June 20, 2008

ಬೆಳ್ಳೇಕೆರೆಯ ಹಳ್ಳಿ ಥೇಟರ್ - ಅಂಕ 5

ಸಕಲೇಶಪುರದಿಂದ ಪ್ರಸಾದ್ ರಕ್ಷಿದಿ ಬರೆಯುತ್ತಾರೆ...
ತೋಟದ ಜನಗಳು ನಾಟಕ ಮಾಡಿದ್ದು
ರುದಿನ ಸಂಜೆ ಕಾಫಿಕಣದಲ್ಲಿ ಎಲ್ಲರೂ ಸೇರಿದಾಗ ಚೆನ್ನವೀರನ ಬೇಡಿಕೆ ಚರ್ಚೆಗೆ ಬಂತು. ಕೂಟದಲ್ಲಿ ಹುಡುಗರೆಲ್ಲ ಓದುಬರಹ ಕಲಿಯಲು ಸಿದ್ಧರಾದರು. ಕಾಫಿ ಕಣದ ಪಕ್ಕದ ಎತ್ತರವಾದ ಸಿಮೆಂಟಿನ ಗೋಡೆಯೇ ಬೋರ್ಡು. ಚದರ ಬಿಲ್ಲೆ ಹಾಸಿದ ನೆಲವೇ ಸ್ಲೇಟು. ಇವರಲ್ಲದೆ ಶಾಲೆಗೆ ಸೇರಿದ್ದ ಕೆಲವು ಮಕ್ಕಳೂ ಬಂದರು. ಒಟ್ಟು ಇಪ್ಪತ್ತೆರಡು ಜನರಾದರು. ಪ್ರತಿಯೊಬ್ಬರೂ ಸ್ಲೇಟು ತಂದುಕೊಳ್ಳುವವರೆಗೆ ನೆಲದಲ್ಲೇ ಬರೆಯುವುದೆಂದುಕೊಂಡೆವು. ಚೆನ್ನವೀರ, ವಿಶ್ವನಾಥ - ಮೋನಪ್ಪ, ಕೃಷ್ಣಪ್ಪ, ಶೇಷಪ್ಪ, ಸರಸ್ವತಿ, ಸುಂದರಿ ಹೀಗೇ ಎಲ್ಲರೂ ಇದ್ದರು. ಇವರೆಲ್ಲ ತೋಟದಲ್ಲಿ ಕೆಲಸಕ್ಕೆ ಸೇರಿದ್ದರು. ಶಾಲೆಗೆ ಹೋಗುತ್ತಿದ್ದ ಗುಡ್ಡಪ್ಪ, ಚಂದಪ್ಪ, ಕೃಷ್ಣಪ್ಪ, ಶಂಕರ ಇತ್ಯಾದಿ ಮಕ್ಕಳೂ ಬರುತ್ತಿದ್ದರು. ಅಕ್ಷರಾಭ್ಯಾಸದ ಜೊತೆಯಲ್ಲಿ ಸಿನಿಮಾ ಕತೆಗಳು, ತೋಟದಲ್ಲಿ ನಡೆದ ಜಗಳಗಳ ತೀರ್ಮಾನ - ಇನ್ನಿತರ ಊರ ಸುದ್ದಿಗಳು ಇಲ್ಲಿ ಚರ್ಚೆಗೆ ಬರುತ್ತಿದ್ದವು. ಪ್ರತಿದಿನ ಕತ್ತಲಾಗುವವರೆಗೆ ನಮ್ಮ ಶಾಲೆಯು ನಡೆಯುತ್ತಿತ್ತು. ಮಳೆಗಾಲ ಬರುವ ವೇಳೆಗೆ ತೋಟದಲ್ಲಿ ನಮ್ಮೆಲ್ಲರ ವಾಸದ ಮನೆಗಳ ಹತ್ತಿರದಲ್ಲೇ ಒಂದು ಕೋಣೆಯಲ್ಲಿ ಸಿಮೆಂಟಿನ ಬೋರ್ಡು ಮಾಡಿಕೊಂಡೆವು. ಮುಂದೆ ಅಲ್ಲೇ ಶಾಲೆ ನಡೆಯುತ್ತಿತ್ತು. ಆ ಸಮಯದಲ್ಲಿ ಮನೆಗಳಿಗೆಲ್ಲ ತೋಟದಿಂದ 'ಲೈಟು' ಹಾಕಿಸಿದ್ದರು. ಹಾಗಾಗಿ ಶಾಲೆಯಲ್ಲಿ ಬೆಳಕಿನ ಸಮಸ್ಯೆ ಇರಲಿಲ್ಲ. ಆದ್ದರಿಂದ ರಾತ್ರಿ ಊಟ ಮಾಡಿ ಬಂದು ಹುಡುಗರೆಲ್ಲ ಶಾಲೆಯಲ್ಲೇ ಮಲಗಲಾರಂಭಿಸಿದರು. ಕೆಲವೊಮ್ಮೆ ಪಾಠಕ್ಕಿಂತ ಇತರ ಚರ್ಚೆಗಳೇ ಹೆಚ್ಚಾಗುತ್ತಿದ್ದವು.
ವರ್ಷ ಪಕ್ಕದ ಕ್ಯಾಮನಹಳ್ಳಿ ಪ್ರೈಮರಿ ಶಾಲೆಯಲ್ಲಿ ಸ್ಕೂಲ್ಡೇ ಮಾಡಿದರು. ಅಲ್ಲಿ ಊರವರೆಲ್ಲಾ ಸೇರಿ ಒಂದು ನಾಟಕವನ್ನೂ ಆಡಿದರು. ನಾಟಕ ಬೇಲೂರು ಕೃಷ್ಣಮೂರ್ತಿಯವರ 'ಪಜೀತಿ'. ನಮ್ಮ ತಂಡವೆಲ್ಲ ಸ್ಕೂಲ್‌ಡೇಗೆ ಹೋಯಿತು. ನಮ್ಮಲ್ಲಿನ ಕೆಲವು ಮಕ್ಕಳೂ ಆ ಶಾಲೆಗೆ ಹೋಗುತ್ತಿದ್ದರು. ಸ್ಕೂಲ್‌ಡೇ ಮುಗಿಸಿ ರಾತ್ರಿ ವಾಪಸ್ ಬರುವಾಗ ಅಂದಿನ ನಾಟಕದ ಬಗ್ಗೆ ಹುಡುಗರಲ್ಲಿ ಚರ್ಚೆ ಪ್ರಾರಂಭವಾಯಿತು. ನಾಟಕದಲ್ಲಿ ನಮ್ಮಲ್ಲಿಂದ ಆ ಶಾಲೆಗೆ ಹೋಗುತ್ತಿದ್ದ ಇಬ್ಬರು ಮಕ್ಕಳು ಪಾತ್ರ ಮಾಡಿದ್ದರು. ಎಲ್ಲರೂ ನಾಟಕದ ಬಗ್ಗೆ ಉತ್ಸಾಹದಿಂದ ಮಾತಾಡುತ್ತಿದ್ದರು.
'ಈಗ ನಾವೊಂದು ನಾಟಕ ಮಾಡಿದರೆ ಹೇಗೆ' ಎಂದು ಕೆಲವರಿಗೆ ಅನ್ನಿಸಿತು.
'ದುಡ್ಡು ಬೇಕಲ್ಲ' ಎಂದ ಒಬ್ಬ.
'ನಾವೆಲ್ಲ ಚಂದಾ ಹಾಕೋಣ' ಇನ್ನೊಬ್ಬ'.
'ತೋಟದಿಂದ ಕೇಳೋಣ '- 'ನಾಟಕ ಮಾಡಲು ನಮಗೆ ಸಾಧ್ಯವೆ?' -'ಆಡಿದರೆ ಎಲ್ಲಿ ಆಡೋದು' ಹೀಗೆಲ್ಲ ಅಭಿಪ್ರಾಯಗಳು ಬಂದವ. ಮಾರನೇ ದಿನ ಶಾಲೆಯಲ್ಲಿ ನಾಟಕದ ಬಗ್ಗೆ ಚರ್ಚೆ ನಡೆಯಿತು. ನಾವೆಲ್ಲ ಸೇರಿ ಒಂದು ನಾಟಕ ಮಾಡುವುದೆಂದು ತೀರ್ಮಾನವಾಯ್ತು. ಖರ್ಚಿಗೆ ನಾವೇ ಚಂದಾ ಹಾಕುವುದೆಂದೂ, ತೋಟದಿಂದ ಕೇಳುವುದು ಬೇಡವೆಂದೂ ನಿರ್ಧರಿಸಿದೆವು. ಆದಷ್ಟು ಕಡಿಮೆ ಖರ್ಚಿನಲ್ಲಿ ಕಾರ್ಯಕ್ರಮ ಮಾಡುವುದೆಂದು ಯೋಚಿಸಿದೆವು. ನಾಟಕ ಮಾಡುವ ಉತ್ಸಾಹದಲ್ಲಿ ಆ ದಿನ ರಾತ್ರಿ ಬಹಳ ಹೊತ್ತಿನವರೆಗೆ ಚರ್ಚೆ ನಡೆಯಿತು. ನಮ್ಮ ಶಾಲೆ - ನಾವು ಆಡಲಿರುವ ನಾಟಕ ಇವುಗಳನ್ನೆಲ್ಲ ವ್ಯವಸ್ಥಿತವಾಗಿ ಮಾಡಲು ಒಂದು ಸಂಘವನ್ನು ಮಾಡಿಕೊಳ್ಳುವುದೆಂದೂ, ಸಂಗ್ರಹಿಸಿದ ಮತ್ತು ಖರ್ಚುಮಾಡಿದ ಹಣಕ್ಕೆ ಸರಿಯಾಗಿ ಲೆಕ್ಕ ಇಡಬೇಕೆಂದೂ ತೀರ್ಮಾನಿಸಿದೆವು. ತೋಟದಲ್ಲಿ ಕೆಲಸ ಮಾಡುವವರ ಪ್ರತಿ ಮನೆಯಿಂದಲೂ ಒಬ್ಬೊಬ್ಬನನ್ನು ಸದಸ್ಯನನ್ನಾಗಿ ಮಾಡಿಕೊಂಡು ಒಂದು ಸಂಘ ಸ್ಥಾಪನೆಯಾಯಿತು. ಆ ಸಂಘಕ್ಕೆ 'ಕಾರ್ಮಿಕ ಮಿತ್ರ ಸಂಘ- ರಕ್ಷಿದಿ' ಎಂದು ಹೆಸರಿಟ್ಟೆವು. ಶಾಲೆಗೆ ಬರುವ ಪ್ರತಿಯೊಬ್ಬರೂ ವಾರಕ್ಕೆ ನಾಲ್ಕಾಣೆ ವಂತಿಗೆ ನೀಡಬೇಕೆಂದೂ ನಾಟಕ ಮುಗಿದ ನಂತರ ಹಣವೇನಾದರೂ ಉಳಿದರೆ ಅದರಲ್ಲಿ ಮಕ್ಕಳಿಗೆ ಪುಸ್ತಕ ಸ್ಲೇಟು ಇತ್ಯಾದಿಗಳನ್ನು ತರುವುದೆಂದೂ ಯೋಚಿಸಿದೆವು.
ನಾಟಕವನ್ನು ಆಯ್ಕೆ ಮಾಡುವ - ತರಬೇತಿ ನೀಡುವ ಜವಾಬ್ದಾರಿ ನನ್ನ ಮೇಲೆ ಬಿತ್ತು. ಸರಳ ಮನೋರಂಜನೆಯ ನಾಟಕ 'ರಿಹರ್ಸಲ್ ಗಡಿಬಿಡಿ' ಆರಿಸಿದೆ. ನಾಟಕದ ರಿಹರ್ಸಲ್ ಪ್ರಾರಂಭವಾಯಿತು. ಎಲ್ಲರೂ ಕೆಲಸ ಮುಗಿಸಿದ ನಂತರ ಆದಷ್ಟು ಬೇಗ ಶಾಲೆಯಲ್ಲಿ ಸೇರಬೇಕೆಂದು ತಿಳಿಸಿದ್ದೆ. ಆದರೆ ಶಾಲೆಯನ್ನು ನಿಲ್ಲಿಸಲು ಮನಸ್ಸಿರಲಿಲ್ಲ. ಪ್ರತಿದಿನದ ಅಕ್ಷರಾಭ್ಯಾಸದ ನಂತರ ರಿಹರ್ಸಲ್ ಮಾಡುತ್ತಿದ್ದೆವು. ಉಗ್ಗಪ್ಪನೊಬ್ಬನನ್ನು ಬಿಟ್ಟು ಉಳಿದ ಪಾತ್ರಧಾರಿಗಳಾದ ವಿಶ್ವನಾಥ, ಸುಂದರ , ಚೆನ್ನವೀರ, ಮೋನಪ್ಪ, ಶೇಷಪ್ಪ ಇವರ್‍ಯಾರಿಗೂ ಓದಲು ಬರುತ್ತಿರಲಿಲ್ಲ. ಒಂದೊಂದು ಅಕ್ಷರಗಳನ್ನು ಗುರುತಿಸುತ್ತಿದ್ದರು. ಉಗ್ಗಪ್ಪನ ತಮ್ಮ ಗುಡ್ಡಪ್ಪನೊಬ್ಬ ಶಾಲೆಗೆ ಹೋಗುತ್ತಿದ್ದು ಸ್ವಲ್ಪಮಟ್ಟಿಗೆ ಓದಬಲ್ಲವನಾಗಿದ್ದ. ಹೀಗಾಗಿ ಪ್ರತೀಪಾತ್ರದ ಮಾತನ್ನೂ ನಾನು ಗಟ್ಟಿಯಾಗಿ ಹೇಳಿ, ನಂತರ ಅವರಿಂದ ಹೇಳಿಸಬೇಕಿತ್ತು; ಜೊತೆಯಲ್ಲಿ ನಟನೆಯನ್ನೂ ಹೇಳಿಕೊಡಬೇಕಿತ್ತು. ಹುಡುಗರ ಉತ್ಸಾಹ ಎಷ್ಟಿತ್ತೆಂದರೆ ನಾನು ಗಟ್ಟಿಯಾಗಿ ಎಲ್ಲಾ ಸಂಭಾಷಣೆಯನ್ನು ಹೇಳುತ್ತಿದ್ದುದರಿಂದ ಎಲ್ಲರ ಮಾತೂ ಎಲ್ಲರಿಗೂ ಬರುತ್ತಿತ್ತು. ಅವರು ಇಡೀ ದಿನ ತೋಟದಲ್ಲಿ ಕೆಲಸ ಮಾಡುವಾಗಲೆಲ್ಲಾ ನಾಟಕದ ಮಾತುಗಳನ್ನು ಹೇಳಿಕೊಂಡು ತಿರುಗಿ - ತೋಟದ ಅನೇಕರಿಗೂ ಈ ಮಾತುಗಳು ಬಾಯಿಪಾಠವಾಗಿಬಿಟ್ಟವು. ನಾಟಕಕ್ಕೆ ಒಂದಷ್ಟು ಕೈಬರಹದ ಪೋಸ್ಟರ್‌ಗಳನ್ನು ಮಾಡಿದೆ. ಅದನ್ನು ಊರಲ್ಲೆಲ್ಲಾ ಅಂಟಿಸಿದೆವು. ಎಸ್ಟೇಟ್ ಬಂಗಲೆಯ ಆವರಣದಲ್ಲಿ ಎತ್ತರವಾದ ಸ್ಥಳವೇ ಸ್ಟೇಜ್. ನಾವೆಲ್ಲ ಕೆಲಸ ಮಾಡುತ್ತಿದ್ದ 'ಪೂರ್ಣಿಮಾ ಎಸ್ಟೇಟ್' ಕೇಂದ್ರ ರೈಲ್ವೆ ಸಚಿವರಾಗಿದ್ದ ಕೊಡಗಿನ ಸಿ.ಎಂ.ಪೂಣಚ್ಚ ಅವರಿಗೆ ಸೇರಿತ್ತು. ಅವರು ಇಲ್ಲಿ ವಾಸವಿರುತ್ತಿರಲಿಲ್ಲವಾದ್ದರಿಂದ ಬಂಗಲೆ ಯಾವಾಗಲೂ ಖಾಲಿ ಇರುತ್ತಿತ್ತು. ಎಸ್ಟೇಟಿನ ಮ್ಯಾನೇಜ್‌ಮೆಂಟ್ ಎನ್.ಕೆ.ಗಣಪಯ್ಯನವರು ಮಾಡುತ್ತಿದ್ದರು. (ಹಾರ್ಲೆ ಗ್ರೂಪ್ ಆಫ್ ಎಸ್ಟೇಟ್ಸ್.) ಹಾಗಾಗಿ ಬಂಗಲೆಯ ಖಾಲಿ ಆವರಣ ನಮಗೆ ಅನುಕೂಲವಾದ ಸ್ಥಳವಾಗಿತ್ತು. ಅಲ್ಲಿ ವಿದ್ಯುತ್ ಸೌಲಭ್ಯವೂ ಇತ್ತು.
ಕಾಲದಲ್ಲಿ ಕಾಫಿ ತೋಟದ ಕೆಲಸಗಾರರಿಗೆ ಮಳೆಗಾಲದಲ್ಲಿ ತೋಟದಲ್ಲಿ ಕೆಲಸ ಮಾಡುವಾಗ ಮಳೆಯಿಂದ ರಕ್ಷಣೆ ಪಡೆಯಲು ಕುಪ್ಪೆ ಹಾಕಿಕೊಳ್ಳಲು ತೋಟದಿಂದ ಕಂಬಳಿ ಕೊಡುತ್ತಿದ್ದರು. ಇದು ಸಾಮಾನ್ಯವಾಗಿ ಕಂದು, ಕಪ್ಪು ಬಣ್ಣದಲ್ಲಿರುತ್ತಿತ್ತು. ನಾಟಕದ ಪಾತ್ರಧಾರಿಗಳೆಲ್ಲ ತಮ್ಮ ತಮ್ಮ ಮನೆಯಿಂದ ಒಂದೊಂದು ಕಂಬಳಿ ತಂದರು. ಈ ಕಂಬಳಿಗಳೇ ಸ್ಟೇಜಿನ ಹಿಂದಿನ ಪರದೆಗಳಾದವು. ವಿಂಗ್‌ಗಳಿಗೆ ಮನೆ ಮನೆಗಳಿಂದ ಸೀರೆಗಳನ್ನು ತಂದು ಕಟ್ಟಿದೆವು. ಸೀಮೆ ಎಣ್ಣೆ ಟಿನ್ ಕತ್ತರಿಸಿ ಅದರೊಳಗೆ ಬಲ್ಬ್ ಹಾಕಿ ಲೈಟುಗಳು ತಯಾರಾದವು. ಕೆಲವು ಸಣ್ಣ ಪುಟ್ಟ ರಂಗಸಜ್ಜಿಕೆ - ಪರಿಕರಗಳನ್ನು ತಯಾರಿಸಿಕೊಂಡೆವು. ಜೊತೆಗೆ ಹಾನುಬಾಳಿನ ಜೋಸೆಫ್‌ನ ಮೈಕ್ ಕೂಡಾ ಬಂತು.
ನಾಟಕಕ್ಕೆ ಊರವರನ್ನೆಲ್ಲಾ ಆಹ್ವಾನಿಸಿದೆವು. ತೋಟದ ಮಾಲೀಕರೂ ಬಂದರು. ನಾಟಕದ ದಿನ ನಮ್ಮ ನಟನೊಬ್ಬ 'ನಾನು ಮೀಸೆ ಬೋಳಿಸಲು ತಯಾರಿಲ್ಲ' ವೆಂದು ತರಲೆ ತೆಗೆದು ಹವ್ಯಾಸಿ ರಂಗಭೂಮಿಯ ಸಮಸ್ಯೆಗಳನ್ನು ನೆನಪುಮಾಡಿಕೊಟ್ಟು ಶುಭಾರಂಭ ಮಾಡಿದ! ಅವನನ್ನು ಹೇಗೋ ಸುಧಾರಿಸಿದೆವು. ನಾಟಕಕ್ಕೆ ಮೊದಲು ಮಕ್ಕಳಿಂದ ಒಂದು ರೂಪಕವನ್ನು ಮಾಡಿಸಿದ್ದೆವು. ಇದರಲ್ಲಿ ನಮ್ಮ 'ಹಾಡಿನ ಪೆಟ್ಟಿಗೆ' ಯ ಒಂದಿಬ್ಬರು ಮಕ್ಕಳೂ ಇದ್ದರು. ಇವನು ತನ್ನ ಮಕ್ಕಳು ನಾಟಕದಲ್ಲಿದ್ದಾರೆಂದು ಖುಷಿಯಿಂದ ರೇಡಿಯೋದೊಂದಿಗೆ ಹಾಜರಾಗಿ - ಮುಂದಿನ ಸಾಲಿನಲ್ಲಿ ಕೂತಿದ್ದ. ವಾರ್ತೆ ಬರುವ ಸಮಯಕ್ಕೆ ಇವನು ರೇಡಿಯೋ ಹಾಕಿದ್ದರಿಂದ ಯಾರೋ ಇವನನ್ನು ಬಯ್ದು ಹಿಂದಕ್ಕೆ ಅಟ್ಟಿದರು! ನಾಟಕ ಮಾಮೂಲು ಸ್ಕೂಲ್‌ಡೇ ನಾಟಕಗಳಿಗಿಂತ ಚೆನ್ನಾಗಿ ಬಂತು. ನಾಟಕಕ್ಕೆ ಸುಮಾರು ಮುನ್ನೂರು ಜನರು ಬಂದಿದ್ದರು. ನಾಟಕ ಒಂದೂವರೆ ಗಂಟೆಯ ಅವಧಿಯದಿತ್ತು. ನಾಟಕ ಮುಗಿದ ತಕ್ಷಣ ಮುಂದಕ್ಕೆ ಬಂದ 'ಹಾಡಿನ ಪೆಟ್ಟಿಗೆ' ನಾಟಕಕ್ಕೆ ತಾನು 'ಹತ್ತು ರೂಪಾಯಿ ಇನಾಮು' ನೀಡುವುದಾಗಿ ಘೋಷಣೆ ಮಾಡಿ ಭಾರೀ ಚಪ್ಪಾಳೆ ಗಿಟ್ಟಿಸಿದ!
'ಪರ್‍ವಾಗಿಲ್ಲ ತೋಟದ ಜನಗಳಾದ್ರೂ ಚೆನ್ನಾಗಿ ಮಾಡಿದ್ರು' ಎಂದರು ಊರ ಜನ. ಹುಡುಗರಿಗೆ ನಾಟಕದ ರುಚಿ ಹತ್ತಿತ್ತು. ತೋಟದ ಮಾಲೀಕರು ಈ ನಾಟಕದ ಖರ್ಚನ್ನು ತಾವೇ ನೀಡುವುದಾಗಿ ತಿಳಿಸಿ, ಬಹುಮಾನಗಳನ್ನೂ ಕೊಟ್ಟರು. ನಾಟಕಕ್ಕೆ ಒಟ್ಟು ನೂರಾ ನಲವತ್ತು ರೂಪಾಯಿ ಖರ್ಚಾಗಿತ್ತು. ಆಗ ತೋಟದಲ್ಲಿ ಕೆಲಸದವರಿಗೆ ದಿನಗೂಲಿ ಐದು ರೂಪಾಯಿ ಇತ್ತು.

7 comments:

Anonymous,  July 1, 2008 at 1:11 AM  

kaayisuvudu yeshtu tappo gotta?

Anonymous,  July 1, 2008 at 1:11 AM  

kaayisuvudu yeshtu tappo gotta?

ಸಿಂಧು sindhu July 8, 2008 at 10:23 PM  

ಪ್ರಿಯ ಸುಧನ್ವ,

ತುಂಬ ಚೆನಾಗಿ ಬಂದಿದೆ ಈ ಶೋ. ರಕ್ಷಿದಿಯವರಿಗೆ ನನ್ನ ವಂದನೆಗಳನ್ನು ತಿಳಿಸಿಬಿಡಿ.

ನಾಟಕ ಪ್ರದರ್ಶನದ ಸನ್ನಿವೇಶ ಓದುತ್ತಾ ಗೊರೂರು ಅವರ - ನಮ್ಮ ಊರಿನ ರಸಿಕರು - ನೆನಪಾಯಿತು. ವಿಶೇಷವಾಗಿ ವಾರ್ತೆ ಬರುವ ಸಮಯಕ್ಕೆ ರೇಡಿಯೋ ಹಾಕಿದ್ದು.

ಒಂದು ಹವ್ಯಾಸ/ಕಲೆ ಕಷ್ಟದ ನಡುವಿನ ಬದುಕನ್ನು ಅರಳಿಸುವ ರೀತಿ ನೋಡಿ ನೆಮ್ಮದಿಯೆನಿಸಿತು.

ಪ್ರೀತಿಯಿಂದ
ಸಿಂಧು

Anonymous,  August 5, 2008 at 4:38 AM  

ಸುಧನ್ವ,
ಈ ಪ್ರಸಂಗದ ನಂತರ ಮತ್ತೇನೂ ಕಾಣ ಬರುತ್ತಿಲ್ಲವಲ್ಲ?
ಏನಾಯಿತು? ಒಮ್ದು ತಿಂಗಳೆಲ್ಲ ಹೀಗೆ ಆಬ್ಸೆಂಟಾದರೆ ಹೇಗೆ ಮಾರಾಯರೆ?
ಮುಂದಿನ ಪೋಸ್ಟಿಗಾಗಿ ಕಾಯುತ್ತ ಇದೇವೆ.
:)
-ಟೀನಾ

Anonymous,  August 5, 2008 at 11:11 PM  

thanks. coming soon ! -champakavati

Sharath Akirekadu August 12, 2008 at 12:20 AM  

Yenadru bariri swamy...kaadu kaadu sustayitu...

Anonymous,  August 13, 2008 at 5:33 AM  

ನಮಸ್ತೇ,

ಬರುವ ಸೋಮವಾರ ಹದಿನೆಂಟನೆ ತಾರೀಖು ಸಂಜೆ ಆರು ಗಂಟೆಗೆ ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್ ನಲ್ಲಿ ನನ್ನ ಪುಸ್ತಕ ‘ಭಾಮಿನಿ ಷಟ್ಪದಿ’ ಬಿಡುಗಡೆಯಾಗಲಿದೆ.

ಅವತ್ತು ಪ್ರೊ. ವಿವೇಕ್ ರೈ, ಜಿ.ಪಿ.ಬಸವ ರಾಜು ಅವರು ವೇದಿಕೆಯಲ್ಲಿರುತ್ತಾರೆ. ಗೆಳತಿ, ಬರಹಗಾರ್ತಿ ಟೀನಾ ಪುಸ್ತಕದ ಬಗ್ಗೆ ಮಾತನಾಡುತ್ತಾಳೆ. ಎಲ್ಲಕ್ಕಿಂತ ಮುಖ್ಯವಾಗಿ ಅಲ್ಲಿ ಅವತ್ತು ನೀವು ಇರುತ್ತೀರಿ.

ನಿಮ್ಮೆಲ್ಲರ ಸ್ನೇಹ- ಪ್ರೀತಿಗಳ ಸವಿಯನ್ನು ಈ ಒಂದು ವರ್ಷದಿಂದ ಉಣ್ಣುತ್ತಲೇ ಬಂದಿದ್ದೇನೆ. ನಿಮಗೆಲ್ಲರಿಗೂ ನಾನು ಋಣಿ.
ನೀವು ‘ಸೋಮವಾರ’ ಇತ್ಯಾದಿ ಯಾವ ನೆವವನ್ನೂ ಹೇಳದೆ ಅಂದಿನ ಕಾರ್ಯಕ್ರಮಕ್ಕೆ ಬಂದರೆ ನನಗೆ ಬಹಳ ಬಹಳ ಖುಷಿಯಾಗುತ್ತದೆ. ನೀವೆಲ್ಲರೂ ಖಂಡಿತ ಬರಲೇಬೇಕು.
ಇದು ನನ್ನ ಪ್ರೀತಿಪೂರ್ವಕ ಒತ್ತಾಯ.

ಕಾದಿರುತ್ತೇನೆ.

ವಂದೇ,
ಚೇತನಾ ತೀರ್ಥಹಳ್ಳಿ

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP