February 01, 2008

ನಡೆದು ನಡೆದು ಬರ್ರಿ...ಪುರಾಣದ ಕಾಲುಭಾಗ

ತಲೆ ಇದ್ದರೂ ಬುದ್ಧಿ ಹೇಳುವುದು ಕಾಲಿಗೇ ಅಲ್ವೆ ?

ಕಲ ಪ್ರಾಣಿಗಳಲ್ಲಿ ಮನುಷ್ಯರ ಹೆಚ್ಚುಗಾರಿಕೆ ಕಂಡುಬಂದದ್ದು ಮಾತಾಡುವುದರಿಂದ ಹಾಗೂ ಎರಡೇ ಕಾಲುಗಳಲ್ಲಿ ನಡೆಯುವುದರಿಂದ. (ಬುದ್ಧಿಶಕ್ತಿಯಿಂದ ಅಂತಲೂ ಹೇಳಿಯಾರು, ನಿಮಗೆಂದಾದರೂ ಹಾಗೆ ಸತ್ಯವಾಗಿ ಅನ್ನಿಸಿದೆಯೆ?!) ಆದರೆ ಇವೆಲ್ಲಕ್ಕಿಂತಲೂ ವಿಶೇಷ ಅನಿಸಿದ್ದು ...ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವ ತಾಕತ್ತು ಇರುವುದರಿಂದ ! ಯಾವುದಕ್ಕುಂಟು ಈ ಭಾಗ್ಯ? ಈ ಭಂಗಿಗಿರುವ ಘನತೆ-ಗತ್ತು , ಯೋಗಾಸನದವರು ತಲೆ ಮೇಲೆ ಕಾಲು ಹಾಕಿದರೂ ಉಂಟೆ? ಹಾಗಾಗಿ ನಾವೆಲ್ಲ ಹೇಳಬೇಕು 'ಕಾಲಾಯ’ ತಸ್ಮೈ ನಮಃ

ಕಾಲುಭಾಗ, ಕಾಲುದಾರಿ, ಕಾಲುಂಗುರ (ಕಾಲ್ಬೆರಳುಂಗುರ ಅಲ್ಲ !) ಪದಗಳಲ್ಲದೆ ಕಾಲುವೆ, ಕಾಲಂ ಪದಗಳೂ ಕಾಲಿನಿಂದಲೇ ಬಂದದ್ದು ಅಂತ ಸಾಧಿಸಿದರೆ ತೋರಿಸಬಹುದು. ಯಾಕೆಂದರೆ ಹುಡುಕುತ್ತಿದ್ದ ಬಳ್ಳಿಯಾದರೂ ತೊಡರುವುದು ಕಾಲಿಗೆ ತಾನೆ ! ಬಲಗಾಲಿಟ್ಟು ಒಳಗೆ ಬಂದರೆ ಎಲ್ಲವೂ ಶುಭಪ್ರದ. ಕಾಲಿನಲ್ಲೇ ಇರುವ ಪಾದಕ್ಕಿಂತ ಪವಿತ್ರವಾದದ್ದು ನಮ್ಮಲ್ಲಿ ಬೇರ್‍ಯಾವುದೂ ಇಲ್ಲ. ಪಾಂಡವರು ರಾಜಸೂಯ ಯಾಗ ಮಾಡುವಾಗ, ಅತಿಥಿಗಳ ಪಾದ ತೊಳೆಯುವ ಪುಣ್ಯದ ಕೆಲಸ ನನಗಿರಲಿ ಅಂದನಂತೆ ದೇವ ಶ್ರೀಕೃಷ್ಣ . ಯಾರಾದರೂ ಹೊಸ ರಂಗಕ್ಕೆ ಪ್ರವೇಶಿಸಿದಾಗ ಪದಾರ್ಪಣೆ ಅನ್ನದೆ ಶಿರಾರ್ಪಣೆ ಅಂತೆಲ್ಲ ಅನ್ನುವುದುಂಟೆ? ಕಾಲಿಗೆ ಬಿದ್ದರೆ ಆತ ಪೂರ್ತಿ ಶರಣಾಗತ ಎಂಬುದರಲ್ಲೆ ಸುಳ್ಳುಂಟೆ? ಯಾವ ನೃತ್ಯವಾದರೂ ಪ್ರಧಾನವಾದ ಗೆಜ್ಜೆಯನ್ನು ಕಾಲಿಗಲ್ಲದೆ ಕುತ್ತಿಗೆಗೆ ಕಟ್ಟುತ್ತಾರೆಯೆ? ತಲೆ ಇದ್ದರೂ ನಾವು ಕೆಲವು ಸಲ ಬುದ್ಧಿ ಹೇಳುವುದು ಕಾಲಿಗೇ ಅಲ್ವೆ? ಹೀಗೆ ಮಹಿಮಾನ್ವಿತವಾದ ಕಾಲುಳ್ಳ ಕಾಲಾಳುಗಳಾದ ನಮಗೆ ಯಾವ ವಿಷಯವೂ ಕಾಲಕಸಕ್ಕೆ ಸಮ ಎನಿಸದಿರಲಿ.

ಈಗ ಕಾಲ್ಬುಡಕ್ಕೆ ಬರೋಣ. ಅಂದರೆ ಕಾಲಿನ ಮುಖ್ಯ ಕಾರ್‍ಯವಾದ ನಡಿಗೆಯ ಬಗ್ಗೆ ಗಮನಿಸೋಣ. ಈ ನಡಿಗೆಗೂ ನಡತೆಗೂ ಹತ್ತಿರದ ಸಂಬಂಧ ಇರುವುದು ತಮಗೆ ಗೊತ್ತಿದೆ. ದೇವರ ಗರ್ಭಗುಡಿಯ ಮುಂದಿನ ದಾರಿಗೆ 'ನಡೆ’ ಅನ್ನುತ್ತಾರೆ. ಸಭೆಯ ನಡಾವಳಿಯಂತೆ ದೈವದ ನಡಾವಳಿ ಅಂತ ದಕ್ಷಿಣಕನ್ನಡದ ಭೂತಕೋಲ ನಡೆಸುವುದಕ್ಕೆ ಹೇಳುತ್ತಾರೆ ! ನಮ್ಮ ಕೆಲವು ರಾಜಕೀಯ ಪುಢಾರಿಗಳು ಹೀಗೆ ಹಾಡುವುದೂ ಉಂಟು-'ನಡೆ ಮುಂದೆ ನಡೆ ಮುಂದೆ ನಡೆ ಮುಂದೆ ಮುಂದೆ, ನನ್ನ ಹಿಂದೆಯೆ ನೀನು ನುಗ್ಗಿ ನಡೆ ಮುಂದೆ !’ ಆದರೆ ನಡಿಗೆಯಿಂದಲೇ ಮನುಷ್ಯನೊಬ್ಬನ ಗುಣ ಸ್ವಭಾವವೂ ಕೊಂಚಮಟ್ಟಿಗೆ ಅರಿವಾದೀತು. ಹೆಜ್ಜೆ ಮೇಲೆ ಹೆಜ್ಜೆಯಿಟ್ಟು ಎಚ್ಚರಿಕೆಯಿಂದ ನಡೆವವರದ್ದು ನಿಧಾನ ಪ್ರವೃತ್ತಿಯೆಂದೂ, ದಾಪುಗಾಲು ಹಾಕುತ್ತ ಹೋಗುವವರು ಗಡಿಬಿಡಿ ಸುಬ್ರಾಯರೆಂದೂ ಕೆಲವರು ವಿಶ್ಲೇಷಿಸಬಹುದು. ಅಂತೂ ಕಾಲ್ನ-ಡಿಗೆ ಎಲ್ಲರೂ ಬರಲೇಬೇಕು ಬಿಡಿ.

ಕೊಂಚ ಹಿಂದಕ್ಕೆ ಕಾಲಿಟ್ಟರೆ...ನಮ್ಮ ಕವಿಗಳ ಗಮನವೆಲ್ಲ ಹಂಸಗಮನೆ, ಮದಗಜಗಮನೆಯರ ಮೇಲೆಯೇ. ನೀ ನಡೆವ ದಾರಿಯಲಿ ಅದೂ ಇದೂ ಹಾಸಿರಲಿ ಅಂತ ಹಾಡಿದ ಜನರೆಷ್ಟಿಲ್ಲ? ಇತ್ತೀಚೆಗೆ ಕ್ಯಾಟ್‌ವಾಕ್, ಡಾಗ್‌ವಾಕ್‌ಗಳೆಲ್ಲ ಹೆಚ್ಚಾದ ನಂತರವಷ್ಟೇ, ನಡಿಗೆಯಲ್ಲಿ ಮುಖ್ಯವಾದ ಕಾಲುಗಳಿಗೂ ಮುಖಸೌಂದರ್‍ಯದಷ್ಟೇ ಪ್ರಾಮುಖ್ಯ ಸಿಕ್ಕಿದ್ದು. 'ಕಾಲುಗಳ ಕಾಳಜಿ’ ಈಗ ಸೌಂದರ್‍ಯಶಾಸ್ತ್ರದ ಮುಖ್ಯಪಾಠಗಳಲ್ಲೊಂದು. 'ನುಡಿದರೆ ಮುತ್ತಿನ ಹಾರದಂತಿರಬೇಕು’...ನಡೆದರೆ ಏನು ಅಂತ ನೀವಿನ್ನು ಸೇರಿಸಬೇಕು ! ಕಣ್ಣಿನ ಬಗೆಗಷ್ಟೇ ಹೊಗಳುತ್ತಿದ್ದವರೀಗ 'ನೀಳ ಕಾಲುಗಳ ಸುಂದರಿ’ ಅಂತ ವರ್ಣಿಸತೊಡಗಿರುವುದು ಕಾಲುಪ್ರಿಯರಿಗೆ ಸಂತಸದ ಸುದ್ದಿಯೇ. (ಇನ್ನು , ಕಚ್ಚಿ ಎಳೆಯೋ ಕಾಲಿನ ಬಗ್ಗೆ ಯೋಚಿಸಬೇಡಿ ಮಾರಾಯ್ರೆ) ಫ್ಯಾಷನ್ ಷೋ ಎಂಬ ಶೋಕಿ ಶುರುವಾದ ಮೇಲಂತೂ ಚೆಂದದ ಕಾಲುಗಳ ಒಂದೊಂದು ಹೆಜ್ಜೆಗೂ ಲಕ್ಷ ರೂಪಾಯಿ. 'ಮೆಲ್ಲಮೆಲ್ಲನೇ ಬಂದಳೇ/ ಬಂದನೇ’ ಎರಡಕ್ಕೂ ಡಿಮ್ಯಾಂಡ್. 'ನಡೆದರೆ ನಡು ಬಗ್ಗದಂತಿರಬೇಕು’ ಅನ್ನುತ್ತಾ ರ್‍ಯಾಂಪ್ ಏರುವ ಪ್ರದರ್ಶನ ಗೊಂಬೆಗಳ ಕೈಹಿಡಿಯುವುದೇ ಕಾಲಲ್ಲವೇ? ಆಹಾ 'ಕಾಲೇಷು’ ರಮ್ಯಂ !

ದಕ್ಷಿಣಕನ್ನಡ-ಉಡುಪಿಯ ದೇವಸ್ಥಾನಗಳ ಉತ್ಸವ ಸಂದರ್ಭದಲ್ಲಿ , ದೇವರ ಮೂರ್ತಿಯನ್ನು ಸುಮಾರು ೧೫ ಕೆಜಿ ತೂಕದ ಅರ್ಧಚಂದ್ರಾಕೃತಿಯ ಬೆಳ್ಳಿಯ ಪ್ರಬಾಳೆಯಲ್ಲಿಟ್ಟು ಒಬ್ಬನೇ ಹೊತ್ತುಕೊಂಡು ದೇವಾಲಯಕ್ಕೆ ಪ್ರದಕ್ಷಿಣೆ ಬರುವ ಸಂಪ್ರದಾಯವಿದೆ. ಆತನ ಜತೆಗೆ ವಾದ್ಯ-ಚೆಂಡೆಯವರೂ ಇರುತ್ತಾರೆ. ಹದಿನೈದಿಪ್ಪತ್ತು ಕೆಜಿ ಭಾರ ಹೊತ್ತ ಆ ವ್ಯಕ್ತಿ ಎರಡೂ ಕೈಗಳನ್ನು ಬೀಸುತ್ತಾ ತಲೆಯ ಮೇಲೆ ನಿಂತಿರುವ ದೇವರೆಡೆಗೆ ಸಂಪೂರ್ಣ ಧ್ಯಾನವಿಟ್ಟು ಹೆಜ್ಜೆ ಹಾಕುವ ನಡಿಗೆ ಬಹಳ ವಿಶಿಷ್ಟ. ಇನ್ನು ಮಲೆನಾಡಿನ ಹೊಲದ ಹಾದಿಗಳಲ್ಲಿ, ಅಡಿಕೆಮರ ಹಾಕಿದ ಸಂಕಗಳಲ್ಲಿ , ಸೊಂಟದಲ್ಲಿ ಕೊಡ ಇಟ್ಟುಕೊಂಡು ಬರುವಲ್ಲಿ ಜನರ ನಡಿಗೆಗಳನ್ನು ಗಮನಿಸಿದರೆ ಕಾಲ್ನಡಿಗೆಯ ಕಾಲಂಶ ಮಹಾತ್ಮೆಯಾದರೂ ಅರಿವಾದೀತು.

ನಿಂದು ಕಾಗೆಕಾಲು ಅಕ್ಷರ
ಪ್ರೈಮರಿಯಲ್ಲಿ ಸೊಟ್ಟಮೊಟ್ಟ ಅಕ್ಷರ ಬರೆವವರಿಗೆ 'ನಿಂದು ಕಾಗೆಕಾಲು ಅಕ್ಷರ’ ಅಂತ ಮಾಷ್ಟ್ರು ಹೇಳುವುದುಂಟು. ಉದ್ದಕ್ಕಿದ್ದವರಿಗೆ ಕೊಕ್ಕರೆಗಾಲು ಅಂತ ಸಹಪಾಠಿಗಳು ಹೀಯಾಳಿಸುವುದುಂಟು. ಕಾಲು ಕೆರೆದು ಜಗಳಕ್ಕೆ ಬರುವ ಅವರ ಮುಕ್ಕಾಲು ಬುದ್ಧಿಗೂ ಉತ್ತರಿಸದೆ ಬಿಡಬೇಡಿ. ಕಾಗೆ ಕಾಲು ತಲೆಗೆ ತಗುಲಿದರೆ ಆತನ ಅಂತ್ಯಕಾಲ ಸಮೀಪಿಸಿತೆಂದೇ ಅರ್ಥ, ಹುಷಾರ್. ಇನ್ನು ಕತ್ತೆ ಕಾಲಿನ ಒದೆಯ ಬಗ್ಗೆ ನಿಮಗೆ ಹೇಳಬೇಕಾದೀತೇ?! ಹಾಲು ಕರೆವಾಗ ಎಷ್ಟು ಜನರ ಕಾಲಿಗೆ ಎಷ್ಟೆಷ್ಟು ಸಲ ಹಸು ತುಳಿದಿದೆ ಅಂತ ಮನೆಯ (ಹಳೆ)ಹೆಂಗಸರನ್ನು ಕೇಳಿ. ಮನುಷ್ಯನಿಗೆ- ಓಡಾಡಲು, ವಾಹನ ಚಲಾಯಿಸಲು, ತುದಿಗಾಲಿನಲ್ಲಿ ನಿಂತು ಇಣುಕಲು (ಇದು ಮಾನವರ ವಿಶೇಷ ಸಾಮರ್ಥ್ಯ) ಕಾಲ್ಗಳೇ ಬೇಕಲ್ಲ. ಮಹಾಭಾರತ ನಡೆದದ್ದೇ ಕೌರವನ ತೊಡೆಯ ಮೇಲೆ, ತಿಳಕೊಳ್ಳಿ.....ಅಂತ ಸಮಾಧಾನವಾಗಿ ಹೇಳಿ !

ಆದರೂ ಸತ್ಯ ಹೇಳುತ್ತೇನೆ. ಕಾಲುಗಳಿಂದ ಇರುವ ಒಂದೇಒಂದು ತೊಂದರೆ ಎಂದರೆ ಒಡೆವ ಅಂಗಾಲು. ಅದೆಷ್ಟು ಮುಲಾಮು, ಆಯುರ್ವೇದ ಉಪಚಾರಗಳು ಬಂದರೂ ಒಡೆಯುವ ಕಾಲುಗಳು ಒಡೆಯುತ್ತಲೇ ಇವೆ. ಒಡೆದುಒಡೆದು ಚಂಬಲ್ ಕಣಿವೆಗಳಂತಾಗಿ, ಕಪ್ಪು ಮಣ್ಣು ತುಂಬಿಕೊಂಡು, ರಕ್ತ ಒಸರುತ್ತಾ , ಊರಲಾಗದಷ್ಟು ನೋಯುತ್ತಾ, ಕೊಂಚ ವಾಸನೆ ಹೊರಡಿಸುತ್ತಾ ಛೆ ಛೆ ಸಾಕಪ್ಪಾಸಾಕು. ಹಾಗಾಗಿಯೇ ನಮ್ಮ ಕೆಲವು 'ನಗರದೇವತೆ’ಗಳ ಪಾದಾಂಬುಜ ನೆಲವನ್ನೇ ಸ್ಪರ್ಶಿಸುವುದಿಲ್ಲ. ಅವುಗಳಿಗೆ ಯಾವತ್ತೂ ಮೆತ್ತನೆ ಚೀಲ. ಕೆಲವರ ಕೆನ್ನೆಗಿಂತ ಅವರ ಅಂಗಾಲು ನುಣು[. ಎಷ್ಟೆಂದರೆ ಅವರ ಕಾಲನ್ನೇ ನಮ್ಮ ಕೆನ್ನೆಗೆ ಒತ್ತಿಕೊಳ್ಳೋಣ ಅನಿಸುವಷ್ಟು !
ಕಾಲಿನ ಬಗ್ಗೆಯೇ ಆದರೂ ಕೈಯಲ್ಲೇ ಬರೆಯಬೇಕಾಗಿಬಂದ ಈ ಬರೆಹವನ್ನು ನಿಮ್ಮ ಕಾಲಿಗೆ ಹಾಕುತ್ತಿದ್ದೇನೆ. ಇದು ಪುರಾಣದ 'ಕಾಲು’ಭಾಗ ಅಷ್ಟೆ. ಕೈಹಿಡಿದು...ಅಲ್ಲಲ್ಲ...ಕಾಲು ಹಿಡಿದು ಒಪ್ಪಿಸಿಕೊಳ್ಳಿ !

9 comments:

ವಿಕ್ರಮ ಹತ್ವಾರ February 1, 2008 at 9:04 AM  

ಹಾಗೆ ದೇವರನ್ನು ಹೊತ್ತು ಪ್ರದಕ್ಷಿಣೆ ಬರುವಾಗ ನಾಲ್ಕು ಮೂಲೆಗಳಲ್ಲಿ ನಿಂತು ಒಮ್ಮೆ ತಿರುಗುತ್ತಾರೆ. ಆಗ ತಲೆಯಮೇಲಿನ ದೇವರ ಮಲ್ಲಿಗೆ ಸುತ್ತುತ್ತ ಹಾರುವುದು, ಸಿಂಗಾರ ಮುಂತಾದ ಹೂವುಗಳು ನೆಲಕ್ಕೆ ಬೀಳುವ ದೃಶ್ಯ ಎಷ್ಟು ಚೆಂದ ಅಂತೀರಾ! ನಾನು ಆ ಹೂವುಗಳನ್ನು ಹೆಕ್ಕಿ ಹೆಕ್ಕಿ ಅಮ್ಮನಿಗೆ ಕೊಡುತ್ತಿದ್ದೆ.

ಬೊಂಬಾಟ್ ಬರಹ.

ತೇಜಸ್ವಿನಿ ಹೆಗಡೆ February 2, 2008 at 4:56 AM  

ನನಗೇನೋ ಕಾಲಿಗಿಂತ ಮನಸ್ಸು ಮುಖ್ಯವೆನಿಸುತ್ತದೆ. "ಮನಸ್ಸಿದ್ದರೆ ಮಾರ್ಗ" ಎನ್ನುತ್ತಾರೆ. ಮನಸ್ಸು ಮನಸ್ಸು ಮಾಡಿ ಮಾರ್ಗ ತೋರಿಸದಿದ್ದರೆ ಕಾಲುಗಳು ಪಾಪ ನೆಡೆಯುವುದೆಂತು? ;-)

Unknown February 2, 2008 at 6:51 AM  

ಸುಧನ್ವ ರವರೆ,
ನಿಮ್ಮ "ಕಾಲ" ಪುರಾಣ ತುಂಬಾ ಚೆನ್ನಾಗಿದೆ. ನಿಮ್ಮ ಪನ್ ತುಂಬಾ ಹಿಡಿಸಿತು.
ಹೀಗೆ ಬರೀತಾ ಇರಿ.
~ಮಧು

Archu February 2, 2008 at 10:54 PM  

sudhanwa,
baraha tumbaa sogasaagide!!
few more lines..

1.aagatane soseyannu mane tumbisikodiddare,maneyalli enaadaroo avaghada sambhavisidare,
"soseya kaalguNa" chennagillavendu heLttareye horatu kaiguNa endu alla!!

2.kaaru illadidda kaaladalli 'kaal kaal kaal elnOdi kaal ' endu haaduttiddaro eno :D

3.bhaaree sambhramadalli iruvavarannu 'avana kaalu nelada mele illa maharayre 'endu heLuttarallave ?

4.kaalina bagge maataduvaaga , marada kaalugaLannu baLasi nrutyagaiyyuva sudha chandran ra nenapu baruttade.

5.hiriyara eduru kaala mele kaalu haaki kuLitukoLLuvudu avarannu avamaana maadidante emba bhaavane ide..

6.saNNavaLiddaga dinakke 5 km naDeyuttidda naanu eega 1 km samcharisaloo vaahanavannu avalambisuva mattige somaariyaagiruvudu suLLala.

cheers,
archana

Anonymous,  February 4, 2008 at 10:51 AM  

ಚೆನ್ನಾಗಿದೆ ಈ ಕಾಲ್‌ಪನಿಕ ಬರಹ!
~ಅಪಾರ

Sharath Akirekadu February 7, 2008 at 6:47 AM  

Sudhanva...

Super baraha.Tumba hidisibittitu..

Regards
Sharath.A

ನಾವಡ February 7, 2008 at 8:12 AM  

ಸುಧನ್ವರೇ,

ಕಾಲಿನ ಪುರಾಣ ಚೆನ್ನಾಗಿದೆ. ಲಲಿತ ಶೈಲಿಯ ಇಂಥ ಬರಹ ಪ್ರಕಟಿಸೋಕೆ ಯಾಕೆ ಪ್ರಯತ್ನಿಸೋಲ್ಲ ?
ಬಹಳ ದಿನಗಳಾಗಿತ್ತು ನಿನ್ನ ಮನೆಗೆ ಬಾರದೇ. ಇಂದು ಬಂದೆ ಖುಷಿಯಾದೆ. ಇನ್ನಷ್ಟು ಪುರಾಣಗಳನ್ನು ಬರಿ.

ನಾವಡ

Anonymous,  February 7, 2008 at 8:34 AM  

ಅರ್ಚನಾ- ಇದು ಪುರಾಣದ ಕಾಲುಭಾಗವಾದರೂ ನೀವು ಮುಕ್ಕಾಲು ಸೇರಿಸಿದ್ದೀರಿ.ಥ್ಯಾಂಕ್ಸ್ !

ವಿಕ್ರಮ್, ತೇಜಸ್ವಿನಿ, ಮಧು, ಅಪಾರ, ಶರತ್, ನಾವಡರಿಗೆ- ಕೈಯೆತ್ತಿ ನಮಸ್ಕಾರ.

- ಚಂಪಕಾವತಿ

shashanka February 14, 2008 at 10:04 AM  

"ಕಾಲಾ"ಯ ತಸ್ಮೈ ನಮಃ . ಕಾಲು ಬರಹ ಕಾಲಂ ಬರಹವಾಗಲಿ.
~ಶಶಾಂಕ ಅರ್ನಾಡಿ

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP