November 26, 2009

ಹಾ ಹಾ ರಿಂಗ್ ಆಗ್ತಿದೆ...!


ಹೇಳಿಕೊಳ್ಳಲಾಗದ ಸಂಕಟದ ಸಂಜೆ. ಸುತ್ತಮುತ್ತ ಒತ್ತಿಕೊಂಡ ಜನ. 'ಸಾರ್, ಸಾರ್ ಒಂದು ರಿಂಗ್ ಕೊಡಿ ಸಾರ್...ಹಾ...ರಿಂಗ್ ಆಗ್ತಿದೆ...ರಿಸೀವ್ ಮಾಡ್ತಿಲ್ಲ ...ಹೋಯ್ತು ಬಿಡಿ...ನೋಡಿ ಇಲ್ಲೇ ಹಿಂದೆ ಒಬ್ಬ ಇಳ್ಕೊಂಡ...' ಅಷ್ಟೇ, ಅರ್ಧ ಜೀವ ಕೈಕೊಟ್ಟಿತ್ತು. ಎಂತಹ ಸಂಕಷ್ಟದ ಸಂದರ್ಭದಲ್ಲೂ 'ಈಗೇನು ಮಾಡಬೇಕು' ಅಂತಾದಾಗ ಕೈಗೆ ಬರುವುದು ಮೊಬೈಲು. ಈಗ ಅದೇ ಇಲ್ಲ. ಯಾರಿಗೆ ಹೇಳುವುದು ? ಕಾಯಿನ್‌ಬೂತಿಗೆ ಹೋಗಿ ಪಸ್‌ರ್ನಿಂದ ಒಂದು ರೂಪಾಯಿ ತೆಗೆದರೆ, ಅರೆ, ಯಾರ ನಂಬರೂ ನೆನಪಿಲ್ಲ ! ಅಂತೂ ಏರ್‌ಟೆಲ್ ಮೊಬೈಲ್‌ನ ಸ್ನೇಹಿತನೊಬ್ಬನಿಗೆ ವಿಷಯ ತಿಳಿಸಿ, ಕಸ್ಟಮರ್ ಕೇರ್‌ಗೆ ಫೋನ್ ಮಾಡಿ ಸಿಮ್ ಬ್ಲಾಕ್ ಮಾಡಿಸು ಅಂದೆ. ಪೊಲೀಸ್ ಸ್ಟೇಷನ್ ಕಡೆ ಕಾಲು ಎಳೆದುಕೊಂಡೆ. ಅಷ್ಟಕ್ಕೇ ಬದುಕೆಂಬ ವೆಹಿಕಲ್ ಕೆಟ್ಟು ಕೂತಿತ್ತು.

'ಎಲ್ಲಿ ಕಳೆದದ್ದು?' 'ಉಮಾಟಾಕೀಸ್ ಹತ್ತಿರ.' 'ಉಮಾಟಾಕೀಸ್ ಅಂದರೆ ನಮ್ಮ ಲಿಮಿಟ್‌ಗೆ ಬರೊಲ್ಲಾರೀ'. 'ಅಲ್ಲಾ ಸಾರ್, ಇಲ್ಲೇ ಮಕ್ಕಳ ಕೂಟ ಬಸ್‌ಸ್ಟಾಪ್‌ನಲ್ಲಿ ಬಸ್ ಹತ್ಕೊಂಡೆ. ನೂರು ಮೀಟರ್ ದೂರದ ಶಂಕರ ಮಠ ರೋಡ್ ಹತ್ರ ಹೋದಾಗ ಮೊಬೈಲ್ ಕದ್ದುಹೋಗಿದ್ದು ಗೊತ್ತಾಯ್ತು.' 'ಅಲ್ರೀ ನಮ್ ಹತ್ರ ಸುಳ್ಳು ಹೇಳ್ತೀರಲ್ಲ. ಈಗ ಉಮಾಟಾಕೀಸ್ ಅಂದ್ರಿ'. 'ಅಲ್ಲ ಸಾರ್, ಶಂಕರ ಮಠ ರೋಡ್‌ನಿಂದ ೫೦ ಮೀಟರ್ ಮುಂದೆ ಇರೋದೆ ಉಮಾ ಟಾಕೀಸ್. ಅಲ್ಲಿ ಇಳ್ಕೊಂಡು ಬಂದೆ.' 'ಆಗಲ್ಲಾರೀ, ನಿಮ್ ನೆಗ್ಲಿಜೆನ್ಸ್‌ನಿಂದ ತಾನೇ ಮೊಬೈಲ್ ಹೋಗಿದ್ದು. ಚಾಮರಾಜಪೇಟೆ ಸ್ಟೇಷನ್‌ಗೆ ಹೋಗಿ. ಹತ್ರ ಅಂತ ಇಲ್ಲಿಗೆ ಬಂದ್ರೆ ಆಗತ್ತಾ?' 'ಅಲ್ಲಾ ಸಾರ್, ಕಾಸ್ಟ್ಲಿ ಸೆಟ್. ತುಂಬಾ ಬೇಜಾರಾಯ್ತು. ಡುಪ್ಲಿಕೇಟ್ ಸಿಮ್ ತಗೊಳ್ಳೊಕೆ ಒಂದು ಅಕ್ನಲಾಡ್ಜ್‌ಮೆಂಟ್ ಬೇಕು ಅಷ್ಟೇ. ಪ್ಲೀಸ್' 'ಆಗಲ್ಲಾ ಅಂದ್ನಲ್ಲಾ ...ನೆಗ್ಲಿಜೆನ್ಸ್ ನಿಮ್ದು'. ಅಷ್ಟೂ ಹೊತ್ತು ಕಳ್ಳರಿಗೆ ಹಾಕುತ್ತಿದ್ದ ಶಾಪಗಳನ್ನೆಲ್ಲ ಆ ಪೊಲೀಸ್ ಇನ್ಸ್‌ಪೆಕ್ಟರ್ ತಲೆಗೆ ಒಗೆದು ಹೊರಬಂದೆ. ದಿನಾ ಮೊಬೈಲ್ ಲೂಟಿ ಹೊಡೆಯುವವರ ಬಗ್ಗೆ ಚಕಾರ ಎತ್ತದ ಈ ಮಂದಿ, 'ನೆಗ್ಲಿಜೆನ್ಸ್ ನಿಮ್ದು' ಅನ್ನುತ್ತಿರುವುದು ಮನೆ ತಲುಪುವವರೆಗೂ ಕಿವಿಯೊಳಗೆ ಮೊರೆಯುತ್ತಿತ್ತು. ಹಾಗೆ ಯಾರಲ್ಲಾದರೂ ಕಷ್ಟ ಹೇಳಿಕೊಳ್ಳೋಣ ಅಂದರೆ... ಮೊಬೈಲೇ ಇಲ್ಲ. ಮನೆಗೆ ಬಂದು ಪೋನ್ ಹಚ್ಚಿದರೆ ಆ ಸ್ನೇಹಿತ ಇನ್ನೂ ಸಿಮ್ ಕಾರ್ಡ್ ಬ್ಲಾಕ್ ಮಾಡಿಸಿಲ್ಲ. ಅವನಿಗೆ ಯಾರದೋ ಅರ್ಜೆಂಟ್- ಇಂಪಾರ್ಟೆಂಟ್ ಕಾಲ್ ಬಂತಂತೆ. ಬಾಯ್ತುಂಬ ಬೈದುಕೊಂಡು, ಮನೆ ಓನರ್‌ನ ಏರ್‌ಟೆಲ್ ಮೊಬೈಲ್ ಕೇಳಿ, ಕಸ್ಟಮರ್ ಕೇರ್ ಸಂಪರ್ಕಿಸಿದರೆ...ಅದೇ ರಶ್ಮಿ , ಆಹಾ ಎಷ್ಟೊಂದು ನಯವಾಗಿ ಸಮಾಧಾನವಾಗಿ ಸುಲಲಿತವಾಗಿ ಉಲಿಯುತ್ತಿದ್ದಾಳೆ ! ಬಿಲ್ಲಿಂಗ್ ಅಡ್ರೆಸ್ ಸರಿಯಾಗಿ ಹೇಳಿದ್ದಕ್ಕೆ ಥ್ಯಾಂಕ್ಸ್ ಅಂತೆ ಥ್ಯಾಂಕ್ಸ್. ಅಯ್ಯೋ ಸಿಮ್ ಬ್ಲಾಕ್ ಮಾಡ್ಸಮ್ಮಾ, ಕಿಡಿಗೇಡಿಗಳು ಯಾವುದೊ ಕ್ರಿಮಿನಲ್ ಕೆಲಸಕ್ಕೆ ಕಾಲ್ ಮಾಡ್ತಾರೆ ಅಂತಾನೂ ಓನರ್ ಹೇಳ್ತಿದಾರೆ ಅಂತ ಮನಸಲ್ಲೇ ಅಂದುಕೊಂಡೆ. ಹಾಗೆ ಎಲ್ಲ 'ಉತ್ತರಕ್ರಿಯೆ' ನಡೆದ ಬಳಿಕವೂ 'ಸ್ವಿಚ್‌ಡ್ ಆಫ್' ಅಂತಲೇ ಬರ್‍ತಿದೆ. ಈ ಮೊಬೈಲ್ ಕಂಪನಿಯವರಿಗೆ ಬೇರೇನಾದರೂ ಸೌಜನ್ಯದ ಸಂದೇಶ ಹಾಕಕ್ಕೆ ಆಗಲ್ವಾ? ನನ್ನ ನಂಬರ್‌ಗೆ ನಾನೇ ರಿಂಗ್ ಕೊಡುವಾಗ ಸ್ವಿಚ್‌ಡ್ ಆಫ್ ಅಂತ ಬರುವುದಿದೆಯಲ್ಲ, ಅದು ನಾನು ಜೀವಂತವಿದ್ದಾಗಲೂ ಸತ್ತಿದ್ದಾನೆ ಎಂದು ಇನ್ನೊಬ್ಬರು ಅಂದಂತೆ !

ಈಗ ಅಸಹ್ಯ ಏಕಾಂಗಿತನ. ಹೇಳೋರಿಲ್ಲ ಕೇಳೋರಿಲ್ಲ. ತಬ್ಬಲಿಯು ನೀನಾದೆ ಮಗನೆ ಹಾಡು. ಅವೆಷ್ಟೋ ನಂಬರ್‌ಗಳು, ಕಾಯ್ದಿಟಿದ್ದ ಎಸ್‌ಎಂಎಸ್‌ಗಳು, ಬ್ಯಾಂಕ್ ಅಕೌಂಟ್ ನಂಬರ್-ಕೋಡ್‌ಗಳು, ಬೇಜಾರಾದಾಗ ನೋಡಿಕೊಳ್ಳಲು ಇಟ್ಟುಕೊಂಡಿದ್ದ ಸ್ಟೈಲ್‌ಕಿಂಗ್ ತಮ್ಮ ಹಾಗೂ ಅಮ್ಮನ ನಗುವಿನ ಫೋಟೊ ...ಹೋದದ್ದು ಹೋಯಿತು. ಕಳೆದೊಂದು ವರ್ಷದಿಂದ ಬ್ಯಾಕ್‌ಅಪ್ ಕೂಡಾ ಇಟ್ಟುಕೊಳ್ಳದ್ದರಿಂದ ಅಪ್‌ಡೇಟ್ ಆದ-ಸೇರ್ಪಡೆಯಾದ ನಂಬರ್‌ಗಳೂ ಮಾಯ. ಬೇಜಾರು ಅಂದರೆ, 'ಟೇಕ್ ಇಟ್ ಈಸಿ ಮೂರ್ತಿ','ಟೇಕ್ ಇಟ್ ಈಸಿ ಗುರು' ಅನ್ನೋ ಹೆಸರಿನಲ್ಲಿ ರಿಸೀವ್ ಮಾಡಬಾರದೆಂದೇ ಇಟ್ಟುಕೊಂಡಿದ್ದವು ಕೆಲವು. ವಾರಕ್ಕೊಮ್ಮೆ ಫೋನ್ ಮಾಡಿ, 'ಸಾರ್ ನಮ್ಮ ಪುಸ್ತಕದ ವಿಮರ್ಶೆ ಬಂದಿಲ್ವಲ್ಲಾ...ಮುಂದಿನ ವಾರ ನಮ್ಮ ಕಾಲೇಜಲ್ಲಿ ಪ್ರೊಗ್ರಾಮ್, ಎಲ್ಲ ಡಿಟೈಲ್ಸ್ ಕೊಡ್ತೀವಿ ಒಂದು ದೊಡ್ಡ ಆರ್ಟಿಕಲ್ ಮಾಡಿ ಸಾರ್' ಅಂತ ಜೀವ ಹೀರುವ ಪರಿಚಿತ ಅಪರಿಚಿತ ಜೀವಗಳ ನಂಬರುಗಳು. ಅವೂ ಕೈಕೊಟ್ಟವು. ಇನ್ನು ಕೆಲ ದಿನಗಳ ನಂತರ ಅವರು ಮತ್ತೆ ಕರೆಯುತ್ತಾರೆ. ನಾನು ಗೊತ್ತಿಲ್ಲದೆ ರಿಸೀವ್ ಮಾಡಿ ದಾಕ್ಷಿಣ್ಯದ ಮುಜುಗರದಲ್ಲಿ ಸಿಕ್ಕಿಕೊಳ್ಳುತ್ತೇನೆ.

ಮೊನ್ನೆ ಮೊನ್ನೆ ಭಾನುವಾರ. ಮೆಜೆಸ್ಟಿಕ್‌ನಿಂದ ಚಿತ್ರಕಲಾ ಪರಿಷತ್‌ಗೆ ಅಬ್ಬಬ್ಬಾ ಅಂದರೆ ೧೭ ರುಪಾಯಿ ಆಟೊ ಚಾರ್ಜು. ತಿರುಗಿಸಿದ್ದ ಮೀಟರ್ ಓಡಲಿಲ್ಲ ಅಂತ ಮೂವತ್ತು ರುಪಾಯಿ ಕೇಳಿದ್ದ ಆ ದುರುಳ ಆಟೊ ಡ್ರೈವರ್. ಸಣ್ಣಗೆ ಶರಾಬಿನ ಘಮ. ಯುನಿಫಾರ್ಮ್ ಇಲ್ಲ. ನಾಲ್ಕೈದು ವಾಹನಗಳ ಮಧ್ಯೆ ಸೆಂಟಿಮೀಟರ್ ಅಂತರದಲ್ಲಿ ತಪ್ಪಿಸಿಕೊಂಡು ಬಂದವನು. 'ಒಳಗಡೆ ಕಾಯಿಲೆ ಇರೋದು ಮೊದಲೇ ಗೊತ್ತಾಗತ್ತಾ? ಮೀಟರ್ ಓಡ್ತಿಲ್ಲ ಅಂತ ನನಗೆ ಗೊತ್ತಾಗಿದ್ದೇ ಈಗ. ಮೂವತ್ತು ರುಪಾಯಿ ಕೊಡಿ'- ಅಷ್ಟೆ. ಇಪ್ಪತ್ತು ರುಪಾಯಿ ಕೊಟ್ಟರೂ ಸ್ವೀಕರಿಸಲೊಲ್ಲ. ಮಾತಿಗೆ ಮಾತು. ಆ ಭಾನುವಾರದ ಮಧ್ಯಾಹ್ನ ಕುಮಾರಪಾರ್ಕ್‌ನ ನಿರ್ಜನ ರಸ್ತೆ. ಜುಮ್ಮೆಂದು ಓಡುವ ಕಾರುಗಳು ಮಾತ್ರ. 'ನೀನು ರಿಪೋರ್ಟರ್ ಆಗಿರು, ಎಲ್ಲೇ ಕೆಲಸ ಮಾಡು. ನೋಡಯ್ಯಾ, ಆಟೊ ನಂಬರ್ ನೋಟ್ ಮಾಡ್ಕೊ ; ನಿನ್ ಕೈಲಿ ಏನೂ ಮಾಡಕ್ಕಾಗಲ್ಲ' ಅನ್ನುತ್ತಾ ಆಟೊ ಇಳಿದು ಮೈಮೇಲೆ ಬಂದೇಬಿಟ್ಟ. 'ಏನು ಮಾಡ್ತೀಯಾ ನೀನು, (ಬೆರಳನ್ನು ಕತ್ತಿನ ಸುತ್ತ ಎಳೆದು ತೋರಿಸುತ್ತಾ) ಕತ್ತರಿಸಿ ಹಾಕ್‌ಬಿಡ್ತೀವಿ, ಮನೆಗೇ ಬಂದು ಉಡಾಯಿಸ್‌ಬಿಡ್ತೀವಿ ನೋಡು...ಅಂದ. ನಖಶಿಖಾಂತ ಉರಿಯುತ್ತ ಬಯ್ಯುತ್ತ ನಂಬರ್ ಬರೆದುಕೊಂಡೆ. ಮೊಬೈಲ್, ಕನ್ನಡಕಗಳೆಲ್ಲ ಕಳೆದುಹೋಗುವ ಹೊಡೆದಾಟಕ್ಕೆ ನಾನು ಸಿದ್ಧನಿರಲಿಲ್ಲ. ಇಪ್ಪತ್ತೈದು ರುಪಾಯಿ ಕೊಟ್ಟು ಅವನ ಕೈಬೀಸಿನಿಂದ ತಪ್ಪಿಸಿಕೊಂಡು ಪರಿಷತ್‌ನ ಹೆಬ್ಬಾಗಿಲ ಬಳಿ ಹೋದೆ. 'ಯಾರನ್ನಾದ್ರೂ ಕರ್‍ಕೊಂಡು ಬಾ. ಇಲ್ಲೇ ಕಾಯ್ತಾ ಇರ್‍ತೀನಿ' ಅಂತೆಲ್ಲ, ಬೊಬ್ಬಿಡುತ್ತಲೇ ಇದ್ದ. ಅಂತಹ ದುಷ್ಟ ಡ್ರೈವರನ ಆಟೊ ನಂಬರ್ ಕೂಡಾ ಮೊಬೈಲ್‌ನಲ್ಲಿತ್ತು. (ಆತನ ಹೆಸರು ಧನಂಜಯ ಅಂತಿತ್ತು) ಆ ದಿನ ತಕ್ಷಣಕ್ಕೆ ಸಿಕ್ಕ ನಂಬರೊಂದಕ್ಕೆ ಪೋನ್ ಮಾಡಿ ಆಟೊ ನಂಬರ್ ಹೇಳಿ ದೂರು ಕೊಟ್ಟಿದ್ದೆ. ಅವ್ಯಾವುವೂ ಈಗಿಲ್ಲ, ಇನ್ನಿಲ್ಲ. ಆತನ ಕೊಳಕು ಬಿಂಬದ ಹೊರತಾಗಿ.

ಮನೆ ತುಂಬ ಒಬ್ಬನೇ ಬೈದುಕೊಂಡು, ನಿಮಿಷಕ್ಕೊಮ್ಮೆ ಛೆ ಛೆ ಅನ್ನುತ್ತ, ರಾತ್ರಿ ಎಂಟಾದಾಗ ಒಮ್ಮೆ ನಿರಾಳ. ಹೊಸ ಜನ್ಮ ಬಂದಂತೆ. ಎಲ್ಲ ನೆನಪುಗಳನ್ನೂ ಕಳೆದುಕೊಂಡವನಂತೆ. ಈಗಷ್ಟೇ ಬಿಸಿಲಲ್ಲಿ ಒಣಗಿದ ಬಟ್ಟೆಯ ಹೊಸ ಘಮದಂತೆ. ಸರ್ವತಂತ್ರ ಸ್ವತಂತ್ರನಾದಂತೆ ! ರಾತ್ರಿ ಹತ್ತಾಯಿತೋ ಮತ್ತೆ ತಳಮಳ ಶುರು. ಕಿವಿಗೆ ಇಯರ್‌ಫೋನ್ ಸಿಕ್ಕಿಸಿಕೊಂಡು ಟೆರೇಸ್‌ನಲ್ಲಿ ಓಡಾಡುತ್ತ ಕೇಳುತ್ತಿದ್ದ ಪದ್ಯಾಣ ಭಾಗವತರ ಹೊಸ ಯಕ್ಷಗಾನ ಹಾಡನ್ನೂ ಕೇಳಲಾಗುವುದಿಲ್ಲ. ಪ್ರತಿದಿನ ಈ ಹೊತ್ತಿಗೆ ಫೋನ್ ಮಾಡಿ ಉಲ್ಲಾಸದಿಂದ ಮಾತಾಡುತ್ತಿದ್ದ ಗೆಳೆಯನ ಕರೆ ಬರುವುದೇ ಇಲ್ಲ. ಅವಳ ಮೆಸೇಜು ನನಗೆ ಡೆಲಿವರಿ ಆಗೋದಿಲ್ಲ. ರಾತ್ರಿ ಮಲಗಲು ಹೊರಟರೆ ಅಲಾರ್ಮ್ ಇಟ್ಟುಕೊಳ್ಳಲೂ ಮೊಬೈಲ್ ಇಲ್ಲವಲ್ಲ. ಹತ್ತು ನಿಮಿಷ ಹಾಡು ಕೇಳದಿದ್ದರೆ ನಿದ್ದೆಯೂ ಸುಳಿಯುವುದಿಲ್ಲ. ಮೊಬೈಲ್ ಕಳ್ಳರು ನರಕಕ್ಕೆ ಹೋದಾಗ ,ಯಮಧರ್ಮರಾಯ ಅವರನ್ನು ಕೊತಕೊತ ಕುದಿಯುವ ಎಣ್ಣೆಯಲ್ಲಿ ಜಿಲೇಬಿಯಂತೆ ಬೇಯಿಸುತ್ತಿರುವುದನ್ನು ಕಲ್ಪಿಸಿಕೊಳ್ಳುತ್ತೇನೆ. ಬೆಳಗೆದ್ದು ಪ್ಯಾಂಟ್ ಹಾಕಿಕೊಂಡರೆ ಕೈ ಮತ್ತೆ ಎಡಗಾಲಿನ ಪ್ಯಾಂಟ್ ಜೇಬಿಗೆ ಹೋಗುತ್ತದೆ. ಥತ್...ಮನಸ್ಸು ಕಲಕುತ್ತದೆ. ಬೆಂಗಳೂರಿನಲ್ಲೀಗ ನಾನು ಅಬ್ಬೇಪಾರಿ. ಒಂದು ದಿನ ಕಳೆದರೆ ಸಾಕು, ನನ್ನೊಬ್ಬನನ್ನು ಬಿಟ್ಟು ಎಲ್ಲರೂ ಮುಂದೆ ಹೋಗಿಬಿಟ್ಟರಾ? ಬಸ್ ಹತ್ತಿದರೆ ಎಲ್ಲಿ ಪರ್ಸ್‌ನ್ನೂ ಕಿತ್ತುಕೊಳ್ಳುತ್ತಾರೊ ಅಂತ ದಿಗಿಲು. ಬಸ್‌ನಲ್ಲಿ ನನ್ನನ್ನು ಒತ್ತಿ ಹಿಡಿದಿದ್ದ ಕಪ್ಪಗಿನ ವ್ಯಕ್ತಿಯೊಬ್ಬನ ಅಸ್ಪಷ್ಟ ಚಹರೆ ಆತನೇ ಕಳ್ಳನೆಂಬಂತೆ ಕಣ್ಣಮುಂದೆ ಬರುತ್ತದೆ. ಆಕೆ ಹೃದಯ ಕದ್ದಾಗಲೂ ಆಗದ ಚಡಪಡಿಕೆಯ ನೂರು ಪಾಲು ಈಗ!

ಮತ್ತೆ ಎಲ್ಲ ಸರಿಹೋದೀತು. ಬರ್ಬಾದಾಯಿತು ಅನಿಸಿದ ಬದುಕು ಮಾಮೂಲಿಗೆ ಬಂದೀತು. ಗಲಗಲ ಅಲುಗಿದ ತಲ್ಲಣದ ಆ ಸಂಜೆ, ನೋವ ತಂತಿಯನು ಮೀಟಿದ ಕ್ಷಣಗಳನು ಮಾತ್ರ ಮರೆಯಲಾಗದು.

Read more...

November 20, 2009

ಕಾಡಿನ ಕತ್ತಲೆ ಬೆಟ್ಟದ ಕತ್ತಲೆ


ಕತ್ತಲ ದಾರಿಗಳಲ್ಲಿ ಮೈಗೆಲ್ಲ ಕತ್ತಲು ಮೆತ್ತಿಕೊಂಡು ಓಡಾಡುವ ಸುಖ ನಿಮಗೆ ಗೊತ್ತೆ ? ಹಾಲು ಸುರಿವ ಬೆಳದಿಂಗಳಲ್ಲಿ ಯಾವತ್ತಾದರೂ ನೀವು ಕಾಡು ಬೆಟ್ಟಗಳೊಳಗೆ ಅಲೆದಾಡಿದ್ದೀರಾ? ಒಮ್ಮೆ ಅಲೆದಾಡಿದರೆ, ನೀವೆಂಥ ಅನುಭವವನ್ನು ಮಿಸ್ ಮಾಡಿಕೊಂಡಿದ್ದಿರಿ ಅಂತ ಅರ್ಥವಾದೀತು. 'ಕತ್ತಲಿಗೆ ಹತ್ತೆ ತಲೆ, ಅದು ಅಸಂಖ್ಯ' ಅಂತ ಅಡಿಗರು ಅಂದದ್ದು ಬೇರೆಯೇ ಅರ್ಥ- ಸಂದರ್ಭದಲ್ಲಿ ಬಿಟ್ಟುಬಿಡಿ ! ನಿಜವಾಗಿ ಕತ್ತಲಿಗೆ ಒಂದೇ ತಲೆ, ಒಂದೇ ಮನಸ್ಸು, ಒಂದೇ ಧಾಟಿ. ಅದು ಹಗಲಿನ ಗರಾಜು ಅಲ್ಲ. ರಾತ್ರಿಯೆಂದರೆ ಹಗಲನ್ನು ಹಿಡಿದು, ಗದರಿಸಿ ತೆಪ್ಪಗೆ ಕುಳ್ಳಿರಿಸಿರುವ ಶಕ್ತಿ. ಒಂದಿರುಳ ಕನಸಿಗಿಂತ ಎಷ್ಟೋ ಹೆಚ್ಚಿನ ಸುಖ ಒಂದಿರುಳ ನನಸಿಗಿದೆ. ‘ನ ಕದಾಪಿ ಅನೀದೃಶಂ ಜಗತ್’- ಈ ಜಗತ್ತು ಈಗ ಇರುವ ಹಾಗಲ್ಲದೆ ಬೇರೆಯದೇ ತೆರನಾಗಿ ಎಂದೂ ಇರಲಿಲ್ಲ- ಇದು ಉಪನಿಷತ್ ಮಾತು. ಅದು ನಿಜ ನಿಜ ಅನ್ನಿಸುವ ಹಾಗೆ ರಾತ್ರಿಯಿದೆ !

ಟಾರ್ಚ್ ಕೂಡಾ ಇಲ್ಲದೆ ಐದಾರು ಕಿಲೋಮೀಟರುಗಳ ದೂರ ಬೆಟ್ಟಗುಡ್ಡಗಳ ಕಾಲುಹಾದಿಗಳಲ್ಲಿ ರಾತ್ರಿ ಓಡಾಡುವ ಜನ ಹಳ್ಳಿಗಳಲ್ಲಿ ಈಗಲೂ ಇದ್ದಾರೆ. ಅವರು ಕಿವಿಗೆ ಇಯರ್‌ಫೋನ್ ಸಿಕ್ಕಿಸಿಕೊಂಡಿಲ್ಲ, ಶೂ ಹಾಕಿಲ್ಲ, ಎಮರ್ಜೆನ್ಸಿಗೆ ಅಂತೆಲ್ಲ ಏನೂ ಇಲ್ಲ. ಆದರೂ ನಿರಾಳ, ನಿರ್ಭಯ, ಯಾವ ಔದಾಸೀನ್ಯವೂ ಇಲ್ಲ. ಲೇಟ್‌ನೈಟ್ ಪಾರ್ಟಿಗಳನ್ನು ಮುಗಿಸಿ ಮನೆಗೆ ಬರುವ ಹಾಗಲ್ಲ ಇದು. ಹನ್ನೆರಡು ಗಂಟೆಗೆ ಥಿಯೇಟರ್‌ನಿಂದ ಹೊರಟಾಗಿನ ಧಾವಂತವಲ್ಲ ಇದು. ತಮಗೆ ಮಾತ್ರ ಗೊತ್ತಿರುವ, ಕಿಟಕಿಯಲ್ಲಿ ಕೈ ಹಾಕಿ ಉದ್ದ ಮಾಡಿದರೆ ಸಿಗುವ ಬೋಲ್ಟ್ ತೆಗೆದು ಮನೆಯೊಳಗೆ ಸೇರಿ, ಹೆಂಡತಿ ಮಕ್ಕಳಿಗೇ ತಿಳಿಯದಂತೆ ಹೊದ್ದು ಮಲಗುವ ಜನ ಇವರು. ಅವರ ರಾತ್ರಿ ನಡಿಗೆ, ಹಗಲಿನ ಭಾರವನ್ನೆಲ್ಲ ನಿರಾಯಾಸವಾಗಿ ಕಳೆಯುತ್ತದಂತೆ; ಬೇಕಿದ್ದರೆ ಕೇಳಿ ನೋಡಿ. ಹಾಗಂತ, ಆ ಕತ್ತಲು ಹಳ್ಳಿಗಳದ್ದೇ ಸೊತ್ತೇನೂ ಅಲ್ಲ. ಬೆಂಗಳೂರಿಗೆ ಬಂದು ಒಂದು ವಾರವಾಗಿದ್ದ ಗೆಳೆಯನೊಬ್ಬ ರಾತ್ರಿ ಟೆರೇಸ್‌ನಲ್ಲಿ ಕತ್ತೆತ್ತಿ ಕುಳಿತು ಹೇಳಿದ -'ಆಕಾಶ ನೋಡ್ತಾ ಇದ್ರೆ ಇಲ್ಲೂ ಊರಲ್ಲಿ ಇದ್ದ ಹಾಗೇ ಆಗ್ತದೆ !'

'ಈ ಸಂಜೆ. ಮೆಲ್ಲಮೆಲ್ಲನೆ ತೊಟ್ಟುತೊಟ್ಟಾಗಿ ರುಚಿ ನೋಡಿನೋಡಿ ಈ ದಿವಾಪ್ರಭೆಯನ್ನು ಹೇಗೆ ಪಾನ ಮಾಡುತ್ತಿದ್ದಾಳೆ ಈ ನಿಶಾಭಗವತಿ ! ಆ ಬಟ್ಟಲಲ್ಲಿ ಉಳಿಯುವ ಅವಶೇಷಗಳಂತೆ ತಾರೆಗಳು ಕಾಣುತ್ತಿವೆಯಲ್ಲವೆ? ಈಗ ಎಲ್ಲರಿಗೂ ಒಳಗೆ ಬೆಳಕು, ಹೊರಗೆ ಕತ್ತಲು. ಸಮಸ್ತ ಚೈತನ್ಯವನ್ನು ಮೂಲ ಪ್ರಜ್ಞೆಯಲ್ಲಿ ಅದ್ದಿ ತೆಗೆಯಬೇಕೆಂದೇ ಈ ಯಾಮಿನೀ ದೇವತೆಯಾಸೆಯೋ? ಮೊದಲು ಕಣ್ಣು, ಆಮೇಲೆ ಕಿವಿ, ಬಳಿಕ ರಸನೆ, ಅನಂತರ ಪ್ರಾಣ, ಕೊನೆಗೆ ಸ್ಪರ್ಶ-ಹೀಗೆ ಒಂದು ಕರಣ ಅಸ್ತವಾಗಿ, ಮತ್ತೊಂದು ಪ್ರಜ್ವಲಿಸಿ, ಕೊನೆಗೆ ಎಲ್ಲವೂ ಶಾಂತವಾಗುವಂತೆಯೂ ಇರವು ಆತ್ಮಾರಾಮವಾಗಿ ಶ್ಯಾಮಸುಂದರನಲ್ಲಿ ಲಯಿಸುವಂತೆಯೂ ಈಕೆ ಏರ್ಪಡಿಸುತ್ತಾಳಲ್ಲವೆ, ಈ ಕೃಷ್ಣ ಸಹೋದರಿ? ಕೋಟಿ ಕೋಟಿ ಹಗಲುಗಳನ್ನು ಬೆಳಗಬಲ್ಲ ಈ ತಾರೆಗಳನ್ನು, ತ್ರಿಮೂರ್ತಿಗಳನ್ನು ಶಿಶುಭಾವಕ್ಕಿಳಿಸಿ ತೊಟ್ಟಿಲಲ್ಲಿ ತೂಗಿದ ಅನಸೂಯೆಯಂತೆ, ಹೇಗೆ ತೂಗುತ್ತಿದ್ದಾಳೆ ಈ ‘ರಾತ್ರಿಯೆಂಬ ಧಾತ್ರಿ'? ಇವಳ ಮಾಯೆಯ ಮುಂದೆ ಹಗಲಿನದೆಂಥ ಮಾಯೆ?’ - ಹೀಗೆ ಬರೆದವರು ಶ್ರೇಷ್ಠ ಬರಹಗಾರ ಪು.ತಿ.ನರಸಿಂಹಾಚಾರ್. ಕತ್ತಲನ್ನು ನಿಶಾ ಭಗವತಿಯಾಗಿ, ಯಾಮಿನೀ ದೇವತೆಯಾಗಿ, ಕೃಷ್ಣ ಸಹೋದರಿಯಾಗಿ ಕಂಡವರು ! ಒಟ್ಟಿನಲ್ಲಿ ಎಲ್ಲವನ್ನೂ ಶಮನಗೊಳಿಸುವ ಶಕ್ತಿ ಕತ್ತಲಿಗಿದೆಯೆಂಬುದು ಭಾವ.

ರಾತ್ರಿ ನಡೆಯುವ ಸುಖ ಮೊತ್ತಮೊದಲು ನನಗೆ ಅರಿವಾದದ್ದು ಇರುಳು ಪೂರ್ತಿ ನಡೆಯುವ ಯಕ್ಷಗಾನ ಬಯಲಾಟಗಳಿಗೆ ಹೊರಟಾಗ. ರಾತ್ರಿ ಎಂಟು ಗಂಟೆಗೆ ಮನೆಯಿಂದ ಹೊರಡುವ ಮೊದಲ ಅವಕಾಶ ದೊರೆತದ್ದು ಅದರಿಂದಲೇ . ಆ ಎಂಟರ ಬಸ್ಸು ಬಂದರೆ ಬಂತು, ಇಲ್ಲದಿದ್ದರೆ ಇಲ್ಲ. ಎಂಟೂವರೆಯ ತನಕ ಕಾದು ನಿಂತು, ನಾಲ್ಕೈದು ಕಿಲೋಮಿಟರ್ ‘ನಟರಾಜ ಸರ್ವೀಸ್’. ಅಡಿಕೆ ಕೊಯ್ಲಿನ ಸಂದರ್ಭದಲ್ಲಿ ಕಳ್ಳರ ಕಾಟ ತಪ್ಪಿಸಲು ರಾತ್ರಿ ಹತ್ತಕ್ಕೆ ಅಪ್ಪನ ಜತೆ ತೋಟಕ್ಕೆ ಹೋದಾಗ, ಬಳಿಕ ಬಂದ ಕರೆಂಟ್ ಪಂಪ್ ರನ್ ಮಾಡಲು ಒಳಗೊಳಗೆ ಹೆದರುತ್ತ ತೋಟದ ಮಧ್ಯಕ್ಕೆ ಆ ಕತ್ತಲಲ್ಲಿ ಛಕ್ಕನೆ ಓಡಿ ಹಿಂದಿರುಗುವಾಗ...ಇರುಳಿನ ಸುಖ ತಿಳಿದದ್ದು ಹೀಗೆ. ಈಗ ಊರಿಗೆಂದೋ ಬೆಂಗಳೂರಿಗೆಂದೋ ನೈಟ್ ಬಸ್ಸಿಗೆ ಹೊರಡುವುದು ಎಷ್ಟೊಂದು ಮಾಮೂಲಿ ಕ್ರಿಯೆಯಾಗಿಬಿಟ್ಟಿದೆಯಲ್ಲಾ ! ಯಾವಾಗ ಐಟಿ ಎಂಬ ಕೆಲಸದ ವ್ಯೂಹ ಶುರುವಾಯಿತೋ, ಬಳಿಕವಂತೂ ರಾತ್ರಿಯ ಕೆಲಕ್ಕೆ ಬೇರೆಯದೇ ಮೆರುಗು ಬಂತು. ರಾಜ್ಯದ ಗಡಿಯ ಚೆಕ್‌ಪೋಸ್ಟ್‌ಗಳ ಕಾವಲುಗಾರರು, ಲಾರಿಗಳು ಓಡಾಡುವ ಹೆದ್ದಾರಿಯಲ್ಲಿನ ಗೂಡಂಗಡಿಗಳವರು, ನೈಟ್ ಬೀಟ್ ಪೊಲೀಸರು ಮುಂತಾದವರು ಯಾವುದೋ ಕಾಲದಿಂದ ನೈಟ್ ಡ್ಯೂಟಿ ಮಾಡುತ್ತಿದ್ದರಾದರೂ, ನಮ್ಮ ನಗರಗಳು ಮೆಟ್ರೊಗಳಾದಂತೆ ರಾತ್ರಿಯ ಬದುಕು ಬೇರೆಯದೇ ವೈಭವದಲ್ಲಿ ಅನಾವರಣಗೊಳ್ಳತೊಡಗಿತು. ಆದರೆ ಕಾಡಿನ ಕತ್ತಲೆ...ಬೆಟ್ಟದ ಕತ್ತಲೆ...? ಅದರ ಸುಖ ಗೊತ್ತಿರುವವರು ವಿರಳ. ಅದರ ಅನಂತತೆಯಲ್ಲಿ ಸುತ್ತಾಡುವುದು ದಿವ್ಯ ಸುಖ.

ಅದು ನಿಜಕ್ಕೂ ಕೊಂಚ ಘಾಟಿಯೇ ! ಕಡಿದಾದ ತಿರುವುಗಳಲ್ಲಿ ಹಬ್ಬಿಕೊಂಡಿದ್ದ ಕತ್ತಲು. ವಾಹನಗಳ ಬೆಳಕಿನ ಜತೆ, ಬೀಸುವ ಗಾಳಿಯ ಜತೆ, ಆ ಕತ್ತಲು ಕೂಡಾ ಅತ್ತಿತ್ತ ರಾಶಿಯಾಗುತ್ತಿತ್ತು. ಎಲ್ಲೋ ಒಂದೊಂದೆಡೆ ಇನ್ನೂ ಆರದ ಕೆಂಡದ ತುಂಡುಗಳಂತೆ ಲೈಟುಗಳು ಉರಿಯುತ್ತಿವೆ. ಹಿಂದೂ ಮುಂದೂ ವ್ಯಾಪಿಸಿಕೊಂಡಿರುವ ಕತ್ತಲನ್ನು ಬಗೆಯುತ್ತಾ, ಆ ಕಾಳರಾತ್ರಿಯನ್ನು ಪ್ರೇಮಿಸುತ್ತಾ ನಡೆದರೆ ಹೊತ್ತು ಸರಿದದ್ದೆ ತಿಳಿಯುವುದಿಲ್ಲ. ಬೈಕಿನಲ್ಲೋ ಕಾರಿನಲ್ಲೋ ಭರ್ರನೆ ಸಾಗುವುದಕ್ಕಿಂತ, ದೇಹ ತೊನೆದಾಡಿಸುತ್ತಾ ರಸ್ತೆಯಲ್ಲಿ ಸುಮ್ಮನೆ ನಡೆಯುತ್ತಿರಬೇಕು. ಬೆಟ್ಟದ ತುದಿಗೆ ಸುಮಾರು ಎಂಟು ಕಿಮೀಗಳಷ್ಟಾದರೂ ಇದೆ. ನಡೆದೇ ಹೋದರೆ ಮೂರು ಗಂಟೆ ಸಾಕು. ಆಹ್, ಪೌರ್ಣಮಿಯ ಬೆಟ್ಟ !

ಪ್ರಶಾಂತ ರಾತ್ರಿಯನ್ನು ಕಲಕಿ ರಾಡಿ ಮಾಡುವ ಎಂತದ್ದೂ ಇಲ್ಲ. ಪುಟ್ಟದೊಂದು ಮಿಣಿಮಿಣಿ ಟಾರ್ಚು ಕೈಯಲ್ಲಿ; ಸಣ್ಣ ಹಗುರ ಬ್ಯಾಗು-ಪುಟಾಣಿ ನೀರಿನ ಬಾಟಲಿ ಬೆನ್ನಲ್ಲಿ. ಅಲ್ಲಿ ಆಕಾಶಕ್ಕೂ ಭೂಮಿಗೂ- ಲೋಕಾಂತಕ್ಕೂ ಏಕಾಂತಕ್ಕೂ ವ್ಯತ್ಯಾಸವೇ ಇಲ್ಲ. ತಲೆಯ ಕೂದಲೆಳೆಗಳ ಮಧ್ಯೆ ಅಲೆಅಲೆಯಾಗಿ ಬೀಸುವ ಗಾಳಿಗೆ, ದೇಹ-ಮನಸುಗಳೆರಡನ್ನೂ ಹಸಿಯಾಗಿಡುವ ತಾಕತ್ತಿದೆ. ಕತ್ತೆತ್ತಿದರೆ ಚುಕ್ಕಿಗಳು ಬಾನಿನಲ್ಲಿ ಚುಚ್ಚಿಕೊಂಡಿವೆ. ಗಗನ ಸಾಗರದಲ್ಲಿ ಕಳ್ಳ ಚಂದ್ರ ತೇಲುತ್ತಿದ್ದಾನೆ. ಕತ್ತಲಲ್ಲಿ ಲೋಕ ಸುತ್ತಿ ನೋಡುವವನು ಅವನೊಬ್ಬನೇ. ಕಿವಿಯಲುಗಿಸುತ್ತಾ ಮಲಗಿರುವ ಪ್ರಾಣಿಯ ಹಾಗೆ ಗಿಡಮರಗಳೆಲ್ಲ ಎಲೆ ಅಲ್ಲಾಡಿಸುತ್ತಾ ನಿದ್ದೆ ಹೋಗಿವೆ. ಶ್...ಇಲ್ಲಿ ಕಿರುಚಾಡುವುದು ನಿಷಿದ್ಧ. ಅಷ್ಟಕ್ಕೂ, ಇಲ್ಲಿ ಬೊಬ್ಬಿಡುವ ಮನಸ್ಸೂ ಬಾರದು. ಪ್ರಾಣಿಗಳ ಸುಳಿವು ಸಿಕ್ಕವರಂತೆ ಭಯಪಡುವುದನ್ನೋ, ಕಳ್ಳಕಾಕರ ನೆನಪನ್ನೋ ಮನಸ್ಸಿನಿಂದ ಕಿತ್ತಿಟ್ಟುಕೊಳ್ಳಬೇಕು. ನಿಮಗೆ ವಿರುದ್ಧವಾದ ಯಾವುದೂ ಈ ಲೋಕದಲ್ಲಿಲ್ಲ ಅಂದುಕೊಳ್ಳಿ. ಆ ಕತ್ತಲಲ್ಲಿ ನಿಮ್ಮನ್ನು ಕಂಗೆಡಿಸುವ ಮನಸ್ಸು ಯಾರಿಗೂ ಇಲ್ಲ. ಮೇಲಕ್ಕೇರಿ ಏರಿ ಹೋದ ಹಾಗೆಲ್ಲ, ಮೈ ಮೇಲೆಲ್ಲ ಬೆವರ ಮಣಿಗಳು. ಅದು ಆಯಾಸದಿಂದಲೋ, ಭಯದಿಂದಲೋ, ಬಿಸಿಲಿನ ಝಳದಿಂದಾಗಿಯೋ ಅಲ್ಲ. ಅದು ಬೆಳದಿಂಗಳಲಿ ಮೂಡಿದ ಬೆವರು ! ಆ ನಸು ಬೆವರಿನ ಸುಖ ನಿಮಗೆ ಗೊತ್ತಾಗಬೇಕು. ತುದಿ ತಲುಪಿದರೋ ಅದೇ ಅದೇ...ನಮಗೆಲ್ಲ ಗೊತ್ತಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ನಂದಿಬೆಟ್ಟ. ಇದೊಂದು ಸ್ಯಾಂಪಲ್ ಅಷ್ಟೆ. ಪೂರ್ಣ ಚಂದಿರನಿರುವ ಹುಣ್ಣಿಮೆಯ ದಿನ, ಇಂತಹ ಬೆಟ್ಟಗಳೆಲ್ಲ ಎಷ್ಟೊಂದು ಕಾಂತಿಯುತವಾಗಿ ಬೆಣ್ಣೆ ಮುದ್ದೆಗಳಂತೆ ಕಾಣುತ್ತವೆಯೋ.ಆ ಕಾಡಿನ ಕತ್ತಲೆ, ಈ ಬೆಟ್ಟದ ಕತ್ತಲೆ ನಿಮ್ಮ ಒಳಗೂ ನುಗ್ಗಲಿ.
(ವಿಜಯ ಕರ್ನಾಟಕದಲ್ಲಿ ಪ್ರಕಟಿತ)

Read more...

November 15, 2009

ರಂಗಭೂಮಿಯ ತರುಣ ಮನಸು


ಕಾಲೇಜು ರಂಗಭೂಮಿ ಕೆಟ್ಟಿದೆ !
ಹತ್ತು ವರ್ಷಗಳಿಂದ ರಂಗಭೂಮಿ ಚಟುವಟಿಕೆಗಳಲ್ಲಿ ಮೀಯುತ್ತಿದ್ದಾರೆ ನಟ-ನಿರ್ದೇಶಕ ಮಂಜುನಾಥ್ ಬಡಿಗೇರ್. ಸದ್ಯ ಬೆಂಗಳೂರು ಕಾರ್ಯಕ್ಷೇತ್ರ. 'ಯುವ ರಂಗಕರ್ಮಿಯಾಗಿ, ಸರಕಾರದಿಂದ - ಜನರಿಂದ ನೀವೇನು ನಿರೀಕ್ಷಿಸುತ್ತೀರಿ?' ಅಂತ ಪ್ರಶ್ನಿಸಿದರೆ, 'ಏನನ್ನೂ ನಿರೀಕ್ಷಿಸುವುದಿಲ್ಲ. ನನ್ನ ಪ್ರಾಮಾಣಿಕ ಪ್ರಯತ್ನಕ್ಕೆ ಸಿಗಬೇಕಾದ್ದು ಸಿಗುತ್ತೆ' ಅನ್ನುವಷ್ಟು 'ನೇರ-ದಿಟ್ಟ-ನಿರಂತರ' ! 'ನಮಗೆ ತುಂಬಾ ಇಷ್ಟವಾದ್ದು, ತುಂಬಾ ಕಷ್ಟವಾದ್ದು ಅಂತ ಯಾವುದು ಇರೋಲ್ಲ. ಎಲ್ಲವನ್ನೂ ಇಷ್ಟ ಪಟ್ಟೇ ಕೇಳ್ತೇವೆ, ಮಾಡ್ತೇವೆ, ಆಸ್ವಾದಿಸ್ತೇವೆ' ಎನ್ನುವ ಮಂಜುನಾಥ್ ಮಾತುಗಳಿಗೆ, ಅವರ ಕೆಲಸಗಳೇ ಸಾಕ್ಷಿ. ನೀನಾಸಂ ಪದವೀಧರರಾಗಿ ಒಂದು ವರ್ಷ ತಿರುಗಾಟದಲ್ಲಿ ಭಾಗವಹಿಸಿದ್ದಾರೆ. 'ಜಾನಪದ ಲೋಕ'ದ ಜಾನಪದ ಡಿಪ್ಲೊಮಾ ಪಡೆದಿದ್ದಾರೆ. ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ, ಗುರು ಸಂಜೀವ ಸುವರ್ಣರಿಂದ ಯಕ್ಷಗಾನವನ್ನು ಒಂದು ವರ್ಷ ಶಾಸ್ತ್ರೀಯವಾಗಿ ಅಭ್ಯಸಿಸಿದ್ದಾರೆ. ಪ್ರಕಾಶ್ ಚಕ್ರವರ್ತಿ ಂಬವರಲ್ಲಿ ಹಿಂದುಸ್ತಾನಿ ಕೊಳಲು ವಾದನವನ್ನು ಎರಡು ವರ್ಷಗಳ ಕಾಲ ಕಲಿತಿದ್ದಾರೆ !
ಹಳೆಯ ವೃತ್ತಿ ರಂಗಭೂಮಿ ಹೋಗಿ, ಈಗ ಬಹುರಾಷ್ಟ್ರೀಯ ಕಂಪನಿಗಳ ಜತೆ ಸಹಭಾಗಿತ್ವ ಪಡೆಯುವವರೆಗೆ ಹೋಗಿದೆ. ನಾಟಕ ಕಮರ್ಷಿಯಲ್ ಮತ್ತು ಪ್ರೊಫೆಷನಲ್ ಆಗೋದರ ಬಗ್ಗೆ ಏನನ್ಸತ್ತೆ ಅಂತ ಕೇಳಿದರೆ- 'ನಾಟಕ ಕೇವಲ ಮನರಂಜನಾ ಮಾಧ್ಯಮ ಅಲ್ಲ. ಮನರಂಜನೆಯ ಜೊತೆಗೆ ಪ್ರೇಕ್ಷಕರಿಗೆ ರಸಾನುಭವವನ್ನು ಕೊಡುವಂಥದ್ದಾಗಿರಬೇಕು. ಹಾಗಾಗಬೇಕಾದರೆ ಅದರಲ್ಲಿ ವೃತ್ತಿಪರತೆ ಖಂಡಿತ ಇರಲೇಬೇಕು. ನಾಟಕ ಕಮರ್ಷಿಯಲ್ ಆಗಲಿ ಬೇಸರವಿಲ್ಲ. ಆದರೆ ಅದರಲ್ಲಿ ವೃತ್ತಿಪರತೆ ಇರಬೇಕು !'ಎನ್ನುತ್ತಾರೆ ಮಂಜುನಾಥ್. ನೀನಾಸಮ್ ಹಾಗೂ ಸಾಣೇಹಳ್ಳಿ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಗೆ ರಂಗಶಿಬಿರಗಳನ್ನು ನಡೆಸಿರುವುದರ ಜತೆಗೆ ಅಭಿನಯ ತರಬೇತುದಾರನಾಗಿ ಅವರು ಕೆಲಸ ಮಾಡಿದ್ದಾರೆ. ಹಂಸಲೇಖರವರ ದೇಸಿ ವಿದ್ಯಾಸಂಸ್ಥೆಯಲ್ಲಿ ನಾಟಕದ ಶಿಕ್ಷಕನಾಗಿ, 'ಆಶ್ರಯ' ಎಂಬ ಸ್ವಯಂಸೇವಾ ಸಂಸ್ಥೆಯಿಂದ ಸರಕಾರಿ ಬಾಲಕರ ಪರಿವೀಕ್ಷಣಾ ಮಂದಿರದಲ್ಲಿ ಬಾಲಾಪರಾಧಿಗಳ ಮನೋವಿಕಾಸಕ್ಕಾಗಿ ಎರಡು ವರ್ಷಗಳ ಕಾಲ ಸಂಪನ್ಮೂಲವ್ಯಕ್ತಿಯಾಗಿ ಕೆಲಸ ಮಾಡಿದ್ದಾರೆ.
ಈ ಯುವ ಪ್ರತಿಭೆಗೂ ಕಾಲೇಜು ರಂಗಭೂಮಿಗೂ ಹತ್ತಿರದ ನಂಟಿದೆ. ಆದರೆ ಅಲ್ಲಿನ ಸದ್ಯದ ಪರಿಸ್ಥಿತಿ ಬಗ್ಗೆ ಕೇಳಿದರೆ - 'ರಂಗಭೂಮಿ ವಲಯದಲ್ಲಿ ಕಾಲೇಜು ರಂಗಭೂಮಿಗೆ ವಿಶಿಷ್ಟ ಸ್ಥಾನವಿದೆ. ಇದರಿಂದ ಕಾಲೇಜಿಗೂ ವಿದ್ಯಾರ್ಥಿಗಳಿಗೂ ಸಾಂಸ್ಕೃತಿಕವಾಗಿಯಲ್ಲದೆ ಅನೇಕ ರೀತಿಯಲ್ಲಿ ಉಪಯೋಗವಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕಾಲೇಜುಗಳಿಗೆ ನಾಟಕ ಮಾಡಿಸುವುದು ಮತ್ತು ಮಾಡುವುದು ಪ್ರತಿಷ್ಠೆಯ ವಿಷಯವಾಗಿದೆ. ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಯ ಸಾಧನವಾಗದೆ ತಮ್ಮ ವೈಯಕ್ತಿಕ ತೆವಲುಗಳನ್ನು ತೀರಿಸಿಕೊಳ್ಳುವ ಒಂದು ವೇದಿಕೆಯಾಗಿದೆ. ಈವತ್ತಿನ ಕಾಲೇಜು ನಾಟಕಗಳು ಸ್ಪರ್ಧಾ ಕೇಂದ್ರಿತವಾಗಿರುತ್ತವೆ ಹಾಗೂ ಹೊರಗಿನ ಆಡಂಬರಗಳಿಂದ ವೈಭವೀಕರಿಸಲ್ಪಟ್ಟಿರುತ್ತವೆ. ಇದು ಮೊದಲು ಬದಲಾಗಬೇಕಿದೆ. 'ನಾಟಕ ಚಳವಳಿಯಲ್ಲ, ಅದೊಂದು ಸಡಗರ' ಎಂದಿದ್ದ ಬಿ.ವಿ.ಕಾರಂತರ ಮಾತು ನೆನಪಿಸುತ್ತ. 'ಬೀದಿ ನಾಟಕಗಳಲ್ಲೂ ಪಾಲ್ಗೊಂಡ ನಿಮ್ಮ ಅಭಿಪ್ರಾಯ ಏನು' ಅಂದರೆ- 'ಹೌದು, ಅದೊಂದು ಆಚರಣೆ. ಬೀದಿ ನಾಟಕ ಆರಂಭದ ಕಾಲದಲ್ಲಿ ಚಳವಳಿಯ ಉದ್ದೇಶದದಿಂದಲೇ ರೂಪ ತಳೆಯಿತು. ಈಗ ಅದು ಕೇವಲ ಮಾಹಿತಿ ತಲುಪಿಸುವ, ರಾಜಕೀಯ ಪಕ್ಷಗಳ, ಬಹುರಾಷ್ಟ್ರೀಯ ಕಂಪನಿಯ ಸರಕುಗಳ ಪ್ರಚಾರಕ್ಕಾಗಿ ಬಳಕೆಯಾಗುತ್ತಿದೆ' ಎಂಬ ಬೇಸರ ಅವರದ್ದು. 'ಮಾಧ್ಯಮ್' ಸ್ವಯಂ ಸೇವಾ ಸಂಸ್ಥೆಯಲ್ಲಿ ಬೀದಿ ನಾಟಕ ತಂಡದೊಂದಿಗೆ ಸುಮಾರು ಮುನ್ನೂರಕ್ಕೂ ಹೆಚ್ಚು (ಏಡ್ಸ್, ಮಕ್ಕಳ ಹಕ್ಕುಗಳು, ಮಹಿಳಾ ಸಬಲೀಕರಣ, ಕೋಮು ಸೌಹಾರ್ದ...)ನಾಟಕಗಳಲ್ಲಿ ಭಾಗವಹಿಸಿದ ಅನುಭವ ಮಂಜುನಾಥ್ ಬೆನ್ನಿಗಿದೆ. ಚಿದಂಬರ ರಾವ್ ಜಂಬೆ, ವೆಂಕಟರಮಣ ಐತಾಳ, ರಘುನಂದನ, ಪ್ರಕಾಶ್ ಬೆಳವಾಡಿ, ಸುರೇಶ್ ಆನಗಳ್ಳಿ,ಕೆ ವಿ ಅಕ್ಷರ, ಅಭಿಲಾಶ್ ಪಿಳ್ಳೈ, ರಮೇಶ್ ವರ್ಮ(ಕೇರಳ), ಭರತ್ ಶರ್ಮಾ, ವಿಶ್ವಜಿತ್ (ಪಶ್ಚಿಮ ಬಂಗಾಳ), ಬಹ್‌ರುಲ್ ಇಸ್ಲಾಂ(ಅಸ್ಸಾಂ) ಮುಂತಾದ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ. ಕರ್ನಾಟಕದ ಹಲವಾರು ತಂಡಗಳಿಗೆ, ಶಾಲಾಮಕ್ಕಳಿಗೆ, ಕಾಲೇಜುಗಳಿಗೆ, ಮತ್ತು ಸರಕಾರೇತರ ಸಂಸ್ಥೆಗಳಿಗೆ ರಂಗಭೂಮಿ ಕಾರ್‍ಯಾಗಾರಗಳನ್ನು ನಡೆಸಿಕೊಟ್ಟಿದ್ದಾರೆ. 'ಸಮಷಿ'ಯ ಭಾನುವಾರದ ರಂಗಶಾಲೆಯಲ್ಲಿ ಅಭಿನಯ ಶಿಕ್ಷಕನಾಗಿ, ಸಮಷ್ಟಿ ಮತ್ತು ಆದ್ಯಂತ ಎಂಬ ತಮ್ಮ ಹೆಚ್ಚಿನ ಪಾಲುಗಾರಿಕೆಯ ರಂಗತಂಡಗಳಲ್ಲಿ, ನಟ-ನಿರ್ದೇಶಕನಾಗಿದ್ದಾರೆ. 'ಬದುಕು ಅನ್ನೊ ಪ್ರಶ್ನೆಗೆ ಸದ್ಯ ಉತ್ತರ ಸಿಕ್ಕಿಲ್ಲ. ಟಿವಿ ಸಿನಿಮಾ ಕಡೆ ಗಮನವಂತೂಇದೆ. ಕಿರುಚಿತ್ರಗಳನ್ನು ನಿರ್ದೇಶಿಸುವ ಆಸೆಯಿದೆ' ಎನ್ನುವುದು ಈ ಕೆಚ್ಚೆದೆಯ ರಂಗಕರ್ಮಿಯ ಬಿಚ್ಚು ನುಡಿ.


ರಂಗಕರ್ಮಿ ಬೇರೆ ಮಾಧ್ಯಮದ ಮೂಲಕ ಗುರುತಿಸಿಕೊಳ್ಳೋದು ಅನಿವಾರ್ಯ!
ಇಪ್ಪತ್ತಾರರ ಹರೆಯದ ಮೌನೇಶ್ ಬಡಿಗೇರ್ ಕೂಡಾ ನೀನಾಸಂನಲ್ಲಿ ಕಡೆಯಲ್ಪಟ್ಟ ಪ್ರತಿಭೆ. ಕಳೆದ ಆರು ವರ್ಷಗಳಿಂದ ರಂಗಭೂಮಿಯನ್ನೆ ಕಣ್ರೆಪ್ಪೆಗಳಲ್ಲಿ ಕಾಪಾಡಿಕೊಂಡಿರುವ ಮೌನೇಶ್‌ರದ್ದು, ನೊಡಲು ಮುನಿ ವೇಶ ! ಉದ್ದ ಕೂದಲು-ಚೂಪು ಮೀಸೆ-ತೀಡಿದ ಗಡ್ಡ. ಹಂಸಲೇಖ ಅವರ 'ದೇಸಿ' ಸಂಗೀತ ಶಾಲೆಯಲ್ಲಿ ಮಕ್ಕಳಿಗೆ ನಾಟಕ ಮಾಡಿಸಿದ್ದು, 'ಮಧ್ಯಮ್' ಎಂಬ ಎನ್‌ಜಿಒನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ-ಬೀದಿ ನಾಟಕದ ನಟನಾಗಿ ಕೆಲಸ ಮಾಡಿದ್ದು, 'ಸಮಷ್ಟಿ' ತಂಡದ ಭಾನುವಾರದ ನಾಟಕ ಶಾಲೆಯಲ್ಲಿ ಬೋಧನೆ, ಅಭಿಲಾಶ್ ಪಿಳ್ಳೈ -ಕೆ.ವಿ.ಅಕ್ಷರ-ರಘುನಂದನ-ವೆಂಕಟರಮಣ ಐತಾಳ್-ಇಕ್ಬಾಲ್ ಅಹಮದ್‌ರಂತಹ ಹಿರಿಯ ನಿರ್ದೇಶಕರ ಜತೆ ಕೆಲಸ ಮಾಡಿದ್ದು, ಇವೆಲ್ಲ ಅಣ್ಣ ಮಂಜುನಾಥ ಬಡಿಗೇರರ ದಿನಚರಿಯಂತೆಯೇ. ಬೆಂಗಳೂರಿನ ಎನ್‌ಎಂಕೆಆರ್‌ವಿ ಕಾಲೇಜು-ಕ್ರೈಸ್ಟ್ ಕಾಲೇಜು, ಕುಕ್ಕೆ ಸುಬ್ರಹ್ಮಣ್ಯದ ಪದವಿ ಕಾಲೇಜು...ಹೀಗೆ ಕಾಲೇಜು ರಂಗಭೂಮಿಯೊಂದಿಗೆ ಬೆರೆತ ಮೌನೇಶ್ ಆ ಬಗ್ಗೆ ಹೀಗೆ ಹೇಳುತ್ತಾರೆ- 'ಕಾಲೇಜು ರಂಗಭೂಮಿಯ ಬಗೆಗಿನ ಇತ್ತೀಚಿನ ಬೆಳವಣಿಗೆಗಳು ಆಶಾದಾಯಕವಾಗಿವೆ. ಎಲ್ಲ ಕಾಲೇಜುಗಳಲ್ಲೂ ವಿದ್ಯಾರ್ಥಿಗಳಲ್ಲೂ ನಾಟಕದ ಬಗೆಗಿನ ಆಸಕ್ತಿ ಹೆಚ್ಚುತ್ತಿದೆ. ಕೆಲವೊಂದು ಕಾಲೇಜುಗಳಲ್ಲಿ 'ಥಿಯೇಟರ್ ಇನ್ ಎಜುಕೇಶನ್' ಅನ್ನು ಅಳವಡಿಸಿಕೊಂಡಿರುವುದು ರಂಗಭೂಮಿಯ ಮಹತ್ವವನ್ನು ಸೂಚಿಸುತ್ತದೆ. ಇದನ್ನ ಮನಗಂಡ ಕಾಲೇಜುಗಳು ಸಾಕಷ್ಟು ಬಜೆಟ್‌ಅನ್ನು ಮೀಸಲಿಡುತ್ತಿವೆ. ಇನ್ನು ಕೆಲವು ಕಾಲೇಜುಗಳು ರಂಗನಿರ್ದೇಶಕರ ಜತೆ ಚೌಕಾಸಿಗೆ ನಿಂತುಬಿಡುತ್ತವೆ ! ಸ್ಪರ್ಧೆ ಎಂಬ ಆಲೋಚನೆಯೇ ತುಂಬಾ ಕೆಡುಕನ್ನು ಒಳಗೊಂಡದ್ದಾಗಿದ್ದರೂ, ಕಾಲೇಜು ರಂಗದ ಮಟ್ಟಿಗೆ ಇದು ಫಲಪ್ರದವಾಗಿ ಕೆಲಸಮಾಡುತ್ತಿದೆ.
ಇಂತಹ ಯುವ ರಂಗಕರ್ಮಿ,'ರಂಗಭೂಮಿಯಲ್ಲೇ ಬದುಕು ಕಟ್ತೀವಿ ಅನ್ನೋ ಛಲ ಇದೆಯಾ? ಟಿವಿ-ಸಿನಿಮಾ ಕಡೆ ಗಮನ ಇದೆಯಾ?' ಎಂಬ ಪ್ರಶ್ನೆಗೂ ಅಣ್ಣನಿಗಿಂತ ಬೇರೆ ತರಹ ಉತ್ತರಿಸಿದರು. 'ಬದುಕು ಕಟ್ಟೋದು ಅಂದ್ರೆ ಯಾವ ಪರಿಭಾಷೆಯಲ್ಲಿ ಎಂದು ನನಗೆ ತಿಳೀತಿಲ್ಲ. ಭಾವನಾತ್ಮಕ ಬದುಕೆಂಬುದು ಈಗಾಗಲೇ ರಂಗಭೂಮಿಯಿಂದಲೇ ಕಟ್ಟಿಕೊಂಡಿದ್ದೇನೆಂದು ಭಾವಿಸಿದ್ದೇನೆ. ಇನ್ನು ಪ್ರಾಪಂಚಿಕ ಬದುಕಿನ ಬಗ್ಗೆ ಯಥಾವತ್ತಾಗಿ ನಿರ್ಧರಿಸಿಲ್ಲ. ನಮ್ಮಂಥ ಕಸುಬುದಾರರ ಸಮಸ್ಯೆಯೆಂದರೆ, ಒಬ್ಬ ಸಿನಿಮಾ ನಟ ಅಥವಾ ಟಿವಿ ನಟನನ್ನು ಗುರುತಿಸಲು ಆ ಕ್ಷೇತ್ರದವರಿದ್ದಾರೆ. ಒಬ್ಬ ಯಶಸ್ವಿ ಐಟಿ ಉದ್ದಿಮೆದಾರನನ್ನು ಗುರುತಿಸಲು ಆ ಕ್ಷೇತವ್ರೂ ಸೇರಿದಂತೆ ಹಲವಾರು ದಾರಿಗಳಿವೆ. ಒಬ್ಬ ಸಾಹಿತಿ ತನ್ನ ಸಾಹಿತ್ಯದೊಂದಿಗೇ ನೇರವಾಗಿ ತಲುಪಬಲ್ಲ. ಆದರೆ ರಂಗಭೂಮಿಯ ಒಬ್ಬ ಕಲಾವಿದ, ಟಿವಿ ಅಥವಾ ಸಿನಿಮಾ ಮಾಧ್ಯಮದ ಮೂಲಕವೇ ಗುರುತಿಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿಬಿಟ್ಟಿದೆ. ಆದ್ದರಿಂದ ಇವತ್ತು ರಂಗಭೂಮಿಯ ಎಲ್ಲ ಪ್ರತಿಭಾವಂತರಿಗೂ ಅಭದ್ರತೆಯ ಸನ್ನಿವೇಶ ಎದುರಾಗಿದೆ. ಹಿಂದೆಲ್ಲ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದವರೂ ಒಂದಲ್ಲಾ ಒಂದು ಸನ್ನಿವೇಶದಲ್ಲಿ ಕಿರು-ಹಿರಿತೆರೆ ಪ್ರವೇಶಿಸಿದವರೇ ಆಗಿದ್ದಾರೆ. ಆದ್ದರಿಂದ ರಂಗಭೂಮಿಯಲ್ಲೇ ಸ್ಥಿರವಾಗಿ ನಿಂತು ಸಾಧಿಸಿದವರು ಕಡಿಮೆಯೇ ಎನ್ನಬಹುದು. ಹಾಗಾಗಿ ನಮ್ಮಂಥ ಕಿರಿಯರಿಗೆ ಒಬ್ಬ ಆದರ್ಶವ್ಯಕ್ತಿತ್ವ ಎಂಬುದೊಂದು ಇಲ್ಲವಾಗಿದೆ. ಹಾಗೆ ಸ್ಥಿರವಾಗಿ ಉಳಿದ ಕೆಲವೇ ಕೆಲವು ಹಿರಿಯ ರಂಗ ಚೈತನ್ಯಗಳನ್ನು ನಾವು ಗಂಭೀರವಾಗಿ ಪರಿಗಣಿಸದೇ ಇರುವುದು ನಮ್ಮ ವ್ಯವಸ್ಥೆಯ ದುರಂತವೇ ಸರಿ.'
'ನಾಟಕ ಪ್ರೊಫೆಷನಲ್ ಆದಷ್ಟೂ ಅದು ಸಂತೋಷದ ವಿಷಯವೇ. ಪ್ರೊಫೆಷನಲ್ ಗುಣ ಕಡಿಮೆಯಾಗಿ ಬರೀ ಕಮರ್ಷಿಯಲ್ ಆದಷ್ಟೂ ಅದು ಅನಿವಾರ್ಯವಾಗಿ ಅತಿರಂಜನೆಯ ಗುಣಗಳನ್ನು ಅಳವಡಿಸಿಕೊಳ್ಳಲು ಹೊರಟುಬಿಡುತ್ತದೆ. ಅದು ಸ್ವಲ್ಪಅಪಾಯಕಾರಿಯೆನಿಸುತ್ತದೆ. ಬಹುರಾಷ್ಟ್ರೀಯ ಕಂಪನಿಗಳ ಆಮಿಷಗಳು, ತಾಯಿಯ ಹೊಟ್ಟೆಯಲ್ಲಿನ ಭ್ರೂಣಕ್ಕೂ ನಿರಾಯಾಸವಾಗಿ ತಲುಪುತ್ತಿರುವ ಈ ಸಂದರ್ಭದಲ್ಲಿ , ಅದು ರಂಗಭೂಮಿಗೂ ಆವರಿಸಿರುವುದು ಆಶ್ಚರ್ಯವೇನೂ ಅಲ್ಲ. ಆದರೆ ಅದನ್ನು ಹೇಗೆ ಎಷ್ಟು ಮತ್ತು ಸಕಾರಣವಾಗಿ ಬಳಸುವುದು ಮುಖ್ಯ. ನಾಟಕ ಸಡಗರವೂ ಹೌದು, ಚಳವಳಿಯೂ ಹೌದು. ಸಮಾಜದ ಸೂಕ್ಷ್ಮವಾದ ಸಂಬಂಧ ಸಮಸ್ಯೆಗಳನ್ನು ಚಿತ್ರಿಸುವುದರ ಮೂಲಕ ಚಿಕಿತ್ಸಾತ್ಮಕವಾಗಿ ಕೆಲಸ ಮಾಡಬಲ್ಲದು. ವ್ಯವಸ್ಥೆಯ ಡಂಬಾಚಾರ ಪ್ರಶ್ನಿಸಬಲ್ಲದು.'
'ಆದ್ಯಂತ' ಎಂಬ ರಂಗತಂಡ ಕಟ್ಟಿಕೊಂಡಿರುವ ಮೌನೇಶ್, ಈಗ 'ಸಮಷ್ಟಿ' ತಂಡಕ್ಕಾಗಿ 'ಶಾಂಡಿಲ್ಯ ಪ್ರಹಸನ' ನಾಟಕ ನಿರ್ದೇಶಿಸುವುದರಲ್ಲಿ ಬ್ಯುಸಿ.ಸರಕಾರ ಮತ್ತು ಜನರಿಂದ ತಾನು ಬಯಸುವುದು 'ಆರ್ಥಿಕ ಸ್ಥಿರತೆ ಹಾಗೂ ಉತ್ತೇಜನವನ್ನು' ಎನ್ನುವುದು ಈ ಬೆವರ ಹುಡುಗನ ಮಾತು. 'ಪರಿತ್ಯಕ್ತ' ನಾಟಕದ, ಅಂಬಾತನಯ ಮುದ್ರಾಡಿ ರಚನೆಯ ಈ ಹಾಡು, ಮೌನೇಶ್‌ಗೆ ಬಹಳ ಪ್ರಿಯವಂತೆ, ನೀವೂ ಓದಿಕೊಳ್ಳಿ.
'ಇದಕಿಹುದು ಆದಿ ಇದಕಿಹುದು ಅಂತ್ಯ ತನ್ಮಧ್ಯೆ ಏಳು ಬೀಳು
ಭುವಿನಾಟ್ಯರಂಗ ಲೀಲಾತರಂಗ ನಟ ಬಾಧ್ಯನೇನು ಹೇಳು
ಕಣ್‌ದೂರಮಾಗೆ ಕೈಮಾಳ್ಕೆಯಲ್ಲಿ ಈ ಪಾತ್ರಧಾರಿ ಬಾಳು
ಅಭಿವ್ಯಕ್ತನಾರು ಪರಿತ್ಯಕ್ತನಾರು ಯಾರಿಲ್ಲಿ ಮೇಲು ಕೀಳು?'
(ವಿಜಯ ಕರ್ನಾಟಕ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟಿತ )

Read more...

November 10, 2009

ಯಕ್ಷ ದಿಗ್ಗಜನಿಗೆ ನಮಸ್ಕಾರ

Read more...

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP