November 26, 2009

ಹಾ ಹಾ ರಿಂಗ್ ಆಗ್ತಿದೆ...!


ಹೇಳಿಕೊಳ್ಳಲಾಗದ ಸಂಕಟದ ಸಂಜೆ. ಸುತ್ತಮುತ್ತ ಒತ್ತಿಕೊಂಡ ಜನ. 'ಸಾರ್, ಸಾರ್ ಒಂದು ರಿಂಗ್ ಕೊಡಿ ಸಾರ್...ಹಾ...ರಿಂಗ್ ಆಗ್ತಿದೆ...ರಿಸೀವ್ ಮಾಡ್ತಿಲ್ಲ ...ಹೋಯ್ತು ಬಿಡಿ...ನೋಡಿ ಇಲ್ಲೇ ಹಿಂದೆ ಒಬ್ಬ ಇಳ್ಕೊಂಡ...' ಅಷ್ಟೇ, ಅರ್ಧ ಜೀವ ಕೈಕೊಟ್ಟಿತ್ತು. ಎಂತಹ ಸಂಕಷ್ಟದ ಸಂದರ್ಭದಲ್ಲೂ 'ಈಗೇನು ಮಾಡಬೇಕು' ಅಂತಾದಾಗ ಕೈಗೆ ಬರುವುದು ಮೊಬೈಲು. ಈಗ ಅದೇ ಇಲ್ಲ. ಯಾರಿಗೆ ಹೇಳುವುದು ? ಕಾಯಿನ್‌ಬೂತಿಗೆ ಹೋಗಿ ಪಸ್‌ರ್ನಿಂದ ಒಂದು ರೂಪಾಯಿ ತೆಗೆದರೆ, ಅರೆ, ಯಾರ ನಂಬರೂ ನೆನಪಿಲ್ಲ ! ಅಂತೂ ಏರ್‌ಟೆಲ್ ಮೊಬೈಲ್‌ನ ಸ್ನೇಹಿತನೊಬ್ಬನಿಗೆ ವಿಷಯ ತಿಳಿಸಿ, ಕಸ್ಟಮರ್ ಕೇರ್‌ಗೆ ಫೋನ್ ಮಾಡಿ ಸಿಮ್ ಬ್ಲಾಕ್ ಮಾಡಿಸು ಅಂದೆ. ಪೊಲೀಸ್ ಸ್ಟೇಷನ್ ಕಡೆ ಕಾಲು ಎಳೆದುಕೊಂಡೆ. ಅಷ್ಟಕ್ಕೇ ಬದುಕೆಂಬ ವೆಹಿಕಲ್ ಕೆಟ್ಟು ಕೂತಿತ್ತು.

'ಎಲ್ಲಿ ಕಳೆದದ್ದು?' 'ಉಮಾಟಾಕೀಸ್ ಹತ್ತಿರ.' 'ಉಮಾಟಾಕೀಸ್ ಅಂದರೆ ನಮ್ಮ ಲಿಮಿಟ್‌ಗೆ ಬರೊಲ್ಲಾರೀ'. 'ಅಲ್ಲಾ ಸಾರ್, ಇಲ್ಲೇ ಮಕ್ಕಳ ಕೂಟ ಬಸ್‌ಸ್ಟಾಪ್‌ನಲ್ಲಿ ಬಸ್ ಹತ್ಕೊಂಡೆ. ನೂರು ಮೀಟರ್ ದೂರದ ಶಂಕರ ಮಠ ರೋಡ್ ಹತ್ರ ಹೋದಾಗ ಮೊಬೈಲ್ ಕದ್ದುಹೋಗಿದ್ದು ಗೊತ್ತಾಯ್ತು.' 'ಅಲ್ರೀ ನಮ್ ಹತ್ರ ಸುಳ್ಳು ಹೇಳ್ತೀರಲ್ಲ. ಈಗ ಉಮಾಟಾಕೀಸ್ ಅಂದ್ರಿ'. 'ಅಲ್ಲ ಸಾರ್, ಶಂಕರ ಮಠ ರೋಡ್‌ನಿಂದ ೫೦ ಮೀಟರ್ ಮುಂದೆ ಇರೋದೆ ಉಮಾ ಟಾಕೀಸ್. ಅಲ್ಲಿ ಇಳ್ಕೊಂಡು ಬಂದೆ.' 'ಆಗಲ್ಲಾರೀ, ನಿಮ್ ನೆಗ್ಲಿಜೆನ್ಸ್‌ನಿಂದ ತಾನೇ ಮೊಬೈಲ್ ಹೋಗಿದ್ದು. ಚಾಮರಾಜಪೇಟೆ ಸ್ಟೇಷನ್‌ಗೆ ಹೋಗಿ. ಹತ್ರ ಅಂತ ಇಲ್ಲಿಗೆ ಬಂದ್ರೆ ಆಗತ್ತಾ?' 'ಅಲ್ಲಾ ಸಾರ್, ಕಾಸ್ಟ್ಲಿ ಸೆಟ್. ತುಂಬಾ ಬೇಜಾರಾಯ್ತು. ಡುಪ್ಲಿಕೇಟ್ ಸಿಮ್ ತಗೊಳ್ಳೊಕೆ ಒಂದು ಅಕ್ನಲಾಡ್ಜ್‌ಮೆಂಟ್ ಬೇಕು ಅಷ್ಟೇ. ಪ್ಲೀಸ್' 'ಆಗಲ್ಲಾ ಅಂದ್ನಲ್ಲಾ ...ನೆಗ್ಲಿಜೆನ್ಸ್ ನಿಮ್ದು'. ಅಷ್ಟೂ ಹೊತ್ತು ಕಳ್ಳರಿಗೆ ಹಾಕುತ್ತಿದ್ದ ಶಾಪಗಳನ್ನೆಲ್ಲ ಆ ಪೊಲೀಸ್ ಇನ್ಸ್‌ಪೆಕ್ಟರ್ ತಲೆಗೆ ಒಗೆದು ಹೊರಬಂದೆ. ದಿನಾ ಮೊಬೈಲ್ ಲೂಟಿ ಹೊಡೆಯುವವರ ಬಗ್ಗೆ ಚಕಾರ ಎತ್ತದ ಈ ಮಂದಿ, 'ನೆಗ್ಲಿಜೆನ್ಸ್ ನಿಮ್ದು' ಅನ್ನುತ್ತಿರುವುದು ಮನೆ ತಲುಪುವವರೆಗೂ ಕಿವಿಯೊಳಗೆ ಮೊರೆಯುತ್ತಿತ್ತು. ಹಾಗೆ ಯಾರಲ್ಲಾದರೂ ಕಷ್ಟ ಹೇಳಿಕೊಳ್ಳೋಣ ಅಂದರೆ... ಮೊಬೈಲೇ ಇಲ್ಲ. ಮನೆಗೆ ಬಂದು ಪೋನ್ ಹಚ್ಚಿದರೆ ಆ ಸ್ನೇಹಿತ ಇನ್ನೂ ಸಿಮ್ ಕಾರ್ಡ್ ಬ್ಲಾಕ್ ಮಾಡಿಸಿಲ್ಲ. ಅವನಿಗೆ ಯಾರದೋ ಅರ್ಜೆಂಟ್- ಇಂಪಾರ್ಟೆಂಟ್ ಕಾಲ್ ಬಂತಂತೆ. ಬಾಯ್ತುಂಬ ಬೈದುಕೊಂಡು, ಮನೆ ಓನರ್‌ನ ಏರ್‌ಟೆಲ್ ಮೊಬೈಲ್ ಕೇಳಿ, ಕಸ್ಟಮರ್ ಕೇರ್ ಸಂಪರ್ಕಿಸಿದರೆ...ಅದೇ ರಶ್ಮಿ , ಆಹಾ ಎಷ್ಟೊಂದು ನಯವಾಗಿ ಸಮಾಧಾನವಾಗಿ ಸುಲಲಿತವಾಗಿ ಉಲಿಯುತ್ತಿದ್ದಾಳೆ ! ಬಿಲ್ಲಿಂಗ್ ಅಡ್ರೆಸ್ ಸರಿಯಾಗಿ ಹೇಳಿದ್ದಕ್ಕೆ ಥ್ಯಾಂಕ್ಸ್ ಅಂತೆ ಥ್ಯಾಂಕ್ಸ್. ಅಯ್ಯೋ ಸಿಮ್ ಬ್ಲಾಕ್ ಮಾಡ್ಸಮ್ಮಾ, ಕಿಡಿಗೇಡಿಗಳು ಯಾವುದೊ ಕ್ರಿಮಿನಲ್ ಕೆಲಸಕ್ಕೆ ಕಾಲ್ ಮಾಡ್ತಾರೆ ಅಂತಾನೂ ಓನರ್ ಹೇಳ್ತಿದಾರೆ ಅಂತ ಮನಸಲ್ಲೇ ಅಂದುಕೊಂಡೆ. ಹಾಗೆ ಎಲ್ಲ 'ಉತ್ತರಕ್ರಿಯೆ' ನಡೆದ ಬಳಿಕವೂ 'ಸ್ವಿಚ್‌ಡ್ ಆಫ್' ಅಂತಲೇ ಬರ್‍ತಿದೆ. ಈ ಮೊಬೈಲ್ ಕಂಪನಿಯವರಿಗೆ ಬೇರೇನಾದರೂ ಸೌಜನ್ಯದ ಸಂದೇಶ ಹಾಕಕ್ಕೆ ಆಗಲ್ವಾ? ನನ್ನ ನಂಬರ್‌ಗೆ ನಾನೇ ರಿಂಗ್ ಕೊಡುವಾಗ ಸ್ವಿಚ್‌ಡ್ ಆಫ್ ಅಂತ ಬರುವುದಿದೆಯಲ್ಲ, ಅದು ನಾನು ಜೀವಂತವಿದ್ದಾಗಲೂ ಸತ್ತಿದ್ದಾನೆ ಎಂದು ಇನ್ನೊಬ್ಬರು ಅಂದಂತೆ !

ಈಗ ಅಸಹ್ಯ ಏಕಾಂಗಿತನ. ಹೇಳೋರಿಲ್ಲ ಕೇಳೋರಿಲ್ಲ. ತಬ್ಬಲಿಯು ನೀನಾದೆ ಮಗನೆ ಹಾಡು. ಅವೆಷ್ಟೋ ನಂಬರ್‌ಗಳು, ಕಾಯ್ದಿಟಿದ್ದ ಎಸ್‌ಎಂಎಸ್‌ಗಳು, ಬ್ಯಾಂಕ್ ಅಕೌಂಟ್ ನಂಬರ್-ಕೋಡ್‌ಗಳು, ಬೇಜಾರಾದಾಗ ನೋಡಿಕೊಳ್ಳಲು ಇಟ್ಟುಕೊಂಡಿದ್ದ ಸ್ಟೈಲ್‌ಕಿಂಗ್ ತಮ್ಮ ಹಾಗೂ ಅಮ್ಮನ ನಗುವಿನ ಫೋಟೊ ...ಹೋದದ್ದು ಹೋಯಿತು. ಕಳೆದೊಂದು ವರ್ಷದಿಂದ ಬ್ಯಾಕ್‌ಅಪ್ ಕೂಡಾ ಇಟ್ಟುಕೊಳ್ಳದ್ದರಿಂದ ಅಪ್‌ಡೇಟ್ ಆದ-ಸೇರ್ಪಡೆಯಾದ ನಂಬರ್‌ಗಳೂ ಮಾಯ. ಬೇಜಾರು ಅಂದರೆ, 'ಟೇಕ್ ಇಟ್ ಈಸಿ ಮೂರ್ತಿ','ಟೇಕ್ ಇಟ್ ಈಸಿ ಗುರು' ಅನ್ನೋ ಹೆಸರಿನಲ್ಲಿ ರಿಸೀವ್ ಮಾಡಬಾರದೆಂದೇ ಇಟ್ಟುಕೊಂಡಿದ್ದವು ಕೆಲವು. ವಾರಕ್ಕೊಮ್ಮೆ ಫೋನ್ ಮಾಡಿ, 'ಸಾರ್ ನಮ್ಮ ಪುಸ್ತಕದ ವಿಮರ್ಶೆ ಬಂದಿಲ್ವಲ್ಲಾ...ಮುಂದಿನ ವಾರ ನಮ್ಮ ಕಾಲೇಜಲ್ಲಿ ಪ್ರೊಗ್ರಾಮ್, ಎಲ್ಲ ಡಿಟೈಲ್ಸ್ ಕೊಡ್ತೀವಿ ಒಂದು ದೊಡ್ಡ ಆರ್ಟಿಕಲ್ ಮಾಡಿ ಸಾರ್' ಅಂತ ಜೀವ ಹೀರುವ ಪರಿಚಿತ ಅಪರಿಚಿತ ಜೀವಗಳ ನಂಬರುಗಳು. ಅವೂ ಕೈಕೊಟ್ಟವು. ಇನ್ನು ಕೆಲ ದಿನಗಳ ನಂತರ ಅವರು ಮತ್ತೆ ಕರೆಯುತ್ತಾರೆ. ನಾನು ಗೊತ್ತಿಲ್ಲದೆ ರಿಸೀವ್ ಮಾಡಿ ದಾಕ್ಷಿಣ್ಯದ ಮುಜುಗರದಲ್ಲಿ ಸಿಕ್ಕಿಕೊಳ್ಳುತ್ತೇನೆ.

ಮೊನ್ನೆ ಮೊನ್ನೆ ಭಾನುವಾರ. ಮೆಜೆಸ್ಟಿಕ್‌ನಿಂದ ಚಿತ್ರಕಲಾ ಪರಿಷತ್‌ಗೆ ಅಬ್ಬಬ್ಬಾ ಅಂದರೆ ೧೭ ರುಪಾಯಿ ಆಟೊ ಚಾರ್ಜು. ತಿರುಗಿಸಿದ್ದ ಮೀಟರ್ ಓಡಲಿಲ್ಲ ಅಂತ ಮೂವತ್ತು ರುಪಾಯಿ ಕೇಳಿದ್ದ ಆ ದುರುಳ ಆಟೊ ಡ್ರೈವರ್. ಸಣ್ಣಗೆ ಶರಾಬಿನ ಘಮ. ಯುನಿಫಾರ್ಮ್ ಇಲ್ಲ. ನಾಲ್ಕೈದು ವಾಹನಗಳ ಮಧ್ಯೆ ಸೆಂಟಿಮೀಟರ್ ಅಂತರದಲ್ಲಿ ತಪ್ಪಿಸಿಕೊಂಡು ಬಂದವನು. 'ಒಳಗಡೆ ಕಾಯಿಲೆ ಇರೋದು ಮೊದಲೇ ಗೊತ್ತಾಗತ್ತಾ? ಮೀಟರ್ ಓಡ್ತಿಲ್ಲ ಅಂತ ನನಗೆ ಗೊತ್ತಾಗಿದ್ದೇ ಈಗ. ಮೂವತ್ತು ರುಪಾಯಿ ಕೊಡಿ'- ಅಷ್ಟೆ. ಇಪ್ಪತ್ತು ರುಪಾಯಿ ಕೊಟ್ಟರೂ ಸ್ವೀಕರಿಸಲೊಲ್ಲ. ಮಾತಿಗೆ ಮಾತು. ಆ ಭಾನುವಾರದ ಮಧ್ಯಾಹ್ನ ಕುಮಾರಪಾರ್ಕ್‌ನ ನಿರ್ಜನ ರಸ್ತೆ. ಜುಮ್ಮೆಂದು ಓಡುವ ಕಾರುಗಳು ಮಾತ್ರ. 'ನೀನು ರಿಪೋರ್ಟರ್ ಆಗಿರು, ಎಲ್ಲೇ ಕೆಲಸ ಮಾಡು. ನೋಡಯ್ಯಾ, ಆಟೊ ನಂಬರ್ ನೋಟ್ ಮಾಡ್ಕೊ ; ನಿನ್ ಕೈಲಿ ಏನೂ ಮಾಡಕ್ಕಾಗಲ್ಲ' ಅನ್ನುತ್ತಾ ಆಟೊ ಇಳಿದು ಮೈಮೇಲೆ ಬಂದೇಬಿಟ್ಟ. 'ಏನು ಮಾಡ್ತೀಯಾ ನೀನು, (ಬೆರಳನ್ನು ಕತ್ತಿನ ಸುತ್ತ ಎಳೆದು ತೋರಿಸುತ್ತಾ) ಕತ್ತರಿಸಿ ಹಾಕ್‌ಬಿಡ್ತೀವಿ, ಮನೆಗೇ ಬಂದು ಉಡಾಯಿಸ್‌ಬಿಡ್ತೀವಿ ನೋಡು...ಅಂದ. ನಖಶಿಖಾಂತ ಉರಿಯುತ್ತ ಬಯ್ಯುತ್ತ ನಂಬರ್ ಬರೆದುಕೊಂಡೆ. ಮೊಬೈಲ್, ಕನ್ನಡಕಗಳೆಲ್ಲ ಕಳೆದುಹೋಗುವ ಹೊಡೆದಾಟಕ್ಕೆ ನಾನು ಸಿದ್ಧನಿರಲಿಲ್ಲ. ಇಪ್ಪತ್ತೈದು ರುಪಾಯಿ ಕೊಟ್ಟು ಅವನ ಕೈಬೀಸಿನಿಂದ ತಪ್ಪಿಸಿಕೊಂಡು ಪರಿಷತ್‌ನ ಹೆಬ್ಬಾಗಿಲ ಬಳಿ ಹೋದೆ. 'ಯಾರನ್ನಾದ್ರೂ ಕರ್‍ಕೊಂಡು ಬಾ. ಇಲ್ಲೇ ಕಾಯ್ತಾ ಇರ್‍ತೀನಿ' ಅಂತೆಲ್ಲ, ಬೊಬ್ಬಿಡುತ್ತಲೇ ಇದ್ದ. ಅಂತಹ ದುಷ್ಟ ಡ್ರೈವರನ ಆಟೊ ನಂಬರ್ ಕೂಡಾ ಮೊಬೈಲ್‌ನಲ್ಲಿತ್ತು. (ಆತನ ಹೆಸರು ಧನಂಜಯ ಅಂತಿತ್ತು) ಆ ದಿನ ತಕ್ಷಣಕ್ಕೆ ಸಿಕ್ಕ ನಂಬರೊಂದಕ್ಕೆ ಪೋನ್ ಮಾಡಿ ಆಟೊ ನಂಬರ್ ಹೇಳಿ ದೂರು ಕೊಟ್ಟಿದ್ದೆ. ಅವ್ಯಾವುವೂ ಈಗಿಲ್ಲ, ಇನ್ನಿಲ್ಲ. ಆತನ ಕೊಳಕು ಬಿಂಬದ ಹೊರತಾಗಿ.

ಮನೆ ತುಂಬ ಒಬ್ಬನೇ ಬೈದುಕೊಂಡು, ನಿಮಿಷಕ್ಕೊಮ್ಮೆ ಛೆ ಛೆ ಅನ್ನುತ್ತ, ರಾತ್ರಿ ಎಂಟಾದಾಗ ಒಮ್ಮೆ ನಿರಾಳ. ಹೊಸ ಜನ್ಮ ಬಂದಂತೆ. ಎಲ್ಲ ನೆನಪುಗಳನ್ನೂ ಕಳೆದುಕೊಂಡವನಂತೆ. ಈಗಷ್ಟೇ ಬಿಸಿಲಲ್ಲಿ ಒಣಗಿದ ಬಟ್ಟೆಯ ಹೊಸ ಘಮದಂತೆ. ಸರ್ವತಂತ್ರ ಸ್ವತಂತ್ರನಾದಂತೆ ! ರಾತ್ರಿ ಹತ್ತಾಯಿತೋ ಮತ್ತೆ ತಳಮಳ ಶುರು. ಕಿವಿಗೆ ಇಯರ್‌ಫೋನ್ ಸಿಕ್ಕಿಸಿಕೊಂಡು ಟೆರೇಸ್‌ನಲ್ಲಿ ಓಡಾಡುತ್ತ ಕೇಳುತ್ತಿದ್ದ ಪದ್ಯಾಣ ಭಾಗವತರ ಹೊಸ ಯಕ್ಷಗಾನ ಹಾಡನ್ನೂ ಕೇಳಲಾಗುವುದಿಲ್ಲ. ಪ್ರತಿದಿನ ಈ ಹೊತ್ತಿಗೆ ಫೋನ್ ಮಾಡಿ ಉಲ್ಲಾಸದಿಂದ ಮಾತಾಡುತ್ತಿದ್ದ ಗೆಳೆಯನ ಕರೆ ಬರುವುದೇ ಇಲ್ಲ. ಅವಳ ಮೆಸೇಜು ನನಗೆ ಡೆಲಿವರಿ ಆಗೋದಿಲ್ಲ. ರಾತ್ರಿ ಮಲಗಲು ಹೊರಟರೆ ಅಲಾರ್ಮ್ ಇಟ್ಟುಕೊಳ್ಳಲೂ ಮೊಬೈಲ್ ಇಲ್ಲವಲ್ಲ. ಹತ್ತು ನಿಮಿಷ ಹಾಡು ಕೇಳದಿದ್ದರೆ ನಿದ್ದೆಯೂ ಸುಳಿಯುವುದಿಲ್ಲ. ಮೊಬೈಲ್ ಕಳ್ಳರು ನರಕಕ್ಕೆ ಹೋದಾಗ ,ಯಮಧರ್ಮರಾಯ ಅವರನ್ನು ಕೊತಕೊತ ಕುದಿಯುವ ಎಣ್ಣೆಯಲ್ಲಿ ಜಿಲೇಬಿಯಂತೆ ಬೇಯಿಸುತ್ತಿರುವುದನ್ನು ಕಲ್ಪಿಸಿಕೊಳ್ಳುತ್ತೇನೆ. ಬೆಳಗೆದ್ದು ಪ್ಯಾಂಟ್ ಹಾಕಿಕೊಂಡರೆ ಕೈ ಮತ್ತೆ ಎಡಗಾಲಿನ ಪ್ಯಾಂಟ್ ಜೇಬಿಗೆ ಹೋಗುತ್ತದೆ. ಥತ್...ಮನಸ್ಸು ಕಲಕುತ್ತದೆ. ಬೆಂಗಳೂರಿನಲ್ಲೀಗ ನಾನು ಅಬ್ಬೇಪಾರಿ. ಒಂದು ದಿನ ಕಳೆದರೆ ಸಾಕು, ನನ್ನೊಬ್ಬನನ್ನು ಬಿಟ್ಟು ಎಲ್ಲರೂ ಮುಂದೆ ಹೋಗಿಬಿಟ್ಟರಾ? ಬಸ್ ಹತ್ತಿದರೆ ಎಲ್ಲಿ ಪರ್ಸ್‌ನ್ನೂ ಕಿತ್ತುಕೊಳ್ಳುತ್ತಾರೊ ಅಂತ ದಿಗಿಲು. ಬಸ್‌ನಲ್ಲಿ ನನ್ನನ್ನು ಒತ್ತಿ ಹಿಡಿದಿದ್ದ ಕಪ್ಪಗಿನ ವ್ಯಕ್ತಿಯೊಬ್ಬನ ಅಸ್ಪಷ್ಟ ಚಹರೆ ಆತನೇ ಕಳ್ಳನೆಂಬಂತೆ ಕಣ್ಣಮುಂದೆ ಬರುತ್ತದೆ. ಆಕೆ ಹೃದಯ ಕದ್ದಾಗಲೂ ಆಗದ ಚಡಪಡಿಕೆಯ ನೂರು ಪಾಲು ಈಗ!

ಮತ್ತೆ ಎಲ್ಲ ಸರಿಹೋದೀತು. ಬರ್ಬಾದಾಯಿತು ಅನಿಸಿದ ಬದುಕು ಮಾಮೂಲಿಗೆ ಬಂದೀತು. ಗಲಗಲ ಅಲುಗಿದ ತಲ್ಲಣದ ಆ ಸಂಜೆ, ನೋವ ತಂತಿಯನು ಮೀಟಿದ ಕ್ಷಣಗಳನು ಮಾತ್ರ ಮರೆಯಲಾಗದು.

7 comments:

ಸುಪ್ತವರ್ಣ November 26, 2009 at 10:10 PM  

ಅದ್ಭುತ ಎಂದು ಬರೆಯಲು ಹೋಗಿ ನಾಲಿಗೆ ಕಚ್ಚಿಕೊಂಡೆ! ಲೇಖನ ಅದ್ಭುತ, ಮೊಬೈಲು ಹೋದದ್ದು ಮಾತ್ರ ದುರಂತ!

Sushrutha Dodderi November 26, 2009 at 10:15 PM  

ಹಂಗೇ ಆಗ್ಬೇಕು ನಿಂಗೆ! :D :D

ರೈಟಪ್ಪು ಸುಪ್ಪರ್ರೋ..!

ಸಾಗರದಾಚೆಯ ಇಂಚರ November 27, 2009 at 1:39 AM  

ಏನು ಚಂದ್ ಬರೆದಿದ್ದಿರಾ,
ಮೊಬೈಲ್ ಕಳೆದಿದ್ದಕ್ಕೆ ಬೇಸರ ಅಲ್ವ
ಆದರೆ ಶೈಲಿ ಮಾತ್ರ ತುಂಬಾ ಸೊಗಸಾಗಿದೆ

Anonymous,  November 27, 2009 at 10:37 PM  

:-)
ಎರಡು ದಿನ ಈ ತಳಮಳ. ಅಷ್ಟೆ.
:-)
ಮಾಲತಿ ಎಸ್.

ತೇಜಸ್ವಿನಿ ಹೆಗಡೆ December 2, 2009 at 9:53 PM  

"ನನ್ನ ನಂಬರ್‌ಗೆ ನಾನೇ ರಿಂಗ್ ಕೊಡುವಾಗ ಸ್ವಿಚ್‌ಡ್ ಆಫ್ ಅಂತ ಬರುವುದಿದೆಯಲ್ಲ, ಅದು ನಾನು ಜೀವಂತವಿದ್ದಾಗಲೂ ಸತ್ತಿದ್ದಾನೆ ಎಂದು ಇನ್ನೊಬ್ಬರು ಅಂದಂತೆ ! "

ಓದಿ ಕ್ಷಣ ನಗು ಬಂದರೂ ಇದು ಎಷ್ಟು ಸತ್ಯ ಎಂದೆನಿಸಿತು. ನಮಗೆ ಹತ್ತಿರವಾಗಿದ್ದ ವಸ್ತುವೊಂದು ಅಗಲಿದರೆ, ಎಷ್ಟು ತಳಮಳವಾಗುವುದೆಂದು ಬಲ್ಲೆ. ವಸ್ತು ನಿರ್ಜೀವವಾಗಿರಬಹುದು ಆದರೆ ನಮ್ಮೊಳಗಿನ ಭಾವನೆ ನಿರ್ಜೀವವಲ್ಲ ತಾನೆ?

ನಿಮ್ಮೊಳಗಿನ ತಲ್ಲಣ ತಳಮಳಗಳನ್ನೆಲ್ಲಾ ಲೇಖನದಲ್ಲಿ ಹರಿಬಿಟ್ಟಿದ್ದೀರಿ. ಚೆನ್ನಾಗಿದೆ.

ಆದರೆ ಎರಡೇ ದಿನಗಳಲ್ಲಿ ತಲ್ಲಣ ಮುಗಿಯಿತೇ?!!

ಸುಘೋಷ್ ಎಸ್. ನಿಗಳೆ December 3, 2009 at 7:45 PM  

ಲೇಖನ ಸೂಪರ್. ಮೊಬೈಲ್ ಕಳೆದುಕೊಂಡು ಪಾಪರ್...

Anonymous,  December 5, 2009 at 11:25 PM  

ನಾನು ಇದನ್ನ ಮೊದ್ಲೆ ಆಫೀಸ್‌ನಲ್ಲಿ ಓದಿದ್ದೆ. ಬರದ ರೀತಿ ತುಂಬಾ ಇಷ್ಟವಾಯಿತು...ಬೇಸರ ಕಳೇದುಕೊಳ್ಳಲು ಬರವಣಿಗೆ ಒಳ್ಳೆ ವಿಧಾನ ಅನ್ನಿಸ್ತು!!!!
ಕೋಡ್ಸರ

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP