August 30, 2007

ಲೆಕ್ಕದ ಮಾಷ್ಟ್ರು ನಮಗ್ಯಾವ ಲೆಕ್ಕ ?!

ಣಿತ ಅಂದರೆ ಅಮ್ಮನಿಗೆ ಬೈಗುಳ, ಅಪ್ಪನಿಗೂ ಅರ್ಥವಾಗದ್ದಕ್ಕೆ ಅಸಹನೆ, ಎದುರುರಿನ ಬೆಂಚಲ್ಲಿ ಕೂತಿದ್ದವನ ಪುಸಲಾಯಿಸಲು ಬೆಣ್ಣೆ , ಹುಬ್ಬು ಗಂಟಿಕ್ಕಿಕೊಂಡು ಬೆತ್ತ ಬೀಸುತ್ತಿರುವ ಅಧ್ಯಾಪಕರು, ಪ್ರೊಗ್ರೆಸ್ ರಿಪೋರ್ಟ್‌ನಲ್ಲಿ ಆಗಾಗ ಕೆಂಪು ಗೆರೆ -ಇವಿಷ್ಟು ವಂಶ ಪಾರಂಪರ್ಯವಾಗಿ ಬಂದಂತಹ ಸಂಗತಿಗಳು ! ಗಣಿತ ಅಧ್ಯಾಪಕರೆಂದರೆ ಮಕ್ಕಳು ಮುಖ ಹುಳ್ಳಗೆ ಮಾಡಿಕೊಳ್ಳುವುದು ಸಾಮಾನ್ಯ . ಆದರೆ ನಿಮ್ಮ ಲೆಕ್ಕಾಚಾರವನ್ನೇ ತಿರುಗಾಮುರಗಾ ಮಾಡುವಂತೆ, 'ಲೆಕ್ಕದ ಮಾಷ್ಟ್ರು ನಮಗ್ಯಾವ ಲೆಕ್ಕ ?' ಅಂತ ಕೆಲವು ಗಣಿತ ಗುರುಗಳ ಬಗ್ಗೆ ಶಿಷ್ಯಗಡಣ ಹೇಳುವ ಈ ಕತೆಯನ್ನು ತಾವು ಲಾಲಿಸಬೇಕು. ಪೆಟ್ಟುಗಳನ್ನೂ ಶಹಭಾಸ್‌ಗಿರಿಯಂತೆ ಪಡೆದ ಈ ಕತೆ ಕಳೆದು ಕೂಡಿಸಿ ಬರೆದದ್ದಲ್ಲ ಎಂಬುದನ್ನು ನಂಬಬೇಕು !

ನಮ್ಮ ಮನೆಯಲ್ಲೇ ಸುರುಸುರು ಹೀರಿ ಮಧ್ಯಾಹ್ನದೂಟ ಮಾಡಿ, ಅದು ಕರಗುವ ಮೊದಲೇ ನನ್ನ ಬೆನ್ನಿಗೇ ಡುಬುಡುಬು ಗುದ್ದು ಹಾಕಲು ಬರುವ ಈಶ್ವರ ಮಾಷ್ಟ್ರು ಇನ್ನೇನು...ಈ ಮೂರನೇ ತರಗತಿಗೆ ಕಾಲಿಡುತ್ತಾರೆ. ಗಣಿತ ಪಾಠ ಶುರುವಾಗುವ ಮೊದಲು ಅವರನ್ನು ಕೊಂಚ ನಿಮಗೆ ವರ್ಣಿಸುತ್ತೇನೆ...

ಬಾರೀ ಶಬ್ದ ಹೊರಡಿಸುವ, ಆದರೆ ಅಷ್ಟೇನೂ ನೋಯದ ಅವರ ಕೈಯಿಂದ ಬೆನ್ನಿನ ಮೇಲೊಂದು ಪೆಟ್ಟು ತಿನ್ನೋದೆಂದರೆ ಎಲ್ಲ ಹುಡುಗರಿಗೂ ವಿಚಿತ್ರ ಖುಶಿ ! (ಹುಡುಗಿಯರಿಗೆ ಈ ಭಾಗ್ಯವಿಲ್ಲ ! ) 'ಇವತ್ತು ಎಷ್ಟು ಡೋಲು ಬಾರಿಸಿದರು' ಅಂತ ನಾವು ಮಾತಾಡಿಕೊಳ್ಳದ ದಿನವಿಲ್ಲ. ಬಿಳಿ ಪಂಚೆ ಉಟ್ಟುಕೊಂಡು, ಮೂರು ಕಿಲೋಮೀಟರ್ ನಡಕೊಂಡು ಬರುತ್ತಿದ್ದ ಈ ಮಾಷ್ಟ್ರ ಹಣೆಯಲ್ಲಿ ಯಾವತ್ತೂ ತೆಳು ಗಂಧ ನಾಮ, ಕಿವಿಯಲ್ಲಿ ದೇವರ ಪ್ರಸಾದವಾಗಿ ದಾಸವಾಳದೆಸಳು. ಶಾಲೆಗಿಂತ ಕೊಂಚ ಹಿಂದಿರುವ ಅಶ್ವತ್ಥಕಟ್ಟೆಗೆ ಮೂರು ಸುತ್ತು ಹಾಕಿ, ಹತ್ತು ಪೈಸೆ ನಾಣ್ಯ ಕಾಣಿಕೆ ಇಡದೆ, ಅವರು ಶಾಲೆಯ ಮೆಟ್ಟಿಲು ತುಳಿಯುವವರೇ ಅಲ್ಲ. ಪ್ರತಿ ಶನಿವಾರ ಅವರಿದ್ದರೇ ಭಜನಾ ಕಾರ್‍ಯಕ್ರಮ ಗೌಜಿ. 'ಗುರುವಾರ ಬಂತಮ್ಮ ಗುರುವಾರ ಬಂತಮ್ಮ...'ಹಾಡನ್ನು ಅವರು ಹೇಳಿದರೇ ಕಾರ್‍ಯಕ್ರಮ ಸಂಪನ್ನವಾಗುವುದು. ಸ್ವಾತಂತ್ರ್ಯೋತ್ಸವದ ದಿನವಂತೂ ಹುಚ್ಚು ಆವೇಶ. ಈಶ್ವರ ಮಾಷ್ಟ್ರು 'ಝಂಡಾ ಊಂಚಾ ರಹೇ ಹಮಾರಾ...' ಹಾಡಿದರೆ ಮಕ್ಕಳು ಮತ್ತೊಂದು ಸ್ವಾತಂತ್ರ್ಯ ಹೋರಾಟಕ್ಕೆ ಕತ್ತಿ ದೊಣ್ಣೆ ಹಿಡಿದರೂ ಆಶ್ಚರ್‍ಯವಿಲ್ಲ. ಅಂತಹ ಗಡುಸು ಏರು ಧ್ವನಿಯಲ್ಲಿ ಅವರು ವೀರಾವೇಶದಿಂದ "ಭಾರತ್ ಮಾತಾ ಕೀ ಜೈ' ಅಂತ ಕೂಗಿದಾಗ ಮಕ್ಕಳೆಲ್ಲ ಸೆಟೆದುಕೊಳ್ಳುತ್ತಾರೆ.

ಇವೆಲ್ಲವುಗಳಿಂದಾಗಿ ಅವರ ಬಗ್ಗೆ ಭಯಕ್ಕಿಂತ ಭಕ್ತಿಯೇ ಹೆಚ್ಚು . ಹಾಜರಿ ಕರೆವಾಗ 'ಪ್ರಸೆಂಟ್ ಸಾರ್', 'ಯಸ್ ಸಾರ್' ಅನ್ನೋದನ್ನೆಲ್ಲಾ ತೆಗೆದು ಹಾಕಿ 'ಇದ್ದೇನೆ ಸಾರ್' ಅನ್ನೋದನ್ನೇ ರೂಢಿಸಿದ ವ್ಯಕ್ತಿ ಅವರು. ಅವರ ಗಣಿತ ಪಾಠಕ್ಕೆ ಅಡಿಕೆ, ತೆಂಗುಗಳೇ ನಿತ್ಯ ಉದಾಹರಣೆಗಳು. ಶಾಲೆ ಬಳಿಯ ನಮ್ಮ ಮನೆಗೇ ಅವರು ಮಧ್ಯಾಹ್ನದೂಟಕ್ಕೆ ಬರುತ್ತಿದ್ದುದರಿಂದ, ನಮ್ಮಲ್ಲಿಂದ ಅವರಿಗೆ ಬಸಳೆ ಸೊಪ್ಪು , ಹೂವಿನ ಗಿಡ, ಮಾವಿನಹಣ್ಣು , ಹಿತ್ತಲಲ್ಲಿ ಎಳೆದ ತರಕಾರಿ ಹೀಗೆ ಏನಾದರೊಂದು ಸಂದಾಯವಾಗುತ್ತಲೂ ಇದ್ದುದರಿಂದ, ಅವರಿಗೂ ಅಪ್ಪ ಅತಿಪ್ರಿಯರಾಗಿದ್ದುದರಿಂದ ಮಾಷ್ಟ್ರು ಕೊಡುವ ಪೆಟ್ಟುಗಳು, ಅಪ್ಪ ಕೊಡುವ ಪೆಟ್ಟುಗಳಷ್ಟೇ ನನಗೆ ಸಹನಾಯೋಗ್ಯ ! 'ಅವರು ಲೆಕ್ಕಕ್ಕೆ ಮಾಷ್ಟ್ರು, ನೆಂಟ್ರ ಹಾಗೇ' ಅಂತ ಅಜ್ಜಿ ಕೂಡಾ ಹೇಳುತ್ತಿದ್ದುದುಂಟು.

ಇನ್ನು ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡಿನೊಳಗೆ ನಾವೆಲ್ಲ ಕಾಣಿಸಿಕೊಂಡಾಗ ಸಿಕ್ಕ ಗಣಿತದ ಅಧ್ಯಾಪಕರಲ್ಲಿ ಒಬ್ಬರು-ಶಿವಮ್ಮ ಟೀಚರ್. ಅವರ ಗಂಡ ಅದೇ ಶಾಲೆಯಲ್ಲಿ ಮುಖ್ಯೋಪಾಧ್ಯಾಯರು. ನನ್ನಪ್ಪನಿಗೂ ಮಾಷ್ಟ್ರರಾಗಿದ್ದವರು. ಇಂತಹ ಮುಖ್ಯೋಪಾಧ್ಯಾಯರು ಒಂದು ಕಾಲದಲ್ಲಿ ತಮ್ಮ ವಿದ್ಯಾರ್ಥಿನಿಯೂ ಆಗಿದ್ದ ಶಿವಮ್ಮರನ್ನೇ ಪ್ರೀತಿಸಿ ಮದುವೆಯಾಗಿದ್ದರು. ಇಂತಹ ಶಿವಮ್ಮ ಟೀಚರ್ ಬಲಗೈ ಬೆನ್ನ ಹಿಂದಕ್ಕೆ ಕಟ್ಟಿ ಎಡಗೈಯಲ್ಲಿ ಪಾಠ ಪುಸ್ತಕ ಹಿಡಿದು ಮಾತು ಶುರು ಮಾಡಿದರೆಂದರೆ ಮಕ್ಕಳ ಹತ್ತೂ ಬೆರಳುಗಳು ಕೆಲಸ ಮಾಡುತ್ತಿದ್ದವು ! ಅವರು ಹೊಡೆಯುವುದು, ಬಯ್ಯುವುದು, ಸಿಕ್ಕಾಪಟ್ಟೆ ಹೋಮ್‌ವರ್ಕ್ ಕೊಡುವುದು ಎಲ್ಲದರಿಂದಲೂ ಬಹಳ ದೂರ. ಗಣಿತದ ಅಗಣಿತ ಸಮಸ್ಯೆಗಳಿಗೆಲ್ಲ ಅವರದ್ದು ಯಾವತ್ತೂ ತಾಯಿ ಗುಣ. 'ಈ ಲೆಕ್ಕ ಬಿಡಿಸಲು ಸುಲಭ ಮಾರ್ಗಗಳಿರುವ ಒಂದು ಹಳೆಯ ಪುಸ್ತಕ ಕೊಡ್ತೇನೆ, ಅಮ್ಮ ಈ ಸಲ ಬೆಂಡೇಕಾಯಿ ಬೆಳೆಸಿದ್ದಾರಾ?, ನಿನ್ನ ಷರ್ಟ್ ತುಂಬಾ ಚೆನ್ನಾಗಿದೆ, ಬಹಳ ಕಷ್ಟ ಎನಿಸಿದರೆ ಲೆಕ್ಕ ಬಿಡಿಸುವ ಆ ಉದ್ದದ ಮಾದರಿಯನ್ನೇ ಬಿಟ್ಟುಬಿಡಿ-ಅದು ಬಹಳ ಹಳೆಯ ಕ್ರಮ-ಪರೀಕ್ಷೆಯಲ್ಲೂ ನಾನದನ್ನು ಕೇಳುವುದಿಲ್ಲ ...' ಅವರ ಮಾತಿನ ಸ್ಯಾಂಪಲ್‌ಗಳಷ್ಟೆ ಇವು.

ಉಜಿರೆ ಕಾಲೇಜಿನಲ್ಲಿ ಮ್ಯಾತ್‌ಮೆಟಿಕ್ಸ್ ಲೆಕ್ಚರ್ ಹೊಡೆದು ಹೊಡೆದು ನಿವೃತ್ತರಾಗಿರುವ ಜಯಲಕ್ಷ್ಮಿ ಮೇಡಂ ಅಂದರೆ ಲೋಕಪ್ರಸಿದ್ಧಿ. ವರ್ಷದ ಮುನ್ನೂರೈವತ್ತೈದು ದಿನ ಮುನ್ನೂರೈವತ್ತೈದು ಸೀರೆ ಉಡುವ ದಪ್ಪ ದೇಹದ ಜಯಲಕ್ಷ್ಮಿ ಮೇಡಂ, ಇತರೆಲ್ಲ ಮ್ಯಾತ್ಸ್ ಲೆಕ್ಚರರ್‌ಗಳನ್ನು 'ಲೆಕ್ಕಕ್ಕಷ್ಟೆ ' ಅಂತ ಮಾಡಿಬಿಟ್ಟಿದ್ದರು. ಪಿಯುಸಿಯ ಹಲವು ಪರೀಕ್ಷೆಗಳ ಉತ್ತರಪತ್ರಿಕೆಗಳನ್ನು ತಿದ್ದಿ ಕೊಡದೆ ಮೂಲೆಗೆ ಸೇರಿಸಿ- "ಎಲ್ಲರೂ ಇನ್ನಷ್ಟು ಚೆನ್ನಾಗಿ ಅಭ್ಯಾಸ ಮಾಡಬೇಕು' ಎಂದಷ್ಟೇ ಹೇಳುತ್ತ ನಮ್ಮಂತಹ ಹಲವರ ಮಾನವುಳಿಸಿದವರೇ ಅವರು. ಉಜಿರೆ ಕಾಲೇಜಿನಲ್ಲಿ ಓದಿದ ಸಾವಿರಾರು ವಿದ್ಯಾರ್ಥಿಗಳಿಗೆ ಜಯಲಕ್ಷ್ಮಿ ಮೇಡಂ ಅಂದ್ರೆ ಗಣಿತಕ್ಕಿಂತ ಅಚ್ಚುಮೆಚ್ಚು ಎನ್ನುವುದು ವ್ಯಂಗ್ಯವಲ್ಲ ! ಅವರು ಹೆಸರಾದದ್ದು ಸ್ಪಷ್ಟ ಸರಳ ಪಾಠದ ಶೈಲಿಗೆ, ವಿದ್ಯಾರ್ಥಿ-ವಿದ್ಯಾರ್ಥಿನಿಯರ ಜತೆಗಿನ ಬಾಂಧವ್ಯಕ್ಕೆ . ಪ್ರೈಮರಿ ಮಕ್ಕಳಿಗೆ ಪಾಠ ಹೇಳಿದಂತೆಯೇ ಕಾಲೇಜಿನವರಿಗೂ ಹೇಳುವ ಶೈಲಿ ಅವರದ್ದು . ಗಣಿತದ ಒಂದು ಸಮಸ್ಯೆ ಬಿಡಿಸಿ 'ಕೆಳಗೆರಡು ಗೆರೆ ಎಳೆಯಿರಿ' ಅಂತ ಹೇಳಲೂ ಅವರು ಮರೆಯಲಾರರು.

ಹೈಸ್ಕೂಲಿನ ಗಣಿತ ಮಾಷ್ಟ್ರು ಸಶರೀರವಾಗಿ ನಮ್ಮೂರಿನ ಮನೆ ಸುತ್ತಮುತ್ತಲಲ್ಲೇ ಅಡ್ಡಾಡುತ್ತಿರುವುದರಿಂದ ಅವರನ್ನು ಬಯ್ಯುವಂತೆಯೂ ಇಲ್ಲ, ಹೊಗಳದಿರುವುದೂ ಸಾಧ್ಯವಿಲ್ಲ ! ಆದರೆ ಅವರೂ 'ಲೆಕ್ಕಕ್ಕೆ ಸಿಗುವ ಮಾಷ್ಟ್ರು 'ಎಂಬುದು ವಿದ್ಯಾರ್ಥಿಗಳಿಗೆ ಹೆಮ್ಮೆ . ತರಗತಿಯ ಒಬ್ಬರು ತಪ್ಪು ಮಾಡಿದರೆ ಎಲ್ಲರಿಗೂ ಮರದ ಸ್ಕೇಲಿನಲ್ಲಿ ಒಂದೊಂದು ಪೆಟ್ಟು ಈ ಚಂದ್ರಶೇಖರ ಮಾಷ್ಟ್ರಿಂದ ಗ್ಯಾರಂಟಿ ! ಏನೋ ಸ್ವೀಟ್ ಪ್ಯಾಕೆಟ್ ಪಡಕೊಳ್ಳುವವರಂತೆ ಮಕ್ಕಳೆಲ್ಲ ಎದ್ದು ನಿಂತಿದ್ದರೆ ಅವರು ಪ್ರತಿಯೊಬ್ಬರ ಅಂಗೈಗೂ ಚಿಟಿಲ್ ಚಿಟಿಲ್ ಎಂದು ಬಾರಿಸುತ್ತಾ ಬರುತ್ತಾರೆ. ಎದ್ದು ನಿಂತು ಆ ಮಹಾಪ್ರಸಾದವನ್ನು ಸ್ವೀಕರಿಸುವ ಗಳಿಗೆಗೆ ನಾವೆಲ್ಲ ಕಾಯುತ್ತಿರುತ್ತಿದ್ದೆವು. ತರಗತಿಗೆ ಬಂದರೆ ಒಂಚೂರೂ ಔದಾಸೀನ್ಯ ತೋರದೆ ಪಾಠ ಮಾಡುವ ಅವರಿಗೆ ಗಣಿತದ ಸಮಸ್ಯೆ-ಉತ್ತರಗಳೆಲ್ಲಾ ಮನೋಗತ. ಗಣಿತದ ಕಷ್ಟಗಳು ಗಣನೆಗೇ ಬಾರದ ಹಾಗೆ 'ತಪ್ಪುಕಷ್ಟಗಳನೆಲ್ಲ ನೂಕಾಚೆ ದೂರ' ಅನ್ನುತ್ತಲೇ ಪಾಠ ಮಾಡುತ್ತಿದ್ದವರು ಅವರು. 'ನಾಳೆ ನಾನು ಶಾಲೆಗೆ ಬರುವುದಿಲ್ಲ. ನನ್ನ ಪೀರಿಯಡ್‌ನಲ್ಲಿ ಆಟಕ್ಕೆ ಹೋಗಿ' ಅಂತನ್ನುವ ಕರುಣಾಮಯಿ ಲೆಕ್ಕದ ಮಾಷ್ಟ್ರು ಇನ್ನೆಲ್ಲಿ ಸಿಗಬೇಕು ?!

ಇವರೆಲ್ಲ 'ಕ್ಯಾಲ್ಯುಕುಲೇಟರ್ ಕಂಪ್ಯೂಟರುಗಳ ಪಿಡಿಯದೊಂದಗ್ಗಳಿಕೆ...'ಗೆ ಪಾತ್ರರಾದವರು. ರಾಮಾಯಣದಲ್ಲಿ ಸಮುದ್ರಕ್ಕೆ ಸೇತುವನ್ನು ಬಲಿಯುವಾಗ ಕಪಿಗಳಿಟ್ಟ ಕಲ್ಲುಗಳೆಲ್ಲ ಮುಳುಗಿ ಹೋಗುತ್ತಿದ್ದವಂತೆ. ಆದರೆ ರಾಮ ನಾಮವನ್ನು ಹೇಳಿ ಬಂಡೆಗಳನ್ನು ಇಳಿಸಿದಾಗ ಅವೆಲ್ಲ ತೇಲಲಾರಂಭಿಸಿ ಹಾದಿ ಸುಗಮವಾಯಿತಂತೆ. ಹಾಗೆ ಈ ಗುರುಗಳ ಹೆಸರು ಹೇಳಿ ಯಾವುದನ್ನು ಲೆಕ್ಕ ಹಾಕಿದರೂ ಕಡಿಮೆ ಬಿದ್ದದ್ದೆಲ್ಲಾ ಸರಿಯಾಗಿ , ಹೆಚ್ಚೆಂದು ಕಂಡದ್ದೆಲ್ಲಾ ನಿಶ್ಯೇಷವಾಗಿ ತೇಲುತ್ತಲೇ ಇರಬಹುದೆಂಬಷ್ಟು ವಿಶ್ವಾಸ ನಮ್ಮದು !

ಮ್ಯಾತ್ಸ್ ತುಝೆ ಸಲಾಮ್.

Read more...

August 20, 2007

ನಗ್ ನಗ್ತಾ ಇರಿ

ಬಿರುಗಾಳಿ ಮಳೆಯ ರಾತ್ರಿ . ಕಾರಿನಲ್ಲಿ ಪ್ರಯಾಣಿಸುತ್ತಿರುವ ನಿಮಗೆ, ನಿಲ್ದಾಣವೊಂದರಲ್ಲಿ ಮೂವರು ಕಾಣುತ್ತಾರೆ.
ಒಬ್ಬಳು - ಸಾಯುವ ಸ್ಥಿತಿಯಲ್ಲಿರುವ ಮುದುಕಿ
ಒಬ್ಬ - ಹಿಂದೆ ನಿಮ್ಮ ಜೀವವುಳಿಸಿದ್ದ ಸ್ನೇಹಿತ
ಇನ್ನೊಬ್ಬಳು - ನೀವು ಪತ್ನಿಯಾಗಿಸಿಕೊಳ್ಳಲು ಕನಸು ಕಾಣುತ್ತಿದ್ದ ಹುಡುಗಿ !
ನಿಮ್ಮ ಕಾರಿನಲ್ಲಿ ಇನ್ನೊಬ್ಬರು ಕೂರಲಷ್ಟೇ ಜಾಗವಿದೆ. ಆಗ ಯಾರನ್ನು ಕರೆದೊಯ್ದು ಬದುಕಿಸುತ್ತೀರಿ?
ಯೋಚ್ನೆ ಮಾಡ್ರೀ....

ನೀವು ಯಾರಾದರೊಬ್ಬರ ಹೆಸರು ಹೇಳಬಹುದು. ಆದರೆ....
ಕಂಪನಿಯೊಂದು ಅಭ್ಯರ್ಥಿಗಳ ಸಂದರ್ಶನದಲ್ಲಿ ಈ ಪ್ರಶ್ನೆಯನ್ನು ಕೇಳಿದಾಗ ಗೆದ್ದವನು ಕೊಟ್ಟ ಉತ್ತರ ಹೀಗಿತ್ತು -
"ನಾನು ಗೆಳೆಯನಿಗೆ ಕಾರಿನ ಕೀ ಕೊಟ್ಟು ಮುದುಕಿಯನ್ನು ಆಸ್ಪತ್ರೆಗೆ ಸೇರಿಸಲು ಹೇಳುತ್ತೇನೆ. ಪ್ರಿಯತಮೆಯ ಜತೆ ಇನ್ನೊಂದು ವಾಹನಕ್ಕಾಗಿ ಕಾಯುತ್ತೇನೆ !

Read more...

August 19, 2007

'ಹುಟ್ಟು' ಹಾಕಿದವನ ದೋಣಿಯಲ್ಲಿ ಬರಿಗೈ ಬೀಸುತ್ತ...


ಳ್ಳಿಯಲ್ಲೇ ಉಳಿಯಬೇಕಾದ ಅನಿವಾರ್ಯತೆಯನ್ನು ಆಯ್ಕೆ ಎಂಬಂತೆ ಪರಿವರ್ತಿಸಿಕೊಂಡವರು ಸತ್ಯಮೂರ್ತಿ ದೇರಾಜೆ. ತಾನು ಇರುವಲ್ಲೆ ಇದ್ದು ಅರಳುವುದು, ಸುತ್ತಲಿನ ಜನರ ನಡುವೆ ಅರ್ಥಪೂರ್ಣವಾಗುವುದು ಅವರಿಗೆ ಮುಖ್ಯವಾಯಿತು. ಐವರ್ನಾಡು-ಚೊಕ್ಕಾಡಿಗಳಂತಹ ಹಳ್ಳಿಗಳ ಆರೋಗ್ಯವನ್ನು ಕಾಪಾಡುವಲ್ಲಿ ಅವರ ಕಾರ್ಯ ದೊಡ್ಡದು. ಸತ್ಯಮೂರ್ತಿ ಊರಿನ ಮ್ಯಾನೇಜರ್! ಅವರ ಸಾರ್ವಜನಿಕ ಬದುಕಿನ ಮುಖ್ಯ ಕ್ಷೇತ್ರಗಳಾದ- ರಾಜಕೀಯ, ದೇವಸ್ಥಾನ, ಸಾಹಿತ್ಯ, ಯಕ್ಷಗಾನಗಳು ಎಲ್ಲಿಯೂ ಒಂದರೊಳಗೊಂದು ಸೇರಿ ಅವರಿಗಾಗಲಿ ಇತರರಿಗಾಲಿ ಸಮಸ್ಯೆ ಸೃಷ್ಟಿಸಲಿಲ್ಲ.


ಅವರು 'ಮಾತಿನೊಳಗೆ ಜಾಣ'. ಯಕ್ಷಗಾನ ತಾಳಮದ್ದಳೆಯ ಅರ್ಥ ನಿರ್ಮಾಣ ಕ್ರಮದಲ್ಲಿ ಅವರು 'ಕರುಣಾಳು ಅರ್ಥಧಾರಿ'. ಬದುಕಾಗಲಿ, ಅರ್ಥಗಾರಿಕೆಯಾಗಲಿ ಖಂಡನೆಯ ದಾರಿ ಅವರದಲ್ಲ. ಇದಿರು ಅರ್ಥಧಾರಿಯ ಮಾತಿಗೆ ಮೌನವಾಗಿದ್ದೂ ಕೇಳುಗರಲ್ಲೇ ಸ್ಪಂದನ ಹುಟ್ಟುವಂತೆ ಮಾಡಬಲ್ಲವರಾಗಿದ್ದರು ಅವರು. ಆಗ ಸತ್ಯಮೂರ್ತಿಯವರ ಮೌನವೂ ಕೇಳುಗರಲ್ಲಿ ಮೆಚ್ಚುಗೆಯ ಮಾತಾಗುತ್ತಿತ್ತು. ಅದು ಈಗಲೂ ಮುಂದುವರಿದಿದೆ.

('ನೆನಪಿನುಂಗುರ-ಹಳ್ಳಿ ಹಾದಿಯಲಿ ನೆನೆವ ಪದಗಳು' ಪುಸ್ತಕದಿಂದ)

Read more...

August 18, 2007

ಕುಮಾರ ಪರ್ವತದ ಕೌಮಾರ್ಯ ಹಾಗೆಯೇ ಇರಲಿ!




ಕೆಂಪು ಸೂರ್ಯ, ಹಸಿರು ಕಾಡು,ಬಿಳಿ ಮೋಡ ಎಲ್ಲವೂ ಕತ್ತಲಲ್ಲಿ ಮುಳುಗಿವೆ. ಕುಮಾರಪರ್ವತವೇ ಭಯದಿಂದ ಕುಳಿತಂತಿದೆ. ಬೆಂಕಿ ಹದವಾಗಿ ಉರಿಯುತ್ತಿದೆ. ಆಕಾಶ ಮೆಲ್ಲನೆ ಚಲಿಸುತ್ತಿದೆ. ಎಲೆಎಲೆಗಳ ನಡುವೆ ಗಾಳಿ ಸುಳಿದಾಡುತ್ತಿದೆ. ಆಗೊಮ್ಮೆ ಈಗೊಮ್ಮೆ ಎಂಬಂತೆ ಹರಿಯುತ್ತಿರುವ ನೀರು ವಿಚಿತ್ರ ಸದ್ದುಗಳನ್ನು ಹೊರಡಿಸುತ್ತಿದೆ. ಸದ್ಯಕ್ಕೆ ಕುಳಿತ ಜಾಗವಷ್ಟೇ ಭದ್ರಪೀಠ.

ಗರಿಬಿಚ್ಚಿದ್ದ ಹಗಲು. ಕುಕ್ಕೆ ಸುಬ್ರಹ್ಮಣ್ಯದ ಪೇಟೆ ತುಂಬ ಸುವಾಸನೆ ಬೀರುವ ಊದುಕಡ್ಡಿ, ಭಕ್ತಿಗೀತೆ. ಅಲ್ಲಿಂದ ಮಣ್ಣುಮಾರ್ಗದಲ್ಲಿ ಒಂಚೂರು ಸಾಗಿದರೆ ಕಾಡುಹಾದಿ ಆರಂಭ. ಆರಂಭದಲ್ಲೇ ಏರುಹಾದಿ. ಬಲಬದಿಗೆ 'ಭೀಮನ ಹೊಳೆ'. ಅರ್ಧ ಗಂಟೆಯ ದಾರಿ ಹತ್ತಿದ್ದೇ ತಡ ಒಬ್ಬ ಬೆವರೊರೆಸಿಕೊಂಡು ಉದ್ಗರಿಸಿದ 'ಆಹಾ, ಇಲ್ಲಿ ಇಳಿಯುತ್ತ ಸಾಗುವುದು ಎಷ್ಟು ಸುಲಭ!' ಎಲ್ಲರ ಕೈಯಲ್ಲೂ ಒಂದೊಂದು ಊರುಗೋಲು. ಕೋಲನ್ನೂರುತ್ತ ಹತ್ತಿದಂತೆಲ್ಲ, ಪರ್ವತ ಕೆಳಕ್ಕೆ ನಾವು ಮೇಲಕ್ಕೆ.ತನ್ನೆಲ್ಲ ಬೆಡಗು ಬಿನ್ನಾಣ ತೆರೆದಿಟ್ಟ ಹಳದಿ ಹೂವು, ಕೆಂಪಗೆ ಚಿಗುರಿ ನಿಂತ ಮರ, ಅಡ್ಡಾಡುವ ಗಾಳಿ, ಪರ್ವತವೇರುತ್ತ ಹೋದಂತೆ ಸುಬ್ರಹ್ಮಣ್ಯ ಪೇಟೆ, ಮನೆ, ನಾವು ಎಲ್ಲವೂ ಸಣ್ಣದಾಗುತ್ತಾ ಕುಮಾರ ಪರ್ವತವೊಂದೇ ಬೃಹದಾಕಾರವಾಗಿ ಬೆಳೆಯುತ್ತಿತ್ತು. ಬಿಸಿಲು ತಾಳಲಾರದೆ ಪ್ರತಿಯೊಬ್ಬರೂ ತಲೆಗೆ ಕಟ್ಟಿಕೊಂಡ ಬಿಳಿ ಟವೆಲು. ಒಬ್ಬೊಬ್ಬನದ್ದು ಒಂದೊಂದು ವೇಷ. ನಿಂತಾಗ ನಗು,ಕೇಕೆ,ಜೋಕು. ನಡೆವಾಗ ಗಂಭೀರ ಮೌನ. ಜಿರಿಜಿರಿ ಇಳಿವ ಬೆವರು. ಪರ್ವತ ಮಾತ್ರ ಸುಮ್ಮನೆ ಧ್ಯಾನಸ್ಥ. ತಲೆ ಮೇಲೆಯೇ ಉರಿವ ಸೂರ್ಯ, ರಾತ್ರಿ ಉಳಿದಾನೆಯೇ ನಮ್ಮ ಜೊತೆ ಬೆಟ್ಟದಲ್ಲಿ?!

ಸುಮಾರು ಐದು ಕಿಲೋಮೀಟರ್ ನಡೆದ ಬಳಿಕ ಗಿರಿಗದ್ದೆ ಜೋಯಿಸರ ಆತಿಥ್ಯ. ತಣ್ಣನೆ ನೀರು, ಬಿಸಿಬಿಸಿ ಉಪ್ಪಿಟ್ಟು. ನಂತರ ಅರಣ್ಯ ಇಲಾಖೆಯ ಚೆಕ್‌ಪೋಸ್ಟ್. ಮುಂದೆ ಬಿರುಬಿಸಿಲ ಹಾದಿ. ಜನವಾಸ ಇಲ್ಲ. ತುತ್ತತುದಿಗೆ ಸುಮಾರು ಐದು ಗಂಟೆಗಳ ಆರೋಹಣ. ತಾನೇ ಆಯಾಸಗೊಂಡಂತೆ ತೆಪ್ಪಗೆ ಬಿದ್ದಿರುವ ಸವಕಲು ದಾರಿ. ಬ್ರಿಟಿಷರ ಕಾಲದಲ್ಲಿ ಕಟ್ಟಲ್ಪಟ್ಟದ್ದೆಂದು ಹೇಳುವ "ಕಲ್ಲ ಮಂಟಪ'ವೇ ಮೊದಲ ನಿಲ್ದಾಣ. ಚಾರಣಿಗರ ಮೋಜಿಗೆ ಮೊದಲ ಸಾಕ್ಷ್ಯ. ಇರುವ ಒಂಚೂರು ನೀರಿನಲ್ಲೇ ಪ್ಲಾಸ್ಟಿಕ್ಕು, ಅನ್ನದಗುಳು, ಸಿಗರೇಟು ಇನ್ನೂ ಏನೇನೋ. ಮತ್ತೆ ಏದುಸಿರ ಹಾದಿ ಶುರು. ಸುತ್ತಿಬಳಸಿ ಹತ್ತಿ ಇಳಿದು ಬೆಟ್ಟದಿಂದ ಬೆಟ್ಟಕ್ಕೆ ಸಾಗಿದಂತೆಲ್ಲ ಎಂದೆಂದೂ ಮುಗಿಯದಂತಿರುವ ಹಾದಿ. ಕೊನೆಗೊಂಡಂತೆ ಕಂಡಲ್ಲೇ ಆರಂಭ. ನಡೆದಷ್ಟೂ ದಾರಿ. ನಿಂತರೆ ಬಯಲು!

ನಾವೈದು ಜನರನ್ನು ಹೊರತುಪಡಿಸಿ ಬೇರೆ ಚಾರಣಿಗರು ಇರಲಿಲ್ಲ. ಪರ್ವತ ಏರುತ್ತಿದ್ದಂತೆ ಅಪ್ಪ,ಅಮ್ಮ,ಮನೆ,ಗೆಳೆಯರು ಎಲ್ಲ ಮರೆತು, ನಾವೇ ಐದು ಜನ ಈ ಜಗದಲ್ಲಿ! ಲಾಲ್‌ಬಾಗ್‌ನಲ್ಲಿ ಕತ್ತರಿಸಿ ಜೋಡಿಸಿ ಇಟ್ಟದ್ದಕ್ಕಿಂತ ಹೆಚ್ಚು ಚೆಂದವಾಗಿ ದಟ್ಟವಾಗಿ ಪುಷ್ಟವಾಗಿ ಬೆಳೆದ ಕಾಡು. ಅದರಲ್ಲಿ ನಾಚಿದ ಹೂಗಿಡ. ಇನ್ನೊಂದು ಬದಿ ಬೆತ್ತಲೆ ಬೆಟ್ಟ. ಭತ್ತದ ರಾಶಿಯೆಂದೇ ಹೆಸರಾದ ಚೂಪು ಬೆಟ್ಟ ದಾಟಿ, ಶೇಷ ಪರ್ವತದ ತುದಿಯೇರಿ ಮೇಲೆ ನೋಡಿದರೆ, ತಲೆಗೆ ತಗಲುವಂತೆ ಆಕಾಶ, ಕೆಳಗೆ ನೋಡಿದರೆ ಅಬ್ಬಬ್ಬಾ ಮಾರಿಗುಂಡಿ. ಕಣ್ಣೆಟುಕದಷ್ಟು ಆಳ. ಸುಬ್ರಹ್ಮಣ್ಯದಲ್ಲಿದ್ದಾಗ "ಹೋ, ಕುಮಾರಪರ್ವತ ಎಷ್ಟೊಂದು ಎತ್ತರ' ಅಂತನ್ನಿಸಿದ್ದರೆ, ತುದಿ ತಲುಪುತ್ತಿದ್ದಂತೆ "ಹೋ, ಸುಬ್ರಹ್ಮಣ್ಯ ಎಷ್ಟೊಂದು ಆಳ!' ಆಳವೂ ಎತ್ತರವೂ ಒಂದೇ ಆದಾಗ ನಿರಾಳ. ಅಂಗೈಯಲ್ಲಿ ಆಕಾಶ.
ಕುಮಾರಪರ್ವತದ ತುತ್ತತುದಿಗಿಂತ ಕೊಂಚ ಕೆಳಗೆ ಕುಮಾರಾಧಾರಾ ನದಿಯ ಉಗಮಸ್ಥಾನ. ಅಲ್ಲಿಂದ ಸ್ವಲ್ಪ ಮೇಲೇರಿದರೆ ಅಗಲವಾದ ಇಳಿಜಾರಾದ ಬಂಡೆ. ಇದಿರು ಸಿದ್ಧಪರ್ವತದ ದಟ್ಟ ಕಾನನ. ಬಲಬದಿ ದೂರದಲ್ಲಿ ದಾಟಿ ಬಂದಿರುವ ಭತ್ತದರಾಶಿ,ಶೇಷ ಪರ್ವತ. ಎತ್ತರದಿಂದ ಬಂದು ಮೈಮೇಲೆಯೇ ಹಾದು, ತಗ್ಗು ಕಣಿವೆಗಳಲ್ಲಿ ತುಂಬಿಕೊಳ್ಳುವ ಮೋಡಗಳು. "ಪರ್ವತ ಏರುವುದೇ ನಿಜವಾದ ಸುಖ ಹೊರತು ಶೀಖರದಲ್ಲಿ ಕುಳಿತುಕೊಳ್ಳುವುದಲ್ಲ' ಎಂಬ ಮಾತು ಎಷ್ಟೊಂದು ಅಪ್ರಬುದ್ಧವಾದದ್ದು ! ಪರ್ವತವೇರುವುದರಲ್ಲಿ ಔದಾಸೀನ್ಯ ತೋರುವವನಿಗೆ ಶಿಖರದ ಸುಖ ದೊರಕುವುದಿಲ್ಲ. ಶಿಖರದಲ್ಲಿ ತನ್ಮಯಗೊಳ್ಳುವ ಮನಸ್ಸಿಲ್ಲದವನಿಗೆ ಏರುವ ಸುಖದ ಅರಿವಾಗುವುದಿಲ್ಲ. ಏರುವ ಸುಖ ಶಿಖರದಲ್ಲಿದೆ. ಶಿಖರದ ಸುಖ ಏರುವಿಕೆಯಲ್ಲಿ ಅಡಗಿದೆ. ಆದುದರಿಂದಲೇ ಬಿಡಿಬಿಡಿಯಾಗಿ ನೋಡದೆ ನಿಜವಾದ ಸಮಗ್ರ ನೋಟ ಸಿಕ್ಕುವುದಿಲ್ಲ. ಸಮಗ್ರವಾಗಿ ನೋಡದೆ ಬಿಡಿಬಿಡಿಯಾಗಿರುವುದು ತಿಳಿಯುವುದಿಲ್ಲ!

ಸಂಜೆಯ ಸಮಯ. ಪುಷ್ಪಗಿರಿಯೆಂದೂ ಹೆಸರಾದ ಕುಮಾರಪರ್ವತದ ತುತ್ತತುದಿಯಲ್ಲಿ ಬೀಸುವ ಗಾಳಿಗೆ ಎಂಥವನಿಗೂ ಥ್ರಿಲ್ಲಾಗಲೇಬೇಕು. ಅರೆ, ಇಲ್ಲೇ ತಂಗುವೆನೆಂದಿದ್ದ ಸೂರ್ಯ, ದೂರದ ಇನ್ನ್ಯಾವುದೋ ಬೆಟ್ಟದಲ್ಲಿ ಇಳಿಯುತ್ತಿದ್ದ. ತುತ್ತತುದಿಯಲ್ಲಿ ಭೂತಕಾಲದ ನೆನಪಿಲ್ಲ, ಭವಿಷ್ಯತ್ತಿನ ಕನಸುಗಳಿಲ್ಲ, ವರ್ತಮಾನದ ಇರುವಿಕೆ ಮಾತ್ರ ಇದೆ. ಆ ಕ್ಷಣಗಳಲ್ಲಿ ಅದೂ ಮರೆತುಹೋಗಿದೆ. ಆಗ ಇರುವುದೇ "ಮಿಥ್ಯ', ಇಲ್ಲದ್ದು 'ಸತ್ಯ' ! ಊರು,ಪೇಟೆ ಮಾತ್ರವಲ್ಲದೆ ಸುತ್ತಲಿನ ಪರಿಸರ, ನಾವೈದು ಜನ ಎಲ್ಲ ಮಾಯವಾಗಿ ಕೆಲವು ಕ್ಷಣ ಖಾಲಿಯಾಗಿದೆ. ಅಷ್ಟರಲ್ಲಿ ಕರ್ಮದೋಷ(!), ಫಕ್ಕನೆ ಅಡಿಗರು ಬರೆದದ್ದು ನೆನಪಾಗಿದೆ ! "ಬತ್ತಲಾಗದೆ ಬಯಲು ಸಿಕ್ಕದಿಲ್ಲಿ'.

ಆತಂಕ ಕವಿದಂತಿರುವ ಕತ್ತಲು. ಬೆಂಕಿ ಹದವಾಗಿ ಉರಿಯುತ್ತಿದೆ. ಎಲ್ಲರ ಮುಖಗಳೂ ಕಪ್ಪಿಟ್ಟಿವೆ. ನಿಗೂಢ ಸದ್ದುಗಳು ಕೇಳುತ್ತಿವೆ. "ಗಿರಿಗದ್ದೆ ಜೋಯಿಸರ ಒಂದು ದನವನ್ನು ಇತ್ತೀಚೆಗೆ ಹುಲಿ ಹಿಡಿದಿತ್ತು' ಎಂದು ಫಾರೆಸ್ಟ್ ಡಿಪಾರ್ಟ್‌ಮೆಂಟಿನವರು ಹೇಳಿದ್ದು ನೆನಪಾಗಿದೆ. "ಸಂಪಾಜೆಯಿಂದ ಶಿರಾಡಿಯವರೆಗೆ ಹರಡಿಕೊಂಡಿರುವ ಈ ಕಾಡಿನಲ್ಲಿ ಎಪ್ಪತ್ತು ಆನೆಗಳಿವೆ. ಅವುಗಳಲ್ಲಿ ಆರೇಳು ಒಂಟಿ ಆನೆಗಳು. ಅವುಗಳಲ್ಲೂ ಒಂದು ಕಲ್ಲಾನೆಯಂತೂ (ಮರಿ ಆನೆ) ಬಹಳ ಜೋರು'-ಗಿರಿಗದ್ದೆ ಜೋಯಿಸರು ಹೇಳಿದ್ದು ನೆನಪಾಗಿದೆ. ಒಳಹೋದ ಉಸಿರು ಹೊರಬರುವುದಕ್ಕೂ ಅಂಜಿದಂತಾಗಿ ನಾಲ್ಕಾರು ಬಾರಿ ಕೆಮ್ಮಿದೆ. ರಾತ್ರಿ ಹನ್ನೊಂದು ಗಂಟೆ. ನಾಲ್ಕೂ ಜನ ಮಲಗಿದ್ದಾರೆ. ನಿದ್ದೆ ಬಂದಂತಿಲ್ಲ. ಆರಿಹೋಗುತ್ತಿದ್ದ ಬೆಂಕಿಯನ್ನು ಹೆಚ್ಚಿಸಿದೆ, ಸುತ್ತಲೂ ದಟ್ಟವಾದ ಅರಣ್ಯ. ಮರಗಪ್ಪೆಗಳು ವಿಚಿತ್ರವಾಗಿ ವಟಗುಟ್ಟುತ್ತಿವೆ. ಟಾರ್ಚು ಬೆಳಕನ್ನು ಸುತ್ತಲೂ ಹಾಯಿಸಿದೆ. ಹಗಲು ಪರ್ವತ ಏರುತ್ತಿದ್ದಾಗ ನಾವೈದೇ ಜನರೆಂದು ಖುಶಿಯಾಗಿತ್ತು. ಆದರೀಗ ಅದೇ ಸಂಗತಿ ವಿಪರೀತ ಭಯ ಹುಟ್ಟಿಸಿದೆ. ಈ ಹಬ್ಬಿದಾ ಮಲೆ ಮಧ್ಯದೊಳಗೆ ನಾವೈದೇ ಜನ. ಅತ್ತರೂ ಬೊಬ್ಬಿಟ್ಟರೂ ಯಾರಿಗೂ ಕೇಳುವುದಿಲ್ಲವಲ್ಲ.

ಅಯ್ಯೋ, ಈಗ ಅಮೆರಿಕದಲ್ಲೆಲ್ಲೋ ಸೂರ್ಯ ಉದಯಿಸಿರಬಹುದಲ್ಲ. ಹೌದು, ನಮ್ಮಲ್ಲಿ ಕತ್ತಲಿದೆ. ಸೂರ್ಯನಲ್ಲಿ ಬೆಳಕು ಮಾತ್ರ ಇದೆ. ಆದರೆ ಸೂರ್ಯ ನಮ್ಮವನೇ ಎಂದು ತಿಳಿಯುವುದರಲ್ಲೇ ಶ್ರೇಯಸ್ಸಿದೆ. ಸುಮ್ಮನೆ ಉರಿಯುತ್ತಿರುವ ಬೆಂಕಿ ನಂದಿಹೋಗುವ ಹಾಗೆ ಹನಿಹನಿ ಮಳೆ. ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ್ದು ನೆನಪಾಗಿದೆ. "ನಾನೇ ಸೂರ್ಯನ ರೂಪದಿಂದ ಬೆಳಗುತ್ತಿದ್ದೇನೆ, ಮಳೆಯನ್ನು ಆಕರ್ಷಿಸಿ ಸುರಿಸುತ್ತೇನೆ'. ಹಗಲು ನಮ್ಮ ಬೆವರಿಳಿಸಿದ್ದ ಅದೇ ಸೂರ್ಯ, ಈಗ ಮಳೆ ಸುರಿಸುತ್ತಿದ್ದಾನೆ. ಹೀಗೆ ಕತ್ತಲು-ಬೆಳಕು, ಆಳ-ಎತ್ತರ, ಅಮೃತ-ಮೃತ್ಯು, ಬಿಸಿಲು-ಮಳೆ ಎಲ್ಲವೂ ಒಂದೇ ಆದಾಗ? ಸಾಕಾರದಿಂದ ನಿರಾಕಾರಕ್ಕೆ. ನಿರಾಕಾರದಿಂದ ನಿರ್ವಿಕಾರಕ್ಕೆ. ದೇವರೇ, ಮಗುವಿನಂತಿರುವ ಕುಮಾರಪರ್ವತಕ್ಕೆ ಎಚ್ಚರಾಗಲಿ, ನಮ್ಮ ವಿಕಾರಗಳು ನಾಶವಾಗಲಿ.
"ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು, ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ, ಬೆಲ್ಲಸಕ್ಕರೆಯಾಗು ದೀನ ದುರ್ಬಲರಿಂಗೆ, ಎಲ್ಲರೊಳಗೊಂದಾಗು ಮಂಕುತಿಮ್ಮ' ಎಂದು ಒಬ್ಬ ಗುನುಗುತ್ತಿದ್ದಾನೆ. ಸೂರ್ಯ ಚೆಲ್ಲಿದ ಬಣ್ಣಗಳು ಕರಗತೊಡಗಿವೆ. ಗಿಡಮರಗಳು ಲಕಲಕಿಸಿವೆ. ಛೇ, ಈ ಪರ್ವತ ಒಂಚೂರು ಎತ್ತರವಿದ್ದರೆ, ಆ ಸೂರ್ಯನನ್ನು ಮುಟ್ಟಿ ರೋಮಾಂಚನಗೊಳ್ಳಬಹುದಿತ್ತು! ದೇವರೇ, ನಮ್ಮ ಊರು, ಮನೆ, ಕಲಿತ ನಾಲ್ಕು ಮಹಡಿಯ ಕಾಲೇಜು, ಊರ ದೇವಸ್ಥಾನದ ಗೋಪುರ, ಮನೆಯಂಗಳದಲ್ಲಿ ಬಾನೆತ್ತರ ಬೆಳೆದ ಗುಲಗಮೊಹರ್ ಎಲ್ಲವೂ ಸಣ್ಣದಾದರೂ ಚಿಂತಿಲ್ಲ. ಈ ಕುಮಾರಪರ್ವತ ಮಾತ್ರ ಬೆಳೆಯುತ್ತಿರಲಿ. ಇದರ ಕೌಮಾರ್ಯ ಮಾತ್ರ ಹೀಗೆಯೇ ಇರಲಿ !

ಮಧ್ಯಾಹ್ನದ ಮೊದಲೇ ನಮ್ಮ ಅವರೋಹಣ ಆರಂಭವಾಗಿತ್ತು. ಊರು ತಲುಪಿದಾಗ, ನಾವೇ ಸ್ಥಾವರದಂತಾಗಿ ಕುಮಾರಪರ್ವತ ಜಂಗಮನಂತೆ ಕಾಣತೊಡಗಿತ್ತು. ಮನ್ಸು ಮತ್ತೆಮತ್ತೆ ಬೆಟ್ಟ ಏರುತ್ತಲೇ ಇತ್ತು.


(೨೦೦೩ರ ಉದಯವಾಣಿ "ಸಾಪ್ತಾಹಿಕ ಸಂಪದ'ದಲ್ಲಿ ಪ್ರಕಟಿತ)

Read more...

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP