August 28, 2008

ಬ್ಲೂಟೂತ್ ಇದೆಯಾ ಅಂದರೆ ಆಕಳಿಸುವುದುಂಟೆ ?!

ಬೆಂಗಳೂರಿಗೆ ಬಂದು ವಾರವಾಗಿತ್ತಷ್ಟೆ. ಅದೆಂಥದೋ ಮುಜುಗರ, ಹಿಂಜರಿಕೆ. ದೊಡ್ಡ ಕೆಲಸ ಇಲ್ಲದ್ದಕ್ಕೆ , ಇಂಗ್ಲಿಷ್ ಬಾರದ್ದಕ್ಕೆ , ಯಾರದೋ ಮನೆಯಲ್ಲಿ ತಿಂದದ್ದಕ್ಕೆ ...ಊಹೂಂ ಖಂಡಿತಾ ಅಲ್ಲ. ಅವನ್ನೆಲ್ಲ ನೋಡಿದ ಕೂಡಲೇ ತಿಳಿಯಬಲ್ಲವರು ಯಾರೂ ಇಲ್ಲ. ಆದರೆ....

ಬಸ್ಸಿನ ಪಕ್ಕದಲ್ಲಿ ಕೈಗಾಡಿ ತಳ್ಳಿಕೊಂಡು ಹೋಗುವವನೂ ಮೊಬೈಲ್ ಫೋನ್‌ನಲ್ಲಿ ಮಾತಾಡುವುದನ್ನು ಕಂಡಾಗ ಅಸಹನೀಯ ವೇದನೆ ! ಗಿಜಿಗುಟ್ಟುವ ಮಾರ್ಕೆಟ್‌ನ ಮಧ್ಯೆ ನಿಂತು ಅಮ್ಮನ ಜತೆ ಮಾತಾಡಬೇಕು ಅಂತ ಆಸೆ. ಗೊತ್ತಿಲ್ಲದ ನಂಬರ್‌ನಿಂದ ಬಂದ ಒಂದು ಮೆಸೇಜ್ ಓದಿ ಪುಳಕಿತನಾಗಬೇಕು ಅಂತ ಬಯಕೆ. ತುಂಬಿದ ಬಸ್ಸಿನಲ್ಲಿ ಸಕಲ ಗಲಾಟೆಯ ಮಧ್ಯೆ ಕಿವಿಗೆ ಇಯರ್‌ಫೋನ್ ಸಿಕ್ಕಿಸಿಕೊಂಡು ಸ್ವತಂತ್ರನಾಗಬೇಕೆಂಬ ಹಂಬಲ. ಅಂತೂಇಂತೂ ಆರು ತಿಂಗಳುಗಳು ಕಳೆದವು. ೨೦೦೪ನೇ ಇಸವಿ ಆಗಸ್ಟ್ ತಿಂಗಳಲ್ಲಿ ನನಗೂ ಬೇಕಾದಾಗ ಬೇಕಾದಲ್ಲಿ ಮಾತಾಡುವ ಸ್ವಾತಂತ್ರ್ಯಸಿಕ್ಕಿತು. ಕಪ್ಪು-ಬಿಳಿ 'ಬಣ್ಣದ ' ೧೧೦೦ ನೋಕಿಯಾ ಮೊಬೈಲ್‌ಗೆ ಎರಡೂಮುಕ್ಕಾಲು ಸಾವಿರ ರೂಪಾಯಿ ಹೋಯಿತು.

ಅದಕ್ಕೊಂದು ಸಣ್ಣ ದಾರ ಕಟ್ಟಿ ಜೇಬಿನಿಂದ ಹೊರಗೆ ನೇತಾಡುವಂತೆ ಇಟ್ಟುಕೊಳ್ಳುವುದು, ಜಾಸ್ತಿ ಹೊರಗೆ ಬಂದರೆ ಬಿದ್ದುಬಿಟ್ಟೀತೆಂದ ಭಯವಾಗುವುದು, ಅದು ಹೊರಗೆ ಕಾಣದಿದ್ದರೆ ನನ್ನ ಬಳಿ ಮೊಬೈಲಿರುವುದು ಬೇರೆಯವರಿಗೆ ತಿಳಿಯುವುದಿಲ್ಲವೆಂದೂ ಚಡಪಡಿಕೆಯಾಗುವುದು ! ಅದಾಗಿ ವರ್ಷದ ಬಳಿಕ ಬ್ಲ್ಯಾಕ್ ಅಂಡ್ ವೈಟ್ ಹ್ಯಾಂಡ್‌ಸೆಟ್ಟುಗಳೆಂದರೇ ಅವಮಾನವೆಂಬ ಜಾಹೀರಾತುಗಳನ್ನು ನೋಡಿ ನೋಡಿ, ದೊಡ್ಡದೊಡ್ಡವರೆದುರು ಈ ಹಳೆ ಸೆಟ್ಟು ತೆಗೆಯಲೇ ಕೆಲವೊಮ್ಮೆ ಮುಜುಗರವಾದರೂ, ಆರು ತಿಂಗಳಿಗೊಮ್ಮೆ ಮೊಬೈಲ್ ಬದಲಿಸೋದ್ರಲ್ಲಿ ಅರ್ಥ ಇಲ್ಲ ಅಂತ ಹೇಳಿಕೊಂಡಿದ್ದೆ. ವರ್ಷಕ್ಕೆ ನಾಲ್ಕು ಬಾರಿ ಮೊಬೈಲ್ ಬದಲಿಸುವ ಅಸಲಿ ಜಂಗಮರ ಬಗ್ಗೆ ಓರೆ ದೃಷ್ಟಿ ಬೀರಿಕೊಂಡಿದ್ದೆ. ಬ್ಲೂಟೂತ್ ಇದೆಯಾ ಅಂತ ಕೇಳಿದರೆ ಬಾಯಿ ಆಕಳಿಸುತ್ತಿದ್ದೆ ! ಕೊನೆಗೂ ಭರ್ತಿ ೩ ವರ್ಷ ೧೦ ತಿಂಗಳ ಬಳಿಕ ಹೊಸತೊಂದು ಮೊಬೈಲ್ ಕೊಂಡುಕೊಂಡೆ.

ಆದರೂ ಆಗೀಗ ಹೊಸ ಮೊಬೈಲಿನ ಸಿಮ್ ತೆಗೆದು, ಹಳೆ ಮೊಬೈಲಿಗೆ ಹಾಕಿಕೊಂಡರೆ ಒಂದು ಥರದ ಖುಶಿಯಿರುತ್ತದೆ। ಆಗ ನಾನದನ್ನು ಲೀಲಾಜಾಲವಾಗಿ ಬಳಸುತ್ತೇನೆ. (ಕೆಟ್ಟರೂ ಚಿಂತೆಯಿಲ್ಲದ ಧೈರ್ಯದಲ್ಲಿ !) ಇದನ್ನು ಯಾರಿಗೂ ಮಾರುವುದಿಲ್ಲ ಎನ್ನುತ್ತೇನೆ .

'ಯಾವುದು ತಗೊಂಡಿ? ' ಕೇಳಿದ ಗೆಳೆಯ ರಘು.
'ನೋಕಿಯಾ ೫೩೧೦'.
'ಎಷ್ಟು?'
'ಒಂಬತ್ತು ಸಾವಿರ'
'ನನ್ ಹತ್ರ ಇರೋ ಮೊಬೈಲೇ ತಗೋಬಹುದಿತ್ತು. ೧೫ ಸಾವಿರ ಕೊಟ್ಟಿದ್ದು. ಬಹಳ ಚೆನ್ನಾಗಿದೆ.'
'ಆದರೆ ನನ್ನ ಬಜೆಟ್ ಹತ್ತರೊಳಗೇ ಇತ್ತು. ನಿನ್ನ ಹತ್ರ ಇರೋ ಮೊಬೈಲ್‌ಗೆ ಈಗ ಹನ್ನೊಂದು ಸಾವಿರ ಇದೆ '
'ಪುಣ್ಯ ಮಾರಾಯಾ, ಅಷ್ಟಾದರೂ ಇದೆಯಲ್ಲ' ಅಂತಂದು ತನ್ನ ಮೊಬೈಲನ್ನು ಪ್ರೀತಿಯಿಂದ ಸವರಿಕೊಂಡ !
ಮೊಬೈಲು ಫೋನ್‌ಗಳು ನಿಮ್ಮ ಘನತೆ ಕಾಪಾಡಲಿ.

5 comments:

ಸಿಂಧು sindhu August 29, 2008 at 6:09 AM  

ಸುಧನ್ವ,

ಚೆನಾಗಿದೆ ಬರಹ. ಓದಿ ಖುಶಿಯಾಯಿತು.
ಬ್ಲಾಗಿನ ಹೊಸ ಒಪ್ಪವೂ ಚೆನಾಗಿದೆ. ಭಾದ್ರಪದದ ಸಡಗರ..

ಬರೀತಾ ಇರಿ.

ಪ್ರೀತಿಯಿಂದ
ಸಿಂಧು

Karnataka Best August 30, 2008 at 10:54 AM  

ಮೊಬೈಲ್ಗೆ ಘನತೆ ಇದೆಯಾ ಸರ್.....?
ನಾನು ಡಬ್ಬ ಮೊಬೈಲ್ ಇಷ್ಟ ಪಡೋದು
ಯಾರೇ ಕದಿಯಲಿ
ನನ್ನ ನೆಮ್ಮದಿಗೆ ಭಂಗವಿಲ್ಲ(ಇದ್ರೆ ಸ್ವಲ್ಪ )

Anonymous,  September 8, 2008 at 4:45 AM  

ಬಹುಶಃ ತುಂಬಾ ಎಲೆಕ್ಟ್ರಾನಿಕ್ ವಸ್ತುಗಳ ನಡುವೆ ಜೀವನ ಕಳೆಯುವುದರಿಂದ ಇರಬೇಕು, ಮೊಬೈಲ್ ಕೊಳ್ಳುವಾಗ ಪ್ರಮುಖವಾಗಿ ನಮಗೆ ಅದರಲ್ಲಿ ಬೇಕಿರುವ features ನೋಡಿ ಕೊಳ್ಳುವುದು ರೂಢಿಯಾಗಿಬಿಟ್ಟಿದೆ. ಘನತೆಗೆ ಅಂತ ಇದ್ದದ್ದು ಕಡಿಮೆ.

ಕೊಳ್ಳೋದು ಕೂಡ ಏನೋ routine ಅನಿಸಿಬಿಡತ್ತೆ. ನನ್ನ ಮಟ್ಟಿಗೆ - ಅನಿವಾರ್ಯವಾಗಿ ಬೇಕಿತ್ತು, ತಗೊಂಡೆ - ಅಲ್ಲಿಗೆ ಮುಗಿಯಿತು ಕಥೆ!

shivu.k September 18, 2008 at 3:21 AM  

ನಿಮ್ಮ ಬ್ಲಾಗ್ ಚೆನ್ನಾಗಿದೆ. ಬರವಣಿಗೆ ಚೆನ್ನಾಗಿದೆ. ಮೊಬೈಲಿನಂತೆ ಅಪ್ ಡೇಟ್ ಅಗದಿದ್ದರೆ ನಾವು ಬೆಲೆ ಕಳಕೊಳ್ಳುತ್ತೇವೆ. ಇಲ್ಲಿ.

ಶಿವು. ಕೆ
http:/chaayakannadi.blogspot.com
www.flickr.com/photos/shivuimages

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP