ಹುಸಿ ಹೋಗದ ಕನ್ನಡ
ಕನ್ನಡದ ಮೇರು ಬರಹಗಾರರಾದ ಬೇಂದ್ರೆ, ಕುವೆಂಪು, ಅಡಿಗ, ಕಾರಂತ, ಅನಂತಮೂರ್ತಿ, ಶಿವರುದ್ರಪ್ಪ, ಕಣವಿ ...ಇಂತಹವರ ಮಕ್ಕಳೆಲ್ಲ ಏನು ಮಾಡುತ್ತಿದ್ದಾರೆ ಎಂಬ ಕುತೂಹಲ, ಕನ್ನಡದ ಅಳಿವು ಉಳಿವಿನ ಪ್ರಶ್ನೆ ಬಂದಾಗಲಂತೂ ನಮ್ಮಲ್ಲಿ ಮೂಡುತ್ತದೆ ! ವಾಮನ ಬೇಂದ್ರೆ, ಪೂರ್ಣಚಂದ್ರ ತೇಜಸ್ವಿ ಗೊತ್ತಿದೆ, ಇನ್ನು ಹಲವರ ಬಗ್ಗೆ ಗೊತ್ತಿಲ್ಲ. 'ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ' ಎಂದ ಚನ್ನವೀರ ಕಣವಿಯವರ ಮಗನ ಬಗ್ಗೆಯೂ ಹಲವರಿಗೆ ಗೊತ್ತಿಲ್ಲ. ದೇಶದ ಪ್ರತಿಷ್ಠಿತ ಐಐಟಿ ಕಾನ್ಪುರದಲ್ಲಿ ಹಾಗೂ ಅಮೆರಿಕದ ಬೋಸ್ಟನ್ ವಿವಿಯಲ್ಲಿ ಓದಿ ಭೌತಶಾಸ್ತ್ರಜ್ಞರಾಗಿ ಹೊರಬಂದ ಶಿವಾನಂದ ಕಣವಿ, ಮುಂಬೈಯ ಐಐಟಿಯಲ್ಲೂ ಸಂಶೋಧನೆ ನಡೆಸಿದವರು. ಸ್ವಲ್ಪ ಕಾಲ ಮೇಷ್ಟ್ರುಗಿರಿ ಮಾಡಿ, ಅರ್ಥಶಾಸ್ತ್ರ ತಜ್ಞನಾಗಿ, ಬಳಿಕ ಉದ್ಯಮ ಸಂಬಂ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡರು. ೨೦೦೪ರ ವರೆಗೆ 'ಬ್ಯುಸಿನೆಸ್ ಇಂಡಿಯಾ' ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿದ್ದರು.
೨೦೦೩ರಲ್ಲಿ ಪ್ರಕಟವಾದ Sand to Silicon: The amazing story of digital technology ಎಂಬುದು ಅವರ ಬಹು ಚರ್ಚಿತ ಪುಸ್ತಕ. ಜಾಗತಿಕ ತಂತ್ರಜ್ಞಾನದಲ್ಲಿ ಭಾರತೀಯರ 'ಪ್ರಥಮ' ಸಾಧನೆಗಳನ್ನು ಹೇಳುವ ಪುಸ್ತಕ ಅದು. ೧೮೯೭ರ ಜಗದೀಶ್ ಚಂದ್ರ ಬೋಸ್, ೧೯೮೨ರಲ್ಲೇ 'ಪರ್ಸನಲ್ ಕಂಪ್ಯೂಟರ್ ವರ್ಕ್ ಸ್ಟೇಷನ್' ಆರಂಭಿಸಿದ 'ಸನ್ ಮೈಕ್ರೊಸಿಸ್ಟಮ್ಸ್'ನ ಸಹ ಸ್ಥಾಪಕ ವಿನೋದ್ ಖೋಸಲಾ, ಯೋಜನಾ ವಿವರಣೆಗೆ ಕಂಪ್ಯೂಟರ್‌ನಲ್ಲಿ ಬಳಸುವ ಪವರ್ ಪಾಯಿಂಟ್‌ಗೆ ಮೈಕ್ರೋಸಾಫ್ಟ್‌ನಲ್ಲಿದ್ದು ಕಾರಣರಾದ ವಿಜಯ್ ವಾಶಿ, ವೆಬ್‌ಸೈಟ್ ಮೂಲಕ ಇಮೇಲ್ ಆರಂಭಿಸಿದ ಸಬೀರ್ ಭಾಟಿಯಾ, ಕಂಪ್ಯೂಟರ್‌ನಲ್ಲಿ ಧ್ವನಿ ಮುದ್ರಿಕೆಗೆ ಬಳಸುವ mpeg ರೀತಿಗೆ ಕೆಲಸ ಮಾಡಿದ ಎನ್. ಜಯಂತ್ , ಡಿಜಿಟಲ್ ಸ್ಯಾಟಲೈಟ್ ಟಿವಿ ಬಗ್ಗೆ ದುಡಿದ ಅರುಣ್ ನೇತ್ರಾವಳಿ, ಹೀಗೆ ಹಲವು ವ್ಯಕ್ತಿ-ಸಂಗತಿಗಳ ಬಗ್ಗೆ ಈ ಪುಸ್ತಕ ಗಮನ ಸೆಳೆಯುತ್ತದಂತೆ. ವಿಶ್ವವನ್ನು ಕಾಣಿಸಿದ ಭಾರತವನ್ನು ನಮ್ಮ ಕಣ್ಣಿಂದಲೇ ನೋಡುವ ಪ್ರಯತ್ನ ಇದು. ಐಟಿ ಮುಗ್ಗರಿಸಿರುವ ಈ ಕಾಲದಲ್ಲಂತೂ ಇದನ್ನು ನಾವೆಲ್ಲ ಆನಂದದಿಂದ ಓದಬಹುದು ! ಶಿವಾನಂದ ಕಣವಿ ಈಗ 'ಟಾಟಾ ಕನ್‌ಸಲ್ಟೆನ್ಸಿ ಸರ್ವಿಸಸ್’ ಕಂಪನಿಯ ವಿಶೇಷ ಯೋಜನಾ ವಿಭಾಗದ ಉಪಾಧ್ಯಕ್ಷರಾಗಿ ದುಡಿಯುತ್ತಿದ್ದಾರೆ. ಕತೆಗಾರ್ತಿ ಶಾಂತಾ ಕಣವಿಯನ್ನೂ ತಾಯಿಯಾಗಿ ಪಡೆದ ಶಿವಾನಂದರಿಗೆ, ಬರವಣಿಗೆ ವರ-ಬಲ.
ಅವರ ತಂದೆ, 'ಸರ್ವ ಹೃದಯ ಸಂಸ್ಕಾರಿ’ ಹಾಗೆ ಕಾಣುತ್ತಿರುವ ನವೋದಯದ ಕವಿ ಚನ್ನವೀರ ಕಣವಿಯವರಿಗೆ, ಧಾರವಾಡದ ಕವಿಭೂಮಿಯಲ್ಲಿ ಇಂದು (ಜೂನ್ ೨೮) ೮೨ನೇ ವರ್ಷದ ಬೆಳಗು. ‘ಒಂದು ಮುಂಜಾವಿನಲಿ’ ಎಂಬ ಅವರ ಭಾವಗೀತೆಗಳ ಸಿ.ಡಿಯನ್ನು ಲಹರಿ ಹೊರತಂದಿದೆ. ಅವಸರಕ್ಕೆ ಯು ಟ್ಯೂಬ್‌ಗೆ ಹೋದರೆ ಬಿ.ಆರ್. ಛಾಯಾ ಹಾಡಿರುವ ‘ಒಂದು ಮುಂಜಾವಿನಲಿ’ ಹಾಡನ್ನು ಕೇಳಬಹುದು, ನೋಡಬಹುದು. ನವೀಕರಣಗೊಳ್ಳುತ್ತಿರುವ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವೆಬ್‌ಸೈಟ್ (www.karnatakasahithyaacademy.org)ನ ‘ಸ್ವಂತ ಕವಿತೆಯ ಓದು’ ವಿಭಾಗದಲ್ಲೂ ಕಣವಿಯವರು ಸ್ವಪದ್ಯಗಳನ್ನು ಓದುವ ವಿಡಿಯೊವನ್ನು ಪ್ರಕಟಿಸಿದ್ದಾರೆ ಅಧ್ಯಕ್ಷ ಎಂ.ಎಚ್.ಕೃಷ್ಣಯ್ಯ. ‘ಹಸಿ ಗೋಡೆಯ ಹರಳಿನಂತೆ, ಹುಸಿ ಹೋಗದ ಕನ್ನಡ’ಎಂದ ಕವಿ, ಅಲ್ಲಿ ಐದು ಪದ್ಯಗಳನ್ನು ಓದುತ್ತಾ ಕುಳಿತಿದ್ದಾರೆ. ನೋಡಿ, ಕೇಳಿ, ಹ್ಯಾಪಿ ಬರ್ತ್‌ಡೇ ಹೇಳಿ
(ವಿ.ಕ.ದಲ್ಲಿ ಪ್ರಕಟ)
3 comments:
swami,
neevu HAPPY BIRTH DAy heLalu toDagidiralla .........
En Vishesha ?
olleya baraha, keep going
Kanavi obba asaaamaanya kavi. Kannada dalli ulidavarella timepass annuvastu olle kavi. baha mrudu swabhava, atyanta vinaya ironthavru ivru.
Post a Comment