August 08, 2007

ಇದು ಗಗನಮುಖಿ - ರಾಜ ರಾಣಿ 'ರೋಜರ್' ರಾಕೆಟ್' !




೨೦೦೩ರಲ್ಲಿ ತನ್ನ ಮೊದಲ ವಿಂಬಲ್ಡನ್ ಪ್ರಶಸ್ತಿ ಗೆದ್ದಾಗ ರೋಜರ್ ಫೆಡರರ್ ಹೇಳಿದ್ದ- "ಕೆಲವು ಆಟಗಾರರು ಗೆದ್ದ ನಂತರವೂ ನಗುವುದಿಲ್ಲ. ಇನ್ನು ಕೆಲವರು ಗೆದ್ದು ವಾರವಾದರೂ ನಗುತ್ತಲೇ ಇರುತ್ತಾರೆ ! ಆದರೆ ನಾನು ಎಂಥವನೆಂದರೆ, ಗೆದ್ದ ಬಳಿಕ ಕಣ್ಣೀರುಗರೆಯುತ್ತೇನೆ'. ಈ ವರ್ಷ ವಿಂಬಲ್ಡನ್ ಗೆದ್ದಾಗಲೂ ಆತ ಅಕ್ಷರಶಃ ಕಣ್ಣೀರುಗರೆಯುತ್ತಾ ಆಟದಂಗಳದಲ್ಲೇ ಬಿದ್ದಿದ್ದ.


ಸ್ವಿಸ್ ನ್ಯಾಷನಲ್ ಟೆನಿಸ್ ಸೆಂಟರ್‌ನಲ್ಲಿ ಹದಿಹರೆಯದ ಹುಡುಗರು ತರಬೇತಿ ಪಡೆಯುತ್ತಿದ್ದರು. ತರಬೇತುದಾರರೊಬ್ಬರು ಒಂದು ದಿನ, "ನಿಮ್ಮ ಗುರಿಗಳೇನು, ಹೇಳಿ' ಅಂದರು. ವೃತ್ತಿಪರ ಆಟಗಾರನಾಗುವುದು, ವಿಶ್ವದ ಮೊದಲ ನೂರು ಆಟಗಾರರಲ್ಲಿ ಒಬ್ಬನಾಗುವುದು ಎಂದೆಲ್ಲಾ ಅಂದವರೇ ಹಲವರು. ಆದರೆ ಹದಿನೈದರ ಪೋರನೊಬ್ಬ ಹೀಗೆ ಬರೆದಿದ್ದ - ನನ್ನ ಗುರಿ, ವಿಶ್ವದ ಟಾಪ್ ಟೆನ್ ಟೆನಿಸ್ ಆಟಗಾರರನ್ನು ಚಿಂದಿ ಉಡಾಯಿಸಿ ನಂ ೧ ಪಟ್ಟ ಪಡೆಯುವುದು !


ಆ ಹುಟ್ಟು ಹೋರಾಟಗಾರನೇ ಈಗ ಇಪ್ಪತ್ತಾರರ ಹರೆಯದ ರೋಜರ್ ಫೆಡರರ್. ಕಳೆದ ಜುಲೈ ೮ರಂದು "ಸೆಂಟರ್ ಕೋರ್ಟ್'ನಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಸತತ ಐದು ಬಾರಿ ವಿಂಬಲ್ಡನ್ ಕಿರೀಟ ಧರಿಸಿದವನು. ಆ ಮೂಲಕ ಹನ್ನೊಂದು ಗ್ರ್ಯಾಂಡ್‌ಸ್ಲಾಮ್‌ಗಳನ್ನು ಗೆದ್ದು ಮಾಜಿ ತಾರೆ ಪೀಟ್ ಸಾಂಪ್ರಾಸ್‌ಗೆ (ಆತ ೧೪ ಗ್ರ್ಯಾಂಡ್‌ಸ್ಲಾಮ್ ಗೆದ್ದವನು) ಸಡ್ಡು ಹೊಡೆದವನು. ಆರಡಿ ಒಂದು ಇಂಚು ಎತ್ತರದ, ಬರೋಬ್ಬರಿ ಎಂಬತ್ತನಾಲ್ಕು ಕೆಜಿ ತೂಗುವ ಸ್ವಿಟ್ಜರ್‌ಲ್ಯಾಂಡ್‌ನ ರೋಜರ್, ರಾಕ್ ಮ್ಯೂಸಿಕ್‌ನ್ನು ಖುಶಿಯಿಂದ ಕೇಳುತ್ತಾನೆ. ಬೆಳ್ಳಿ ಬಟ್ಟಲಿನಂಥ ಮುಖದ, ಮಟ್ಟಸ ಎದೆಯ ಈ ತರುಣ ಮಾನಸಿಕ ದೃಢತೆ, ದೈಹಿಕ ಸಾಮರ್ಥ್ಯ ಎರಡೂ ಹೊಂದಿದವನು. ಗಾಲ್ಫ್, ಫುಟ್‌ಬಾಲ್, ಸ್ಕೀಯಿಂಗ್, ಕಾರ್ಡ್ಸ್ ಆಡೋದು, ಮಾಜಿ ಟೆನಿಸ್ ಆಟಗಾರ್ತಿ-ಗರ್ಲ್‌ಫ್ರೆಂಡ್ ಮಿರ್ಕಾಳೊಂದಿಗೆ ಸುತ್ತಾಡೋದು ಇವನ ಇತರೇ ಹವ್ಯಾಸ.

೨೦೦೬ರ ಯು.ಎಸ್.ಓಪನ್ ಹಾಗೂ ೨೦೦೭ರ ಫ್ರೆಂಚ್ ಓಪನ್ ಫೈನಲ್‌ನಲ್ಲಿ , ತನ್ನ ಸಾಂಪ್ರದಾಯಿಕ ಎದುರಾಳಿಯಂತಾಗಿರುವ ಸ್ಪೈನ್ ದೇಶದ ಗೂಳಿ ನಡಾಲ್‌ಗೆ ಈತ ಶಿರಬಾಗಿದ್ದ. ಅದಕ್ಕೆ ಸಾಕ್ಷಿಯೆಂಬಂತೆ ಹಿಂದಿನ ಯಾವ ಗ್ರ್ಯಾಂಡ್‌ಸ್ಲಾಮ್ ಫೈನಲ್‌ನಲ್ಲೂ ಐದು ಸೆಟ್ ಆಡಬೇಕಾದ ಅಗತ್ಯ ಕಾಣದ ಫೆಡರರ್ ಈ ಬಾರಿಯ ವಿಂಬಲ್ಡನ್‌ನಲ್ಲಿ ಮಾತ್ರ ರಾಫೆಲ್ ನಡಾಲ್ ಜೊತೆ ಐದು ಸೆಟ್‌ಗಳಲ್ಲಿ (೭-೬, ೪-೬, ೭-೬, ೨-೬, ೬-೨) ಸೆಣಸಬೇಕಾಯಿತು. ಬೋರ್ಗ್, ಜಿಮ್ಮಿ ಕಾನರ್‍ಸ್, ಜಾನ್ ಮೆಕ್‌ನೋರ್, ಬೋರಿಸ್ ಬೆಕರ್ ಎಂಬ ಟೆನಿಸ್ ಲೋಕದ ಮಹಾನ್ ತಾರೆಗಳು ಅಂದು ರಾಯಲ್ ಬಾಕ್ಸ್‌ನಲ್ಲಿ ಕುಳಿತು ಪಂದ್ಯ ನೋಡುತ್ತಿದ್ದರು. ಆದರೆ ರೋಜರ್ ರಾಕೆಟ್ ಮತ್ತೆ ಗಗನಮುಖಿಯಾಯಿತು. ಪಂದ್ಯ ಮುಗಿದ ಬಳಿಕ ಬೋರ್ಗ್ ವರ್ಣಿಸಿದ: "ಇವನದ್ದೊಂದು ಆರ್ಕೆಸ್ಟ್ರಾ !' "ದ ಏಜ್' ಎಂಬ ಪತ್ರಿಕೆ ಬರೆಯಿತು "ಫೆಡರರ್ ಈಸ್ ಎ ಕೋರ್ಟ್ ಆರ್ಟಿಸ್ಟ್' !

ಇಂತಹ ರೋಜರ್ ಫೆಡರರ್ ಸೀನಿಯರ್ ಆಗಿ ವೃತ್ತಿಪರ ಟೆನಿಸ್ ರಂಗಕ್ಕೆ ಕಾಲಿಟ್ಟದ್ದು ೧೯೯೮ರಲ್ಲಿ. ಮೊದಲ ಎಟಿಪಿ ಟೂರ್ನಮೆಂಟ್‌ನಲ್ಲಿ ಜಯ ಗಳಿಸಿದ್ದು ೨೦೦೧ರ ಫೆಬ್ರವರಿಯಲ್ಲಿ. ಆದರೆ ಅದೇ ವರ್ಷ, ಏಳು ಬಾರಿ ವಿಂಬಲ್ಡನ್ ಗೆದ್ದಿದ್ದ ಪೀಟ್ ಸಾಂಪ್ರಾಸ್‌ನನ್ನು ವಿಂಬಲ್ಡನ್‌ನ ನಾಲ್ಕನೇ ಸುತ್ತಿನಲ್ಲಿ ಸೋಲಿಸಿ ಕ್ವಾರ್ಟರ್ ಫೈನಲ್ ತಲುಪಿದ. ವಿಶ್ವ ರ್‍ಯಾಂಕಿಂಗ್‌ನಲ್ಲಿ ಹದಿಮೂರನೇ ಸ್ಥಾನ ಪಡೆದ. ೨೦೦೫ರ ಯುಎಸ್ ಓಪನ್ ಫೈನಲ್‌ನಲ್ಲಿ ಅಮೆರಿಕದ ಅಗಾಸಿಯನ್ನು ಆತನ ನೆಲದಲ್ಲೇ ಸೋಲಿಸಿದ ರೋಜರ್ ಪ್ರತಿಭೆಗೆ ಟೆನಿಸ್ ಲೋಕ ದಂಗಾಯಿತು. ೨೦೦೪ ಮತ್ತು ೨೦೦೬ರಲ್ಲಿ ಆಯಾ ವರ್ಷಗಳಲ್ಲಿ ಆಡಿದ ನಾಲ್ಕು ಗ್ರ್ಯಾಂಡ್‌ಸ್ಲಾಮ್‌ಗಳಲ್ಲಿ ಮೂರನ್ನು ಗೆದ್ದುಕೊಂಡ. ೧೯೮೮ರಿಂದ ಆ ರೀತಿ ಯಾರೂ ಗೆದ್ದಿರಲಿಲ್ಲ ! ೨೦೦೬ರ ವಿಂಬಲ್ಡನ್‌ನಲ್ಲಿ ಒಂದು ಸೆಟ್ ಕೂಡಾ ಸೋಲದೆ ಫೈನಲ್‌ಗೆ ಹೋಗಿ ನಡಾಲ್‌ನನ್ನು ಸೋಲಿಸಿದ. ೨೦೦೭ರಲ್ಲಿ ಈವರೆಗೆ ಈತ ಗೆದ್ದಿರುವ ಸಿಂಗಲ್ಸ್ ಪಂದ್ಯಗಳು ಮೂವತ್ತೇಳು, ಸೋತದ್ದು ಕೇವಲ ಐದು. ಇಂತಹ ಟೆನಿಸ್ ಜಾದೂಗಾರ ೨ ಫೆಬ್ರವರಿ ೨೦೦೪ರಿಂದ ವಿಶ್ವ ರ್‍ಯಾಂಕಿಂಗ್‌ನಲ್ಲಿ ಮೊದಲನೇ ಸ್ಥಾನದಲ್ಲೇ ಝಂಡಾ ಊರಿದ್ದಾನೆ. ಈತನಿಗೀಗ ಮನೆಯಲ್ಲಿರಲು ಸಮಯ ಸಿಗುವುದು ವರ್ಷದಲ್ಲಿ ಸುಮಾರು ಅರುವತ್ತು ದಿನಗಳಷ್ಟೆ !

'ಪ್ರೇಕ್ಷಕರ ಹಷೋದ್ಗಾರ ಕೇಕೆಗಳನ್ನು ನಾನು ಪ್ರೀತಿಸುತ್ತೇನೆ. ಇನ್ನಷ್ಟು ಚೆನ್ನಾಗಿ ಆಡಲು ಅವು ಪ್ರೇರೇಪಿಸುತ್ತವೆ. ಕೆಲವೊಮ್ಮೆ ಅವು ನಮಗೆ ಗಲಿಬಿಲಿ-ಮುಜುಗರ ಮಾಡಲೂಬಹುದು. ಆದರೆ ಅದೇ ಅದರ ವೈಶಿಷ್ಟ್ಯ. ಹಾಗಾಗಿ ಅವು ಯಾವತ್ತೂ ನನ್ನನ್ನು ನೋಯಿಸುವುದಿಲ್ಲ' ಎನ್ನುತ್ತಾನೆ ರೋಜರ್ ಫೆಡರರ್. "ಅಭಿಮಾನಿಗಳು ಯಾವಾಗಲೂ ನಿನಗೆ ಪ್ರಶ್ನೆ ಕೇಳುತ್ತಲೇ ಇರುತ್ತಾರೆ. ಒಂದುವೇಳೆ ಅವರಿಗೆ ನೀನು ಕೇಳಬಹುದಾದ ಪ್ರಶ್ನೆ ಯಾವುದು?' ಅಂದದ್ದಕ್ಕೆ - "ನೀವು ಯಾಕೆ ನನ್ನನ್ನು ಬೆಂಬಲಿಸುತ್ತೀರಿ ? ಮತ್ತು ಯಾಕೆ ನನ್ನ ಅಭಿಮಾನಿಯಾಗಿದ್ದೀರಿ? ಹೇಳಿ' ಅಂತ ಮುದ್ದುಮುದ್ದಾಗಿ ಕೇಳುವವನು ಈತ.

ದಕ್ಷಿಣ ಆಫ್ರಿಕಾದ ವಿಕಲಚೇತನ ಮಕ್ಕಳಿಗೆ ನೆರವಾಗಲು ೨೦೦೩ರಲ್ಲಿ ರೋಜರ್ ಫೆಡರರ್ ಫೌಂಡೇಶನ್ ಸ್ಥಾಪನೆಯಾಯಿತು. (ಫೆಡರರ್ ತಾಯಿ ದಕ್ಷಿಣ ಆಫ್ರಿಕದವಳು.) ಅದರೊಂದಿಗೇ "ಆರ್‌ಎಫ್ ಕಾಸ್ಮೆಟಿಕ್ಸ್' ಎಂದು ಈತನ ಹೆಸರಿನಲ್ಲೇ ಸೌಂದರ್ಯ ವರ್ಧಕಗಳ ಉತ್ಪಾದನೆಯೂ ಆರಂಭವಾಯಿತು. "ರೋಜರ್‌ಫೆಡರರ್ ಡಾಟ್ ಕಾಮ್" ಎಂಬ ಆತನ ಬಗೆಗಿನ ಅಧಿಕೃತ ವೆಬ್‌ಸೈಟ್‌ನಲ್ಲಿ ಈಗ ನೋಂದಣಿ ಮಾಡಿಕೊಂಡ ಜನರ ಸಂಖ್ಯೆಯೇ ೧,೨೯,೩೨೨ ! ರೋಲೆಕ್ಸ್, ಜಿಲೆಟ್, ನೈಕ್, ವಿಲ್ಸನ್‌ನಂತಹ ಪ್ರಸಿದ್ಧ ಕಂಪನಿಗಳು ಈತನಿಗೆ ಪ್ರಾಯೋಜಕರು. ಏಪ್ರಿಲ್ ೨೦೦೭ರಲ್ಲಿ ಸ್ವಿಟ್ಜರ್‌ಲ್ಯಾಂಡ್ ಸರಕಾರ ಆತನ ಹೆಸರಿನ ಅಂಚೆಚೀಟಿಯನ್ನು ವಿಂಬಲ್ಡನ್ ಟ್ರೋಫಿ ಹಿಡಿದಿರುವ ಚಿತ್ರದೊಂದಿಗೆ ಬಿಡುಗಡೆ ಮಾಡಿತು. ಬದುಕಿರುವಾಗಲೇ ಇಂತಹ ಗೌರವ ಪಡೆದ ಮೊದಲ ಸ್ವಿಸ್ ಪ್ರಜೆಯಾಗಿ ಫೆಡರರ್ ಹೆಸರು ದಾಖಲಾಯಿತು.

೨೦೦೩ರಲ್ಲಿ ಮೊದಲ ವಿಂಬಲ್ಡನ್ ಫ್ರಶಸ್ತಿ ಗೆದ್ದಾಗ ರೋಜರ್ ಹೇಳಿದ್ದ - "ಕೆಲವು ಆಟಗಾರರು ಗೆದ್ದ ನಂತರವೂ ನಗುವುದಿಲ್ಲ. ಇನ್ನು ಕೆಲವರು ಗೆದ್ದು ವಾರವಾದರೂ ನಗುತ್ತಲೇ ಇರುತ್ತಾರೆ ! ಆದರೆ ನಾನು ಎಂಥವನೆಂದರೆ, ಗೆದ್ದ ಬಳಿಕ ಕಣ್ಣೀರುಗರೆಯುತ್ತೇನೆ'. ಈ ವರ್ಷ ವಿಂಬಲ್ಡನ್ ಗೆದ್ದಾಗಲೂ ಆತ ಅಕ್ಷರಶಃ ಕಣ್ಣೀರುಗರೆಯುತ್ತಾ ನೆಲದ ಮೇಲೆ ಬಿದ್ದಿದ್ದ. ಬಳಿಕ ಹೇಳಿದ- "ನಡಾಲ್ ನಿಜವಾಗಿಯೂ ಈ ಬಾರಿಯ ಟ್ರೋಫಿಗೆ ಅರ್ಹನಾಗಿದ್ದ. ಆದರೆ ನಾನು ಅದೃಷ್ಟಶಾಲಿಯಾದೆ '. ಇದು ನಿಜವಾದ ಚಾಂಪಿಯನ್ ಹೇಳುವ ಮಾತು.


0 comments:

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP