May 30, 2008

ಶಂಕರ ಬಟ್ಟರ ಸುಲಬ ಬಾಶೆಯ ಬಗ್ಗೆ

ತಿರುಮಲೇಶ್ವರ ಭಟ್ಟ, ಸೂರ್ಯನಾರಾಯಣ ಭಟ್ಟ ಎಂಬೆಲ್ಲ ಹೆಸರುಗಳನ್ನು ಓದಿದವರಿಗೆ `ಶಂಕರ ಬಟ್' ಎಂಬುದು ವಿಚಿತ್ರವಾಗಿ ಕಾಣಿಸಬಹುದು. (ಆದರೆ ಇದು ವಿಚಿತ್ರವಾದರೂ ಸತ್ಯ !) `ಎಂತ ಮಾರಾಯ ನಿನಿಗೆ ಭಾಷೆ ಇಲ್ವಾ?'ಅನ್ನುವುದು ದಕ್ಷಿಣಕನ್ನಡದ ಮಾಮೂಲಿ ಬೈಗುಳ. ಶಂಕರ ಬಟ್ರಿಗಾದರೆ ಅದು ಹೊಗಳಿಕೆ ! ಅವರದ್ದು ಭಾಷೆಯಲ್ಲ ಬಾಶೆ. ಭಟ್ಟರು ಪ್ರತಿಪಾದಿಸುತ್ತಿರುವ ಹೊಸ ಕನ್ನಡ ಬರಹವನ್ನು ಬೆಂಬಲಿಸುತ್ತಿರುವವರಲ್ಲಿ ಹಿರಿಯರಾದ ಕಿ.ರಂ.ನಾಗರಾಜ ಕೂಡಾ ಒಬ್ಬರು.

ಅಂತಹ ಬಟ್ಟರು ಬರೆದ ಪುಸ್ತಕಗಳ ಪಟ್ಟಿ ಮೊದಲು ಗಮನಿಸಿ -

೧. ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ- ೨೦೦೦,೨೦೦೧, ದೊಡ್ಡ ಮಾಡಿರುವ ಮೂರನೇ ಮುದ್ರಣ ೨೦೦೬

೨.ಕನ್ನಡ ಬರಹವನ್ನು ಸರಿಪಡಿಸೋಣ ! -2005

೩. ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹುದು ? -೨೦೦೫

४. ಕನ್ನಡ ಪದಗಳ ಒಳರಚನೆ -೧೯೯೯, ದೊಡ್ಡ ಮಾಡಿರುವ ಎರಡನೇ ಮುದ್ರಣ ೨೦೦२

೫. ಕನ್ನಡದ ಸರ್‍ವನಾಮಗಳು - ೨೦೦3

६. ಬಾಶೆಯ ಬಗ್ಗೆ ನೀವೇನು ಬಲ್ಲಿರಿ? -೧೯೭೦, ದೊಡ್ಡ ಮಾಡಿರುವ ಮೂರನೇ ಮುದ್ರಣ ೨೦೦2

7. ಕನ್ನಡ ವಾಕ್ಯಗಳ ಒಳರಚನೆ -೨೦೦೪, ಎರಡನೇ ಮುದ್ರಣ ೨೦೦೬

ಇವೆಲ್ಲವೂ ಹೆಗ್ಗೋಡಿನ `ಬಾಶಾ ಪ್ರಕಾಶನ'ವು ಪ್ರಕಟಿಸಿದ ಸುಮಾರು ಇನ್ನೂರು ಪುಟಗಳ ಪುಸ್ತಕಗಳು. ಅದು ೨೦೦೭ರಲ್ಲಿ ಪ್ರಕಟಿಸಿರುವ `ಕನ್ನಡ ನುಡಿ ನಡೆದು ಬಂದ ದಾರಿ' ಇತ್ತೀಚೆಗಿನ ಪುಸ್ತಕ. ಅದರ ಬೆನ್ನುಡಿಯಲ್ಲಿ ಹೀಗಿದೆ :

"ಸಂಸ್ಕ್ರುತದಲ್ಲಿ ಎಂ.ಎ. ಮತ್ತು ಬಾಶಾ ವಿಜ್ನಾನದಲ್ಲಿ ಪಿಹೆಚ್.ಡಿ ಮಾಡಿ ಪುಣೆ, ತಿರುವನಂತಪುರ, ಇಂಪಾಲ್ ಮತ್ತು ಮಯ್ಸೂರುಗಳಲ್ಲಿ ಸಂಶೋದನೆ ಮತ್ತು ಕಲಿಸುವಿಕೆಗಳನ್ನು ಮಾಡಿ ಬಿಡುವು ಪಡೆದಿದ್ದಾರೆ. ಇಂಗ್ಲೆಂಡ್, ಅಮೆರಿಕ, ಬೆಲ್ಜಿಯಂ, ಜರ್‍ಮನಿ, ಆಸ್ಟ್ರೇಲಿಯಾಗಳಲ್ಲಿ ತಿಂಗಳು- ವರ್‍ಶ, ಅಂತ ಸಂಶೋದನೆ ಮಾಡಿದ್ದಾರೆ. ಇಂಗ್ಲಿಶ್‌ನಲ್ಲಿ ಅವರು ಬರೆದ ಪುಸ್ತಕಗಳು ಮತ್ತು ಇತರ ಬರಹಗಳು ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಪ್ರಕಟಿತವಾಗಿ ವಿಮರ್‍ಶಕರ ಮನ್ನಣೆ ಪಡೆದಿವೆ. ಇತ್ತೀಚೆಗೆ ಸರ್‍ವನಾಮಗಳ ಮೇಲೆ ಇವರು ಬರೆದ ಪುಸ್ತಕವನ್ನು ಆಕ್ಸ್‌ಪರ್‍ಡ್ ವಿಶ್ವವಿದ್ಯಾಲಯ ಪ್ರಕಟಿಸಿದೆ. ಕನ್ನಡ ನುಡಿಯ ಚರಿತ್ರೆಯ ಕುರಿತು ಇದಕ್ಕೂ ಮೊದಲೇ ಇವರು ಬರೆದಿದ್ದ (ಕನ್ನಡ ಬಾಶೆಯ ಕಲ್ಪಿತ ಚರಿತ್ರೆ) ಹಂಪಿಯ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿತ್ತು. ಆ ಪುಸ್ತಕವನ್ನು ಬಳಸಿ ಮತ್ತು ಹಲವಾರು ಹೊಸ ವಿಶಯಗಳನ್ನೂ ಸೇರಿಸಿ ಈ ಪುಸ್ತಕವನ್ನು ತಯಾರಿಸಲಾಗಿದೆ. ಕನ್ನಡ ನುಡಿ ಮತ್ತು ಮೂಲ ದ್ರಾವಿಡ ನುಡಿಗಳ ಕುರಿತಾಗಿ ಇತ್ತೀಚಿನವರೆಗೂ ನಡೆದಿರುವ ಸಂಶೋದನೆಗಳನ್ನು ಇದು ಒಳಗೊಂಡಿದೆ."

ಶಂಕರ ಬಟ್ಟರ ಮುಖ್ಯ ವಾದಗಳನ್ನು ಅವರದೇ ಬಾಶೆಯಲ್ಲಿ ಇಲ್ಲಿ ಓದಿ -

* ಸಂಸ್ಕ್ರುತದಿಂದ ಎರವಲಾಗಿ ಪಡೆದ ಪದಗಳನ್ನು ಕನ್ನಡದಲ್ಲಿ ಬರೆಯುವಾಗ ಅವು ಸಂಸ್ಕ್ರುತದಲ್ಲಿ ಹೇಗಿವೆಯೋ ಹಾಗೆಯೇ ಬರೆಯುವ ಅವಶ್ಯಕತೆಯಿಲ್ಲ ; ಅವು ನಮ್ಮ ಉಚ್ಚಾರಣೆಯಲ್ಲಿ ಹೇಗಿವೆಯೋ ಹಾಗೆ ಬರೆದರೆ ಸಾಕು ಎಂಬ ನಿರ್‍ಣಯದ ಮೇಲೆ ಈ `ಹೊಸ ಬರಹ'ವನ್ನು ಯೋಜಿಸಲಾಗಿದೆ. ಬೇರೆ ಬಾಶೆಗಳಿಂದ ಎರವಲಾಗಿ ಬಂದ ಪದಗಳನ್ನು ನಾವು ನಮ್ಮ ಉಚ್ಚಾರಣೆಗನುಸಾರವಾಗಿ ಬರೆಯುತ್ತೇವಲ್ಲದೆ ಆ ಬಾಶೆಗಳಲ್ಲಿರುವ ಹಾಗೆ ಬರೆಯುವುದಿಲ್ಲ. ಇಂಗ್ಲಿಶ್‌ನಲ್ಲಿ ಎರಡು ವಕಾರಗಳಿವೆ, ಎರಡು ಶಕಾರಗಳಿವೆ, ಎರಡು ಸಕಾರಗಳಿವ. ಆದರೆ ಇವನ್ನೆಲ್ಲ ನಾವು ಒಂದೇ ರೀತಿ ಬರೆಯುತ್ತೇವೆ .ಹಳೆಗನ್ನಡದಲ್ಲೇನೇ ಳ ಮತ್ತು `ಇನ್ನೊಂದು ಳ ' (ಅದನ್ನಿಲ್ಲಿ ಮೂಡಿಸಲು ನನಗೆ ತಿಳಿಯುತ್ತಿಲ್ಲ!-ಚಂ)ಹಾಗೂ ರ ಮತ್ತು 'ಇನ್ನೊಂದು ರ 'ಗಳ ನಡುವೆ ವ್ಯತ್ಯಾಸವಿತ್ತು. ಆದರೆ ನಾವು ಅದನ್ನೂ ಹೊಸಗನ್ನಡದಲ್ಲಿ ಬಿಟ್ಟುಕೊಟ್ಟಿದ್ದೇವೆ. ಹೀಗಿರುವಾಗ ಹಳೆಗನ್ನಡದ ಸಮಯಕ್ಕಿಂತಲೂ ಹಿಂದೆ ಸಂಸ್ಕ್ರುತದಲ್ಲಿ ಇದ್ದಿರಬಹುದಾದ ವ್ಯತ್ಯಾಸಗಳನ್ನು ಸಂಸ್ಕ್ರುತಕ್ಕಿಂತ ತೀರ ಬೇರೆಯಾಗಿರುವ ಕನ್ನಡ ಬಾಶೆಯ ಬರಹಗಳಲ್ಲಿ ಇವತ್ತಿಗೂ ಉಳಿಸಿಕೊಳ್ಳಬೇಕೆಂದು ಹೇಳುವುದು ಯಾವ ರೀತಿಯಲ್ಲೂ ಸಮರ್ತನೀಯವಲ್ಲ. ಕನ್ನಡಿಗರ ಮಾತಿನಲ್ಲಿ ಸಂಸ್ಕ್ರುತ ಪದಗಳಲ್ಲಿ ಬರುವ ಮಹಾಪ್ರಾಣಾಕ್ಶರಗಳು ಅಲ್ಪಪ್ರಾಣಾಕ್ಶರಗಳಾಗಿ ಉಚ್ಚಾರವಾಗುತ್ತವೆ ; ಷಕಾರ ಶಕಾರವಾಗಿ, ಋಕಾರ ರು ಎಂಬುದಾಗಿ, ವಿಸರ್‍ಗ ಸ್ವರದ ಮೊದಲು ಹಕಾರವಾಗಿ ಮತ್ತು ವ್ಯಂಜನದ ಮೊದಲು ಆ ವ್ಯಂಜನದ ಒತ್ತಕ್ಶರವಾಗಿ , ಐ ಮತ್ತು ಔಗಳು ಅಯ್ ಮತ್ತು ಅವ್‌ಗಳಾಗಿ ಉಚ್ಚಾರವಾಗುತ್ತವೆ. ಹಾಗಾಗಿ ಸಂಸ್ಕ್ರುತ ಪದಗಳಲ್ಲಿ ಮಾತ್ರವೇ ಬರುವ ಈ ಎಲ್ಲಾ ಅಕ್ಷರಗಳನ್ನು (ಮತ್ತು ಕನ್ನಡ ಪದಗಳಲ್ಲೂ ಬರುವ ಐ, ಔಗಳನ್ನು) `ಹೊಸ ಬರಹ'ದಲ್ಲಿ ಅವುಗಳ ಉಚ್ಚಾರಣೆಗನುಸಾರವಾಗಿ ಬರೆಯಲಾಗುತ್ತದೆ.ಅಲ್ಲದೆ ಅವಶ್ಯವಿಲ್ಲವಾದ ಅರ್ಕ ಒತ್ತು () ಮತ್ತು ಕನ್ನಡ ಲಿಪಿಯಲ್ಲಿ ಸೊನ್ನೆ (ಅನುಸ್ವಾರ)ಯನ್ನು ಕೆಲವು ವಿಶಿಶ್ಟವಾದ ಸಂದರ್ಬಗಳಲ್ಲಿ ಮೂಗುಲಿ(ಅನುನಾಸಿಕ)ಗಳ ಬದಲು ಬಳಸುವ ಕಾರಣ, ಞ ಮತ್ತು ಙಗಳ ಅವಶ್ಯಕತೆಯಿಲ್ಲ.

*ಮೀಸಲಾತಿಯಿಂದಾಗಿ ಹೇಗೆ ಹೆಚ್ಚು ಹೆಚ್ಚು ಮಂದಿ ಕೆಳವರ್‍ಗದ ಜನರು ಸಮಾಜದಲ್ಲಿ ಮೇಲೆ ಬರುತ್ತಿದ್ದಾರೋ ಹಾಗೆಯೇ ಈ ಹೊಸ ಬರಹದ ಬಳಕೆಯಿಂದಾಗಿ ಹೆಚ್ಚು ಹೆಚ್ಚು ಮಂದಿ ಕೆಳವರ್‍ಗದ ಜನರು ಕನ್ನಡ ಬರಹವನ್ನು ಕೀಳರಿಮೆಯಿಲ್ಲದೆ ಬಳಸುವಂತಾಗಬಲ್ಲರೆಂಬುದರಲ್ಲಿ ಸಂಶಯವಿಲ್ಲ. *ಈ ಪುಸ್ತಕದಲ್ಲಿ ಹೆಚ್ಚಚ್ಚು ಕನ್ನಡದ್ದೇ ಆದ ಪದಗಳನ್ನು ಉಂಟುಮಾಡಿ ಬಳಸಿದ್ದೇನೆ . ತಡೆಯುಲಿ, ಮಡಚಿದ ತಡೆಯುಲಿ, ಉಜ್ಜುಲಿ, ಮುಂದಿನ ಸ್ವರ, ಮೇಲಿನ ಸ್ವರ, ಉದ್ದ ಸ್ವರ ಮೊದಲಾದ ಈ ಪದಗಳನ್ನು ಕಲಿಯುವುದು ಮತ್ತು ನೆನಪಿನಲ್ಲಿಟ್ಟುಕೊಳ್ಳುವುದು ಕನ್ನಡಿಗರಿಗೆ ಹೆಚ್ಚು ಸುಲಬವೆಂದು ತೋರುತ್ತದೆ. *ಕನ್ನಡ ಬರಹ ಒಳನಾಡಿನ ಒಳನುಡಿಯೊಂದರಿಂದ ಬೆಳೆದು ಬಂದಿದೆ. *ಕನ್ನಡವನ್ನು ಅದರೊಂದಿಗೆ `ನಂಟಸ್ತನ 'ವನ್ನು ತೋರಿಸುವ ತಮಿಳು,ಮಲಯಾಳ,ತೆಲುಗು,ತುಳು,ಗೋಂಡಿ,ಕೂಯಿ,ಕುಡುಕ್ ಮೊದಲಾದ ಬೇರೆ ಇಪ್ಪತ್ತು-ಇಪ್ಪತ್ತಯ್ದು ದ್ರಾವಿಡ ನುಡಿಗಳೊಂದಿಗೆ ಹೋಲಿಸಿ ನೋಡಲಾಗಿದೆ. ಈ ಎಲ್ಲಾ ನುಡಿಗಳೂ `ಮೂಲ ದ್ರಾವಿಡ' ಎಂಬ ಒಂದು ಮೂಲ ನುಡಿಯಿಂದ ಬೆಳೆದು ಬಂದಿರಬೇಕೆಂಬ ಕಲ್ಪನೆಯೇ ಈ ಪ್ರಯತ್ನಕ್ಕೆ ಅಡಿಗಲ್ಲಾಗಿದೆ. ಆದರೆ ಸಂಸ್ಕ್ರುತದೊಂದಿಗೆ ಕನ್ನಡಕ್ಕೆ ಯಾವ ರೀತಿಯ ನಂಟಸ್ತಿಕೆಯೂ ಇದೆಯೆಂದು ಹೇಳಲು ಸಾದ್ಯವಾಗುವುದಿಲ್ಲ. ಹಾಗೆ ಹೇಳಲು ಯಾವ ರೀತಿಯ ಆದಾರವೂ ದೊರಕದಿರುವುದೇ ಇದಕ್ಕೆ ಕಾರಣ.' (ಈ ಬಗ್ಗೆ ಆರ್. ಗಣೇಶರನ್ನು ಕೇಳೋಣವೇ?! - ಚಂ)

ವಿಸ್ತಾರವಾದ ಓದು - ಅಧ್ಯಯನವನ್ನು ಬೆನ್ನಿಗಿಟ್ಟುಕೊಂಡಿರುವ ಇವರ ವಾದ, ಒಂದೇ ಏಟಿಗೆ ತಳ್ಳಿಹಾಕುವಂಥದ್ದಲ್ಲ. ಹಾಗೆಂದು ಆ ಬಗ್ಗೆ ಎಲ್ಲೂ ವಿಶೇಷ ಆಸ್ಥೆಯೇ ಕಂಡುಬಾರದಿರುವುದು ಆಶ್ಚರ್ಯಕರ. ನಿಮಗೇನನಿಸ್ತಿದೆ ಹೇಳ್ತೀರಲ್ಲ?

Read more...

May 24, 2008

ಸನ್ ಆಫ್ . . . . . .

ಸುತ್ತ ನೆರೆದಿದ್ದ ಹಸ್ತಿನಾವತಿಯ ಸಮಸ್ತರ ಮಧ್ಯೆ, `ನೀನು ಯಾರ ಮಗ ?' ಎಂಬ ಕೃಪಾಚಾರ್ಯರ ಪ್ರಶ್ನೆಯು, ಕರ್ಣನ ಕಿವಿಗಳಿಗೆ ಕಠೋರವಾಗಿಯೇ ಕೇಳಿತು। ಅವನ ಪರವಾಗಿ ಉತ್ತರಿಸುವದಕ್ಕೆ ಅಲ್ಲಿ ಯಾರೂ ಇರಲಿಲ್ಲ। ತಲೆತಗ್ಗಿಸಿದ, ಹಿಂಜರಿದ, ಮುಜುಗರದ ಮುದ್ದೆಯಾದ. `ನೀವು ದೇವತೆಗಳಿಂದಲೇ ಹುಟ್ಟಿದ ಪಾಂಡವರೇ?' ಅಂತ ಯಾರೊಬ್ಬನೂ ಕೇಳಲಿಲ್ಲ. ಅವರ ಜತೆ ಋಷಿಗಳಿದ್ದರು, ಕುಂತಿಯಿದ್ದಳು. ಕಾಡಿನಿಂದ ಬಂದವರನ್ನು ಸೇರಿಸಿಕೊಂಡಿತು ಹಸ್ತಿನಾವತಿ . ದೊಡ್ಡವರ ಮಕ್ಕಳಾದರೆ ತಲೆಯೆತ್ತಿ ಎದೆಯುಬ್ಬಿಸಿ ನಡೆವ ಚೆಂದವೇ ಬೇರೆ. ಅಪ್ಪನಿಲ್ಲದ ಮಕ್ಕಳ ಸಂಕಟ ಅನುಭವಿಸಿದವರೇ ಬಲ್ಲರು.

ದ್ವಾಪರಯುಗದಲ್ಲಿ ಮೆರೆದ ಚಂದ್ರ ವಂಶಜರ ಪಟ್ಟಿ ಎಷ್ಟುದ್ದ ಇದೆಯೆಂದರೆ - ಚಂದ್ರನಿಂದ ಜನಮೇಜಯನವರೆಗೆ ಚಂದ್ರವಂಶದ ಸುಮಾರು ಇಪ್ಪತ್ತು ತಲೆಮಾರುಗಳ ಹೆಸರು ಹೇಳುತ್ತದೆ ಮಹಾಭಾರತ. ಮಹಾಭಾರತದಲ್ಲಿ ಒಂದು ಕುಟುಂಬದ ಕತೆಯು ಮಾನವ ಜನಾಂಗದ ಕತೆಯಾಗಿ ನಮ್ಮನ್ನು ರೋಮಾಂಚನಗೊಳಿಸಿದಂತೆ, ಅಮೆರಿಕದ ಅಲೆಕ್ಸ್ ಹೇಲಿಯು `ರೂಟ್ಸ್' ಕಾದಂಬರಿಯಲ್ಲಿ ಹೇಳಿದ ನಿಜದ ಕತೆಯೂ ಮತ್ತೊಂದು ಮಹಾಭಾರತದಂತಿದೆ. (ಅದನ್ನು `ತಲೆಮಾರು' ಹೆಸರಿನಲ್ಲಿ ಬಂಜಗೆರೆ ಜಯಪ್ರಕಾಶ್ ಕನ್ನಡಕ್ಕೆ ತಂದಿದ್ದಾರೆ.) ಹೇಲಿಯ ಅಜ್ಜನ-ಅಜ್ಜನ-ಅಜ್ಜನಾದ ಕುಂಟಾಕಿಂಟೆ ಎಂಬ ಆಫ್ರಿಕಾದ ಕರಿಯ, ೧೭೬೭ರಲ್ಲಿ ಅಮೆರಿಕಕ್ಕೆ ಗುಲಾಮನಾಗಿ ಸಾಗಿಸಲ್ಪಟ್ಟಿದ್ದ. ಆ ಕುಂಟಾಕಿಂಟೆಯಿಂದ ತನ್ನವರೆಗಿನ ವಂಶದ ನಿಜಕತೆಯನ್ನು ೧೯೬೫ರಿಂದ ಹನ್ನೆರಡು ವರ್ಷಗಳ ಕಾಲ ಹುಡುಕಿ ಅಧ್ಯಯನ ಮಾಡಿದ ಅಲೆಕ್ಸ್ ಹೇಲಿಯು ಅದಕ್ಕೆ ಕಾದಂಬರಿಯ ರೂಪ ನೀಡಿದ. ಕರಿಯರ ಮೇಲೆ ಬಿಳಿಯರು ಮಾಡಿದ ದೌರ್ಜನ್ಯಗಳಿಗೆ ಜೀವಂತ ಸಾಕ್ಷಿಯಂತಿರುವ ಈ ಕಾದಂಬರಿ ಜಗತ್ತಿನ ೩೭ ಭಾಷೆಗಳಿಗೆ ಅನುವಾದಗೊಂಡಿದೆ. ಅದೆಷ್ಟೊ ಜನ ಕರಿಯರು ಅದನ್ನು ಬೈಬಲ್ಲಿನಂತೆ ಮನೆಯಲ್ಲಿಟ್ಟುಕೊಂಡಿದ್ದಾರೆ.

ಮೂರ್‍ನಾಲ್ಕು ವರ್ಷಗಳ ಹಿಂದೆ ಓದಿದ್ದ ಆ ಪುಸ್ತಕ ಮೊನ್ನೆಮೊನ್ನೆ ಮತ್ತೆ ಕೈಗೆ ಬಂತು. ಆಗ ಮನೆಯಲ್ಲಿರುವ ಕಬ್ಬಿಣದ ಕರೀ ಪೆಟ್ಟಿಗೆಯೊಂದರಲ್ಲಿ ದಪ್ಪ ಬೈಂಡಿನ ಮೇಲೆ `ಸಂತಾನ ನಕ್ಷೆ' ಅಂತ ಬರೆದಿರುವ ಪುಸ್ತಕದ ನೆನಪಾಯಿತು. ಅಲೆಕ್ಸ್ ಹೇಲಿಯಿಂದ ಏಳು ತಲೆಮಾರುಗಳ ಹಿಂದೆ ಇದ್ದವನು ಕೈರಬಾ ಕುಂಟಾಕಿಂಟೆ. ಅದನ್ನು ಶೋಧಿಸಲು ಅವನಿಗೆ ೧೨ ವರ್ಷಗಳ ಅಧ್ಯಯನ-ತಿರುಗಾಟ ಬೇಕಾಯಿತು. ನನಗೆಷ್ಟು ಸಮಯ ಬೇಕಾದೀತು? ತಕ್ಷಣ ಜಾಲಾಡಿದೆ. ಅದರಲ್ಲಿ ಕ್ಷಣಮಾತ್ರದಲ್ಲಿ ಸಿಕ್ಕ ನಮ್ಮ ತಂದೆ ಮುಖಾಂತರದ ಹಿರಿ ತಲೆಯ ವಂಶಾವಳಿಯನ್ನು ಸುಮ್ಮನೆ ನಿಮ್ಮ ಮುಂದಿಡುತ್ತಿದ್ದೇನೆ. ಸುಧನ್ವಾ ದೇರಾಜೆ-ಸತ್ಯಮೂರ್ತಿ ದೇರಾಜೆ-ದೇರಾಜೆ ಎಂ.ಕೃಷ್ಣಯ್ಯ-ಎಂ.ಗಣಪಯ್ಯ-ಮಂಗಲ್ಪಾಡಿ ಕೃಷ್ಣಯ್ಯ-ಅಜ್ಜನಗದ್ದೆ ಸುಬ್ರಾಯ-ವೆಂಕಟೇಶ್ವರ-ನಾರಾಯಣ ಭಟ್ಟ-ಅಂಣಮರಿ ಗೋವಿಂದ ಹೆಗ್ಗಡೆ. ಹೀಗೆ ನನ್ನಿಂದ ಏಳು ತಲೆಮಾರುಗಳಾಚೆಗಿದ್ದ ಗೋವಿಂದ ಹೆಗ್ಗಡೆಯವರ ಕಾಲ ( ದಕ್ಷಿಣಕನ್ನಡದ ವಿಟ್ಲ ಬಳಿಯ ತಾಳಿಪಡ್ಪು ಎಂಬಲ್ಲಿ ವಾಸವಾಗಿದ್ದರಂತೆ. ನೂರಕ್ಕೂ ಹೆಚ್ಚು ವರ್ಷಗಳಷ್ಟು ಹಳೆಯದಾದ, ಅವರು ವಾಸವಾಗಿದ್ದರೆನ್ನಲಾದ ಮನೆ ಇತ್ತೀಚಿನವರೆಗೂ ಇತ್ತು.) ಸುಮಾರು ೧೭೬೦ನೇ ಇಸವಿ ಆಗಿದ್ದಿರಬಹುದೆಂದು ಅಂದಾಜು ಲೆಕ್ಕ ಹಾಕಿದೆ . ಅಂದರೆ ಕುಂಟಾಕಿಂಟೆಯ ಕಾಲ ! ಆಹಾ, ಖುಶಿಯಾದೆ. ಅಷ್ಟೇ ಅಲ್ಲ, ಅಜ್ಜನ ಫೋಟೊ ಎಲ್ಲರ ಮನೆಗಳಲ್ಲೂ ಇದೆ. ಅಜ್ಜನ-ಅಜ್ಜನ ಫೋಟೊ ಇದೆಯೇ? ನಮ್ಮಲ್ಲಿದೆ ಅನ್ನುವುದು ನನಗೆ ಗರ್ವದ ಸಂಗತಿ. (ಅವಕಾಶವಾದಾಗ ತೋರಿಸುತ್ತೇನೆ)

ಈಗ ಪಿತಾಮಹ ಪ್ರಪಿತಾಮಹರ ನೆನೆದು ನೀವ್ಯಾರಾದರೂ ಎಂಟು ತಲೆಮಾರುಗಳಿಗಿಂತ ಹಿಂದೆ ಹೋಗಬಲ್ಲಿರೇ?

Read more...

May 05, 2008

ಬೆಳ್ಳೇಕೆರೆಯ ಹಳ್ಳಿ ಥೇಟರ್ -ಅಂಕ ೪

ಸಕಲೇಶಪುರದಿಂದ ಪ್ರಸಾದ್ ರಕ್ಷಿದಿ ಬರೆಯುತ್ತಾರೆ
ಇಂದಿರಾಗಾಂಧಿಯ ಸಮಾಜವಾದಿ ಘೋಷಣೆ ದೇಶಾದ್ಯಂತ ಮೊಳಗುತ್ತಿತ್ತು. ಗೋಪಾಲಕೃಷ್ಣ ಅಡಿಗರು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಪ್ರಿನ್ಸಿಪಾಲ್‌ಗಿರಿಗೆ ರಾಜೀನಾಮೆ ನೀಡಿ ಜನಸಂಘದ ಪರವಾಗಿ ಎಲೆಕ್ಷನ್‌ಗೆ ನಿಂತಿದ್ದರು. ಅವರು ಬೆಂಗಳೂರಿನಿಂದ ಲೋಕಸಭೆಗೆ ಸ್ಪರ್ಧಿಸಿದ್ದರು. ಸಾಹಿತಿಗಳನೇಕರು ಅವರನ್ನು ಬೆಂಬಲಿಸಿದ್ದರು. ನಮ್ಮ ಕಾಲೇಜಿನಿಂದಲೂ ಅನೇಕ ಹುಡುಗರು ಅವರ ಪರ ಪ್ರಚಾರಕ್ಕೆ ಬೆಂಗಳೂರಿಗೆ ಹೋಗಿದ್ದರು. ಅಡಿಗರು ಕೆಂಗಲ್ ಹನುಮಂತಯ್ಯನವರ ವಿರುದ್ಧ ಸೋತರು. ಇಂದಿರಾ ಬಣ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದಿದ್ದರೂ ಅಲಹಾಬಾದ್ ಹೈಕೋರ್ಟ್ ಇಂದಿರಾಗಾಂಧಿ ವಿರುದ್ಧ ತೀರ್ಪು ನೀಡಿತ್ತು. ಆ ತೀರ್ಪಿನಿಂದ ವ್ಯಗ್ರರಾದ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿ ದೇಶವನ್ನೇ ಸೆರೆಮನೆ ಮಾಡಿದ್ದರು. ಜೆ.ಪಿ. ಸಂಪೂರ್ಣ ಕ್ರಾಂತಿಗೆ ಕರೆ ಕೊಟ್ಟಿದ್ದರು.

ಆ ವೇಳೆಗೆ ಓದು ಮುಗಿಸಿ ನಾನು ಊರಿಗೆ ಬಂದೆ. ಮನೆಯ ಪರಿಸ್ಥಿತಿಯಿಂದಾಗಿ ನನ್ನ ದುಡಿಮೆಯು ಅನಿವಾರ್ಯವಾಗಿತ್ತು. ಅಪ್ಪ ಕೆಲಸ ಮಾಡುತ್ತಿದ್ದ ಹಾರ್ಲೆ ಗ್ರೂಪ್ ಆಫ್ ಎಸ್ಟೇಟ್‌ನಲ್ಲಿ ನಾನೂ ಕೆಲಸಕ್ಕೆ ಸೇರಿದೆ. ತೋಟದಲ್ಲಿದ್ದ ಡೈರಿ ಫಾರಂನ ಉಸ್ತುವಾರಿ ನನ್ನ ಉದ್ಯೋಗ. ಆ ಸಮಯದಲ್ಲಿ ನಾನು ಬರೆದ ಕತೆಯೊಂದು 'ಸುಧಾ"ದಲ್ಲಿ ಪ್ರಕಟವಾಗಿತ್ತು. ಹಾಗಾಗಿ ಊರಿನ ಸುತ್ತಮುತ್ತ ಕೆಲವರಲ್ಲಿ 'ರೈಟ್ರು ಮಗ ಕತೆ ಬರೀತಾನಂತೆ" ಎನ್ನುವ ಸುದ್ದಿ ಹಬ್ಬಿತ್ತು. ಆ ಕತೆಯಲ್ಲಿ ನಮ್ಮೂರಿನ ಕೆಲವರ ಚಿತ್ರಣವಿತ್ತು. ಅದನ್ನು ಓದಿದ ಕೆಲವರು, ಅಲ್ಲಲ್ಲಿ ಈ ಬಗ್ಗೆ ಪ್ರಚಾರ ಮಾಡಿದ್ದರಿಂದ ಊರವರಲ್ಲಿ ನನ್ನ ಬಗ್ಗೆ ಕುತೂಹಲ ಮೂಡಿತ್ತಾದರೂ, ಆ ಕಾಲದಲ್ಲಿ ನಮ್ಮೂರಿನಲ್ಲಿ ಕಥೆ ಬರೆಯುವವರೆಲ್ಲ ಕೆಲಸಕ್ಕೆ ಬಾರದ ನಾಲಾಯಕ ಜನರೆಂಬ ಧೃಡವಾದ ನಂಬಿಕೆಯೇ ಹೆಚ್ಚಿನವರಲ್ಲಿ ಇದ್ದುದರಿಂದ " ರೈಟ್ರು ಕಷ್ಟಪಟ್ಟು ಮಗನಿಗೆ ವಿದ್ಯೆ ಕಲಿಸಿದರೆ ಇವನು ಹೀಗಾದನಲ್ಲ' ಎಂದು ನಮ್ಮಪ್ಪನ ಬಗ್ಗೆ ಮರುಕ ತೋರಿದರು!

ಡೈರಿ ಕೆಲಸಗಾರರಾದ ಕೃಷ್ಣ, ಶಿವಪ್ಪ, ಸುಂದರ ಇತ್ಯಾದಿ ಎಲ್ಲರೂ ಹುಡುಗರೇ ಅಲ್ಲದೇ ತೋಟದ ಕೆಲಸಗಾರರಲ್ಲೂ ಅನೇಕ ಹುಡುಗರಿದ್ದರು. ವಿಶ್ವನಾಥ, ಶೇಷಪ್ಪ, ಚೆನ್ನವೀರ, ಮರಗೆಲಸ ಮಾಡುತ್ತಿದ್ದ ಉಗ್ಗಪ್ಪ. ಇವರು ಯಾರೂ ಶಾಲೆಗೇ ಹೋದವರಲ್ಲ. ಎಲ್ಲೋ ಕೆಲವರು ಕಾಟಾಚಾರಕ್ಕೆ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದರು. ಇಂಥವರಲ್ಲಿ ಕೃಷ್ಣಪ್ಪ-ವಿಜಯ ಮುಂತಾದ ಎಳೆಯರಿದ್ದರು. ತುರ್ತು ಪರಿಸ್ಥಿತಿಯ ವಿರುದ್ಧ ದೇಶದಾದ್ಯಂತ ವಿರೋಧ ವ್ಯಕ್ತವಾಗುತ್ತಿತ್ತು. ಎಡ-ಬಲ ಪಂಥೀಯರೆಲ್ಲ ಒಟ್ಟಾಗಿ ಇಂದಿರಾಗಾಂಧಿಯನ್ನು ವಿರೋಧಿಸುತ್ತಿದ್ದರು. ನಾವು ಕೆಲಸ ಮಾಡುತ್ತಿದ್ದ ಎಸ್ಟೇಟ್ ಮಾಲೀಕರಾದ ಎನ್.ಕೆ.ಗಣಪಯ್ಯ (ಇವರು ಸ್ವತಂತ್ರ ಪಾರ್ಟಿಯ ಉಪಾಧ್ಯಕ್ಷರಾಗಿದ್ದರು, ಮುಂದೆ ಚರಣ್‌ಸಿಂಗರ ನಿಕಟವರ್ತಿಯಾದರು.) ಇಂದಿರಾಗಾಂಧಿಯನ್ನು ವಿರೋಧಿಸಿ ಜೈಲಿಗೆ ಹೋದರು. ಸಕಲೇಶಪುರದಲ್ಲಿ ಪ್ರತಿವಾರವೂ ಪ್ರತಿಭಟನೆಗಳು ನಡೆಯುತ್ತಿದ್ದವು. ನನ್ನ ಬಾಲ್ಯದ ಹಾನುಬಾಳು ಶಾಲೆಯ ಸಹಪಾಠಿಗಳನೇಕರು ಜೈಲು ಸೇರಿದ್ದರು. ಯುವಕರ ಪೈಕಿ ಸತ್ಯನಾರಾಯಣ ಗುಪ್ತ ಮತ್ತು ಎಚ್. ಎಂ.ವಿಶ್ವನಾಥ್ ಜೈಲಿನಲ್ಲಿ ತೀವ್ರ ಹಿಂಸೆಗೊಳಗಾದರು. (ವಿಶ್ವನಾಥ್ ಈಗ ಸಕಲೇಶಪುರದ ಶಾಸಕರಾಗಿದ್ದಾರೆ.) ನಮ್ಮ ಉಗ್ಗಪ್ಪನೂ ಪ್ರತಿಭಟನೆ ಮಾಡಿ ಜೈಲು ಸೇರಿದ! ಉಗ್ಗಪ್ಪ ಎರಡು ತಿಂಗಳ ಕಾಲ ಜೈಲಿನಲ್ಲಿದ್ದ. ಅವನ ದುಡಿಮೆ ಇಲ್ಲದೆ ಅವನ ಮನೆಯವರಿಗೆ ತುಂಬಾ ತೊಂದರೆಯಾಯಿತು. ಉಗ್ಗಪ್ಪನಿಗಾಗ ಹದಿನೆಂಟು ವರ್ಷ ವಯಸ್ಸಾಗಿದ್ದಿರಬಹುದು. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದ. ಇವನ ತಾಯಿ ರಾಮಕ್ಕ, ಇವನ ಅಣ್ಣ ಪಾಪಣ್ಣ ಇವರೆಲ್ಲ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಇವರೊಂದಿಗೆ ಗಂಡನನ್ನು ಕಳೆದುಕೊಂಡಿದ್ದ ಇವನ ದೊಡ್ಡಮ್ಮ. ಅಲ್ಲದೆ ತೀರಿಕೊಂಡಿದ್ದ ಇವನ ಚಿಕ್ಕಮ್ಮನ ಒಂದಿಬ್ಬರು ಮಕ್ಕಳು. ಎಲ್ಲರೂ ಇವನೊಂದಿಗೇ ಇದ್ದರು. ಉಗ್ಗಪ್ಪ ಚಿಕ್ಕಂದಿನಲ್ಲಿ ದನ ಕಾಯುತ್ತಾ ಬೆಳೆದವನು. ನಂತರ ಮರಗೆಲಸ ಕಲಿತುಕೊಂಡಿದ್ದು ಸ್ವಂತ ಕೆಲಸ ಮಾಡುತ್ತಿದ್ದ. ಈತನ ತಮ್ಮ ಗುಡ್ಡಪ್ಪನೊಬ್ಬ ಮಾತ್ರ ದೂರದ ಕುಂಬರಡಿ ಶಾಲೆಗೆ ಹೋಗುತ್ತಿದ್ದ. ತೋಟದ ಜನರೆಲ್ಲಾ-ಉಗ್ಗಪ್ಪನಿಗೆ ಬೇಡದ ಕೆಲಸವೆಂದು ಬಯ್ಯತೊಡಗಿದರು. ಇದು ನಮ್ಮಂಥವರಿಗೆ ಹೇಳಿದ ಕೆಲಸವಲ್ಲ ಎಂದು ಹೇಳತೊಡಗಿದರು.ಕರ್ನಾಟಕದಲ್ಲಿ ದೇವರಾಜ ಅರಸರ ಆಡಳಿತ-ಹಿಂದುಳಿದವರಲ್ಲಿ-ಕೂಲಿಕಾರ್ಮಿಕರಲ್ಲಿ-ದಲಿತರಲ್ಲಿ ಹೊಸ ಆಸೆ ಭರವಸೆಗಳನ್ನು ಹುಟ್ಟ್ಟು ಹಾಕಿದ್ದರಿಂದ ಕೆಳವರ್ಗದ ಜನ ಸಾರಾಸಗಟಾಗಿ ಇಂದಿರಾಗಾಂಧಿ ಬೆಂಬಲಕ್ಕೆ ನಿಂತು ಬಿಟ್ಟಿದ್ದರು!

ತೋಟ ಕಾರ್ಮಿಕರ ವರ್ಗವಂತೂ ನೂರಕ್ಕೆ ನೂರು ಇಂದಿರಾಗಾಂಧಿ ಪರವೇ ಇತ್ತು. ನನಗೆ ಈಗಾಗಲೇ ಕೆಲವು ಸಂಘಟನೆಗಳ ಸಂಪರ್ಕ ಇದ್ದುದರಿಂದ ಕರಪತ್ರ ಹಂಚುವುದು, ಕೆಲವು ಭೂಗತ ಪತ್ರಿಕೆಗಳಿಗೆ ವರದಿ ಮಾಡುವುದು ಇತ್ಯಾದಿ ಮಾಡುತ್ತಿದ್ದೆ. ಪ್ರತಿದಿನ ಕೆಲಸ ಮುಗಿದ ನಂತರ ಸಂಜೆ ಸಾಮಾನ್ಯವಾಗಿ ಹುಡುಗರೆಲ್ಲ ಎಸ್ಟೇಟಿನ ಕಾಫಿ ಕಣದಲ್ಲಿ ಸೇರುತ್ತಿದ್ದೆವು. ಕಾಫಿ ಕಣವೂ ತುಂಬಾ ವಿಶಾಲವಾಗಿದ್ದು ಪಕ್ಕದಲ್ಲಿ ಸಾಕಷ್ಟು ಖಾಲಿ ಬಯಲು ಕೂಡಾ ಇತ್ತು. ಅಲ್ಲಿ ಯಾವುದಾದರೂ ಆಟ ಆಡುವುದು, ಬಾರದ ಕಲ್ಲೆಸೆಯುವುದು. ಕೆಲವೊಮ್ಮೆ ಫುಟ್‌ಬಾಲ್ ಆಡುವುದು ಅಥವಾ ಆವಾಗ ನಮ್ಮಲ್ಲಿ ಯಾರಾದರು ನೋಡಿದ ಸಿನಿಮಾದ ಕತೆಯನ್ನು ಉಳಿದವರಿಗೆ ರಸವತ್ತಾಗಿ ವರ್ಣಿಸುವುದು ಇತ್ಯಾದಿ ಮಾಡುತ್ತಿದ್ದೆವು. ಸಾಮಾನ್ಯವಾಗಿ ನಾನು ಯಾವಾಗಲೂ ರಾಜಕೀಯ ವಿಷಯಗಳನ್ನು ಮಾತಾಡುತ್ತಿದ್ದೆ. ಇದೇ ಸಮಯಕ್ಕೆ ಉಗ್ಗಪ್ಪನೂ ಜೈಲಿನಿಂದ ಬಿಡುಗಡೆಯಾಗಿ ಬಂದ. ನಾನಿದನ್ನು ಬರೆಯುತ್ತಿರುವ ಇಷ್ಟು ವರ್ಷಗಳ ನಂತರ ಈಗಲೂ ಇವನು ಮರಕೆಲಸವನ್ನು ಮಾಡುತ್ತಿದ್ದಾನೆ ಮತ್ತು ನಮ್ಮ ತಂಡದೊಂದಿಗೇ ಇದ್ದಾನೆ. ಉಗ್ಗಪ್ಪ ಶಾಲೆಯ ಮುಖವನ್ನೇ ನೋಡದಿದ್ದರೂ ಆರ್.ಎಸ್.ಎಸ್. ಶಾಖೆಗಳಿಗೆ ಹೋಗಿದ್ದುದರಿಂದ ಅನೇಕ ವಿಷಯಗಳನ್ನು ತಿಳಿದುಕೊಂಡಿದ್ದ. ಮತ್ತು ಸ್ವಂತವಾಗಿ ಓದಿ ಬರೆಯುವುದನ್ನು ಕಲಿತುಕೊಂಡಿದ್ದ. ಕೆಲವು ಸಾರಿ ನನಗೂ ಅವನಿಗೂ ಭಿನ್ನಾಭಿಪ್ರಾಯದಿಂದಾಗಿ ಜಗಳಗಳು ನಡೆಯುತ್ತಿದ್ದವು. ಆದರೆ ಇಂದಿರಾ ವಿರೋಧದಲ್ಲಿ ನಾವಿಬ್ಬರೂ ಜೊತೆಗಾರರಾಗಿದ್ದೆವು. ನಮ್ಮಿಬ್ಬರನ್ನು ಬಿಟ್ಟರೆ ತೋಟದ ಇಡೀ ಕಾರ್ಮಿಕವರ್ಗ ಇಂದಿರಾ ಬೆಂಬಲಿಗರಾಗಿದ್ದರು.ನಾನು ವಿದ್ಯಾಭ್ಯಾಸ ಮುಗಿಸಿ ಊರಿಗೆ ಬರುವ ವೇಳೆಗೆ ಲಕ್ಷ್ಮಯ್ಯನಿಗೆ ಮದುವೆಯಾಗಿ ಅವನು ಮೈಸೂರು ಜಿಲ್ಲೆಯ ತನ್ನ ಊರಿಗೆ ವಾಪಸ್ ಹೋಗಿದ್ದ. ಅವನ ಕುಟುಂಬದ ಕೆಲವು ಸದಸ್ಯರು ಕಾರಣಾಂತರದಿಂದ ತೋಟವನ್ನು ಬಿಟ್ಟು ಎರಡು ಕಿ.ಮೀ ದೂರದ ಬೆಳ್ಳೆಕೆರೆಗೆ ಹೋಗಿ ನೆಲೆಸಿದ್ದರು.೧೯೭೭ರ ಲೋಕಸಭಾ ಚುನಾವಣೆ ಬಂತು. ಜೈಲಿನಲ್ಲಿದ್ದವರೆಲ್ಲಾ ಬಿಡುಗಡೆಯಾಗಿ ಬಂದಿದ್ದರು. ಕಾಂಗ್ರೆಸ್ ವಿರೋಧಿಯಾಗಿದ್ದ ಉಗ್ಗಪ್ಪನಿಗೆ ಓಟೇ ಇರಲಿಲ್ಲ.(ಆಗ ಮತದಾನದ ವಯೋಮಿತಿ ೨೧ ವರ್ಷ ಇತ್ತು.) ಉತ್ತರ ಭಾರತದಲ್ಲಿ ಸೋತರೂ ಕರ್ನಾಟಕದಲ್ಲಿ ಕಾಂಗ್ರೆಸ್ ಕೋಟೆ ಭದ್ರವಾಗಿತ್ತು. ನಾನು ಮತ್ತು ಉಗ್ಗಪ್ಪ ನಮ್ಮ ಜೊತೆಯವರಲ್ಲಿ ಹಾಸ್ಯದ ವಸ್ತುವಾಗಿದ್ದೆವು. ಆದರೆ ಇಂದಿರಾಗಾಂಧಿ ಸೋತಿದ್ದರಿಂದ ಕೆಳವರ್ಗವೆಲ್ಲ ಆತಂಕಕ್ಕೊಳಗಾಗಿತ್ತು.ನಮ್ಮ ಕಾಫಿಕಣದ ಕೂಟದ ಕೂಟ ಹಾಗೇ ಮುಂದುವರಿದಿತ್ತು. ಪ್ರತಿದಿನವೂ ಬೇರೆಬೇರೆ ವಿಷಯಗಳ ಜೊತೆಯಲ್ಲಿ ರಾಜಕೀಯದ ಬಗ್ಗೆ ಚರ್ಚೆಯಂತೂ ಇದ್ದೇ ಇರುತ್ತಿತ್ತು.

ನಮ್ಮೊಂದಿಗೆ ತೋಟದಲ್ಲಿ ಕೆಲಸಮಾಡುತ್ತಿದ್ದವನೊಬ್ಬನಿಗೆ ಪ್ರತಿದಿನವೂ ಇವುಗಳನ್ನೆಲ್ಲ ಕೇಳಿ ಕೇಳಿ ಸುದ್ದಿ ತಿಳಿಯುವ ಹುಚ್ಚು ಹತ್ತಿ ಬಿಟ್ಟಿತ್ತು. ಯಾರಲ್ಲಿಯೋ ಸಾಲ ಮಾಡಿ ಒಂದು ಸೆಕೆಂಡ್‌ಹ್ಯಾಂಡ್ ರೇಡಿಯೋವನ್ನು ಕೊಂಡು ತಂದ! ಆ ಕಾಲದಲ್ಲಿ , ಊರಿನ ಶಾನುಭೋಗರಾಗಿದ್ದ ಬೆಳ್ಳೇಕೆರೆಯ ಅನಂತ ಸುಬ್ಬರಾಯರ ಮನೆಯೊಂದನ್ನು ಬಿಟ್ಟು, ಇಡೀ ಊರಿನಲ್ಲೇ ಯಾರ ಮನೆಯಲ್ಲೂ ರೇಡಿಯೋ ಇರಲಿಲ್ಲವಾದ್ದರಿಂದ, ತಾನು ಲೈಸೆನ್ಸ್ ಹಣಕಟ್ಟಿ ರೇಡಿಯೋ ತಂದದ್ದು ಅವನಿಗೆ ದೊಡ್ಡದೇನೋ ಸಾಧಿಸಿದಂತಹ ಹೆಮ್ಮೆಯ ವಿಷಯವಾಗಿತ್ತು। ಸಂತೆಗೆ ಹೋಗುವಾಗಲೂ ಅದನ್ನು ಹೆಗಲಿಗೇರಿಸಿಕೊಳ್ಳುತ್ತಿದ್ದ. ಪ್ರತಿ ದಿನ ಸಂಜೆ ನಮ್ಮ ಕಾಫಿಕಣದ ಕೂಟಕ್ಕೂ ಅದನ್ನು ತರುತ್ತಿದ್ದ. ಆದರೆ ಯಾರಿಗೂ ಅದನ್ನು ಮುಟ್ಟಲು ಬಿಡುತ್ತಿರಲಿಲ್ಲ. ಪ್ರತಿದಿನ ರೇಡಿಯೋದಲ್ಲಿ ಬರುತ್ತಿದ್ದ ವಾರ್ತೆಗಳನ್ನು ತಪ್ಪದೇ ಕೇಳಿಕೊಂಡು, ಅದಕ್ಕೆ ಕೈಕಾಲು- ತಲೆ-ಬಾಲ ಎಲ್ಲ ಸೇರಿಸಿ ವರ್ಣನೆ ಮಾಡಿ ಹೇಳುತ್ತಿದ್ದ. ಯಾರಾದರೂ ಅದು ಹಾಗಲ್ಲವೆಂದು ವಿವರಿಸಲು ಹೋದರೆ "ನೀವು ಏನಾರ ಹೇಳಿ, ನನ್ನ ರೇಡಿಯೋದಲ್ಲಿ ನಾನು ಕೇಳಿದ್ದೀನಿ. ರೇಡಿಯೋ ಯಾಕೆ ಸುಳ್ಳು ಹೇಳುತ್ತೆ?" ಎನ್ನುತ್ತಿದ್ದ!.ಹುಡುಗರೆಲ್ಲ ಅವನಿಗೆ ಹಾಡಿನಪೆಟ್ಟಿಗೆ ಎಂದು ಅಡ್ಡ ಹೆಸರಿಟ್ಟಿದ್ದರು. ಈಗಂತೂ ಕಣದಲ್ಲಿ ಕತ್ತಲಾಗುವವರೆಗೂ ಹುಡುಗರೆಲ್ಲ ಚಿತ್ರಗೀತೆ ಕೇಳಲು ಹಾಡಿನಪೆಟ್ಟಿಗೆ ಸುತ್ತ ಸೇರುತ್ತಿದ್ದರು.ಒಂದು ಸಂಜೆ ಕಣದಲ್ಲಿ ಕೂಟ ಸೇರಿದಾಗ ಚೆನ್ನವೀರ ಚಿತ್ರಗೀತೆ ಪುಸ್ತಕವೊಂದನ್ನು ಕೈಯಲ್ಲಿ ಹಿಡಿದಿದ್ದ. ಅವನಿಗೆ ಓದಲು ಬರುತ್ತಿರಲಿಲ್ಲ. ರೇಡಿಯೋದಲ್ಲಿ ಬರುತ್ತಿದ್ದ ಹಾಡನ್ನು ಕೇಳುತ್ತಾ ಪುಸ್ತಕ ತಿರುಗಿಸಿ ನೋಡುತ್ತಿದ್ದ. ಆಗ ಅವನಿಗೆ ೧೩-೧೪ ವರ್ಷ ವಯಸ್ಸಿರಬೇಕು. ಆಗಷ್ಟೇ ತೋಟದ ಕೆಲಸಕ್ಕೆ ಸೇರಿಕೊಂಡಿದ್ದ.' ಪುಸ್ತಕ ನೋಡಿ ಏನು ಮಾಡುತ್ತಿಯೋ ' ಎಂದೆ. ' ಸುಮ್ಮನೆ ನೋಡ್ತೀನಿ' ' ಓದೋದು ಕಲಿ ಸುಮ್ಮನೆ ನೋಡಿ ಏನ್ಮಾಡ್ತಿಯಾ' ಚೆನ್ನವೀರ ಒಂದೆರಡು ಕ್ಷಣ ನನ್ನನ್ನೇ ನೋಡಿ ಒಂದು ರೀತಿಯ ನಿರ್ಧಾರದ ಧ್ವನಿಯಲ್ಲಿ ಹೇಳಿದ "ನೀವು ಹೇಳಿ ಕೊಟ್ರೆ ಕಲಿತೀನಿ "

Read more...

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP