January 14, 2009

ಆಹಾ ಎಂಥಾ ಧಾವಂತ

ಕಣ್ಣೆವೆಗಳು ನಿಶ್ಚಲವಾಗಿವೆ . ಹುಬ್ಬು ಮೇಲಕ್ಕೇರಿ, ಹಣೆಯಲ್ಲಿ ನಿರಿಗೆಗಳು ಮೂಡಿ, ಕುರ್ಚಿ ಮೇಲಿನ ಹಿಡಿತ ಬಿಗಿಯಾಗಿದೆ. ತೆರೆಯ ಮೇಲೆ ಕೆದರಿದ ಕೂದಲಿನ, ಬೆವರಿಳಿದ ಮುಖದ ಪುರುಷ ಸಿಂಹ, ಎರಡೂ ಕೈಗಳಿಂದ ಸ್ಟೇರಿಂಗ್‌ನ್ನು ಅತ್ತಿಂದಿತ್ತ ಇತ್ತಿಂದತ್ತ ಒಂದೇಸಮ ತಿರುಗಿಸುತ್ತಿದೆ. ಕಾಲು ಎಕ್ಸ್‌ಲೇಟರ್‌ನ್ನು  ಸಂಪೂರ್ಣ ಅದುಮಿ ಹಿಡಿದಿದೆ. ಅಟ್ಟಿಸಿಕೊಂಡು ಹೋಗುತ್ತಿವೆ  ಖಳನಾಯಕನ ಪಡೆಯ ಬೈಕುಗಳು. ನಾಯಕನ ಕಾರಿನಲ್ಲಿ ಆ ಹುಡುಗಿ ಗುಬ್ಬಿ ಹಕ್ಕಿ. ಭ್ರೂ.....ಮ್...
ಬೆಂಕಿ, ಹೊಗೆ , ಸದ್ದು ಢಮಾರ್. ನಿಧಾನಕ್ಕೆ ಕೈಕೈ ಹಿಡಿದು ಎದ್ದು ಬರುತ್ತಿರುವ ನಾಯಕನಾಯಕಿಯರು. ಚಪ್ಪಾಳೆ, ಸಿಳ್ಳು !
ಅದೆಷ್ಟು ಸಲ ನಾವೆಲ್ಲ ನೋಡಿದ್ದೀವಲ್ಲ ಈ ನಾನಾ ಬಗೆಯ ಚೇಸಿಂಗ್‌ಗಳನ್ನು . ಕಳ್ಳ-ಪೊಲೀಸರು, ನಾಯಕ -ಖಳನಾಯಕರು... ಆದರೆ  ಇಂತಹ ಚೇಸಿಂಗ್‌ಗಳಲ್ಲಿ ವಾಹನಗಳನ್ನು ಹೊರತುಪಡಿಸಿದರೆ ನಂತರ ನೆನಪಾಗುವವು ಕುದುರೆಗಳು. ಲಕ್ಷಾಂತರ ರೂಪಾಯಿಗಳ ಪಣವನ್ನಿಟ್ಟುಕೊಂಡು ಅವು ಓಡುತ್ತಿದ್ದರೆ ಹೊರಗೂ, ಎದೆಯಲ್ಲೂ ಟಕ ಟಕ . ಹಳ್ಳಿ ಹಬ್ಬಗಳಲ್ಲಿ ಕಟ್ಟುಮಸ್ತಾದ ಹೋರಿಗಳು ಓಡುತ್ತಿದ್ದರೆ ಹುಡುಗರಿಗೆ ಓಡಿ,ಹಿಡಿದು ನಿಲ್ಲಿಸುವ ತವಕ.  ಚೇಸಿಂಗ್ ಅಂದರೆ  ಹೀಗೆಯೇ, ಮನುಷ್ಯರಿಗೆ ಯಾವತ್ತೂ ರೋಮಾಂಚನ. ಬಾಲ್ಯದ ಕಳ್ಳ-ಪೊಲೀಸ್ ಆಟದಿಂದಲೇ ಶುರು. ಓಡುವುದಕ್ಕಿಂತ ಓಡಿಸುವುದು ಸುಲಭವಾದರೂ, ಎಳೆಯರ ಕಳ್ಳ-ಪೊಲೀಸ್ ಆಟದಲ್ಲಿ ಓಡುವುದಕ್ಕೇ ಎಲ್ಲರಿಗೆ ಹುಮ್ಮಸ್ಸು. ಯಾಕೆಂದರೆ ಒಬ್ಬ ಪೊಲೀಸನಿಗೆ ಕಳ್ಳರು ಸಿಗುವುದೇ ಇಲ್ಲ ! ಅದೋ ನೋಡಿ. ಕೈತಪ್ಪಿಸಿಕೊಂಡು  ಓಡುತ್ತಿರುವ ಮಗುವನ್ನು ಹಿಡಿಯಲು ಧುಮುಗುಡುತ್ತ  ಬೆನ್ನತ್ತಿದ್ದಾಳೆ ಅಮ್ಮ . ಬಾಲವೆತ್ತಿ ಓಡುತ್ತಿರುವ ಸಾಧು ಪ್ರಾಣಿಗಳನ್ನು ನ್ಯಾಷನಲ್ ಜಿಯೊಗ್ರಫಿಕ್‌ನಲ್ಲಿ ಚೇಸ್ ಮಾಡುತ್ತಿವೆ ಹುಲಿ-ಸಿಂಹಗಳು. ಬೀದಿ ನಾಯಿಗಳನ್ನು ಅಟ್ಟುತ್ತಿದೆ ನಿಮ್ಮ ಮನೆಯ ಟಾಮಿ. ಟಾಮ್ ಅಂಡ್ ಜೆರ್ರಿಯಲ್ಲಿ ಇಲಿಯನ್ನು ಬೆನ್ನತ್ತಿದೆ ಬೆಕ್ಕು. 'ಅಗೋ ಅಗೋ ಬಸ್ ಶಬ್ದ ಕೇಳ್ತಾ ಉಂಟು' ಅಂತನ್ನುತ್ತಾ ಬಸ್ ಹಿಡಿಯಲು ನೂರು ಮೀಟರ್ ದೂರದಿಂದ ಬಸಬಸ ಓಡುತ್ತಿದ್ದಾರೆ ಹಳ್ಳಿ ಹೆಂಗಸರು. ವಿಖ್ಯಾತ ಸಿನಿಮಾ ಶೋಲೆಯಲ್ಲಿ ಧಮೇಂದ್ರ-ಅಮಿತಾಬ್‌ರಿದ್ದ ರೈಲನ್ನು ಕುದುರೆಗಳಲ್ಲಿ ಬೆಂಬತ್ತಿದೆ ಗಬ್ಬರ್‌ಸಿಂಗ್‌ನ ಪಡೆ. ಇವನ್ನೆಲ್ಲ ನೋಡದವರು ಯಾರು?

ಇದು ವೇಗದ ಜಗತ್ತು. ಹಿಂದೆ ಬಿದ್ದವರಿಗೆ ಇಲ್ಲಿ ಜಾಗವಿಲ್ಲ. ಓಡುವುದರಲ್ಲಿ ಓಡಿಸುವುದರಲ್ಲಿ ಪರಿಣತರಾದಷ್ಟೂ ನಿಮಗೆ ಏಳಿಗೆ ! ಆಸೆಗಳನ್ನು, ಕನಸುಗಳನ್ನು ಅಷ್ಟೇ ಯಾಕೆ, ನಮ್ಮ ಕೆಲಸವಾಗಬೇಕಾದರೆ ಬೆನ್ನುಬೀಳಲೇಬೇಕು, ಚೇಸ್ ಮಾಡಲೇಬೇಕು. ಬ್ರಿಟಿಷರು (ಮುಖ್ಯವಾಗಿ) ಬೇಟೆಯಾಡುವುದಕ್ಕಾಗಿ ಬಳಸುವ ಖಾಸಗಿ ಭೂಮಿಗೆ  ಚೇಸ್ (chase) ಎಂದೇ ಕರೆಯುತ್ತಾರೆ.  ಹಾಗೆ ನೋಡಿದರೆ ಸೃಜನಶೀಲವಾದದ್ದೆಲ್ಲ  ಜೀವಂತವಾಗಿರುವುದು ಇಂತಹ ಚಲನಶೀಲತೆಯಲ್ಲೇ. ಚಲನಶೀಲತೆ ಅಂದರೆ ಒಂದಲ್ಲ ಒಂದರ ಬೆಂಬತ್ತುವುದೇ. ಸಂಗೀತಗಾರನ ಸ್ವರ-ತಾಳಗಳಲ್ಲಿ, ಚಿತ್ರಗಾರನ  ಸ್ಟ್ರೋಕ್‌ಗಳಲ್ಲಿ, ಕವಿಯ ಪದ-ಸಾಲುಗಳಲ್ಲೂ ಈ ಗುಣವಿದೆ. 
'ಬುಲೆಟ್‌ನ ಶಬ್ದ ಬಲಭಾಗದಲ್ಲಿ ಕೇಳಿಸುತ್ತಿತ್ತು. ಹಿಂದೆ ತಿರುಗಿ ನೋಡಿದೆ. ಬುಲೆಟ್ ನೂರು ಅಡಿಗಳಿಗಿಂತಲೂ ಹತ್ತಿರ ಬಂದುಬಿಟ್ಟಿತ್ತು. ಅದರಲ್ಲಿ ಇಬ್ಬರು ಕುಳಿತಿದ್ದರು. ಇಬ್ಬರೂ ಪೊಲೀಸ್ ಡ್ರೆಸ್‌ನಲ್ಲಿದ್ದರು. ಹಿಂದುಗಡೆ ಕುಳಿತಿದ್ದವರ ಕೈಯಲ್ಲಿ ರಿವಾಲ್ವರ್ ಕಾಣಿಸಿತು. ಯಾವುದೇ ಕಾರಣಕ್ಕೂ ತಿರುಗಿ ನೋಡಬೇಡವೆಂದು ಕೊತ್ವಾಲ ಅರಚುತ್ತಿದ್ದಾನೆ. ಕೊನೆಯ ಪಕ್ಷ ಹಿಂದೆ ನೋಡುತ್ತಿದ್ದರೆ ರಿವಾಲ್ವರ್ ಯಾವ ದಿಕ್ಕಿನಲ್ಲಿದೆಯೆಂದಾದರೂ ನೋಡಬಹುದು. ತಲೆ ಬಾಗಿಸಬಹುದು, ಮೈಯನ್ನು ವಾಲಿಸಬಹುದು. ಕೊತ್ವಾಲ ಅಷ್ಟು ವೇಗವಾಗಿ ಗಾಡಿಯನ್ನು ಓಡಿಸುತ್ತಿದ್ದರೂ ತನ್ನ ಎಡಗೈಯಿಂದ ಒಂದೆರಡು ಬಾರಿ `ಹಿಂದೆ ನೋಡಬೇಡ್ರಿ' ಎಂದು ಬಲವಾಗಿ ಹೊಡೆದ. ಬುಲೆಟ್ ಗಾಡಿ ನಮ್ಮ ಬಲಕ್ಕಿತ್ತು. ಹಿಂದೆ ಕುಳಿತಿದ್ದವನು ರಿವಾಲ್ವರ್ ಹಿಡಿದುಕೊಂಡು ಶಿವರಾಂರವರ ಹಿಂದಿನಿಂದ ಎಡಗಡೆಯಿದ್ದ ನಮ್ಮ ಕಡೆ ಗುರಿ ಮಾಡಲು ಯತ್ನಿಸಿದುದು ನನಗೆ ಕಾಣಿಸಿತ್ತು. ಆ ದಿಕ್ಕಿನಿಂದ ಟಾರ್ಗೆಟ್ ಮೇಲೆ ಗುಂಡು ಹಾರಿಸುವುದು ಸ್ವಲ್ಪ ಮಟ್ಟಿಗೆ ತ್ರಾಸದಾಯಕವಾಗಿತ್ತು. ನಾನು ಹಿಂದಕ್ಕೂ ತಿರುಗಿ ನೋಡದೆ ಕಾತುರದಿಂದ ನನ್ನ ಗಮನವನ್ನೆಲ್ಲಾ ಕಿವಿಗಳ ಮೇಲೆ ಹರಿಸಿದ್ದೆ. ಬಹುಶ ನಾನು ಹಿಂದಿರುಗಿ ನೋಡಿ ಐದು ಸೆಕೆಂಡ್‌ಗಳಷ್ಟು ಆಗಿರಲಿಲ್ಲ. ಬುಲೆಟ್ ನಮ್ಮ ಎಡಭಾಗಕ್ಕೆ ಸರಿದಿತ್ತು. ಈಗ ಏಮ್ ತೆಗೆದುಕೊಳ್ಳುವುದು ಕಷ್ಟವಿರಲಿಲ್ಲ. ನಮ್ಮ ಎಡಭಾಗಕ್ಕೆ ಬುಲೆಟ್ ಸರಿದ ನಂತರವಂತೂ, ನನ್ನೊಳಗೆ ಇದ್ದ ಕಿಂಚಿತ್ ಭರವಸೆಯೂ ಬತ್ತಿಹೋಯಿತು.'
ಪೊಲೀಸ್ ಅಧಿಕಾರಿ ಶಿವರಾಂ ಅವರಿಂದ , ಬೆಂಗಳೂರಿನ ಪ್ರಮುಖ ಪಾತಕಿ ಕೊತ್ವಾಲನೊಡನೆ ತಪ್ಪಿಸಿಕೊಂಡ ಬೈಕ್ ಚೇಸ್‌ನ ಸತ್ಯ ಘಟನೆಯನ್ನು `ದಾದಾಗಿರಿಯ ದಿನಗಳಲ್ಲಿ ' ಅಗ್ನಿಶ್ರೀಧರ್ ಚಿತ್ರಿಸಿರುವ ಕೆಲವು ಸಾಲುಗಳಿವು.

೨೦೦೬ ಮಾರ್ಚ್ ೧೨. ದಕ್ಷಿಣ ಆಫ್ರಿಕಾದ ಜೊಹಾನ್ಸ್‌ಬರ್ಗ್‌ನಲ್ಲಿ ಆಸ್ಟ್ರೇಲಿಯಾದ ಕ್ರಿಕೆಟ್ ಕಲಿಗಳು ಚಚ್ಚಿದ್ದೇ ಚಚ್ಚಿದ್ದು. ೫೦ ಓವರುಗಳಲ್ಲಿ ಭರ್ತಿ ೪೩೪ ರನ್‌ಗಳು. ಆದರೆ ಆಮೇಲೆ ಶುರುವಾಯ್ತಲ್ಲ ಆಫ್ರಿಕನ್ನರ ಆರ್ಭಟ. ಆ ರನ್‌ಗಳ ಬೆಟ್ಟ ಏರುತ್ತಾ, ೧೧೧ ಎಸೆತಗಳಲ್ಲಿ ಹರ್ಷಲ್ ಗಿಬ್ಸ್ ೧೭೫, ಗ್ರೇಮ್ ಸ್ಮಿತ್ ೯೦ ರನ್‌ಗಳು, ದ.ಆಫ್ರಿಕಾ ೪೩೮ ! ಆಸ್ಟೇಲಿಯಾ ಸೋತು ಸಪ್ಪೆ. ಅಟ್ಟಾಡಿಸಿ ಹೊಡೆಯುವುದೆಂದರೆ  ಅದು. ಆಸ್ಟ್ರೇಲಿಯಾ ತಂಡವನ್ನು ಬಗ್ಗುಬಡಿಯಲು ಟೆಸ್ಟ್‌ನ ಕೊನೆಯ ಇನ್ನಿಂಗ್ಸ್‌ನಲ್ಲಿ ವೆಸ್ಟ್‌ಇಂಡೀಸ್ ತಂಡ  ಏಳು ವಿಕೆಟ್‌ಗಳಿಗೆ ೪೧೮ ರನ್ ಒಟ್ಟುಗೂಡಿಸಿ ಗೆದ್ದದ್ದು ಕೂಡಾ ಬೆಂಬತ್ತಿ ಪಡೆದ ಅತಿ ದೊಡ್ಡ  ವಿಜಯ. ಆಮೀರ್ ನಾಯಕತ್ವದ ಭಾರತ ತಂಡ, ಬ್ರಿಟಿಷರು ಪೇರಿಸಿದ ಮೊತ್ತವನ್ನು  `ಲಗಾನ್' ಸಿನಿಮಾದಲ್ಲಿ ಬೆಂಬತ್ತುವ ಬಗೆ ನೆನಪಾಯಿತಾ? ಹಾಗಂತ ಬೆಂಬತ್ತುವ ಬಗೆಯೆಲ್ಲವೂ ವೇಗ ಪ್ರಧಾನವೇ ಅಲ್ಲ. ಪತ್ತೇದಾರಿ ಕಾದಂಬರಿಗಳಲ್ಲಿ ರಹಸ್ಯ ಭೇದಿಸಲು ಒಂದೊಂದೇ ಸುಳಿಗಳನ್ನು ದಾಟುತ್ತ ಸಾಗುವ ಗೂಢಚಾರರ ಎಚ್ಚರಿಕೆಯ ಹೆಜ್ಜೆ ಬಹಳ ನಿಧಾನ . ಚದುರಂಗದಾಟದಲ್ಲಿ ಒಬ್ಬನ ಹಿಂದೆ ಮತ್ತೊಬ್ಬ ನಿಧಾನ ನಿಧಾನ ಬೆನ್ನು ಹತ್ತುತ್ತ ಲೆಕ್ಕಾಚಾರದ ನಡೆ.
ಮೊನ್ನೆ ಮೊನ್ನೆ  ೨೯ರ ನಡುರಾತ್ರಿ ಒಂದು ಗಂಟೆ. ಗೆಳೆಯರೊಂದಿಗೆ ಬೈಕ್ ರೇಸ್ ಮಾಡುತ್ತಿದ್ದ  ೧೯ರ ವಯಸ್ಸಿನ ಕಾಲೇಜು ಹುಡುಗ ಮೊಹ್ಮದ್ ಅಕ್ರಂ ಪಾಷಾ, ಬೆಂಗಳೂರಿನ  ರಸ್ತೆಗಳಲ್ಲಿ  ಸಾವನ್ನೇ ಬೆಂಬತ್ತಿದವನಂತೆ ಓಡಿದ. ಟ್ರಿನಿಟಿ ಸರ್ಕಲ್‌ನಿಂದ ಶುರುವಾಗಿ, ಹಳೆ ಏರ್‌ಪೋರ್ಟ್ ರಸ್ತೆಯಲ್ಲಿ ಪೊಲೀಸರಿಂದ ತಪ್ಪಿಸಿಕೊಂಡು ಓಡಾಡಿ, ಸೇನೆಯ ಬ್ರಿಗೇಡಿಯರ್ ಮನೆ ಟೆರೇಸ್ ಹತ್ತಿದ. ಅಲ್ಲಿಂದ ಮನೆಗೆ ಫೋನ್ ಮಾಡಿ, ತನಗೆಂದು ಬಂದ ಕಾರು ಹತ್ತಿ ಪೊಲೀಸರಿಂದ ತಪ್ಪಿಸಿಕೊಳ್ಳಲು ನೋಡಿದನಂತೆ. ಟೆರೇಸ್‌ನಿಂದ ಜಿಗಿದು ಓಡುವಾಗ ಮಿಲಿಟರಿ ಭದ್ರತಾ ಸಿಬ್ಬಂದಿಯ ಗುಂಡಿಗೆ ಬಲಿಯಾದ. ಶರಣಾಗತನಾಗದೆ ಆ ಪರಿ ಓಡಿದ್ದನೆಂದರೆ, ಅದ್ಯಾವ ಸಿನಿಮಾಗಳಲ್ಲಿ ಯಾರೋ ಹಾಗೆ ತಪ್ಪಿಸಿಕೊಂಡಿದ್ದನ್ನು ನೋಡಿದ್ದನೋ ಅಥವಾ ಲಡಕಾಸು ಕೋವಿಗಳ ಈ ಭದ್ರತಾ ಪಡೆಯವರಿಗೆ ಏನೂ ಮಾಡಲಾಗದು ಅಂದುಕೊಂಡನೋ, ಸಿಕ್ಕಿಬಿದ್ದರೆ ಆ ರಾತ್ರಿ ಪೊಲೀಸರು ಕೊಡಬಹುದಾದ 'ಆತಿಥ್ಯ'ಕ್ಕೆ ಹೆದರಿದನೋ, ಟಿವಿ-ಪತ್ರಿಕೆಗಳಲ್ಲಿ ನಾಳೆ ತನ್ನ ಮುಖವನ್ನು ಎಲ್ಲರೂ ಕಾಣುವಂತಾದೀತೆಂದು ಅಪಮಾನದಿಂದ ಕುಗ್ಗಿದನೋ ಅಥವಾ ತಾನೆಲ್ಲಿದ್ದೇನೆ ಎಂಬುದೂ ಅರಿವಿಲ್ಲದೆ ತೀರಾ ಹುಡುಗಾಟದಂತೆ  ಓಡಿದನೋ, ಅವನಿಗೇ ಗೊತ್ತು. ಅಂತೂ ಆ ಕಾಳರಾತ್ರಿ ಆತನ ರೇಸಿಂಗ್ ಹುಚ್ಚು ಬದುಕಿನ ಟ್ರ್ಯಾಕನ್ನೇ ಕಿತ್ತು ಬಿಸಾಡಿತ್ತು. ಓಡೋಡಿ ಮಡಿದ ಆ ಹುಡುಗನಿಗೆ ಈ ಬರೆಹ ಅರ್ಪಣೆ.    
***            
ಅದೋ, ಸೂರ್ಯ ಪೂರ್ವದಿಂದ ಪಶ್ಚಿಮಕ್ಕೆ ಯಾತ್ರೆ ಹೊರಟಿದ್ದಾನೆ. ಟಿಫಿನ್ ಕ್ಯಾರಿಯರ್‌ಗಳು ತುಂಬಿಕೊಂಡು ಹಬೆ ಬಳಿದು  ಕುಳಿತಿವೆ.  ಪರ್ಸ್‌ನಿಂದ ಹಳೆಯ ಹತ್ತು ರೂಪಾಯಿ ನೋಟು ಹುಡುಕಿ ತೆಗೆದು, ಬಸ್ಸಿಗೆ ಕೊಡಲೆಂದು ಅಂಗಿ ಜೇಬಲ್ಲಿಟ್ಟಿದ್ದಾನೆ ಅಪ್ಪ.  ತನ್ನನ್ನು ಬೇಗ ಎಬ್ಬಿಸದೆ ಸ್ಕೂಲಿಗೆ ತಡವಾಯಿತೆಂದು ಮಗಳು ಬಡಬಡಿಸುತ್ತಿದ್ದಾಳೆ. ಇವತ್ತು ನೀನು ಐಸ್‌ಕ್ರೀಮ್ ತಿನ್ನಬಹುದೆಂದು ಮಗಳ ಲಂಗದ ಜೇಬಿಗೆ ಐದು ರೂ. ನಾಣ್ಯ ಹಾಕಿದ್ದಾಳೆ ಅಮ್ಮ. ಕಂಟ್ರಾಕ್ಟರು ಈಗಲೋ ಇನ್ನೊಂಚೂರು ಹೊತ್ತಿನಲ್ಲೋ ಬಂದಾನೆಂದು ಕೂಲಿಯಾಳುಗಳು ಕಾಯುತ್ತಿದ್ದಾರೆ. ರಾತ್ರಿ ಪಾಳಿಯಲ್ಲಿದ್ದ ತರುಣ, ಬೇಗ ಮನೆ ಸೇರಲು ಬೈಕಿನ ಎಕ್ಸಲೇಟರ್ ಹಿಂಡಿದ್ದಾನೆ. ಎಲ್ಲರೂ ಹೊರಗಡಿಯಿಡುತ್ತಿದ್ದಂತೆ ಒಂದು ಧಾವಂತದಲ್ಲಿ ಸಿಲುಕಿ ಜಗತ್ತು ಸಣ್ಣಗೆ ಕಂಪಿಸುತ್ತಿದೆ. 
ಹೊತ್ತೇರುತ್ತಿದ್ದಂತೆ  ಓಟದ ಥ್ರಿಲ್ ಮಾಯವಾಗಿ ಜಗತ್ತು ಉದ್ವೇಗಗೊಳ್ಳುತ್ತಿದೆ. ಕಂಕುಳಲ್ಲಿ ಪೊರಕೆ-ಕೈಯಲ್ಲಿ ನೀಲಿ ಕಸದ ಬುಟ್ಟಿ ಹಿಡಿದಾಕೆ, ಗರುಡಾ ಮಾಲ್‌ನ ಎಸ್ಕಲೇಟರ್‌ನಲ್ಲಿ ಮೇಲೆ ಬರುತ್ತಿದ್ದಾಳೆ. ಹಿಡೀರಿ ಹಿಡೀರಿ ಅಂತ ಕೂಗುತ್ತಿದ್ದಂತೆ, ಮೊಬೈಲನ್ನು ಸೆಳೆದುಕೊಂಡವನು ಬಸ್ಸಿಳಿದು ಅದೃಶ್ಯನಾಗಲು ಯತ್ನಿಸುತ್ತಿದ್ದಾನೆ. ಐಎಎಸ್ ಪರೀಕ್ಷೆಗಿದು ಮೂರನೇ ಎಟೆಂಪ್ಟು ಅಂದವನು, ಕಳೆದೆರಡು ದಿನಗಳಿಂದ ಎಚ್ಚರಾಗಿಯೇ ಇದ್ದಾನೆ. ಈ ಬಾರಿ ಸಂಬಳ ಹೆಚ್ಚಾದೀತೆಂದು, ತಿಂಗಳ ಕೊನೆಗೆ ದುಡ್ಡು ಉಳಿದೀತೆಂದು, ಈ ವರ್ಷವಾದರೂ ತಿರುಪತಿಗೆ ಹೋಗಿ ಹರಕೆ ತೀರಿಸಬಹುದೆಂದು ಆ ಪಟ್ಟಣಿಗ ಕನಸು ಕಂಡಿದ್ದಾನೆ.  ಕನಸಿನಲ್ಲೂ ನನಸಿನಲ್ಲೂ ಓಡುತ್ತಿದೆ ದುನಿಯಾ ; ಗೆಲುವಿಗಾಗಿ, ಲಾಭಕ್ಕಾಗಿ, ಕೀರ್ತಿಗಾಗಿ. ಬೆಳಗ್ಗೆ ಅಟ್ಟಿದ ದನಕರು ಸಂಜೆ ಹಟ್ಟಿಗೆ ಬರುತ್ತವೆ. ಎಲ್ಲೋ ಹಾರಿ ಹೋದ ಹಕ್ಕಿ ಸಾಯಂಕಾಲ ಗೂಡಿಗೆ ಮರಳುತ್ತದೆ. ಭಯೋತ್ಪಾದಕರನ್ನು ಹಿಮ್ಮೆಟ್ಟಿಸಲು ಹೋದವನು ಹಿಂತಿರುಗುತ್ತಾನೆಯೇ? ಓಡಿ ಹೋದ ಹುಡುಗ ಮತ್ತೆ ಮನೆಗೆ ಬರುತ್ತಾನೆಯೇ? 

ಮುಂದೋಡಿದವ ತನಗಾಗಿ ವೇಗ ತಗ್ಗಿಸುತ್ತಾನೆಂಬ, ಹಿಂದಿದ್ದವನ ನಂಬಿಕೆ ಸುಳ್ಳಾಗಿದೆ. ಓಡುವುದರಷ್ಟೇ ತಪ್ಪಿಸಿಕೊಳ್ಳುವುದೂ ಮುಖ್ಯ ಅಂತ ಕತ್ತಲಲ್ಲಿ ಗಂಡ ಹೆಂಡತಿಗೆ ಹೇಳುತ್ತಿದ್ದಾನೆ. ಆತನ ಕಣ್ತುಂಬಿರುವುದು ಅವಳ ಕೈಗೆ ಗೊತ್ತಾಗಿದೆ.
(ಕಳೆದ ಭಾನುವಾರ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ)
        

1 comments:

Unknown January 15, 2009 at 2:42 AM  
This comment has been removed by a blog administrator.

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP