August 09, 2007

ಜಿದ್ದಿಗೆ ಬಿದ್ದ ಮೋಡಿಗಾರ - ಹಿಮೇಶ್ 'ಹ್ಯಾಟ್ಸಾಫ್' !


ಛಲದಂಕಮಲ್ಲ ಹಿಮೇಶ್ ರೇಷ್ಮಿಯಾ ಮುಟ್ಟಿದರೆ ಮುನಿದಾನು ! 'ನಾಸಿಕ ಗಾಯಕ'ನೆಂಬ ಆರೋಪವನ್ನೂ ಬಿರುದಿನಂತೆ ಧರಿಸಿದವನು. ಜಿದ್ದಿಗೆ ಬಿದ್ದವನಂತೆ "ಆಪ್‌ಕಾ ಸುರೂರ್' ಎನ್ನುತ್ತಾ ಮೊದಲ ಬಾರಿ ನಟನಾಗಿ ಕಾಣಿಸಿಕೊಂಡು ವಿಮರ್ಶಕರಿಂದ ಉಗಿಸಿಕೊಂಡವನು. ಆದರೆ ಹಿಮೇಶ್ 'ಫ್ಯಾನ್'ಗಳು ಆತನ ಸುತ್ತ ಒಂಚೂರು ಗಾಳಿಯಾಡುವಂತೆ ಮಾಡಿದ್ದಾರೆ ! ಏನಿವನ ಝಲಕ್ ?

ಈತ ಮೂಗು ಕೆಂಪಾಗಿಸಿಕೊಂಡು ಹಾಡಿದರೆ ಹಲವರ ಕಣ್ಣು ಕೆಂಪಗಾಗುತ್ತಿತ್ತು . ಮೂಗಿನಲ್ಲಿ ಹಾಡುತ್ತಾನೆಂದು ಹಲವರಿಂದ ಉಗಿಸಿಕೊಳ್ಳುತ್ತಲೇ, ತನ್ನ ವಿಶಿಷ್ಟ ಸ್ವರದಿಂದಲೇ ಜನರ ಮನಸ್ಸನ್ನು ಸೂರೆಗೊಳ್ಳುತ್ತ ಬಂದವನು ಬಾಲಿವುಡ್‌ನ ಹಿಮೇಶ್ ರೇಷ್ಮಿಯಾ. ಬೇಸ್‌ಬಾಲ್ ಹ್ಯಾಟು, ಬಿಗಿಯಾದ ನೀಲಿ ಜೀನ್ಸ್ ಪ್ಯಾಂಟು, ಆಳವಾದ ಜೇಬು-ಭುಜ ಪಟ್ಟಿಯ-ಉದ್ದನೆ ಕೋಟು ತೊಟ್ಟು, ಮೈಕ್ರೋಫೋನ್‌ನನ್ನು ಮೇಲ್ಮುಖವಾಗಿ ಹಿಡಿದು ಹಾಡುವ ಈ ಸ್ವಾಭಿಮಾನಿ ರೇಷ್ಮಿಯಾ, ಛಲದಂಕಮಲ್ಲ , ಮುಟ್ಟಿದರೆ ಮುನಿದಾನು ! ಆದರೆ ಆ ಗುಣಗಳಿಂದಲೇ ಯುವ ಪೀಳಿಗೆಯ, ಜನಸಾಮಾನ್ಯರ ಹೀರೊ ಆಗಿ ಬೆಳೆದವನು. ಹಿಂದಿ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕನಾಗಿ, ಗಾಯಕನಾಗಿ ಹೊಸ "ಝಲಕ್' ತೋರಿದವನು.

ಗುಜರಾತ್‌ನಲ್ಲಿ ಹುಟ್ಟಿದ ಈತನಿಗೀಗ ಮೂವತ್ತೈದು ವರ್ಷ. ತಂದೆ ವಿಪಿನ್ ರೇಷ್ಮಿಯಾ ಕೂಡಾ ಸಂಗೀತ ನಿರ್ದೇಶಕ. ಬಣ್ಣದ ಲೋಕಕ್ಕೆ ಹಿಮೇಶ್ ಎಂಟ್ರಿ ಕೊಟ್ಟಿದ್ದು ದೂರದರ್ಶನ ಅಹಮದಾಬಾದ್ ಮತ್ತು "ಝೀ ಟಿವಿ' ಛಾನೆಲ್‌ಗಳಿಗೆ ಧಾರಾವಾಹಿಗಳ ನಿರ್ಮಾಪಕನಾಗಿ-ಸಂಗೀತ ನಿರ್ದೇಶಕನಾಗಿ. ಅವನ್ನೆಲ್ಲ ಆತ ಮಾಡಿದ್ದು ಹದಿನಾರನೇ ವಯಸ್ಸಿನಲ್ಲೇ ! ಸೀರಿಯಲ್‌ಗಳಿಗೆ ಗೀತೆ ಬರೆಯುತ್ತಿದ್ದ ಹಿಮೇಶ್ ಬಾಲಿವುಡ್‌ಗೆ ಹೋಗಿ ಹಾಡುವುದಕ್ಕೆ ಶುರು ಮಾಡಿದ. ಆನಂದ್ ರಾಜ್ ಆನಂದ್ ಜತೆ ಸಂಗೀತ ನಿರ್ದೇಶಕನಾಗಿ ಪಾದಾರ್ಪಣೆ ಮಾಡಿದ್ದು ೧೯೯೮ರಲ್ಲಿ ,"ಬಂಧನ್' ಎಂಬ ಸಿನಿಮಾದಲ್ಲಿ . ಅದೇ ವರ್ಷ ಬಿಡುಗಡೆಯಾದ, ಸಲ್ಮಾನ್ ಖಾನ್ ನಟಿಸಿದ "ಪ್ಯಾರ್ ಕಿಯಾ ತೊ ಡರ್‌ನಾ ಕ್ಯಾ' ಚಿತ್ರಕ್ಕೆ ನೀಡಿದ ಸಂಗೀತದ ಮೂಲಕ ಗಮನ ಸೆಳೆದ. ಮೈನೆ ಪ್ಯಾರ್ ಕಿಯಾ, ಕ್ಯೋಂ ಕಿ, ತೇರೆ ನಾಮ್- ಹೀಗೆ ಸಲ್ಮಾನ್‌ಖಾನ್ ನಟಿಸಿದ ಚಿತ್ರಗಳಿಗೆಲ್ಲ ತಾಳ ಹಾಕಿ ಸೈ ಎನಿಸಿಕೊಂಡ. ತೇರೆ ನಾಮ್, ಆಶಿಕ್ ಬನಾಯಾ ಆಪ್‌ನೆ, ನಮಸ್ತೆ ಲಂಡನ್, ಅಕ್ಸರ್ ಹೀಗೆ ಆತ ಸಂಗೀತ ನೀಡಿದ ಚಿತ್ರಗಳ ಹಾಡುಗಳೆಲ್ಲವೂ ಹಿಟ್ ಆಗತೊಡಗಿದವು. "ಆಶಿಕ್ ಬನಾಯಾ ಆಪ್‌ನೆ' ಟೈಟಲ್ ಹಾಡಿಗಾಗಿ ೨೦೦೫ರ ಫಿಲ್ಮ್‌ಫೇರ್ ಪ್ರಶಸ್ತಿ ಪಡಕೊಂಡ. ಅಕ್ಸರ್ ಸಿನಿಮಾದ ಝಲಕ್ ದಿಖ್‌ಲಾಜಾ...ಮತ್ತು ಸೋನಿಯೇ...ಹಾಡುಗಳಂತೂ ರೇಷ್ಮಿಯಾನನ್ನು ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಕುಳ್ಳಿರಿಸಿದವು. ೨೦೦೬ನೇ ಇಸವಿ ಅವನ ವೃತ್ತಿಯ ಅತ್ಯಂತ ಯಶಸ್ವಿ ವರ್ಷ. "ಆಪ್ ಕಾ ಸುರೂರ್' ಹೆಸರಿನಲ್ಲಿ ಜನವರಿಯಲ್ಲಿ ವೀಡಿಯೊ ಮ್ಯೂsಸಿಕ್ ಆಲ್ಬಮ್ ಬಿಡುಗಡೆ ಮಾಡಿದ. ಅಕ್ಟೋಬರ್‌ನಲ್ಲಿ ಲಂಡನ್‌ನ ಪ್ರತಿಷ್ಠಿತ ವಿಂಬ್ಲೆ ಸ್ಟೇಡಿಯಮ್‌ನಲ್ಲಿ ಹಾಡಿದ ಭಾರತದ ಮೊದಲ ರಾಕ್ ಸ್ಟಾರ್ ಎನಿಸಿಕೊಂಡ. "ಜರಾ ಝೂಮ್ ಝೂಮ್...' ಎನ್ನುತ್ತಾ ಜಾಸ್ತಿಯೇ ಹಬ್ಬಿಕೊಂಡ .

ಜೂನ್ ೨೯ರಂದು ಬಿಡುಗಡೆಯಾದ "ಆಪ್ ಕಾ ಸುರೂರ್-ದ ರಿಯಲ್ ಲವ್ ಸ್ಟೋರಿ' ಚಿತ್ರದಲ್ಲಿ , ಶಾಲಾ ದಿನಗಳ ದೋಸ್ತ್ ಪ್ರಶಾಂತ ಛಡ್ಡಾ ನಿರ್ದೇಶನದಲ್ಲಿ ಹಿಮೇಶ್, ಮೊದಲ ಬಾರಿ ನಟನಾಗಿ ಕಾಣಿಸಿಕೊಂಡಿದ್ದಾನೆ. ಚಿತ್ರವು ವಿಮರ್ಶಕರಿಂದ ಉಗಿಸಿಕೊಂಡರೂ, ಹಿಮೇಶ್ "ಫ್ಯಾನ್'ಗಳು ಆತನ ಸುತ್ತ ಒಂಚೂರು ಗಾಳಿಯಾಡುವಂತೆ ಮಾಡಿದ್ದಾರೆ ! ಅದಕ್ಕೆ ಸಾಕ್ಷಿಯಂಬಂತೆ ವಿಮರ್ಶಕರೆಲ್ಲ -"ನೀವು ಹಿಮೇಶ್ ಅಭಿಮಾನಿಗಳಾಗಿದ್ದರೆ ನೋಡಲೇಬೇಕಾದ ಸಿನಿಮಾ'ಅಂತ ಒಂದು ಸಾಲು ಸೇರಿಸಿದ್ದಾರೆ ! "ಸಿನಿಮಾದ ಓಪನಿಂಗ್ ಚೆನ್ನಾಗಿತ್ತು. ಆದರೆ ದಿಲ್ಲಿಯ ಮಲ್ಟಿಪ್ಲೆಕ್ಸ್‌ಗಳಿಗಿಂತ ಉತ್ತರಪ್ರದೇಶ ಮತ್ತು ಪಂಜಾಬ್‌ನ ಒಳಭಾಗಗಳಲ್ಲಿ ನೆಲೆ ಕಂಡುಕೊಂಡಿತು. "ಭೇಜಾ ಫ್ರೈ' ದಿಲ್ಲಿ-ಮುಂಬಯಿ ಸಿನಿಮಾವಾದರೆ "ಆಪ್ ಕಾ ಸುರೂರ್' ಸಿ ಕ್ಲಾಸ್ ಜನರಿಗೆ ಇಷ್ಟವಾಗಿದೆ' ಎನ್ನುತ್ತಾರೆ ಹೊಸದಿಲ್ಲಿಯ ಸಿನಿಮಾ ಹಂಚಿಕೆದಾರ ಸಂಜಯ್ ಮೆಹ್ತಾ .

ಈ "ನಾಸಿಕ ಗಾಯಕ'ನಿಗೆ ಪ್ರಚಾರವನ್ನು ತಂದುಕೊಡುವಲ್ಲಿ ವಿವಾದಗಳ ಪಾತ್ರವೂ ಹಿರಿದು. ಮುಖೇಶ್, ನಸ್ರತ್ ಫತೆ ಅಲಿ ಖಾನ್ ಹಾಗೂ ಆರ್.ಡಿ.ಬರ್ಮನ್ ಕೂಡಾ ಮೂಗಿನಲ್ಲಿ ಹಾಡುತ್ತಿದ್ದರೆಂದು ಹೇಳಿ ಹಿಮೇಶ್ ಮೊದಲ ಬಾರಿ ವಿವಾದಕ್ಕೆ ಒಳಗಾಗಿದ್ದ. ಅದಕ್ಕೆ ಆಶಾ ಭೋಂಸ್ಲೆ ಖಾರವಾಗಿ ಪ್ರತಿಕ್ರಿಯಿಸಿದ್ದೂ ಆಯಿತು. ಕಳೆದ ಜೂ. ೨೭ರಂದು ಅಭಿಮಾನಿಗಳ ಕಣ್ಣು ತಪ್ಪಿಸಲು, ಅಜ್ಮೀರ್‌ನಲ್ಲಿನ ಪ್ರಸಿದ್ಧ ಸೂಫಿ ಸಂತ ಮೊಯ್ನುದ್ದೀನ್ ಚಿಸ್ತಿಯ ದರ್ಗಾ ಶರೀಫ್‌ಗೆ ಬುರ್ಖಾ ಧರಿಸಿ ಹೋಗಿ ಚರ್ಚೆಗೆ ಗ್ರಾಸವಾದ. ಬೋನಿ ಕಪೂರ್‌ನ "ಮಿಲೆಂಗೆ ಮಿಲೆಂಗೆ' ಸಿನಿಮಾಕ್ಕಾಗಿ ಹಿಮೇಶ್ ಸಂಯೋಜಿಸಿದ್ದ "'ತನ್‌ಹಾಯಿಯಾ...'ಎಂಬ ಹಾಡನ್ನು ಸುರೂರ್ ಸಿನಿಮಾದಲ್ಲೇ ಉಪಯೋಗಿಸಿಕೊಂಡಿದ್ದಾನೆ ಎಂಬುದು ವಿವಾದವಾಗಿ ಹಿಮೇಶ್ ಕ್ಷಮೆ ಕೇಳುವುದರೊಂದಿಗೆ ಮುಕ್ತಾಯವಾಯಿತು. "ಕಪೂರ್‌ಗೆ ಆ ಹಾಡನ್ನು ನಾನು ಕೇಳಿಸಿದ್ದೆನಷ್ಟೆ. ಬಳಿಕ ಏಳು ತಿಂಗಳುಗಳಿಂದ ಅವರನ್ನು ಸಂಪರ್ಕಿಸಲು ಯತ್ನಿಸುತ್ತಿದ್ದೆ. ಆದರೆ ಆ ಸಿನಿಮಾದ ಕೆಲಸದಲ್ಲಿ ಏನೂ ಪ್ರಗತಿ ಕಂಡುಬರಲಿಲ್ಲ. ಹಾಗಾಗಿ ನನ್ನ ಸಿನಿಮಾಗೆ ಉಪಯೋಗಿಸಿಕೊಂಡೆ' ಎಂಬುದು ಹಿಮೇಶ್ ಸಮರ್ಥನೆಯಾಗಿತ್ತು. ಜು.೨೯ರಂದು ಪ್ರಸಾರವಾದ "ಕಾಫಿ ವಿತ್ ಕರಣ್' ಸಂದರ್ಶನದಲ್ಲಿ ಹೇಳಿದ- "ನಾನು ಮಾಡಲಾಗದ ಯಾವುದಾದರೊಂದು ಪಾತ್ರವಿದೆಯೆಂದೇ ನನಗೆ ಅನಿಸುವುದಿಲ್ಲ. ಅದು ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಲ್ಲಿದೆ ಅಷ್ಟೆ.' ಇಂತಹ ಮಾತುಗಳನ್ನು ಎಗ್ಗಿಲ್ಲದೆ ಚೆಲ್ಲಬಲ್ಲವನೇ ಹಿಮೇಶ್.

ಕೆಲವರಿರುತ್ತಾರೆ ಹೀಗೆ. ಅವರನ್ನು ನೀವು ಉಪೇಕ್ಷಿಸುವುದಕ್ಕೆ ಸಾಧ್ಯವೇ ಇಲ್ಲ. ಒಂದೋ ಪ್ರೀತಿಸಬೇಕು ಅಥವಾ ದೂಷಿಸಬೇಕು ! ಹಿಮೇಶ್ ರೇಷ್ಮಿಯಾ ಹಾಗೆ ಬೆಳೆದವನು. "ಝೀ ಟಿವಿ'ಯ "ಸ..ರಿ..ಗ..ಮ...ಪ' ಗಾಯನ ಸ್ಪರ್ಧೆಯಲ್ಲಿ ಬಾಲಿವುಡ್‌ನ ಘಟಾನುಘಟಿ ಸಂಗೀತಗಾರರೊಂದಿಗೆ ತೀರ್ಪುಗಾರನಾಗಿ ಕುಳಿತು ಜಿದ್ದಿಗೆ ಬಿದ್ದವನು. ಕೊಂಚ ಸಿಡುಕ, ಸ್ವಲ್ಪ ಒರಟ, ನೇರ ಮಾತುಗಾರ. ದಾಕ್ಷಿಣ್ಯಕ್ಕೆ ಕಟ್ಟುಬೀಳಲಾರ, ಯಾವುದಕ್ಕೂ ಮುಜುಗರ ಪಡಲಾರ. ಇನ್ನು ಆತ ನಗುವುದೋ...ಕಂಡರೆ ತಿಳಿಸಿ ! ೧೩ ವರ್ಷದವನಿದ್ದಾಗ ೨೨ ವರ್ಷದ ಅಣ್ಣ ತೀರಿಕೊಂಡದ್ದನ್ನು ಕಂಡವನು. ತಂದೆ-ತಾಯಿ ಬಗ್ಗೆ ಅತೀವ ಪ್ರೀತಿ. ದೇವರಲ್ಲಿ ಅಪಾರ ನಂಬಿಕೆ. "ನಾನು ಇಷ್ಟೊಂದು ಯಶಸ್ವಿ ಹಾಡುಗಳನ್ನು ನೀಡುವುದು ಸಾಧ್ಯವಾಗಿದ್ದರೆ, ಐದು ಬೇರೆ ಬೇರೆ ಕೆಲಸಗಳನ್ನು ಬದಲಾಯಿಸಲು ಸಾಧ್ಯವಾಗಿದ್ದರೆ ಅದಕ್ಕೆ ಕಾರಣ, ಮೇಲಿರುವ ಯಾವನೋ ಒಬ್ಬ ನನ್ನನ್ನು ಪ್ರೀತಿಸುತ್ತಿರುವುದು' ಅಂತನ್ನಬಲ್ಲ "ಎಚ್.ಆರ್.', ಅವನೇ ಅಂದುಕೊಳ್ಳುವಂತೆ ಒಬ್ಬ ಸೆಂಟಿಮೆಂಟಲ್ ಮನುಷ್ಯ . ಅಲ್ತಾಫ್ ರಾಜಾರ ಗಾಯನದಿಂದ ಪ್ರಭಾವಿತನಾದ ಈತನಿಗೆ ಭಾರತದ ನಾಲ್ಕು ಮೆಟ್ರೋಗಳಲ್ಲಿ 'ಹಿಮೇಶ್ ರೇಷ್ಮಿಯಾ ಸ್ಕೂಲ್ ಆಫ್ ಮ್ಯೂಸಿಕ್' ಸಂಗೀತಶಾಲೆಗಳನ್ನು ಸ್ಥಾಪಿಸುವ ಹೆಬ್ಬಯಕೆ.

ತನ್ನ ಬಗೆಗಿನ ಸತತ ಟೀಕೆಗಳಿಂದ ರೋಸಿ ಹೋದವನಂತೆ, ಕಳೆದ ಜೂ. ೨೭ರಂದು "ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆಯೊಂದಿಗಿನ ಸಂದರ್ಶನದಲ್ಲಿ ಎಚ್.ಆರ್ ಹೇಳಿದ- "ಸತತ ಹಿಟ್ ಹಾಡುಗಳನ್ನು ಕೊಟ್ಟರೂ ನಾನು ಮೂಗಿನಲ್ಲಿ ಹಾಡುವವನು ಎಂದೇ ಪ್ರತ್ಯೇಕವಾಗಿ ಇರಿಸಲ್ಪಟ್ಟಿದ್ದೆ. ಇದು ಮೂಗಿನಲ್ಲಿ ಹಾಡುವುದಲ್ಲ, ಹೈ ಪಿಚ್‌ನಲ್ಲಿ ಹಾಡುವುದು ಎಂದು ವರ್ಷಗಳ ಕಾಲ ವಾದಿಸುತ್ತಿದ್ದೆ. ಆದರೆ ಅದನ್ನು ಒಪ್ಪಿಕೊಳ್ಳಲು ಯಾರೂ ಸಿದ್ಧರಾದಂತಿಲ್ಲ. ಹಾಗಾಗಿ ಆ ವಾದವನ್ನೀಗ ಬಿಟ್ಟಿದ್ದೇನೆ. ನಾನು ಮೂಗಿನಲ್ಲಿ ಹಾಡುವ ಗಾಯಕನೆಂದೇ ಈಗ ಒಪ್ಪಿಕೊಳ್ಳುತ್ತೇನೆ !' ಹೊಗಳಿಕೆಗೋ ತೆಗಳಿಕೆಗೋ, ಅಂತೂ ಕೆಲವರೆನ್ನುವಂತೆ ಬಾಲಿವುಡ್‌ನಲ್ಲೀಗ ಎರಡೇ ವಿಭಾಗ. ಸಂಗೀತ ಮತ್ತು ರೇಷ್ಮಿಯಾ ಸಂಗೀತ !

ಸಲಾಮ್ ಆಲೆಕುಮ್ ಹಿಮೇಶ್ .

3 comments:

Lanabhat September 6, 2007 at 7:05 AM  

ಬಹುಶಹ ಹಿಮೇಶ್ ಪರವಾಗಿ ಬರೆದಿರೋ ಮೊದಲ ಲೇಖನ ನಾನು ಓದುತ್ತಿರುವುದು..

ಹಿಮೇಶ್ ನ ಸ್ವರದಲ್ಲಿ ಎನೋ ಸೆಳೆತವಿದೆ ಕೆಲವು ಪದ್ಯಗಳನ್ನು ಆತ ಹಾಡಿದರೆ ಅದ್ಭುತವಾಗಿರುತ್ತವೆ..

ಆದರೆ ಕೆಲವೊಂದು ಪದ್ಯಗಳಿಗೆ ಆತನ ಶೈಲಿ ಸರಿ ಹೊಂದುವುದಿಲ್ಲ..

ಪ್ರತೀ ಹಾಡನ್ನು ಅತೀ ಹೆಚ್ಚಿನ ಬೀಟ್ಸ್ ಜತೆಗೆ ಹಾಡಿದರೆ ಚೆನ್ನಾಗಿರುವುದಿಲ್ಲ..

ಸ್ವರದಲ್ಲೆ ಭಾವನೆಗಳನ್ನು ವ್ಯಕ್ತಪಡಿಸಿ ಉದಿತ್ ರಂತೆ ಹಾಡಲು ರೇಶಾಮಿಯಾ ಕಲಿತರೆ He will be the best...

arjunKR May 11, 2010 at 3:34 AM  

himesh reshammiya rocks

arjunKR May 11, 2012 at 3:03 AM  

ಹಿಮೇಶ್ ಅವರ ಮೊದಲ ಚಿತ್ರ ಪ್ಯಾರ್ ಕಿಯ ಥೋ ಡರನ ಕ್ಯಾ.....ಎರಡನೆಯದು ಬಂಧನ್

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP