August 09, 2007

ಹಿಮಾಲಯದಲ್ಲೊಂದು ಮನೆ


ಮರದಿಂದ ಮಾಡಿದ ಬಾಲ್ಕನಿ ಹಾಗೂ ಅಟ್ಟವುಳ್ಳ ಎರಡು ಹಂತಗಳ ಮಣ್ಣಿನ ಮನೆ ನನ್ನದು ; ಒಪ್ಪವಾಗಿ ಸೆಗಣಿ ಸಾರಿಸಲ್ಪಟ್ಟದ್ದು. ಆಪಲ್ ತೋಟದ ಕಡೆಗೆ ಮುಖ ಮಾಡಿರುವ ಈ ಬಾಲ್ಕನಿಯ ಮೇಲೆ ಬೀಳುವ ಮಂಜುಗಡ್ಡೆಗಳು ನಿರಂತರವಾಗಿ ಹಿತವಾದ ಹರಟೆ ಮಾಡುತ್ತಿರುತ್ತವೆ ! ಬಾಗಿಕೊಂಡಿರುವ ಬಾಲ್ಕನಿ, ಗಾಳಿಯಲ್ಲಿರುವ ದ್ವೀಪದಂತೆ ಭಾಸವಾಗುತ್ತದೆ. ಇಲ್ಲಿ ನಾನು ಗಂಟೆಗಟ್ಟಲೆ ಕುಳಿತುಕೊಂಡು ದಕ್ಷಿಣದ ಕಣಿವೆಯಲ್ಲಿರುವ ಹಿಮಖಂಡಗಳನ್ನು ಸವಿಯುತ್ತಿರುತ್ತೇನೆ. ಸೆಗಣಿಯಷ್ಟೇ ಬಡವನಾದರೂ ಪ್ರತಿದಿನ ಬೆಳಗ್ಗೆ ಬೆಟ್ಟಗಳನ್ನು ತಿಂಡಿಗಾಗಿ ಎಬ್ಬಿಸುತ್ತೇನೆ. ನೀವು ಅದಕ್ಕೆ ಯಾವ ಬೆಲೆಯನ್ನೂ ಕಟ್ಟಲಾರಿರಿ. ಲಂಡನ್-ನ್ಯೂಯಾರ್ಕ್‌ಗಳಲ್ಲಿನ ಜನ ಪ್ರತಿದಿನ ಗಡಿಯಾರದ ಅಲರಾರ್‍ಮ್ ಅಥವಾ ನಗರದ ಸೈರನ್ ಕೇಳಿ ಏಳುವುದು ಬರೀ ಮೂರ್ಖತನ ಅಂತ ನನಗನಿಸುತ್ತದೆ.

ಆದರೆ ೬೫ ವರ್ಷದ, ಸುಕ್ಕುಗಟ್ಟಿದ ಚರ್ಮದ, ನನ್ನ ಭೂಮಿಯ ಒಡತಿ, ನಾನು ಮೂರು ಸಲ ಒತ್ತಾಯ ಮಾಡಿದರೆ ಮಾತ್ರ ಒಂದು ಗ್ಲಾಸ್ ಟೀ ಸ್ವೀಕರಿಸುತ್ತಾಳೆ. ಬಳಿಕ ಬರೀ ಪೆಟಿಕೋಟ್‌ನಲ್ಲಿ ಕುಕ್ಕುರುಗಾಲಿನಲ್ಲಿ ಕುಳಿತು ಕಳ್ಳರು ಮತ್ತು ದನಗಳ ಅಪಾಯದ ಬಗ್ಗೆ ನನ್ನನ್ನು ಎಚ್ಚರಿಸುತ್ತಾಳೆ. ಆಗಲೇ ದನವೊಂದು ಅವಳು ಬೆಳೆಸಿದ ಹೂವುಗಳನ್ನು ತಿನ್ನುತ್ತದೆ ! "ದನ ದನ...' ಅಂತ ಕೂಗುತ್ತಾ , ದೊಣ್ಣೆ ಹುಡುಕುತ್ತಾ ಹೇಳುತ್ತಾಳೆ - 'ದರಿದ್ರ ದನವೇ, ಪಾಕಿಸ್ತಾನಕ್ಕೆ ಹೋಗು !' (ಭಾರತದಲ್ಲೊಂದು ಕ್ಷಮಿಸಲಾಗದ ಅವಮಾನ ! )

ಅವಳ ಮುಖ ನೆರಿಗೆಗಳಿಂದಲೇ ಮುಚ್ಚಿ ಹೋಗಿದೆ, ಮೈ ಹಳೆಯ ಚರ್ಮದಂತಾಗಿದೆ. ಕಣ್ಣುಗಳು ಸಣ್ಣವಾಗಿದ್ದರೂ ಹೊಳೆಯುತ್ತವೆ. ಒಡೆದ ಕಾಲಿಗೆ ಉಣ್ಣೆಯ ಬೂಟುಗಳನ್ನು ತೊಡುತ್ತಾಳೆ. ಆದರೆ ಪ್ರತಿಯೊಂದು ಬೇಸಿಗೆಯಲ್ಲೂ ನನ್ನನ್ನು ಗೊಂದಲಕ್ಕೀಡುಮಾಡುವುದೆಂದರೆ, ಕೆಲವು ಬಾರಿ ಈಕೆ ಬಹಳ ಪರಿಚಿತಳಂತೆ ಕಂಡರೆ ಇನ್ನು ಕೆಲವೊಮ್ಮೆ ಕಲ್ಲುಗಳ ಮೇಲೆ ಹರಿದಾಡುತ್ತಾ ದಿನ ಕಳೆವ ಹಲ್ಲಿಗಳಂತೆ ಕಾಣುತ್ತಾಳೆ. ನನ್ನ ನೀರಿನ ಪೈಪ್ ಬ್ಲಾಕ್ ಆದಾಗಲೆಲ್ಲಾ, ಹಳ್ಳಿಯಲ್ಲಿರುವ ಅವಳ ಮನೆಯವರೆಗೆ ಹೋಗಿ ಸಹಾಯ ಕೇಳಬೇಕಾಗುತ್ತದೆ. ಪೈಪನ್ನು ಹೇಗೆ ತೆರೆಯಬೇಕೆಂದು ಆಕೆ ತೋರಿಸುವ ಪ್ರಯತ್ನ ಮಾಡಿದರೂ, ನನಗೆ ಆ ಇಳಿಜಾರಿನಲ್ಲಿ ಅವಳೊಂದಿಗೆ ನಿಲ್ಲುವುದಕ್ಕಾಗುವುದಿಲ್ಲ. ನಾನು ಜಾರಿ ಉರುಳುತ್ತಾ ಗಿಡಗಳ ಮೇಲೆ ಬಿದ್ದರೂ, ೬೫ ವರ್ಷದ ಆ ಗಟ್ಟಿ ಮುದುಕಿಯ ಒಂದು ಹೆಜ್ಜೆಯೂ ತಪ್ಪುವುದಿಲ್ಲ. ಅವಳು ಹೊರಟಾಗ ಜೇಬುಗಳಲ್ಲಿ ಕಾಡು ತರಕಾರಿಯೂ ತುಂಬಿಕೊಂಡಿರುತ್ತದೆ.

******

ಒಂದು ದಿನವೂ ತಿಳಿಯದ ಹಾಗೆ ನಾನು ೯ ತಿಂಗಳುಗಳನ್ನು ಕಳೆದ ಬಳಿಕ ತಲೆಯನ್ನು ಎಲ್ಲಿಡಲಿ?! ಪರ್ವತದ ಮೇಲಿರುವ ಮಣ್ಣಿನ ಗುಡಿಸಲಿನಲ್ಲಿ ನಾನಂತೂ ಪರಮಸುಖದಲ್ಲೇ ಇದ್ದೆ. ಹಳ್ಳಿಗೆ ಹೋಗುವ ಯಾವ ಉದ್ದೇಶವೂ ಇಲ್ಲದೆ ಹಲವಾರು ದಿನಗಳನ್ನು ಅಲ್ಲೇ ಕಳೆದೆ. ಒಂದು ಸಣ್ಣ ರೇಡಿಯೊ, ಒಂದಷ್ಟು ಪುಸ್ತಕಗಳು ಹಾಗೂ ಒಂದು ಕುಡಿಕೆ ಹಸಿರು ಟೀ- ಏಕಾಂತದ ಸಂತಸವನ್ನು ಅನುಭವಿಸುವುದಕ್ಕೆ ನನಗೆ ಅಷ್ಟೇ ಬೇಕಾಗಿದ್ದುದು. ಆದರೆ ಒಬ್ಬನೇ ಸುಮ್ಮನಿರಲಿಲ್ಲ. ಯಾಕೆಂದರೆ ನಿಸರ್ಗದಲ್ಲಿ ನೀವು ಸಂಪೂರ್ಣವಾಗಿ ನಿಮ್ಮೊಳಗೇ ಇರಲು ಸಾಧ್ಯವಿಲ್ಲ. ನನ್ನ ಹಿಮಾಲಯ ವಲಯ ಬಹಳ ಬೇಗನೆ ಹಲ್ಲಿಗಳು, ಜೇಡಗಳು ಹಾಗೂ ಕಾಗೆಗಳಿಂದ ತುಂಬಿಕೊಂಡಿತು. ಅವುಗಳಲ್ಲಿ ಹಲ್ಲಿಗಳು ಅತ್ಯಂತ ಮುಗ್ಧವಾದವು. ಅವು ನನ್ನ ಹೃದಯ ಬಡಿತ ನಿಲ್ಲಿಸಿ, ಬಾಲ್ಕನಿಯಿಂದ ಜಾರಿ ಸೂಪಿನ ಬೌಲ್‌ನಲ್ಲಿ ಲ್ಯಾಂಡ್ ಆಗುತ್ತಿದ್ದವು !

ಆದರೆ ಜೇಡಕ್ಕೆ ಮಾತ್ರ ಒಂಚೂರೂ ಬುದ್ಧಿಯಿಲ್ಲ. ನಾನು ಅದನ್ನು ಮೊದಲ ಬಾರಿ ಕಿಟಕಿ ಮೂಲೆಯಲ್ಲಿ ಕಂಡಾಗ, ಅದು ಒಳ ಹೋಗಲು ಪ್ಲ್ಯಾನ್ ಮಾಡುತ್ತಿರುವಂತೆ ಕಾಣಿಸುತ್ತಿತ್ತು. ಒಬ್ಬ ಸ್ನೇಹಿತ ಮಾತುಕತೆ ಆರಂಭಿಸುವಂತೆ ಸಲಹೆ ಮಾಡಿದ. ಒಂದು ಅಪರಾಹ್ನ ಹೇಳಿದೆ "ಈಗ ನೋಡು....ನಮಗಿಬ್ಬರಿಗೂ ಸಾಕಾಗುವಷ್ಟು ಈ ಮನೆ ದೊಡ್ಡದಾಗಿದೆ. ಎಲ್ಲ ಕೀಟಗಳನ್ನು ಹಿಡಿಯಬಲ್ಲ ನಿನಗೆ ಸ್ವಾಗತ. ಆದರೆ ಏನೂ ಅತಿ ಕೀಟಲೆ ಮಾಡಬೇಡ. ಇದು ನಿನಗೆ ನನ್ನ ಎಚ್ಚರಿಕೆ'. ಮುಂದಿನ ಆ ರಾತ್ರಿ ೮ ಕಾಲುಗಳು ಮುಖದ ಮೇಲೆ ಹರಿದಾಡುತ್ತಿದ್ದಾಗ ಎಚ್ಚರವಾಯಿತು. ಥತ್ ವ್ಯಭಿಚಾರಿ! ಸಕ್ಕರೆ ಚೀಲಗಳನ್ನು ತೂತು ಮಾಡಿದ್ದ ಇಲಿಗಳು ಬಿಲ ಸೇರುವುದಕ್ಕಾಗಿ ಗೋಡೆ ಇಳಿಯುತ್ತಿದ್ದವು.

ವಿಜ್ಞಾನದ ಪ್ರಕಾರ, ಯಾವುದೇ ಸಮಸ್ಯೆಯನ್ನು ತಿಳಿದು ಟ್ರಯಲ್-ಎರರ್ ವಿಧಾನ ಬಳಸದೆ ಅದನ್ನು ಪರಿಹರಿಸಬಲ್ಲ ಕೆಲವೇ ಜೀವಿಗಳಲ್ಲಿ ಕಾಗೆಯೂ ಒಂದು. ಕಾಗೆಗಳ ಭಾಷೆಯ ಬಗ್ಗೆ ಅಧ್ಯಯನ ಮಾಡಿದ ಸಂಸ್ಕೃತ ಪುಸ್ತಕವೊಂದೂ ಇದೆಯಂತೆ . ಅವುಗಳ ಕೆಲಸ ಬಹಳ ನಾಜೂಕು, ತಪ್ಪುಗಳಿಗೆ ಅವಕಾಶ ಇಲ್ಲ. ಆದರೆ ಸಮಸ್ಯೆ ಆರಂಭವಾದದ್ದು ನಾನು ಸ್ನಾನಕ್ಕೆ ಹೋದಾಗ. ಊರಿನ ದೇವಸ್ಥಾನದ ಬಳಿಗೆ ಹೋಗುವುದನ್ನು ಬಿಟ್ಟು , ಇಳಿಜಾರಿನಲ್ಲೇ ಒಂದು ಬಕೆಟ್ ತಣ್ಣಗಿನ ನೀರು ತುಂಬಿಕೊಂಡು ಮೈಮೇಲೆ ಸುರಿದುಕೊಂಡೆ. ಬೀಸುತ್ತಿರುವ ಗಾಳಿ ದೇಹದ ಸಹಜ ಉಷ್ಣತೆಯನ್ನು ಕಡಿಮೆ ಮಾಡುವುದಕ್ಕೆ ಯತ್ನಿಸುತ್ತಿತ್ತು. ಆದರೆ ಪ್ರತಿಸಾರಿ ನಾನು ಬಾಲ್ಕನಿಯಿಂದ ಹೊರಟಾಗಲೂ ಒಂದು ಕಾಗೆ ಕಾ...ಕಾ ಅಂತ ಎಚ್ಚರಿಕೆ ಕೊಡುವುದು, ಇನ್ನೊಂದು ಕಾಗೆ ಅಡುಗೆಮನೆಯಲ್ಲಿ ಎಲ್ಲವನ್ನೂ ಬುಡಮೇಲು ಮಾಡುವುದಕ್ಕೆ ವೇಗವಾಗಿ ನುಗ್ಗುವುದನ್ನು ಸ್ವಲ್ಪ ಸಮಯದ ನಂತರ ಗಮನಿಸಿದೆ. ಹಾಗಾಗಿ ಆ ಬಳಿಕ ಸ್ನಾನಕ್ಕೆ ಹೊರಟಾಗ ಒಂದಷ್ಟು ಕಲ್ಲುಗಳನ್ನು ಜೊತೆಗಿಟ್ಟುಕೊಂಡೆ. ಆಕ್ರಮಣಕಾರರಿಗೆ ಶಾಕ್!
ಆ ನಂತರವಂತೂ ಯುದ್ಧವೇ ಘೋಷಣೆಯಾಯಿತು. ಕಾಗೆಗಳು ಆಗಾಗ ಅತ್ತಿತ್ತ ಹಾರಾಡತೊಡಗಿದವು. ಮನೆಯ ಕಡೆ ಮುಖ ಮಾಡಿ ಬಂಡೆಗಳ ಮೇಲೆ ಕುಳಿತು ಅಂಗಚೇಷ್ಟೆ ಮಾಡತೊಡಗಿದವು. ರೆಕ್ಕೆಗಳನ್ನು ಬಡಿಯುತ್ತಾ "ಬಯಲಿನಲ್ಲಿ ಚಿಕನ್ ಇದೆ ಬಾರೋ' ಅಂತ ಕರೆಯುವ ಮಕ್ಕಳ ಹಾಗೆ ಮಾಡತೊಡಗಿದವು. ನಾನು ಕಲ್ಲುಗಳನ್ನು ರಾಶಿ ಹಾಕಲು ಶುರು ಮಾಡಿದೆ ಮತ್ತು ಚಪಾತಿಯನ್ನು ಇನ್ನಷ್ಟು ಗಟ್ಟಿ ಮಾಡಿದೆ !

ಒಂದು ವಾರದ ಬಳಿಕ ಬಟ್ಟೆ ಒಗೆಯುವುದಕ್ಕಾಗಿ ಬಳಿಯಲ್ಲಿದ್ದ ಬಂಡೆ ಹತ್ತಿದೆ. ಟೀ ಷರ್ಟುಗಳನ್ನು ಸಾಬೂನಿನಿಂದ ಉಜ್ಜುತ್ತಾ , ಒದ್ದೆಯಾಗಿದ್ದಾಗ ಇದ್ದದ್ದಕ್ಕಿಂತ ಈಗ ಹೆಚ್ಚು ಸ್ವಚ್ಛವಾಗುತ್ತಿವೆ ಅಂದುಕೊಂಡೆ. ನಾನು ಹೇಳುತ್ತಿರುವುದು ಸತ್ಯವೆಂದು ನನ್ನಷ್ಟಕ್ಕೇ ಪ್ರಮಾಣ ಮಾಡಿಕೊಂಡೆ. ಆಗ ಮೂರು ಕಾಗೆಗಳು ಸದ್ದಿಲ್ಲದೆ ನನ್ನ ಹಿಂದೆ ಬಂದು ಒಂದು-ಎರಡು-ಮೂರು ಎಂದು ಕುಕ್ಕಲು ಶುರು ಮಾಡಿದವು. ನನ್ನ ಹೃದಯಬಡಿತ ಬಹುಪಾಲು ನಿಂತಿತ್ತು. ಪರ್ವತದ ಇಳಿಜಾರಿನಲ್ಲಿ ಉರುಳಿಹೋದೆ. ಅವುಗಳು ದಿನಗಟ್ಟಲೆ ನಕ್ಕವು. ಥತ್ ಸೂಳೇಮಕ್ಕಳು.

ಹಿಮಾಲಯವಿರುವುದು ಹೇಡಿಗಳಿಗಲ್ಲ. ಇದು ಎಂತಹ ಪ್ರದೇಶವೆಂದರೆ, ನೀವು ನಿಮ್ಮೆಲ್ಲಾ ಕೊಳಕುಗಳನ್ನು ಇಟ್ಟುಕೊಂಡೇ ಯಾವ ತಪ್ಪನ್ನೂ ಮಾಡದೇ ಇಲ್ಲಿ ಇರಬೇಕಾಗುತ್ತದೆ ! ಪ್ರತಿಬಾರಿ ನೀವೆಲ್ಲಿಗೇ ಹೋದರೂ ಆಕರ್ಷಣೆ ಇಟ್ಟುಕೊಂಡೇ ಹೋರಾಟದಲ್ಲಿ ಬಂಧಿಯಾಗಿರುತ್ತೀರಿ. ನೀವು ಪರ್ವತದಿಂದ ಕೆಳಗುರುಳಬಹುದು ಮತ್ತು ಮೇಲಕ್ಕೇರುತ್ತಾ ಖಾಲಿಯಾಗಲೂಬಹುದು. ಧೂಮಪಾನ ವ್ಯಸನಿಗಳಿಗಂತೂ ಇದು ಅತ್ಯಂತ ಕಷ್ಟದ ಜಾಗ. ಬಹುಪಾಲು ಜನ ಕೆಮ್ಮುತ್ತಾ , ಕೆಲ ನಿಮಿಷಗಳ ಕಾಲ ಮಾತನಾಡಲಾಗದ ಸ್ಥಿತಿಯಲ್ಲೇ ನನ್ನ ಮನೆಗೆ ಬರುತ್ತಾರೆ. ಆದರೆ ಇನ್ನು ಹಲವರು ಹಳ್ಳಿಯಲ್ಲಿರುವ ಗೆಸ್ಟ್‌ಹೌಸ್‌ಗಳಲ್ಲಿ ಉಳಿದುಕೊಂಡು ರೆಸ್ಟೋರೆಂಟ್‌ಗಳಲ್ಲಿ ತಿನ್ನುತ್ತಾರೆ. ಆದರೆ ಸ್ವಂತ ಮನೆ ಹೊಂದಿರುವ ನಮ್ಮಂಥವರು ಇಳಿಜಾರುಗಳಿಂದಲೇ ನಮಗೆ ಬೇಕಾದ್ದನ್ನೆಲ್ಲಾ ತರಬೇಕು, ತುಂಬಿಸಿದ ಗ್ಯಾಸ್ ಸಿಲಿಂಡರ್‌ಗಳನ್ನು ತರಲು ಕೂಲಿಗಳಿಗೆ ಹೇಳಬೇಕು, ಸ್ವಸಾಮರ್ಥ್ಯದ ಮೇಲೆ ನಂಬಿಕೆಯಿಟ್ಟು ಪ್ರಕೃತಿಯಲ್ಲಿ ಬದುಕಲು ಕಲಿಯಬೇಕು.

ಹೊರಗಿರುವ ಟಾಯ್ಲೆಟ್‌ಗೆ ಛಾವಣಿ ಹಾಕುವುದರಲ್ಲೇ ನಾನು ಬೆಳಗಿನ ಸಮಯವನ್ನೆಲ್ಲಾ ಕಳೆದೆ. ಒಂದಿಷ್ಟು ಅಗಲದ ದಪ್ಪದ ಪ್ಲ್ಯಾಸ್ಟಿಕ್, ಹಗ್ಗ ಹಾಗೂ ಚೂರಿಯೊಂದಿಗೆ ಮರದ ರೆಂಬೆಗಳಿಗೆ ಹಗ್ಗ ಕಟ್ಟಿ ಬಂಡೆಗಳಿಗೆ ಗಂಟು ಹಾಕಲು ಯತ್ನಿಸಿದೆ. ಬಹಳ ಸಮಯ ಬೆವರು ಹರಿಸಿ ಕೆಲಸ ಮಾಡಿ ಕೊನೆಗೂ ಮಳೆ ನೀರೆಲ್ಲ ಮರದ ತೋಳುಗಳ ಮೇಲಿನಿಂದ ಹರಿಯುವಂತೆ ಮಾಡಿದೆ. ಆದರೆ ನಾನು ಪಾಯಿಖಾನೆಗೆ ಹೋಗುವಾಗೆಲ್ಲಾ ಕೊಡೆ ಹಿಡಿದುಕೊಂಡೇ ಹೋಗಬೇಕಾಗುತ್ತಿತ್ತು !


-ಇಂಗ್ಲಿಶ್ ಮೂಲ:ಅನಾಮಿಕ

-ಕನ್ನಡಕ್ಕೆ: ದೇರಾಜೆ

0 comments:

About This Blog

ಥ್ಯಾಂಕ್ಯು

ಥ್ಯಾಂಕ್ಯು

  © Blogger templates Psi by Ourblogtemplates.com 2008

Back to TOP