮೇಷ್ಟ್ರಾಗಿ, ಸಾಮಾನ್ಯರ ಜತೆ ಬೆರೆಯಬಲ್ಲವರಾಗಿದ್ದರು. ಬಹಳ ಚೆನ್ನಾಗಿ ಡ್ರಾಯಿಂಗ್ ಮಾಡುತ್ತಿದ್ದರು. ಯಕ್ಷಗಾನ ಡೋಲಾಯಮಾನ ಸ್ಥಿತಿಯಲ್ಲಿರುವ ಈ ಸಂದರ್ಭದಲ್ಲಿ, ಸಾಧನೆಯ ಉತ್ತುಂಗಕ್ಕೇರಿ ಗೈಡೆನ್ಸ್ ಕೊಡುವ ಸ್ಥಾನದಲ್ಲಿದ್ದ ಅವರನ್ನು ಕಳೆದುಕೊಂಡದ್ದು ಬಹಳ ಬೇಸರದ ಸಂಗತಿ.' ಎನ್ನುತ್ತಾರೆ ಮೂವತ್ತು ವರ್ಷಗಳ ಒಡನಾಟವಿರುವ ಹಿರಿಯ ಅರ್ಥಧಾರಿ- ಲೇಖಕ ಡಾ.ಎಂ. ಪ್ರಭಾಕರ ಜೋಶಿ.
January 30, 2009
‘ಕರ್ಣ’ ಕಠೋರ
ಕೌರವನಿಂದ ರಣದ ವೀಳ್ಯ ಪಡೆದು, ಹಸ್ತಿನಾವತಿಯ ರಾಜಸಭೆಯಿಂದ ಹೊರಬಂದಿದ್ದಾನೆ ಕೃಷ್ಣ . ಆಗ ಕರ್ಣನನ್ನು ಕರೆದು ರಥದಲ್ಲಿ ಕೂರಿಸಿಕೊಂಡು ಆತನ ಜನ್ಮ ರಹಸ್ಯವನ್ನು ಬಿಚ್ಚಿಡುತ್ತಾನೆ. ಮಹಾಭಾರತದಲ್ಲಿ ಅದೊಂದು ವಿಶೇಷ ಸಂದರ್ಭ; ಕರ್ಣ ಭೇದನ. ನೀನು ಸೂತ ಪುತ್ರನಲ್ಲ ಕುಂತಿಯ ಮಗ. ಇದನ್ನು ಈಗ ಲೋಕಕ್ಕೆ ಪ್ರಕಟಿಸಿದರೆ, ಪಾಂಡವರು-ಕೌರವರು ಒಂದಾಗಿ ನೀನು ಹಸ್ತಿನಾವತಿಯ ಮಹಾರಾಜನಾಗಬಹುದು, ಮುಂದೆ ನಡೆಯಲಿರುವ ಮಹಾಯುದ್ಧ ತಪ್ಪಿಸಬಹುದು ಎನ್ನುತ್ತಾನೆ ಕೃಷ್ಣ. ಆಗ ಕರ್ಣ ಮನಸ್ಸಿಗೆ ಬಂದದ್ದನ್ನು ಹೀಗೆ ಹೇಳಿರಬಹುದೆ?!-
‘ಕೃಷ್ಣಾ , ಸಾಕು ಸಾಕು. ನಿನ್ನ ಮಾತು ‘ಕರ್ಣ’ ಕಠೋರ. ಅಪ್ಪ ಅದಿರಥ, ಮಿತ್ರ ಕೌರವ ; ನನಗೆ ಸಾಕಿದವರು ಬೇಕು. ಸಾಗಹಾಕುವವರಲ್ಲ. ನೀನು ಸುಳ್ಳಾಡುವವನಲ್ಲವೆಂದು ಗೊತ್ತು. ವೈರಿ ಕಂಸನನ್ನೇ ಅಶರೀರವಾಣಿಯ ಮೂಲಕ ಎಚ್ಚರಿಸಿ ನಂತರ ಹುಟ್ಟಿದ ನೀನು ದೇವರೆಂದು ಬಲ್ಲೆ. ಆದರೆ ಹತಭಾಗ್ಯನಾದ ನನ್ನನ್ನು ಈಗ ದೇವರಾಗಿಸುವ ಪ್ರಯತ್ನಕ್ಕೆ ಕೈಹಾಕಬೇಡ !
ಶಾಪ ಕೊಡುವುದರಲ್ಲಿ ಸಿದ್ಧಹಸ್ತರಾದ ದೂರ್ವಾಸರು ಕೌಮಾರ್ಯದಲ್ಲಿದ್ದ ಕುಂತಿಯ ಸೇವೆಯನ್ನು ಮೆಚ್ಚಿ , ಮಕ್ಕಳನ್ನು ನೀಡಬಲ್ಲ ಮಂತ್ರಗಳನ್ನು ಬೋಧಿಸಿದರೇ? ಅದೂ ಒಂದಲ್ಲ ಐದು. ಆ ಮಂತ್ರಗಳಿಂದ ಹುಟ್ಟಿದ ಪಾಂಡವರು ಒಳ್ಳೆಯವರು ಅನ್ನಿಸಿಕೊಂಡರೆ, ಅದೇ ಮಂತ್ರದಿಂದ ಹುಟ್ಟಿದ ನಾನು ಕೆಟ್ಟವನಾದೇನೇ? ಇಲ್ಲ. ಆದರೆ ನನ್ನನ್ನು ಕೆಟ್ಟವನನ್ನಾಗಿಸಲು ಈಗ ನೀನು ಯತ್ನಿಸುತ್ತಿದ್ದೀಯ. ಕುಂತಿಯು ಸೂರ್ಯನ ಮೂಲಕ ನನ್ನನ್ನು ಪಡೆದಳಾದರೂ ನನಗೆ ಸಿಕ್ಕಿದ್ದು ಕತ್ತಲೆಯ ಬದುಕು. ಕುಮಾರಿಯಾಗಿದ್ದ ಆಕೆ ಅಂದು ಬರಬಹುದಾಗಿದ್ದ ಅಪವಾದಕ್ಕೆ ಹೆದರಿದ್ದಳು. ಈಗ ನನಗೆ ಅಪವಾದವನ್ನು ಕಟ್ಟುವ ಯತ್ನ ಮಾಡುತ್ತಿದ್ದೀಯಾ. ಶಂತನುವಿನ ಪತ್ನಿಯಾಗಿದ್ದ ಗಂಗೆ ತನ್ನ ಏಳೂ ಮಕ್ಕಳನ್ನು ನದಿಗೆಸೆದು ಮೋಕ್ಷ ಕರುಣಿಸಿದಳಂತೆ. ಆದರೆ ಕುಂತಿ ಅದೇ ಗಂಗೆಯಲ್ಲಿ ನನ್ನನ್ನು ತೇಲಿ ಬಿಟ್ಟಳು. ಗಂಗೆಯೂ ನನ್ನನ್ನು ಮುಳುಗಿಸಲಿಲ್ಲ. ಹಸ್ತಿನಾವತಿಯ ಕುಡಿಯೊಂದು ಉಳಿಯಲೆಂದು ಆಕೆಗೂ ಅನ್ನಿಸಿರಬೇಕು !
ನನ್ನ -ಪಾಂಡವರ ವೈರದ ಮಧ್ಯೆಯೂ ಎಲ್ಲವನ್ನೂ ಸಹಿಸಿ, ಹೆಣ್ಣೊಬ್ಬಳು ಈ ಜನ್ಮ ವೃತ್ತಾಂತ ಬಚ್ಚಿಟ್ಟಿದ್ದಾಳೆಂದರೆ, ಆಕೆ ನಿಜವಾಗಿ ಸಹನಾಮೂರ್ತಿ ಧರ್ಮರಾಯನ ತಾಯಿಯೇ ! ನೀನು ದೇವರಾಗಿ ಮಾತಾಡು, ರಾಜಕೀಯ ನಿಷ್ಣಾತನಂತೆ ಆಡಬೇಡ. ಈ ಸತ್ಯವನ್ನು ಒಪ್ಪಿದರೂ ನಾನು ಕೌರವನ ಪಕ್ಷ ಬಿಡಲಾರೆನೆಂದು ನಿನಗೆ ಗೊತ್ತು. ಹಾಗಾಗಿ ಈ ಹಿಂದೆಂದೂ ಹೇಳದೆ ಈಗ ಹೇಳುತ್ತಿದ್ದೀಯೆ. ಕೌರವನ ಸಾಮ್ರಾಜ್ಯ ಪತನಕ್ಕೆ ನೀನು ಮೊದಲ ಹೆಜ್ಜೆಯಿಟ್ಟಿರುವುದು ಈ ಕರ್ಣನ ಎದೆಯ ಮೇಲೆ. ‘ಪಾಂಡವರನ್ನು ನನ್ನ ಪ್ರಾಣಗಳಂತೆ ರಕ್ಷಿಸುತ್ತೇನೆ ’ಎಂದು ಕುಂತಿಗೆ ಮಾತು ಕೊಟ್ಟವನಂತೆ ನೀನು. ಆ ಪಾಂಡವರಲ್ಲಿ ನಾನೂ ಇದ್ದೇನೆಯೆ?!
January 23, 2009
ಎಲ್ಲ ಉತ್ತರಗಳನ್ನು ಬಲ್ಲವರಿಗೆ
'ಸ್ಲಂ ಡಾಗ್ ಮಿಲಿಯನೇರ್’ನ ಹೆಚ್ಚುಗಾರಿಕೆಯಿರುವುದು, ಅದು ವಾಸ್ತವವನ್ನು ತೋರಿಸಿದೆ ಅಂತ ಮಾತ್ರ ಅಲ್ಲ. ವಾಸ್ತವವನ್ನು ತೋರಿಸಿದ್ದರೂ ಡಾಕ್ಯುಮೆಂಟರಿಯಾಗದೇ ಉಳಿದಿದೆ ಮತ್ತು ಭಾರತದ ನಾನಾ ಸಂಗತಿಗಳಿಗೆ ಮುಖಾಮುಖಿಯಾಗಿದೆ ಎಂಬುದರಿಂದ. ವಾಸ್ತವವನ್ನು ಬೇರೆ ರೀತಿಯೂ ತೋರಿಸಬಹುದಿತ್ತಾದರೂ, ಈಗ ಇರುವುದೂ ಬಹಳ ಕಲಾತ್ಮಕವಾಗಿ, ಆನಂದದಾಯಕವಾಗಿಯೇ ಇದೆ. ಇಲ್ಲಿ ಹಿಂಸೆ-ಕ್ರೌರ್ಯ, ಗಲೀಜು ವಿಜೃಂಭಿಸಿದೆ ಅನ್ನುವುದು, ಕೈ ಮಣ್ಣಾಗದವರ ಅನಿಸಿಕೆಯಷ್ಟೇ. ಆ ಸಿನಿಮಾಗಿಂತ ಹೆಚ್ಚಿನ ಹಿಂಸೆ-ಕ್ರೌರ್ಯ ನಮ್ಮ ಕನ್ನಡ ಸಿನಿಮಾಗಳಲ್ಲೇ ಇದೆ. ಆ ಸಿನಿಮಾಗಿಂತ ಹೆಚ್ಚಿನ ಗಲೀಜು ಈ ಬೆಂಗಳೂರಿನಲ್ಲಿ, ರಾಜ್ಯದಲ್ಲಿ ಧಾರಾಳವಾಗಿ ಕಣ್ಣೆದುರಿಗಿದೆ.
‘ಇಂಡಿಯಾ ಅಂದರೆ ಇಷ್ಟು ಮಾತ್ರ’ಅಂತ ಸಿನಿಮಾದಲ್ಲೆಲ್ಲೂ ಹೇಳಿಲ್ಲ. ಅಷ್ಟಕ್ಕೂ ಕರಣ್ ಜೋಹರ್ ತೋರಿಸುವ ಮೋಜುಮಸ್ತಿ-ಹೈಫೈ ಇಂಡಿಯಾವೇ ರಿಯಲ್ ಇಂಡಿಯಾ ಅಂತ ನೀವು ಒಪ್ಪುತ್ತೀರಾ? ಆಗ ಯಾಕೆ ಯಾರೂ ಮಾತಾಡುವುದಿಲ್ಲ? ಹೇಲಿನಿಂದ ಎದ್ದು ಬರುವ ಹುಡುಗನ ದೃಶ್ಯ ನೋಡಿ ನಾನು ಹಾಗೂ ಸ್ನೇಹಿತರಂತೂ ನಗೆಯಾಡಿ ಸಂತೋಷಪಟ್ಟೆವು. ಅಮಿತಾಬ್ ಕೂಡಾ ಅಸಹ್ಯಪಡದೆ ಆಟೊಗ್ರಾಫ್ ಕೊಟ್ಟಿರುವಾಗ, ನಮಗೆ ಅಸಹ್ಯವಾಗುವುದು ಏನಿದೆ?! ಆ ದೃಶ್ಯ ಅಮಿತಾಬ್ ಅಥವಾ ಸಿನಿಮಾಗಳು ಭಾರತದಲ್ಲಿ ಹೊಂದಿರುವ ಪ್ರಭಾವ ಶಕ್ತಿಯನ್ನೂ ತೋರಿಸುತ್ತದೆ. ಅಷ್ಟಕ್ಕೂ ಬಚ್ಚನ್ ಸಿನಿಮಾದ ಬಗ್ಗೆ ಕಿಡಿ ಕಾರಿದ್ದಾರೆಂದು ತಪ್ಪು ವರದಿಗಳು ಪ್ರಕಟವಾಗಿವೆ. ಅದಕ್ಕೆ ಅಮಿತಾಬ್ ತಮ್ಮ ಬ್ಲಾಗ್‌ನಲ್ಲಿ ಮತ್ತೆ ಸ್ಪಷ್ಟನೆಯನ್ನೂ ನೀಡಿದ್ದಾರೆ.
ಜಮಾಲ್‌ನನ್ನು ಚಾಯ್‌ವಾಲಾ ಎನ್ನುತ್ತಾ ಅನಿಲ್‌ಕಪೂರ್ ಅಣಕಿಸುವುದು, ಪೊಲೀಸರು ಯಾವ್ಯಾವುದೋ ಕ್ಷುಲ್ಲಕ ಕಾರಣಗಳಿಗಾಗಿ ವಿಚಾರಣೆಗೆ ಒಯ್ಯುವುದು ಇವೆಲ್ಲಾ ಭಾರತದಲ್ಲಿ ಪ್ರತಿದಿನ ನಡೆಯುವಂಥದ್ದೇ. ಅದು ವಿಚಿತ್ರ ಕಾನ್ಸೆಪ್ಟ್ ಏನೂ ಅಲ್ಲ. ಇನ್ನು ಆ ಸಿನಿಮಾ ಆಸ್ಕರ್‌ಗೆ ಅರ್ಹವೋ ಅಲ್ಲವೋ ಅನ್ನುವುದು ಬೇರೆಯೇ ಚರ್ಚೆ. ಅದಕ್ಕೆ ಬೇರೆಯೇ ಸಿದ್ಧತೆ ಬೇಕು. ಬಹಳ ಬೇಸರದ ಸಂಗತಿಯೆಂದರೆ, ಇದರಲ್ಲಿ ರಾಮನನ್ನು ಅಪಮಾನಿಸಲಾಗಿದೆ, ಇದರಿಂದಾಗಿ ಭಾರತದ ಮರ್ಯಾದೆ ಹೋಯಿತು ಅಂತೆಲ್ಲ ಕೆಲವರು ಹುಯಿಲೆಬ್ಬಿಸಿರುವುದು. ಇದರಲ್ಲಿ ಕ್ಯಾಮೆರಾ ಹಿಡಿದ ರೀತಿ ‘ಸಿಟಿ ಆಫ್ ಗಾಡ್’ನಂತೆಯೇ ಇದೆ ಇತ್ಯಾದಿ ಕಮೆಂಟ್‌ಗಳ ನಡುವೆಯೂ, ಅತ್ಯುತ್ತಮ ಸಿನಿಮಾಗಳಲ್ಲಿ ಸ್ಲಂ ಡಾಗ್ ಮಿಲಿಯನೇರ್ ಒಂದು ಅನ್ನುವುದನ್ನು ನಾವೆಲ್ಲಾ ಯಾವ ಅನುಮಾನವಿಲ್ಲದೆ ಒಪ್ಪಿಕೊಳ್ಳಬಹುದು. ಕೆಲ ದಿನಗಳ ಹಿಂದೆ ಸಾಂಗತ್ಯ ಬ್ಲಾಗ್‌ಗಾಗಿ ಒಂದಷ್ಟು ಬರೆದಿದ್ದೇನೆ. ಪುರುಸೊತ್ತಿದ್ದರೆ ಓದಿರೆಂದು ಬಿನ್ನಹ.
