December 27, 2007

ಮುಮ್ಮಡಿ ಟಾಮಿಯ ಸ್ಮರಣೆ !

'ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ’ ಹಾಡನ್ನು ಎಲ್ಲರೂ ಹಾಡುತ್ತಿದ್ದ ಕಾಲದಲ್ಲಿ ಎಲ್ಲ ನಾಯಿಗಳ ಹೆಸರೂ ಟಾಮಿಯೆಂದೇ ಇತ್ತು. ನಮ್ಮ ಮನೆಯ 'ಮುಮ್ಮಡಿ ಟಾಮಿ’ಗಂತೂ ಚಪ್ಪಲಿ ಕಚ್ಚುವ ಚಟ. ಬಹಳ ಅಪರೂಪಕ್ಕೆ ಮನೆಗೆ ಬಂದಿದ್ದವರ ಚಪ್ಪಲಿಯನ್ನೇ ಇದು ಹಾರಿ ಎಗರಿಸಿದ ನಂತರವಂತೂ ಅದಕ್ಕೊಂದು ಮುಕ್ತಿ ಕಾಣಿಸಬೇಕೆಂದೇ ಅಪ್ಪ ನಿರ್ಧರಿಸಿದರು. ಹಾಗೆ ಬೆಳಬೆಳಗ್ಗೆ ನಾಯಿಯನ್ನು ಐದು ಕಿಮೀ ದೂರದ ಗುಡ್ಡದ ತುದಿಯಲ್ಲಿ ಬಿಟ್ಟು ಬರುವುದೆಂದು ಆ ನೆಂಟರನ್ನೂ ಒಡಗೂಡಿಕೊಂಡು ಹೋದರು. ಮಧ್ಯಾಹ್ನವಾದರೂ ಇಬ್ಬರ ಸುಳಿವೇ ಇಲ್ಲ. ಎಲಾ ಎಲಾ, ಅಂದುಕೊಂಡು ದಾರಿ ಬದಿಗೆ ಹೋಗಿ ನೋಡಿದರೆ ಟಾಮಿ ಬಾಲ ಅಲ್ಲಾಡಿಸುತ್ತಾ ನಿಂತಿತ್ತು . ಹತ್ತು ನಿಮಿಷಗಳ ನಂತರ ಅಪ್ಪ ಬಂದರು ! ವಾಸನಾ ಗ್ರಹಿಕೆಯಲ್ಲಿ ಈ ನಾಯಿಗಳು ಪ್ರಚಂಡವಲ್ವೆ?

ಮಕ್ಕಳ ಪತ್ರಿಕೆ 'ಬಾಲಮಂಗಳ’ ಆಗ ನಮ್ಮಲ್ಲೆಲ್ಲ ಭಾರೀ ಜನಪ್ರಿಯ. ಅಲ್ಲಿ ಬರುವ ಸರ್ವಶಕ್ತ -ದುಷ್ಟಶಿಕ್ಷಕ ಇಲಿರಾಯ 'ಡಿಂಗ’ ಹಾರಲೂಬಲ್ಲ. ಬಾಲಮಂಗಳದಲ್ಲೇ ಬರುವ ಇನ್ನೊಂದು ಕತೆಯ ಕುದುರೆಯ ಹೆಸರು 'ಡಿಕ್ಕಿ’ ಅಂತ. ಹಾಗೆ ನಮ್ಮ ಮನೆ ನಾಯಿಗಳಿಗೂ ಡಿಂಗ-ಡಿಕ್ಕಿ ಅನ್ನೋ ಹೆಸರುಗಳು ಬಂದವು. ಈಗಿನಂತೆ 'ಜಾತಿ ನಾಯಿ’ಗಳೇ ಬೇಕು ಅನ್ನುವ ಹುಚ್ಚು ಹಳ್ಳಿಗಳಿಗಿನ್ನೂ ಬಂದಿರಲಿಲ್ಲ. ಹಾಗಾಗಿ 'ನಾಯಿ ಜಾತಿ’ಯವೆಲ್ಲಾ ಮುಕ್ತವಾಗಿ ಓಡಾಡಿಕೊಂಡಿದ್ದವು. "ಯಾರೇ ಬಂದರೂ ನಾಯಿ ಬೊಗಳಬೇಕು’ ಅನ್ನುವುದಷ್ಟೇ ಮನೆಯವರ ನಿರೀಕ್ಷೆ. ಆದರೆ ಬೆಕ್ಕಿನಂತಿರುವವರ ಮನೆಗಳಿಗೂ ಆಲ್ಸೇಷನ್, ಡಾಬರ್‌ಮನ್, ಪೊಮೇರಿಯನ್, ಮುದೋಳ ನಾಯಿಗಳು ಬರತೊಡಗಿದಂತೆ ನಾಯಿ ಸಾಕುವುದೂ ಒಂದು ಪ್ರತಿಷ್ಠೆ ಅನಿಸತೊಡಗಿತು. 'ಅವರ ಮನೆಯ ನಾಯಿ 'ಭೀಮ’ ತೋಟದಲ್ಲಿ ಎಲ್ಲೇ ತೆಂಗಿನಕಾಯಿ ಬಿದ್ದರೂ ತಕ್ಷಣ ಓಡಿಹೋಗಿ ಕಚ್ಚಿಕೊಂಡು ಬರುತ್ತದೆ, ಇವರ ಮನೆ ನಾಯಿ, ಕಣ್ಣೆದುರು ಅನ್ನವಿದ್ದರೂ ಯಜಮಾನ ಹೇಳದೆ ತಿನ್ನುವುದಿಲ್ಲವಂತೆ, ಮೇಲಿನ ಗದ್ದೆ ಮನೆಯವರ ನಾಯಿ ಕಾಲೆತ್ತದೆ ಉಚ್ಚೆ ಹೊಯ್ಯುತ್ತದಂತೆ, (ಸುಳ್ಳಲ್ಲ ನಂಬಿ !) ದೇವಸ್ಥಾನದ ಪೂಜೆ ಭಟ್ರ ಮನೆ ನಾಯಿಗೂ ವಾರಕ್ಕೆ ಒಂದುಸಲ ಮೀನು ತಂದುಕೊಡ್ತಾರಂತೆ ! ’ ಹೀಗೆ ನಾಯಿಸುದ್ದಿಗಳು ನಿಧಾನವಾಗಿ ಎಲ್ಲೆಡೆ ಹರಡತೊಡಗಿದವು.

ಇದರಿಂದಾಗಿ ಹಳ್ಳಿ ನಾಯಿಗಳಿಗೂ ರಾಜ, ರಾಣಿ, ಟೈಗರ್, ಬಾಕ್ಸರ್, ಲೂಸಿ, ಟೈಸನ್ ಎಂಬ ಹೆಸರುಗಳನ್ನು ಕರುಣಿಸಲಾಯಿತು. ಸಕಲೇಶಪುರದ ಯಾವುದೋ ಎಸ್ಟೇಟು ಧಣಿಗಳ ಮನೆಯಿಂದ, ನನ್ನ ಅಜ್ಜನಮನೆಗೆ ಬಂದ ಎರಡು ಮುದೋಳ ನಾಯಿಗಳಂತೂ ಸುತ್ತಲಿನ ನೂರಾರು ಮನೆಗಳಲ್ಲಿ ಪ್ರಖ್ಯಾತಿ ಪಡೆದವು. ಬಹಳ ಸ್ಲಿಮ್ ಆಗಿ, ಉದ್ದಕ್ಕೆ ಎತ್ತರಕ್ಕೆ ಬೆಳೆವ ಆ ಜಾತಿನಾಯಿ ಮರಿಗಳನ್ನು , ದೇವರನ್ನು ತಂದಂತೆ ಸಕಲೇಶಪುರದಿಂದ ತರಲಾಯಿತು. ಅವುಗಳಿಗಾಗಿ ಹೊಸ ಗೋಣಿ, ಹೊಸ ತಟ್ಟೆ ಮತ್ತು ಅತ್ತೆ ಕೈಯಾರೆ ಹೊಲಿದ ಹೊಸ ಹೊದಿಕೆ. ಅವುಗಳಿಗೆ ಕೊಡುವ ನಾಯಿ ಬಿಸ್ಕೆಟನ್ನು ಕೆಲಸದವನೊಬ್ಬ ಕದ್ದ್ದು ತಿನ್ನುತ್ತಾನೆ ಎಂಬುದಂತೂ, ಬಳಿಯ ಅಂಗಡಿಕಟ್ಟೆಯಲ್ಲಿ ಸಂಜೆಯ ಹೊತ್ತು ಸೇರುವ ಜನರ ಮಾತಿಗೆ ರಸಗವಳವಾಯಿತು ! ಹೀಗೆ ಹಳ್ಳಿಯಲ್ಲೂ ನಾಯಿಗಳು ಇತಿಹಾಸದ ಪುಟ ಸೇರುವುದಕ್ಕೆ ಸಿದ್ಧವಾದದ್ದು ಕೆಲವು ಹಳಬರ ಪಾಲಿಗೆ ಅರಗಿಸಿಕೊಳ್ಳಲಾಗದ ಸಂಗತಿಯಾಯಿತು.

'ಹಾಸಿಗೆಗೆಲ್ಲಾ ನಾಯೀನ ಕರಕೊಂಡು ಬರೋದು ಅಂದ್ರೆ ಎಂತದು ಮಾರಾಯ್ರೆ , ಈ ನಾಯಿ ಜನ್ಮ , ಅಂತ ಇನ್ನು ಬೈಲಿಕ್ಕೂ ಸಾಧ್ಯ ಇಲ್ಲ ! ಎಷ್ಟೇ ಆದ್ರೂ ನಾಯಿ ಕಾಲೆತ್ತದೆ, 'ಅದು’ ಕಂಡಾಗ ಬಾಯಿ ಹಾಕದೆ ಇರ್‍ತದಾ?’ ಅಂತ ಕೆಲವರು ಆಡಿಕೊಂಡರು. ಆದರೆ ಯಾರ ಆಕ್ಷೇಪಗಳಿಗೂ ಲಕ್ಷ್ಯ ಕೊಡದೆ ಸಮಾಜದಲ್ಲಿ ನಾಯಿಯ ಸ್ಥಾನಮಾನ ಮಾತ್ರ ಹೆಚ್ಚಾಗುತ್ತಾ ಬಂತು. ನಮ್ಮ ಬಳಿ ಇರುವುದು ಬ್ಲ್ಯಾಕ್ ಅಂಡ್ ವೈಟ್ ಮೊಬೈಲ್ ಅಂತ ತೋರಿಸಿಕೊಳ್ಳಲು ನಾಚಿಕೆಯಾದಂತೆ, ನಮ್ಮ ಮನೆಯಲ್ಲಿರುವುದು ಊರು (ಕಂತ್ರಿ !)ನಾಯಿ ಅಂತ ಹೇಳಿಕೊಳ್ಳಲು ಬಹುತೇಕರು ಹಿಂಜರಿಯತೊಡಗಿದರು. 'ಕುಲ್ಕುಂದ ಜಾತ್ರೆ’ಯೆಂದೇ ಪ್ರಸಿದ್ಧವಾಗಿದ್ದ ದನದ ಜಾತ್ರೆಗೆಲ್ಲ ಮಂಕುಬಡಿದರೂ, ಬೆಂಗಳೂರಿನಲ್ಲಿ 'ಶ್ವಾನ ಪ್ರದರ್ಶನ’, ಅಮೆರಿಕದಲ್ಲಿ ನಾಯಿಗಳ ಫ್ಯಾಷನ್ ಸ್ಪರ್ಧೆ ಅಂತೆಲ್ಲ ಜನ ಪತ್ರಿಕೆಗಳಲ್ಲಿ ಓದತೊಡಗಿದ ನಂತರವಂತೂ ಶ್ವಾನ ಪ್ರಜ್ಞೆ ಜನರಲ್ಲಿ ಬೇರೂರತೊಡಗಿತು. ಟಿವಿ, ಫ್ರಿಜ್ಜು , ಸೋಲಾರ್‌ನ ಅವಶ್ಯಕತೆಗಳಂತೆ 'ಜಾತಿ ನಾಯಿ’ಯೂ ಒಂದು ಅವಶ್ಯ ಸಂಗತಿಯಾಯಿತು. ಹೀಗೆಲ್ಲ ಆಗಿ, ಮನೆ ಕಾಯಬೇಕಾದ ನಾಯಿಯನ್ನು , ಮನೆಯವರೇ ಕಾಯಬೇಕಾದ ಪರಿಸ್ಥಿತಿ ಬಂದದ್ದು (ಕು)ಚೋದ್ಯವಲ್ವೆ ? ಹಾಗಿದ್ದರೆ ಇದನ್ನೂ 'ನಾಯಿಪಾಡು’ ಅನ್ನಬಹುದೇ? (ವಿದ್ವಾಂಸರು ಪರಿಶೀಲಿಸಬೇಕು !)

ಶ್ವಾನ ಸಂಕುಲ ಬೆಳೆದು ಬಂದ ಹಾದಿಯ ವಾಸನೆ ಹಿಡಿದು ಮೊನ್ನೆ ಮೊನ್ನೆ ಮನೆಗೆ ಹೋಗಿದ್ದಾಗ, ತಮ್ಮ ತಂದಿರುವ ಆಲ್ಸೇಷನ್ ಮರಿ ನನ್ನ ಹೊಸ ಚಪ್ಪಲಿ ಕಚ್ಚಿ , ನಾಯಿ ಬಾಲ ಡೊಂಕು ಅನ್ನೋದು ಸಾಬೀತಾಯಿತು. ಮುಮ್ಮಡಿ ಟಾಮಿಗೆ ಈ ಅಕ್ಷರ ಕಂಬನಿ !

Read more...

December 22, 2007

ಮಾತಿಗೆ ಸೋತ ಕರ್ನಾಟಕ

ಸಾಹಿತಿ, ಕಲಾವಿದರು ಸಮಾಜಕ್ಕೆ ಸ್ಪಂದಿಸುವ ರೀತಿ ಹೇಗಿರಬೇಕು ಅನ್ನುವ ಬಗ್ಗೆ ಇತ್ತೀಚೆಗಂತೂ ತೀರಾ ಗೊಂದಲಗಳಾಗಿವೆ. ಅವರು ಏನೇ ಬರೆಯಲಿ, ಮಾಡಲಿ- ಪ್ರಸಿದ್ಧರಾದ ನಂತರ, ಹಿರಿಯರು ಅನ್ನಿಸಿಕೊಂಡು ಪ್ರಶಸ್ತಿ, ಹೊಗಳಿಕೆ, ಜನರ ಅಭಿಮಾನ ಪಡೆದುಕೊಂಡ ಬಳಿಕ, ಸಮಾಜದ ಸಂಕಷ್ಟಗಳಿಗೂ ಸ್ಪಂದಿಸಬೇಕು ಎನ್ನುವುದಂತೂ ಸ್ಪಷ್ಟ. ಆದರೆ ಹೇಗೆ ಎಂಬುದೇ ಪೇಚಿಗೆ ಸಿಲುಕಿಸುವ ಪ್ರಶ್ನೆ !

ಇನ್ನು ಮುಂದೆ ಸಾಹಿತ್ಯ ವೇದಿಕೆಗಳನ್ನು ಹತ್ತುವುದಿಲ್ಲವೆಂದು ಒಮ್ಮೆ ಘೋಷಿಸಿದ್ದ ಯು.ಆರ್.ಅನಂತಮೂರ್ತಿಯವರು ತಮ್ಮ ಮಾತು ಸೋತ ಭಾರತ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ , ಮಾತಿನ ಅಖಾಡದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲವೆಂದು ಘೋಷಿಸಿದರು. ಪೇಪರ್‍ನೋರು ಏನಾದ್ರೂ ಬರೀರಿ, ಯಾರು ಏನಾದ್ರೂ ಹೇಳ್ಕಳಿ ತಾನಂತೂ ಮಾತಾಡಿಯೇ ತೀರುತ್ತೇನೆ ಅಂದರು. ಅಂತೆಯೇ ಅನಂತಮೂರ್ತಿಯವರು ಎಲ್ಲವನ್ನೂ ಚೆಂಡಾಡಿದ್ದು ೨೧ರಂದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ನಡೆದ ಸಂವಾದ ಕಾರ್‍ಯಕ್ರಮದಲ್ಲಿ ! ಅಲ್ಲಿ ಸಾಹಿತ್ಯದ ಪೊರೆ ಕಳಚಿ ಸಕಾಲಿಕವಾಗಿ ಮಾತಾಡಿದ್ದು:

ಒಟ್ಟಾಗಿ ಹಿಂಸೆ ಮಾಡಿದ್ರೆ ಶಿಕ್ಷೆ ಆಗಲ್ಲ !
ಎಡದವರು ಭವಿಷ್ಯದ ದೃಷ್ಟಿಯಿಂದ ನಕ್ಸಲ್ ಕೆಲಸಗಳಲ್ಲಿ ತೊಡಗಿದ್ದರೆ, ಬಲದವರು ಭೂತಕಾಲದ ರಾಮನನ್ನು ಮುಂದಿಟ್ಟುಕೊಂಡಿದ್ದಾರೆ. ಕೋಮುವಾದ ರೇಬೀಸ್‌ನಂತಾಗಿದ್ದರೆ, ನಕ್ಸಲ್ ಚಟುವಟಿಕೆ ಕ್ಯಾನ್ಸರ್ ಇದ್ದಂಗೆ. ಹೀಗೆ ಎಡ-ಬಲದ ಹಿಂಸೆಯ ವಿಚಿತ್ರ ವಾತಾವರಣ ಸೃಷ್ಟಿಯಾಗಿದೆ. ತಸ್ಲಿಮಾ ಬಂಗಾಲಿ. ನಾವೆಲ್ಲರೂ ನಂಬುವ ಸೆಕ್ಯುಲರಿಸಂಗಾಗಿ ಆಕೆ ಬಹಳ ಧೈರ್ಯ ಮಾಡಿದ್ದಾಳೆ. ಗ್ರೇಟ್ ನಾವೆಲ್ ಬರೆದಿದ್ದಾಳೆ. ಬಂಗಾಲದಲ್ಲೇ ಇರಬೇಕು ಅಂತ ಆಸೆ ಪಡ್ತಾಳೆ. ಅವಳಿಗೆ ಅವಕಾಶ ಇಲ್ಲದಂಗೆ ನಮ್ಮ ಮನಮೋಹನ್‌ಸಿಂಗ್ ಸರಕಾರ ಮಾಡಿದೆ. ಅವಳು ಬಂಗಾಲದಲ್ಲಿ ಇರಕ್ಕೆ ಸಾಧ್ಯವಿಲ್ಲದಂಗೆ ಅಲ್ಲಿನ ಕಮ್ಯುನಿಸ್ಟರು ಮಾಡಿದ್ದಾರೆ. ಇಬ್ರಿಗೂ ನಾಚಿಕೆ ಆಗಬೇಕು. ನರೇಂದ್ರ ಮೋದಿ ಮುಖವಾಡದ ಮೋದಿ ಆಗಿದ್ದಾನೆ. ಮೊನ್ನೆ ಇಲೆಕ್ಷನ್‌ನಲ್ಲಿ ಎಲ್ರೂ ಮೋದಿನ ಮುಖವಾಡನೇ ಹಾಕ್ಕೊಂಡಿದ್ರು. ನನಗೇನನಿಸ್ತು ಅಂದ್ರೆ ಮೋದಿನೂ ಕೂಡಾ ಮೋದಿಯ ಮುಖವಾಡ ಹಾಕ್ಕೊಂಡಿದ್ದಾನೆ ಅಂತ ! ವಾಜಪೇಯಿಯವರಿಗೆ, ಅಡ್ವಾಣಿಯವರಿಗೂ ಒಂದು ಹ್ಯೂಮನ್ ಫೇಸ್ ಇದೆ. ಆದರೆ ಮೋದಿಗಿಲ್ಲ. ಅಡ್ವಾಣಿ ಪಾಕಿಸ್ತಾನಕ್ಕೆ ಹೋಗಿದ್ದಾಗ ಜಿನ್ನಾನ ಹೊಗಳಿದ್ರು. ತಾನು ರಿಟೈರಾದ ಮೇಲೆ ಭಾರತಕ್ಕೆ ಬಂದು ವಾಸಿಸ್ತೇನೆ. ತನ್ನ ಮೂಲ ಮನೇನ ನಾಶ ಮಾಡಬೇಡಿ ಅಂತ ಜಿನ್ನಾ ನೆಹರೂಗೆ ಪತ್ರ ಬರೆದರು ಅಂತ ಒಂದು ಕತೆಯಿದೆ. ಭಾರತ-ಪಾಕಿಸ್ತಾನ ವಿಭಜನೆಯಾಗಿದೆ ಎಂಬ ಕಲ್ಪನೆಯೇ ಇಲ್ಲದೆ, ಭಾರತದ ರಾಯಭಾರಿಗಳ ಜತೆಗಿನ ಶಿಷ್ಟಾಚಾರದ ನಡವಳಿಕೆಯೇ ಜಿನ್ನಾರಿಗೆ ಮರೆತುಹೋಗಿರುತ್ತಿತ್ತಂತೆ. These are all good stories !

ನಾನು ಇತ್ತೀಚೆಗೆ ಗುಜರಾತ್‌ಗೆ ಹೋಗಿದ್ದೆ. ಅಲ್ಲಿ ಎಷ್ಟು ಜನ ಮನೆಮಠ ಕಳ್ಕೊಂಡಿದ್ದಾರೆ, ಎಷ್ಟು ಜನ ತೊಂದ್ರೆ ಅನುಭವಿಸಿದ್ದಾರೆ, ಗರ್ಭಿಣಿ ಹೆಂಗಸಿಗೇ ತ್ರಿಶೂಲ ಹಾಕಿದ್ದಾರೆ. ಹಿಂದುಗಳನ್ನು ಕೊಂದ ಮುಸ್ಲಿಮರಿಗೂ ಶಿಕ್ಷೆಯಾಗಲಿಲ್ಲ, ಮುಸ್ಲಿಮರನ್ನು ಕೊಂದ ಹಿಂದುಗಳಿಗೂ ಶಿಕ್ಷೆಯಾಗಲಿಲ್ಲ. ಇಂದಿರಾಗಾಂಧಿ ಸತ್ತಾಗ ಸಿಕ್ಖರನ್ನು ಕೊಂದ್ರು. ಆಗ ಯಾರಿಗೂ ಶಿಕ್ಷೆ ಆಗಲಿಲ್ಲ. ಗುಜರಾತ್‌ನಲ್ಲೂ ಹಿಂದುಗಳು, ಮುಸ್ಲಿಮರನ್ನು ಕೊಂದವರಿಗೆ ಶಿಕ್ಷೆಯಾಗಲಿಲ್ಲ . ಅಂದರೆ ಈ ದೇಶದಲ್ಲಿ ಒಟ್ಟಾರೆಯಾಗಿ ಹಿಂಸೆ ಮಾಡಿದ್ರೆ ಶಿಕ್ಷೆ ಆಗಲ್ಲ ಅಂತ ಎಲ್ಲರಿಗೂ ಗೊತ್ತಾಗಿದೆ. ತಸ್ಲಿಮಾಗೆ ರಕ್ಷೆ ಮೋದಿಗೆ ಶಿಕ್ಷೆ ಅಂತ ಹೇಳಿದ ಕೂಡಲೇ ನಾನು ಎಲ್ಲರ ವಿರೋಧ ಕಟ್ಟಿಕೊಳ್ಳುತ್ತೇನೆ. ಅದ್ರೂ ಪರವಾಗಿಲ್ಲ. ಅಂತಹ ಕೆಲಸ ಆದಾಗಲೇ ಹಿಂದು ಧರ್ಮ ಮತ್ತೆ ತನ್ನ ಸನಾತನ ಸ್ವರೂಪವನ್ನ ಪಡ್ಕೊಳ್ಳತ್ತೆ. ಅದಕ್ಕೆ ಎಲ್ಲರನ್ನೂ ಒಳಗೊಳ್ಳುವ, ಶಿಶುನಾಳ ಷರೀಫರಂಥವರನ್ನು ಸೃಷ್ಟಿಸುವ, ದೇವರೇ ಇಲ್ಲ ಅನ್ನುವ ಅಲ್ಲಮನನ್ನು ಸೃಷ್ಟಿಸುವ ಶಕ್ತಿ ಬರತ್ತೆ. ಈಗ ಎಲ್ಲ ಜನರೇನೂ ಕೆಟ್ಟವರಾಗಿಲ್ಲ. ಆದರೆ ವಾತಾವರಣ ಕೆಟ್ಟುಹೋಗಿದೆ. ತಸ್ಲಿಮಾಗೆ ರಕ್ಷೆ-ಮೋದಿಗೆ ಶಿಕ್ಷೆ ಕೊಡಲಾಗದ ವಾತಾವರಣ ಸೃಷ್ಟಿಯಾಗಿದೆಯಲ್ಲ, ಇದು ಬಹಳ ಕೆಟ್ಟದು.

ಒಳ್ಳೆಯವನಾಗಿರಬೇಕೆಂಬ ಒತ್ತಾಯ
ಈಗಿನ ದುರಾಡಳಿತ ನೋಡಿದಾಗ ಹಿಂದೆಲ್ಲಾ ಹೀಗಿರಲಿಲ್ಲ ಅನ್ಸತ್ತೆ. ವಿರೋಧ ಪಕ್ಷದಲ್ಲಿದ್ದ ಗೋಪಾಲ ಗೌಡರು ಒಂದ್ಸಾರಿ ಬಜೆಟ್ ಸ್ಪೀಚನ್ನ ಮೆಟ್ನಲ್ಲಿ ಹೊಡದು ಗಲಾಟೆ ಮಾಡಿದ್ರು. ಆಗ ಆಡಳಿತದಲ್ಲಿದ್ದ ನಿಜಲಿಂಗಪ್ಪ ಪಕ್ಷದವರು ಅದಕ್ಕೆ ಬಹಳ ವಿರೋಧ ವ್ಯಕ್ತಪಡಿಸಿ, ಅದಕ್ಕೆ ಶಿಕ್ಷೆಯಾಗಬೇಕು ಅಂದ್ರು. ಆಗ ಗೋಪಾಲಗೌಡರು "ನಾನಿದನ್ನ ಬ್ಲಡ್‌ಪ್ರೆಶರ್‌ನಿಂದ ಮಾಡಿದೆ. ನೀವಿದನ್ನು ಕ್ಷಮಿಸಬೇಕು ಅಂತ ಕೂಡಾ ನಾನು ಕೇಳಲ್ಲ. ನೀವು ಕ್ಷಮಿಸಿದ್ರೆ ಮತ್ತೊಂದ್ಸಾರಿ ಈ ತಪ್ಪನ್ನ ಮಾಡಬಹುದಾದ ಪ್ರಲೋಭನೆ ನನ್ನಲ್ಲಿ ಉಳಿದಿರತ್ತೆ’ ಅಂದರು. ಆಗೆಲ್ಲಾ ತಾವು ಮಾಡಿದ ತಪ್ಪನ್ನ ಒಪ್ಪಿಕೊಳ್ತಾ ಇದ್ರು. ನನ್ನ ಬಹಳ ಸ್ನೇಹಿತರು ಎಂ.ಪಿ. ಪ್ರಕಾಶ್. ಅವರು ತಮ್ಮ ತಪ್ಪನ್ನ ಒಪ್ಪಿಕೊಳ್ತಾ ಇದ್ದಾರಾ? ಜನ ಎಲ್ಲಾ ಒಳ್ಳೆಯವರೇ. ಹಿಂದೆ, ಒಳ್ಳೆಯವನಾಗಿದ್ದವನಿಗೆ ಒಳ್ಳೆಯವನಾಗಿಯೇ ಇರಬೇಕೆಂಬ ಒತ್ತಾಯ ಇತ್ತು. ಈಗ ಅದಿಲ್ಲ. "ಒಳ್ಳೆತನ ಸಹಜವೇನಲ್ಲ, ಅದು ಅಸಹಜವೂ ಅಲ್ಲ’ ಅಂತ ಬರೆದರು ಅಡಿಗರು. ಹಿಂದಿನ ರಾಜಕೀಯದಲ್ಲಿ opponent ಇರ್‍ತಾ ಇದ್ದ. enemy ಇರಲಿಲ್ಲ. ಈಗ ಬರೀ ವೈರಿಗಳೇ ತುಂಬಿದ್ದಾರೆ. ರಾಜಕಾರಣಿಗಳು ರಂಪದಲ್ಲೇ ಸುಖ ಪಡ್ತಿದಾರೆ. ಈ ರಾಜಕೀಯ ಸರಿ ಹೋಗಬೇಕಾದರೆ ಗಾಂಧಿ ರೂಪಿಸಿದ ಉಪ್ಪಿನ ಸತ್ಯಾಗ್ರಹದಂತಹ ಕಾರ್‍ಯಕ್ರಮಗಳು ನಡೀಬೇಕು. ಗಾಂಧಿಯ ಮೂರು ಮಂಗಗಳ ಕಾನ್ಸೆಪ್ಟನ್ನು ನಾವು ಮೊದಲು ಅಳವಡಿಸಿಕೊಳ್ಳಬೇಕು. ಮತದಾನ ಕಡ್ಡಾಯ ಮಾಡಿ, ಮತದಾನ ಮಾಡದವರಿಗೆ ಯಾವುದಾದರೂ ರೀತಿ ದಂಡ ವಿಧಿಸೋ ವ್ಯವಸ್ಥೆ ಆದರೆ ಒಳ್ಳೇದು.

ಅರ್ಹತೆ ಇದ್ದರೆ ಕುಟುಂಬದವರೆಲ್ಲಾ ರಾಜಕಾರಣ ಮಾಡಿದರೆ ತಪ್ಪಿಲ್ಲ. ಆದರೆ ಕುಟುಂಬಕ್ಕಾಗಿಯೇ ರಾಜಕಾರಣ ಮಾಡುವುದು ತಪ್ಪು. ಎಂ.ಪಿ.ಪ್ರಕಾಶ್ ಮೊದಲಾದವರಿದ್ದಾಗ ದೇವೇಗೌಡ್ರು ಕುಮಾರಸ್ವಾಮೀನ ಮುಖ್ಯಮಂತ್ರಿ ಮಾಡಿದ್ದು ಕುಟುಂಬಕ್ಕಾಗಿಯೇ ಮಾಡಿದ ರಾಜಕಾರಣ.ಆದರೆ ಕುಮಾರಸ್ವಾಮಿ ಗ್ರಾಮವಾಸ್ತವ್ಯ ಮಾಡ್ತಾ ಇದ್ದಾಗ ಅದನ್ನು ಮಾಡ್ತಾ ಮಾಡ್ತಾ ಒಳ್ಳೆಯವರಾಗಿ ಬಿಡ್ತಾರೆ ಅಂತನ್ನಿಸಿತ್ತು ನನಗೆ. ನಾವು ತೋರುಗಾಣಿಕೆಗೆ ಮಾಡೋದು ಕೂಡಾ ಸ್ವಲ್ಪ ಒಳಗೆ ಹೋಗಿಬಿಡತ್ತೆ. ಅದು ಮನುಷ್ಯ ಸ್ವಭಾವ. ಈಗ ಮನುಷ್ಯನ ಮನಸ್ಸಿನಲ್ಲಿ ತೀರಾ ಗೊಂದಲ ಆಗಿಬಿಟ್ಟಿದೆ. ಹಾಗಂತ ಪ್ರಜಾಸತ್ತೆ ಇಲ್ಲದೆ ನಾವು ಬದುಕ್ಕಾಗಲ್ಲ. ಹಾಗಾಗಿ ಶುದ್ಧವಾಗಿರುವುದೆಲ್ಲವೂ ಪ್ರಜಾಸತ್ತೆಯ ಪ್ರಕ್ರಿಯೆಯಲ್ಲಿ ಶುದ್ಧವಾಗಬೇಕು. ಎಲ್ಲ ಸರಿ ಹೋಗಬೇಕಾದರೆ ಮೊದಲು ಗಣಿಕಾರಿಕೆ ನಿಲ್ಲಿಸಬೇಕು. ಅದನ್ನು ರಾಷ್ಟ್ರೀಕರಣ ಮಾಡಿ, ಇಲ್ಲಾ ನೀವೇ ಕಬ್ಬಿಣ ತಯಾರಿಸಿ ಮಾರಿ. ಈ ಅದಿರು ಮಾರೋದರ ವಿರುದ್ಧ ದೊಡ್ಡ ಚಳವಳಿ ಆಗಬೇಕು. ಬೆಂಗಳೂರಲ್ಲಿ ಆಕಾಶ ಕಾಣದಂಗೆ ನಿಂತಿರೋ ಪೋಸ್ಟರ್‍ಸ್ ಮತ್ತು ಅಡ್ವರ್‌ಟೈಸ್‌ಮೆಂಟ್ ಅಂತೂ violence on the eyes !
ಗುರುಪೀಠಗಳು ನಾಶವಾಗೋದು ಇಷ್ಟವಿಲ್ಲ
ಈಗ ಯಾವ ಸಭೆ ನೋಡಿದ್ರೂ ಕಾವಿ ಧರಿಸಿದವರಿರ್‍ತಾರೆ. ಒಂದು ಕಾಲದಲ್ಲಿ ಇವರೆಲ್ಲ ಪ್ರೈಮರಿ ಸ್ಕೂಲ್ ಮಕ್ಕಳಿಗೆ ಪಾಠ ಮಾಡಿ ಒಳ್ಳೇ ಕೆಲಸ ಮಾಡಿದ್ರು. ಆದರೆ ಮೆಡಿಕಲ್, ಎಂಜಿನಿಯರಿಂಗ್ ಕಾಲೇಜ್ ಮಾಡ್ತಾ ಸ್ಟೇಜ್‌ಗೆ , ರಾಜಕಾರಣಕ್ಕೆ ಬಂದ್ರು. ನನಗೆ ಗುರುಪೀಠಗಳು ನಾಶವಾಗೋದು ಇಷ್ಟವಿಲ್ಲ. ನಾನು ಒಂದ್ಸಾರಿ ಪೇಜಾವರ ಸ್ವಾಮಿಗಳಿಗೆ ಹೇಳಿದ್ದೆ. ನೀವು ಹೀಗೇ ಮುಸ್ಲಿಂ ದ್ವೇಷ ಬೆಳೆಸ್ತಾ ಇದ್ರೆ, ನೀವು ನಮಗೆ ಗುರುಗಳಾಗಿದ್ರೂ ನಾನು ನಿಮ್ಮ ಕಾಲು ಮುಟ್ಟಿ ನಮಸ್ಕಾರ ಮಾಡಕ್ಕೆ ಆಗಲ್ಲ, ಮಾಡಲ್ಲ. ಯಾಕಂದ್ರೆ ನಮ್ಮ ತಾಯಿಗೆ ಅವರ ಬಗ್ಗೆ ಬಹಳ ಭಕ್ತಿ ಇತ್ತು. ದಿತರನ್ನೆಲ್ಲಾ ಹತ್ತಿರ ಸೇರಿಸಬಾರದು ಅಂತದ್ಕೊಂಡಿದ್ದ ಆ ತಾಯಿ, ಸ್ವಾಮಿಗಳು ದಲಿತರ ಕೇರಿಗೆ ಹೋದ್ರು ಅಂತಾದ ಕೂಡ್ಲೇ, ದಲಿತರ ಕೇರಿಗೆ ಹೋಗೋದು ತಪ್ಪಲ್ಲ ಅಂದಿದ್ರು.

ಅಮೆರಿಕಕ್ಕೆ ಹೋದೋರಿಗೆ ಕೃಷ್ಣಪೂಜೆ ಅಧಿಕಾರ ಇಲ್ಲ ಅಂತ ಕೇಳಿದಾಗ ಬಹಳ ಖುಶಿಯಾಯ್ತು ! ಯಾಕಂದ್ರೆ ಈ ಅಮೆರಿಕಕ್ಕೆ ಹೋಗೋದು ಎಂಥಾ ಹುಚ್ಚು ಹಿಡಿದಿದೆ ಅಂದರೆ, ಕೊನೇ ಪಕ್ಷ ಅವರಿಗೆ ಅದೊಂದಾದ್ರೂ ನಿರ್ಬಂಧ ಇರ್‍ಲಿ ಅಂತ ! ನಿಜವಾಗಿ ಪೇಜಾವರ ಸ್ವಾಮಿಗಳು ಏನು ಹೇಳಬೇಕಿತ್ತು ಅಂದ್ರೆ, ಪರಮಾತಿ ಶೂದ್ರ ಬೇಕಾದ್ರೂ ಕೃಷ್ಣ ಪೂಜೆಯ ಅಧಿಕಾರ ಪಡ್ಕೋಬಹುದು, ಅಮೆರಿಕಕ್ಕೆ ಹೋಗಿ ಬಂದವ್ರಿಗೆ ಮಾತ್ರ ಇಲ್ಲ ಅಂತ ! ಅದು ರೆವಲ್ಯೂಷನರಿ ಸ್ಟೆಪ್. ಈ ಅಮೆರಿಕನೈಸೇಷನ್ ನಮಗೆ ಬಹಳ ಅನ್ಯಾಯ ಮಾಡಿದೆ.

ದೇವರು ಬೇರೆಬೇರೆ ರೀತಿಯಲ್ಲಿ ಲಭ್ಯನಾದ
'All religions are imperfect’ ಅನ್ನೋ ಮಾತಿದೆ. ಇಸ್ಲಾಂ ಮತ್ತು ಕ್ರಿಶ್ಚಿಯಾನಿಟಿಗೆ ದೇವರ ಕಲ್ಪನೆ ಹೀಗೇ ಅಂತ ಇದೆ. ನಮ್ಮಲ್ಲಿ ಬೇರೆ ಬೇರೆ ಕಲ್ಪನೆ ಸಾಧ್ಯ. ಪುತಿನ ಹೇಳಿದ್ರು- ದೇವರ ಕಲ್ಪನೆಗಳೆಲ್ಲಾ ಬೇರೆ ಬೇರೆ. ದಾರಿ ಒಂದೇ ಇರತ್ತೆ-ಅಂತ. ಅಂದ್ರೆ ನಾವೂ ಉಪವಾಸ ಮಾಡ್ತೀವಿ, ಅವರೂ ಮಾಡ್ತಾರೆ... ಹೀಗೆ. ಎಲ್ಲ ರಿಲಿಜನ್‌ಗಳೂ imperfect ಆದ್ರಿಂದ ಅವೆಲ್ಲಾ ಒಟ್ಟಿಗೇ ಇರ್‍ತವೆ. ಮನುಷ್ಯನಿಗೆ ದೇವರ ಹುಡುಕಾಟ ಅಂತ ಒಂದಿದ್ರೆ ಎಲ್ಲವೂ ಬೇಕಾಗುತ್ತೆ. ಬೌದ್ಧ ಧರ್ಮದಲ್ಲಿ ಗೃಹಸ್ಥನಾಗಿರೋದು ಕಷ್ಟ. ಅದು ಸನ್ಯಾಸಿ ಧರ್ಮ ಇದ್ದಂಗೆ. ಅದಕ್ಕೇ ಲಿಂಗಾಯಿತ ಧರ್ಮ ಬಹಳ ದೊಡ್ಡದು. ಅಲ್ಲಿ ಗೃಹಸ್ಥನಾಗಿದ್ದೂ ದೇವರನ್ನು ಹುಡುಕೋದು ಸಾಧ್ಯ. ಸಾಕಾರ, ನಿರಾಕಾರ, ಸಗುಣ, ನಿರ್ಗುಣ ಎಲ್ಲವಕ್ಕೂ ಅವಕಾಶ ಇದೆ. ವೈದಿಕ ಮತದ ಕೆಲವು ದುಶ್ಚಟಗಳನ್ನೂ ಅದು ನಿವಾರಿಸತ್ತೆ. ಅಸ್ಪೃಶ್ಯತೆ ಬಗ್ಗೆ ಧೈರ್ಯದ ನಿಲುವು ತಗೊಳ್ತು. ಆದರೆ ಕರ್ನಾಟಕದಲ್ಲಿ ಅದು ಮಠಾಧೀಶರ ಕೈಲಿ ಸಿಲುಕಿರೋದ್ರಿಂದ ಕಷ್ಟ !

ಸಿಲೋನ್‌ನಲ್ಲಿ ಬೌದ್ಧರು ಅಂದ್ರೆ ಸಮಸ್ಯೆ.. ಅವರು ತಮಿಳರ ಕೊಲೆಗೆ ಕಾರಣರಾಗ್ತಾರೆ. ಆದರೆ ಬರ್ಮಾದಲ್ಲಿ ಬೌದ್ಧರಿಂದಲೇ ಕ್ರಾಂತಿ ಆಗಿದೆ. ವಿಯೆಟ್ನಾಂನಲ್ಲಿ ಬೌದ್ಧ ಧರ್ಮ ಒಳ್ಳೇ ಕೆಲಸ ಮಾಡ್ತು. ಒಂದು ಕಡೆ ಒಳ್ಳೇದು ಮಾಡ್ತು, ಇನ್ನೊಂದು ಕಡೆ ಕೆಟ್ಟದು. ಹಾಗಾಗಿ ಬೌದ್ಧಧರ್ಮ ಅಥವಾ ಇನ್ನೊಂದಕ್ಕೆ ಕನ್‌ವರ್ಷನ್ ಆಗೋದ್ರಿಂದ ಏನೂ ಪ್ರಯೋಜನ ಇಲ್ಲ ಅಂತ ನನಗನಿಸಿಬಿಟ್ಟಿದೆ. ನಾನು ಮದುವೆಯಾದಾಗ ನನ್ನ ಮಾವನಿಗೆ ನಾನು ಕ್ರಿಶ್ಚಿಯನ್ ಆದ್ರೆ ಒಳ್ಳೇದು ಅನಿಸ್ತು. ನನ್ನ ತಾಯಿತಂದೆಗೆ ಅವಳು ಹಿಂದೂ ಆದ್ರೆ ಒಳ್ಳೇದು ಅನ್ಸಿತ್ತು. ಆದರೆ ನಾವು ಎರಡೂ ಮಾಡದೇ ಇರೋದರಿಂದ ನಮಗೆಷ್ಟು ಒಳ್ಳೇದಾಯಿತು ಅಂದ್ರೆ ದೇವರು ಬೇರೆಬೇರೆ ರೀತಿಯಲ್ಲಿ ನಮಗೆ ಲಭ್ಯನಾದ. ಹೀಗಾಗಿ ಪ್ರತಿಯೊಂದು ಮನೆಯಲ್ಲಿ ಬೇರೆಬೇರೆ ಮತಧರ್ಮದವರು ಇದ್ರೇ ಒಳ್ಳೇದೇನೇ. ಎಲ್ಲ ಧರ್ಮಗಳೂ imperfect ಆಗಿರೋದ್ರಿಂದ ಒಂದು ಇಡೀ ಸಂಸಾರ ಅದನ್ನ perfect ಮಾಡತ್ತೆ ಅನ್ಸತ್ತೆ. ಮೈನಾರಿಟಿಗಳು ಕಮ್ಯುನಲ್ ಆದರೆ ಅವರು ನಾಶವಾಗ್ತಾರೆ. ಮೆಜಾರಿಟಿ ಜನ ಕಮ್ಯುನಲ್ ಆದ್ರೆ ರಾಷ್ಟ್ರಾನೇ ನಾಶವಾಗತ್ತೆ. ಕೋಮುವಾದ ಹಿಮ್ಮೆಟ್ಟಿಸಬೇಕಾದರೆ ಸೆಕ್ಯುಲರಿಸಂನವರೂ ಗೀತೆ, ಮಹಾಭಾರತ, ಉಪನಿಷತ್‌ಗಳನ್ನು ತಿಳ್ಕೋಬೇಕು. ಕರ್ನಾಟಕದಲ್ಲಿ ಬಂದಿರುವಂಥ ರಾಜಕೀಯ-ಸಾಮಾಜಿಕ ಅಧೋಗತಿ, ಎಲ್ಲಾ ಪ್ರಜಾಪ್ರಭುತ್ವದಲ್ಲೂ ಒಂದಲ್ಲಒಂದು ಕಾಲದಲ್ಲಿ ಬಂದಿದೆ ಅನ್ಸತ್ತೆ. ಹಾಗಂತ ಇದಕ್ಕೆ ಪರಿಹಾರ ಏನು? I don't know !

***************
ತಮ್ಮ ಅನೂಹ್ಯ ಯೋಚನೆಗಳಿಂದ ನಮ್ಮನ್ನು ಬೆರಗುಗೊಳಿಸುವ ಅನಂತಮೂರ್ತಿಯವರನ್ನು ಹೊರತುಪಡಿಸಿದರೆ, ಹಿರಿಯರಾದ ಕಣವಿ, ಜಿಎಸ್‌ಎಸ್, ನಿಸಾರ್, ಬಲ್ಲಾಳ-ನಂತರದ ವೆಂಕಟೇಶಮೂರ್ತಿ, ಬಿ.ಆರ್. ಲಕ್ಷ್ಮಣರಾವ್, ಎನ್‌ಎಸ್‌ಎಲ್ ಮೊದಲಾದವರ್‍ಯಾರೂ ತುಟಿಯನ್ನೂ ಕದಲಿಸುತ್ತಿಲ್ಲ. ಕಳೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠವೇರಿ, "ಕನ್ನಡಾಂಬೆಯ ಆಶೀರ್ವಾದ ಆಶೀರ್ವಾದ’ ಅಂತ ಬಾರಿಬಾರಿಗೂ ಅನ್ನುತ್ತಿದ್ದ ನಿಸಾರ್, ತಮಗೂ ಕರ್ನಾಟಕಕ್ಕೂ ಸಂಬಂಧವೇ ಇಲ್ಲವೆನ್ನುವಂತೆ ಮೌನವಾಗಿರುವುದು ಹೇಗೆ ಸಾಧ್ಯವಾಗುತ್ತದೆನ್ನುವುದೇ ಪರಮಾಶ್ಚರ್ಯ. ಕೃಷಿ-ನೆಲಜಲ-ಭಾಷೆ-ಪರಿಸರ ಹೀಗೆ ಕಲೆಗೆ ಪೂರಕವೇ ಆಗಿರುವ ವಿಷಯಗಳ ವಿವಾದ ಭುಗಿಲೆದ್ದಾಗ, ಕಂಟಕ ಬಂದಾಗಲಾದರೂ ಸ್ಪಂದಿಸಬೇಡವೆ? ಆದರೆ ಕರ್ನಾಟಕದ ನಾನಾ ಭಾಗಗಳಲ್ಲಿರುವ-ತಕ್ಕಮಟ್ಟಿಗೆ ಜನಸಾಮಾನ್ಯರಲ್ಲೂ ಹೆಸರು ಸಂಪಾದಿಸಿರುವವರೂ ಗುಮ್ಮನಗುಸಕರಂತೆ ಕುಳಿತಿರುವುದು ನೋಡಿದರೆ ಬೇಜಾರಾಗುತ್ತದೆ.

'ಅವರೆಲ್ಲ ನೆಹರೂ ಮೈದಾನದಲ್ಲಿ ಬೆರಳೆತ್ತಿ ಭಾಷಣ ಮಾಡುವುದು ಬೇಡ ಮಾರಾಯ್ರೆ . ಅಲ್ಲಿ ಇಲ್ಲಿ ನಡೆಯುವ ಸಣ್ಣಪುಟ್ಟ ಕಾರ್‍ಯಕ್ರಮಗಳಲ್ಲೋ, ಪತ್ರಿಕೆಗಳಿಗೆ ಲೇಖನ ಬರೆಯುವ ಮುಖಾಂತರವೋ, ಕನಿಷ್ಠ ಪಕ್ಷ ತಮ್ಮ ಊರುಗಳಿಗೆ ಸಂಬಂಧಿಸಿದ ವಿಷಯಗಳ ಬಗೆಗಾದರೂ "ಸಾಮಾಜಿಕ ಸ್ಪಂದನ’ ತೋರಬಹುದಲ್ಲ. ವಿವಾದಕ್ಕೆಡೆಗೊಡದ ಹಾಗೆ ಬರೆಯುವುದು ಮಾತಾಡುವುದು ಸಾಧ್ಯವಿದೆ ಎಂಬುದನ್ನೂ ಇವರಿಗೆ ಹೇಳಿಕೊಡಬೇಕಾಗಿಲ್ಲ. ಸಾಮಾಜಿಕ ಸ್ಪಂದನಕ್ಕೆ ಇವರೆಲ್ಲ ತೋರಿದ ನಿರುತ್ಸಾಹದಿಂದಾಗಿಯೇ ಬಾಯಿಹರುಕರೆಲ್ಲ ದೊಡ್ಡ ಮಾತುಗಾರರು-ಮುಂದಾಳುಗಳು ಆಗಿದ್ದಾರೆ ’ ಅಂತ ಮಿತ್ರರೊಬ್ಬರು ಹೇಳುವಾಗ ತಥ್ಯ ಇದೆ ಅನ್ನಿಸಿತು. ಸಾಹಿತಿ-ಕಲಾವಿದರು ನಾಡಿನ ಬಗ್ಗೆ ತೋರಿದ ನಿರ್ಲಕ್ಷ್ಯದಿಂದಾಗಿಯೇ ಹಳದಿ ಕಣ್ಣಿನ ಸೇನೆ-ವೇದಿಕೆಗಳು ಹುಟ್ಟಿಕೊಂಡವೆ ?

'ಬಾಂಗ್ಲಾದಲ್ಲಿ ತನ್ನ ಪತಿಯ ಒಡೆತನದ ಪತ್ರಿಕೆಗೂ ತಸ್ಲಿಮಾ ಲೇಖನಗಳನ್ನು ಬರೆಯುತ್ತಿದ್ದಳು. ಅವು ತುಂಬ ಭಾವುಕತೆಯಿಂದ ಮತ್ತು ಉದ್ವಿಗ್ನತೆಯಿಂದ ಕೂಡಿರುತ್ತಿದ್ದವು. ಸಂಪಾದಕರಾಗಿದ್ದ ನನ್ನ ಪತಿ ಅವನ್ನು ಬಹುಜನಕ್ಕೆ ಒಪ್ಪಿತವಾಗುವ ರೀತಿಯಲ್ಲಿ ಎಡಿಟ್ ಮಾಡಿ ಪ್ರಕಟಿಸುತ್ತಿದ್ದರು. ಆದರೆ ಏನನ್ನೂ ಕೈ ಬಿಡುತ್ತಿರಲಿಲ್ಲ’ ಎನ್ನುತ್ತಾಳೆ, ಬಾಂಗ್ಲಾದಲ್ಲಿ ಪ್ರಜಾಪ್ರಭುತ್ವಕ್ಕಾಗಿ ಹೋರಾಡುತ್ತಿರುವ "ಡೆಮಾಕ್ರಸಿ ವಾಚ್’ನ ನಿರ್ದೇಶಕಿ (ಹೆಸರು ಮರೆತೆ). ತಿಂಗಳ ಹಿಂದೆ ಅನಂತಮೂರ್ತಿ ಹೇಳಿದ್ದರು "ಬಿಜೆಪಿಯನ್ನು ಬ್ರಾಹ್ಮಣರು ಕೈಬಿಡಬೇಕು’. ಆ ಮಾತಿನಿಂದ ಎಷ್ಟು ಜನರಿಗೆ ಏನನ್ನು ಮನವರಿಕೆ ಮಾಡಲು ಸಾಧ್ಯ ? 'ಕರ್ನಾಟಕದಲ್ಲಿ ಅತಿ ಹೆಚ್ಚು ಶಾಸಕ ಬಲ ಹೊಂದಿರುವ ಪಕ್ಷವೊಂದು ಅಧಿಕಾರ ಪಡೆಯಲು ಅನರ್ಹ’ ಎಂದರೆ ಪ್ರಶ್ನೆಗಳು ಕಡಿಮೆ ಇದ್ದಾವೇನು?

ಚರ್ಚೆ-ಭಾಷಣಗಳಲ್ಲಿ ಅಂತಹ ಮಾತುಗಳು ಸರಿ ಅಂತಲೇ ಅಂದುಕೊಳ್ಳೋಣ. ಆದರೆ ಕೇವಲ ಮಾತಿನಲ್ಲೇ ನಾವು ಸೋಲುತ್ತ ಗೆಲ್ಲುತ್ತ ಇದ್ದರೆ ಸಾಕೆ? ಪರಿಣಾಮವೇ ಲಕ್ಷ್ಯವಾದ ಪ್ರಾಯೋಗಿಕ ಕೆಲಸಗಳಲ್ಲಿ ಜನರಿಗೆ ಮನವರಿಕೆಯಾಗುವ ಹಾಗೆ, 'ಸಾಮಾಜಿಕ ಸ್ಪಂದನ’ ತೋರುವ, ಉಂಟು ಮಾಡುವ ದಾರಿ ಯಾವುದು? ಎಲ್ಲ ಮತದ ಹೊಟ್ಟ ತೂರಿ, ಎಲ್ಲ ತತ್ತ್ವದೆಲ್ಲೆ ಮೀಟಿ, ನಿರ್ದಿಂಗತವಾಗಿ ಏರಿ ಒಳ್ಳೆಯದನ್ನು ಮಾಡುವ ಬಗೆ ಹೇಗೆ?
We don't know !

Read more...

December 19, 2007

ದ್ವಾ ಸುಪರ್ಣಾ- ಕೊನೆಯ ಭಾಗ

ಮನೆಯ ಅಂಗಳದ ಮೂಲೆಯ ಚೆರ್ರಿ ಮರದಲ್ಲಿ
ನಾನು ನೋಡುವಾಗಲೆಲ್ಲ
(ಲೆಕ್ಕವಿಲ್ಲದಷ್ಟು ಸಲ)
ಕೂತಿರುತ್ತವೆ ಎರಡು ಹಕ್ಕಿಗಳು. ಕಪ್ಪು ಕಪ್ಪಗೆ !
ನೀವು ಕೇಳಿರುವ ಉಪನಿಷತ್ತಿನ
'ದ್ವಾ ಸುಪರ್ಣಾ’ (ಸಯುಜಾ ಸಖಾಯ)
ಹಕ್ಕಿಗಳ ಹಾಗಲ್ಲ ಇವು
ಎರಡು ಅಕ್ಷರಶಃ ಸುಮ್ಮನೇ ಕೂತಿವೆ.
ನನಗೇಕೋ ಸಾವನ್ನು ಸ್ವಾಗತಿಸಲೆಂಬಂತೆ
ಕಾಣುತ್ತಿವೆ.
ರಾಶಿ ರಾಶಿ ಚೆರ್ರಿ ಹಣ್ಣಿವೆ, ಎಲೆಗಳ ಅಡಿಯಲ್ಲಿ
ಹಕ್ಕಿ ಕಣ್ಣಿನಂತೆ ಹೊಳೆಯುತ್ತವೆ.
ಇವು ನೋಡುವುದೇ ಇಲ್ಲ ಆ ಕಡೆ
ಬಹುಶಃ ಈ ಜೋಡಿ ಹಣ್ಣು ತಿಂದು
ಸುಸ್ತಾಗಿವೆ.
ಅಥವಾ ಹಸಿವೆಯನ್ನೇ ಮರೆತಂತಿವೆ.
ಇಂದೇ ಮರದ ಒಂದೇ ಗೆಲ್ಲಿನಲ್ಲಿ
ಎರಡು ಹಕ್ಕಿಗಳು ಹೀಗೆ
ಹತ್ತಿರ ಹತ್ತಿರ ಕೂತಿವೆ-ಅಷ್ಟೆ.

-ಸಂಧ್ಯಾದೇವಿ
('ಬೆಂಕಿ ಬೆರಳು-ಮಾತು ಚಿಟ್ಟೆ-ಮುರಿದ ಮುಳ್ಳಿನಂತೆ ಜ್ಞಾನ' ಸಂಕಲನದಿಂದ)

ಒಂದು ಹಣ್ಣ ತಿನ್ನುತ್ತ ಇನ್ನೊಂದು ಸುಮ್ಮನೆ ನೋಡುತ್ತ ಕುಳಿತಿರುವ ಉಪನಿಷತ್ತಿನ ಜೋಡಿ ಹಕ್ಕಿಗಳು-
ಸಾವನ್ನು ಸ್ವಾಗತಿಸಲೋ ಎಂಬಂತೆ ಸುಮ್ಮನೆ ಹತ್ತಿರ ಹತ್ತಿರ ಕೂತಿರುವ ಹಕ್ಕಿಗಳು-
'ಇದು ಅದೇ’ ಎಂಬಂತೆ ಅದ್ವೈತದಲ್ಲಿ ಕುಳಿತಿರುವ ಚೊಕ್ಕಾಡಿಯ ಹಕ್ಕಿಗಳು-
ಹಣ್ಣ ತಿನ್ನುವ, ಇನ್ನೊಂದು ತಾನೇ ಹಣ್ಣಾಗುವ ಸುರೇಶರ ಹಕ್ಕಿಗಳು-
ರಾಮಾನುಜನ್‌ರಿಗೆ ಪಕ್ಕದ ಮನೆ ಸಂಸಾರದಂತೆ ಕಾಣುವ ಹಕ್ಕಿಗಳು-
ಪ್ರಣಯದಾಟದಲ್ಲಿ ನಿರತವಾಗಿದ್ದಾಗಲೇ ಬೇಡನ ಬಾಣಕ್ಕೆ ತುತ್ತಾಗಿ ವಾಲ್ಮೀಕಿಯ ರಾಮಾಯಣಕ್ಕೆ ಪ್ರೇರಣೆಯಾದ ಕ್ರೌಂಚ ಪಕ್ಷಿಗಳು !
ಇದು ಎಲ್ಲ ಪ್ರಾಣಪಕ್ಷಿಗಳ ಕತೆಯಲ್ವೆ?

Read more...

December 13, 2007

ದ್ವಾ ಸುಪರ್ಣಾ -ಭಾಗ ೨

ದ್ವಾ ಸುಪರ್ಣಾ
ದಟ್ಟ ಹಸಿರನು ಹೊದ್ದ
ಮರದ ಬಲಿಷ್ಠ ಬಾಹುಗಳ ಆಸರೆಯಲ್ಲಿ ಹಕ್ಕಿ
ರೆಕ್ಕೆಗೆ ತಾಗಿ ಇನ್ನೊಂದು ಹಕ್ಕಿ
ಮರವೋ-ಮಿನುಗಿಸುತ ಮೈತುಂಬ ಹಣ್ಣ ಚುಕ್ಕಿ
ಬೀಸುವುದು ಎಲೆಯ ಚೌರಿ.

ಹಣ್ಣ ಕುಕ್ಕುವ, ಗುಟುಕ ನುಂಗುವ, ಒಂದು ಹಕ್ಕಿಯ ರೀತಿ
ನೋಡುತ್ತ ಕುಳಿತ ಹಕ್ಕಿ ಕಣ್ಣಿನ ಪ್ರೀತಿ
ಜೀವೋತ್ಸವಕ್ಕೆ ಮೈಮರೆತ ವೃಕ್ಷವೆ ಸಾಕ್ಷಿ !
ಯಾವ ನಂಟಿನ ಅಂಟು ಈ ಹಕ್ಕಿ, ಈ ಮರಕ್ಕೆ ?

ಮರಕ್ಕೆ ಹಕ್ಕಿಯ ಕೊರಳು
ಆಳದಾಸೆಗೆ ನೆಗೆತ ನೀಲಿ ಬಾನಿನ ನಡುವೆ
ಆಗುತ್ತದೆ ಹಕ್ಕಿ: ಮರದ ಅಂಗೋಪಾಂಗ
ಹರಿವ ಜೀವರಸಕ್ಕೆ ಕಿವಿ:
ಹಸಿರೆಲೆಯ ಮರ್ಮರ ಮೊರೆತ, ಮೌನದಿ ಮೊಳೆತ
ಹೂವು ಹಣ್ಣಿನ ಸಹಜ ಸಂಭ್ರಮಕ್ಕೆ
ಬೆರಗಿನರ್ಭಕ ದೃಷ್ಟಿ.

ಹಕ್ಕಿಗಳ ರೆಕ್ಕೆಯೆರಚನ್ನು ಮರ
ಮರದ ನೆಲಬಾನ ಪಯಣವನು ಹಕ್ಕಿ
ವೀಕ್ಷಿಸುತ್ತದೆ ಸತತ ಧ್ಯಾನಸ್ಥ ನಿಲುವಿನಲ್ಲಿ.

ಸ್ಥಗಿತ ಕಾಲದ ಆಚೆ, ಹುತ್ತಗಟ್ಟಿದ ಹಾಗೆ
ಮರಕ್ಕೆ ಹಕ್ಕಿಯ ರೆಕ್ಕೆ
ಎಲೆ ಮೂಡಿ ಹಕ್ಕಿ ದೇಹಕ್ಕೆ
ಹಕ್ಕಿ ಮರವಾಗಿ, ಮರವೇ ಹಕ್ಕಿಯಾಗಿ,
ಹುಬ್ಬಿನಿಬ್ಬದಿಯ ಗರಿ ಬಿಚ್ಚಿದರೆ,
ಗರುಡನಂತೆರಗಿ
ಆಕಾಶದವಕಾಶದಲ್ಲಿ ಸ್ಥಿರವಾದರೆ,
ಒಂದು ಮತ್ತೊಂದಕ್ಕೆ ನೆರಳಾದರೆ-
ಇವೆಲ್ಲ ತಮ್ಮ ಪ್ರತಿಬಿಂಬ ಮೂಡಿಸುತ್ತವೆ
ವಿಶಾಲ ಚಾಚಿನ ಗಗನ ನೇತ್ರದಲ್ಲಿ
ಒಂದರೊಳಗೆಂದೆನುವ
ಇದು ಅದೇ ಎನ್ನುವ ಸೂತ್ರದಲ್ಲಿ.

- ಸುಬ್ರಾಯ ಚೊಕ್ಕಾಡಿ

ದ್ವಾಸುಪರ್ಣಾ (ಹೊಸ ಅರ್ಥದಲ್ಲಿ)
ಒಂದು ಹಕ್ಕಿ ಹಸಿದಂತೆ
ಹಸಿವೆಯೇ ಕಣ್ಣಾಗಿ
ಕುಕ್ಕಿ ಕುಕ್ಕಿ ತಿನ್ನುವುದು ಹಣ್ಣನ್ನು ಕುಕ್ಕಿ ;
ಬಳಿಯಲ್ಲಿ
ತಿನ್ನದೇ ಕುಳಿತ ಇನ್ನೊಂದನ್ನು ನೋಡುವುದು:
ಮಗು ತುಟಿ ಇಟ್ಟಂತೆ
ಸುಮ್ಮನೇ ತಾಯ ಮೊಲೆಯಲ್ಲಿ

ಇನ್ನೊಂದು ಹಕ್ಕಿ
ಹಸಿವೆ ಇದ್ದೂ ತಿನ್ನದೆ
ತಾನೇ ಹಣ್ಣಾದಂತೆ
ಬರೇ ನೋಡುವುದು ನೋಡುವುದು
ತಿನದೇ ತಿಂದಂತೆ :

ಅಥವಾ
ತಾನೇ ಮೊಲೆಯಾಗಿ
ಇಳಿದು ಬಂದಂತೆ ಹೆಣ್ಣು
ಪ್ರಿಯತಮನ ಎದೆಗೆ ಹಾತೊರೆದು
ಕೊಟ್ಟು ಅವನ ತುಟಿಗೆ ಮೊಲೆ ಇಟ್ಟು .

- ಡಾ. ನಾ. ಮೊಗಸಾಲೆ

(ಮೊಗಸಾಲೆಯವರು ಹೊಸ ಅರ್ಥದಲ್ಲಿ ಅಂತ ಬರೆದುಕೊಂಡಿರುವ ಕವಿತೆ ಕೆ.ಪಿ.ಸುರೇಶ ಪದ್ಯದ ಪ್ರತಿಬಿಂಬದಂತಿರುವುದು ಕುತೂಹಲಕಾರಿ. ಸುರೇಶರ ಕವನ ಪ್ರಕಟವಾದ ಮೂರು ವರ್ಷಗಳ ನಂತರ ಮೊಗಸಾಲೆಯವರು ಪ್ರಕಟಿಸಿದ 'ಇಹಪರದ ಕೊಳ’ದಲ್ಲಿರುವ ಕವಿತೆ ಇದು.)

Read more...

December 07, 2007

ದ್ವಾ ಸುಪರ್ಣಾ

'ವೇದೋಪನಿಷದಗಳ ಭೂತಗನ್ನಡಿಯೊಳಗೆ ಪಡಿಮೂಡಿದಾಕೃತಿಗೆ ತಾನೆ ಮುಗ್ಧ’ ಅಂತ 'ಶ್ರೀರಾಮನವಮಿಯ ದಿವಸ’ದಲ್ಲಿ ಬರೆದರು ಅಡಿಗರು. ಪಡಿಮೂಡಿದ ಆಕೃತಿಗೆ ವಾಲ್ಮೀಕಿ ಮುಗ್ಧನಾದ ಎನ್ನುವುದಕ್ಕಿಂತಲೂ, ವೇದ-ಉಪನಿಷತ್ತುಗಳಿಂದ ಮೂಡಿದ ಆಕೃತಿಗೆ ಅಲ್ಲವೇ ಮುಗ್ಧನಾದದ್ದು, ಅದಕ್ಕೆ ಮುಗ್ಧನಾಗದಿರಲು ಸಾಧ್ಯವೆ?- ಅಂತಲೂ ಅಡಿಗರು ಕೇಳುತ್ತಿರುವಂತೆ ಈಗ ಅನ್ನಿಸುತ್ತಿದೆ !


ಪಿಯುಸಿ ಫೇಲಾಗಿ ಮನೆಯಲ್ಲಿ ಕುಕ್ಕುರುಬಡಿದ ಕಾಲದಲ್ಲಿ ಭಗವದ್ಗೀತೆ, ಉಪನಿಷತ್, ಜಿಡ್ಡು ಕೃಷ್ಣಮೂರ್ತಿ ಅಂತ ನಾನು ಒಂದಷ್ಟು ಓದಿಕೊಳ್ಳತೊಡಗಿದೆ. ತತ್ತ್ವ ಜಿಜ್ಞಾಸೆಯಲ್ಲಿ-ತರ್ಕದಲ್ಲಿ ಕೊಂಚ ಆಸಕ್ತಿ ಹುಟ್ಟಿ ವೇದಾಂತ ಬ್ರಹ್ಮಾಂಡದ ಒಳಹೊಕ್ಕರೆ ಬಿಡಿಸಿಕೊಳ್ಳುವುದು ಸುಲಭವಲ್ಲ. ಆದರೆ ಲೌಕಿಕದ ಜಗತ್ತಿಗೆ ಅದರ ನೇರ ಉಪಯೋಗ ಏನೂ ಇಲ್ಲದ್ದರಿಂದ (ಅಂದರೆ ಸಾಹಿತ್ಯದಂತೆ ಬಹುಜನರೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ, ಬರವಣಿಗೆಯ ಕಲೆ ಕಲಿಸುವುದಿಲ್ಲ, ಎಲ್ಲೆಂದರಲ್ಲಿ ಉದ್ಧರಿಸಲಾಗುವುದಿಲ್ಲ, ಉಪನಿಷತ್ ಓದುವುದು ಕೆಲಸ ಸಿಗಲು ಸಹಕಾರಿಯಲ್ಲ, ಯುವಕರು ಅದನ್ನು ಓದುವುದಂತೂ ಹಾಸ್ಯಾಸ್ಪದ...) ಅವುಗಳಿಂದ ಕಳಚಿಕೊಂಡೆ. ಆದರೆ...ಬದುಕಿನಲ್ಲಿ ನಂಬಿಕೆಯಿಟ್ಟವನು ದೇವರನ್ನೂ ನಂಬಿರಬೇಕು (!); ಇರುವುದು ಸಾವು, ಮೀರುವುದೇ ಬದುಕು -ಅಂತ ನಾನು ನಂಬಿರುವುದರಿಂದ ಅವುಗಳೆಡೆಗಿನ ಸೆಳೆತವಂತೂ ಇದ್ದೇ ಇದೆ. ಹಾಗಾಗಿಯೇ ಕೆಲವರಿಗಾದರೂ ಇಷ್ಟವಾಗಬಹುದೆಂಬ ಆಸೆಯೊಂದಿಗೆ ಪ್ರಯೋಗವೊಂದನ್ನು ಇಲ್ಲಿ ಮಾಡುತ್ತಿದ್ದೇನೆ. ನಮ್ಮ ಹಲವಾರು ಕವಿಗಳನ್ನು ಪ್ರಭಾವಿಸಿದ, ಶ್ವೇತಾಶ್ವತರ ಉಪನಿಷತ್‌ನಲ್ಲಿ ಬರುವ ಒಂದು ಮಂತ್ರ ಹೀಗಿದೆ :

ದ್ವಾ ಸುಪರ್ಣಾ ಸಯುಜಾ ಸಖಾಯಾ
ಸಮಾನಂ ವೃಕ್ಷಂ ಪರಿಷಸ್ವಜಾತೇ
ತಯೋರನ್ಯಃ ಪಿಪ್ಪಲಂ ಸ್ವಾದ್ವತ್ತ್ಯ-
ನಶ್ನನ್ನನ್ಯೋ ಅಭಿಚಾಕಶೀತಿ
(ಯಾವಾಗಲೂ ಜತೆಯಲ್ಲಿರುವ, ಸಖರಾದ ಎರಡು ಹಕ್ಕಿಗಳು ಒಂದೇ ವೃಕ್ಷವನ್ನು ಆಶ್ರಯಿಸಿಕೊಂಡಿವೆ. ಅವೆರಡರಲ್ಲಿ ಒಂದು ಸವಿಯಾದ ಹಣ್ಣನ್ನು ತಿನ್ನುತ್ತಿದೆ. ಇನ್ನೊಂದು ತಿನ್ನದೆ ನೋಡುತ್ತಿದೆ.) ಈ ಹಕ್ಕಿಗಳು ಯಾವುವು ಎಂಬುದಕ್ಕೆ ಉಪನಿಷತ್ ತನ್ನದೇ ಅರ್ಥ ಹೇಳುತ್ತದೆ. ಆದರೆ ನಮ್ಮ ಕವಿಗಳು ಅದನ್ನು ಕವನಗಳಲ್ಲಿ ಕಟ್ಟಿದ ಬಗೆಯನ್ನು ಮೂರು ಕಂತುಗಳಲ್ಲಿ ಇಲ್ಲಿ ಕೊಡುತ್ತೇನೆ. ಇದು ಮೊದಲ ಕಂತು. ನಿಮ್ಮ ತರ್ಕ-ಕುತರ್ಕಗಳಿಗೆಲ್ಲ ಸ್ವಾಗತ !

ದ್ವಾಸುಪರ್ಣಾ
ಅನಾದಿಯಿಂದಲೂ ಹೀಗೆ,
ಒಂದು ಹಕ್ಕಿ ಹಣ್ಣ ತಿನ್ನುವುದು
ಇನ್ನೊಂದು ಅದರ ನೋಡುವುದು ?
ಹಿತ್ತಲ ಮೆಟ್ಟಿಲಲಿ ಮಗು
ಅಳು ಮೊಗಕೆ ಮೆತ್ತಿದ ಅನ್ನ
ತಾಯ ಕೈಯಲಿ ತಟ್ಟೆ , ತುತ್ತನ್ನ
ಸ್ತನ ಸ್ರವಿಸುವುದು ಮಗುವ
ಅಳು ಹಟದ ಭಾವಕ್ಕೆ

ತೊಟ್ಟಿಲ ಜೀಕಿಂದ
ಹಾಸಿಗೆ ಮೆತ್ತೆಯೊತ್ತು ;
ತಾಯ್ತುಟಿಯ ಮಮತೆ ಮುತ್ತು .
ಆಕೆ ಮಗ್ಗುಲಾಗುವಳು
ಸ್ತನ ಸ್ಪರ್ಶ ಬೆದೆಕರೆಯ
ರತಿ ಬಯಕೆ ಹದಕೆ
ಒಂದು ಹಕ್ಕಿ ಹಣ್ಣ ತಿನುವುದು
ಇನ್ನೊಂದು ಹಣ್ಣೇ ತಾನಾಗುವುದು.
-ಕೆ.ಪಿ.ಸುರೇಶ
(ಯು.ಆರ್.ಅನಂತಮೂರ್ತಿಯವರ ಮುನ್ನುಡಿಯೊಂದಿಗೆ 'ದಡ ಬಿಟ್ಟ ದೋಣಿ’ ಕವನ ಸಂಕಲನ ಪ್ರಕಟಿಸಿದ್ದಾರೆ. ಲ್ಯಾಟಿನ್ ಅಮೆರಿಕದ ಬಗ್ಗೆ ಎಡುವರ್ಡೊ ಗೆಲಿಯಾನೋ ಬರೆದಿರುವ ಪುಸ್ತಕವನ್ನು 'ಬೆಂಕಿಯ ನೆನಪು’ ಎಂದು ಸೊಗಸಾಗಿ ಕನ್ನಡಕ್ಕೆ ತಂದಿದ್ದಾರೆ.)ಪಕ್ಕದ ಮನೆಯಲ್ಲಿ ಉಪನಿಷತ್ತು
ಸೀಬೇ ಮರ. ಕೊಂಬೆ, ಕವೆ-
ಯಲ್ಲಿ ಎರಡು ಹಕ್ಕಿ
ಒಂದು ಹಣ್ಣು ಕುಕ್ಕಿ ಹೆಕ್ಕಿ
ತಿನ್ನುತ್ತಿದೆ. ಹಸಿವು, ದಾಹ.

ಮತ್ತೊಂದು ಸುಮ್ಮನೆ ಕೂತು
ನೋಡುತ್ತಿದೆ. ಮೈಯೆಲ್ಲ ಕಣ್ಣು.

ಹೀಗೆ ಒಬ್ಬ ಗಂಡ. ಅವನ ಹೆಂಡತಿ
ಪಕ್ಕದ ಮನೆ ಸಂಸಾರ.

-ಎ.ಕೆ.ರಾಮಾನುಜನ್Read more...

December 03, 2007

ಹೊರಟಾಗ

ಮಿನುಗುತ್ತಿದ್ದ ಅಮ್ಮನ ಮುಖ
ಇದ್ದಕ್ಕಿದ್ದಂತೆ ಆರಿಸಿದ ದೀಪ.
ಕಣ್ಣುಗಳು ಬಾಡಿ, ಗಂಟಲ ಸೆರೆ ಉಬ್ಬಿ
'ಛೇ, ಇವತ್ತು ಗಿಡಕ್ಕೆ ನೀರೇ ಹಾಕಿಲ್ಲ’
ಎಂಬ ವಿಷಯಾಂತರ ಯತ್ನದಲ್ಲಿ
ಅಪ್ಪ ಬಂದು ಅಮ್ಮನ ಸ್ವರದಲ್ಲಿ ಮಾತಾಡುತ್ತಾರೆ
ಕಂಪಿಸುತ್ತದೆ ಅವಳ ಧ್ವನಿ.
ಕೊನೇ ಕ್ಷಣದಲ್ಲಿ ಮತ್ತೊಂದಷ್ಟು ಕೆಲಸಗಳ ನೆನಪಿಸಿಕೊಂಡು
'ಹಾಗಿದ್ರೆ ಪೈಪ್ ಹಾಕೋ ಕೆಲ್ಸ, ಸ್ಕೂಟರ್ ರಿಪೇರಿ ಮಾಡಿಸ್ತೇವೆ,
ಹೊಸ ಡ್ರಮ್, ಒಂದು ಫೈಬರ್ ಚಯರ್ ತಗೊಳ್ತೇವೆ’ ಕ್ಷಣ ತಡೆದು
'ಮತ್ತೆ ಎಂತದ್ದಕ್ಕೂ ಮುಂದಿನ ತಿಂಗಳು ಬರ್ತೀಯಲ್ಲ’
ಎಂದು ಒಳ ನಡೆಯುತ್ತಾಳೆ, ಕತ್ತಲಲ್ಲಿ ಕೈ ಬೀಸುತ್ತೇನೆ.

ಅಂಗನವಾಡಿಗೆ, ಶಾಲೆಗೆ ಹೊರಟಾಗ-ಇದೇ ಅಮ್ಮ
ಉಲ್ಲಾಸದ ಮೂಟೆ; ದೂರದ ಕಾಲೇಜಿಗೆ ಹೊರಟಾಗ ಕೊಂಚ ಮಂಕು
ಅಪ್ಪನೇ ಹೊರಟುಹೋದಾಗ ನಾಲ್ಕು ದಿನಗಳ ಸಂಕಟ
ಮತ್ತೆ ಒಳಗೊಳಗೆ ಬೇಯುತ್ತ ಬಸಿವ ಬೆವರು, ದೇವರು ದಿಂಡರು.

ಅವಳು ಯಾವತ್ತೂ ಎಲ್ಲಿಗೂ ಹೊರಡುವುದಿಲ್ಲ
ಬಾ ಎಂದರೂ ಇಲ್ಲ, ಹೋಗೆಂದರೂ ಇಲ್ಲ
ಕಾರಣವಿಷ್ಟೆ- ಅವಳು ಹೊರಟಾಗ
ಕಳುಹಿಸಿಕೊಡಲು ಯಾರೂ ಇರುವುದಿಲ್ಲ.

Read more...

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP