November 28, 2007

ತುಂಡು ಪದ್ಯಗಳು


ಸಾವು ಹತ್ತಿರ ಬಂದಾಗ

ಕೆಲವರಿಗೆ ತಿಳಿಯುತ್ತದಂತೆ.

ತಿಳಿದ ಬಳಿಕ ಸತ್ತರೆ

ಅದನ್ನು ಸತ್ತದ್ದು ಎನ್ನಬಹುದೆ?
-------------------------
ಸಾವಿಗೆ ಯಾವ ನಿಯಮಗಳೂ ಇಲ್ಲ .
ಬದುಕಿನಂತೆ.


ಸಾವಿನ ಸವಾರಿ ಬರುವುದು
ಕೋಣನ ಮೇಲೆಯೇ
ಹಾಗಾಗಿಯೇ ಹಲವರಿಗೆ ಗೊತ್ತಾಗುವುದಿಲ್ಲ.

-------------------------

ಸಾಯುವವನಿಗೂ ಇರುವ ಕೊನೆಯ ಆಸೆ
ಕೊಲ್ಲುವವನಿಗಿರುವುದಿಲ್ಲ

ಬದುಕುವವನಿಗೂ ಇರುವ ಕೊನೆಯ ಆಸೆ
ಬದುಕಿಸುವವನಿಗಿರುವುದಿಲ್ಲ.

ಕೊಲ್ಲುವವನು ಬದುಕಿಸುವವನು ಒಬ್ಬನೇ ಆಗುವುದು ಹೀಗೆ.


ಸತ್ರೆ-ಹೋಗ್ಲಿ ಬಿಡಿ ಅನ್ನೋಹಾಗೆ

ಹುಟ್ಟಿದ್ರೆ-ಬರ್‍ಲಿ ಬಿಡಿ ಅನ್ನೋ

ಜನಕ ಮಹಾರಾಜರೂ ಇದ್ದಾರಾ?
-------------------

ಸಾವಿನ ಬಗ್ಗೆ ಬರೆದಿಟ್ಟು ಸಾಯುವುದು

ಓದಿ ಸಾಯುವುದಕ್ಕಿಂತ ಒಳ್ಳೆಯದು !

Read more...

November 22, 2007

ನೀಲಿ ರೆಕ್ಕೆಗಳ ಅಳಿಲು

ಗೆಳೆಯ, ಕವಿ ಹರೀಶ್ ಕೇರ ಬರೆದ ಪುಟ್ಟ ಕತೆ 'ನೀಲಿ ರೆಕ್ಕೆಗಳ ಅಳಿಲು’.
ಅದನ್ನು ಓದಿದಾಗ, ೧೯೮೪ರಲ್ಲೇ ಶ್ರೀ
ಕೃಷ್ಣ ಚೆನ್ನಂಗೋಡ್ ಅವರು ಬರೆದ ಪದ್ಯ 'ನಿರಂತರ’ ನೆನಪಾಯಿತು. ಮಧ್ಯ ವಯಸ್ಸಿನಲ್ಲೇ ತೀರಿಕೊಂಡ ಚೆನ್ನಂಗೋಡರ, ’ಇಲ್ಲದೆ ಇದ್ದಾಗ’ ಎಂಬ ನಾಲ್ಕನೆಯ ಸಂಕಲನದಲ್ಲಿರುವ ಪದ್ಯವದು. ಅದನ್ನು ಓದದೆ ಹರೀಶ್ ಬರೆದ ಈ ಮಾರ್ದವ ಕತೆ ಗದ್ಯದ ಕಾವ್ಯಶಕ್ತಿಗೂ ಸಾಕ್ಷಿಯಾಗಿದೆ. ಗದ್ಯ-ಪದ್ಯದ ಈ ಜುಗಲ್‌ಬಂದಿ ಓದಿ ಆನಂದಿಸಿ.


ನೀಲಿ ರೆಕ್ಕೆಗಳ ಅಳಿಲು
ಳಿಲುಗಳಿಗೆ ರೆಕ್ಕೆಗಳಿರುವುದಿಲ್ಲ. ಆದರೆ ನಾನು ಸಣ್
ಣವನಿದ್ದಾಗ ಒಂದು ಅಳಿಲನ್ನು ನೋಡಿದೆ. ನೀಲಿ ಬಣ್ಣದ ಆ ಅಳಿಲು ತನ್ನ ಕಡು ನೀಲಿ ರೆಕ್ಕೆಗಳನ್ನು ಪಟಪಟ ಬಡಿಯುತ್ತಾ ಹಾರುತ್ತಿತ್ತು. ಒಂದು ಸಂಜೆ ಶಾಲೆ ಬಿಟ್ಟಿತು. ನೀಲಿ ಬಿಳಿ ಬಣ್ಣದ ಪತಂಗಗಳ ಮಹಾಪೂರವೊಂದು ಹೊರನುಗ್ಗಿತು. ಅವು ರೆಕ್ಕೆಗಳನ್ನು ಪಟಪಟಿಸುತ್ತ, ದಿಕ್ಕುದಿಕ್ಕಿಗೆ ಹಾರಿಹೋದವು. ಇದುವರೆಗೂ ಕಲಕಲವೆಂದು ಎಡೆಬಿಡದೆ ಹಾಡುತ್ತಿದ್ದ ಶಾಲೆ, ಪದವೇ ಕಳೆದುಕೊಂಡಂತೆ ಮೌನವಾಯಿತು.

ನಾನು ಮತ್ತು ಪುಟ್ಟಿ ಶಾಲೆಯ ಮೆಟ್ಟಿಲುಗಳನ್ನು ಇಳಿದು,
ಅಂಗಳವನ್ನು ದಾಪು ಹೆಜ್ಜೆಗಳಿಂದ ದಾಟಿ, ಮಣ್ಣುಧೂಳಿನ ಹಾದಿಯಲ್ಲಿ ಇತರ ಮಕ್ಕಳೊಂದಿಗೆ ಮುನ್ನಡೆದೆವು. ಸಂಜೆಯ ಆಕಾಶ ಕೊಂಚ ಕೆಳಗೆ ಬಾಗಿದಂತೆ ಇತ್ತು. ಅದಕ್ಕೆ ಕಾರಣ ಬಾನಿನಲ್ಲಿ ಗೊಂಚಲು ಹಿಂಡು ಕರಿ ಮೋಡಗಳು ತೂಗುತ್ತಿದ್ದವು. ಇನ್ನೇನು ಈಗ ಗುಡುಗಿ ಧಾರಾಕಾರ ಮಳೆ ಬೀಳಬಹುದು ಎಂಬಂತೆ.

ಪುಟ್ಟಿ ನನಗಿಂತ ಎರಡು ಕ್ಲಾಸು ದೊಡ್ಡವಳು. ನಾವಿಬ್ಬರೂ ಅಂದು ಕೊಡೆ ತಂದಿರಲಿಲ್ಲ. ನಮ್ಮ ಮನೆಗಳು ದೂರದಲ್ಲಿದ್ದವು. ನನ್ನನ್ನು ಮನೆಗೆ ತಲುಪಿಸಿ ಪು
ಟ್ಟಿ ಅವಳ ಮನೆಗೆ ಹೋಗಬೇಕಿತ್ತು. ಗುಡ್ಡವೊಂದರ ತಪ್ಪಲಿನಲ್ಲಿದ್ದ ನಮ್ಮ ಮನೆಗಳಿಗೆ ಇಕ್ಕಟ್ಟಾದ, ಹಾವಿನಂತೆ ಅಂಕುಡೊಂಕಾಗಿ ಹರಿಯುವ, ಧೂಳು ತುಂಬಿದ, ಅಕ್ಕಪಕ್ಕ ಕಾಡು ಕವಿದ ಕಾಲುಹಾದಿಗಳ ಮೂಲಕ ಹೋಗಬೇಕಿತ್ತು.

ನಮ್ಮ ಜತೆಗಿದ್ದ ಮಕ್ಕಳು ನಮ್ಮಿಂದ ಕವಲುಗೊಂಡು ಅವರವರ ಮನೆಗಳತ್ತ ಹಾದಿ ಹಿಡಿದರು. ನಾವಿಬ್ಬರೇ ನಮ್ಮ ದಾರಿಯಲ್ಲಿ. ಪುಟ್ಟಿ ಪಕ್ಕನೆ 'ಬಾ, ಪಕ್ಕದ ಗುಡ್ಡದಲ್ಲಿ ನೇರಳೆ ಹಣ್ಣಾಗಿದೆ. ಕೊಯ್ದು ತಿನ್ನುವ, ಇಂದು ಬೆಳಿಗ್ಗೆ ಬರುವಾಗ ನೋಡಿದೆ’ ಎಂದಳು. 'ಮಳೆ ಬಂದರೆ ಏನು ಮಾಡುವುದು ?’ ಎಂದೆ. 'ಬರಲಿಕ್ಕಿಲ್ಲ ಬಾ, ಇಂದು ಬಿಟ್ಟರೆ ನಾಳೆ ಗೋಪಿ ಕಿಟ್ಟಿ ಎಲ್ಲ ತಿಂದು ಮುಗಿಸಿಬಿಡುತ್ತಾರೆ’ ಎಂದಳು. ಆಮೇಲೆ ನನ್ನನ್ನು
ಎಳೆದುಕೊಂಡೇ ದಾರಿ ತೊರೆದು ಗುಡ್ಡದತ್ತ ನುಗ್ಗಿದಳು. ದಾರಿ ಇರಲಿಲ್ಲ ; ನುಗ್ಗಿದ್ದೆ ದಾರಿ. ಅಕ್ಕಪಕ್ಕದಲ್ಲಿ ಸರಳಿ ಕುಂಟಾಲ ಕೇಪಳ ಗಿಡಗಳು, ಚಾಕಟೆ ನೋಕಟೆ ನೆಲ್ಲಿ ಮರಗಳು, ಸುತ್ತ ಹಬ್ಬಿದ ಮಾದೇರಿ ಬಳ್ಳಿಗಳು. ಚಡ್ಡಿ ಹಾಕಿದ ತೊಡೆಗಳಿಂದ ಕೆಳಗೆ ನಗ್ನ ಕಾಲುಗಳಿಗೆ ತೊಡರುವ ಕಿನ್ನರಿ ಮುಳ್ಳುಗಳು. ಮುಂದೆ ಧಾವಿಸುತ್ತಿರುವ ಪುಟ್ಟಿಯ ಲಂಗ ಯಾವ್ಯಾವುದೋ ಪೊದೆಗಳಿಗೆ ಸಿಕ್ಕಿಹಾಕಿಕೊಳ್ಳುತ್ತಿದೆ. ಅದನ್ನು ಎಳೆದು ಬಿಡಿಸುತ್ತ ಗುಡ್ಡದಲ್ಲಿ ಇನ್ನೂ ಮೇಲಕ್ಕೆ ನಾವು. ನೇರಳೆ ಗಿಡಗಳ ತುಂಬ ಗೊಂಚಲು ಗೊಂಚಲು ಕಪ್ಪು ಕಪ್ಪು ಹಣ್ಣುಗಳು. ಗೆಲ್ಲುಗಳು ಕೆಳಕ್ಕೆ ಜಗ್ಗಿಕೊಂಡಿದ್ದವು. ಇಬ್ಬರೂ ಕೈನಿಲುಕಿನಲ್ಲಿರುವ ಕೊಂಬೆಗಳತ್ತ ನುಗ್ಗಿದೆವು. ಒಮ್ಮೆ ಕೈಹಾಕಿ ಜಗ್ಗಿದರೆ ಹಿಡಿತುಂಬ ಹಣ್ಣುಗಳು ಬಂದವು. ನಾಲಿಗೆಯ ಮೇಲೆ ಹುಳಿ ಹುಳಿ ಸಿಹಿ ಸಿಹಿ ಒಗರು. ಕೆಲವೇ ಕ್ಷಣಗಳಲ್ಲಿ ನಾಲಿಗೆ ಬಾಯಿ ಕೈ ಎಲ್ಲ ಕಪ್ಪಾಗಿ ಹೋಯ್ತು.

ಅದೇ ಕ್ಷಣದಲ್ಲಿ ಮೋಡಗಳು ಒಡೆದುಹೋದಂತೆ ಇದ್ದಕ್ಕಿದ್ದಂತೆ ಸಣ್ಣಗೆ ಮಳೆ ಸುರಿಯತೊಡಗಿತು. ಏಕಾಏಕಿ ಬಂದ ಹನಿಮಳೆಯಿಂದ ಖುಷಿಯಾಯಿತು. ಹಣ್ಣು ಜಗ್ಗುತ್ತ ನ
ಾವು ನೆನೆಯತೊಡಗಿದೆವು. ಮೊದಲ ಹನಿಗಳು ನಮ್ಮ ಹಣೆಯನ್ನು ತೋಯಿಸಿ ಹಣೆಯ ಮೇಲಿನಿಂದ ಇಳಿದು ಮೂಗಿನ ತುದಿಯಲ್ಲಿ ಕ್ಷಣಕಾಲ ಕುಳಿತು ತುಟಿಯಲ್ಲಿ ಇಂಗಿದವು. ನಿಧಾನವಾಗಿ ಮಳೆ ಜೋರಾಯಿತು. ಈಗಂತೂ ಪೂರಾ ಒದ್ದೆಯಾದೆವು. ಇಬ್ಬರಿಗೂ ಗಾಬರಿಯಾಯಿತು. ಒದ್ದೆಯಾದರೆ ಮನೆಯಲ್ಲಿ ಅಮ್ಮನಿಂದ ಬಯ್ಯಿಸಿಕೊಳ್ಳಬೇಕಾಗುತ್ತದೆ. ಪುಟ್ಟಿ ನನ್ನನ್ನೂ ಕರೆದುಕೊಂಡು ಪೊದೆಯೊಳಗೆ ನುಗ್ಗಿದಳು. ಅಲ್ಲಿಗೆ ಮಳೆ ಅಷ್ಟು ಸುಲಭವಾಗಿ ಸುರಿಯುವಂತಿರಲಿಲ್ಲ.

ನಿನ್ನ ನಾಲಿಗೆ ತೋರಿಸು ಅಂದಳು. ಕಪ್ಪಾಗಿದೆಯಲ್ಲಾ ಅಂದಳು. ನಿನ್ನದೂ ಹಾಗೇ ಆಗಿದೆ ಎಂದಾಗ ನಕ್ಕಳು. ಆಮೇಲೆ ಗಂಟಲನ್ನು ನೋಡಿ ಇದೇನೋ ಉಬ್ಬಿಕೊಂಡಿದೆ ಅಂದಳು. ಬಳಿಕ ಹುಡುಗರಿಗೆ ಹಾಗಿರುತ್ತದೆ, ನಮಗಿರೊಲ್ಲ ಎಂದಳು. ನನ್ನ ತಲೆ ನೆಂದಿದೆ ಅಂದೆ. ಒರೆಸ್ತೇನೆ ಎಂದವಳು, ನನ್ನ ತಲೆಯನ್ನು ಬಗ್ಗಿಸಿ ಅವಳ ಲಂಗದಿಂದ ಉಜ್ಜತೊಡಗಿದಳು. "ಇವತ್ತು ಕೆಂಪು ಚಡ್ಡಿ ಹಾಕಿದ್ದಿ ಕಾಣಿಸ್ತಿದೆ’ ಅಂತ ಕೀಟಲೆ ಮಾಡಿದೆ. ಫಟ್ಟನೆ ತಲೆಗೆ ಮೊಟಕಿ ಕೆಂಗಣ್ಣು ಬೀರಿದಳು. ಅಳು ಬಂತು. ಕೂಡಲೇ ತಬ್ಬಿಕೂಂಡು, ಅಳಬೇಡ ಮಾರಾಯ ಎಂದಳು. ಬೆಚ್ಚಬೆಚ
್ಚಗೆ ಅನಿಸಿತು. ಮತ್ತೆ ಹಾಗೇ ಕುಳಿತಿದ್ದೆವು. ಮಳೆ ಸಣ್ಣಗೆ ಹನಿಯುತ್ತಿತ್ತು.

ಆಗ ಅಳಿಲು ಕಾಣಿಸಿತು. ನಮ್ಮಿಂದ ಎರಡು ಗಿಡದಾಚೆಗೆ, ನೇರಳೆ ಗಿಡವೊಂದರ ಮೇಲೆ ಕುಳಿತಿತ್ತು. ಸುಮ್ಮನೆ ಕುಳಿತು ಹಣ್ಣು ಮುಕ್ಕುತ್ತಿದ್ದುದರಿಂದ ಇದುವರೆಗೆ ನಮ್ಮ ಗಮನಕ್ಕೆ ಬಂದಿರಲಿಲ್ಲ. ಹಿಂದಿನ ಎರಡು ಕಾಲುಗಳಲ್ಲಿ ಕೊಂಬೆಯನ್ನು ಹಿಡಿದು ಕುಳಿತು, ಮುಂದಿನ ಎರಡು ಕೈಗಳಲ್ಲಿ ಹಣ್ಣು ಹರಿದು ತಿನ್ನುತ್ತಿತ್ತು. ಆಮೇಲೆ ಇದ್ದಕ್ಕಿದ್ದಂತೆ ಕೊಂಬೆಯ ಮೇಲೆ ಓಡಿ, ಜಿಗಿಯಿತು. ಆಗ ಅದರ ಎರಡೂ ಪಕ್ಕಗಳಲ್ಲಿ ವಿಸ್ತಾರವಾದ ಎರಡು ರೆಕ್ಕೆಗಳು ಬಿಚ್ಚಿಕೊಂಡವು. ಕಡುನೀಲಿ ರೆಕ್ಕೆಗಳು
. ಆಮೇಲೆ ಬಡಿದುಕೊಂಡವು, ಮೇಲೂ ಕೆಳಗೂ. ಹಾರುತ್ತಿದ್ದಾಗ ನಮಗೆ ಕಾಣಿಸಿದ್ದು- ಪಟಪಟನೆ ಮೇಲೆ ಕೆಳಗೆ ಬಡಿದುಕೊಂಡ ನೀಲಿ ರೆಕ್ಕೆಗಳು, ಊದಾ ಬಣ್ಣದ ಹೊಟ್ಟೆ, ಹಿಂದೆ ಉದ್ದಕ್ಕೆ ಚಾಚಿಕೊಂಡ ಕಂದು ಕಪ್ಪು ಮಿಶ್ರಿತ ಕುಚ್ಚು ಕುಚ್ಚಿನ ಬಾಲ, ಗಾಳಿಯಲ್ಲಿ ಹಿಂದಕ್ಕೆ ಈಸುತ್ತಿದ್ದ ಮುಂಗಾಲುಗಳು, ಎವೆತೆರೆದ ಕಂಗಳು ಮತ್ತು ಮುಂದಕ್ಕೆ ಚಾಚಿಕೊಂಡ ಮೂತಿ. ಗಕ್ಕನೆ ಕೊಂಬೆಗೆ ಎಗರಿ ಸರಸರನೆ ಓಡಿತು. ಮತ್ತೆ ಕೊಂಚ ಉದಾಸವಾಗಿ ಕುಳಿತು ಬೆನ್ನು ತುರಿಸಿಕೊಂಡಿತು. ಆಗ ಮಡಿಸಿಕೊಂಡ ನೀಲಿ ರೆಕ್ಕೆಗಳು ಕೊಂಚ ಬಿಡಿಸಿಕೊಂಡವು. ಮತ್ತೆ ಏನೋ ನೆನಪಾದವರಂತೆ ಕೊಂಬೆಯಲ್ಲೆ ಹಿಂತಿರುಗಿತು. ಕುಳಿತಿತು.

ನಾವಿಬ್ಬರೂ ಅಳಿಲನ್ನು ಏಕಕಾಲಕ್ಕೆ ನೋಡಿದ್ದೆವು. ಇಬ್ಬರೂ ದಿಗ್ಭೃಮೆ ಕವಿದ ಮೌನದಲ್ಲಿ, ಅದು ಕೊಂಚವೇ ಕದಡಿದರೂ ಮುಂದಿರುವ ಅಳಿಲು ಇಲ್ಲದಂತೆ ಮಾಯವಾಗಿಬಿಡುತ್ತದೆ ಎಂಬ ಅನಿಸಿಕೆಯಲ್ಲಿ ಕುಳಿತಿದ್ದೆವು. ಅದೇನು ಮಾಯಾವಿ ಅಳಿಲೋ, ಗಳಿಗೆ ಗಳಿಗೆಗೂ ಚಂಚಲಗೊಂಡಂತೆ ಕೊಂಬೆಕೊಂಬೆಯಲ್ಲಿ ಚಕಚಕ ಜೀಕುತ್ತಿತ್ತು. ಕ್ಷಣ ನಿಂತಲ್ಲಿ ನಿಲ್ಲುತ್ತಿರಲಿಲ್ಲ. ನಮ್ಮ ಕಣ್ಣುಗಳು ಅಳಿಲು ಹೋ
ದಲ್ಲಿ ಹಾಯುತ್ತಿದ್ದವು. ರೆಕ್ಕೆಗಳ ನೀಲಿ ಒಮ್ಮೆ ಮೈಗೆ ಹರಡಿಕೊಂಡಂತೆ ಅಳಿಲು ತೀರ ಬೇರೆಯೇ ಆಗಿ, ಸಂಜೆ ಮುಗಿಯುತ್ತಿರುವ ಬೆಳಕಿನ ಕೊನೆಯ ಕಿರಣಗಳು ಎಲ್ಲೋ ತೂರಿಬಂದು ತಟ್ಟಿದರೆ ಮತ್ತೆ ಅಳಿಲು ಬೇರೆಯೇ ಆಗಿ, ಎಲೆಗಳ ನಡುವೆ ಮಾಯವಾಗುವಾಗ ಮತ್ತೆ ಮೂಡುವಾಗ ಬೇರೆಯೇ ಆಗಿ, ರೆಕ್ಕೆ ಬಡಿದಾಗ ಸಿಡಿವ ಹನಿಗಳ ತುಂತುರಿನಲ್ಲಿ ಬೇರೆಯೇ ಆಗಿ ಕಾಣುತ್ತಿತ್ತು. ಕುಂಟಾಲ ಗಿಡದಡಿಯಲ್ಲಿ ಮರೆವು ಕವಿದಂತೆ ಮೌನ, ಮಂಪರು ಕವಿದಂತೆ ಮೌನ. ಎಡೆಬಿಡದೆ ಸುರಿಯುತ್ತಿರುವ ಹನಿಮಳೆ, ದಟ್ಟೈಸಿ ತೂಗುತ್ತಿರುವ ಕರಿಮೋಡ, ಕವಿಯುತ್ತಿರುವ ಕತ್ತಲೆ, ಮುಂದೆ ಹೌದೋ ಅಲ್ಲವೋ ಎಂಬಂತೆ ಕಾಣುತ್ತಿರುವ ಅಳಿಲು, ಎಲ್ಲವೂ ಮಂಪರಿನ ಲೋಕದಲ್ಲಿ ನಡೆಯುತ್ತಿರುವಂತೆ, ಮುಗಿಯಲಾರದ ಕನಸೊಂದು ಹಚ್ಚಡ ಹೊಚ್ಚಿದಂತೆ.

ಇದ್ದಕ್ಕಿದ್ದಂತೆ ಪುಟ್ಟಿ "ಏಳು ಹೋಗುವಾ’ ಅಂದಳು.
ದಗ್ಗನೆದ್ದಂತೆ ಕಣ್ಣ ಮುಂದಿದ್ದ ಅಳಿಲು ಅಲ್ಲಿ ಇರಲೇ ಇಲ್ಲವೆಂಬಂತೆ ಮಾಯವಾಗಿತ್ತು. ನಾವಿಬ್ಬರೂ ಸರಸರ ನಡೆದು ಮನೆ ಸೇರಿಕೊಂಡೆವು. ದಾರಿಯಲ್ಲೆಲ್ಲೂ ಪುಟ್ಟಿ ಮಾತನಾಡಲಿಲ್ಲ, ನಾನೂ ಕೂಡ. ಮನೆಗೆ ಬಂದ ಬಳಿಕ ಅಪ್ಪ ಅಮ್ಮನಿಗೆ 'ನಾನಿಂದು ಹಾರುವ ಅಳಿಲು ಕಂಡೆ’ ಎಂದು ಹೇಳಿದೆ. ಅವರು ನಂಬಲಿಲ್ಲ. ಮರುದಿನ ಶಾಲೆಗೆ ಹೊರಟ ಹೊತ್ತಿಗೆ, ಪುಟ್ಟಿಯ ಅಮ್ಮ ಬಂದರು. "ಇವತ್ತು ಪುಟ್ಟಿ ಶಾಲೆಗೆ ಬರೊಲ್ಲ, ನೀ ಹೋಗೋ’ ಎಂದರು. 'ಯಾಕೆ ?’ ಅಂತ ಕೇಳಿದೆ. 'ಅವಳು ಹೊರಗೆ ಕೂತಿದಾಳೆ. ನಿಂಗೊತ್ತಾಗಲ್ಲ, ಅಮ್ಮ ಎಲ್ಲಿದಾರೆ ?’ ಎಂದು ಮನೆಯೊಳಗೆ ಹೋದರು. ನನ
ಗೆ ನಿಜಕ್ಕೂ ಗೊತ್ತಾಗಲಿಲ್ಲ. ನಾನು ನೀಲಿ ರೆಕ್ಕೆಗಳ ಅಳಿಲನ್ನು ನೋಡಿದ್ದೇನೆ ಎಂದು ಹೇಳಿದರೆ ಇದುವರೆಗೆ ಯಾರೂ ನಂಬಿಲ್ಲ. ಆದರೆ ಪುಟ್ಟಿ ಅಳಿಲಿನ ಬಗ್ಗೆ ಯಾರ ಹತ್ತಿರವೂ ಇದುವರೆಗೆ ಹೇಳಿಲ್ಲ ಅಂತ ಕಾಣುತ್ತದೆ.

-ಹರೀಶ್ ಕೇರ--------------------------------------------------------------
ಮಕ್ಕಳ ಬಗ್ಗೆ, ಮಕ್ಕಳ ಪದ್ಯದ ಲಯದಲ್ಲಿ, ವಯಸ್ಕರಿಗಾಗಿ ಬರೆದ ಪದ್ಯ !

ನಿರಂತರ
ಲಂಗದ ಹುಡುಗಿಯು ಅಂಗಳದಂಚಿಗೆ
ಬಂದಳು ಸಂಜೆಯ ಹೊತ್ತು
ನನಗೂ ಆಕೆಗು ವರ್ಷಗಳಂತರ
ಇದ್ದುದರರಿವೆನಗಿತ್ತು

ಮನೆಯ ಹಿಂದಿನ ಗುಡ್ಡವನೇರಲು
ದೊಡ್ಡವಳಾಕೆಯು ಮುಂದೆ
ಶಿಳ್ಳೆ ಹೊಡೆಯುತ ನಾನೂ ನಡೆದಿರೆ
ದಾರಿಯು ಇಬ್ಬರದೊಂದೆ

ಹೆಜ್ಜೆ ಹೆಜ್ಜೆಗೂ ಛೇಡಿಸುತಿದ್ದಳು
ನಾನೋ ರೇಗಿಸುತಿದ್ದೆ
ಕಿತ್ತ ಗೋಡಂಬಿಯ ಕೊರೆಯುತ್ತಿದ್ದಳು
ನಾನೂ ತಿನ್ನುತಲಿದ್ದೆ

ಏರಿನಲೊಂದು ತರುವಿಗೆ ಒರಗಿ
ನಿಂತಳು ನಾನೂ ಜರುಗಿ
ಸನಿಹಕೆ ಆಕೆಯ ಕಂಗಳು ಕೆಂಪು
ಮನದಲ್ಲೇನೋ ಜರಗಿ

ಥಟ್ಟನೆ ನನ್ನೆಡೆ ನೋಡುತ ಏಕೋ
ರೆಂಬೆಗೆ ಬಡಿದಳು ಕತ್ತಿ
ಏನೋ ಒಂಥರಾ ನನಗೂ ಆಕೆಯು
ಸವರಲು ಬೆನ್ನನು ಒತ್ತಿ

ಬಡಿದಾ ರಭಸಕೆ ಚಿಮ್ಮಿತು ಕತ್ತಿ
ಹುಡುಕಲು ಹೊರಟಳು ಬಗ್ಗಿ
ಸಿಕ್ಕಲು ಹಿಡಿಗೆ ಸಿಕ್ಕಿಸಿ ನೆಲಕೆ
ಕುಕ್ಕಲು ಕಣ್ಣಲಿ ಸುಗ್ಗಿ

ತಬ್ಬುತ ತಡವುತ ಖುಶಿಯಲಿ ಎದ್ದೆವು
ಕೊಡಹುತ ಮೈಕೈ ಧೂಳು
ಮೇಗಡೆ ಆಗಸದಂಗೈಯಲ್ಲಿ
ಚಂದ್ರ ಗೋಡಂಬಿಯ ಸೀಳು.

-ಶ್ರೀಕೃಷ್ಣ ಚೆನ್ನಂಗೋಡ್

Read more...

November 14, 2007

ಬ್ಲಾಗ್ ಧ್ಯೇಯಗೀತೆ

ಬ್ಲಾಗಲ್ ಬರಿಯೋದಂದ್ರೆ ಬಹಳ ಸುಲ್ಬದ್ ಕೆಲ್ಸ ಅನ್ಬೇಡಿ
ಬಾಗ್ಲಲ್ ಬಂದೂ ಬ್ಯಾಬ್ಯಾ ಅನ್ನೋರ್ ಮಾತು ಕೇಳ್ಲೇಬೇಡಿ

ಎಷ್ಟ್ ಬರೆದ್ರೂ ಮಾತಾಡಲ್ಲ ಕೆಲೋರು ಭಾರೀ 'ಟೈಟು’
ಕಾಲ್ ಕೆರ್‍ಕೊಂಡ್ ಜಗಳಕ್ಕೋದ್ರೂ ಸಿಕ್ಕಾಪಟ್ಟೆ ಸೈಲೆಂಟು!

ಹಗ್ಲು ರಾತ್ರಿ ಕುಟ್ಟಿದ್ರೂನು ಇಲ್ಲ ಸಂಬ್ಳ-ಪ್ರಶಸ್ತಿ
ಆಫೀಸ್ ಟೈಮಲ್ಲಿ ಬ್ಲಾಗ್ ಓದೋರ ಸಂಖ್ಯೆ ಬಹ್ಳ ಜಾಸ್ತಿ !
ಬ್ಲಾಗಿಂಗ್ ಅಂದ್ರೆ ಬರೀ ಹುಚ್ಚು ಬ್ಲಾಗರ್ ಅಂದ್ರೆ ಕೋಡು
ಹೇಳೋರಿಲ್ಲ ಕೇಳೋರಿಲ್ಲ ಓದೋರಿಲ್ಲ ಪಾಡು!

'ಅವ್ರಿವ್ರ್ ಬಗ್ಗೆ , ಲೋಕದ್ ಬಗ್ಗೆ ಹೇಳಿದ್ದೇ ಹೇಳ್ಕೊತಾನೆ
ಇವ್ನ ಜಂಭ, ಒಳಗಿನ್ ಬುರುಡೆ ಸುಮ್ನೆ ತೋರ್‌ಸ್ತಾನೆ'
ಅಂತಂದ್ಕೊಂಡೆ ನೋಡ್ಕೊಂಡ್ ಓದ್ಕಂಡ್ ಹೋಗ್ತಿರೋದು ನೀವೆ
ಬರ್‍ಕೊಂಡ್ ಬರ್‍ಕೊಂಡ್ ಚಚ್ಚಾಕ್ತಿರೋದು ಲೆಕ್ಕಕ್ಕಿಲ್ದ ನಾವೇ!

ಹೈಸ್ಕೂಲ್ ಹುಡ್ಗಿ ಕನ್ನಡಿ ಮುಂದೆ ಕೂತ್ಕಂಡಿರೋ ಹಂಗೆ
ಮಾನಿಟ್ರ್ ಮುಂದೆ ಕಣ್‌ಬಿಟ್ಕೊಂಡು 'ನೆಟ್ಟು’ ಬಿಚ್‌ಹಾಕೊಂಡು
ಬ್ಲಾಗಿನೊಳಗೆ ಪೇಪರ್‍ನೋರು ಎಲ್ಲಾ ಬಾಗ್ಲು ತಕ್ಕೊಂಡು
ಓದಿ ಓದಿ ಬರಿಯೋದೊಂದು ಎಲ್ರೂ ಓದೋವಂತದ್ದು
ಏನೂ ಓದ್ದೆ ಬರಿಯೋದೊಂದು ಯಾರೂ ಬರಿಯಾಕಾಗದ್ದು!

ಹಿಂಗೆ ಬರ್‍ಕೊಂಡ್ ಬರ್‍ಕೊಂಡ್ ಒಯ್ತಾ ಇದ್ರೆ ಏನಾಗುತ್ತೊ ಗೊತ್ತಿಲ್ಲ
ತಿಳಿಯೋವರ್‍ಗೆ, ನಿಮ್ ಅಮ್ಮನ್ ಆಣೆ, ಬರಿಯೋದಂತೂ ನಿಲ್ಸಲ್ಲ!

Read more...

November 09, 2007

ನಗರದ ನಂದಾದೀಪದ ಸುತ್ತ ಹಳ್ಳಿಯ 'ಅಕ್ಷರ’ಚಿಟ್ಟೆ

ಬೆಂಗಳೂರಿನಲ್ಲಿ ಹಚ್ಚಿದ ನಕ್ಷತ್ರಕಡ್ಡಿಗಳಲ್ಲಿ ಹಲವರಿಗೆ ಊರಿನ ದಾರಿ ಕಾಣುತ್ತಿರುತ್ತದೆ. ಗಗನಕ್ಕೆ ಚಿಮ್ಮಿದ ರಾಕೆಟ್‌ನಲ್ಲಿ ಮನಸ್ಸು ಪ್ರಯಾಣ ಮಾಡುತ್ತದೆ. ಊರು ಬಿಟ್ಟು ಬಂದು ಪ್ರತಿರಾತ್ರಿಯೂ ಬೆಂಗಳೂರಿನ ನಿಯಾನ್ ದೀಪಗಳ ಬೆಳಕಿನಲ್ಲಿ ಮೀಯುತ್ತಿರುವವರಿಗೆ, ಇದು ಹಳ್ಳಿಯ ಅಕ್ಷರದೀಪ. ಊರಿಗೆ ಹೋಗಲು ಟಿಕೆಟ್, ರಜೆ ಸಿಕ್ಕದವರಿಗೆ ಬೋನಸ್ !


ತುಳಸೀಕಟ್ಟೆಯ ಸುತ್ತಲೂ ಹತ್ತಾರು ಪುಟ್ಟ ಪುಟ್ಟ ಕ್ಯಾಂಡಲ್‌ಗಳು ಉರಿಯುತ್ತಿವೆ. ನಾಲ್ಕು ಮೂಲೆಗಳಿಗೆ ಮಾತ್ರ ಒಂದೊಂದು ಮಣ್ಣಿನ ಹಣತೆ. (ಅವು ಊರಲ್ಲೀಗ ಸಿಗುವುದಿಲ್ಲವೆಂದು ಬೆಂಗಳೂರಿನ "ಬಿಗ್ ಬಜಾರ್’ನಿಂದ ತರಿಸಿದ್ದು. ) ಕಟ್ಟೆಯಲ್ಲಿ ಸೊಂಪಾಗಿ ಹಚ್ಚ ಹಸಿರಾಗಿ ಬೆಳೆದ ತುಳಸೀ ಗಿಡ. ಅದರ ಕದಿರುಗಳನ್ನೆಲ್ಲ ಅಮ್ಮ ಸಂಜೆಯಷ್ಟೇ ಕಿತ್ತಿದ್ದಾಳೆ. ಕಟ್ಟೆಯೆದುರು ಸೆಗಣಿ ಸಾರಿಸಿ ಒಪ್ಪವಾದ ನೆಲದಲ್ಲಿ ಹೂವಿನೆಳೆಯ ರಂಗೋಲಿ. ಪಕ್ಕದಲ್ಲಿ ಬಲಿಯೇಂದ್ರ ಹಾಗೂ ಆತನ ಪತ್ನಿಯ ಪ್ರತೀಕವಾಗಿ ಹಾಲೆ ಮರದ ಎರಡು ಕಂಬಗಳು. (ವಾಮನನಿಂದ ಪಾತಾಳಕ್ಕೆ ತಳ್ಳಲ್ಪಟ್ಟಿರುವ ಬಲಿ ಚಕ್ರವರ್ತಿಯು ಬಲಿ ಪಾಡ್ಯಮಿಯ ಈ ಒಂದುದಿನ ಮಾತ್ರ ಭೂಮಿಗೆ ಬರುತ್ತಾನಂತೆ) ನಾಲ್ಕಡಿ ಎತ್ತರದ ಆ ಎರಡು ಕಂಬಗಳಿಗೆ ಅಡ್ಡಕ್ಕೆ ಮತ್ತು ಮೂಲೆಯಿಂದ ಮೂಲೆಗೆ ಅಡಿಕೆ ಮರದ ಸಲಕೆಗಳು. ಅವು ಮುಚ್ಚಿ ಹೋಗುವಂತೆ ತುಳಸಿ, ಲಂಬಪುಷ್ಪ, ಕೇಪಳೆ, ದಾಸವಾಳ, ಸದಾಮಲ್ಲಿಗೆ, ರಥಪುಷ್ಪ ಹೀಗೆ ಅಂಗಳದಲ್ಲಿ ಬೆಳೆದ, ತೋಟದಲ್ಲಿ ಕೈಗೆ ಸಿಕ್ಕಿದ ಹೂಗಳ ಹಾರ. ಗೋಲಿಕಾಯಿಯಷ್ಟು ದೊಡ್ಡದಿರುವ ಹಸಿರು ಅಂಬಳ ಕಾಯಿಗಳನ್ನು ಬಾಳೆನಾರಿನಲ್ಲಿ ಸುರಿದು ಸಿದ್ಧವಾದ ಉದ್ದನೆಯ ಮಾಲೆ. ಮನೆಯೆದುರಿನ ತುಳಸೀಕಟ್ಟೆಯೇ ಬೃಂದಾವನವಾಗುವುದಕ್ಕೆ ಇನ್ನೇನು ಬೇಕು ?

ಮುದುಕ ನಾರಾಯಣ ಆಚಾರಿ ನಿನ್ನೆಯೇ ಬಂದು ಮರದ ಅಟ್ಟೆಯನ್ನು ಅಂಗಳದೆದುರಿನ ಗಿಡವೊಂದರಲ್ಲಿ ಸಿಕ್ಕಿಸಿ ಹೋಗಿದ್ದಾನೆ. ಚತುರ್ಭುಜಗಳ ಆ ಮೂರು ಅಟ್ಟೆಗಳನ್ನು ಬಲಿಯೇಂದ್ರನ ಮರಕ್ಕೆ ಕಿರೀಟದಂತೆ ತೊಡಿಸಲಾಗುತ್ತದೆ. ಕಳೆದ ಬಾರಿ ಅದನ್ನು ಮೂವತ್ತು ರೂಪಾಯಿಗೆ ಮಾಡಿಕೊಟ್ಟಿದ್ದ ಆಚಾರಿ, ಈ ಬಾರಿ ನಲ್ವತ್ತಾದರೂ ಕೊಡಬೇಕೆಂದು ಪಟ್ಟು ಹಿಡಿದಿದ್ದಾನೆ. 'ಪ್ರತಿ ವರ್ಷ ಹತ್ತತ್ತು ರೂಪಾಯಿ ಜಾಸ್ತಿ ಮಾಡಿದ್ರೆ ಹೇಗೆ? ಅಡಿಕೆ ರೇಟು ಹಾಗೆ ಜಾಸ್ತಿಯಾಗ್ತಾ ಹೋಗ್ತದಾ?’ ಅಂತ ಹೇಳಿಕೊಂಡೇ ಅಪ್ಪ ನಲ್ವತ್ತು ರೂಪಾಯಿ ಕೊಟ್ಟಿದ್ದಾರೆ. 'ಪಾಪ, ಇವ ಇರುವಷ್ಟು ದಿನ ತಂದುಕೊಟ್ಟಾನು. ಇನ್ನು ಇವನ ಮಕ್ಕಳು ಮರದ ಕೆಲ್ಸ ಮಾಡ್ತಾ ಇದ್ದಾರೋ ಇಲ್ವಾ ಅನ್ನೋದೇ ಗೊತ್ತಿಲ್ಲ. ಮಾಡಿದರೂ ಅವರು ಇದನ್ನೆಲ್ಲಾ ಮನೆ ಬಾಗಿಲಿಗೆ ತರ್‍ತಾರಾ? ಅಥವಾ ನಮ್ಮ ಮಕ್ಕಳಾದರೂ ಈ ಬಲಿಯೇಂದ್ರ ಹಾಕ್ತಾರೆ ಅಂತ ಏನು ಗ್ಯಾರಂಟಿ?’ ಎನ್ನುತ್ತಾ ಕನ್ನಡಕದ ಮೇಲಿನಿಂದ ಮಕ್ಕಳನ್ನು ನೋಡಿ ನಗುತ್ತಾರೆ. ಆದರೆ ಅವರ ಪ್ರಶ್ನೆಯಲ್ಲಿ, ಹಾಸ್ಯದಲ್ಲಿ - ಮಕ್ಕಳು ತನ್ನ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತಾರೆನ್ನುವ ಅಚಲ ವಿಶ್ವಾಸ ತುಂಬಿದಂತಿರುತ್ತದೆ !

ಬಲಿ ಪಾಡ್ಯಮಿಯ ದಿನದ ಸಂಜೆಯಲ್ಲೂ ವಿಶೇಷ ಆಹ್ಲಾದವಿದೆ. ಅಡುಗೆಮನೆ ಸತತವಾಗಿ ಶಬ್ದ ಮಾಡುತ್ತಲೇ ಇರುತ್ತದೆ. ಮಕ್ಕಳು ಹೂ ಕೊಯ್ದು ಬಲಿಯೇಂದ್ರನ ಅಲಂಕಾರದಲ್ಲಿ ಮಗ್ನರಾಗಿದ್ದಾರೆ ; ಆಗಾಗ ತಲೆ ಮೇಲೆತ್ತಿ ಆಕಾಶ ಶುಭ್ರವಾಗಿರುವುದನ್ನು ಕಂಡು ಖುಶಿಗೊಳ್ಳುತ್ತಾರೆ. ಸೀಮೆಎಣ್ಣೆ ತುಂಬಿ ಹೊಸಬತ್ತಿ ಹಾಕಿದ ಹಿತ್ತಾಳೆಯ ದೀಪಗಳನ್ನೆಲ್ಲ ಸಾಲಾಗಿ ಜೋಡಿಸಿದ ಅಜ್ಜಿ 'ಇಕೊ ನೋಡು, ಕಾಲಾಳು...ರಥ...ಆನೆ...ಮಂತ್ರಿ ಎಲ್ಲ ರೆಡಿ’ ಅನ್ನುತ್ತಿದ್ದಾರೆ. ಮುಗಿಯದ ಕೆಲಸಕ್ಕೆ ಬಯ್ದುಕೊಳ್ಳುತ್ತಾ , ಒಬ್ಬರಾದ ನಂತರ ಒಬ್ಬರಿಗೆ ಸ್ನಾನಕ್ಕೆ ಹೋಗುವ ಧಾವಂತ. ಎಲ್ಲರ ಎಲ್ಲ ಕೆಲಸಗಳಲ್ಲೂ ಏನೋ ಚುರುಕುತನ.
ರಾತ್ರಿಯ ಬೆಳಕಿಗಾಗಿ ಸಂಜೆ ನಿಧಾನವಾಗಿ ಕಾವೇರಿಸಿಕೊಳ್ಳುತ್ತಿದೆ.

ರಾತ್ರಿ ಎಂಟಕ್ಕೆ ಅಪ್ಪ ಬಿಳಿ ಪಂಚೆಯುಟ್ಟು ಮೈಮೇಲೆ ಶಾಲನ್ನು ಎಳೆದುಕೊಳ್ಳುತ್ತಾ ಬಲಿಯೇಂದ್ರನ ಎದುರು ಆಗಮಿಸುತ್ತಾರೆ. ಪೂಜೆಗೆ ಬೇಕಾದ ಪರಿಕರಗಳನ್ನೆಲ್ಲಾ ಸಿದ್ಧಪಡಿಸಿಡುವ ಜವಾಬ್ದಾರಿ ಹೆಂಗಸರದ್ದ್ದು. ಅಪ್ಪನಿಗೆ ಮಂತ್ರಗಳೇನೂ ಸರಿಯಾಗಿ ಬರುವುದಿಲ್ಲ . (ಅಂದರೆ ಏನೇನೂ ಬರುವುದಿಲ್ಲ ಅಂತಲೇ ಅರ್ಥ ! ) ಆದರೆ ಕ್ರಿಯೆ ಬಹಳ ಜೋರು. ಹರಿವಾಣ, ಕೌಳಿಗೆ ಸಕ್ಕಣ, ಹೂವು-ಗಂಧ ತಕ್ಷಣ ಕೈಗೆ ಸಿಗದಿದ್ದರೆ ಸಿಟ್ಟೇ ಬಂದೀತು ! ಸೀರೆ ಎತ್ತಿ ಕಟ್ಟಿ ಎತ್ತರೆತ್ತರದ ಹಳೆ ಮನೆಯ ಮೆಟ್ಟಿಲುಗಳನ್ನು ಹತ್ತಿಳಿಯುತ್ತಾ "ದೀಪಕ್ಕೆ ಬತ್ತಿ ಹಾಕುದ್ರಲ್ಲಿ , ಗಂಧ ತೇಯೋದ್ರಲ್ಲಿ ನಾನು ಎಕ್ಸ್‌ಪರ್ಟು’ ಅಂತ ಅಜ್ಜಿ ಹೇಳುವುದನ್ನು ಅವರ ಬಾಯಿಯಿಂದಲೇ ಕೇಳಬೇಕು. ಅಮ್ಮನಿಗೆ ಮಾತ್ರ, ಎಲ್ಲಿ ಯಾವುದಕ್ಕೆ ಅಪ್ಪ ಬೈಯುತ್ತಾರೋ ಅಂತ ಭಯ. ಮೂವತ್ತು ವರ್ಷಗಳಿಂದ ಬರುತ್ತಿರುವ ಮನೆ ಕೆಲಸದವನಿಗೋ, ಅಂದು ಭಾರೀ ನಿಷ್ಠೆ , ಶ್ರದ್ಧಾ ಭಕ್ತಿ. ಸಾಯಂಕಾಲ ಮಿಂದು ಮಡಿಯಾಗಿ ಬಂದರೆ ರಾತ್ರಿಯ ಬಾರಣೆ ಮುಗಿದ ನಂತರ ಎಲೆಅಡಿಕೆ ಹಾಕಿ ಮಾತಾಡಿ ಹನ್ನೊಂದು ಗಂಟೆಗೇ ಅವನು ಹೊರಡುವುದು. 'ನೀವು ಪಟಾಕಿ ಹೊಟ್ಟುಸುದ್ರಲ್ಲಿ ನನ್ನ ದೀಪ ನಂದಿ ಹೋಯ್ತು’, 'ರಾಮಾ, ನಿಮ್ಮ ಪಟಾಕಿ ಶಬ್ದಕ್ಕೆ ಕೈಲಿದ್ದ ಮಜ್ಜಿಗೆಯೂ ಚೆಲ್ಲಿ ಹೋಯ್ತು ’ ಅಂತೆಲ್ಲ ಹೇಳಿಕೊಳ್ಳುವ ಅಮ್ಮ-ಚಿಕ್ಕಮ್ಮ-ಅಜ್ಜಿ -ಅತ್ತೆಯಂದಿರು, ಮಕ್ಕಳಿಗೆ ಯಾವ ಲೆಕ್ಕ? ಬಿದಿರಹಿಂಡಿಲಿಂದ (ಫ್ಲವರ್‌ಪಾಟ್)ಎತ್ತರಕ್ಕೆ ಚಿಮ್ಮಿದ ಅಗ್ನಿವರ್ಷದ ಬೆಳಕಿನಲ್ಲಿ ಸುತ್ತಲಿನ ಬಣ್ಣದ ಕ್ರೋಟನ್ ಗಿಡಗಳೂ ತೀರಾ ಮಂಕಾಗಿ ಕಾಣುತ್ತವೆ.

ಕವಿ ಅಡಿಗರು ಹೇಳುತ್ತಾರೆ 'ಮಿಂಚು ಕತ್ತಲ ಕಡಲ ಉತ್ತು ನಡೆದಿದೆ ಬೆಳಕು ಹಡಗು ದಿಗ್ದೇಶಕ್ಕೆ , ಸಿಡಿಮದ್ದಿನುಂಡೆ ಪ್ರತಿ ಮನೆಯಲ್ಲಿ !’ ಅಜ್ಜಿ ತನ್ನೆಲ್ಲ ಶಕ್ತಿ ಒಗ್ಗೂಡಿಸಿ ತೇಲುಗಣ್ಣಾಗಿಸಿ ಶಂಖ ಊದುತ್ತಾರೆ. ಎರಡಡಿ ಅಗಲದ ಹರಿವಾಣಕ್ಕೆ ಸಿಂಬೆ ಸುತ್ತಿದ ಕೋಲಿನಿಂದ ಭಂ ಭಂ ಭಂ ಎಂದು ಚಿಕ್ಕಯ್ಯ ಬಾರಿಸುತ್ತಾರೆ. ಮಕ್ಕಳಿಗೆಲ್ಲ ಅದೊಂದು ರೋಮಾಂಚಕಾರಿ ದೃಶ್ಯ. ಒಂಬತ್ತು ಗಂಟೆಗೆ ಪೂಜೆ ಮುಗಿಯುತ್ತದೆ. ತೋಟದಾಚೆಗಿನ ದೇವಸ್ಥಾನದಲ್ಲೂ 'ಬಲೀಂದ್ರ ಬಲೀಂದ್ರ ಕೂ, ಬಲೀಂದ್ರ ಬಲೀಂದ್ರ ಕೂ’ ಎಂದು ಊರವರೆಲ್ಲ ಕೂಗಿ ಬಲಿಯೇಂದ್ರನನ್ನು ಭೂಮಿಗೆ ಕರೆಯುವ ಸ್ವರ ಕೇಳಿದಾಗಲೇ ಮನೆಯಲ್ಲಿದ್ದವರಿಗೂ ಪೂಜೆ ಪೂರ್ತಿಯಾದ ತೃಪ್ತಿ. ಗೋಪೂಜೆಗೆಂದು ಹಟ್ಟಿಗೆ ಹೋಗಿ ದನ ಗಂಗೆಗೆ ಕತ್ತಲಲ್ಲೇ ಆರತಿ ಎತ್ತುವಾಗಲಂತೂ ಆ ಪರಿಸರವೇ ಪೂರ್ತಿ ಹೊಸದಾಗಿ ಕಾಣಿಸುತ್ತದೆ. ನಾವು ತಿನ್ನುವ ಬರಿಯಕ್ಕಿ ದೋಸೆ, ಬಿಸಿನೀರು ಕಡುಬು, ಸಿಹಿ ಅವಲಕ್ಕಿ , ಸೇಮಿಗೆಗಳನ್ನು ಅದೊಂದು ದಿನ ತಿನ್ನಲು ದನಕ್ಕೂ ಕೊಡುತ್ತಾರೆ. ಅದಕ್ಕೆ ಆರತಿ ಎತ್ತಿ, ತೀರ್ಥ ಪ್ರೋಕ್ಷಿಸಿದ ಮೇಲೆ ಹಣೆಗೆ ನಾಮ ಹಾಕುವುದಕ್ಕೆ ಮಾತ್ರ ಅಪ್ಪ ಬಹಳ ಪರದಾಡಬೇಕಾಗುತ್ತದೆ. ಘಂಟಾಮಣಿ - ಪಟಾಕಿಗಳ ಸದ್ದು , ಆರತಿಯ ಬೆಳಕಿಗೆ ಹೆದರುತ್ತಾ ದೋಸೆಗೆ ನಾಲಗೆ ಚಾಚುತ್ತಾ ಅದು ಗೋಣು ತಿರುಗಿಸುತ್ತಲೇ ಇರುತ್ತದೆ. ಎಳೆಯ ಹೊರಟ ನಾಮಗಳೆಲ್ಲಾ ಮೂತಿಗೋ, ಕೊಂಬಿಗೋ ತಾಗುತ್ತವೆ. ಅಂತೂ ಆ ಕಂದು ದನದ ಹಣೆಯ ಮೇಲೆ ಮಾತ್ರ ಬೆಳ್ಳಗೆ ಕೂದಲಿರುವಲ್ಲಿಗೇ ಕುಂಕುಮದ ನಾಮ ಎಳೆಯುತ್ತಾರೆ ಅಪ್ಪ. ಆಗ ಹಸು ಅತ್ಯಂತ ವಿಚಿತ್ರವಾಗಿ ಕಾಣಿಸುತ್ತದೆ .

'ದೀಪಗಳು ಮಂಗಳ ಪ್ರತೀಕಗಳಾಗಿ ಲೋಕದಲ್ಲಿ ಎಲ್ಲ ಸ್ಥಳಗಳಲ್ಲೂ ಬೆಳಗುತ್ತಿವೆ. ದೇವರು ಹಚ್ಚಿಟ್ಟಿರುವ ದೀಪ ಸೂರ್ಯ !’ ಎನ್ನುವ ಹಿರಿಯ ಕವಿ ಪುತಿನ ಬರೆದಿದ್ದಾರೆ- "ಅನಿರ್ವಚನೀಯವಾದ ಧ್ವನಿ ಸೌಂದರ್ಯವುಳ್ಳ ಅನರ್ಘ್ಯ ದೀಪೋಪಮೆಯೊಂದು, ವಿರಹತಪ್ತ ರಾಮ, ರಾವಣ ವಧೆಯಾದ ನಂತರ ಸೀತೆಯನ್ನು ಹತ್ತಿರಕ್ಕೆ ಕರೆಯಿಸಿಕೊಂಡು ನೋಡಿ ಆಡುವ ಕಿಡಿಮಾತುಗಳಲ್ಲಿ ಕಾಣಿಸಿಕೊಳ್ಳುತ್ತದೆ.

ಪ್ರಾಪ್ತಚಾರಿತ್ರ ಸಂದೇಹಾ ಮಮ ಪ್ರತಿಮುಖೇ ಸ್ಥಿತಾ
ದೀಪೋ ನೇತ್ರಾತುರಸ್ಯೇವ ಪ್ರತಿಕೂಲಾಸಿ ಮೇ ಧೃಡಂ
ನಿನ್ನ ನಡವಳಿಕೆಯ ವಿಷಯದಲ್ಲಿ ಸಂದೇಹ ಹುಟ್ಟುವ ಸ್ಥಿತಿ ನನಗೆ ಬಂದಿದೆ. ನನ್ನಿದಿರು ನೀನು ಈಗ ನಿಂತಿದ್ದೀಯೆ. ಕಣ್ಣಿಗೆ ಬೇನೆ ಹಿಡಿದಿರುವವನಿಗೆ ದೀಪ ಹೇಗೋ ಹಾಗೆ ಈಗ ನೀನು ನನಗೆ ಹಿತವಾಗಿಲ್ಲ. ಇದು ನಿಜ. "ದೀಪೋ ನೇತ್ರಾತುರಸ್ಯೇವ’. ಆ ವೇಳೆಯಲ್ಲಿ ರಾಮ ತನ್ನ ಸೀತೆಯಲ್ಲಿ ಯಾವ ದೋಷವನ್ನೂ ಕಾಣಲಾರ, ದೀಪದಂತೆ ಆಕೆ ಶುದ್ಧೆ, ಕಲ್ಯಾಣಯುಕ್ತೆ, ತೇಜಸ್ವಿನಿ. ಬೇನೆ ಇರುವುದು ಲೋಕಾಪವಾದ ಭೀತನಾದ ತನ್ನಲ್ಲಿ , ತನ್ನ ಕಣ್ಣಿನಲ್ಲಿ. ಈ ಬೇನೆಯನ್ನು ತಂದಿರುವುದು ತಮ್ಮಿಬ್ಬರಿಗೂ ಬಾಹ್ಯವಾದ ಬಹಿಸ್ಸಮಾಜ-ತಮ್ಮ ನಿಯಂತ್ರಣಕ್ಕೆ ಮೀರಿದುದು.’

ಅವಾಗವಾಗ ಕಣ್ಣುಗಳನ್ನು ಉಜ್ಜಿಉಜ್ಜಿ ನೋಡಿಕೊಳ್ಳುತ್ತಿದ್ದೇವೆ. ಕಣ್ಣು ನೋವೆ? ನಿದ್ದೆ ಎಳೆಯುತ್ತಿದೆಯೆ? ಅಥವಾ ಈಗ ಎಚ್ಚರವಾಯಿತೆ?! 'ದೀಪಂ ದರ್ಶಯಾಮಿ’ ಅಂತ ಭಟ್ಟರು ಆರತಿ ಎತ್ತಿ ತೋರಿಸಿದಾಗೆಲ್ಲ ಅದು ನಂದಿಹೋಗುತ್ತಿದೆ. ಕರ್ಪೂರ ಕೊಟ್ಟ ಅಂಗಡಿಯವನಿಗೆ ಅವರು ಮಂತ್ರದ ಮಧ್ಯೆ ಬಯ್ಯುತ್ತಿದ್ದಾರೆ. ದೀಪಾವಳಿ ದಿನವೇ ಸೀಮೆಎಣ್ಣೆಗಾಗಿ ಕ್ಯೂ ನಿಲ್ಲಬೇಕಾಗಿ ಬಂದದ್ದಕ್ಕೆ ಗಂಡ ಕಸಿವಿಸಿಗೊಂಡಿದ್ದಾನೆ. ಜೋಪಾನವಾಗಿಟ್ಟಿದ್ದ ಹಳೇ ಪಂಚೆಯ ಒಂದು ತುಂಡನ್ನಷ್ಟೇ ಜಾಗ್ರತೆಯಿಂದ ಹರಿದು ಹೆಂಡತಿ ಹೊಸ ಬತ್ತಿ ತಯಾರಿಸುತ್ತಿದ್ದಾಳೆ. ಹಬ್ಬದ ಹಿಂದಿನ ದಿನ ಕೆಲವರ ಕಣ್ಣುಗಳೇ ಸುಟ್ಟುಹೋಗಿವೆ. ಯಾವನೋ ಅಪ್ಪ ಒಂದು ಸಾವಿರ ರೂಪಾಯಿ ಬೆಲೆಬಾಳುವ ಆಕಾಶಬುಟ್ಟಿಯನ್ನು ಮಗನಿಗೆ ತಂದುಕೊಟ್ಟಿದ್ದಾನೆ.
ಬೆಳಕು ಕೆಲವನ್ನು ತೋರಿಸುತ್ತದೆ. ಕತ್ತಲು ಕೆಲವನ್ನು ಮುಚ್ಚಿಡುತ್ತದೆ.

Read more...

November 07, 2007

ಸುಖದ ಸ್ಯಾಂಪಲ್‌ಗಳು

ಕಾಶ ಅಸ್ತವ್ಯಸ್ತವಾಗಿತ್ತು. ಚಂದ್ರ ಮಂಕಾಗಿದ್ದ. ಜನ ಗೆಲುವಾಗಿದ್ದರು! ಕಿಶೋರ್ ಕುಮಾರ್‌ನ ಹಾಡು ಹಿತವಾಗಿ ಕೇಳಿಬರುತ್ತಿತ್ತು. 'ಮೇರೆ ಸಾಮ್‌ನೆವಾಲಿ ಕಿಡ್‌ಕೀ ಮೆ, ಏಕ್ ಚಾಂದ್ ಕಾ ಟುಕ್‌ಡಾ ರಹತಾ ಹೆ...’ ಪೆಲಿಕನ್ ಬಾರ್‌ನ ಒಳಗೆ ಬಲ್ಬುಗಳು ಕೂಡಾ ಮಂಕಾಗಿ ಉರಿಯುತ್ತಿದ್ದವು.

ತಮ್ಮೆಲ್ಲಾ ಕಷ್ಟಗಳನ್ನು ಒಂದು ಗುಟುಕಿನಲ್ಲಿ ಮರೆಯುವುದಕ್ಕೆ ಜನ ಬಂದಿದ್ದಾರೆ. ಇನ್ನು ಕೆಲವರು, ಒಂದು ಗುಟುಕು ಹೀರಿ ತಮ್ಮ ಸಂತಸ ಹೆಚ್ಚಿಸಿಕೊಳ್ಳಲು ಕಾತುರರಾಗಿದ್ದಾರೆ. ಮೀಸೆ ಮೂಡದ ತರುಣರು, ಮೀಸೆ ಹಣ್ಣಾದ ಮುದುಕರು, ನಲುವತ್ತರ ಬ್ರಹ್ಮಚಾರಿ
ಗಳು ಸೇರಿದ್ದಾರೆ. ಎಲ್ಲರ ಮನಸ್ಸಿನ ಉಯ್ಯಾಲೆಗಳಲ್ಲಿ ಕನಸಿನ ರಾಜಕುಮಾರಿಯರು ಜೀಕುತ್ತಿದ್ದಾರೆ. ಮಹಾನಗರಗಳ ವಿಲಕ್ಷಣ ಸುಖದ ಕೇಂದ್ರಗಳಾದ ’ಡ್ಯಾನ್ಸಿಂಗ್ ಬಾರ್’ಗಳು ಕನಸಿನ ಮನೆಗಳು. ಈ ಪೆಲಿಕನ್ ಬಾರ್‌ನಲ್ಲಿ ನರ್ತಿಸುತ್ತಿರುವ ಎಂಟೂ ಮಂದಿ ಯುವತಿಯರು ಪರಮರೂಪಸಿಗಳಂತೆ ಕಾಣುತ್ತಿದ್ದಾರೆ. ಹೊಳೆಯುತ್ತಿರುವ ಅವರ ಕಣ್ಣುಗಳಲ್ಲಿ ಸೆಳೆತವಿದೆ. ಹೆಜ್ಜೆಗಳಲ್ಲಿ ಹಿಡಿತವಿದೆ. ಅವರಲ್ಲಿ ಒಬ್ಬಳಂತೂ ಎಲ್ಲರ ಪತ್ನಿಯರಿಗಿಂತ, ಎಲ್ಲರ ಪ್ರಿಯತಮೆಯರಿಗಿಂತ, ಆಹ್ ಎಷ್ಟೊಂದು ಮಜಬೂತಾಗಿದ್ದಾಳೆ. ಅವಳು ನಕ್ಕಾಗಲೆಲ್ಲ ಯಾರಿಗೂ ಯಾರೂ ಕಾಣುತ್ತಿಲ್ಲವಲ್ಲ.

ಸಾಗರದಲ್ಲಿ ದೋಣಿಯೊ
ಂದು ತುಯ್ದಾಡುತ್ತಿದೆ. ಅದರಲ್ಲಿ ಒಂಟಿ ಮನುಷ್ಯನೊಬ್ಬ ನಿಂತಿದ್ದಾನೆ. ಅವನ ನಡುವಿಗಷ್ಟೇ ಬಟ್ಟೆಯ ತುಂಡೊಂದು ಸುತ್ತಲ್ಪಟ್ಟಿದೆ. ಸಮುದ್ರಕ್ಕೆ ಬಲೆ ಹರಡಿದ್ದಾನೆ. ಇದಿರು ದೂರದಲ್ಲಿ, ಬಹುದೊಡ್ಡ ಕಟ್ಟಡದ ಆರನೇ ಮಹಡಿಯವರೆಗೂ ಬಾಲ್ಕನಿಗಳು ಆಗಸಕ್ಕೆ ಚಾಚಿ ನಿಂತದ್ದು ಈ ವ್ಯಕ್ತಿಗೆ ಕಾಣಿಸುತ್ತಿದೆ. ಥಂಡಿ ಹವಾ ಚಲಿಸುತ್ತಿದೆ. ಆ ಬಾಲ್ಕನಿಯೊಂದರ ಆರಾಮ ಕುರ್ಚಿಯಲ್ಲಿ ಬಿಳಿಯ ಅರೆಬೆತ್ತಲೆ ದೇಹ ಕುಳಿತಿದೆ. ದೋಣಿ ಮತ್ತೆ ತುಯ್ದಾಡುತ್ತಿದೆ. ಆ ಬಾಲ್ಕನಿಯಲ್ಲಿ ಕುಳಿತು ಸಾಗರವನ್ನೊಮ್ಮೆ ನೋಡಬೇಕು. ಒಂದಲ್ಲ ಒಂದು ದಿನ ಅಂತಹ ಮನೆಯನ್ನು ತನ್ನದಾಗಿಸಿಕೊಳ್ಳಬೇಕು ಎಂಬ ಆಸೆ ಇವನನ್ನು ಕಾಡುತ್ತಿದೆ.

ಅತ್ತ ಬಾಲ್ಕನಿಯಲ್ಲಿ
ುಳಿತಿದ್ದ ವ್ಯಕ್ತಿಯು ಕಣ್ಣೀರು ಸುರಿಸುತ್ತಿದ್ದಾನೆ. ದೂರದ ಸಮುದ್ರದಲ್ಲಿ ತೇಲುತ್ತಿರುವ ವ್ಯಕ್ತಿಯು ಆತನಿಗೆ ಆಶಾಗೋಪುರದಂತೆಯೇ ಕಾಣಿಸುತ್ತಿದ್ದಾನೆ. ಮೆಟ್ಟಿಲಿಳಿದು ಸಮುದ್ರದ ಕಡೆ ಹೊರಟಿದ್ದಾನೆ. ತನ್ನೆಲ್ಲಾ ದುಃಖವನ್ನು ಮರೆಯಲು ಆತ ಹೋಗುತ್ತಿದ್ದಾನೆ. ಸಾಗರ ಉಕ್ಕೇರುತ್ತಿದೆ, ಕತ್ತಲಾಗುತ್ತಿದೆ.

*****
ಕಹಿ ಬಿಯರು. ಕಹಿ ಸಿಗರೇಟು. ಗರಂ ಚಿಕನ್ ಚಿಲ್ಲಿ. ಇಲ್ಲಿ ತತ್ತ್ವಜ್ಞಾನಿಗಳು ಕುಳಿತಿದ್ದಾರೆ. ಜಾಣ ಸರ್ದಾರ್ಜಿಗಳು ಬಿಯರ್ ಹೀರುತ್ತಿದ್ದಾರೆ. ಯಾರೋ ಒಬ್ಬ ಕಳೆದುಹೋದ ಪ್ರಿಯತಮೆಗಾಗಿ ಸಿಗರೇಟು ಸುಡುತ್ತಿದ್ದಾನೆ. ಒಂದಷ್ಟು ಜನ ಹವಾಯಿ ಚಪ್ಪಲಿಯ ಕುಡುಕರು ಮೂಲೆಯಲ್ಲಿ ಕುಳಿತಿದ್ದಾರೆ. ಇಲ್ಲಿ ಋಷಿಗಳು ಆರಾಮವಾಗಿ ಸಿಗರೇಟು ಸೇದುತ್ತಾರೆ. ರಾಕ್ಷಸರು ಮಗುವಿನ ಜೊತೆ ಮಾತಾಡುತ್ತಾರೆ. ಫೋಟೋಗ್ರಾಫರ್‌ನು ಸ್ಮೈಲ್ ಸ್ಮೈಲ್ ಅನ್ನುತ್ತಿರುವಾಗಲೇ ಮತ್ತಷ್ಟು ಗಂಭೀರವಾಗಿ ಫೋಸ್ ಕೊಡುವವರಂತೆ ಕೆಲವರು ಕುಳಿತಿದ್ದಾರೆ. ಮುಂದಿನ ಜನ್ಮಕ್ಕಾಗುವಷ್ಟು ನೋಟುಗಳನ್ನು ಕಟ್ಟಿಟ್ಟವರೂ, ನಾಳೆಯ ಅಡುಗೆಗಾಗಿ ಒಂದು ಹೊರೆ ಸೌದೆಯನ್ನು ಹುಡುಕಬೇಕಾದವರೂ ಅಮಲೇರಿ ಕುಳಿತಿದ್ದಾರೆ. ಇಲ್ಲಿ ಉಕ್ಕಿಹರಿವ ನದಿಗಳಿವೆ. ಕುಂಟನೊಡ್ಡಿದ ಕೈಯಿದೆ. ಅಲಂಕಾರದ ಭಾರವಿದೆ. ಸ್ವಭಾವದ ಸಹಜತೆಯಿದೆ.

ಕೆಲವೊಮ್ಮೆ ಇಂತಹ ಜಾಗಗಳಲ್ಲೇ ವಿಚಿತ್ರವಾದ ’ಥ್ರಿಲ್ಲಿಂಗ್ ಥಾಟ್’ಗಳು ಹುಟ್ಟಿಕೊಳ್ಳುತ್ತವೆ. ಒಬ್ಬ ಕ್ಯಾಶಿಯರ್‌ನ ಬಳಿ ಅರಚುತ್ತಿದ್ದ " ಆ ಚಂದ್ರಲೋಕದ ಟ್ಯೂಬ್‌ಲೈಟ್ ಆಫ್ ಮಾಡಿ!’. ಇನ್ನೊಬ್ಬನ ಸ್ಟೇಟ್‌ಮೆಂಟು-"ಭೂಮಿ ತಿರುಗುತ್ತಿರುವುದು ಕುಡುಕರ ಶಕ್ತಿಯಿಂದ!’. ಕುರುಚಲು ಗಡ್ಡ ಬಿಟ್ಟಿದ್ದ, ಜೋಳಿಗೆ ಚೀಲವೊಂದನ್ನು ಹೆಗಲಿಗೆ ಹಾಕಿಕೊಂಡೇ ಇದ್ದ ವ್ಯಕ್ತಿಯೊಬ್ಬ "ನಿನ್ನೆ ರಾತ್ರಿಯೂ ಇದೇ ಥರಾ ಏರಿಳಿಯುತ್ತಿದ್ದೆ. ಕಡಲು ಕೂಡಾ ಸ್ತಬ್ಧವಾಗಿತ್ತು’ ಎಂದವನೇ ಮುಂದುವರಿಸಿ "ನೂರು ವಾಕ್ಯಗಳಲ್ಲಿ ಹೇಳಲಾಗದ್ದನ್ನು ಒಂದು ಚಿತ್ರ ಹೇಳುತ್ತದೆ. ನೂರು ಚಿತ್ರಗಳಲ್ಲಿ ಹೇಳಲಾಗದ್ದನ್ನು ಒಂದು ಬಾಟಲಿ ಹೇಳಿಸುತ್ತದೆ’ ಎಂದು ಸುಮ್ಮನಾದ. ಅವನ ಬಳಿಯೇ ಕುಡಿಯದೆ ಕುಳಿತಿದ್ದವನೊಬ್ಬ ಹೇಳಿದ್ದು ಹೀಗೆ-’ಕುಡುಕರ ಜೊತೆ ಗೆಲ್ಲುವುದು ಸುಲಭ. ಸೋಲುವುದು ಕಷ್ಟ!’. ಲೋಡಾಗಿದ್ದವನೊಬ್ಬನನ್ನು ತಮಾಷೆ ಮಾಡಲೆಂದು ಮತ್ತೊಬ್ಬ ತನ್ನ ಎರಡು ಬೆರಳುಗಳನ್ನು ಎತ್ತಿಹಿಡಿದು "ಇದೆಷ್ಟೊ?’ ಎಂz. ಅವನು "ಒಬ್ಬೊಬ್ರೇ ಕೇಳಿ, ಉತ್ತರ ಕೊಡ್ತೀನಿ’ ಅಂದ!

ಒಂಭತ್ತು...ಹತ್ತು....ಹನ್ನೊಂದು...ಸಮಯವೂ ಏರುತ್ತಿದೆ. ಸುವರ್ಣ ಲಂಕೆಯ ದೊರೆ ರಾವಣನಂತಹ ಕಟ್ಟಾಳು ಕ್ಯಾಶಿಯರ್‌ನ ಸ್ಥಾನದಲ್ಲಿ ಕುಳಿತಿದ್ದಾನೆ. ಅವನ ಕೈಯಲ್ಲಿ ನೂರು ಐನೂರರ ನೋಟುಗಳು ಚಕಚಕನೆ ಚಲಿಸುತ್ತಿವೆ. ಅವನ ಮೇಲೆ ಮಾತ್ರ ಪ್ರಕಾಶಮಾನವಾದ ಬೆಳಕು ಬಿಡಲಾಗಿದೆ. ನರ್ತಕಿಯರ ಕಾಲುಗಳು ಮಗುವಿನ ಅಂಗಾಲುಗಳಂತೆ ಎತ್ತೆತ್ತಲೋ ಹೆಜ್ಜೆ ಇರಿಸುತ್ತವೆ. ನರ್ತಕಿಯ ಗುಡಿಸಲಲ್ಲಿ ಮಗು ಅಮ್ಮನಿಗಾಗಿ ಕಾದುಕಾದು ಬಸವಳಿದಿದೆ. ಅತ್ತ ಇತ್ತ ಸುತ್ತಮುತ್ತ ಜನ ಜನ ಜನ. ಯಾರೋ ಒಬ್ಬ ಹಾಡುತ್ತಾನೆ "ಜನ ಗಣ ಮನ’.
*****
ಮಣ್ಣಿನ ಮೋಟು ಗೋಡೆ. ಹರಕಲು ಒರಟು ಚಾಪೆ. ಅಲ್ಲಲ್ಲಿ ಸೋರುವ ಛಾವಣಿ. ಮೈಯ ಮೇಲೆ ಕುಳಿತಿರುವ ರೇಡಿಯೊ ಹದವಾಗಿ ಹಾಡುತ್ತಿದೆ. ಸೀಮೆಎಣ್ಣೆ ತುಂಬಿಕೊಂಡ ಪುಟ್ಟ ಬಾಟಲಿಯ ದೀಪ ಹದವಾಗಿ ಉರಿಯುತ್ತಿದೆ. ಆ ರೇಡಿಯೊವನ್ನು ಎರಡೂ ಕೈಗಳಲ್ಲಿ ತಬ್ಬಿಕೊಂಡು ’ವಿವಿಧ್ ಭಾರತಿ’ಯ ಹಾಡುಗಳನ್ನು ಕೇಳುವುದರಲ್ಲಿ ಹೇಳಲಾಗದ ಸುಖವಿದೆ. ಆ ಹಾಡು ಮತ್ತು ಬೆಳಕು ಸುತ್ತಲಿನ ಒಂದಷ್ಟು ಜಾಗದಲ್ಲಿ ಆನಂದಮಯ ಏಕಾಂತವನ್ನು ಸೃಷ್ಟಿಸುತ್ತಿದೆ.

ದೋಣಿ ದಡದಲ್ಲಿದೆ, ಆಕಾಶ ಸ್ವಚ್ಛವಾಗಿದೆ. ಚಂದಿರ ಹೊರಗೆ ಬೆಳಗುತ್ತಿದ್ದಾನೆ. ಎತ್ತಲೋ ಓಡುತ್ತಿದ್ದಾನೆ.
(ಐದು ವರ್ಷಗಳ ಹಿಂದೆ ಬರೆದದ್ದು)


Read more...

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP