November 19, 2008

ಬೊಂಬೆ ಹುಡುಗಿ

ನ್ನಡದ ಟಿವಿ ಚಾನೆಲ್‌ಗಳಲ್ಲಿ ಇತ್ತೀಚೆಗೆ 'ಕಾಮಿಡಿ ಟೈಂ' ಜಾಸ್ತಿಯಾಗಿದೆ ! ಕಿರು-ಹಿರಿತೆರೆಯ ನಟರು, ಹಾಸ್ಯ ಬರಹಗಾರರು ಭಾಗವಹಿಸುವ, ಸಿಹಿಕಹಿ ಚಂದ್ರು ಹಾಗೂ ಮಿಮಿಕ್ರಿ ದಯಾನಂದ್ ತೀರ್ಪುಗಾರರಾಗಿರುವ, ಕಸ್ತೂರಿ ಚಾನೆಲ್‌ನಲ್ಲಿ ಪ್ರಸಾರವಾಗುವ, 'ಹಾಸ್ಯದರಸ ' ಎಂಬ ಕಾರ್ಯಕ್ರಮ, ಅಂತಹ ಅತ್ಯಂತ ಬೋರಿಂಗ್ ಟೈಂ ಸ್ಲಾಟ್ ! ಇನ್ನು `ಜೀ ಕನ್ನಡ 'ದ 'ಕಾಮಿಡಿ ಕಿಲಾಡಿ'ಗಳಲ್ಲಿ ನಿರೂಪಕಿ ಅನುಶ್ರೀಯ ಥಕಥೈಯೇ ಹೆಚ್ಚಾಗಿರುತ್ತದಷ್ಟೇ ಹೊರತು, ಬಹುಪಾಲು ಹಾಸ್ಯ ಕಲಾವಿದರು ಫ್ಲಾಪ್‌ಫ್ಲಾಪ್. ಆದರೂ ಅಪರೂಪಕ್ಕೆ ಒಬ್ಬಿಬ್ಬರು, ನೋಡುವವರ ಹಲ್ಲು ಸೆಟ್‌ಗಳೂ ಜಾರುವಂತೆ ನಗಿಸುತ್ತಾರೆ. ಸ್ವಾದಿಷ್ಟ ಹಾಸ್ಯ ಬಡಿಸುತ್ತಾರೆ. ಅಂಥವರಲ್ಲಿ ಒಬ್ಬರು ಇಂದುಶ್ರೀ. 'ಸ್ಟಾರ್ ಒನ್' ಚಾನೆಲ್‌ನಲ್ಲಿ ಪ್ರಸಾರವಾಗುತ್ತ ಅತ್ಯುತ್ತಮ ಎನಿಸಿದ್ದ 'ಲಾಫ್ಟರ್ ಛಾಲೆಂಜ್'ನ ಕಲಾವಿದರನ್ನೂ ಸರಿಗಟ್ಟುವಂತೆ ಬೊಂಬೆಯನ್ನು ಮಾತಾಡಿಸಬಲ್ಲ ಹುಡುಗಿ ಈಕೆ. ಅವಳ ಕತೆ ಇಲ್ಲಿದೆ. ಸೀರಿಯಸ್ಸಾಗಿ ಓದಿ.


ಇದು ಡಿಂಕು ಪ್ರಪಂಚ. ಬಂದವರನ್ನು ಹೋದವರನ್ನು ಅದು ಕಣ್ಣು ಕೆಕ್ಕರಿಸಿ ನೋಡುತ್ತಿದೆ. ಸರಕ್ಕನೆ ಕುತ್ತಿಗೆ ಹೊರಳಿಸುತ್ತದೆ. ಅದೊಂಥರಾ ಛದ್ಮವೇಷಧಾರಿಯೂ. ಡಾಕ್ಟರು, ಕುಡುಕ, ರೌಡಿ, ಸ್ವಾಮೀಜಿ ಹೀಗೆ ನಾನಾ ವೇಷಗಳಲ್ಲಿ ಕಂಗೊಳಿಸಿ, ನಾನಾ ಸ್ವರ ಹೊರಡಿಸಿದರೂ ಡಿಂಕು ಡಿಂಕೂನೇ. ಡಿಂಕು ಹುಡುಗಿಯೋ, ಹುಡುಗನೋ? ನೆನೆದವರ ಮನದಲ್ಲಿ ಡಿಂಕು ಎಲ್ಲವೂ. ಯಾರೇ ಆಗಲಿ, ಮಾತಾಡಿಸಿದಾಗಲೇ ಅದಕ್ಕೆ ತೃಪ್ತಿ. ಅಂತಹ ಡಿಂಕು ಎಂದರೆ ಒಂದು ಮರದ ಗೊಂಬೆ. ಅದು ಮಾತಾಡುವಂತೆ ಮಾಡಿದವರು ಇಂದುಶ್ರೀ. ಇವರ ಕೈಗೆ ಸಿಕ್ಕರೆ - 'ಮೂಕಂ ಕರೋತಿ ವಾಚಾಲಂ' !

ಇಂಗ್ಲಿಷ್‌ನಲ್ಲಿ ಇಂಥವರಿಗೆ ventriloquist ಅನ್ನುತ್ತಾರೆ. ಅಂದರೆ ಮರದ ವಸ್ತುವಿನಿಂದ ಸ್ವರ ಬರುವಂತೆ ಪ್ರದರ್ಶನ ನೀಡುವವರು ಎಂದರ್ಥ. ಜಾದೂಗಾರರೇ ಹೆಚ್ಚಾಗಿ ಮಾಡುವ, `ಮಾತನಾಡುವ ಗೊಂಬೆ' ಅಂತ ಕರೆಸಿಕೊಳ್ಳುವ ಈ ಪ್ರದರ್ಶನ ನೀಡುವವರು ಬಹಳ ಕಡಿಮೆ ಜನ. ಕರ್ನಾಟಕದಲ್ಲಿ ಉದಯ್ ಜಾದೂಗಾರ್, ಪ್ರಹ್ಲಾದ್ ಆಚಾರ್ಯ (ಕೋತಿ)ರಮೇಶ್, ರಂಗಶಾಹಿ ಹೀಗೆ ಕೆಲವರಷ್ಟೇ ನಡೆಸಿಕೊಡುತ್ತಾರೆ. ಮಾತು-ಕೃತಿ ಎರಡರಲ್ಲೂ ಇದಕ್ಕೆ ವಿಶೇಷ ಅಭ್ಯಾಸ ಬೇಕು. ಆದರೆ ಹೆಣ್ಣೊಬ್ಬಳು ಈ ಪ್ರದರ್ಶನವನ್ನು ಆರಿಸಿಕೊಂಡದ್ದು, ಅದರಲ್ಲಿ ಪಳಗಿದ್ದು , ಲಿಮ್ಕಾ ದಾಖಲೆ ಮಾಡಿದ್ದು ಒಂದು ವಿಶೇಷ ಕತೆ .ತನ್ನ ಗೊಂಬೆ ಡಿಂಕುವನ್ನು ಮಾತಾಡಿಸುತ್ತಾ ಟಿವಿ ವಾಹಿನಿಗಳ ಮೂಲಕ ರಾಜ್ಯಾದ್ಯಂತ ಈಗ ಕಾಣಿಸಿಕೊಳ್ಳುತ್ತಿರುವವರು ಇಂದುಶ್ರೀ.

ಎಸ್‌ಎಸ್‌ಎಲ್‌ಸಿ ಮುಗಿಸಿ, ಪಿಯುಸಿ ಸೈನ್ಸ್ ಬೇಜಾರಾಗಿ, ಚಿತ್ರಕಲಾ ಪರಿಷತ್‌ನಲ್ಲಿ ಐದು ವರ್ಷಗಳ `ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್' ಮುಗಿಸಿ ಫಲಿತಾಂಶಕ್ಕಾಗಿ ಕಾಯುತ್ತಿರುವ ಈಕೆಯ, ಬೆಂಗಳೂರಿನ ಪುಟ್ಟ ಮನೆ ಹೊಕ್ಕರೆ ಗೋಡೆ ತುಂಬೆಲ್ಲ ಪ್ರಶಸ್ತಿ ಫಲಕಗಳು. ಆಕೆ ರಚಿಸಿದ ಪೇಂಟಿಂಗ್ಸ್‌ಗಳು, ದೊಡ್ಡ ದೊಡ್ಡ ಆಲ್ಬಮ್‌ಗಳಲ್ಲಿ ಪ್ರಶಸ್ತಿ ಪತ್ರಗಳು, ಪತ್ರಿಕಾ ವರದಿಗಳ ಕಟ್ಟಿಂಗ್ಸ್‌ಗಳು. ಹಾಸಿಗೆ ಮೇಲೆ ಡಿಂಕು, ಅದರ ತಮ್ಮ , ಮತ್ತೊಂದು ಕೋತಿ ! `ಫೆಬ್ರವರಿನಲ್ಲಿ `ಜೀ ಕನ್ನಡ' ಚಾನೆಲ್‌ನಲ್ಲಿ `ನೆನೆದವರ ಮನದಲ್ಲಿ ಡಿಂಕು ದುನಿಯಾ' ಅಂತ ಆರಂಭವಾದಾಗ ಒಂದೂವರೆ ಗಂಟೆ ಶೋ ಕೊಡ್ತಿದ್ದೆ. ಅಷ್ಟು ದೀರ್ಘ ಅವಧಿಯ ಕಾರ್ಯಕ್ರಮ, ಟೆಲಿವಿಷನ್ ಹಿಸ್ಟರೀನಲ್ಲೇ ಫಸ್ಟ್ ಟೈಮ್ ಆಗಿತ್ತು. ಈಗ ಪ್ರತಿ ಶನಿವಾರ ೯ರಿಂದ ೧೦ ರವರೆಗೆ ಬರತ್ತೆ. ಇದಕ್ಕಿಂತ ಮೊದಲು ಸಿಟಿ ಕೇಬಲ್‌ನಲ್ಲಿ ಎರಡೂವರೆ ವರ್ಷ ಪ್ರತಿ ಶುಕ್ರವಾರ ಒಂದು ಗಂಟೆ ಕಾರ್ಯಕ್ರಮ ಕೊಡ್ತಾ ಇದ್ದೆ. ಅದು ಸುಮಾರು ೧೬೦ ಶೋಗಳಾಗಿತ್ತು. ಹಾಗೇ ಹೆಚ್ಚಿನ ಎಲ್ಲ ಸಿಟಿ ಚಾನಲ್‌ಗಳಲ್ಲಿ ಮತ್ತು ಉದಯ, ಯು-೨, ಈ-ಟಿವಿ, ಟಿವಿ ೯ಗಳಲ್ಲಿ ಕಾರ್ಯಕ್ರಮ ಕೊಟ್ಟಿದೀನಿ' ಅಂತ ವಿವರ ಕೊಟ್ಟರು ಇಂದುಶ್ರೀ. ತನ್ನ ಪ್ರತಿಭೆಯನ್ನು ಆಕೆ ಮೊದಲು ತೋರಿದ್ದು ಮೆಜಿಷಿಯನ್ ಆಗಿಯಂತೆ. ಆಕೆಯ ತಂದೆ ಆರ್.ಎಂ.ರವೀಂದ್ರ ನಾಟಕ ಕಲಾವಿದರು, ತಾಯಿ ಮಂಜುಳಾ ರವೀಂದ್ರ ಹಾಡುಗಾರ್ತಿ. ಹೀಗಾಗಿ ಸಣ್ಣವಳಾಗಿದ್ದಾಗಲೇ ಎಲ್ಲದರಲ್ಲೂ ಆಸಕ್ತಿ ಇತ್ತು. ಆದರೆ ಮ್ಯಾಜಿಕ್ ಬಗ್ಗೆ ಏನೂ ಗೊತ್ತಿರಲಿಲ್ಲ. ಯಾರಪ್ಪಾ ಓದೋದು, ಮ್ಯಾಜಿಕ್ ಕಲಿತ್ರೆ ಏನಾದ್ರೂ ಆಗಬಹುದು ಅನ್ನೋ ಮೆಂಟಾಲಿಟಿನಲ್ಲಿ ಎಲ್ಲ ಶುರು ಆಗಿದ್ದು. ಹೀಗೆ ಎರಡನೇ ಕ್ಲಾಸ್‌ನಲ್ಲಿದ್ದಾಗಲೇ ಮ್ಯಾಜಿಕ್ ಅಭ್ಯಾಸ ಶುರು. ಬಳಿಕ ಕೆ.ಎಸ್.ರಮೇಶ್ ಬೆಂಗಳೂರಲ್ಲಿ `ಇಂಟರ್‌ನ್ಯಾಷನಲ್ ಮ್ಯಾಜಿಕ್ ಫೆಸ್ಟಿವಲ್ ಮಾಡಿದ್ದಾಗ ಅಲ್ಲದೆ, ಹೈದರಾಬಾದ್, ದಿಲ್ಲಿ, ಗೋವಾ, ಕೇರಳ ಮೊದಲಾದೆಡೆ ಕಾರ್ಯಕ್ರಮ ನೀಡಿದೆ ಅನ್ನುತ್ತಾರೆ.ಇಂದುಶ್ರೀ ಮ್ಯಾಜಿಕ್‌ನ್ನು ಗುರು-ಶಿಷ್ಯ ಪರಂಪರೆಯಲ್ಲಿ ಯಾರಿಂದಲೂ ಕಲಿತವರಲ್ಲ. ಅವರ ಫ್ಯಾಮಿಲಿ ಫ್ರೆಂಡ್ ಕೇಶವ್ ಜಾದೂಗಾರ್ ಮೊದಲು ಸಣ್ಣ ಸಣ್ಣ ಟ್ರಿಕ್ಸ್ ಕಲಿಸಿದರಂತೆ. ಅದರಿಂದ ಆಸಕ್ತಿ ಹೆಚ್ಚಾಗಿ ಸಿ.ಡಿ, ಪುಸ್ತಕಗಳನ್ನು ನೋಡಿ ಅಭ್ಯಾಸ ಮಾಡಿದರು. ಜಾದೂಗಾರರಾದ ಎ.ಕೆ.ದತ್, ಉದಯ್ ಜಾದೂಗಾರ್, ಕುದ್ರೋಳಿ ಗಣೇಶ್‌ರೆಲ್ಲಾ ಪ್ರೋ ನೀಡಿದರು. ಈ ವೆಂಟಿಲಾಟಿಸ್‌ಮ್ ಕೂಡಾ ಹಾಗೆಯೇ. ಯಾರೋ ಮಾಡಿದ್ದನ್ನು ನೋಡಿ ಆಸಕ್ತಿ ಬಂದು ತನ್ನ ಪಾಡಿಗೆ ತಾನು ಕಲಿತದ್ದು. ಗಂಟೆಗಟ್ಟಲೆ ಅಭ್ಯಾಸ ಮಾಡಿದ್ದು. ಪಾಲ್‌ವಿಂಚಿನ್ ಅಂಥವರ ಸಿ.ಡಿ ನೋಡಿ ಕರಗತ ಮಾಡಿಕೊಂಡದ್ದು. ಹಾಗೆ ಒಮ್ಮೆ ಮ್ಯಾಜಿಕ್ ಷೋನಲ್ಲಿ ಕೋತಿ ತಗೊಂಡು ಹೋಗಿ ಮಾತಾಡಿಸಿದ್ದು. ಬಳಿಕ ದತ್ತಾ ಅಂಕಲ್ ಅವರು, ರಾಮಸ್ವಾಮಿ ಅವರಿಂದ ಈ ಡಿಂಕು ಗೊಂಬೆ ಕೊಡಿಸಿದರಂತೆ.

'ಈ ಮಾತಾಡೋ ಗೊಂಬೆ ಡಿಂಕು ಜನಪ್ರಿಯನಾದ ನಂತ್ರ, ಮ್ಯಾಜಿಕ್ ಷೋ ಹೊರಗಡೆ ಮಾಡ್ತಾ, ಟಿವಿನಲ್ಲಿ ಡಿಂಕು ಮಾತ್ರ ಬರ್‍ತಾನೆ. ಅದನ್ನೊಂದು ಗೊಂಬೆ ಅನ್ನೋದಕ್ಕಿಂತ ಕ್ಯಾರೆಕ್ಟರ್ ಆಗಿ ಜನ ಸ್ವೀಕರಿಸಿದ್ದಾರೆ. ಅವನು ಹಿಂದು-ಮುಸ್ಲಿಂ-ಕ್ರಿಶ್ಚನ್ ಆಗಿದ್ದಾನೆ. ಸಮಾಜಕ್ಕೆ ಒಳ್ಳೇ ಸಂದೇಶ ಕೊಡೋ ಕೆಲಸ ಮಾಡ್ತಿದ್ದಾನೆ. ಬಾಂಬ್ ಬ್ಲಾಸ್ಟ್ ಬಗ್ಗೆ , ಚಿಕುನ್‌ಗುನ್ಯಾ ಬಗ್ಗೆ ಹೀಗೆ ಸಮಕಾಲೀನ ವಿಷಯಗಳನ್ನೇ ನಾವು ಚರ್ಚಿಸ್ತೀವಿ. ಈ ಕಾನ್ಸೆಪ್ಟ್‌ಗಳಿಗೆ ರಾಮನಾಥ್ ಅಂತ ಒಬ್ಬರು ನನಗೆ ಹೆಲ್ಪ್ ಮಾಡ್ತಾರೆ. ತತ್‌ಕ್ಷಣದ ಪ್ರತಿಕ್ರಿಯೆ-ಸ್ಪಂದನೆ ಇದಕ್ಕೆ ಮುಖ್ಯ. ಲೈವ್ ಶೋನಲ್ಲಿ ಅಂತೂ ಯಾರ್‍ಯಾರೋ ಏನೇನೋ ಪ್ರಶ್ನೆ ಕೇಳ್ತಾರೆ. ಅವುಗಳನ್ನು ನಿಭಾಯಿಸುವ ಸ್ಕಿಲ್ ಬೇಕು' ಅಂತಾಳೆ ಈಕೆ. ಮೂರು ಗೊಂಬೆಗಳ ಜತೆ ಏಕಕಾಲದಲ್ಲಿ ನೀಡಿದ ಪ್ರದರ್ಶನದಿಂದ ಲಿಮ್ಕಾ ರೆಕಾರ್ಡ್ ದಾಖಲಿಸಿದ್ದು ಇಂದುಶ್ರೀ ಹೆಗ್ಗಳಿಕೆ. ಪ್ರತಿ ಶನಿವಾರ `ಸ್ಟಾರ್ ನ್ಯೂಸ್' ಚಾನೆಲ್‌ನಲ್ಲಿ ಲಿಮ್ಕಾ ರೆಕಾರ್ಡ್‌ಗಳ ಬಗ್ಗೆಯೇ `ವಾಹ್ ಇಂಡಿಯಾ' ಎಂಬ ಕಾರ್ಯಕ್ರಮ ಪ್ರಸಾರವಾಗುತ್ತದೆ. ಅದರಲ್ಲಿ ಕಳೆದ ಆಗಸ್ಟ್‌ನಲ್ಲಿ ಇವರ ಕಾರ್ಯಕ್ರಮ ಪ್ರಸಾರವಾಯಿತು. ಅದರಲ್ಲಿ ಎರಡು ಗೊಂಬೆಗಳನ್ನು ಎರಡು ಕೈಗಳಲ್ಲಿ, ಇನ್ನೊಂದನ್ನು ಕಾಲಲ್ಲಿ ಕುಣಿಸಿದರು, ಮಾತಾಡಿಸಿದರು. ಪ್ರತಿಯೊಂದು ಗೊಂಬೆಗೂ ತನ್ನದೇ ದನಿ, ಹಾವಭಾವಗಳು ! ಹೀಗೆ ಮೂರು ಗೊಂಬೆಗಳೂ ಏಕಕಾಲದಲ್ಲಿ ಅಭಿನಯಿಸುತ್ತಾ, ಇಂದುಶ್ರೀಯೂ ಅವುಗಳೊಂದಿಗೆ ಬೆರೆತು ಮಾತಾಡುವುದಕ್ಕೆ ಅಸಾಧಾರಣ ಅಭ್ಯಾಸವೇ ಬೇಕಲ್ಲ. `ಕೆಲವರು ಗೊಂಬೆಗಳನ್ನ ತುಂಬಾ ವಲ್ಗರ್ ಆಗಿ ಯೂಸ್ ಮಾಡ್ತಾರೆ. ನಾನು ಯಾವತ್ತೂ ಹಾಗೆ ಮಾಡಿಲ್ಲ, ಮಾಡೋಲ್ಲ. ಆದರೆ ಎಲ್ಲ ವರ್ಗದ ಜನರಿಗೂ ಇಷ್ಟ ಆಗಬೇಕು ಅನೋದು ನನ್ನಾಸೆ. ಕಾಮಿಡಿ ಇದ್ದಾಗ ಚಿಕ್ಕವರಿಂದ ದೊಡ್ಡವರವರೆಗೆ ಅಟ್ರ್ಯಾಕ್ಟ್ ಆಗ್ತಾರೆ. ಒಮ್ಮೆ ಲೈವ್ ಪ್ರೊಗ್ರಾಮ್‌ನಲ್ಲಿ ಕಾಲ್ ಮಾಡಿದೋರು- ಡಿಂಕು ರಾಜ್‌ಕುಮಾರ್ ಥರಾ. ಯಾವ ಪಾತ್ರ ಹಾಕಿದ್ರೂ ಸೂಟ್ ಆಗತ್ತೆ ಅಂದಿದ್ರು' ಅಂತಾರೆ ಇಂದುಶ್ರೀ. ಕೆಂಪೇಗೌಡ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ, ಕರ್ನಾಟಕ ಮಹಿಳಾ ರತ್ನ ಪ್ರಶಸ್ತಿ, ಸೌಂದರ್ಯ ಪ್ರಶಸ್ತಿ ಹೀಗೆ ಹತ್ತಾರು ಸನ್ಮಾನಗಳು ಇವರಿಗೆ ಸಂದಿವೆ. ಕಳೆದ ವರ್ಷ ಮೈಸೂರು ದಸರಾದ ಹಾಸ್ಯೋತ್ಸವದಲ್ಲಿ `ಮಾತಾಡುವ ಗೊಂಬೆ' ಕಾರ್ಯಕ್ರಮಕ್ಕೆ ದೊರೆತ ಅಮೋಘ ಪ್ರತಿಕ್ರಿಯೆ ಇವರಿಗೆ ಸದಾ ನೆನಪು.

ಶಾಲೆಗೆ ಹೋಗ್ತಿದ್ದಾಗ ಸೈಂಟಿಸ್ಟ್ ಆಗಬೇಕು ಅಂತ ಕನಸು ಕಾಣುತ್ತಿದ್ದ ಇಂದುಶ್ರೀ, ಈಗ ಅಪ್ಪ ,ಅಮ್ಮ ಹಾಗೂ ತಮ್ಮನೊಡಗೂಡಿ ಮೂರ್‍ನಾಲ್ಕು ಗಂಟೆಗಳ ಮ್ಯಾಜಿಕ್ ಕಾರ್ಯಕ್ರಮ ಕೊಡುತ್ತಾರೆ. ಹೀಗೆ ಕಳೆದ ಹದಿನಾಲ್ಕು ವರ್ಷಗಳಲ್ಲಿ ಸುಮಾರು ೨,೮೦೦ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಕಮಲಹಾಸನ್ ಸ್ಫೂರ್ತಿಯಿಂದ `ಡಿಂಕೂಸ್ ದಶಾವತಾರಂ' ನಡೆಸಿರುವ ಈಕೆ, ಸ್ವಲ್ಪ ಮಟ್ಟಿಗೆ ಹಾಡುತ್ತಾ, ಸಂಗೀತ ಸಾಧನಗಳನ್ನು ನುಡಿಸುತ್ತಾ, ಪೇಂಟಿಂಗ್ ಚೆನ್ನಾಗಿ ಮಾಡುವ ದಶಾವತಾರಿಯೇ. ಡಿಂಕು ಗೊಂಬೆಯು ಕೃಷ್ಣನಾಗಿ, ಡಿಂಕಾನಂದ ತೀರ್ಥಾನಂದ ಸ್ವಾಮೀಜಿಯಾಗಿ ಬಂದಾಗಲೆಲ್ಲ ಬಹಳ ಜಾಗ್ರತೆ ಬೇಕು. ತಮಾಷೆ ನೆಪದಲ್ಲಿ ಸ್ವಲ್ಪ ತುಟಿ ಮೀರಿದರೂ ಅದು ಸಮಸ್ಯೆ ಸೃಷ್ಟಿಸಬಹುದೆಂಬ ಎಚ್ಚರ ಇವರಿಗಿದೆ. ಇವರ ಪ್ರದರ್ಶನದ ಯಶಸ್ಸಿರುವುದು ಧ್ವನಿಯ ಮಾಂತ್ರಿಕತೆಯಲ್ಲಿ ಮತ್ತು ಸಂದರ್ಭಗಳನ್ನು ನಿರೂಪಿಸುವ ಜಾಣ್ಮೆಯಲ್ಲಿ. ಯಾವುದೋ ಸಿನಿಮಾ, ನಾಟಕದ ದೃಶ್ಯಗಳನ್ನು ಅನುಕರಿಸದೆ, ಹೊಸ ಹೊಸ ಹಾಸ್ಯ ದೃಶ್ಯಗಳನ್ನು ಹೆಣೆಯುವುದು ಇವರ ವೈಶಿಷ್ಟ್ಯ. ಅವುಗಳನ್ನು ಧ್ವನಿ ಚಮತ್ಕಾರದೊಂದಿಗೆ ಬೆಳೆಸುತ್ತಾ ಹಾಸ್ಯದ ಪಂಚಿಂಗ್ ಮತ್ತು ತೀವ್ರ ಪ್ರತ್ಯುತ್ಪನ್ನ ಮತಿತ್ವ ಕಾರ್‍ಯಕ್ರಮದ ಯಶಸ್ಸಿಗೆ ಮುಖ್ಯ ಕಾರಣ. ಯಾವುದೇ ಕಾರ್ಯಕ್ರಮವಾಗಿರಲಿ, ಯಾವುದೇ ವಿಷಯವಾಗಿರಲಿ, ಡಿಂಕು ಜತೆ ಇಂದುಶ್ರೀ ಬಂದರೆಂದರೆ ನಗೆ ಹೊನಲು ಗ್ಯಾರಂಟಿ. ಐದು ಗೊಂಬೆಗಳನ್ನು ಏಕಕಾಲದಲ್ಲಿ ಮಾತನಾಡಿಸಿ ಗಿನ್ನಿಸ್ ದಾಖಲೆ ಮಾಡಬೇಕೆಂಬ ಆಸೆ ಇಂದುಶ್ರೀಗೆ, ಗುಡ್‌ಲಕ್ ಅನ್ನಿ.

9 comments:

Ittigecement November 19, 2008 at 8:00 AM  

ಭೇಷ್.. ಪ್ರಯತ್ನಕ್ಕೆ ಫಲ ಉಂಟು.. ಇಂದುಶ್ರೀಯವರ ಟಿ.ವಿ.೯ ಲ್ಲಿ ಕಾರ್ಯಕ್ರಮ ನೋಡಿದ್ದೆ. it was realy good.

ತುಂಬಾ ಚೆನ್ನಾಗಿ ಬರೆದಿದ್ದೀರಿ..

ಅಭಿನಂದನೆಗಳು.. ಹಾಗೂ.. ಧನ್ಯವಾದಗಳು..

Anonymous,  November 19, 2008 at 8:42 PM  

Indu Shree avarige good luck.
nimage thanks
- Chetana

Sushrutha Dodderi November 19, 2008 at 8:44 PM  

Hmmm... ’ಸಂಸ’ದಲ್ಲಿ ನಡೆದ ರವಿ ಬೆಳಗೆರೆ ಕಾರ್ಯಕ್ರಮವೊಂರಲ್ಲಿ ಇಂದುಶ್ರೀ ಕೊಟ್ಟ ಹತ್ತು-ಹದಿನೈದು ನಿಮಿಷದ ಪ್ರದರ್ಶನ ನೋಡಿದ್ದೆ.. She is a very talented girl, for no doubt. ಇಂದುಶ್ರೀಗೆ ಆಲ್ ದಿ ಬೆಸ್ಟ್.
ಮತ್ತೆ, ಬ್ಲಾಗ್‍ಲೋಕದಲ್ಲಿ ಹೀಗೆ ವ್ಯಕ್ತಿ ಪರಿಚಯ ಮಾಡ್ಸೋ ಪರಿಪಾಠ ಅಪರೂಪ. So, ಸುಧನ್ವಂಗೆ ಅಭಿನಂದನೆ. :-)

Anonymous,  November 22, 2008 at 2:01 AM  

she is really a nice performer. maatadovaaga avre maataaDiddu anta kandu hidyoke aagolla

ಯಜ್ಞೇಶ್ (yajnesh) November 27, 2008 at 2:31 AM  

ನಾನೂ ಒಬ್ಬ ಡಿಂಕು ಅಭಿಮಾನಿ. ಇಂದುಶ್ರೀ ನಡೆಸುವ ಹಾಸ್ಯಕ್ಕೆ ಒಂದು ಇತಿಮಿತಿಯಿರುತ್ತದೆ. ಅದಕ್ಕೆ ಬಹಳ ಇಷ್ಟವಾಗುತ್ತದೆ.
ಅವರ ಬಗ್ಗೆ ಪರಿಚಯಿಸದ್ದಕ್ಕೆ ಧನ್ಯವಾದಗಳು.

ಸುಪ್ತದೀಪ್ತಿ suptadeepti November 27, 2008 at 5:25 PM  

ಡಿಂಕು ಮತ್ತು ಇಂದುಶ್ರೀ ಬಗ್ಗೆ ತಿಳಿಸಿದ್ದಕ್ಕೆ ಬಹಳಷ್ಟು ಧನ್ಯವಾದಗಳು. ಇನ್ನೂ ಎಳೆಯ ಹುಡುಗಿ ಇಂದುಶ್ರೀ ಇನ್ನಷ್ಟು ಬೆಳೆಯಲಿ, ಗೌರವ ಘನತೆ ಸಂಪಾದಿಸಲಿ ಅಂತ ಹಾರೈಕೆಗಳು.

Anonymous,  November 27, 2008 at 10:56 PM  

ಇಂದು ಶ್ರೀ ಪ್ರೋಗ್ರಾಂ ಚೆನ್ನಾಗಿದೆ,...ನಂದೂ ಗುಡ್ ಲಕ್!
-ಚಿತ್ರಾ

Lanabhat January 18, 2009 at 9:04 AM  

http://in.youtube.com/watch?v=Y6RvGg_qi4E

youtube nalli hudukidaga sikkiddu

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP