December 13, 2007

ದ್ವಾ ಸುಪರ್ಣಾ -ಭಾಗ ೨

ದ್ವಾ ಸುಪರ್ಣಾ
ದಟ್ಟ ಹಸಿರನು ಹೊದ್ದ
ಮರದ ಬಲಿಷ್ಠ ಬಾಹುಗಳ ಆಸರೆಯಲ್ಲಿ ಹಕ್ಕಿ
ರೆಕ್ಕೆಗೆ ತಾಗಿ ಇನ್ನೊಂದು ಹಕ್ಕಿ
ಮರವೋ-ಮಿನುಗಿಸುತ ಮೈತುಂಬ ಹಣ್ಣ ಚುಕ್ಕಿ
ಬೀಸುವುದು ಎಲೆಯ ಚೌರಿ.

ಹಣ್ಣ ಕುಕ್ಕುವ, ಗುಟುಕ ನುಂಗುವ, ಒಂದು ಹಕ್ಕಿಯ ರೀತಿ
ನೋಡುತ್ತ ಕುಳಿತ ಹಕ್ಕಿ ಕಣ್ಣಿನ ಪ್ರೀತಿ
ಜೀವೋತ್ಸವಕ್ಕೆ ಮೈಮರೆತ ವೃಕ್ಷವೆ ಸಾಕ್ಷಿ !
ಯಾವ ನಂಟಿನ ಅಂಟು ಈ ಹಕ್ಕಿ, ಈ ಮರಕ್ಕೆ ?

ಮರಕ್ಕೆ ಹಕ್ಕಿಯ ಕೊರಳು
ಆಳದಾಸೆಗೆ ನೆಗೆತ ನೀಲಿ ಬಾನಿನ ನಡುವೆ
ಆಗುತ್ತದೆ ಹಕ್ಕಿ: ಮರದ ಅಂಗೋಪಾಂಗ
ಹರಿವ ಜೀವರಸಕ್ಕೆ ಕಿವಿ:
ಹಸಿರೆಲೆಯ ಮರ್ಮರ ಮೊರೆತ, ಮೌನದಿ ಮೊಳೆತ
ಹೂವು ಹಣ್ಣಿನ ಸಹಜ ಸಂಭ್ರಮಕ್ಕೆ
ಬೆರಗಿನರ್ಭಕ ದೃಷ್ಟಿ.

ಹಕ್ಕಿಗಳ ರೆಕ್ಕೆಯೆರಚನ್ನು ಮರ
ಮರದ ನೆಲಬಾನ ಪಯಣವನು ಹಕ್ಕಿ
ವೀಕ್ಷಿಸುತ್ತದೆ ಸತತ ಧ್ಯಾನಸ್ಥ ನಿಲುವಿನಲ್ಲಿ.

ಸ್ಥಗಿತ ಕಾಲದ ಆಚೆ, ಹುತ್ತಗಟ್ಟಿದ ಹಾಗೆ
ಮರಕ್ಕೆ ಹಕ್ಕಿಯ ರೆಕ್ಕೆ
ಎಲೆ ಮೂಡಿ ಹಕ್ಕಿ ದೇಹಕ್ಕೆ
ಹಕ್ಕಿ ಮರವಾಗಿ, ಮರವೇ ಹಕ್ಕಿಯಾಗಿ,
ಹುಬ್ಬಿನಿಬ್ಬದಿಯ ಗರಿ ಬಿಚ್ಚಿದರೆ,
ಗರುಡನಂತೆರಗಿ
ಆಕಾಶದವಕಾಶದಲ್ಲಿ ಸ್ಥಿರವಾದರೆ,
ಒಂದು ಮತ್ತೊಂದಕ್ಕೆ ನೆರಳಾದರೆ-
ಇವೆಲ್ಲ ತಮ್ಮ ಪ್ರತಿಬಿಂಬ ಮೂಡಿಸುತ್ತವೆ
ವಿಶಾಲ ಚಾಚಿನ ಗಗನ ನೇತ್ರದಲ್ಲಿ
ಒಂದರೊಳಗೆಂದೆನುವ
ಇದು ಅದೇ ಎನ್ನುವ ಸೂತ್ರದಲ್ಲಿ.

- ಸುಬ್ರಾಯ ಚೊಕ್ಕಾಡಿ

ದ್ವಾಸುಪರ್ಣಾ (ಹೊಸ ಅರ್ಥದಲ್ಲಿ)
ಒಂದು ಹಕ್ಕಿ ಹಸಿದಂತೆ
ಹಸಿವೆಯೇ ಕಣ್ಣಾಗಿ
ಕುಕ್ಕಿ ಕುಕ್ಕಿ ತಿನ್ನುವುದು ಹಣ್ಣನ್ನು ಕುಕ್ಕಿ ;
ಬಳಿಯಲ್ಲಿ
ತಿನ್ನದೇ ಕುಳಿತ ಇನ್ನೊಂದನ್ನು ನೋಡುವುದು:
ಮಗು ತುಟಿ ಇಟ್ಟಂತೆ
ಸುಮ್ಮನೇ ತಾಯ ಮೊಲೆಯಲ್ಲಿ

ಇನ್ನೊಂದು ಹಕ್ಕಿ
ಹಸಿವೆ ಇದ್ದೂ ತಿನ್ನದೆ
ತಾನೇ ಹಣ್ಣಾದಂತೆ
ಬರೇ ನೋಡುವುದು ನೋಡುವುದು
ತಿನದೇ ತಿಂದಂತೆ :

ಅಥವಾ
ತಾನೇ ಮೊಲೆಯಾಗಿ
ಇಳಿದು ಬಂದಂತೆ ಹೆಣ್ಣು
ಪ್ರಿಯತಮನ ಎದೆಗೆ ಹಾತೊರೆದು
ಕೊಟ್ಟು ಅವನ ತುಟಿಗೆ ಮೊಲೆ ಇಟ್ಟು .

- ಡಾ. ನಾ. ಮೊಗಸಾಲೆ

(ಮೊಗಸಾಲೆಯವರು ಹೊಸ ಅರ್ಥದಲ್ಲಿ ಅಂತ ಬರೆದುಕೊಂಡಿರುವ ಕವಿತೆ ಕೆ.ಪಿ.ಸುರೇಶ ಪದ್ಯದ ಪ್ರತಿಬಿಂಬದಂತಿರುವುದು ಕುತೂಹಲಕಾರಿ. ಸುರೇಶರ ಕವನ ಪ್ರಕಟವಾದ ಮೂರು ವರ್ಷಗಳ ನಂತರ ಮೊಗಸಾಲೆಯವರು ಪ್ರಕಟಿಸಿದ 'ಇಹಪರದ ಕೊಳ’ದಲ್ಲಿರುವ ಕವಿತೆ ಇದು.)

5 comments:

Anonymous,  December 13, 2007 at 8:48 AM  

ಪ್ರಿಯ ಸುಧನ್ವ
ಈ ಪ್ರಯತ್ನ ಚೆನ್ನಾಗಿದೆ. ಮುಂದುವರಿಸು.
ಸಂಧ್ಯಾದೇವಿಯ ಕವಿತೆ ಒರಿಜಿನಲ್. ಹಾಗೇ ಕೆ.ಪಿ.ಸುರೇಶರ ಕವಿತೆ ಕೂಡ. ಆದರೆ ನಾ.ಮೊಗಸಾಲೆ ಕವಿತೆ ಅದರ ಕೆಟ್ಟ ನಕಲು. ಮೊಗಸಾಲೆ ಅಂಥ ಒಳ್ಳೆಯ ಕವಿಯೇನೂ ಅಲ್ಲ. ಮುದ್ದಣ ಪ್ರಶಸ್ತಿಗಾಗಿ ಬೆಣ್ಣೆ ಹಚ್ಚುವ ಒಂದಷ್ಟು ದಕ್ಷಿಣ ಕನ್ನಡದ ಕವಿಗಳು ಹಾಗೂ ಕಾಂತಾವರದ ಕ್ಯಾಕಸ್ ಸೇರಿ ಬೆಳೆಸಿದ ವ್ಯಕ್ತಿತ್ವ ಅದು. ಸ್ವಭಾವತಃ ಒಳ್ಳೆಯವರೇ ಆದರೂ, ಇತರ ಪ್ರತಿಭಾವಂತರ ಕವನಗಳ ಹೊಳಹುಗಳನ್ನು ಕದ್ದು ತನ್ನದಾಗಿಸಿಕೊಳ್ಳುವ ಚಪಲ. ಇವರ ಚಟದಿಂದ ಸಂತ್ರಸ್ತರಾದವರು ಕೆ.ಪಿ.ಸುರೇಶ ಮಾತ್ರ ಅಲ್ಲ. ಸಂಧ್ಯಾದೇವಿ, ಎಸ್.ಮಂಜುನಾಥ್, ಸುಬ್ರಾಯ ಚೊಕ್ಕಾಡಿಯವರ ಕವನಗಳನ್ನೂ ಇವರು ಕದ್ದು ಬಳಸಿದ್ದಾರೆ. ಬಹುಶಃ ಇದಕ್ಕೇ ಇರಬೇಕು, ವಿಮರ್ಶಕರು ಇವರನ್ನು ಸೀರಿಯಸ್ಸಾಗಿ ಪರಿಗಣಿಸಿಲ್ಲ.
- ಹರಿ

Ragu Kattinakere December 15, 2007 at 8:07 PM  

ಚೆನ್ನಾಗಿದೆ. ಆದರೆ ನನಗೆ ಗೇಯಗುಣ ಇಲ್ಲದ ಅಥವಾ ಕಡಿಮೆ ಇರುವ ಕವನಗಳು ಅಷ್ಟು ಇಷ್ಟ ಆಗುದಿಲ್ಲ. ನಿಮದೇನಭಿಪ್ರಾಯ?

ರಾಗು ಕಟ್ಟಿನಕೆರೆ.

Anonymous,  December 16, 2007 at 8:57 AM  

ಹಾಡಾಗಿ ಆಲಿಸುವಾಗ ಅತೀವ ಸುಖ ಕೊಡುವ ಪದ್ಯಗಳಲ್ಲಿ ಹೆಚ್ಚಿನವನ್ನು ಸುಮ್ಮನೆ ಓದಿಕೊಂಡರೆ ಬಹಳ ಬೇಜಾರಾಗುತ್ತದೆ !
ಕಾವ್ಯಕ್ಕೆ ಲಯ ಬೇಕು ಅಂತ ಒಪ್ಪುವವನೇ.ಆದರೆ ಕೊನೆಗೂ ಕಾವ್ಯದ ಸ್ಥಿತಿಗತಿ ಇರುವುದು ಅದರ "ಕಾವ್ಯಗುಣ’ದಲ್ಲೇ ಅಲ್ವಾ?
ಹಾಡಾದರೆ ಮತ್ತೆ ಮತ್ತೆ ಗುನುಗುವಂತಿರಬೇಕು, ಗದ್ಯ ಲಯದಲ್ಲಿದ್ದರೆ ಮತ್ತೆ ಮತ್ತೆ ಉದ್ಧರಿಸುವಂತೆ-ಓದಿಸಿಕೊಳ್ಳುವಂತೆ ಇರಬೇಕು.
- ಸುಧನ್ವಾ

Anonymous,  December 17, 2007 at 5:07 AM  

ನಿಮ್ಮ ಅಭಿಪ್ರಾಯ ಸರಿಯಿದೆ. ಸುರೇಶರ ಸಾಲುಗಳಿಗೂ, ಮೊಗಸಾಲೆಯವರ ಸಾಲುಗಳಿಗೂ ಸಾಮ್ಯವಿದೆ.
ಎರಡೂ ಕಂತಿನ ಪದ್ಯ ಓದಿದೆ. ಮುಂದಿನ ಕಂತಿನ ದಿನಾಂಕ ಪ್ರಕಟಿಸಿ

ಒಳ್ಳೆಯ ಓದಿಗೆ ವೇದಿಕೆ ಕಲ್ಪಿಸಿದ್ದಕ್ಕೆ
ಧನ್ಯವಾದಗಳೊಂದಿಗೆ

ಸೌದಾಮಿನಿ

Ragu Kattinakere February 26, 2010 at 12:06 PM  

ಸುಧನ್ವಾಅವರೆ. ಪ್ರತಿಕ್ರೆಯೆಗೆ ಧನ್ಯವಾದಗಳು. ನನಗೆ ಇತ್ತೀಚಿನವರೆಗೆ "ಕಾವ್ಯಗುಣ"ವಷ್ಟೇ ಸಾಕು ಅ೦ತ ಅರ್ಥ ಆಗಿರ್ಲಿಲ್ಲ. ಲಯಕ್ಕೆ ಛ೦ದಸ್ಸಿದೆ, ಆದರೆ ಕಾವ್ಯಗುಣಕ್ಕೆ ಮಾನ (Quantifying) ಏನು? ಭಾವದಲ್ಲಿನ ಸ್ವಾರಸ್ಯದ ಲೆಕ್ಕಾಚಾರ ಹಾಕುವುದು ಅಸಾಧ್ಯವೋ ಎನಿಸುತ್ತದೆ. ಹಾಡಿನ ಗು೦ಗಿನವರಿಗೆ ಲಯವಿಲ್ಲದೇ ಬರೆಯುವುದು ಬಹಳ ಕಷ್ಟಸಾಧ್ಯ ಅ೦ತಲೂ ಈಗೀಗ ಗೊತ್ತಾಗಿದೆ! ಈ ಲಯಗಳಿ೦ದ ಮುಕ್ತಿ ಹೇಗೆ ಸ್ವಾಮೀ?

ರಾಗು ಕಟ್ಟಿನಕೆರೆ

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP