September 27, 2007

'ಮೂಷಿಕ' ವಾಹನ - ಕನ್ನಡ ಪ್ರೇಮ !

ಕನ್ನಡ ಬ್ಲಾಗರ್‌ಗಳು ಗಮನಿಸಬೇಕಾದ ಸಂಗತಿ ಇದು.
'maa' 'moo' ಈ ಎರಡು ಕನ್ನಡದ ಅಕ್ಷರಗಳು ನಮ್ಮ ಯುನಿಕೋಡ್‌ನಲ್ಲಿ ಒಂದೇರೀತಿ ಕಾಣಿಸುತ್ತವೆ. ಅಲ್ಲದೆ 'ರ’ ಅಕ್ಷರಕ್ಕೆ 'ಯ’ ಒತ್ತಕ್ಷರವಾಗಿ ಬರುವ ಪದಗಳಿಗೆಲ್ಲ ಅರ್ಕ ಒತ್ತುಗಳನ್ನೇ ಬಳಸಬೇಕು. ಆದರೆ rank ನಂತಹ ಇಂಗ್ಲಿಷ್ ಪದಗಳನ್ನು ಕನ್ನಡದಲ್ಲಿ ಬರೆಯುವಾಗ ಇದು ಬಹಳ ಪೇಚಿಗೆ ಸಿಲುಕಿಸುತ್ತದೆ. ಅಲ್ಲಿ ಅರ್ಕ ವನ್ನೂ ಬಳಸುವಂತಿಲ್ಲವಲ್ಲ ! ಸೆ.೨೪ರಂದು ಕರ್ನಾಟಕ ಸರಕಾರ ಮತ್ತು ಮೈಕ್ರೋಸಾಫ್ಟ್ ಸಂಸ್ಥೆಗಳು ಎಲ್ಲ ಸರಕಾರಿ ಕಚೇರಿಗಳಲ್ಲಿ ಮೈಕ್ರೋಸಾಫ್ಟ್ ಉತ್ಪನ್ನಗಳನ್ನೇ ಬಳಸುವ ಒಪ್ಪಂದವೊಂದಕ್ಕೆ ಸಹಿ ಹಾಕಿವೆ. ಹೀಗಾದರೆ ನಮ್ಮೆಲ್ಲ ಸರಕಾರಿ ದಾಖಲೆಪತ್ರಗಳಲ್ಲೂ ಮೇಲೆ ಹೇಳಿದ ಕಾಗುಣಿತ ತಪ್ಪು ಕಾಣಿಸಿಕೊಳ್ಳಲಿದೆ.

ಸೆಪ್ಟೆಂಬರ್ ೨೭ರ ಉದಯವಾಣಿಯ ಬೆಂಗಳೂರು ಆವೃತ್ತಿಯ ಮುಖಪುಟದಲ್ಲಿ 'ಕಾಗದ ರಹಿತ ಸರಿ, ಕಾಗುಣಿತ ರಹಿತ?’ ಎಂಬ ವರದಿಯೊಂದು ಪ್ರಕಟವಾಗಿದೆ. ಉದಯವಾಣಿ ಪತ್ರಕರ್ತ, ಬ್ಲಾಗರ್ ಎನ್.ಎ.ಎಂ. ಇಸ್ಮಾಯಿಲ್ ಆ ಬಗ್ಗೆ ಎಚ್ಚರಿಸಿದ್ದಾರೆ. ಅದಕ್ಕೆ ಫಲ ಸಿಗಲಿ.

'ಋ’ ಅಕ್ಷರವನ್ನು ಕನ್ನಡ ವರ್ಣಮಾಲೆಯಿಂದ ತೆಗೆಯಬೇಕೆಂದು ಘನ ಸರಕಾರ ತೀರ್ಮಾನಿಸಿದಾಗ ಕವಿ ಜಿ.ಕೆ.ರವೀಂದ್ರ ಕುಮಾರ್ ಬರೆದ 'ಋ ಎಂಬ ಋಣದ ಪದ್ಯ’ ಕವಿತೆಯ ಕೊನೆಯ ಸಾಲುಗಳು-

ಏಣಿ ಇನ್ನೂ ನಿಂತುಕೊಂಡಿದೆ
ಅ ಎಂಬ ಅರಸನ ಮಕ್ಕಳು
ಸ್ನೇಕ್ ಅಂಡ್ ಲ್ಯಾಡರ್ ಆಡುತ್ತಿವೆ

ಉ ಊ ಊರುತ್ತ ಎ ಏ ಏಣಿ ಹತ್ತುತ್ತಿರುವವರಾರು?
ಯಾರೋ x y z ಇರಬೇಕು.
x y z ಗಳನ್ನು ಎಚ್ಚರಿಕೆಯಿಂದ ನೋಡೋಣ.

Read more...

ರಾಮನೇ ತುಂಡರಿಸಿದ ಸೇತು ನಮಗೆ ಬೇಕೆ ?

ನುಷ್ಕೋಟಿಯಲ್ಲಿ ಕಪಿಯೊಂದು ರಾಮಧ್ಯಾನ ನಿರತವಾಗಿದೆ. ತೀರ್ಥಯಾತ್ರೆ ಮಾಡುತ್ತ ಬಂದ ಅರ್ಜುನ ಅದನ್ನು ಮಾತಾಡಿಸುತ್ತಾನೆ. ಬಡ ಜುಣುಗಿನಂತಿದ್ದ ಆ ಮಂಗ, ತಾನು ಹನುಮಂತನೆಂದು ಹೇಳಿಕೊಳ್ಳುತ್ತದೆ ! ಆದರೆ ಅರ್ಜುನ ನಂಬಿಯಾನೆ? ಅವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು, ಆ ಕಪಿಯು ಹನುಮಂತ ಹೌದೋ ಅಲ್ಲವೋ ಎಂಬುದಕ್ಕಿಂತ ಹೆಚ್ಚಾಗಿ, ಸಮುದ್ರಕ್ಕೆ ಸೇತುವೆ ಕಟ್ಟುವುದು ದೊಡ್ಡ ವಿಷಯವಲ್ಲವೆಂದೂ, ತಾನೀಗ ಬಾಣದಲ್ಲೇ ಸಮುದ್ರಕ್ಕೆ ಸೇತುವೆ ಕಟ್ಟಬಲ್ಲೆನೆಂದೂ ಅರ್ಜುನ ಹೇಳುತ್ತಾನೆ. ಇದು ಅವರಿಬ್ಬರ ಮಧ್ಯೆ ಪಂಥಕ್ಕೆ ಕಾರಣವಾಗುತ್ತದೆ. ಅರ್ಜುನ ಮೂರು ಬಾರಿ ಬಾಣಗಳ ಸೇತುವೆ ಕಟ್ಟುವುದು, ಹನುಮಂತ ಮುರಿಯುವುದು. ಮುರಿಯುವುದಕ್ಕಾಗದಿದ್ದರೆ ಹನುಮಂತನು ರಾಮದಾಸ್ಯವನ್ನು ಬಿಟ್ಟು ಅರ್ಜುನನ ದಾಸನಾಗುವುದು, ಸೇತು ಮುರಿಯಲ್ಪಟ್ಟರೆ ಅರ್ಜುನ ಬೆಂಕಿಗೆ ಹಾರಿ ದೇಹತ್ಯಾಗ ಮಾಡುವುದೆಂದು ಪಂಥವಾಗುತ್ತದೆ. ಆದರೆ ಮೂರು ಬಾರಿಯೂ ಅರ್ಜುನ ಕಟ್ಟಿದ ಬಾಣಗಳ ಸೇತುವೆ ಹನುಮಂತನಿಂದ ಮುರಿಯಲ್ಪಟ್ಟಾಗ, ಅರ್ಜುನ ಕೃಷ್ಣನನ್ನು ಸ್ತುತಿಸುತ್ತ ಅಗ್ನಿಪ್ರವೇಶಕ್ಕೆ ಸಿದ್ಧನಾಗುತ್ತಾನೆ. ಆಗ ವೃದ್ಧ ಬ್ರಾಹ್ಮಣನ ವೇಷದಲ್ಲಿ ಕೃಷ್ಣ ಅಲ್ಲಿ ಕಾಣಿಸಿಕೊಳ್ಳುತ್ತಾನೆ. ಸಾಕ್ಷಿಯಿಲ್ಲದೆ ನಡೆದ ನಿಮ್ಮ ಪಂಥ ಊರ್ಜಿತವಲ್ಲ. ಇನ್ನೊಮ್ಮೆ ಇದನ್ನು ನಡೆಸಿ ಎನ್ನುತ್ತಾನೆ. ಕೂರ್ಮಾವತರಾವನ್ನು ತಾಳಿ ಅರ್ಜುನನ ಬಾಣದ ಸೇತುವೆಯನ್ನು ಆಧರಿಸುತ್ತಾನೆ. ಆಗ ಸೇತುವನ್ನು ಮುರಿಯಲಿಕ್ಕಾಗದೆ ಸೋತ ಹನುಮನಿಗೆ ಶ್ರೀರಾಮನಾಗಿ ದರ್ಶನ ನೀಡಿ, ಪಾರ್ಥನ ರಥದ ಧ್ವಜಾಗ್ರದಲ್ಲಿ ನೀನಿದ್ದು ಸೇವೆಯನ್ನು ಸಲ್ಲಿಸು ಎನ್ನುತ್ತಾನೆ.

ಶರಸೇತು ಮತ್ತು ರಾಮಸೇತು
ಇದು ಮಹಾಭಾರತದ ಪ್ರಕ್ಷಿಪ್ತ ಭಾಗ. ಆದರೆ ಯಕ್ಷಗಾನ ತಾಳಮದ್ದಳೆಯಲ್ಲಿ ಬಹಳ ಪ್ರಸಿದ್ಧವಾದ "ಶರಸೇತು ಬಂಧನ’ ಎಂಬ ಪ್ರಸಂಗ. ಅರ್ಜುನ-ಹನುಮಂತರ ನಡುವೆ ಕುಶಲ ವಾದ ವಿವಾದಕ್ಕೆ, ದೇವರು-ದೇವ ಭಕ್ತರೆಲ್ಲ ಒಂದೇ ಎಂಬ ಕೃಷ್ಣನ ಮಾತಿಗೆ ಇದು ಒಳ್ಳೆಯ ಹೂರಣವನ್ನೊದಗಿಸುತ್ತದೆ. ತಾಳಮದ್ದಳೆಯ ವೈಶಿಷ್ಟ್ಯ ಇರುವುದೇ ಪಾತ್ರಗಳ ಪ್ರತಿಸೃಷ್ಟಿಯಲ್ಲಿ. ಕೃಷ್ಣನ ಪಾತ್ರ ವಹಿಸಿದ ರಾಮ ಜೋಯಿಸ್ ಎಂಬ ಅರ್ಥಧಾರಿಯೊಬ್ಬರು, ರಾಮನಾಗಿ ಹನುಮನಿಗೆ ದರ್ಶನ ಕೊಟ್ಟ ಬಳಿಕ ಹೇಳುತ್ತಾರೆ- "ಈಗ ರಾಮನಾಗಿರುವುದೂ ನನಗೆ ಕಷ್ಟವಾಯಿತು !’ ತಾಳಮದ್ದಳೆಯ ಕೃಷ್ಣ ಮಾತ್ರ ಇಂತಹ ಮಾತನ್ನು ಉದ್ಗರಿಸಬಲ್ಲ ! ರಾಮನ ವ್ಯಕ್ತಿತ್ವದ ಎತ್ತರವನ್ನೂ , ತ್ರೇತಾಯುಗದ ನಂತರದ ದ್ವಾಪರ ಯುಗದ ಗುಣವನ್ನೂ ಆ ಒಂದು ವಾಕ್ಯ ತುಂಬಿಕೊಡುತ್ತದೆ.

ತಮ್ಮ ಕಾಲದ್ದೇ ಮಹಾನ್, ತಾವೇ ದೇವರ ಅಸಾಮಾನ್ಯ ಸೇವಕರು ಎಂಬ ಹನುಮನ ಅಹಂಕಾರವನ್ನು ಮುರಿಯುವುದು ಮತ್ತು ಅರ್ಜುನನಿಗೂ ಹಿಂದಿನ ಕಾಲದ ಮಹಾತ್ಮೆ ಅರಿವಾಗುವಂತೆ ಮಾಡುವುದು - ಈ ಎರಡು ಸಂಕಲ್ಪಗಳು ಪ್ರಸಂಗದಲ್ಲಿವೆ. ರಾವಣಾದಿಗಳನ್ನು ಕೊಂದು ಲಂಕೆಯಿಂದ ಹಿಂದಿರುಗುವಾಗ ರಾಮನು ತಾನೇ ಕಟ್ಟಿಸಿದ ಸೇತುವನ್ನು ಬಾಣ ಮುಖೇನ ತುಂಡರಿಸುತ್ತಾನೆ. ಇಲ್ಲಿಯೂ ಕೃಷ್ಣನು ಕೂರ್ಮಾವತಾರವನ್ನು ತೊರೆದ ಕೂಡಲೇ ಬಾಣದ ಸೇತುವೆಯೂ ಸಮುದ್ರಪಾಲಾಗುತ್ತದೆ. ಸೇತುವೆ ಹೇಗೆ ನಿರ್ಮಾಣವಾಯಿತು ಎಂಬುದಕ್ಕಿಂತ ಯಾಕೆ ನಿರ್ಮಾಣವಾಯಿತು ಎಂಬುದಕ್ಕೆ ಹೆಚ್ಚು ಮಹತ್ವ. ಹಾಗಾಗಿಯೇ ರಾಮನ ಸೇತುವೆಗೆ ಅಳಿಲು ಕೂಡಾ ತನ್ನ ಸೇವೆ ಸಲ್ಲಿಸಿದ್ದು ! ಕೇವಲ ಸೇತುವೆ ನಿರ್ಮಾಣವಷ್ಟೇ ಗುರಿಯಾಗಿದ್ದರೆ ಅಳಿಲಿನ ಸೇವೆ ಅಗತ್ಯವಿತ್ತೇ? ಅರ್ಜುನ ಮೊದಲು ಶರಸೇತುವನ್ನು ನಿರ್ಮಿಸಿದಾಗ, ವಾನರರನ್ನು ಹೀಯಾಳಿಸುವ ತನ್ನ ಸಾಮರ್ಥ್ಯವನ್ನು ಮೆರೆಸುವ ಉದ್ದೇಶವಷ್ಟೇ ಇತ್ತು, ಹಾಗಾಗಿ ಶರಸೇತು ಮುರಿದುಹೋಯಿತು. ಕೃಷ್ಣ ಬಂದಾಗ ಹನುಮನ ಅಹಂಕಾರವನ್ನೂ ಮುರಿಯುವ ಉದ್ದೇಶ ಇತ್ತು, ಸೇತುವೆ ಮುರಿಯಲಿಲ್ಲ !

ಕರುಣಾನಿಧಿಯವರ ದರ್ಪದ ಮಾತು ತಪ್ಪೆನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಆದರೆ ಹಡಗು ಸಂಚಾರ ಮಾರ್ಗದ ಲಾಭನಷ್ಟಗಳ ಬಗ್ಗೆ ಚರ್ಚಿಸದೆ "ರಾಮ ಕಟ್ಟಿದ ಸೇತುವೆ ಉಳಿಯಬೇಕು’ ಅಂತ ರಚ್ಚೆ ಹಿಡಿಯುವುದರಲ್ಲಿ ಯಾವ ಅರ್ಥವೂ ಇಲ್ಲ. ಸಮುದ್ರವನ್ನು ಕಲಕದಿರುವುದರಿಂದ ಲಾಭ ಹೆಚ್ಚೋ ಅಥವಾ ಹೊಸ ಮಾರ್ಗ ರಚನೆಯಿಂದ ಹೆಚ್ಚೋ ಅನ್ನುವುದು ಚರ್ಚೆಯಾಗಬೇಕಾದ್ದು. ಅದನ್ನು ಬಿಟ್ಟು, ಅಗಸನ ಸಂಶಯಕ್ಕೆ ಉತ್ತರವಾಗಿ ಪತ್ನಿಯನ್ನೇ ತೊರೆದ ಆ ರಾಜಾರಾಮನನ್ನು ನಂಬುವ ನಾವು, ಸೇತುವೆಯ ಬಗ್ಗೆ ಕೆಲವರು ಸಂಶಯ ವ್ಯಕ್ತಪಡಿಸಿದರೆ ರೌದ್ರಾವತಾರ ತಾಳಬೇಕೇ?!

ಕೃಷ್ಣನ ದ್ವಾರಕಾ ನಗರಿ ಸಮುದ್ರದಲ್ಲಿ ಮುಳುಗಿದ್ದು ಸುಳ್ಳು ಅನ್ನುತ್ತಿದ್ದ ನಾವು ಗುಜರಾತ್ ಸಮುದ್ರದಾಳದಲ್ಲಿ ಪಟ್ಟಣದ ಕುರುಹುಗಳು ಪತ್ತೆಯಾದ ಬಳಿಕ ಮುಟ್ಟಿ ಮುಟ್ಟಿ ನೋಡಿಕೊಳ್ಳುವಂತಾಯಿತು ! ಕ್ರಿ.ಪೂ. ೧೫೦೦ ವರ್ಷಗಳ ಹಿಂದಿನ ಸಿಂಧೂ ನಾಗರಿಕತೆಯೇ ಪ್ರಾಚೀನ ಎಂದಿದ್ದ ನಮಗೆ ಪ್ರಾಚೀನ ಕೃತಿಗಳಲ್ಲಿ ಪ್ರಸ್ತಾಪಿಸಲ್ಪಟ್ಟಿರುವ ಸರಸ್ವತಿ ನದಿ ಒಣಗಿದ್ದು ೫೦೦೦ ವರ್ಷಗಳ ಹಿಂದೆ ಎಂಬುದು ಅಚ್ಚರಿ ಹುಟ್ಟಿಸಿತು. ಉತ್ತರ ಭಾರತದಲ್ಲಿ ಅದರ ಹರಿವಿದ್ದ ಪ್ರದೇಶಗಳ ಚಿತ್ರವನ್ನು ನಾಸಾ ಒದಗಿಸಿತು. ಹೀಗೆ ಇವುಗಳ ಬಗೆಗೆಲ್ಲಾ ನಮಗೆ ಹೇಳುತ್ತಿರುವುದು ಅಮೆರಿಕದಂಥ ದೇಶಗಳು ! ನಾವು ಮಾಡಿದ ಸಂಶೋಧನೆ ಅತ್ಯಲ್ಪ .

೧೮೬೦ರಲ್ಲಿ ಬ್ರಿಟಿಷರಿಂದ ಸೇತುಸಮುದ್ರಂ ಯೋಜನೆ ಪ್ರಸ್ತಾಪಿಸಲ್ಪಟ್ಟಿತ್ತು. ೧೯೫೫ರಲ್ಲಿ ಸೇತುಸಮುದ್ರಂ ಪ್ರಾಜೆಕ್ಟ್ ಸಮಿತಿಯನ್ನು ಕೇಂದ್ರ ಸರಕಾರ ರಚಿಸಿತ್ತು. ೧೯೯೯ರಲ್ಲಿ ವಾಜಪೇಯಿವರು ಪ್ರಧಾನಿಯಾಗಿದ್ದಾಗ ಯೋಜನೆಗೆ ವಿಶೇಷ ರೂಪುರೇಷೆ ಬಂತು. ೨೦೦೦-೦೧ರ ಕೇಂದ್ರ ಬಜೆಟ್‌ನಲ್ಲಿ ಈ ಬಗ್ಗೆ ಅಧ್ಯಯನಕ್ಕಾಗಿ ೪.೮ ಕೋಟಿ ಬಿಡುಗಡೆ ಮಾಡಲಾಗಿತ್ತು. ಬಳಿಕ ೨ ಜೂನ್ ೨೦೦೫ರಂದು ಪ್ರಧಾನಿ ಮನಮೋಹನ್ ಸಿಂಗ್ ಈ ಯೋಜನೆ ಉದ್ಘಾಟಿಸಿದರು. ಹೀಗೆ ಈ ದೀರ್ಘ ಕಾಲವೇ ಯೋಜನೆಯ ಬಗೆಗಿನ ಸಂಶಯಗಳನ್ನು ಹೆಚ್ಚಿಸುತ್ತದೆ. ನದಿ ತಿರುವು ಯೋಜನೆಗಳೇ ನೂರಾರು ಸಂಶಯಗಳನ್ನು ಹುಟ್ಟುಹಾಕಿರುವಾಗ ಅವಕ್ಕಿಂತ ದೊಡ್ಡದಾದ ಈ ಯೋಜನೆಯ ಬಗ್ಗೆ ಆಳ ವಿಮರ್ಶೆ ಬೇಡವೆ?

ಯೋಜನೆ ಇರಲಿ, ಸೇತುಭಂಗ ತಪ್ಪಲಿ ?!
ಸೇತುವನ್ನು ಉಳಿಸಬೇಕು ಎನ್ನುವಲ್ಲಿ ಉದ್ದೇಶ ಏನು? ಕೇವಲ ಭಕ್ತಿ-ನಂಬಿಕೆಯೆ? ಲವ-ಕುಶರು ಅಯೋಧ್ಯೆಗೆ ಬಂದು ಆಸ್ಥಾನಮಂಟಪದಲ್ಲಿ ರಾಮಾಯಣವನ್ನು ಹಾಡಿದಾಗ, ಇದು ಯಾರ ಕತೆಯಪ್ಪಾ ಎಂಬಂತೆ ಪ್ರೇಕ್ಷಕರ ನಡುವೆ ಕೂತು ಕೇಳಿದವನು ರಾಮ ! ಅಂಥವನು ಮುಟ್ಟಿದ್ದು ಕಟ್ಟಿದ್ದು ಎಲ್ಲವೂ ಹಾಗೆಯೇ ಉಳಿಯಬೇಕು, ಪೂಜೆ ಪುರಸ್ಕಾರಕ್ಕೆ ಒಳಗಾಗಬೇಕು ಅನ್ನುವಿರಾದರೆ, ರಾಮ ಮೆಟ್ಟಿದ ಕಲ್ಲು ಕೂಡಾ ಕಲ್ಲಾಗಿ ಉಳಿಯಲಿಲ್ಲ , ಆಕೆ ಮೊದಲಿನ ಪರಿಶುದ್ಧ ಅಹಲ್ಯೆಯಾದಳು ! "ಅಷ್ಟಕ್ಕೂ, ಸೇತುವೆಯನ್ನು ಕಟ್ಟಿಸಿದ್ದು ರಾಮ, ಕಟ್ಟಿದವರು ಕಪಿಗಳು. ಆ ದೇವರೇ ಈಗ ನಮ್ಮಲ್ಲಿ ಇನ್ನೊಂದು ಹಡಗು ದಾರಿಯನ್ನು ಕಟ್ಟಿಸುತ್ತಾನೆಂದೋ ಮಾಡಿಸುತ್ತಾನೆಂದೂ ನಂಬಬಹುದಲ್ಲ ?!’ ಅಂತ ಕೇಳಿದರೊಬ್ಬರು. ಇದು ಕುಹಕವಲ್ಲ, ನಮ್ಮ ನಂಬಿಕೆಗಳು ಎಷ್ಟೊಂದು ಬಲಹೀನವಾಗಿವೆ ಎನ್ನುವುದಕ್ಕೆ ಉದಾಹರಣೆ.

ಭಾರತೀಯರಿಗೆ ಪ್ರತಿಯೊಂದು ಪ್ರಕೃತಿನಿರ್ಮಿತ ವಸ್ತುವೂ ದೇವರೇ ಆಗಿರುವಾಗ ಯಾವುದನ್ನಾದರೂ ಪರಮಪವಿತ್ರವಾಗಿಸುವುದು ಕಷ್ಟವೇನಲ್ಲ ! ಯೋಜನೆಯೇ ಮೂರ್ಖತನದ್ದು ಎನ್ನುತ್ತಿದ್ದ ಬಿಜೆಪಿ ಪಕ್ಷವೀಗ,"ಯೋಜನೆ ಇರಲಿ, ಸೇತುಭಂಗ ತಪ್ಪಲಿ’ ಅಂತ ರಾಗ ಬದಲಿಸಿದೆ. ಸೇತುವೆ ರಾಮ ರಚಿಸಿದ್ದೇ ಅಂತಾದರೂ, ಹಳೆಬೀಡು ಬೇಲೂರು ದೇವಾಲಯಗಳು ಅಥವಾ ತಾಜಮಹಲ್ ರೂಪದಲ್ಲಿ ಅದನ್ನು ಉಳಿಸಿಕೊಳ್ಳುವುದು, ಜನರಿಗೆ ತೋರಿಸುವುದು ಸಾಧ್ಯವಿಲ್ಲವಲ್ಲ. ಕೇವಲ ಸ್ಯಾಟಲೈಟ್ ಫೋಟೊ ನೋಡಿ ಆವೇಶಕ್ಕೊಳಗಾಗುವವರು ದೇವರಮನೆಯಲ್ಲೂ ಅದನ್ನಿಟ್ಟುಕೊಳ್ಳಬಹುದಲ್ಲ. ಇನ್ನು , ರಾಮ ಐತಿಹಾಸಿಕ ವ್ಯಕ್ತಿ ಅಂತಾದರೆ ಮಾತ್ರ ಆತ ದೇವರು ಅಂತನಿಸಿಕೊಳ್ಳುವುದೇ?
ನೀತಿ- ಆಸ್ತಿಕರಾದವರು ತಮ್ಮ ನಂಬಿಕೆ ಆಚರಣೆಗಳ ತಾತ್ತ್ವಿಕ ವೈಚಾರಿಕ ಆಳವನ್ನು , ಘನತೆಯನ್ನು ಹೆಚ್ಚಿಸಿಕೊಳ್ಳಬೇಕು, ಇಲ್ಲವಾದರೆ ಕರುಣಾನಿಧಿಯಂತಹ ಹುಂಬರಿಂದ ಉಗಿಸಿಕೊಳ್ಳಬೇಕು !

ತಾಳಮದ್ದಳೆ ಪುರಾಣ
'ತಾಳಮದ್ದಳೆ ಪ್ರಸಂಗ’ಎಂಬ ಲೇಖನದಲ್ಲಿ ಹಿರಿಯ ವಿಮರ್ಶಕ ಕೀರ್ತಿನಾಥ ಕುರ್ತಕೋಟಿ ಹೇಳುತ್ತಾರೆ-"ತಾಳಮದ್ದಳೆಯಲ್ಲಿ ಕತೆಯನ್ನು ತನಗೆ ಬೇಕಾದಂತೆ ಬೆಳೆಸಲು ಅರ್ಥಧಾರಿಗೆ ಸ್ವಾತಂತ್ರ್ಯವಿದೆ. ಅರ್ಥಧಾರಿ ಪಾತ್ರವೂ ಆಗುವುದರಿಂದ ತಿಳಿವಳಿಕೆ ಮತ್ತು ಅನುಭವ ಒಂದರೊಳಗೊಂದು ಹುಟ್ಟಿ ಬರುತ್ತವೆ. ಒಂದು ದೃಷ್ಟಿಯಿಂದ ಹೇಳಬೇಕೆಂದರೆ ಮೂಲಕತೆಯಲ್ಲಿಯ ಪಾತ್ರಗಳಿಗೆ ಮತ್ತೊಮ್ಮೆ ಬದುಕುವ ಅವಕಾಶ ದೊರೆತಂತಾಗುತ್ತದೆ. ಕರ್ಣನ ಬದುಕು ಹೀಗೆಯೇ ಕೊನೆಗೊಳ್ಳಬೇಕೇ ಎಂದು ಪ್ರಶ್ನೆ ಕೇಳಿದರೆ ಕರ್ಣನಿಗೆ ಮತ್ತೊಮ್ಮೆ ಬದುಕಿ ತೋರಿಸುವ ಅವಕಾಶ ಇಲ್ಲಿ ದೊರೆತಂತಾಗುತ್ತದೆ.’ ಹೌದು, ಪುರಾಣಗಳ ಬಗ್ಗೆ ಅಸಾಮಾನ್ಯವಾದ ಚರ್ಚೆಯನ್ನು ಯಕ್ಷಗಾನ ತಾಳಮದ್ದಳೆಗಳು ನಡೆಸುತ್ತವೆ. ಅಲ್ಲಿನ ಪ್ರಸಂಗಗಳಲ್ಲಿ ಎಷ್ಟೋ ಬಾರಿ ರಾಮನೆದುರು ವಾಲಿ, ರಾವಣರು (ಮಾತಿನಲ್ಲಿ) ಗೆಲ್ಲುತ್ತಾರೆ ! ಖಂಡಿತವಾಗಿ ರಾವಣನ ಸಂಹಾರ ಮಾಡಬಲ್ಲ ಬ್ರಹ್ಮಾಸ್ತ್ರವನ್ನು ಪ್ರಯೋಗಿಸುವ ಮೊದಲು ರಾಮನಾಗಿ ದೇರಾಜೆ ಸೀತಾರಾಮಯ್ಯ , ವಿಭೀಷಣನ ಅನುಮತಿ ಕೇಳುತ್ತಾರೆ ! ಪುರಾಣಗಳು ಹೀಗೆ ನಮ್ಮ ಅರಿವಿನ ವಿಸ್ತಾರದ ಭಾಗವಾಗಿ ಬರಬೇಕು. ನಂಬುವ ಮತ್ತು ಸಂಶಯಿಸುವ ಎರಡು ಗುಣಗಳೂ ರಾಮಾಯಣ-ಮಹಾಭಾರತಗಳಲ್ಲಿವೆ. ಸಂಶಯ ನಿವಾರಣೆಯಾಗಬೇಕೆಂದರೆ ಸೀತೆಯಾದರೂ ಅಗ್ನಿದಿವ್ಯವನ್ನು ಹಾಯ್ದು ಬರಬೇಕು, ಗರ್ಭವತಿಯಾದರೂ ಅರಮನೆಯನ್ನು ತೊರೆಯಬೇಕು. ಕಡಲತೀರದಲ್ಲಿ ವಿಭೀಷಣನಿಗೆ ರಾಮ ಪಟ್ಟಾಭಿಷೇಕ ಮಾಡಿದಾಗ ಯಾರೋ ಕೇಳಿದರಂತೆ - ಒಂದುವೇಳೆ ರಾವಣ ಸೋಲದಿದ್ದರೆ ವಿಭೀಷಣನಿಗೆ ಏನು ಮಾಡುತ್ತೀಯೆ?-"ಅವನಿಗೆ ಅಯೋಧ್ಯೆಯ ಪಟ್ಟವನ್ನು ಬಿಟ್ಟುಕೊಡುತ್ತೇನೆ !’ ಅನ್ನುತ್ತಾನೆ ವಾಲ್ಮೀಕಿಯ ಶ್ರೀರಾಮಚಂದ್ರ. ಅಂತಹ ರಾಮಭಕ್ತರ ನಂಬಿಕೆಗಳು ಅಭಿವೃದ್ಧಿಗೆ ಮಾರಕವಾಗದೆ ಪೂರಕವಾಗಿರಲಿ. "ನಂಬದೆ ಕೆಡುವರಲ್ಲದೆ, ನಂಬಿ ಕೆಟ್ಟವರಿಲ್ಲವೋ..’ ಎಂಬ ವಾಣಿ ನಿಜವಾಗಲಿ.

ಸೇತುವೆಯ ಮೂಲಕ ಲಂಕೆಗೆ ಹೋದ ರಾಮ ಮರಳಿದ್ದು ಪುಷ್ಪಕವಿಮಾನದಲ್ಲಿ ಎಂಬುದು ಮರೆತುಹೋಗದಿರಲಿ !

Read more...

September 23, 2007

ಹೂಬಾಣದ ಗುರಿ

ದಿನೈದು ವರ್ಷದ ಹುಡುಗಿಯೊಬ್ಬಳು ತನ್ನ ತಾಯಿಯನ್ನೇ ಕೊಲೆ ಮಾಡಿದ್ದಾಳೆ. ಹದಿನೇಳು ವರ್ಷದ ತನ್ನ ಪ್ರಿಯಕರನ ಜತೆಗೂಡಿಕೊಂಡು ! ಕಳೆದ ಸೆಪ್ಟೆಂಬರ್ ೧೯ರಂದು ಈ ಘಟನೆ ನಡೆದದ್ದು , ಅಂತಹ ಮಾಯಾನಗರಿಯೇನೂ ಅಲ್ಲದ ಮೈಸೂರಿನಲ್ಲಿ . ಮೈಮನಗಳ ಪುಳಕಕ್ಕೆ ಮಕ್ಕಳೂ ಎಷ್ಟೊಂದು ಬಲಿಯಾಗುತ್ತಿದ್ದಾರೆಂದು ಯೋಚಿಸುವಂತೆ ಮಾಡಿದೆ ಇದು. "ಈ ವಯಸ್ಸಿನಲ್ಲಿ ಪ್ರೀತಿಪ್ರೇಮ ಅಂತೆಲ್ಲಾ ಬೇಡ. ಓದಿನಲ್ಲಿ ಶ್ರದ್ಧೆ ವಹಿಸು’ ಅಂತ ಅಮ್ಮ ಆಗಾಗ ಹೇಳುತ್ತಿದ್ದರಂತೆ. ಪ್ರತಿದಿನ ಪ್ರೀತಿ-ಪಾಠದ ನಡುವಿನ ಆಯ್ಕೆಯ ಬಗ್ಗೆ ತಾಯಿ ಮಗಳಿಗೆ ಜಗಳ ನಡೆಯುತ್ತಿತ್ತಂತೆ. ಅದೇ ಹುಡುಗಿಯ ಪಿತ್ತವನ್ನು ನೆತ್ತಿಗೇರಿಸಿದೆ. ಹುಡುಗ ಹುಡುಗಿ ಸೇರಿ ದಿಂಬಿನಿಂದ ಉಸಿರುಗಟ್ಟಿಸಿ ಆ ತಾಯಿ ಜೀವಕ್ಕೆ ಗತಿ ಕಾಣಿಸಿದ್ದಾರೆ.

ಕೊಲೆ ಮಾಡಿದರೆ ತಮ್ಮ ಮೇಲೆ ಅನುಮಾನ ಬರುತ್ತದೆ, ತಾವು ಸಿಕ್ಕಿಬೀಳಬಹುದು, ಶಿಕ್ಷೆಯಾಗಬಹುದು ಎಂಬುದನ್ನೇ ಯೋಚನೆ ಮಾಡದಷ್ಟು ಮುಗ್ಧರೇನಲ್ಲ ಆ ಮಕ್ಕಳು. ಹಾಗಾದರೆ ಭವಿಷ್ಯದ ಯೋಚನೆಯಿಲ್ಲದೆ, ನ್ಯಾಯಅನ್ಯಾಯಗಳ ವಿವೇಕವಿಲ್ಲದೆ ಪ್ರೇಮಪಾಶಕ್ಕೆ ಸಿಲುಕಿದ ಮನಸ್ಸುಗಳೆರಡು ಉದ್ರೇಕದಿಂದ ಮಾಡಿದ ಕೆಲಸವಾ ಇದು? ಅಮ್ಮನ ಬಗೆಗಿನ ಹೆಚ್ಚಿನ ಸಿಟ್ಟು ಅಥವಾ ತಮ್ಮ ಪ್ರೀತಿಯ ಗಾಢತೆ-ಇವೆರಡರಲ್ಲಿ ಯಾವುದು ಈ ಕೃತ್ಯಕ್ಕೆ ಮುಖ್ಯ ಪ್ರೇರಣೆಯಾಯಿತು? ಅಮ್ಮನೆಂಬ ಕಂಟಕವನ್ನೇ ನಿವಾಳಿಸಿ ಒಗೆಯಬೇಕೆನ್ನುವ ಮನಸ್ಥಿತಿ ಉಂಟಾಗಲು ಕಾರಣಗಳೇನು? ಅಮ್ಮನೂ ಏನಾದರೂ ದಗಲ್ಬಾಜಿ ಕೆಲಸ ಮಾಡಿರಬಹುದಾ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರಗಳೇನೇ ಇರಲಿ, ನಡೆದುಹೋಗಿರುವಂತದ್ದು ಮಾತ್ರ ಭಯಾನಕ.

ದಕ್ಷಿಣಕನ್ನಡದಲ್ಲಿ ಇಬ್ಬರು ಎದುರೆದುರು ನಿಂತು ಬಯ್ದಾಡಿಕೊಂಡರೆ ಫಿನಿಷ್! ಅಂದರೆ....ಜೀವನಪರ್ಯಂತ ಅವರೆಂದೂ ಮಾತಾಡುವುದಿಲ್ಲ. "ಇಕಾ, ಆ ವಿಷಯ ನಿನಗೆ ಬೇಡ...ಜಾಸ್ತಿಯಾಯ್ತು ನಿಂದು....ನಿನ್ನ ಅಧಿಕಪ್ರಸಂಗ ಎಲ್ಲ ಬೇಡ...ನಾನು ಬೇಡದ್ದೆಲ್ಲಾ ಹೇಳ್‌ಬೇಕಾಗ್ತದೆ...’ ಅಂತ ನಿಧಾನವಾಗಿ ಅಲ್ಲಿ ಬೈಗುಳದ ಕಾವು ಆರಂಭವಾದರೆ ಈ ಬೆಂಗಳೂರಿನಲ್ಲೆಲ್ಲ "ಬೋಸೂರಂ’ಗಳಿಂದಲೇ ಅರ್ಚನೆ ಶುರು. ಬೈಗುಳವು ಇಲ್ಲಿನಷ್ಟು ಸಹಜ ಸಲೀಸಲ್ಲ ದಕ್ಷಿಣಕನ್ನಡಿಗರಿಗೆ. ಸುಳ್ಳು ಹೇಳುವುದು ನಮಗೆ ಸಲೀಸಾಗಿದೆ. ಅಶಿಸ್ತು ಎನ್ನುವುದು ಕೆಲವರ ಸ್ವಭಾವಕ್ಕೊಂದು ಗರಿಯೆಂದೇ ಒಪ್ಪಿಕೊಳ್ಳಲಾಗಿದೆ ! ಈಗ ಕೊಲೆ ಮಾಡುವುದು ಕೂಡಾ ಕೆಲವರಿಗೆ ಸರಾಗವಾಗುತ್ತಿದೆಯೆ? ಈ ಬಗೆಗಿನ ಅಪರಾಧಿ ಭಾವ, ಪಾಪಪ್ರಜ್ಞೆ ಕಡಿಮೆಯಾದದ್ದೂ ಇದಕ್ಕೆ ಮುಖ್ಯ ಕಾರಣವಲ್ಲವೆ? "ಕೊಲೆ ಮಾಡೋದು ಏನ್ ಮಹಾ’ ಎಂಬ ಭಾವನೆ ಕೆಲವು ಆಫ್ರಿಕನ್ ದೇಶಗಳಲ್ಲಿರುವಂತೆ ನಮ್ಮಲ್ಲೂ ಬಂದರೆ ಪಡ್ಚ ಪಡ್ಚ .

*****
ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ಬೇಕು ಅನ್ನುವುದರ ಹಿಂದೆ ಕಾಂಡೋಮ್ ಕಂಪನಿಗಳ ಲಾಬಿಯಿದೆ ಅಂತೆಲ್ಲ ಕೂಗಾಡುವವರು, ಲೈಂಗಿಕ ಶಿಕ್ಷಣದ ಅಗತ್ಯ ಉಂಟಾಗಲು ಕಾರಣಗಳೇನು ಎಂಬುದನ್ನೂ ಯೋಚಿಸಿದರೆ ಒಳ್ಳೆಯದು. (ಹಿಂದೆ ರೋಗಗಳು ಕಡಿಮೆ ಇದ್ದವು ಔಷಧ-ಚಿಕಿತ್ಸೆ ವ್ಯವಸ್ಥೆಯೂ ಕಡಿಮೆಯಿತ್ತು. ಈಗ ರೋಗಗಳು ಹೆಚ್ಚಾಗಿವೆ ಚಿಕಿತ್ಸಾಲಯಗಳೂ ಜಾಸ್ತಿಯಾಗಿವೆ, ವಿಷಯವೂ ಹೆಚ್ಚು ಗೊತ್ತಿರಬೇಕು-ಅಂತೆಲ್ಲ ಮಾತಿನ ಚಮತ್ಕೃತಿ ತೋರುವುದನ್ನು ಬಿಡೋಣ.) ಹಿಂದಿನ ಕಾಲದಲ್ಲಿ ಲೈಂಗಿಕ ಶಿಕ್ಷಣ ಇಲ್ಲದಿದ್ದರೂ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ನೈತಿಕ ಶಿಕ್ಷಣವಂತೂ ಇತ್ತು. ಆದರೆ ನೈತಿಕತೆಯ ಮಾನದಂಡವೇ ಕುಗ್ಗಿಹೋಗಿರುವ ಈ ಕಾಲದಲ್ಲಿ ಲೈಂಗಿಕ ಶಿಕ್ಷಣದ ಅಗತ್ಯ ಕಂಡುಬರುತ್ತಿದೆ. ಅಂದರೆ, ಲೈಂಗಿಕ ಶಿಕ್ಷಣ ಪಡೆದರೆ ಅನೈತಿಕವಾದದ್ದದ್ದನ್ನೂ ನೈತಿಕವಾಗಿಸಬಹುದು ಎಂಬಂತಿದೆ ಕೆಲವರ ಧಾಟಿ. ಯಾವುದನ್ನಾದರೂ ಗೋಪ್ಯವಾಗಿಟ್ಟು ಭಯವನ್ನೋ ಗೌರವವನ್ನೋ ಹುಟ್ಟಿಸುವ ಕಾಲ ಇದಲ್ಲ ಅನ್ನುವುದನ್ನು ಒಪ್ಪೋಣ. ಆದರೆ ಗೌಪ್ಯತೆಯನ್ನು ಭೇದಿಸುವಾಗ ತಿಳಿದದ್ದನ್ನು ನಿರ್ವಹಿಸುವ, ಧರಿಸುವ ಶಕ್ತಿಯೂ ಇರಬೇಕು. ಹಾಗಾಗಿ ವಿಷಯ ತಿಳಿದ ಮಾತ್ರಕ್ಕೆ ಆತ ಪ್ರಾಜ್ಞ ಅನಿಸಿಕೊಳ್ಳುವುದಿಲ್ಲ. ಲೈಂಗಿಕಶಿಕ್ಷಣ ಅನ್ನುವುದು ತಾಂತ್ರಿಕವೆನ್ನಬುಹುದಾದ ಮಾಹಿತಿಯಷ್ಟೆ. ಅದನ್ನು ಮಕ್ಕಳಿಗೆ ಕೊಡಬೇಕಾದರೆ ಅದಕ್ಕಾಗಿ ಮಕ್ಕಳನ್ನು ಮಾನಸಿಕವಾಗಿ ಮೊದಲು ತಯಾರು ಮಾಡೋಣ.

ಗೊತ್ತಿದ್ದೂ ಗೊತ್ತಿದ್ದೂ ಸುಳ್ಳು ಹೇಳುವ, ತಪ್ಪು ಮಾಡುವ ಮನಸ್ಥಿತಿ ಹೆಚ್ಚಾಗುತ್ತಿದೆಯೆಂದರೆ ಗೊತ್ತಾಗುವುದರಲ್ಲೇ ಏನೋ ಸಮಸ್ಯೆ ಇದೆ ಅಂತಲೇ ಅರ್ಥ ! ಹಾಗಾಗಿ ಲೈಂಗಿಕ ಶಿಕ್ಷಣದ ಜತೆಜತೆಗೆ ನೈತಿಕ ಶಿಕ್ಷಣವೂ ಮನಮುಟ್ಟುವ ಹಾಗೆ ಮಕ್ಕಳಿಗೆ ದೊರೆಯಬೇಕಾದ್ದು ಇಂದಿನ ತುರ್ತು ಅಗತ್ಯ . ಕೆಲವು ಮಾಷ್ಟ್ರುಗಳೇ ಹಲ್ಕಟ್ ಮಾಡುತ್ತಿರುವಾಗ ಮಕ್ಕಳಿಗೆ ಸರಿದಾರಿ ತೋರಬೇಕಾದ ಜವಾಬ್ದಾರಿ ಶಾಲೆ, ಮನೆ, ಸಮಾಜ ಮೂರರ ಮೇಲೂ ಇದೆ. ಕಾಂಡೋಮ್ ಧರಿಸಿ ಏನ್ ಬೇಕಾದ್ರೂ ಮಾಡಿ ಅಂತ ತುತ್ತೂರಿ ಊದುವುದನ್ನು ಬಿಟ್ಟು , ಯಾವುದು ಸಹಜ ಯಾವುದು ಅಸಹಜ, ಯಾವುದು ಸಕ್ರಮ ಯಾವುದು ಅಕ್ರಮ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ-ಅರಿವು ಬೇಕಲ್ಲ. ಶಾಲಾ ಲೈಂಗಿಕ ಶಿಕ್ಷಣವು ಕಾಮವಾಂಛೆಯನ್ನು ನಿಯಂತ್ರಿಸುವ ಸಂಗತಿಯಾಗಿ ಬೋಧಿಸಲ್ಪಡಬೇಕೇ ಹೊರತು ಉತ್ತೇಜಿಸುವಂತಲ್ಲ.
*****
ನಮ್ಮೆಲ್ಲರ ಸಂಬಂಧಗಳಿಗೆ ಲಾಂಗ್ ಲಾಸ್ಟಿಂಗ್ ಪವರನ್ನು ನೀಡಿದ್ದು ಈ ದೇಶದ ಋಣದ ಕಲ್ಪನೆ. ಆದರೀಗ ಹಣ, ಅಧಿಕಾರ, ಕಾಮ ಇತ್ಯಾದಿಯಷ್ಟೆ ಸಂಬಂಧ ಸೇತುಗಳಾಗುತ್ತಿವೆ. ಭಾರತದ ಅತ್ಯುಚ್ಚ ಮೌಲ್ಯಗಳಲ್ಲಿ ಒಂದಾದ "ಋಣ’ದ ಕಲ್ಪನೆ ಕಡಿದುಹೋಗುತ್ತಿದೆ. ಮೊದಲು ಪಿತೃ ಋಣ, ಅನ್ನ ಋಣ, ದೇವ ಋಣ, ವಿದ್ಯಾ ಋಣಗಳೆಲ್ಲ ಎಂದೂ ತೀರದವುಗಳಾಗಿ ಬಿಂಬಿಸಲ್ಪಡುತ್ತಿದ್ದವು. ನಮ್ಮ ನ್ನೆಲ್ಲ ಬಂಧಿಸಿಡುತ್ತಿದ್ದುದರಲ್ಲಿ ಅವುಗಳ ಪಾಲೂ ದೊಡ್ಡದು. ಆದರೆ ದುಡ್ಡಿನ ಗುಡ್ಡದೆದುರು ಅವೆಲ್ಲ ಕರಗಿಹೋಗಿವೆ. ಯಾರಾದರೂ ತೀರಿಕೊಂಡಾಗ "ಅವನಿಗೆ ಭೂಮಿಯ ಋಣ ಮುಗಿದುಹೋಯಿತು’ ಅಂತ ಹಿರಿಯರು ಹೇಳುತ್ತಾರಲ್ಲ, ಎಂತಹ ದೊಡ್ಡ ಮಾತು ಅದು ! ಭೂಮಿಯ ಋಣವನ್ನು ತೀರಿಸುವುದಕ್ಕೆ ಸಾಧ್ಯವೇ ನಮಗೆ? ಆದರೆ ಮೈಸೂರಿನ ಕಿಶೋರಿಗೆ ಅಮ್ಮನ ಋಣವೇ ಅಷ್ಟು ಬೇಗ ಮುಗಿದುಹೋಯಿತೇ? ಅಥವಾ ಅಮ್ಮನಿಗೆ ಮಗಳ ಋಣ ಕಳೆದುಹೋಯಿತೇ?

ಒಂದು ಜೀವದ ಪ್ರೀತಿಯನ್ನು ಗೆದ್ದವರಿಗೆ ಇನ್ನೊಂದು ಜೀವದ ಪ್ರೀತಿಯನ್ನು ಪಡೆಯಲಾಗದಿದ್ದರೆ ಹೋಗಲಿ, ಇಂಥಾ ಪಾಪಕರ್ಮಕ್ಕೆ ಕ್ಷಮೆಯಿರಲಾರದು. ಮೈಸೂರಿನ ಆ ಘಟನೆಯನ್ನೂ , ಊರಿನಲ್ಲಿ ಮನೆಯನ್ನು ಮುನ್ನಡೆಸುತ್ತಿರುವ ನನ್ನ ಅಮ್ಮನನ್ನೂ ನೆನೆಸಿಕೊಳ್ಳುತ್ತಿದ್ದೇನೆ. ಅವಳ ಮುಖದಲ್ಲಿನ ಉದ್ವೇಗ ಹೆಚ್ಚಾದಂತಿದೆ.

Read more...

September 21, 2007

ನಮ್ಮಯ ಸವಾರಿ ಊರಿಗೆ ಹೋದದ್ದು...

(ಇದೊಂಥರಾ ಬರವಣಿಗೆಯ ತಾಲೀಮು. ಈ ದಿನಚರಿಯನ್ನು ಹೀಗೆ ಎಷ್ಟೂ ಬರೆಯುತ್ತಾ ಹೋಗಬಹುದು. ಒಂದುವೇಳೆ, ನಿಮ್ಮ ಈವತ್ತಿನ ದಿನಚರಿಯೂ ಓದುವುದೇ ಆಗಿದ್ದರೆ...ಮತ್ತೇನು ? ಓದಿಕೊಳ್ಳಿ ! )

ಒಂದು ಅಸಡ್ಡಾಳ ಓರೆ ನಗೆ. ಮೆಜೆಸ್ಟಿಕ್‌ನಲ್ಲಿ ಕಂಡ ಮುಖಕ್ಕೆ ನನ್ನ ಪರಿಚಯ ಹತ್ತಿದಂತಿದೆ. ಮಹಾನಗರವನ್ನು ನಿರ್ಲಕ್ಷಿಸಬಲ್ಲ ನಿಲುವು. ನನ್ನೆಡೆಗೆ ಎರಡ್ಹೆಜ್ಜೆ ಹಾಕಿ ಗಕ್ಕನೆ ನಿಂತಿದ್ದಾನೆ. ಇನ್ನು ಅವನಿಗೆ ದಿವ್ಯ ನಿರ್ಲಕ್ಷ್ಯವೊಡ್ಡಿ ಕೈ ಬೀಸಿಕೊಂಡು ಸಾಗುವುದು ಕಷ್ಟ. ಒಂದು ವೇಳೆ ಹಾಗೆ ಹೊರಟರೂ, ಕೈಹಿಡಿದೆಳೆದು ನಿಲ್ಲಿಸಿದರೆ...? ಎತ್ತಿದ್ದ ಸೂಟ್‌ಕೇಸ್, ಬ್ಯಾಗುಗಳನ್ನು ಕುಕ್ಕಿ, ಬೆಂಚಿನ ಮೇಲೆ ಕುಂಡೆಯೂರಿದರೆ...ಆ ಪಾಪಾತ್ಮ ಎತ್ತಲೋ ನೋಡುತ್ತ ಗಮನವನ್ನೆಲ್ಲ ಇತ್ತಲೇ ಇಟ್ಟಂತಿದೆ. ಅವನ ಭಂಗಿಗಳಲ್ಲೂ ಬಲವಿದೆ. ಎಲ್ಲೋ ನೋಡಿದ, ಮಾತನಾಡಿದ ನೆನಪು ತೀರ ಅಸ್ಪಷ್ಟ .

ಎದ್ದು ನಡೆವ ಎಂದರೆ...ಮತ್ತೆ ತಿರುಗಿ ಮಕಮಕ ನೋಡುತ್ತಾನೆ, ಸೂಳೇ ಮಗ. ಕಳ್ಳನೋ,ಸುಳ್ಳನೋ, ಗೆಳೆಯನೋ,ಬಂಧುವೋ ಅಂತ ನಿರ್ಧರಿಸುವುದು ಕಷ್ಟ. ಎದ್ದು ನಡೆದರಾಯಿತು, ಈ ಜನ ಸಾಗರದ ಮಧ್ಯೆ ಭಯವೇನು ? ಎದ್ದು ನಡೆವ ಎಂದರೆ ಕಾಲು ಕಟ್ಟಿದಂತಾಗಿದೆ. ಥತ್, ಬುದ್ಧಿಗೆ ಮಂಕು ಬಡಿದಂತಿದೆ.

ಬೆಂಗಳೂರಿನ ಮುಖ್ಯ ಬಸ್ ನಿಲ್ದಾಣ ಮೆಜೆಸ್ಟಿಕ್‌ನ ರಾತ್ರಿ ಹತ್ತರ ಆ ಜನ ಜಂಗುಳಿಯಲ್ಲಿ ಸಿಕ್ಕಿದ ಮನುಷ್ಯ ನಮ್ಮ ಸುಳ್ಯ ತಾಲೂಕಿನವರೇ ! "ಕೃಷಿ ಮೇಳ ನೋಡುವ ಅಂತ ನಾನು-ಫ್ರೆಂಡ್ ಬೈಕ್ನಲ್ಲಿ ಬೆಳಗ್ಗೆ ೪ ಗಂಟೆಗೆ ಊರಿಂದ ಹೊರಟು ಮಧ್ಯಾಹ್ನ ತಲುಪಿದೆವು. ಮೇಳ ಅಷ್ಟೇನೂ ಚೆನ್ನಾಗಿರಲಿಲ್ಲ. ಅವನು ಏನೋ "ಕೆಲಸ’ ಇದೆ ಅಂತ ಇಲ್ಲಿ ಉಳಿದುಕೊಂಡಿದ್ದಾನೆ. ಹಾಗಾಗಿ ನಾನೀಗ ಬಸ್ಸಿಗೆ ಹೊರಟದ್ದು’ ಎಂದರು. ಅಷ್ಟೇ ಆಗಿದ್ದರೆ ಅಂತಹ ಆಶ್ಚರ್‍ಯವೇನೂ ಇರಲಿಲ್ಲ. ಆದರೆ..."ನಾನೊಂದು ಯಕ್ಷಗಾನ ತಂಡ ಮಾಡಬೇಕು ಅಂತಿದ್ದೇನೆ. ಬೆಂಗಳೂರಿನಲ್ಲಿ ಒಳ್ಳೆಯ ಪ್ರೋತ್ಸಾಹ, ಕಾರ್‍ಯಕ್ರಮ ಸಿಗಬಹುದು ಅಂತ ನನ್ನ ಲೆಕ್ಕಾಚಾರ. ಪ್ರಾಯೋಜಕರು ಯಾರಾದ್ರೂ ನಿಮಗೆ ಗೊತ್ತಾ?’ ಅನ್ನಬೇಕೇ ! ಯಕ್ಷಗಾನವೂ ಉಳಿದು ಬೆಳೆಯಲು ಬೆಂಗಳೂರೇ ಆಗಬೇಕೇ?

ಸಾಂಸ್ಕೃತಿಕ ವಲಸೆ ?
ಸಕಲೇಶಪುರದ ರಂಗಕರ್ಮಿ ಪ್ರಸಾದ್ ರಕ್ಷಿದಿಯವರು ಹೇಳಿದ್ದು ಬಸ್‌ನಲ್ಲಿ ಕುಳಿತಾಗ ನೆನಪಾಯಿತು- "ಇಲ್ಲಿ ನಾವೊಂದು ರಂಗತಂಡವನ್ನು ಕಟ್ಟುವುದೇ ಕಷ್ಟವಾಗಿದೆ. ಪ್ರತಿವರ್ಷ ಮೂರ್‍ನಾಲ್ಕು ಕಲಾವಿದರು ಬೆಂಗಳೂರು ಪಾಲಾಗುತ್ತಿದ್ದಾರೆ. ಪತ್ರಿಕೆ, ಟಿವಿ ಮಾಧ್ಯಮಗಳಿಗೆ ಬಹಳಷ್ಟು ಜನ ಸೇರಿಕೊಳ್ಳುತ್ತಿದ್ದಾರೆ. ಒಬ್ಬಿಬ್ಬರು ಬಹಳ ಹಳೆಯ ಕಲಾವಿದರನ್ನು ಬಿಟ್ಟರೆ ಪ್ರತಿವರ್ಷದ ನಮ್ಮ ನಾಟಕಕ್ಕೆ ಹೊಸಬರನ್ನೇ ಹುಡುಕಬೇಕು’.

ಓದಿ ಕಲಿತು ಉದ್ಯೋಗ ಅರಸುತ್ತಾ ಈ ಮಹಾನಗರ ಪಾಲಾಗುವ ತರುಣರ ಜತೆಗೆ ಒಂದು "ಸಾಂಸ್ಕೃತಿಕ ವಲಸೆ’ಯೂ ನಡೆಯುತ್ತಿದೆಯೇ? ಎಲ್ಲ ಅಕಾಡೆಮಿಗಳ ಹೆಡ್ಡಾಫೀಸು, ಸಂಸ್ಕೃತಿ ಇಲಾಖೆಯ ಭಂಡಾರ ಬೆಂಗಳೂರಲ್ಲಿದೆ. ಬೇಕಾಬಿಟ್ಟಿ ಪತ್ರಿಕೆ, ಟಿವಿ ಮಾಧ್ಯಮಗಳಿವೆ. ಸುವರ್ಣ ಮಂತ್ರಾಕ್ಷತೆ ನೀಡಬಲ್ಲ ಕಂಪನಿಗಳು-ದೊಡ್ಡ ಕುಳಗಳು ಇದ್ದಾವೆ. ಹೀಗಾಗಿ ಹಳ್ಳಿಯ ಕಲಾವಿದರು-ಬರೆಹಗಾರರು ಕೂಡಾ ಬೆಂಗಳೂರು ಸೇರುತ್ತಿದ್ದಾರೆಯೇ?

ಊರಿನ ಶಾಲೆಗಳ ವಾರ್ಷಿಕೋತ್ಸವಗಳು ಎಸ್‌ಡಿಎಂಸಿ ರಾಜಕೀಯದಲ್ಲಿ ನರಳಿ ನಿಂತುಹೋಗಿವೆ. ದೇವಸ್ಥಾನದ ಜಾತ್ರೋತ್ಸವಗಳು ಕೇಸರೀಕರಣಗೊಂಡು ಜಡವಾಗಿವೆ. ಮನೆ ಮನೆ ಗೋಷ್ಠಿ ಮಾಡೋಣ ಅಂದರೆ ಹಲವರು ನಾನಾ ಕಾರಣಕ್ಕೆ ಮಾತು ಬಿಟ್ಟಾಗಿದೆ. ಸಾಹಿತ್ಯ ಪರಿಷತ್ ಅಂತೂ ಅಬ್ಬೇಪಾರಿಗಳ ವಶವಾಗಿ ತಾಲೂಕು ಸಾಹಿತ್ಯ ಸಮ್ಮೇಳನವೆಂಬುದು ಅಜ್ಜನ ತಿಥಿಗಿಂತಲೂ ಖರಾಬ್ ಆಗಿದೆ. ಉದ್ಯೋಗ ಹಿಡಿಯಲಷ್ಟೇ ಕೆಚ್ಚೆದೆಯಿಂದ ಓದುವ ಹಾಗೂ ಪೋಲಿ ತಿರುಗುವ ಎರಡು ಗುಂಪುಗಳ ಚಟುವಟಿಕೆಗೆ ಕಾಲೇಜುಗಳು ಸೀಮಿತವಾಗಿವೆ. ಇನ್ನೊಂದೆಡೆ ಬೆಳೆದದ್ದೆಲ್ಲ ಕೈಕೊಡುತ್ತಿದೆ. ಕೂಲಿಗೆ ಜನ ಸಿಗದೆ, ಅಗತ್ಯ ವಸ್ತುಗಳ ಬೆಲೆ ಏರಿ ಬೆಳೆಗಾರರು ಕಂಗಾಲಾಗಿದ್ದಾರೆ. ಇನ್ನು ಸಾಂಸ್ಕೃತಿಕ ಪ್ರಜ್ಞೆಯಾದರೂ ಎಲ್ಲಿಂದ ಬರಬೇಕು ಪ್ರಭೂ?

ಹೀಗಾಗಿ, ಬದುಕಿ ಉಳಿದರೆ ಬೇಡಿ ತಿಂದೇನು ಅಂತ ಜನ ಮಹಾನಗರಗಳತ್ತ ಮುಖ ಮಾಡಿದ್ದಾರೆ. "ಒಂಚೂರು ಬರೆಯಲು, ನಟಿಸಲು, ಚಿತ್ರ ಬಿಡಿಸಲು, ಡ್ಯಾನ್ಸ್ ಮಾಡಲು, ಹಾಡು ಹೇಳಲು...ಹೀಗೇ ಏನಾದರೂ ಗೊತ್ತಿದ್ದರೆ ಸಾಕು. (ಅಥವಾ ಚೂರುಪಾರು ಇಂಗ್ಲಿಷ್ ಬರುತ್ತದೆಂದರೆ ಅದರ ಮಜಾ, ಗತ್ತೇ ಬೇರೆ)ಸ್ವಲ್ಪ ಕಾಂಟಾಕ್ಟ್ ಬೆಳೆಯುವವರೆಗಷ್ಟೆ . ಆಮೇಲೆ ದುಡ್ಡೇ ದುಡ್ಡು’ ಅನ್ನುವುದು ಹಲವು ಯುವ ಪ್ರತಿಭಾವಂತರ ಅಂಬೋಣ ! ಹಾಗಂತ ಹಳ್ಳಿಯಲ್ಲಿ ಏನೂ ನಡೆಯುತ್ತಿಲ್ಲ ಅಂತಲ್ಲ. ಆದರೆ ಮೊದಲಿನ ಗುಣಮಟ್ಟ ಯಾವ ಕಾರ್‍ಯಕ್ರಮಗಳಲ್ಲೂ ಕಾಣುವುದಿಲ್ಲ. ಭಾಷಣಕಾರರು, ಕಾರ್‍ಯಕ್ರಮ ನಿರ್ವಾಹಕರು, ನಾಟಕದ ನಟ-ನಿರ್ದೇಶಕರು, ಯಕ್ಷಗಾನ ಕಲಾವಿದರು, ಬರೆಹಗಾರರು-ಊಹೂಂ ಫಸ್ಟ್‌ಕ್ಲಾಸ್ ಎನ್ನಬಹುದಾದಂಥವರನ್ನು ಹುಡುಕಿಹುಡುಕಿ ಸುಸ್ತಾಗುವುದು ಮಾತ್ರ. ಕೆಲವು ಹಳಬರು ಮಣಮಣ ಅನ್ನುತ್ತಿದ್ದಾರೆ. ಏನಾಗಿದೆ ಊರಿಗೆ ? (ದೊಡ್ಡವನಂತೆ ಬರೆದಿದ್ದರೆ ಕ್ಷಮಿಸಿ, ನಿಮ್ಮ ಅಭಿಪ್ರಾಯ ತಿಳಿಸಿ)

ಹುಟ್ಟಿಸಿದವನು ಈ ಸಲ ಹುಲ್ಲು ಮೇಯಿಸುವುದು ಗ್ಯಾರಂಟಿ
ಮಡಿಕೇರಿಯ ಘಾಟಿ ಇಳಿಯುತ್ತಿರುವಾಗ ಚುಮುಚುಮು ಬೆಳಕು. ಸಂಪಾಜೆ ಬಂತೆಂದರೆ, ಬೆಂಗಳೂರಿನ ಗಾಳಿ ಎಷ್ಟೊಂದು ಮಂದ-ದಪ್ಪ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ ! ಒಂದೆಡೆ ೪೦ಕಿಮೀ ದೂರದ ಮಡಿಕೇರಿ, ಇನ್ನೊಂದೆಡೆ ಸುಮಾರು ೯೦ ಕಿಮೀ ದೂರದಲ್ಲಿ ಜಿಲ್ಲಾ ಕೇಂದ್ರ ಮಂಗಳೂರು-ಇವುಗಳ ಮಧ್ಯೆ ಇರುವುದು ನಮ್ಮ ಸುಳ್ಯ ತಾಲೂಕು. ಕೊಂಚ ಓಲಾಡಿದರೆ ಅತ್ತ ಕೇರಳ ರಾಜ್ಯ . ಜಿರಿಜಿರಿ ಮಳೆ ಹೊಯ್ಯುತ್ತಲೇ ಇದೆ. ಕಾಲಿಟ್ಟಲ್ಲೆಲ್ಲ ಕೆಸರು, ಹಸಿರು. ಜನರಿಗೆ ಮಳೆ ಎಂದರೆ ಅಲರ್ಜಿ ಆಗುವಷ್ಟು , ಭೂಮಿ ಕುಡಿಕುಡಿದು ಮಿಕ್ಕುವಷ್ಟು ಈ ಬಾರಿ ಜಲಧಾರೆ ಆಗಿದೆ. "ಇಂಥಾ ಮಳೆ ನಾನು ಇದುವರೆಗೆ ನೋಡಿಲ್ಲ ’ ಅಂತ ಅಜ್ಜಿಯೇ ಹೇಳುತ್ತಿದ್ದಾರೆ. ಎಲ್ಲ ವಾಹನಗಳೂ ಕೆಸರು ಮೆತ್ತಿಕೊಂಡು ಅಸಹ್ಯವಾಗಿವೆ. ಪ್ರತಿಯೊಬ್ಬರ ಪ್ಯಾಂಟೂ ಮೊಳಕಾಲವರೆಗೆ. ಎಲ್ಲೆಲ್ಲೂ ಕೊಡೆಗಳದ್ದೇ ರಾಜ್ಯ . ತೋಡು, ಹೊಳೆಗಳು ಕೆಂಪು ನೀರು ತುಂಬಿಕೊಂಡು ಮುನ್ನುಗ್ಗುತ್ತಿವೆ. ನೀರು-ಹುಲ್ಲು ಬಿಟ್ಟರೆ ತೋಟದಲ್ಲಿ ಇನ್ನೇನೂ ಇಲ್ಲ. ಹುಟ್ಟಿಸಿದವನು ಈ ಸಲ ಹುಲ್ಲು ಮೇಯಿಸುವುದು ಗ್ಯಾರಂಟಿ . ನಮ್ಮ ಮನೆಯಂತೂ, ಆಗಷ್ಟೆ ಪತ್ತೆಯಾದ ಕ್ರಿಸ್ತಪೂರ್ವ ಕಾಲದ ಕಟ್ಟಡದಂತೆ ಕಾಣುತ್ತಿದೆ ! ಅಷ್ಟದಿಕ್ಕುಗಳಲ್ಲೂ ಹುಲ್ಲು ಬೆಳೆದು ನಿಂತಿದೆ. ಹುಲ್ಲು ಬೆಳೆಯಬಾರದೆಂದು ಅಂಗಳಕ್ಕೆ ಹಾಕಿದ್ದ ತೆಂಗಿನಮರದ ಮಡಲು (ಗರಿ) ಗೊಬ್ಬರವಾಗುತ್ತಿದೆ. ಕಾಲಿಟ್ಟಲ್ಲೆಲ್ಲ ಜಾರುತ್ತದೆ. ಕಿಟಕಿ ಬಾಗಿಲೂ ವ್ಯವಸ್ಥಿತವಾಗಿಲ್ಲದ ನಮ್ಮ ಮನೆಯಲ್ಲಿ ಮಳೆಗಾಲವನ್ನು ಅನುಭವಿಸುವುದಕ್ಕೆ ವಿಶೇಷ ಅಭ್ಯಾಸ ಬೇಕು ಮಾರಾಯ್ರೆ !

ತೋಳ್ಪಾಡಿ ಪುಸ್ತಕ
ಕನ್ನಡ-ಇಂಗ್ಲಿಷ್-ಸಂಸ್ಕೃತಗಳಿಂದ ಸತ್ತ್ವವನ್ನು ಹೀರಿಕೊಳ್ಳುತ್ತಿರುವ, ಸಾಹಿತ್ಯ-ಯಕ್ಷಗಾನ-ಅಧ್ಯಾತ್ಮ - ಕೃಷಿಯಲ್ಲಿ ತೊಡಗಿಕೊಂಡಿರುವ ಲಕ್ಷ್ಮೀಶ ತೋಳ್ಪಾಡಿಯವರು ಇರುವುದು ಪುತ್ತೂರು ತಾಲೂಕಿನ ಶಾಂತಿಗೋಡು ಎಂಬ ಹಳ್ಳಿಯಲ್ಲಿ . ಬರೆಹದ ಬಿಗಿಯನ್ನು ಮಾತಿನಲ್ಲಿ , ಮಾತಿನ ಓಘವನ್ನು ಬರೆಹದಲ್ಲಿ ಸಾಧಿಸಬಲ್ಲ ತೋಳ್ಪಾಡಿ ನಿಶ್ಚಿಂತ ಚಿಂತಕರು ! "ನಿಮ್ಮ ಬರೆಹಗಳನ್ನೆಲ್ಲ ಸೇರಿಸಿ ಒಂದು ಪುಸ್ತಕ ಮಾಡುತ್ತೇನೆ ’ ಅಂತಂದು, ಅವರ ಶಾಂತಿಯನ್ನು ನಾನು ಹಾಳು ಮಾಡಿ ವರ್ಷವೇ ಕಳೆಯಿತು ! "ನಿಮ್ಮ ಬರೆಹಗಳ ಪುಸ್ತಕ ತರುತ್ತೇವೆ’ ಅಂತ ಸಂಪಾದಕ, ಪ್ರಕಾಶಕರೇ ದುಂಬಾಲು ಬಿದ್ದರೂ ಕ್ಯಾರೇ ಮಾಡದ ವಿಭೂತಿಪುರುಷ ಈ ತೋಳ್ಪಾಡಿ. ಸಿಕ್ಕ ಸಿಕ್ಕ ಸಾರ್ವಜನಿಕ ಕಾರ್‍ಯಕ್ರಮಗಳಲ್ಲಿ ಭಾಷಣ ಮಾಡುತ್ತಲೇ, ಫಕ್ಕನೆ ಒಂದು ದಿನ ಒಂದಿಬ್ಬರು ಗೆಳೆಯರೊಂದಿಗೆ ಆಗುಂಬೆಯ ಕಾಡಿಗೆ ಹೋಗಿ ಎರಡು ರಾತ್ರಿ ಕಳೆದು ಬರುವಂಥವರು.

ಭಗವದ್ಗೀತೆಯ ಸರ್ವೋಪನಿಷಧೋ ದೋಗ್ಧಾ ಗೋಪಾಲ ನಂದನಃ’ ಶ್ಲೋಕವನ್ನು ನೆನಪಿಸಿಕೊಳ್ಳುತ್ತ , ಹೆಬ್ಬೆರಳು-ತೋರುಬೆರಳನ್ನು ಜೋಡಿಸಿ ಉಳಿದ ಬೆರಳುಗಳನ್ನು ನೇರವಾಗಿಸಿ ತೋರುವ ಜ್ಞಾನಮುದ್ರೆಯನ್ನೇ ಅಡ್ಡಲಾಗಿ ಹಿಡಿದರೆ.... ಅದು ಹಾಲು ಕರೆಯುವ ಕೈಯಾಗುತ್ತದೆ !-ಎಂದು ಹೊಳೆಯುವುದು ಇವರ ಚಿಂತನಾಕ್ರಮಕ್ಕೊಂದು ಸಣ್ಣ ಉದಾಹರಣೆ.ಈ ಬಾರಿಯೂ ನನ್ನ ದೂರವಾಣಿ ಕರೆ ಪೂರ್ತಿ ಫಲಪ್ರದವಾಗದಿದ್ದರೂ ಸಂಗ್ರಹವಾಗಿರುವ ಲೇಖನಗಳನ್ನು ಕೊಂಚ ತಿದ್ದಿ ಕೊಡುತ್ತೇನೆಂಬ ಅವರ ಮಾತನ್ನು ಊರ್ಜಿತದಲ್ಲಿರಿಸಿದೆ ! (ಅಪಾಯ...ಇಲ್ಲಿ ಕ್ಲಿಕ್ ಮಾಡಬೇಡಿ...ಮುಂದುವರಿಯಲೂಬಹುದು !)

Read more...

September 10, 2007

ಗಂಡ ಹೆಂಡಿರ ಜಗಳದಿಂದ ಜನಿಸಿದವನಿಗೆ...!


ಮೆರವಣಿಗೆಯೊಂದು ನ್ಯಾಚುರೋಪತಿ ಕಾಲೇಜು ದಾಟಿ, ಹುಡುಗಿಯರ ಮೈತ್ರೇಯಿ ಹಾಸ್ಟೆಲಿಗೆ ಹೋಗುವ ತಿರುವಿನ ಬಳಿ ಸಾಗಿ, (ಅಲ್ಲಿ ಸ್ವಲ್ಪ ನಿಧಾನವಾಗಿ ! ) ತಮ್ಮದೇ ಕಾಲೇಜಿನ ಎದುರಾಗಿ ಪೇಟೆ ಪ್ರವೇಶಿಸಿ, ಸರ್ಕಲ್‌ಗೆ ಸುತ್ತು ಹಾಕಿ ವಾಪಸ್ ಬರುತ್ತದೆಂದರೆ....
ಅದು ಸಿದ್ದವನ ಗುರುಕುಲದ ಚೌತಿ ಮೆರವಣಿಗೆಯಲ್ಲದೆ ಬೇರೆ ಯಾವುದಾಗಿರಲು ಸಾಧ್ಯ ?!

ಡಂಗ್‌ರ ಟಕ್‌ರ..ಡಂಗ್‌ರ ಟಕ್‌ರ...ಅಂತ ಬ್ಯಾಂಡು ಬಜಾಯಿಸುತ್ತಿದ್ದ ಹಾಗೆ, ಬೆಂಕಿ ಚೆಂಡುಗಳನ್ನು ಕಟ್ಟಿರುವ ನಾಲ್ಕಡಿ ವ್ಯಾಸದ ರಿಂಗೊಂದನ್ನು ಆತ ಗರಗರನೆ ತಿರುಗಿಸುತ್ತಿದ್ದಾನೆ. ಎರಡು ತುದಿಗೆ ಬೆಂಕಿ ಹಚ್ಚಿದ್ದ ದೊಣ್ಣೆಗಳೊಂದಿಗೆ ಇನ್ನಿಬ್ಬರ ಕರಾಮತ್ತು . ಭೂತದ ವೇಷಗಳು, ಯಕ್ಷಗಾನದ ಬಣ್ಣದ ವೇಷಧಾರಿಗಳು ಕುಣಿಕುಣಿಯುತ್ತಿದ್ದಾರೆ. ಇನ್ನೊಂದೆಡೆ ಭಕ್ತಿಗೀತೆ ಹಾಡುವ ತಂಡ. ಉಜಿರೆ ಕಾಲೇಜಿನ ಹುಡುಗರ "ಸಿದ್ಧವನ ಗುರುಕುಲ'ದಲ್ಲಿ ಅತ್ಯಂತ ಅದ್ಧೂರಿಯಾಗಿ ಆಚರಿಸಲ್ಪಡುವ ಹಬ್ಬಗಳಲ್ಲಿ ಈ ವಿನಾಯಕ ಚೌತಿಯೂ ಒಂದು.

ಒಂದೂವರೆ ಕಿಮೀ ದೂರವಿರುವ ಉಜಿರೆ ಪೇಟೆಯ ಕೇಂದ್ರದವರೆಗೆ ಮೆರವಣಿಗೆ ಹೋಗಿ ಬಂದು, ಗುರುಕುಲದಲ್ಲಿರುವ ದೊಡ್ಡ ಕೆರೆಯಲ್ಲಿ ಗಣಪತಿ ವಿಸರ್ಜನೆ. ಇದನ್ನೆಲ್ಲ ನೋಡಲು ಮೈತ್ರೇಯಿ ಹಾಸ್ಟೆಲ್‌ನ ಹುಡುಗಿಯರಿಗೆ ಅನುಮತಿ ಕೊಟ್ಟಿಲ್ಲ ಅಂತಾದರೆ ಮಾತ್ರ , ವಾಪಸ್ ಬರುವ ಮೆರವಣಿಗೆ ಸ್ವಲ್ಪ ಸಣ್ಣದಾಗಿ ವೈಭವ ಕಳೆಗುಂದಿರುತ್ತದೆ ! ಆ ದಿನ ನಾನಾ ಕೆಲಸಗಳಿಗೆ ಹಲವಾರು ತಂಡಗಳು. ಸ್ವಚ್ಛತೆಗೊಂದು, ಸಾಂಸ್ಕೃತಿಕ ಕಾರ್‍ಯಕ್ರಮಕ್ಕೆ ಇನ್ನೊಂದು ಹೀಗೆಲ್ಲ. (ದೊಡ್ಡ ದೊಡ್ಡ ಲೈಟುಗಳನ್ನು ಉದ್ದನೆಯ ಕಂಬಕ್ಕೆ ಕಟ್ಟಿ ಹಿಡಿದುಕೊಳ್ಳುವ ಮತ್ತು ಬೆಂಕಿನೃತ್ಯದವರಿಗೆ ಸೀಮೆಎಣ್ಣೆ ಹೊತ್ತೊಯ್ಯುವ ಕೆಲಸ ಯಾರಿಗೂ ಸಿಗದಿರಲಿ ಶಿವನೆ !) ಪೂಜಾ ಸಮಿತಿಯಲ್ಲಿರುವ ಬ್ರಾಹ್ಮಣ ಹುಡುಗರಿಗಂತೂ, ಭಕ್ತರಿಗೆ ಪಂಚಾಮೃತ ಕೊಡಲು ಮರೆತುಹೋಗುವುದೇ ಹೆಚ್ಚು ! (ಹಾಗಂತ ಪ್ರಸಾದ ಹಾಳು ಮಾಡುವುದು ಸರಿಯೆ? ಛೆ, ಛೆ, ಪರದೆ ಹಿಂದೆಯಾದರೂ ತಿನ್ನದೆ ವಿಧಿಯುಂಟೆ?!)

ಗಣೇಶನ ಮೂರ್ತಿಯನ್ನು ಗುರುಕುಲದ ವಿದ್ಯಾರ್ಥಿಗಳಲ್ಲೇ ಯಾರಾದರಿಬ್ಬರು ತಯಾರಿಸುವುದು ಇಲ್ಲಿನ ವೈಶಿಷ್ಟ್ಯ . ತಿಂಗಳ ಮೊದಲೇ ಆ ಕಾರ್‍ಯ ಶುರುವಾಗುತ್ತದೆ. ಮಣ್ಣನ್ನು ಹಚ್ಚುವುದರಲ್ಲಿ ಪಾರ್ವತಿ ಅಷ್ಟೊಂದು ಶ್ರದ್ಧೆ ತೋರಿದ್ದಳೋ ಇಲ್ಲವೋ, ಆದರೆ ಆ ಹುಡುಗರಂತೂ ಬೆಣ್ಣೆ ಹಚ್ಚಿದಂತೆ ಮಣ್ಣು ಹಚ್ಚುತ್ತಾರೆ. ಸಾಯಂಕಾಲ ಕಾಲೇಜಿನಿಂದ ಬಂದು- ಗಣೇಶನ ಮೂರ್ತಿಗೆ ಸೊಂಡಿಲು ಬಂತೆ, ಕವಿ ಎಷ್ಟು ಅಗಲ ಆಯಿತು? ಹೊಟ್ಟೆ ಯಾಕೆ ಕೊಂಚ ಉದ್ದ ಆಗಿದೆ? ಈ ಕೈಯ ಬೆರಳಲ್ಲಿ ಅಂಕುಶ ನಿಂತೀತೆ?-ಅಂತೆಲ್ಲ ನೋಡಿ ಮಾತಾಡಿಕೊಳ್ಳದೆ ಯಾರೂ ರೂಮಿಗೆ ಹೋಗುವುದಿಲ್ಲ.

'ಈ ಸಲದ ಚೌತಿ ಗೌಜಿ' ಅಂತಾಗಬೇಕಾದರೆ- ಚೌತಿ ದಿನ ಸಾಯಂಕಾಲ, ಏಳು ಕಿಮೀ ದೂರದ ಧರ್ಮಸ್ಥಳದಿಂದ ಓಪನ್ ಟಾಪ್‌ನ ಕಪ್ಪು ಕಾರಿನಲ್ಲಿ ಖಾವಂದರು ಬರಬೇಕು ಅಥವಾ ಮರುದಿನ ಹತ್ತು ಜನರಿಗಾದರೂ ಹಟ್ಟಿಯ ಸೆಗಣಿ ತೆಗೆಯುವ ಶಿಕ್ಷೆಯನ್ನು ವಾರ್ಡನ್ ವಿಧಿಸಬೇಕು ! ಹಾಗಾದರೆ 'ಚೌತಿ ಬಾರೀ ರೈಸ್‌ತ್ಂಡ್' (ರೈಸಿಂಗ್ ಚೌತಿ !)ಅಂತ ಹಿರಿಯ ವಿದ್ಯಾರ್ಥಿಗಳಿಗೆ ಸಮಾಧಾನ. ಮೆರವಣಿಗೆಯಲ್ಲಿ ಹೆಚ್ಚು ಕುಣಿದವರ ಬಗ್ಗೆ ವಾರ್ಡನ್‌ಗೆ ಅನುಮಾನ !

ಈ ಅಮೋಘ ಮೆರವಣಿಗೆಗೆ ಆಗಾಗ ತಣ್ಣೀರೆರಚುವ ವಿಘ್ನಕಾರಕನೆಂದರೆ ಮಳೆರಾಯ ಒಬ್ಬನೇ. ಆದರೆ ಹುಟ್ಟುವಾಗಲೇ ದೇವಾನುದೇವತೆಗಳ ಯುದ್ಧದ ಮಹಾವಿಘ್ನವನ್ನು ದಾಟಿ ಬಂದ ವಿನಾಯಕನಿಗೆ ಇದ್ಯಾವ ಲೆಕ್ಕ? ಮುಳುಗುವವರೆಗಂತೂ ಆತ ಕರಗುವುದಿಲ್ಲ. "ನೆನೆದವರ' ಮನದಲ್ಲಿ ಅವನು ಚಿರಸ್ಥಾಯಿ. ಎಲ್ಲಕ್ಕಿಂತ ರೋಚಕವಾದ ಭಯ ಭಕ್ತಿ ಭಾವ ತೀವ್ರತೆಯ ಕ್ಷಣಗಳೆಂದರೆ ಮೂರ್ತಿ ನೀರಿಗೆ ಬಿಡುವ ಸಂದರ್ಭದ್ದು. ಟ್ರ್ಯಾಕ್ಟರ್ ಮೇಲಿಂದ ಗಣಪನನ್ನು ಇಳಿಸುವಾಗ ಎಷ್ಟು ಹುಶಾರಾಗಿದ್ದರೂ ಸಾಲದು. ಕೈಯ ಒಂದು ಬೆರಳು ಮುರಿದರೂ ತಿಂಗಳ ಶ್ರಮವೆಲ್ಲ ವ್ಯರ್ಥವಲ್ಲವೆ? ಕೆರೆಯೊಳಗೆ ಇಳಿಸುವಾಗಲಂತೂ ಕಿರೀಟದ ತುದಿ ಮುಳುಗುವವರೆಗೆ ಎಲ್ಲರೂ ನೆಟ್ಟ ನೋಟಕರು. ಬಳಿಕ- ರಜೆ ಮುಗಿಸಿ ಅಪ್ಪ ಅಮ್ಮನನ್ನು ಬಿಟ್ಟು ಆಗಷ್ಟೆ ಹಾಸ್ಟೆಲಿಗೆ ಮರಳಿದ ಹಾಗೆ ಏನೋ ಬೇಜಾರು.

ಈ ಬಾರಿಯ ಚೌತಿಗೆ ಊರಿಗೆ ಹೋಗುತ್ತಿದ್ದೇನೆ. ಅಲ್ಲಿ ಮಳೆ ಇನ್ನೂ ಧಾರಾಕಾರ ಸುರಿಯುತ್ತಿದೆ. ಕೊಳೆ ರೋಗ ಹಬ್ಬಿ ಅಡಕೆ ಮರಗಳೆಲ್ಲಾ ಖಾಲಿಯಾಗಿ ನಿಂತಿವೆ. ಹಳೆ ಸಂಭ್ರಮ ಈ ಬಾರಿ ಕಾಣಿಸೀತೇ ಎಂಬ ಅನುಮಾನವಿದೆ. ಬಂದ ಬಳಿಕ ಬರೆಯುತ್ತೇನೆ.

Read more...

September 07, 2007

'ಉತ್ತರೋತ್ತರ'....ಸಂಶಯಾಸ್ಪದ ವ್ಯಕ್ತಿಗಳಿಗೆ ಸ್ವಾಗತ !

ಪ್ರಶ್ನೆ೧- ಕುಂತಿಯನ್ನು ವಿದುರನ ಮನೆಯಲ್ಲಿ ಬಿಟ್ಟು, ಅಭಿಮನ್ಯು-ಸುಭದ್ರೆಯರನ್ನು ದ್ವಾರಕೆಗೆ ಕಳುಹಿಸಿ ವನವಾಸಕ್ಕೆ ಹೋದ ಪಾಂಡವರು ತಮ್ಮ ಮಕ್ಕಳನ್ನು(ಉಪ ಪಾಂಡವರನ್ನು) ಎಲ್ಲಿ ಬಿಟ್ಟಿದ್ದರು ?!

Read more...

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP